ಮಕ್ಕಳಿಗೆ ರಾಜಕೀಯ ನಾಯಕತ್ವ ವರ್ಗಾವಣೆ

ತಂದೆಯಿಂದ ಮಕ್ಕಳಿಗೆ ರಾಜಕೀಯ ನಾಯಕತ್ವ ವರ್ಗಾವಣೆ ವಂಶಾಡಳಿತ ಒಪ್ಪಿಕೊಳ್ಳಬಾರದೇಕೆ?

ವಾಕ್ ಸ್ವಾತಂತ್ರ್ಯ ಹಾಗೂ ರಾಜಕೀಯ ಸ್ವಾತಂತ್ರ್ಯದ ಮುಕ್ತ ಪ್ರಜಾಪ್ರಭುತ್ವದಲ್ಲಿ ನಾವಿದ್ದೇವೆ ಎಂದು ಹಲವು ಬಾರಿ ಗರ್ವದಿಂದ ಹೇಳಿಕೊಳ್ಳುತ್ತೇವೆ. ಆದರೆ ನಮ್ಮ ಸೋಗಲಾಡಿತನದ ಮುಸುಕು ತೆಗೆದು ನೋಡಿದರೆ ಯಜಮಾನಿಕೆ-ದಾಸ್ಯತ್ವ ಬಯಸುವ ಊಳಿಗಮಾನ್ಯದ (ಫ್ಯೂಡಲ್) ರಾಜಕೀಯ ವ್ಯವಸ್ಥೆ ನಮ್ಮನ್ನು ಕೆಣಕು ತ್ತಿದೆ. ದೇಶದಲ್ಲಿ ಬಹುಪಕ್ಷಗಳ ಸ್ಪರ್ಧಾತ್ಮಕ ಪ್ರಜಾಪ್ರಭುತ್ವವನ್ನು ನಾವು ಹೊಂದಿದ್ದೇವೆ ಎಂಬ ನಮ್ಮ ನಂಬಿಕೆ ನೆಪಮಾತ್ರಕ್ಕೆ ಎಂದು ತಿಳಿಯುತ್ತದೆ.

ನಿಜವಾಗಿ ಹೇಳಬೇಕೆಂದರೆ ಆಂತರಿಕ ಪ್ರಜಾಪ್ರಭುತ್ವವುಳ್ಳ ಒಂದೇ ಒಂದು ರಾಜಕೀಯ ಪಕ್ಷವೂ ದೇಶದಲ್ಲಿಲ್ಲ. ಭಾರತೀಯ ಜನತಾಪಕ್ಷವನ್ನು ಆರೆಸ್ಸೆಸ್ ನಿಯಂತ್ರಣ ಮಾಡಿದರೆ ಕಮ್ಯೂನಿಸ್ಟ್ ಪಕ್ಷಗಳನ್ನು ಆ ಪಕ್ಷಗಳ ಒಳಗಿನ ಸ್ವಹಿತಾಸಕ್ತಿಯ ಗುಂಪೊಂದು ನಿಯಂತ್ರಣ ಮಾಡುತ್ತದೆ. ದೇಶದ ಉಳಿದೆಲ್ಲಾ ಪಕ್ಷಗಳು ಯಾವುದಾದರೊಂದು ರಾಜಕೀಯ ಕುಟುಂಬದ ಖಾಸಗಿ ಆಸ್ತಿಗಳಾಗಿವೆ. ಮುಕ್ತ ಸ್ವಾತಂತ್ರ್ಯದ ಹಾಗೂ ಆಂತರಿಕ ಪ್ರಜಾಪ್ರಭುತ್ವದ ಯಾವುದೇ ಒಂದು ರಾಜಕೀಯ ಪಕ್ಷವೂ ಮುಖ್ಯಧಾರೆಯಲ್ಲಿ ಇಲ್ಲದಿರುವುದು ಪ್ರಜಾಪ್ರಭುತ್ವದ ಬಗೆಗಿನ ನಮ್ಮ ನಂಬಿಕೆಯನ್ನೇ ಪ್ರಶ್ನೆ ಮಾಡುತ್ತದೆ.

