ಪಟ್ಟಕ್ಕೇರಿದ ಮೋದಿ ಹುಟ್ಟು ಹಾಕಿರುವ ಪ್ರಶ್ನೆಗಳು

ಭಾರತೀಯ ಪ್ರಜಾಪ್ರಭುತ್ವದ ಚುನಾವಣಾ ರಾಜಕಾರಣ ಮತ್ತು ಅದರ ಲೆಕ್ಕಾಚಾರ ಮೇ 23ರಿಂದ ಬದಲಾಗಿದೆ. ಈ ಬೆಳವಣಿಗೆಯ ಒಳಿತು-ಕೆಡುಕುಗಳನ್ನು ಕಾಲವೆ ಹೇಳಬೇಕು.

ದೆಹಲಿಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತೀಯ ಜನತಾ ಪಕ್ಷವು ಕೇಂದ್ರ ಸರ್ಕಾರದ ಚುಕ್ಕಾಣಿಯನ್ನು ಹಿಡಿದಿದೆ. 2014ರಲ್ಲಿ ಬಿಜೆಪಿಯು 30 ವರ್ಷಗಳ ನಂತರ ಲೋಕಸಭೆಯಲ್ಲಿ ಬಹುಮತವನ್ನು ಗಳಿಸಿತ್ತು. 2019ರಲ್ಲಿ ಅರ್ಧ ಶತಮಾನದ ನಂತರ ಬಹುಮತವನ್ನು ಹೊಂದಿದ್ದ ಸರ್ಕಾರವು ಮುಂದಿನ ಚುನಾವಣೆಯಲ್ಲಿ ತನ್ನ ಬಹುಮತವನ್ನು ಉಳಿಸಿಕೊಂಡ ಶ್ರೇಯಸ್ಸನ್ನು ಗಳಿಸಿಕೊಂಡಿದೆ.

ಈ ಎರಡೂ ಸಾಧನೆಗಳ ರೂವಾರಿ ನರೇಂದ್ರ ಮೋದಿಯವರು. 2002ರಲ್ಲಿ ಗುಜರಾತ್ ಹಿಂಸಾತ್ಮಕ ಘಟನೆಗಳಿಗೆ ಜವಾಬ್ದಾರರೆಂದು ತಮ್ಮ ಪಕ್ಷದೊಳಗೆಯೂ ಕಟುಟೀಕೆಗೆ ಒಳಗಾಗಿದ್ದ ಮೋದಿಯವರು ಈಗ ಸ್ವತಂತ್ರ ಭಾರತ ಕಂಡಿರುವ ಅತ್ಯಂತ ಪ್ರಭಾವಶಾಲಿ, ಶಕ್ತಿಶಾಲಿ ಹಾಗೂ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ.

2019ರ ಚುನಾವಣಾ ಫಲಿತಾಂಶಗಳ ನಂತರ ಮೋದಿಯವರ ಐತಿಹಾಸಿಕ ತುಲನೆ ಕೇವಲ ಇಂದಿರಾ ಗಾಂಧಿಯವರಿಗೆ ಮಾತ್ರ ಸಾಧ್ಯ. ಇದಕ್ಕೆ ಕಾರಣ ಮೋದಿಯವರಂತೆ ಬಹುಮತ ಹೊಂದಿದ್ದ ಸರ್ಕಾರದ ಚುಕ್ಕಾಣಿಯನ್ನು ಹಿಡಿದು ಮತ್ತೆ ಬಹುಮತ ಗಳಿಸಿದ ಕಡೆಯ ಪ್ರಧಾನಿ ಶ್ರೀಮತಿ ಗಾಂಧಿಯವರು ಎನ್ನುವುದು ಮಾತ್ರವಲ್ಲ. ಮಿಗಿಲಾಗಿ ಕಳೆದ ಐದು ವರ್ಷಗಳಲ್ಲಿ ಮೋದಿಯವರ ನಾಯಕತ್ವದ ಶೈಲಿಯನ್ನು ಗಮನಿಸಿದ ರಾಜಕೀಯ ವಿಶ್ಲೇಷಕರು ಅದನ್ನು ಶ್ರೀಮತಿ ಗಾಂಧಿಯವರ ಶೈಲಿಗೆ ಸಾಮಾನ್ಯವಾಗಿ ಹೋಲಿಸುತ್ತಿದ್ದುದು ಉಂಟು. ಮೇಲ್ನೋಟಕ್ಕೆ ಇಬ್ಬರ ನಾಯಕತ್ವದ ಮಾದರಿ ಹೋಲುತ್ತದೆ ಎನ್ನುವುದು ನಿಜವೆ.

