ಪತ್ರಕರ್ತರ ಕಲಾವಿದರ ಆತ್ಮಾವಲೋಕನ ಯಾವಾಗ?

ಪತ್ರಕರ್ತರ ಕಲಾವಿದರ ಆತ್ಮಾವಲೋಕನ ಯಾವಾಗ?

ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ ಅವರು ಬರೆದತುರ್ತುಪರಿಸ್ಥಿತಿ ಬೆಂಬಲಿಸಿದ ಪತ್ರಕರ್ತರೂ ಕಲಾವಿದರೂಲೇಖನ ಕಲಾವಿದರು ಮತ್ತು ಪತ್ರಕರ್ತರನ್ನು ಆತ್ಮಾವಲೋಕನ ಮಾಡಿಕೊಳ್ಳಲು ಹಚ್ಚುತ್ತದೆ.

ಪ್ರಸ್ತುತ ದಿನಗಳಲ್ಲಿ ಎಲ್ಲರೂ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದಕ್ಕಾಗಿ ಸತ್ಯಕ್ಕೆ ಬದ್ಧರಾಗದೆ ಪ್ರಭುತ್ವದೊಂದಿಗೆ ರಾಜಿ ಮಾಡಿಕೊಳ್ಳುವ ನಡೆ ಸತ್ಯಕ್ಕೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತರುವಂತದ್ದು. ಕಲೆ ಮತ್ತು ಸಾಹಿತ್ಯವು ನಮ್ಮ ಸುತ್ತಮುತ್ತ ನಡೆಯುವ ಘಟನೆಗಳ ಪ್ರತಿಬಿಂಬವಾಗಿರುತ್ತದೆ. ಹಾಗೆಯೇ ಕಲೆ ಮತ್ತು ಸಾಹಿತ್ಯಕ್ಕೆ ಹೆಚ್ಚಿನ ಘನತೆ, ಗೌರವ, ಪ್ರಾಶಸ್ತ್ಯ ದೊರೆಯುವುದು ಸಮಕಾಲೀನ ಸಂದರ್ಭದಲ್ಲಿ ನಡೆಯುವ ಘಟನೆಗಳಿಗೆ ಸರಿಯಾಗಿ ಸ್ಪಂದಿಸಿದಾಗ. ರೀತಿ ಸ್ಪಂದಿಸುವುದು ಒಬ್ಬ ಕಲಾವಿದನ ಹಾಗೂ ಲೇಖಕರ ಧರ್ಮವಾಗಿರುತ್ತದೆ. ಅಂದರೆ ಸ್ವಹಿತದೃಷ್ಟಿಯಿಂದ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡದೆ ಸಮಷ್ಟಿ ದೃಷ್ಟಿಯಿಂದ ವರ್ತಿಸಬೇಕು.

ಹೇಮಲತಾ ಎನ್.ಎಸ್., ದಾವಣಗೆರೆ.

ಬಯ್ಯುವ ಹಕ್ಕು ಮತದಾರನಿಗೂ ಸಿಕ್ಕಲಿ!

ದೇಶ ಭಕ್ತಿ ಎಂದರೆ ಹಿಂದುತ್ವ, ದೇಶ ರಕ್ಷಣೆ ಎಂದರೆ ವಿರೋಧ ಪಕ್ಷವನ್ನು ವಿರೋಧಿಸುವುದು; ಅದಾಗದಾಗ ಸಾರ್ವಜನಿಕವಾಗಿ ಹೀಯ್ಯಾಳಿಸುವುದು ಮತ್ತು ದಿನಾ ಬೆಳಗಾದರೆ ಕ್ಷುಲ್ಲಕ ನುಡಿಗಳನ್ನು ಆಡುತ್ತಲೇ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಂಡು ಮತದಾರರನ್ನು ದಿಕ್ಕೆಡಿಸಿ 5 ವರ್ಷ ಪೂರೈಸುವುದು; ಅಭೂತಪೂರ್ವ ಆಡಳಿತ ನಡೆಸಲು ವಿರೋಧ ಪಕ್ಷ ಅವಕಾಶ ಕೊಡಲಿಲ್ಲ, ಯೋಜನೆಗಳ ಪೂರ್ಣಗೊಳಿಸಲು ನಮಗೇ ಮತ್ತೊಂದು ಅವಕಾಶ ಕೊಡಿ ಎಂದು ಒತ್ತಾಯಿಸುವುದು, ಅದಕ್ಕಾಗಿ ಕೋಟಿ ಕೋಟಿ ಖರ್ಚು ಮಾಡುವುದೇ, ಅದರ ಮರೆಯಲ್ಲಿ ಲಕ್ಷಾಂತರ ಕೋಟಿ ಮುಕ್ಕುವುದೇ ಅತ್ಯುತ್ತಮ ಉಪಾಯ ಎಂದು ಯಾವುದಾದರೂ ಪಕ್ಷ ತಿಳಿದುಕೊಂಡರೆ ಹೇಗಿರುತ್ತೋ ಅದೇ ರೀತಿಯ ಪರಿಸ್ಥಿತಿಯನ್ನು ನಾವೀಗ ಅನುಭವಿಸುತ್ತಿದ್ದೇವೆ.