ತಮಿಳುನಾಡಿನ ದ್ರಾವಿಡ ಪಕ್ಷಗಳು, ಆಂಧ್ರದ ತೆಲುಗು ದೇಶಂ ಮತ್ತು ವೈಎಸ್ಸಾರ್ ಸಿಪಿ, ತೆಲಂಗಾಣದ ಟಿಆರೆಸ್, ಒಡಿಶಾದ ಬಿಜು ಜನತಾದಳ, ಬಂಗಾಳದ ತೃಣಮೂಲ ಕಾಂಗ್ರೆಸ್, ಬಿಹಾರದ ಆರ್‍ಜೆಡಿ ಹಾಗೂ ಜೆಡಿಯು, ಉತ್ತರ ಪ್ರದೇಶದ ಬಿಎಸ್ಪಿ ಹಾಗೂ ಎಸ್ಪಿ, ದೆಹಲಿಯ ಆಪ್, ಪಂಜಾಬಿನ ಅಕಾಲಿದಳ, ಕಾಶ್ಮೀರದ ಪಿಡಿಪಿ ಹಾಗೂ ನ್ಯಾಷನಲ್ ಕಾನ್ಫೆರೆನ್ಸ್, ಹರಿಯಾಣದ ಲೋಕದಳ, ಮಹಾರಾಷ್ಟ್ರದ ಶಿವಸೇನೆ ಹಾಗೂ ಕರ್ನಾಟಕದ ಜೆಡಿಎಸ್ ಪಕ್ಷಗಳೆಲ್ಲವೂ ರಾಜಕೀಯ ಕುಟುಂಬಗಳ ಕೈಗೊಂಬೆಗಳಾಗಿವೆ. ಈ ಎಲ್ಲಾ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಬಹುದೂರದ ಸ್ವಪ್ನಸೌಧವಾಗಿದೆ. ಈ ರಾಜಕೀಯ ಕುಟುಂಬಗಳಿಗೆ ಗೊಡ್ಡು ಸಲಾಮು ಹೊಡೆಯುವ ಗುಲಾಮಗಿರಿ ತೋರದಿದ್ದರೆ ಈ ಯಾವುದೇ ಪಕ್ಷಗಳಲ್ಲಿ ಯಾವುದೇ ಮುಖಂಡನಿಗೆ ಭವಿಷ್ಯವಿರುವುದಿಲ್ಲ. ಜೀತಕ್ಕೆ ಇಟ್ಟ ಆಳುಗಳಂತೆ ಈ ಕೌಟುಂಬಿಕ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಇರಬೇಕಾದ ಪರಿಸ್ಥಿತಿಯಿದೆ.

ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ವಿಭಿನ್ನ. ಸೋನಿಯಾ ಗಾಂಧಿ ಪರಿವಾರದ ಹೈಕಮಾಂಡ್ ಅನ್ನು ವಿರೋಧಿಸುವುದಿಲ್ಲ ಎಂದಾದರೆ ನೀವು ಕಾಂಗ್ರೆಸ್‍ನಲ್ಲಿ ಏನಾದರೂ ಮಾತನಾಡಬಹುದು. ಆಂತರಿಕ ಜಗಳ, ಕಚ್ಚಾಟ ಅಥವಾ ಕಾಲೆಳೆಯುವ ಕೆಲಸಗಳನ್ನೂ ಮಾಡಬಹುದು. ಆದರೆ ಒಮ್ಮೆ ನೀವು ಸೋನಿಯಾ ಪರಿವಾರದ ಮೇಲೆ ಯಾವುದೇ ಆಕ್ಷೇಪ-ಆಪಾದನೆ ಮಾಡಿದರೆ ಪಕ್ಷದಿಂದ ಉಚ್ಛಾಟನೆ ಕಟ್ಟಿಟ್ಟ ಬುತ್ತಿ. ಬಿಜೆಪಿ ಪಕ್ಷದ ಜುಟ್ಟು ಯಾರ ಕೈಯಲ್ಲಿದೆ ಎಂದು ಯಾರಿಗೂ ಗೊತ್ತಿಲ್ಲ. ಹೆಸರಿಗೆ ನಾಗಪುರದ ಆರೆಸ್ಸೆಸ್ ಬಿಜೆಪಿಯನ್ನು ನಿಯಂತ್ರಿಸುತ್ತದೆ ಎಂದು ಹೇಳಲಾಗುತ್ತದೆಯಾದರೂ ನಿಜಕ್ಕೆ ಯಾರು ಯಾರನ್ನು ನಿಯಂತ್ರಿಸುತ್ತಿದ್ದಾರೆ ಎಂದು ಯಾರಿಗೂ ತಿಳಿಯುವುದಿಲ್ಲ. ಕಾಣದ ಕೈಗಳು ಮತ್ತು ಗುರುತಿರದ ಶಕ್ತಿಗಳು ಬಿಜೆಪಿಯನ್ನು ನಿಯಂತ್ರಿಸುತ್ತವೆ. ಹೇಗೆ ನೀವು ಋಷಿಮೂಲ ಹಾಗೂ ನದಿ ಮೂಲಗಳನ್ನು ಹುಡುಕಿ ಹೋಗಬಾರದೋ, ಹಾಗೆಯೇ ಬಿಜೆಪಿ ಪಕ್ಷದ ಶಕ್ತಿಮೂಲವನ್ನೂ ಹುಡುಕಿ ಹೋಗಬಾರದು.