ಇದಕ್ಕಿಂತ ಕುತೂಹಲದ ವಿಷಯವೆಂದರೆ ಶ್ರೀಮತಿ ಗಾಂಧಿಯವರನ್ನು ಮೋದಿಯವರು ಎಂದೂ ತಮ್ಮ ಹರಿತ ನಾಲಿಗೆಯ ಪ್ರಹಾರಗಳ ಗುರಿಯಾಗಿ ಸಾಮಾನ್ಯವಾಗಿ ಬಳಸಿಕೊಂಡಿಲ್ಲ. ಶ್ರೀಮತಿ ಗಾಂಧಿಯವರ ತಂದೆ ಹಾಗೂ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂರನ್ನು ಮೋದಿಯವರು ಹಲವಾರು ಬಾರಿ ಕಟುವಾಗಿ ಟೀಕಿಸಿದ್ದಾರೆ. ಮಾತ್ರವಲ್ಲ, ಸ್ವತಂತ್ರ ಭಾರತದ ಎಲ್ಲ ಸಮಸ್ಯೆಗಳನ್ನೂ ಅವರ ತಲೆಗೆ ಕಟ್ಟಿದ್ದಾರೆ. ಇನ್ನು 2019ರ ಚುನಾವಣಾ ಪ್ರಚಾರದ ಸಮಯದಲ್ಲಿ ಶ್ರೀಮತಿ ಗಾಂಧಿಯವರ ಪುತ್ರ ರಾಜೀವ್ ಗಾಂಧಿಯವರನ್ನು ನಂ. 1 ಭ್ರಷ್ಟಾಚಾರಿ ಎಂದೆ ಕರೆದರು. ಇದು ರಾಜೀವರ ಪುತ್ರ ರಾಹುಲ್ ಗಾಂಧಿ ತಮ್ಮ ಮೇಲೆ ಮಾಡಿದ ಯುದ್ಧವಿಮಾನ ಖರೀದಿ ಸಂಬಂಧಿತ ಭ್ರಷ್ಟಾಚಾರ ಆರೋಪಗಳಿಗೆ ಪ್ರತಿಸವಾಲು ಹಾಕಲು ಮಾಡಿರಬಹುದಾದ ಟೀಕೆಯಾದರೂ, ಮೋದಿಯವರು ಕಾಂಗ್ರೆಸ್ಸಿನ ಯಾರನ್ನೂ ಬಿಟ್ಟಿಲ್ಲ. ಶ್ರೀಮತಿ ಗಾಂಧಿಯವರ ಹೊರತಾಗಿ.

ಇಂದು ಮೋದಿಯವರನ್ನು ಶ್ರೀಮತಿ ಗಾಂಧಿಯವರಿಗೆ ಹೋಲಿಸಲು ಮತ್ತೊಂದು ಕಾರಣವಿದೆ. ಇಬ್ಬರೂ ರಾಷ್ಟ್ರೀಯ ಚುನಾವಣೆಗಳನ್ನು ತಮ್ಮ ಸ್ವಂತ ವರ್ಚಸ್ಸಿನ ಮೇಲೆ ಗೆದ್ದವರು. ಅಭ್ಯರ್ಥಿ ಯಾರು ಎನ್ನುವುದು, ಸ್ಥಳೀಯ ವಿದ್ಯಮಾನಗಳು ಮತ್ತು ನಾಯಕತ್ವ, ಜಾತಿ-ಧರ್ಮಗಳ ಸಮೀಕರಣಗಳು, ಯಾವ ಪಕ್ಷದ ರಾಜ್ಯಸರ್ಕಾರವಿದೆ ಎನ್ನುವ ಅಂಶ -ಇವು ಬಹುಮಟ್ಟಿಗೆ ಗೌಣ ಎನ್ನುವಂತೆ ಇಬ್ಬರೂ ಚುನಾವಣೆಗಳನ್ನು ನಡೆಸಿದರು.

 

ಈ ಚುನಾವಣೆಯ ಕೆಲವು ವೈಶಿಷ್ಟ್ಯಗಳು
1. ಭಾರತದ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿಗೆ ಪುರುಷರು ಮತ್ತು ಮಹಿಳೆಯರು ತಲಾ ಶೇ 50ರಷ್ಟು ಮತ ಚಲಾಯಿಸಿದರು. ಅಂದರೆ ಮಹಿಳೆಯರು ಪುರುಷರಷ್ಟೆ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ. ದೇಶಾದ್ಯಂತ ಶೇ 67 ಪ್ರತಿಶತ ಮತದಾನವಾಗಿತ್ತು.
2. ಭಾರತೀಯ ಜನತಾ ಪಕ್ಷದ ಮತಪ್ರಮಾಣವು 2014ಕ್ಕೆ ಹೋಲಿಸಿದಾಗ ಸುಮಾರು 6.5% ಹೆಚ್ಚಾಗಿದ್ದು, ಈಗ 38%ನ್ನು ತಲುಪಿದೆ. ಈ ಬಾರಿ 5.5 ಕೋಟಿ ಹೆಚ್ಚು ಮತದಾರರು ಬಿಜೆಪಿಯ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ.
3. ಕಾಂಗ್ರೆಸ್ ಪಕ್ಷವು ಸತತವಾಗಿ ಎರಡನೆಯ ಬಾರಿಗೆ ವಿರೋಧಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ಅವಶ್ಯವಿರುವ ಕನಿಷ್ಠ 10% ಲೋಕಸಭಾ ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಗಿದೆ.
4. ಕಾಂಗ್ರೆಸ್ ಪಕ್ಷಕ್ಕೆ 14 ರಾಜ್ಯಗಳಲ್ಲಿ 0 ಸ್ಥಾನಗಳು, 9 ರಾಜ್ಯಗಳಲ್ಲಿ 1 ಸ್ಥಾನಗಳು ಮತ್ತು 2 ರಾಜ್ಯಗಳಲ್ಲಿ ತಲಾ 2 ಮತ್ತು 3 ಸ್ಥಾನಗಳು ದೊರಕಿವೆ. ಈ ಪಟ್ಟಿಯಲ್ಲಿ ಪಕ್ಷವು ಅಧಿಕಾರದಲ್ಲಿರುವ ರಾಜ್ಯಗಳಾದ ರಾಜಸ್ಥಾನ (1), ಮಧ್ಯಪ್ರದೇಶ (1), ಕರ್ನಾಟಕ (1) ಮತ್ತು ಛತ್ತೀಸಗಡ್ (2) ಗಳು ಸೇರಿವೆ.
5. ಕಾಂಗ್ರೆಸ್ ಪಕ್ಷಕ್ಕೆ ದೊರಕಿರುವ ಸ್ಥಾನಗಳು ಬಹುತೇಕ ಮೂರು ರಾಜ್ಯಗಳಿಂದ ಬಂದಿವೆ: ಕೇರಳ (15), ಪಂಜಾಬ್ (8) ಮತ್ತು ತಮಿಳುನಾಡು(8).

