ಪಕ್ಷಾಂತರಿ-ಲಕ್ಷಾಂತರಿ

ನಮ್ಮ ಟಿ.ಈ.ನುಂಗಣ್ಣನವರ್ ಎಂ.ಎಲ್.ಎ. ಎಲೆಕ್ಷನ್‌ಗೆ ಸುಮ್ನೆ ನಿಂತ್ರು. ಅವರ ಪೂರ್ಣ ಹೆಸರು ತಿನ್ನಪ್ಪ ಈಟಪ್ಪ ನುಂಗಣ್ಣನವರ್! ವಿಧಾನಸೌಧಕ್ಕೆ ಹೇಳಿ ಮಾಡಿಸಿದ ವ್ಯಕ್ತಿತ್ವ!

ಅದೃಷ್ಟ ಅಂಬೋದು ಯಾವ ಬಾಗಿಲಿಂದ ಹೆಂಗ್ ಬರುತ್ತೋ ಗೊತ್ತಾಗೋದಿಲ್ಲ. ಅದೃಷ್ಟಶಾಲಿಯ ಹುಂಜವೂ ಮೊಟ್ಟೆ ಇಡುತ್ತಂತೆ..! ಅದೃಷ್ಟ ಹಣೆಯ ಗೆರೆಗಳ ಮೇಲಿದೆ. ಕುದುರೆಗಾಡಿಯಲ್ಲಿ ನಾವು ಕೂತಿರುವುದು. ಲಗಾಮು ದೇವರ ಕೈಲಿ. ಯಾವ ಹುಡುಗಿ ಯಾರ ಮನೇಲಿ ಸೆಟಲ್ ಆಗ್ತಾಳೋ ಗೊತ್ತಿಲ್ಲ. ಯಾವ ರಾಜಕಾರಣಿ ಯಾವ ಕುರ್ಚಿಯಲ್ಲಿ ಕೂರುವನೋ ತಿಳಿಯದು. ಹಾಗಂತ ಜನ ಮಾತಾಡ್ತಾರೆ.

ಹಿಂದಿನ ಕಾಲದಲ್ಲಿ ಸಂಜೆ ಆದ್ರೆ ಸಾಕು, ದೀಪ ಹಚ್ಚಿ ಬಾಗಿಲು ತೆಗೀತಾ ಇದ್ರು. ಲಕ್ಷ್ಮಿ ಬರುತ್ತೆ, ಅದೃಷ್ಟ ಬರುತ್ತೆ ಅಂತ. ಆದರೆ ಈಗ ಸೊಳ್ಳೆ ಬರುತ್ತೆ ಅಂತ ಬಾಗಿಲು ಬಂದ್ ಮಾಡಿರ್ತೀವಿ. ದೇವರು ಬಂದ್ರೂ ಒಳಗೆ ಸೇರ‍್ಸೋದಿಲ್ಲ.

ಕೇರಳದಲ್ಲಿ ಯಾರೋ ಹತ್ತು ರೂಪಾಯಿ ಲಾಟರಿ ಟಿಕೆಟ್ ತಗೊಂಡಿದ್ದಕ್ಕೆ ಹತ್ತು ಕೋಟಿ ಬಹುಮಾನ ಹೊಡೀತಂತೆ. ಅವನ ಅದೃಷ್ಟ ಅದು. ಒಂದೆರಡು ಲಕ್ಷ ಸಾಲ ಆಗಿದೆ. ಅಷ್ಟು ಬಂದ್ರೆ ಸಾಕು ಅಂತ ಲಾಟರಿ ಟಿಕೆಟ್ ಕೊಂಡಿದ್ದ. ಬಂಪರ್ ಹೊಡೆದ ರಭಸಕ್ಕೆ ಹತ್ತು ಕೋಟಿಯಷ್ಟು ಜಿಗಿದ!

ರಾಜಕೀಯದಲ್ಲಿ ಕೆಲವರು ದಿಢೀರ್ ಅಂತ ಹೆಸರು ಮಾಡಿದ್ದು ಇದೇ ರೀತಿ. ಅದ್ರಲ್ಲೂ ಪಕ್ಷದಿಂದ ಪಕ್ಷಕ್ಕೆ ಹಾರೋವಾಗ ಸರಿಯಾದ ಜೋಕಾಲಿ ಸಿಕ್ಕರೆ ವಿಧಾನಸೌಧಕ್ಕೆ ಮೂರೇ ಗೇಣು..!