ಮೃಚ್ಛಕಟಿಕ ನಾಟಕದ ಶಕಾರನೇ ಮತ್ತೆ ಪ್ರಜಾಪ್ರಭುತ್ವದ ವೇಷದಲ್ಲಿ ಸಚಿವನಾಗಿ ಬಂದಂತಹ ವರ್ತನೆಗಳನ್ನು ಈಗ ಕೆಲ ಸಚಿವರು, ಶಾಸಕರಲ್ಲಿ ಕಾಣುವಂತಾಗಿರುವುದು ಆಘಾತಕಾರಿಯಾಗಿದೆ.

ಅಶಿಸ್ತು, ಅವಿವೇಕದವರಿಗೆ ಅಧಿಕಾರ ಸಿಕ್ಕರೆ ಏನಾಗಬಹುದೋ ಎಂಬುದಕ್ಕೆ ಕೆಲ ಸಚಿವರು ನಿತ್ಯ ಯಾವ ಎಗ್ಗೂ ಸಿಗ್ಗೂ ಇರದೆ ನೀಡುತ್ತಿರುವ ಹೇಳಿಕೆಗಳು ನಿದರ್ಶನವಾಗಿವೆ. ಅವರಿಗೆ ಹೈಕಮಾಂಡಿನ ಭಯವಾಗಲಿ, ನಿಯಂತ್ರಣವಾಗಲೀ ಇಲ್ಲವೇ ಇಲ್ಲ ಎಂಬುದಕ್ಕೂ ಇದು ಸಾಕ್ಷಿಯಾಗಿದೆ. ಅಥವಾ ತನ್ನ ರಕ್ಷಣೆಗಾಗಿ ಹೈಕಮಾಂಡೇ ಇಂಥಾ ಬೇತಾಳ ಬುರುಡೆಗಳನ್ನು ತನ್ನ ಸುತ್ತಾ ಇಟ್ಟುಕೊಂಡಂತಿದೆ! ಬುರುಡೆಗಳಿಗೆ ಒಳಗೆ ಮಿದುಳೂ ಇರುವುದಿಲ್ಲ ನಾಲಗೆಯೂ ತನ್ನದಾಗಿರುವುದಿಲ್ಲ.