 

ಸಾಮಾನ್ಯ ರಾಜಕೀಯ ತರ್ಕವನ್ನು ಮೀರಿದ 2019ರ ಚುನಾವಣೆ

2019ರ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ, ಭಾರತೀಯ ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಮತ್ತೆ ಬರುವಂತಿಲ್ಲ. ಇದು ಸಾಮಾನ್ಯ ರಾಜಕೀಯ ತರ್ಕವನ್ನು ಆಧರಿಸಿದ ಒಳನೋಟ. ಈ ಗ್ರಹಿಕೆಯನ್ನು ನರೇಂದ್ರ ಮೋದಿಯವರು ತಲೆಕೆಳಗು ಮಾಡಿದರು.

2019ರ ಚುನಾವಣೆಗಳನ್ನು ಪ್ರಭಾವಿಸಬೇಕಿದ್ದ ಎರಡು ಪ್ರಮುಖ ಅಂಶಗಳನ್ನು ಇಲ್ಲಿ ಗಮನಿಸಿ. ಮೊದಲಿಗೆ, ಮೋದಿ ಸರ್ಕಾರದ ಕಳೆದ ಐದು ವರ್ಷಗಳ ಸಾಧನೆಗಳು ಏನು ಎಂದರೆ ಅದರ ಕಟ್ಟಾ ಸಮರ್ಥಕರೂ ಸ್ಪಷ್ಟ ಚಿತ್ರಣ ನೀಡಲಾರರು. ಮೋದಿ ಮತ್ತು ಇತರೆ ಬಿಜೆಪಿಯ ನಾಯಕರು ಪದೆಪದೆ ಎತ್ತುವ ರಾಷ್ಟ್ರೀಯ ಸುರಕ್ಷತೆಯ ವಿಚಾರವನ್ನೆ ಗಮನಿಸಿ. ಮೋದಿ ಸರ್ಕಾರವು ಆಕ್ರಮಣಕಾರಿ ನೀತಿಯನ್ನು ಪಾಕಿಸ್ತಾನದ ವಿಷಯದಲ್ಲಿ ಅನುಸರಿಸಿದೆ ಎನ್ನುವುದು ನಿಜವೆ. ಆದರೆ ಯಾವುದೆ ವಸ್ತುನಿಷ್ಠ ವಿಶ್ಲೇಷಕನೂ ಇದರಿಂದ ಆಗಿರುವ ಗುರುತರ ಬದಲಾವಣೆಗಳನ್ನು, ಭಾರತವು ಹೆಚ್ಚು ಸುಭದ್ರವಾಗಿದೆ ಎನ್ನುವುದನ್ನು ಖಚಿತಪಡಿಸುವ ಅಂಕಿಅಂಶಗಳನ್ನು ಒದಗಿಸುವಲ್ಲಿ ಯಶಸ್ವಿಯಾಗುವುದಿಲ್ಲ.

ಪಾಕಿಸ್ತಾನದ ನೆಲೆಗಳ ಮೇಲೆ ಮಾಡಿರುವ ದಾಳಿಗಳಿಂದ ಆಗಿರುವ ನಷ್ಟವೇನು? ಭಯೋತ್ಪಾದಕರ ಸಂಖ್ಯೆ ಕಡಿಮೆಯಾಗಿದೆಯೆ? ಕಾಶ್ಮೀರದ ಪರಿಸ್ಥಿತಿ ಸುಧಾರಿಸಿದೆಯೆ? ಈ ಯಾವ ಪ್ರಶ್ನೆಗಳಿಗೂ ಸಹ ಸಕಾರಾತ್ಮಕವಾದ ಮತ್ತು ಉತ್ಪ್ರೇಕ್ಷೆಯಲ್ಲದ ಉತ್ತರಗಳು ದೊರಕುವುದಿಲ್ಲ.

ಇದೆ ಮಾತನ್ನು ಮೋದಿ ಸರ್ಕಾರದ ಇತರೆ ಪ್ರಮುಖ ನೀತಿಗಳಾದ ನೋಟು ಅಮಾನ್ಯೀಕರಣ ಮತ್ತು ಜಿ.ಎಸ್.ಟಿ. ಬಗ್ಗೆ ಸಹ ಹೇಳಬೇಕು. ಇವುಗಳಿಂದ ಆದ ಲಾಭಕ್ಕಿಂತ ತೊಂದರೆಗಳೆ ಹೆಚ್ಚು. ನಿರುದ್ಯೋಗ, ಗ್ರಾಮೀಣ ಭಾರತದ ಕೃಷಿ ಸಂಬಂಧಿ ಸಮಸ್ಯೆಗಳು ಮುಂದುವರೆಯುತ್ತಲೆ ಇವೆ. ಒಂದೆಡೆ ಇಂದಿನ ವಾಸ್ತವವನ್ನು ರೂಪಿಸುವ ಇದೆಲ್ಲವೂ ಇವೆ.

ಪ್ರಮಾಣದಲ್ಲಿ ಮತ್ತೆ ಚುನಾವಣೆಯನ್ನು ಗೆಲ್ಲಲು ಅಥವಾ ಅದರ ಹತ್ತಿರ ಹತ್ತಿರ ಬರುವುದು ಸಹ ಸಾಧ್ಯವಿಲ್ಲ ಎನ್ನುವುದು ಬಹುತೇಕ ವಿಶ್ಲೇಷಕರ ಮತ್ತು ರಾಜಕೀಯ ಪಕ್ಷಗಳ ಲೆಕ್ಕಾಚಾರವಾಗಿತ್ತು.