ನಮ್ಮ ಟಿ.ಈ.ನುಂಗಣ್ಣನವರ್ ಎಂ.ಎಲ್.ಎ. ಎಲೆಕ್ಷನ್‌ಗೆ ಸುಮ್ನೆ ನಿಂತ್ರು. ಅವರ ಪೂರ್ಣ ಹೆಸರು ತಿನ್ನಪ್ಪ ಈಟಪ್ಪ ನುಂಗಣ್ಣನವರ್! ವಿಧಾನಸೌಧಕ್ಕೆ ಹೇಳಿ ಮಾಡಿಸಿದ ವ್ಯಕ್ತಿತ್ವ.. ಚುನಾವಣೆಗೆ ಸ್ಪರ್ಧಿಸಲು ಹಣ ಕಟ್ಟಿದರು. 10 ಸಾವಿರ ಕಟ್ಟಿದ್ರೆ ಸಾಕು, ಎಮ್ಮೆ ಕೂಡ ಎಂ.ಎಲ್.ಎ. ಎಲೆಕ್ಷನ್‌ಗೆ ನಿಲ್ಲಬಹುದು. ಅದಕ್ಕೇ ಅಭ್ಯರ್ಥಿಗಳ ಲಿಸ್ಟು ಎರಡು, ಮೂರು ಮಿಷೀನುಗಳು ದಾಟ್ಕೊಂಡು ಹೋಗಿರುತ್ತೆ. ಯಾರಿಗೆ ಎಲ್ಲಿ ಒತ್ಬೇಕು ಅನ್ನೋದು ಗೊತ್ತಾಗೊಲ್ಲ. ರಾಮಪ್ಪ ಅಂತ ಒಬ್ಬ ಇದ್ರೆ ಅದೇ ಹೆಸರಿನ ಹತ್ತು ಜನಾನ ಬೇಕಾಗಿ ನಿಲ್ಲಿಸರ‍್ತಾರೆ. ಮತದಾರನ ತಲೆ ಏನಾಗಬೇಕು?

ಹೆಬ್ಬೆಟ್ಟು ಒತ್ತೋ ಲೀಡರ್‌ಗಳೂ ನಮ್ಮನ್ನು ಆಳಿ ಹೋಗಿದ್ದಾರೆ. ದರೋಡೆ ಖ್ಯಾತಿಯ ಚಂಬಲ್‌ರಾಣಿ ಪೂಲನ್‌ದೇವಿ ಓದದೆ ಎಂ.ಪಿ. ಆದರು. ಉಮಾಭಾರತಿ 5ನೇ ಕ್ಲಾಸ್, ಇವತ್ತು ದೊಡ್ಡ ಲೀರ‍್ರು. ರಾಬ್ಡೀದೇವಿ 3ನೇ ಕ್ಲಾಸ್ ಫೈಲಾದರೂ ಮೂರು ಸಲ ಬಿಹಾರದ ಮುಖ್ಯಮಂತ್ರಿ ಆದರು. ಅವರ ಯಜಮಾನರು 900 ಕೋಟಿ ರೂಪಾಯಿಯಷ್ಟು ದನದ ಮೇವು ತಿಂದು ಗಿನ್ನಿಸ್ ದಾಖಲೆ ಮಾಡಿದವರು. ಎಸ್.ಎಸ್.ಎಲ್.ಸಿ. ದಾಟದ ಎಷ್ಟೋ ಮಂದಿ ಕಾನೂನು ಮಂತ್ರಿ, ವಿದ್ಯಾಮಂತ್ರಿಗಳಾಗಿರುವ ಉದಾಹರಣೆಗಳಿವೆ.

ಇವರ ಮಧ್ಯೆ ಎಸ್.ಎಸ್.ಎಲ್.ಸಿ.ಯನ್ನು ಐದು ಸುತ್ತಿನಲ್ಲಿ ಪಾಸಾದ ಟಿ.ಈ.ನುಂಗಣ್ಣನವರ್ ಎಂ.ಎಲ್.ಎ.  ಚುನಾವಣೆಗೆ 10 ಸಾವಿರ ಕಟ್ಟಿ ಕುರ್ಚಿ ಎಳೆದರು. ಅದೃಷ್ಟ ಜಾಡಿಸಿತು. ಕುರ್ಚಿ ಸಿಕ್ಕಿತು. ಟಿ.ಈ.ನುಂಗಣ್ಣನವರ್ ಪಕ್ಷೇತರ ಎಂ.ಎಲ್.ಎ. ಆಗಿ ಓಡುವ ಕುದುರೆ ಆದರು. ಹತ್ತಿ ಸವಾರಿ ಮಾಡಲು ಹತ್ತಾರು ಜಾಕಿಗಳು ಅವರ ಬಳಿ ಕ್ಯೂ ನಿಂತರು.