ನಮ್ಮ ಕೆಲ ಜನಪ್ರತಿನಿಧಿಗಳು ಅಧಿಕಾರದ ಅಹಂನಲ್ಲಿ ಇತರ ಜನಪ್ರತಿನಿಧಿಗಳಿಗೆ ಏನು ಬೇಕಾದರೂ ಬಯ್ಯಬಹುದೇ? ಆರೋಪಗಳನ್ನು ಮಾಡಬಹುದೇ? ಇದು ನನ್ನಂತಹವರ ಪ್ರಶ್ನೆ. ಕೇಂದ್ರ ಸಚಿವರೊಬ್ಬರು ವಿರೋಧ ಪಕ್ಷದ ನಾಯಕರೊಬ್ಬರಿಗೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಸಭೆಯಲ್ಲಿ ಆವಾಜು ಹಾಕುವ ಮಟ್ಟದಲ್ಲಿ ಮೆರೆಯುತ್ತಿದ್ದಾರೆ. ತಾಲೀಬಾನೀಯ ಬಲವನ್ನು ಅವರ ಪಕ್ಷದ ಹೈಕಮಾಂಡ್ ಅವರಿಗೆ ಕೊಟ್ಟಿದೆಯೋ? ಸಂವಿಧಾನವೋ? ನಮ್ಮ ರಾಜ್ಯದ ಒಬ್ಬ ರಾಜಕಾರಣಿ, ‘ನ್ಯಾಯಾಧೀಶರೇನು ಮಹಾ ಸರ್ವಜ್ಞರೇ?’ ಎಂದು ನೇರವಾಗಿ ಪ್ರಶ್ನಿಸುತ್ತಲೇ ಇರುತ್ತಾರೆ. ಹಾಗಾದರೆ ಜನಪ್ರತಿನಿಧಿಗಳೇನು ಮಹಾ ಜ್ಞಾನಿಗಳೇ, ಸರ್ವಾಧಿಕಾರಿಗಳೇ?

ಒಬ್ಬ ಜನಪ್ರತಿನಿಧಿ ಇನ್ನೊಬ್ಬ ಜನಪ್ರತಿನಿಧಿಯನ್ನು ಬಾಯಿಗೆ ಬಂದಂತೆ ಬಯ್ಯುವುದಾದರೆ ಅದು ಮತದಾರನಿಗೆ ತೋರುವ ಅಗೌರವವೇ ಆಗುತ್ತದೆ. ರಾಜಕಾರಣಿಗೆ ಸ್ವಾತಂತ್ರ್ಯ ಇರುವುದಾದರೆ ಅವರಿಗೆ ಮತ ಕೊಟ್ಟ ಮತದಾರನಿಗೂ ತಪ್ಪು ಮಾಡಿದ ರಾಜಕಾರಣಿಗೆ ಸಕಾರಣವಾಗಿ ಸಾರ್ವಜನಿಕವಾಗಿಯೇ ಬಯ್ಯೋದು ಏಕೆ ಹಕ್ಕು ಚ್ಯುತಿಯಾಗಬೇಕು? ಇದರ ಬಗ್ಗೆ ಸಂಬಂಧಿಸಿದವರು ಬೇಗ ತೀರ್ಮಾನಿಸಲಿ ಹಾಗೂ ಸಾರ್ವಜನಿಕರಲ್ಲೂ ಜಾಗೃತಿ ಮೂಡಲಿ ಎಂದು ಅಪೇಕ್ಷಿಸುವೆ.

ಡಾ.ಟಿ.ಗೋವಿಂದರಾಜು, ಬೆಂಗಳೂರು.

ದ್ರೋಣಾಚಾರ್ಯ ಹೆಸರಿನ ಪ್ರಶಸ್ತಿಯ ಔಚಿತ್ಯ ಪ್ರಶ್ನಾರ್ಹ!

ಗುರುವಾದವರು ಧರ್ಮ ಮಾರ್ಗದಲ್ಲಿ ನಡೆಯಬೇಕು, ಜ್ಞಾನವನ್ನು ವಿಕ್ರಯಿಸಬಾರದು, ಸ್ವಾರ್ಥಿಯಾಗಿರಬಾರದು, ದುರುದ್ದೇಶ ಹೊಂದಿರಬಾರದು, ಪಕ್ಷಪಾತ ಮಾಡಬಾರದು, ದ್ವೇಷ ಸಾಧಿಸಬಾರದು ಹೀಗೆ ಹಲವಾರು ಉನ್ನತ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದದ್ದು ಸಾವಿರಾರು ವರ್ಷಗಳ ಹಿಂದಿನ ಸಾಮಾಜಿಕ ವ್ಯವಸ್ಥೆಯ ನಿಯಮವಾಗಿತ್ತು. ಆದರೆ, ದ್ರೋಣಾಚಾರ್ಯರು ಇವುಗಳಲ್ಲಿ ಯಾವುದನ್ನೂ ಪಾಲಿಸಲಿಲ್ಲವೆಂಬುದು ಮಹಾಭಾರತವನ್ನು ತೆರೆದ ಮನಸ್ಸಿನಿಂದ ಕೂಲಂಕಷವಾಗಿ ಓದಿದವರಿಗೆ ವೇದ್ಯವಾಗುತ್ತದೆ. ಅದರ್ಶಗಳನ್ನು ಪಾಲಿಸದ ಗುರು ದ್ರೋಣಾಚಾರ್ಯರ ಮಾನಸಿಕ ತುಮುಲ ಆಗಸ್ಟ್ಟ್ 2021 ಸಮಾಜಮುಖಿಯಲ್ಲಿ ಪ್ರಕಟವಾದಕ್ಷಮಿಸು ಏಕಲವ್ಯಕತೆಯಲ್ಲಿ ಸೊಗಸಾಗಿ ಬಿಂಬಿತವಾಗಿದೆ.