ಸರ್ವರಿಗೂ ವಿದಿತವಾಗುವ ಈ ರಾಜತಾಂತ್ರಿಕ ಸತ್ಯವನ್ನು ನಾವು ಒಪ್ಪಿಕೊಳ್ಳಬಾರದೇಕೆ? ನಾವು ಪ್ರಜಾಪ್ರುಭತ್ವವಾದಿಗಳಲ್ಲ ಹಾಗೂ ಪರರಿಂದ ದಾಸ್ಯತ್ವ ಬಯಸುವ ಯಜಮಾನಿಕೆಯ ಮನಸ್ಸಿನವರು ಎಂದು ಒಪ್ಪಿದರೆ ಸಲೀಸು ಅಲ್ಲವೇ? ಒಮ್ಮೆ ಈ ಸತ್ಯವನ್ನು ಒಪ್ಪಿಕೊಂಡರೆ ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ನಾವು ಸುಧಾರಿಸಲು ಸಾಧ್ಯವಾಗಬಹುದೇ?

ಇಲ್ಲಿದೆ ಉತ್ತರ:

ಹೇಗೆ ನಾವು ಪ್ರೈವೇಟ್ ಲಿಮಿಟೆಡ್ ಹಾಗೂ ಪಬ್ಲಿಕ್ ಲಿಮಿಟೆಡ್ ಎಂದು ಕಂಪನಿಗಳನ್ನು ಗುರುತಿಸುತ್ತೇವೆಯೋ ಹಾಗೆಯೇ ನಮ್ಮ ಪಕ್ಷಗಳನ್ನು ಕೌಟುಂಬಿಕ ಹಾಗೂ ಸಾರ್ವಜನಿಕ ಪಕ್ಷಗಳೆಂದು ಗುರುತಿಸಬಾರದೇಕೆ?

ಕೌಟುಂಬಿಕ ಪಕ್ಷಗಳಿಗೆ ಬೇರೆಯದೇ ಕಾನೂನು ಅಗತ್ಯವಿದೆ. ಈ ಕೌಟುಂಬಿಕ ಪಕ್ಷಗಳಿಗೆ ಅನವಶ್ಯಕವಾಗಿ ಆಂತರಿಕ ಪ್ರಜಾಪ್ರಭುತ್ವದ ಹೇರಿಕೆ ಸಲ್ಲದು. ಈ ಕುಟುಂಬದ ಯಜಮಾನನೇ ಪಕ್ಷದ ಮುಂದಿನ ನಾಯಕ ಯಾರೆಂದು ನಿರ್ಧರಿಸುವ ಕಾನೂನಾತ್ಮಕ ಸ್ವಾತಂತ್ರ್ಯ ನೀಡಬೇಕು. ಪಕ್ಷದ ಆಸ್ತಿಗಳನ್ನು ಕುಟುಂಬದ ಆಸ್ತಿಗಳಾಗಿಯೇ ನೋಂದಣಿ ಮಾಡುವ ಪರವಾನಗಿ ಇರಬೇಕು. ಪಕ್ಷದ ಹೆಸರು, ಧ್ವಜ, ಇತ್ಯಾದಿಗಳನ್ನು ಆ ಕುಟುಂಬದ ಚರಾಸ್ತಿಗಳನ್ನಾಗಿಯೇ ಪರಿಗಣಿಸಬೇಕು. ಈ ಚರಾಸ್ತಿ ಹಾಗೂ ಸ್ಥಿರಾಸ್ತಿಗಳನ್ನು ಅಡವಿಟ್ಟು ಸಾಲ ಪಡೆಯುವ ಸೌಲಭ್ಯವೂ ಇರಬೇಕು. ರಾಜಕೀಯ ಪಕ್ಷಗಳು ಕೌಟುಂಬಿಕ ಪಕ್ಷಗಳಾಗಿಯೇ ನೋಂದಣಿಯಾಗಲು ಉತ್ತೇಜನ ನೀಡುವಂತೆ ಇನ್ನೂ ಹತ್ತುಹಲವು ರಿಯಾಯಿತಿಗಳನ್ನು ನೀಡಿ ಪ್ರೋತ್ಸಾಹ ನೀಡಬೇಕು.