ಪಕ್ಷೇತರರಾಗಿ ಗೆದ್ದಿದ್ದರಿಂದ ಅವರ ಬೆಂಬಲ ಎರಡೂ ಪಕ್ಷಗಳಿಗೆ ಬೇಕಿತ್ತು. ಸರ್ಕಾರ ರಚಿಸಲು ಒಂದು ಸೀಟ್   ಕಡಿಮೆ ಇತ್ತು. ಎರಡೂ ಪಕ್ಷದವರು ಓಡಿ ಬಂದು, ನುಂಗಣ್ಣನವರ ಕಾಲಿಗೆ ಬಿದ್ರು. ಅವರಿಗೆ ಸಚಿವ ಸ್ಥಾನ ಕೊಡೋದಾಗಿ ಅಭಯ ಕೊಟ್ಟು ಸರ್ಕಾರ ರಚಿಸಿಯೇ ಬಿಟ್ರು. 10 ಸಾವಿರ ಇದ್ದರೆ ಎಮ್ಮೆಯೂ ಎಮ್ಮೆಲ್ಲೆ ಆಗಬಹುದು ಎಂಬ ಮಾತು ಸತ್ಯವಾಗಿ ಗಾದೆ ರೂಪ ತಳೆಯಿತು.

ಸುದ್ದಿ ಕೇಳಿದ ಪತ್ರಿಕೆಯವರು ನುಂಗಣ್ಣನವರ್ ಮನೆಗೆ ದಾಳಿ ಇಟ್ರು. ಮೀಡಿಯಾದ ಎಲ್ಲಾ ಪ್ರಶ್ನೆಗಳಿಗೂ ನುಂಗಣ್ಣನವರ್ ಲೀಲಾಜಾಲವಾಗಿ ಉತ್ತರಿಸಿದ್ದಾರೆ.

“ಸಚಿವರಾದ ತಮಗೆ ಅಭಿನಂದನೆಗಳು ಸಾರ್. ಆಟೋ ಓಡಿಸಬೇಕು ಅಂತಿದ್ದ ತಾವು ಸಚಿವರಾಗಿದ್ದು ಆಶ್ಚರ್ಯದ ವಿಷಯ. ಆಟೋ ಬೇಡ ಅನ್ನಿಸ್ತಾ?”

“ಆಟೋ ಓಡಿಸಿದರೆ ದಿನಕ್ಕೆ 500 ಸಿಗಬಹುದು. ದೇಶ ಓಡಿಸಿದರೆ ದಿನಕ್ಕೆ 5 ಲಕ್ಷ ಮಿನಿಮಮ್ ಸಿಗುತ್ತೆ ಅಂತ ನಮ್ಮ ರಾಜಕೀಯ ಗುರುಗಳು ಹೇಳಿದರು”

“ಆದರೆ ಇದು ಕೇವಲ 5 ವರ್ಷದ ಕೆಲಸ ಅಷ್ಟೇ”

“ಆದರೇನಂತೆ? ಒಮ್ಮೆ ಎಂ.ಎಲ್.ಎ. ಆದರೆ ಸಾಯೋವರೆಗೂ ಪೆನ್‌ಶನ್ ಬರುತ್ತೆ. ಉಚಿತ ಸಾರಿಗೆ ಸೌಲಭ್ಯ ಕಡೇಗಾಡಿ ಹತ್ತೋವರೆಗೆ!” ಎಂದು ನುಂಗಣ್ಣನವರ್ ನಕ್ಕರು.

“ಬೇರೆ ವಲಯಗಳಲ್ಲಿ ಪಿಂಚಿಣಿ ಪಡೆಯೋಕೆ 30 ವರ್ಷ ಕನಿಷ್ಟ ಸೇವೆ ಅಂತ ನಿಯಮ ಇದೆ. ಆದರೆ ನಿಮಗೆ 5 ವರ್ಷಕ್ಕೆಲ್ಲಾ ಸಿಗುತ್ತಾ?”