ಎರಡನೆಯದಾಗಿ, ಚುನಾವಣೆಯ ಸರಳ ಲೆಕ್ಕಾಚಾರಗಳನ್ನು ಗಮನಿಸಿ. 2014ರಲ್ಲಿ ಬಿಜೆಪಿಗೆ ಬಹುಮತ ದೊರಕಿದ್ದಕ್ಕೆ ಮುಖ್ಯ ಕಾರಣವೆಂದರೆ ಉತ್ತರಪ್ರದೇಶ, ಬಿಹಾರ್, ಹರ್ಯಾಣ, ಮಧ್ಯಪ್ರದೇಶ, ಛತ್ತೀಸಗಡ್, ರಾಜಾಸ್ಥಾನ್, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಶೇ 90ರ ಆಸುಪಾಸಿನಲ್ಲಿ ಕ್ಷೇತ್ರಗಳನ್ನು ಗೆದ್ದಿದ್ದು. ಆ ಪ್ರಮಾಣದಲ್ಲಿ ಮತ್ತೆ ಚುನಾವಣೆಯನ್ನು ಗೆಲ್ಲಲು ಅಥವಾ ಅದರ ಹತ್ತಿರ ಹತ್ತಿರ ಬರುವುದು ಸಹ ಸಾಧ್ಯವಿಲ್ಲ ಎನ್ನುವುದು ಬಹುತೇಕ ವಿಶ್ಲೇಷಕರ ಮತ್ತು ರಾಜಕೀಯ ಪಕ್ಷಗಳ ಲೆಕ್ಕಾಚಾರವಾಗಿತ್ತು. ಇದರ ಜೊತೆಗೆ ಕಳೆದ 18 ತಿಂಗಳುಗಳಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ತನ್ನ ಸಾಧನೆಯನ್ನು ಸುಧಾರಿಸಿಕೊಂಡಿತ್ತಲ್ಲದೆ, ರಾಜಾಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡಗಳಲ್ಲಿ ತನ್ನ ಸರ್ಕಾರಗಳನ್ನು ಸಹ ರಚಿಸಿತ್ತು.

ಹಾಗಾಗಿ ಈ ಮೇಲೆ ಹೆಸರಿಸಿದ ರಾಜ್ಯಗಳಲ್ಲಿ ತನಗಾಗಬಹುದಾದ ನಷ್ಟವನ್ನು ಇತರೆ ರಾಜ್ಯಗಳಲ್ಲಿ, ಬಹುಮುಖ್ಯವಾಗಿ ಪಶ್ಚಿಮ ಬಂಗಾಳ, ಒರಿಸ್ಸಾ ಮತ್ತು ಆಗ್ನೇಯ ಭಾರತದ ರಾಜ್ಯಗಳಲ್ಲಿ, ತುಂಬಿಕೊಳ್ಳಲು ಬಿಜೆಪಿ ಯೋಜಿಸಿತ್ತು. ದಕ್ಷಿಣದ ರಾಜ್ಯಗಳಲ್ಲಿ ದೊರಕಬಹುದಾದ ಕ್ಷೇತ್ರಗಳನ್ನು ಬೋನಸ್ ರೂಪದಲ್ಲಿ ಪರಿಗಣಿಸಿತ್ತು.

ಆದರೆ 2019ರ ಚುನಾವಣೆಗಳಲ್ಲಿ ಬಿಜೆಪಿ ಮತ್ತೊಮ್ಮೆ ನಿರೀಕ್ಷೆ ಮತ್ತು ರಾಜಕೀಯ ತರ್ಕಗಳನ್ನು ಮೀರಿದ ರೀತಿಯ ವಿಜಯವನ್ನು ಗಳಿಸಿದೆ. 2014ರಲ್ಲಿ ಗೆದ್ದಿದ್ದ ರಾಜ್ಯಗಳಲ್ಲಿ ತನ್ನ ಸಾಧನೆಯ ಮಟ್ಟವನ್ನು ತಲುಪಿದೆ ಇಲ್ಲವೆ ಕರ್ನಾಟಕದಂತಹ ರಾಜ್ಯಗಳಲ್ಲಿ ಹೆಚ್ಚಿಸಿಕೊಂಡಿದೆ. ಬಂಗಾಳ, ಒರಿಸ್ಸಾ ಮತ್ತು ಆಗ್ನೇಯದ ರಾಜ್ಯಗಳಲ್ಲಿ ನಿರೀಕ್ಷೆಯನ್ನು ಮೀರಿದ ರೀತಿಯಲ್ಲಿ ಬಿಜೆಪಿ ಬೆಳೆದಿದೆ. ದಕ್ಷಿಣಭಾರತದ ಮೂರು ರಾಜ್ಯ (ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ) ಗಳನ್ನು ಬಿಟ್ಟರೆ ಇನ್ನೆಲ್ಲೆಡೆ ಬಿಜೆಪಿ ತನ್ನ ರಾಜಕೀಯ ಬೆಳವಣಿಗೆಯ ಕ್ಯಾಲೆಂಡರಿಗಿಂತಲೂ ವೇಗವಾಗಿ ಹರಡಿಕೊಂಡಿದೆ. ಈ ಬೆಳವಣಿಗೆಯ ಹಿಂದಿರುವುದು ಮೋದಿ-ಷಾ ತಂಡ ಎನ್ನುವುದು ಸಹ ಸುಸ್ಪಷ್ಟ.

ಮೋದಿ ಸರ್ಕಾರದ ಸಾಮಾನ್ಯ ಮಟ್ಟದ ಸಾಧನೆಯಾಗಲಿ, ವಿರೋಧಪಕ್ಷಗಳು ಮೋದಿಯವರನ್ನು ಉದ್ಯಮಿಪತಿಗಳ ಸಹಾಯಕ ಎನ್ನುವಂತೆ ಬಿಂಬಿಸಲು ಪ್ರಯತ್ನಿಸಿದ್ದು ಆಗಲಿ ಅಥವಾ ರಾಹುಲ್ ಗಾಂಧಿಯವರು ಪದೆಪದೆ ಮಾಡಿದೆ ಭ್ರಷ್ಟಾಚಾರದ ಆರೋಪಗಳಾಗಲಿ ಮೋದಿಯವರಿಗೆ ತಟ್ಟಲಿಲ್ಲ.