ಸಾರ್ವಜನಿಕ ಪಕ್ಷಗಳಿಗೆ ಕಟ್ಟುನಿಟ್ಟಿನ ಕಾನೂನಿರಬೇಕು. ಈ ಪಕ್ಷಗಳ ಸದಸ್ಯರ ಮತ್ತು ಚುನಾಯಿತ ಮುಖಂಡರ ಹಕ್ಕು-ಬಾಧ್ಯತೆಗಳು ನಿರ್ಧಾರವಾಗಬೇಕು. ಆಂತರಿಕ ಪ್ರಜಾಪ್ರಭುತ್ವವನ್ನು ಕಡ್ಡಾಯವಾಗಿ ಪಾಲಿಸುವ ಕಟ್ಟುಪಾಡು ಬೇಕು. ಹೇಗೆ ಶೇರುಮಾರುಕಟ್ಟೆಯಲ್ಲಿ ನೋಂದಾಯಿತ ಕಂಪನಿಗಳ ಮೇಲೆ ಸೆಬಿ ನಿಯಂತ್ರಣ ಮಾಡುತ್ತದೆಯೋ ಅದೇ ರೀತಿಯಲ್ಲಿ ಸಾರ್ವಜನಿಕ ಪಕ್ಷಗಳ ಮೇಲೆ ಸಾರ್ವಜನಿಕ ನಿಯಂತ್ರಣಕ್ಕೆ ಅವಕಾಶ ಮತ್ತು ‘ಸಾರ್ವಜನಿಕ ಪಕ್ಷಗಳ ನಿಯಂತ್ರಣ ಪ್ರಾಧಿಕಾರ’ದ ನಿಗಾ ಇರಬೇಕು. ಈ ಸಾರ್ವಜನಿಕ ಪಕ್ಷಗಳ ಆಗು-ಹೋಗು, ನಿರ್ಧಾರಗಳು, ಮುಖಂಡತ್ವ, ಲೆಕ್ಕ ಮತ್ತಿತರ ಎಲ್ಲವೂ ನೋಂದಾಯಿತ ಸದಸ್ಯರ ಮುಕ್ತ ಭಾಗವಹಿಸುವಿಕೆಯಲ್ಲಿಯೇ ನಿರ್ಧಾರವಾಗಬೇಕು. ಪಕ್ಷಗಳ ಸದಸ್ಯರು ಪಕ್ಷದ ಎಲ್ಲಾ ಖರ್ಚು-ವೆಚ್ಚಗಳನ್ನು ಭರಿಸುವ ನಿಟ್ಟಿನಲ್ಲಿ ವಾರ್ಷಿಕವಾಗಿ ಒಂದೆರಡು ಸಾವಿರ ರೂಪಾಯಿಗಳ ಚಂದಾ ನೀಡುವ ಮೂಲಕ ಹೊಣೆಗಾರಿಕೆಯನ್ನೂ ತೋರಿಸಬೇಕು.

ಮತದಾರರಿಗೆ ನಾವು ಸ್ಪಷ್ಟವಾಗಿ ಕೌಟುಂಬಿಕ ಪಕ್ಷಗಳಿಗೆ ಮತ ನೀಡುತ್ತಿದ್ದೇವೆಯೋ ಅಥವಾ ಸಾರ್ವಜನಿಕ ಪಕ್ಷವೊಂದಕ್ಕೆ ಬೆಂಬಲ ನೀಡುತ್ತಿದ್ದೇವೆಯೋ ಎಂಬುದು ಸ್ಪಷ್ಟವಾಗಿ ಗೊತ್ತಾಗಬೇಕು. ಕೌಟುಂಬಿಕ ಪಕ್ಷಗಳಿಗೆ ಮತ ನೀಡಿದ ನಂತರ ಯಾವುದೇ ಉದಾತ್ತ ಪ್ರಜಾಪ್ರಭುತ್ವದ ಹಕ್ಕು ಬಯಸುವ ಸ್ವಾತಂತ್ರ್ಯ ತಮಗಿಲ್ಲವೆಂದು ಮತದಾರರಿಗೆ ಅರಿವಾಗಬೇಕು.