“ಹೌದು, ಹೇಗೆ ಬೇಕೋ ಹಾಗೆ ಕಾನೂನು ಮಾಡಿಕೊಂಡಿದ್ದೇವೆ. ಒಂದು ಟರ್ಮ್ ಎಂ.ಪಿ. ಆದರೆ ಆ ಪೆನ್‌ಶನ್ನೂ ಬರುತ್ತೆ. ಎಂ.ಎಲ್.ಎ. ಪೆನ್‌ಶನ್ನೂ ಬರುತ್ತೆ.. ಡಬ್ಬಲ್ ಪೆನ್‌ಶನ್ ಸ್ಕೀಮು ರಾಜಕೀಯದಲ್ಲಿ ಮಾತ್ರ ಇದೆ.”

“ಸಾರ್, ನಿಮಗೆ ಯಾವ ಖಾತೆ ಕೊಡಬಹುದು?”

“ಗೊತ್ತಿಲ್ಲ, ವಿಧಾನಸೌಧಕ್ಕೆ ಎಷ್ಟು ಮೆಟ್ಟಿಲುಗಳು ಇವೆ ಅಂತಾನೇ ಗೊತ್ತಿರಲಿಲ್ಲ, ನಿನ್ನೆ ಎಣಿಸಿದೆ. ಆಶ್ಚರ್ಯ ಎಂದರೆ ಪ್ರತಿ ಸಲ ಎಣಿಸಿದಾಗಲೂ ಬೇರೆ ಬೇರೆ ಸಂಖ್ಯೆ ಬರ‍್ತಾ ಇದೆ”.

“ಮೆಟ್ಟಿಲು ಯಾಕೆ ಎಣಿಸೋಕೆ ಹೋದ್ರಿ?”

“ವಿಧಾನಸೌಧಕ್ಕೆ ಎಷ್ಟು ಮೆಟ್ಟಿಲು ಇದೆ ಅಂತ ಗೊತ್ತಿಲ್ಲದವನು ಸಚಿವ ಆಗಿದ್ದಾನೆ ಅಂತ ನಾಳೆ ಯಾರಾದರೂ ಟೀಕೆ ಮಾಡಿದರೆ ಉತ್ತರ ಕೊಡೋಕೆ.”

“ತಾವು ಒಂದು ವೇಳೆ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ್ರೆ ಏನು ಮಾಡ್ತೀರಾ?”

“ಕನ್ನಡ ಸಿಖಾವೋ, ಕನ್ನಡ ಪಡಾವೋ ಸ್ಕೀಮನ್ನ ಬೆಂಗಳೂರಿನ ಎಲ್ಲಾ ಕಾನ್ವೆಂಟುಗಳಲ್ಲೂ ರ‍್ತೀವಿ. ಯಾಕೇಂದ್ರೆ ಸರ್ಕಾರ ಎಷ್ಟೇ ಒತ್ತಾಯ ಮಾಡಿದ್ರೂ ನಾವು ಕನ್ನಡ ಕಲಿಸ್ತಾ ಇಲ್ಲ. ಈ ಸಲ ಉರ್ದು ಶಾಲೆಯಲ್ಲೂ ಕೂಡ ಕನ್ನಡ ತರಬೇಕು ಅಂತ ಸರ್ಕಾರ ತನ್ನ ಬಜೆಟ್‌ನಲ್ಲಿ ಹೇಳಿದೆ. ಅದು ಎಷ್ಟು ಮಾತ್ರ ಸಾಧ್ಯ ಆಗುತ್ತೋ ಗೊತ್ತಿಲ್ಲ.”

“ಸಾರ್, ಸಣ್ಣ ಎ.ಬಿ.ಸಿ.ಡಿ.ಗೂ ದೊಡ್ಡ ಎ.ಬಿ.ಸಿ.ಡಿ.ಗೂ ಏನಿದೆ ವ್ಯತ್ಯಾಸ ?”

ನುಂಗಣ್ಣನವರ್ ನಕ್ಕರು. “ನಂಗೆ ಎ.ಬಿ.ಸಿ.ಡಿ. ಬರೊಲ್ಲ ಅಂತ ಭಾವಿಸಿದ್ದೀರೇನು? ನಾನೂ ಎಸ್.ಎಸ್.ಎಲ್.ಸಿ. ಐದು ಸಲ ಓದಿದ್ದೀನಿ. ಸಣ್ಣ ಎ.ಬಿ.ಸಿ.ಡಿ. ಕಾರ್ಪೊರೇಟರ್ ಇದ್ಹಾಗೆ. ದೊಡ್ಡ ಎ.ಬಿ.ಸಿ.ಡಿ. ಎಂ.ಎಲ್.ಎ. ಇದ್ಹಾಗೆ!”