ಮೇ 23ರ ನಂತರ ಮೋದಿಯವರನ್ನು ಬಿಜೆಪಿಯ ಯಶಸ್ಸಿನ ಏಕೈಕ ರೂವಾರಿ ಎನ್ನುವುದು ಕ್ಲೀಷೆಯಾಗುತ್ತಿದೆ. ಆದರೆ ಎಲ್ಲ ಕ್ಲೀಷೆಗಳಂತೆ ಈ ಮಾತಿನಲ್ಲಿ ಸತ್ಯವೂ ಇದೆ. ಮೋದಿ ಸರ್ಕಾರದ ಸಾಮಾನ್ಯ ಮಟ್ಟದ ಸಾಧನೆಯಾಗಲಿ, ವಿರೋಧಪಕ್ಷಗಳು ಮೋದಿಯವರನ್ನು ಉದ್ಯಮಿಪತಿಗಳ ಸಹಾಯಕ ಎನ್ನುವಂತೆ ಬಿಂಬಿಸಲು ಪ್ರಯತ್ನಿಸಿದ್ದು ಆಗಲಿ ಅಥವಾ ರಾಹುಲ್ ಗಾಂಧಿಯವರು ಪದೆಪದೆ ಮಾಡಿದೆ ಭ್ರಷ್ಟಾಚಾರದ ಆರೋಪಗಳಾಗಲಿ ಮೋದಿಯವರಿಗೆ ತಟ್ಟಲಿಲ್ಲ. ಮತದಾರನ ದೃಷ್ಟಿಯಲ್ಲಿ  ಟ್ಟೆಪ್ಲಾನ್  ಮೋದಿಯಾಗಿ ಅವರುಳಿದರು.

ಮೋದಿಯವರ ವಿಶ್ವಾಸಾರ್ಹತೆಯ ಗುಟ್ಟೇನು?

ಈ ಪ್ರಶ್ನೆಗೆ ಸರಳವಾದ ಉತ್ತರಗಳಿಲ್ಲ. ಮೋದಿಯವರು ಅಸಾಧಾರಣ ರಾಜಕೀಯ ಪ್ರತಿಭೆ. ಅವರ ಸಂವಹನ ಶಕ್ತಿಯನ್ನು ಇಂದು ಯಾರೂ ಸಹ ತಲುಪಲು ಸಾಧ್ಯವಿಲ್ಲ. ಇವೆಲ್ಲವೂ ನಿಜವೆ. ಆದರೆ ಅವರೆಡೆಗೆ ಭಾರತೀಯ ಮತದಾರ, ಅದರಲ್ಲಿಯೂ ಅಸಂತುಷ್ಟ ಮತದಾರ, ಚಲಿಸಲು ಕಾರಣವೇನು ಎಂದರೆ ಇದಕ್ಕೆ ಇಂದು ನೀಡಲ್ಪಡುತ್ತಿರುವ ಹೆಚ್ಚಿನ ವಿವರಣೆಗಳು ಅರ್ಥಹೀನವಾದವುಗಳು.

ಇಂದು ಭಾರತೀಯ ಮತದಾರರು ಮೋದಿಯವರಿಗೆ ಸ್ಪಂದಿಸುತ್ತಿದ್ದಾರೆ ಎನ್ನುವುದು ನಿಜ. ಅವರ ಸಾಧನೆಗಳು ಏನೆ ಇದ್ದರೂ ಇತರ ನಾಯಕರ ಬಗ್ಗೆ ಯಾರಿಗೆ ಅಸಮಾಧಾನವಿದ್ದರೂ ಅವರೆಲ್ಲರೂ ಮೋದಿಯವರತ್ತ ದೃಷ್ಟಿ ಹರಿಸಿದ್ದಾರೆ ಮತ್ತು ಬೆಂಬಲಿಸಿದ್ದಾರೆ. 2019ರಲ್ಲಂತೂ ಚುನಾವಣಾ ಮೈತ್ರಿಗಳಾದ ಬಹುತೇಕ ರಾಜ್ಯಗಳಲ್ಲಿ (ತಮಿಳುನಾಡು, ಆಂಧ್ರ ಮತ್ತು ಕೇರಳಗಳಂತೆ ಬಿಜೆಪಿಗೆ ಸಾಂಪ್ರದಾಯಿಕ ನೆಲೆಯೆ ಇಲ್ಲದ ರಾಜ್ಯಗಳನ್ನು ಹೊರತುಪಡಿಸಿ) ತಮ್ಮ ಅಭ್ಯರ್ಥಿಯಿಲ್ಲದಿದ್ದ ಕ್ಷೇತ್ರಗಳಲ್ಲಿ ಆಯಾ ಪಕ್ಷದ ಬೆಂಬಲಿಗರಿಗೆ ಮೋದಿಯವರು ಹೆಚ್ಚು ಆಪ್ಯಾಯಮಾನವಾಗಿ ಕಂಡಿದ್ದಾರೆ. ಇದು ಕರ್ನಾಟಕದಲ್ಲಿಯೆ ಸ್ಪಷ್ಟವಾಗುತ್ತಿರುವ ಒಂದು ಸರಳ ಸತ್ಯ.