ತಾವಿದ್ದ ಸಾಮಾಜಿಕ ವ್ಯವಸ್ಥೆಯ ಚೌಕಟ್ಟಿನಲ್ಲಿ ಅಸಹಾಯಕರಾಗಿದ್ದ ದ್ರೋಣಾಚಾರ್ಯರು ತಮ್ಮ ವರ್ತನೆಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುವುದನ್ನು ಕತೆಯಲ್ಲಿ ಕಾಣಬಹುದಾಗಿದೆ. ತಮ್ಮ ಜ್ಞಾನದ ಅಹಂಕಾರವನ್ನು ಒಡೆದು, ಗುರುಕುಲ ಪರಂಪರೆಯ ಅಡಿಪಾಯವನ್ನೇ ಅಲುಗಾಡಿಸಿದ ಏಕಲವ್ಯನನ್ನು ವಿಜೇತ ಎನ್ನುವ ಆಚಾರ್ಯರಸೋಲುವಿಶಿಷ್ಟವೆನಿಸುತ್ತದೆ. ತಮ್ಮ ಏಕಮಾತ್ರ ಪುತ್ರ ಅಶ್ವತ್ಥಾಮನಿಗಿಂತ ಶಿಷ್ಯ ಅರ್ಜುನನ್ನು ಶ್ರೇಷ್ಠ ಬಿಲ್ಲುಗಾರನನ್ನಾಗಿಸುವ ಮೂಲಕ ವ್ಯವಸ್ಥೆಗಾಗಿ ತಾವು ಮಾಡಿದ ತ್ಯಾಗವನ್ನೂ ದ್ರೋಣಾಚಾರ್ಯರು ಏಕಲವ್ಯನಲ್ಲಿ ನಿವೇದಿಸಿಕೊಳ್ಳುವುದರೊಡನೆ ಶಿಷ್ಯರ ತ್ಯಾಗ, ಬಲಿದಾನವೂ ಬೇಕಾಗುತ್ತದೆ ಎಂದು ತಮ್ಮ ಗುರುದಕ್ಷಿಣೆಯನ್ನು ಸಮರ್ಥಿಸಿಕೊಳ್ಳುವ ಧ್ವನಿ ಸ್ಪಷ್ಟವಾಗಿದೆ.

ಏಕಲವ್ಯ ಮತ್ತು ದ್ರೋಣಾಚಾರ್ಯರ ಗುರುಶಿಷ್ಯ ಸಂಬಂಧವನ್ನು ಹೊಸ ದೃಷ್ಟಿಕೋನದಿಂದ ಪರಿಚಯಿಸಿದ ಡಾ.ಜ್ಯೋತಿ ಅವರಿಗೆ ಧನ್ಯವಾದಗಳು. ಹಿನ್ನೆಲೆಯಿಂದ ಗಮನಿಸಿದಾಗ, ಕ್ರೀಡಾಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಶಿಕ್ಷಕರಿಗೆ ಭಾರತ ಸರ್ಕಾರವು ನೀಡುವ ಪ್ರಶಸ್ತಿಗೆ ದ್ರೋಣಾಚಾರ್ಯರ ಹೆಸರಿನ ಔಚಿತ್ಯ ಪ್ರಶ್ನಾರ್ಹ ಎನಿಸುತ್ತದೆ.

ಮಂಜುನಾಥ ಡಿ.ಎಸ್., ಬೆಂಗಳೂರು.

Leave a Reply

Your email address will not be published.