“ಸಾರ್, ನಿಮಗೆ 1000 ಕೆ.ಜಿ. ತೂಕದ ಸೇಬಿನ ಹಾರ ಕ್ರೇನ್‌ನಲ್ಲಿ ತಂದು ಹಾಕಿದ್ರೆ ಏನ್ಮಾಡ್ತೀರಾ?”

“ಅಯ್ಯೋ, ದೇವ್ರೇ.. ಒಂದು ಸಾವಿರ ಕೇಜಿ ತೂಕಾನಾ? ಕತ್ತು ಉಳೀಬೇಕೋ ಬೇಡವೋ..? ಅಕಸ್ಮಾತ್ ಆ ಕ್ರೇನ್‌ನ ಹುಕ್ಕು ಕಳಚಿ ಹಾರ ಮೈ ಮೇಲೆ ಬಿದ್ರೆ ಸೇಬಲ್ಲೇ ಸಮಾಧಿ! ಅದರ ಬದಲು ಅಷ್ಟೇ ತೂಕದ ಹಣ ಕೊಡಬಹುದಲ್ಲ? ಅಥವಾ ಇತರೇ ವಸ್ತುಗಳು ಕೊಡಬಹುದಲ್ಲ? ಸುಮ್ನೆ ಸೇಬಿಗೆ ದುಡ್ ಯಾಕೆ ಖರ್ಚು ಮಾಡ್ಬೇಕು? ಜನಕ್ಕೆ ಬುದ್ಧಿ ಇಲ್ಲ. ಅದೂ ಅಲ್ದೆ ನಮಗೆ ಹಾಕಿದ ಸೇಬಿನ ಹಾರಾನ ಯಾರೋ ಕಿತ್ಕೊಂಡು ತಿಂತಾರೆ. ನಮಗೆ ಒಂದು ಹಣ್ಣೂ ಸಿಗೊಲ್ಲ.. ನಮ್ಮದು ನಾವೇ ತಿನ್ಬೇಕು. ಬೇರೆಯವರದೂ ನಾವೇ ತಿನ್ನಬೇಕು. ಅದು ನನ್ನ ಧ್ಯೇಯ.”

“ಸಾರ್, ಮಹಿಳೆಯರ ರಕ್ಷಣೆ ಬಗ್ಗೆ ಯಾವ ಸ್ಕೀಮನ್ನ ತರಬೇಕು ಅನ್ಕೊಂಡಿದ್ದೀರ?”

“ಒಳ್ಳೇ ಪ್ರಶ್ನೆ ಕೇಳಿದ್ರಿ.. ನೋಡೀ, ಶತಶತಮಾನಗಳಿಂದ ಮಹಿಳೆಯರು ಪುರುಷನ ದೌರ್ಜನ್ಯಕ್ಕೆ ಒಳಗಾಗಿ ಗಂಡಸಿನ ಪ್ರಾಬಲ್ಯ ಜಾಸ್ತಿ ಇದೆ. ನಮ್ಮದು ಪುರುಷ ಪ್ರಧಾನ ಸಮಾಜ. ಗಂಡ ಹೆಂಡತೀನ ಹೊಡೀತಾ ರ‍್ತಾನೆ.  ಇನ್ಮುಂದೆ ಹೆಂಡತಿಯೇ ಗಂಡನ್ನ ನಿತ್ಯ ಒನಕೆಯಿಂದ ಹೊಡೀಬೇಕು ಅನ್ನೋ ಸ್ಕೀಮನ್ನ ತರ್ತೀನಿ”.

ಪತ್ರಿಕಾ ಕರ್ತರು ನಕ್ಕರು. “ಇದಕ್ಕೆ ಇನ್ನೇನಾದ್ರೂ ಬೇರೆ ರೈಡರ್ ಕ್ಲಾಸ್ ಇದೆಯಾ?” ಎಂದು ಪ್ರಶ್ನೆ ಮಾಡಿದರು. ನಗುತ್ತಾ ಸಚಿವರು ಮುಂದುವರೆಸಿದರು.