ಹೀಗೆ ಅಸಂತುಷ್ಟ ಮತದಾರನನ್ನು ಸೆಳೆಯುತ್ತಿರುವ ಮೋದಿಯವರು ಆತನ ಬೆಂಬಲವನ್ನು ದೀರ್ಘಕಾಲದಲ್ಲಿ ಉಳಿಸಿಕೊಳ್ಳಬಲ್ಲರೆ ಎನ್ನುವುದು 2019ರ ಚುನಾವಣೆಗಳು ಉತ್ತರಿಸಿರುವ ಮತ್ತೊಂದು ಪ್ರಶ್ನೆ. ಬಿಜೆಪಿಯ ಭದ್ರಕೋಟೆಗಳಾಗಿದ್ದ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನಗಳಂತಹ ರಾಜ್ಯಗಳ ಉದಾಹರಣೆಯನ್ನು ನೋಡಿದರೆ, ಮೋದಿಯವರಿಗೆ ದೊರಕುತ್ತಿರುವ ಬೆಂಬಲ ಕ್ಷಣಿಕವಾದುದಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಕೆಲವೆ ತಿಂಗಳುಗಳ ಹಿಂದೆ ಬಿಜೆಪಿಗೆ ಸೋಲಾಗಿರುವ ಮತ್ತು ಇಂದು ಕಾಂಗ್ರಿಸ್ಸಿನ ರಾಜ್ಯಸರ್ಕಾರಗಳಿರುವ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ಸಿಗೆ ಒಂದು ಅಥವಾ ಎರಡು ಕ್ಷೇತ್ರಗಳು ದೊರಕುತ್ತಿಲ್ಲ ಎಂದಾಗ ಮೋದಿಯವರ ವಿಶ್ವಾಸಾರ್ಹತೆಯಲ್ಲಿ ಯಾವುದೆ ಚ್ಯುತಿಯಾಗಿಲ್ಲ, ಬದಲಿಗೆ ಹೆಚ್ಚಿದೆ ಎನ್ನುವುದರಲ್ಲಿ ಅನುಮಾನಗಳಿಲ್ಲ.

ಈ ಹಿಂದೆಯೂ ನಾನು ಬರೆದಿದ್ದಂತೆ ಮೋದಿ ಒಂದು ಒಗಟಿನಂತೆಯೆ ಕಾಣುತ್ತಾರೆ. ವಾಸ್ತವ ಈ ಮೇಲಿನಂತಿದ್ದರೂ ಮೋದಿಯವರ ಬಗ್ಗೆ ಮತದಾರನಿಗೆ ಅಪನಂಬಿಕೆಯಿಲ್ಲ. ಇದು ಒಂದು ರೀತಿಯಲ್ಲಿ ಭಾರತೀಯರು ಸಾಧುಗಳು ಮತ್ತು ಮಠಾಧೀಶರ ಬಗ್ಗೆ ಇಟ್ಟಿರುವ ನಂಬಿಕೆಯ ಮಾದರಿಯಂತೆ ಕಾಣುತ್ತದೆ. ಇಂತಹ ಧಾರ್ಮಿಕ ವ್ಯಕ್ತಿತ್ವಗಳಂತೆ ಮೋದಿಯವರು ಸಹ ಸ್ವಾರ್ಥಕ್ಕಾಗಿ, ತಮ್ಮ ಕುಟುಂಬದ ಉನ್ನತಿಗಾಗಿ ಮಾಡುತ್ತಿಲ್ಲ, ಬದಲಿಗೆ ಸಮಾಜದ ಮತ್ತು ಸಮುದಾಯದ ಒಳಿತನ್ನು ಸಾಧಿಸಲು ಬಯಸುತ್ತಿದ್ದಾರೆ ಎನ್ನುವ ನಂಬಿಕೆ ಜನರಲ್ಲಿರುವಂತಿದೆ.

ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳು

ಮೋದಿಯವರ ವಿಜಯದಂತೆಯೆ ಈ ಚುನಾವಣೆಗಳ ಮತ್ತೊಂದು ಮುಖ್ಯ ಬೆಳವಣಿಗೆಯೆಂದರೆ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳು ತಮ್ಮ ರಾಜಕೀಯ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಅಸಮರ್ಥವಾಗಿರುವುದು. 2014ರಲ್ಲಿ 44ಕ್ಕೆ ಇಳಿದಿದ್ದ ಕಾಂಗ್ರೆಸ್ ಐದು ವರ್ಷಗಳು ಮತ್ತು ಸಾಕಷ್ಟು ತಯಾರಿಯ ನಂತರ ಹತ್ತು ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 2014ಕ್ಕೆ ಹೋಲಿಸಿದರೆ ಈಗ ಹೆಚ್ಚು ಪ್ರಬುದ್ಧರಾಗಿ ಕಾಣುತ್ತಾರೆ. ಪಕ್ಷದ ಸಂಘಟನೆಯನ್ನು ಮಾಡುವಲ್ಲಿ, ತಮ್ಮ ಸಂದೇಶವನ್ನು ಸಮರ್ಥವಾಗಿ ಜನರಲ್ಲಿ ತಲುಪಿಸುವಲ್ಲಿ, ರಾಜಕೀಯ ತಂತ್ರಗಾರಿಕೆಯಲ್ಲಿ, ಪ್ರಾದೇಶಿಕ ನಾಯಕರಿಗೆ ಹೆಚ್ಚಿನ ಸ್ವಾಯತ್ತತೆ ನೀಡುವಲ್ಲಿ ರಾಹುಲ್ ಹೆಚ್ಚಿನ ಯಶಸ್ಸನ್ನು ಗಳಿಸಿದರು. ಅವರ ಪರಿಶ್ರಮ ಮತ್ತು ತಂತ್ರಗಾರಿಕೆಗಳು ಸಹ ಸಾಕಷ್ಟು ಪರಿಣಾಮಕಾರಿಯಾಗಿಯೆ ಕಂಡುಬಂದವು. ಆದರೆ ಇದಾವುದು ಸಹ ಫಲ ನೀಡಲಿಲ್ಲ. ರಾಹುಲರ ಅಥವಾ ಕಾಂಗ್ರೆಸ್ಸಿನ ವಿಶ್ವಾಸಾರ್ಹತೆ ಹೆಚ್ಚಲಿಲ್ಲ.