“ಜಾಸ್ತಿ ಏಟು ಹೊಡೆದ ಮಹಿಳೆಗೆ `ಆಧುನಿಕ ಒನಕೆ ಓಬವ್ವ’ ಅಂತ ವಾರ್ಷಿಕ ಪ್ರಶಸ್ತಿ ಕೊಡ್ತೀವಿ. ಗಂಡನ್ನ ಹೊಡೆಯೋಕೆ ಕಾರಣಗಳು ಬೇಕು ತಾನೇ..? ತಪ್ ಮಾಡಿದಾಗ ಹೊಡೀಬಹುದು. ಸೀರೆ ಒಗೆದು ಕೊಡ್ಲಿಲ್ಲ ಅಂದ್ರೆ ಹೊಡೀಬಹುದು. ಕಾರಣವೇ ಸಿಗದಿದ್ದಾಗ ಮನರಂಜನೆಗಾಗಿ ಹೊಡೀಬಹುದು.”

“ಸಾರ್, ನಿರ್ಭಯಾ ಕೇಸು ಅತ್ಯಂತ, ಘೋರ, ಭೀಕರ. ಆರು ತಿಂಗಳಲ್ಲೇ ಕೇಸು ಪ್ರೂವ್ ಆಯಿತು. ಆದರೆ ಅತ್ಯಾಚಾರಿಗಳಿಗೆ ನೇಣು ಹಾಕೋಕೆ 8 ವರ್ಷ ತಡ ಮಾಡಿದ್ದು ಸರಿಯಾ?”

“ತಪ್ಪು! ಎಂಟು ವರ್ಷದ ಹಿಂದೆ ನೀವು ನನ್ನ ಬೈದ್ರಿ ಅಂತ ನಾನು ಇವತ್ತು ನಿಮ್ಮ ಕೆನ್ನೆಗೆ ಹೊಡೆದ್ರೆ ಗಾಬರಿ ಆಗ್ತೀರ. ಘಟನೆ ನಿಮಗೂ ಮರೆತಿರುತ್ತೆ, ನನಗೂ ನೆನಪಿರೊಲ್ಲ.”

“ಸಾರ್, ಮತ್ತೊಂದು ಪ್ರಶ್ನೆ, ಒಂದ್ವೇಳೆ ಕೇವಲ ಎರಡು ನಿಮಿಷಕ್ಕೇ ನೀವು ಕರ್ನಾಟಕದ ಮುಖ್ಯಮಂತ್ರಿ ಆದ್ರೆ ಏನ್ಮಾಡ್ತೀರಾ?”

ನುಂಗಣ್ಣನವರ್ ಗಹಗಹಿಸಿ ನಕ್ಕರು.

“ಎರಡು ನಿಮಿಷದಲ್ಲಿ ಏನ್ಮಾಡೋಕಾಗುತ್ತೆ? ಮಹನೀಯರೇ, ಮಹಿಳೆಯರೇ ಅನ್ನೋ ಹೊತ್ತಿಗೇ ಎರಡು ನಿಮಿಷ ಮುಗಿದ್ಹೋಗುತ್ತೆ. ನಾನು ಎರಡು ನಿಮಿಷಕ್ಕೆ ಮುಖ್ಯಮಂತ್ರಿ ಆದ್ರೆ ಎರಡು ನಿಮಿಷದಲ್ಲಿ ಏನು ಮಾಡ್ಬಹುದು? ಟೂ ಮಿನಿಟ್ ನೂಡಲ್ಸ್ ಮಾಡಬಹುದು. ನೂಡಲ್ಸ್ ಮಾಡಿ ನಿಮಗೆ ಕೊಡ್ತೀನಿ.”

ಪತ್ರಿಕೆಯವರಿಗೆ ಇನ್ನಷ್ಟು ಹುರುಪು ಬಂದಿತ್ತು. ಅವರು ಇದೇ ರೀತಿಯ ಪ್ರಶ್ನೆಗಳನ್ನು ಮುಂದುವರೆಸಿದರು. ನುಂಗಣ್ಣನವರ್ ಉತ್ಸಾಹದಿಂದ ಉತ್ತರಿಸಿದರು.

“ಸಾರ್, ಒಂದ್ವೇಳೆ ನೀವು ಅಮೆರಿಕದ ಅಧ್ಯಕ್ಷರಾದ್ರೆ?”

“ನಾನು ಅಮೆರಿಕದ ಕೆಲವು ನಗರಗಳಿಗೆ ಮರು ನಾಮಕರಣ ಮಾಡ್ತೀನಿ. `ಲಾಸ್ ವೆಗಾಸ್’ ಅಂತ ಒಂದು ಜೂಜು ನಗರ ಇದೆ. ಅಲ್ಲಿ ವಿಪರೀತ ಕ್ಯಾಸಿನೋ ಕೇಂದ್ರಗಳು, ಅಂದರೆ ಜೂಜುಕಟ್ಟೆಗಳು. ಲಾಸ್‌ವೆಗಾಸ್‌ಗೆ ಹೋದವರೆಲ್ಲಾ ತಲೆ ಬೋಳಿಸಿಕೊಂಡೇ ಬರ್ತಾರೆ. ಅದರ ಹೆಸರೇ “ಲಾಸ್ ವೆಗಾಸ್” ಆದ್ದರಿಂದ ಲಾಸ್ ಆಗ್ತಿದೆ ಅಂತ ನನ್ನ ಅಭಿಪ್ರಾಯ. ಆದ್ದರಿಂದ ಆ ನಗರದ ಹೆಸರನ್ನ `ಪ್ರಾಫಿಟ್ ವೆಗಾಸ್’ ಅಂತ ನಾನು ಬದಲಾಯಿಸ್ತೀನಿ. ರಾಜಧಾನಿ ಆದ ‘ವಾಷಿಂಗ್‌ಟನ್’ ನ ‘ದೋಭಿಘಾಟ್’ ಅಂತ ಬದಲಿಸ್ತೀನಿ.”

“ಸಾರ್, ಜನಸೇವೆ ಯಾವ ಥರ ಮಾಡ್ಬೇಕು ಅಂತ ನಿಮ್ಮ ಮನಸ್ಸಲ್ಲಿ ಇದೆ?”

“ಮನೆ ಮನೆಗೂ ಮದ್ಯ, ಕಿವಿ ಕಿವಿಗೂ ಪದ್ಯ! ಹಿಂದಿನ ಕಾಲದಲ್ಲಿ ಎಲ್ರೂ ಪುಸ್ತಕ ಓದ್ತಾ ಇದ್ರು. ಕುಮಾರವ್ಯಾಸನ್ನ ಓದ್ಲಿಲ್ಲ ಅಂದ್ರೆ ಹೆಣ್ಣೇ ಕೊಡ್ತಿರಲಿಲ್ವಂತೆ! ನಮ್ಮ ತಾತ ಹೇಳ್ತಾ ಇದ್ರು. ಆದ್ರೆ ನಾನು ನ್ಯೂಸ್ ಪೇಪರ್ ಬಿಟ್ಟು ಬೇರೆ ಏನೂ ಓದ್ಕೊಂಡಿಲ್ಲ. ಆ ವಿಷ್ಯ ಬಿಡಿ. ಸರ್ಕಾರವು ತನ್ನ ಹಣದಲ್ಲಿ ಶಾಲೆಗಳನ್ನ ನಡೆಸುತ್ತೆ. ಆಸ್ಪತ್ರೆಗಳನ್ನ ನಡೆಸುತ್ತೆ. ಆದ್ರೆ ಅಲ್ಲಿಗೆ ಸರ್ಕಾರಿ ನೌಕರರು ಮಾತ್ರ ಹೋಗೊಲ್ಲ. ಮಂತ್ರಿ, ಎಂ.ಎಲ್.ಎ. ಸಹ ಹೋಗೋಲ್ಲ. ಎಂಥ ವಿಪರ್ಯಾಸ ಅಲ್ವಾ? ನಾವು ನಡೆಸುತ್ತಿರುವ ನಮ್ಮದೇ ಆಸ್ಪತ್ರೆಗೆ, ನಮ್ಮದೇ ಶಾಲೆಗೆ ನಾವೇ ಹೋಗದಿದ್ದರೆ ಹೇಗೆ..? ಅವರೆಲ್ಲಾ ಪ್ರೈವೇಟ್ ಗೆ ಹೋಗ್ತಾರೆ. ಇದನ್ನ ನಾನು ತಪ್ಪಿಸ್ತೀನಿ. ನನಗೇನಾದ್ರೂ ಪವರ್ ಕೊಟ್ಟಿದ್ದೇ ಆದ್ರೆ ಸರ್ಕಾರಿ ನೌಕರರು ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೇ ಕಳಿಸಬೇಕು. ತಮಗೆ ಕಾಯಿಲೆ ಬಂದಾಗ ಯಾವ ಕಾರಣಕ್ಕೂ ಸಿಂಗಪೂರ್‌ಗೆ ಹೋಗಬರ‍್ದು. ಸರ್ಕಾರಿ ದವಾಖಾನೆಗೇ ಹೋಗ್ಬೇಕು ಅಂತ ಕಾನೂನು ಮಾಡ್ತೀನಿ.”