ಕಾಂಗ್ರೆಸ್ ಹಿರಿಯ ನಾಯಕ ಸಿದ್ಧರಾಮಯ್ಯನವರು ಮೋದಿಯವರ ಬಗ್ಗೆ ಮಾತನಾಡುವಾಗ ಇವರು ಯಾರನ್ನು ಬಣ್ಣಿಸುತ್ತಿದ್ದಾರೆ ಎನ್ನುವ ಪ್ರಶ್ನೆಯು ಕೇಳುಗರ ಮನಸ್ಸಿನಲ್ಲಿ ಮೂಡುತ್ತದೆ. ಜೊತೆಗೆ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ನಾಯಕರ ವಿಶ್ವಾಸಾರ್ಹತೆಯೆ ಪ್ರಶ್ನಾರ್ಹವಾಗಿದೆ.

ಕಾಂಗೆಸ್ ಪಕ್ಷದ ಚುನಾವಣಾ ಸಂದೇಶ ಎರಡು ನೆಲೆಗಳಲ್ಲಿ ಅಸಮರ್ಪಕವಾಗಿ ಕಾಣುತ್ತದೆ. ಒಂದೆಡೆ, ಅದರ ಚುನಾವಣಾ ಪ್ರಣಾಳಿಕೆಯು ಸೊಗಸಾದ ದಾಖಲೆಯಾದರೂ, ಬಿಜೆಪಿಯ ಕಾರ್ಯಕ್ರಮಗಳ ಪಟ್ಟಿಗಿಂತ ಹೆಚ್ಚು ಸುಸಂಬದ್ಧ ಚಿಂತನೆಯ ಫಲವಾದರೂ ಸಹ, 2019ರ ಚುನಾವಣೆಯಲ್ಲಿ ಬಳಸಬಹುದಾದ ದಾಖಲೆಯೆ ಎನ್ನುವ ಗಂಭೀರ ಪ್ರಶ್ನೆಯಿದೆ. ‘ನ್ಯಾಯ್’ ಯೋಜನೆ ಜನಪರವಾದುದು ಆದರೂ ಸಹ, ಅದರ ಫಲಾನುಭವಿಗಳಿಗೆ ಅದರ ಬಗ್ಗೆ ತಿಳಿದಿರಲಿಲ್ಲ. ಕೇವಲ ಟೆಲಿವಿಷನ್ ಸ್ಟುಡಿಯೋಗಳಲ್ಲಿ ಚರ್ಚಿತವಾಗುವ, ಅಲ್ಲಿನ ಚರ್ಚೆಗಳಲ್ಲಿ ಗೆಲ್ಲಬಲ್ಲ ಯೋಜನೆಗಳನ್ನು ರೂಪಿಸುವುದರಿಂದ ಯಾವುದೆ ಪ್ರಯೋಜನವಿಲ್ಲ ಎನ್ನುವುದನ್ನು ಈ ಚುನಾವಣೆ ತೋರಿಸಿದೆ.

ಎರಡನೆಯದಾಗಿ, ಕಾಂಗ್ರೆಸ್ ಸೇರಿದಂತೆ ಬಹುತೇಕ ಪ್ರತಿಪಕ್ಷದ ನಾಯಕರ ಚುನಾವಣಾ ಭಾಷಣಗಳು ತಮ್ಮ ಪಕ್ಷದ ಮತದಾರನನ್ನೆ ಒಲಿಸಿಕೊಳ್ಳುವಲ್ಲಿ ವಿಫಲವಾಗುವ ರೀತಿಯವು ಆಗಿದ್ದವು. ಇನ್ನು ಅನಿಶ್ಚಿತ ಮತದಾರನನ್ನು ಒಲಿಸುವ ಮಾತೆ ಇಲ್ಲ. ಸಣ್ಣ ಉದಾಹರಣೆ: ಕಾಂಗ್ರೆಸ್ ಹಿರಿಯ ನಾಯಕ ಸಿದ್ಧರಾಮಯ್ಯನವರು ಮೋದಿಯವರ ಬಗ್ಗೆ ಮಾತನಾಡುವಾಗ ಇವರು ಯಾರನ್ನು ಬಣ್ಣಿಸುತ್ತಿದ್ದಾರೆ ಎನ್ನುವ ಪ್ರಶ್ನೆಯು ಕೇಳುಗರ ಮನಸ್ಸಿನಲ್ಲಿ ಮೂಡುತ್ತದೆ. ಜೊತೆಗೆ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ನಾಯಕರ ವಿಶ್ವಾಸಾರ್ಹತೆಯೆ ಪ್ರಶ್ನಾರ್ಹವಾಗಿದೆ. ಹೀಗಿರುವಾಗ ಮೋದಿಗೆ ಪರ್ಯಾಯವನ್ನು ಇವರು ಹೇಗೆ ನೀಡಬಲ್ಲರು ಎಂದು ಅಚ್ಚರಿಪಡಬೇಕಾಗುತ್ತದೆ.

ಸಿದ್ಧರಾಮಯ್ಯ, ಗೆಹ್ಲೋಟರಂತಹ ಹಿರಿಯ ತಲೆಮಾರಿನವರಾಗಲಿ ಹಾಗೂ ಸಚಿನ್ ಪೈಲಟ್ ಇತ್ಯಾದಿ ಯುವನಾಯಕರೆಲ್ಲರಿಗೂ ಅನ್ವಯಿಸುತ್ತದೆ. ಕಾಂಗ್ರೆಸ್ ಹೊಸ ರಾಜಕೀಯ ಸಂಸ್ಕೃತಿಯೊಂದನ್ನು ಸೃಜಿಸಿಕೊಳ್ಳುತ್ತ, ಅದರೊಳಗಿನಿಂದ ಹೊಸ ನಾಯಕತ್ವವನ್ನು ಕಟ್ಟಬೇಕಿದೆ. ಇದು ದಶಕಗಳ ಕಾಲ ನಿಧಾನವಾಗಿ ನಡೆಯುವ ಕೆಲಸ.