“ಸಾರ್, ಕಡೇದಾಗಿ ಒಂದು ಪ್ರಶ್ನೆ. ಭಾರತದಲ್ಲಿ ಲಂಚಗುಳಿತನ ತುಂಬಾ ಜಾಸ್ತಿ ಇದೆ ಅಂತ ಎಲ್ರೂ ಹೇಳ್ತಾ ಇದ್ದಾರೆ. ಇತ್ತೀಚಿನ ಸರ್ವೆ ಪ್ರಕಾರ ಟ್ರಕ್ ಚಾಲಕ, ಮಾಲೀಕರು ಒಂದು ವರ್ಷಕ್ಕೆ ಕೊಡೋ ಲಂಚಾನೇ 47.852 ಕೋಟಿ ಅಂತ ಸಮೀಕ್ಷೆಗಳು ದೃಢಪಡಿಸಿವೆ. ಈ ಸುದ್ದಿ ಪೇಪರ್, ಟಿವಿಗಳಲ್ಲೂ ಬಂತು. ಬರೀ ಟ್ರಕ್‌ಗಳಿಂದ ಇಷ್ಟು ಲಂಚ ಬಂದ್ರೆ ಬೇರೆ ವೆಹಿಕಲ್ಸ್ನಿಂದ ಎಷ್ಟು ಲಂಚ ಬರಬಹುದು? ಬೇರೆ ಇಲಾಖೆಗಳಿಂದ ಎಷ್ಟು ಲಕ್ಷ ಕೋಟಿ ಲಂಚ ಜಮಾ ಆಗಬಹುದು? ಈ ಹಣಾನ ನೀವು ಏನ್ಮಾಡ್ಬೇಕು ಅಂತ ಇದ್ದೀರಾ?”

ನುಂಗಣ್ಣನವರ್ ನಕ್ಕರು.

“ನನ್ನ ಹೆಸರೇ ಟಿ.ಈ.ನುಂಗಣ್ಣನವರ್ ಅಂತ. ತಿನ್ನಪ್ಪ ಈಟಪ್ಪ ನುಂಗಣ್ಣನವರ್ ಆದ ನಾನು ಈ ಬಗ್ಗೆ ಆಳವಾಗಿ ಅಧ್ಯಯನ ಮಾಡ್ತೀನಿ, ಸಂಶೋಧನೆ ಮಾಡ್ತೀನಿ. ನಾವು ತಿನ್ನಬೇಕು ನಿಜ, ಅಷ್ಟೂ ನಾವೇ ತಿನ್ನಬರ‍್ದು.. ಅದರ ಸ್ವಲ್ಪ ಭಾಗ ಸರ್ಕಾರಕ್ಕೂ ಕೊಡಬೇಕು. ನೀವು ಹೇಳಿದ ಲಂಚದ ಮೊತ್ತದಲ್ಲಿ ಭಾರತದ ವಾರ್ಷಿಕ ಬಜೆಟ್ ಮಾಡಬಹುದು. ಹತ್ತು ಲಕ್ಷ ಕೋಟಿಯಷ್ಟು ಲಂಚ ಪ್ರತೀವರ್ಷ ಬಂದರೆ, ಅದರಲ್ಲಿ ಅರ್ಧ ಭಾಗ ಸರ್ಕಾರಕ್ಕೆ ಕೊಡಬೇಕು ಅಂತ ಕಾನೂನು ಮಾಡ್ತೀನಿ. ಲಂಚಾನ ರಾಷ್ಟ್ರಕರಣ ಮಾಡ್ತೀನಿ. ಅದರಲ್ಲಿ ಒಂದು ಭಾಗ ನಿಮಗೂ ಕೊಡ್ತೀನಿ”

ಸಚಿವರು ಮುಂದಿನ ಪ್ರಶ್ನೆಗೆ ಕಾದರು. ಆದರೆ ಅಷ್ಟರಲ್ಲಿ ಪತ್ರಕರ್ತರು ಜ್ಞಾನತಪ್ಪಿ ಬಿದ್ದು ಆಸ್ಪತ್ರೆ ಸೇರಿದ್ದರು..!

Leave a Reply

Your email address will not be published.