ಕಾಂಗ್ರೆಸ್ ಮುಂದೆ ಗಂಭೀರ ಪ್ರಶ್ನೆಗಳಿವೆ. ಅದರ ಪ್ರಸ್ತುತತೆ, ರಾಜಕೀಯ ಸಂದೇಶ ಮತ್ತು ಸಾಮಾಜಿಕ ಮೈತ್ರಿಸಂಬಂಧಗಳನ್ನು ಮರುಚಿಂತನೆ ಮಾಡಲೇಬೇಕಾಗಿರುವ ತುರ್ತು ಇಂದಿದೆ. ಕಾಂಗ್ರೆಸ್ ಅಥವಾ ಅದರಂತಹ ಎಡಪಂಥದ ಹಿನ್ನೆಲೆಯಿರುವ ರಾಜಕೀಯ ಪರ್ಯಾಯವು ಭಾರತಕ್ಕೆ ಒಂದು ಐತಿಹಾಸಿಕ ಅಗತ್ಯ. ಆದರೆ ಇದನ್ನು ಇಂದಿರುವ ರಾಜಕೀಯ ನಾಯಕತ್ವವು, ಅದರಲ್ಲಿಯೂ ನೆಹ್ರೂ-ಗಾಂಧಿ ಪರಿವಾರದ ವಾರಸುದಾರರು, ಕೊಡಲು ಸಾಧ್ಯವಿಲ್ಲ. ಅಲ್ಲದೆ ಈಗಿರುವ ಪ್ರಾದೇಶಿಕ ನಾಯಕರು ಸಹ ಇಂತಹ ಸವಾಲನ್ನು ಕೈಗೆತ್ತಿಕೊಳ್ಳಬಲ್ಲರು ಎನ್ನುವಂತೆ ಕಾಣುತ್ತಿಲ್ಲ. ಈ ಮಾತು ಸಿದ್ಧರಾಮಯ್ಯ, ಗೆಹ್ಲೋಟರಂತಹ ಹಿರಿಯ ತಲೆಮಾರಿನವರಾಗಲಿ ಹಾಗೂ ಸಚಿನ್ ಪೈಲಟ್ ಇತ್ಯಾದಿ ಯುವನಾಯಕರೆಲ್ಲರಿಗೂ ಅನ್ವಯಿಸುತ್ತದೆ. ಕಾಂಗ್ರೆಸ್ ಹೊಸ ರಾಜಕೀಯ ಸಂಸ್ಕೃತಿಯೊಂದನ್ನು ಸೃಜಿಸಿಕೊಳ್ಳುತ್ತ, ಅದರೊಳಗಿನಿಂದ ಹೊಸ ನಾಯಕತ್ವವನ್ನು ಕಟ್ಟಬೇಕಿದೆ. ಇದು ದಶಕಗಳ ಕಾಲ ನಿಧಾನವಾಗಿ ನಡೆಯುವ ಕೆಲಸ.

ಪ್ರಾದೇಶಿಕ ಪಕ್ಷಗಳ ಮುಂದಿರುವ ಸವಾಲುಗಳು ಸಹ ಸಾಕಷ್ಟು ಗಂಭೀರವಾದವುಗಳೆ. ರಾಜ್ಯಮಟ್ಟದಲ್ಲಿ ಇಂತಹ ಪಕ್ಷಗಳು ತಮ್ಮ ಪ್ರಸ್ತುತತೆಯನ್ನು ಉಳಿಸಿಕೊಂಡರೂ ಸಹ, ರಾಷ್ಟ್ರೀಯ ಚುನಾವಣೆಗಳಲ್ಲಿ ಯಶಸ್ವಿಯಾಗುವುದು ಕಷ್ಟಸಾಧ್ಯ. ಜೊತೆಗೆ ನವೀನ್ ಪಟ್ನಾಯಕ್ ಅಥವಾ ಜಗನ್ ರೆಡ್ಡಿಯಂತಹವರೂ ಸಹ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗಬಹುದು. ಇಲ್ಲದಿದ್ದರೆ ಮೋದಿ ಸರ್ಕಾರದಿಂದ ವಿಶೇಷ ಸಹಕಾರ ಸಿಗುತ್ತದೆ ಎನ್ನಲಾಗುವುದಿಲ್ಲ.

ಭಾರತೀಯ ಪ್ರಜಾಪ್ರಭುತ್ವದ ಚುನಾವಣಾ ರಾಜಕಾರಣ ಮತ್ತು ಅದರ ಲೆಕ್ಕಾಚಾರ ಮೇ 23ರಿಂದ ಬದಲಾಗಿದೆ. ಈ ಬೆಳವಣಿಗೆಯ ಒಳಿತು-ಕೆಡುಕುಗಳನ್ನು ಕಾಲವೆ ಹೇಳಬೇಕು. ಆದರೆ ಇಂದಿನ ಹೊಸ ವಾಸ್ತವವನ್ನು ಅರಿಯುವ, ಸ್ಪಂದಿಸುವ ಕೆಲಸವನ್ನು ರಾಜಕೀಯ ಪಕ್ಷಗಳು ಮತ್ತು ನಾವು ನಾಗರಿಕರು ಎಲ್ಲರೂ ಮಾಡಬೇಕಿದೆ.

 

Leave a Reply

Your email address will not be published.