ಪತ್ರಿಕೆಗಳು ಜೀವಜಲದಿಂದ ನಳನಳಿಸಲಿ

-ಪ.ರಾಮಕೃಷ್ಣಶಾಸ್ತಿç

ಇತಿಹಾಸದಲ್ಲಿ ದಾಖಲಾದ ಅತ್ಯಂತ ನಾಲ್ಕು ಕರಾಳ ವರ್ಷಗಳಲ್ಲಿ 2020 ಕೂಡ ಒಂದು ಎಂಬುದನ್ನು ಇತ್ತೀಚೆಗೆ ಓದಿದ್ದೆ. ಜ್ವಾಲಾಮುಖಿಯ ಸ್ಫೋಟದಿಂದ ಹಲವು ದಿನಗಳ ಕಾಲ ಕವಿದ ಕತ್ತಲು, ವಿಶ್ವವನ್ನು ಕಾಡಿದ ಪ್ಲೇಗ್ ಮಹಾಮಾರಿ, ನಾಜಿಗಳು ನಡೆಸಿದ ನರಮೇಧ ಬಿಟ್ಟರೆ ಗತ ವರ್ಷದ ಕೋವಿಡ್ ಹೆಸರಿನಲ್ಲಿ ಉಂಟಾದ ಸರಣಿ ಸಾವು… ಬೇಡವೆಂದರೂ ಕಣ್ಣಿಗೆ ಕಟ್ಟುತ್ತದೆ ಸ್ತಬ್ಧವಾದ ಗತ ವರ್ಷ.

ಬದುಕೇ ಇಲ್ಲವೆಂಬ ಘೋರ ಅನುಭವ ತಂದುಕೊಟ್ಟದ್ದು ಕೋವಿಡ್ ಖಂಡಿತ ಅಲ್ಲ. ಲಾಕ್‌ಡೌನ್ ಎನ್ನುವ ಹಗ್ಗ ಶೃಂಖಲೆಗಳಿಲ್ಲದೆ ಮನೆಯೊಳಗೆ ಉಳಿದುಕೊಂಡ ಬಂಧನ. ಇಷ್ಟವಿಲ್ಲದಿದ್ದರೂ ತಲೆ ಹೊರಗೆ ಹಾಕಬೇಕಿದ್ದರೆ ಮೂಗು, ಬಾಯಿಗೆ ಮಾಸ್ಕ್ ಬಿಗಿದುಕೊಳ್ಳುವ ಹಿಂಸೆ. ಬದುಕಿರುವಾಗ ಸಾವನ್ನು ಸ್ವಲ್ಪಸ್ವಲ್ಪವೇ ಚೀಪಿ ನೋಡುವ ದುಃಸ್ಥಿತಿ ಅನಿಸಿತ್ತು.

ಹನ್ನೊಂದನೆಯ ವಯಸ್ಸಿಗೇ ಲೇಖನಿ ಹಿಡಿದೆ. ಕೈಹಿಡಿದು ಮುಂದೆ ಕರೆತಂದದ್ದು ಕನ್ನಡದ ಪತ್ರಿಕೆಗಳು. ಸಾವಿರ ಸಾವಿರ ಲೇಖನಗಳನ್ನು ಪ್ರಕಟಿಸಿದವು, ಹೆಸರು ಕೊಟ್ಟವು, ಕೃಷಿ ಮಾಡಿ, ಮಂಗನೊAದಿಗೆ, ಕಾಡುಹಂದಿಯೊAದಿಗೆ ನಡೆಸಿದ ಹೋರಾಟದಲ್ಲಿ ಸೋಲು ಬಿಟ್ಟರೆ ಇನ್ನೇನೂ ಸಿಗದೆ ಹೋದಾಗ ಸಂತೃಪ್ತಿಯಿAದ ಕುಟುಂಬದೊAದಿಗೆ ಕುಳಿತು ಉಣ್ಣುವ ಅನ್ನವನ್ನೂ ಕೊಟ್ಟ ಪತ್ರಿಕೆಗಳನ್ನು ಎಂದಿಗಾದರೂ ಮರೆಯಲು ಸಾಧ್ಯವೆ? ಅರುವತ್ತು ವರ್ಷಗಳಿಂದ ಕಾದು ಕುಳಿತುಕೊಳ್ಳುತ್ತಿದ್ದುದು ದೈನಿಕ ಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳಿಗಾಗಿ. ಓದು ಕೊಟ್ಟದ್ದು ಜ್ಞಾನ ಮತ್ತು ಮನರಂಜನೆ. ಪತ್ರಿಕೆಗಳಿಗೂ ಕೋವಿಡ್ ಮಾರಿ ಶಾಪವಾಗಿ ಬಿಟ್ಟಿತಲ್ಲ! ಸಿಂಗಾರವಿಲ್ಲದ ಮುತ್ತೆöÊದೆಯಾಗಿ, ಬಿಚ್ಚೋಲೆ ಗೌರಮ್ಮನಾಗಿ ಬರುವ ಪತ್ರಿಕೆಗಳಲ್ಲಿ ಪುರವಣಿಗಳೇ ಇರಲಿಲ್ಲ. ಸಭಾಪತಿಯ ಕುರ್ಚಿಯನ್ನು ಎಳೆದಾಡಿದ ಪರಿಷತ್ ಸದಸ್ಯರು, ಜಾತಿ ಅಭಿವೃದ್ಧಿ ನಿಗಮ ಸ್ಥಾಪಿಸಿದ ಮುಖ್ಯಮಂತ್ರಿಗಳ ಸುದ್ದಿಗಳಲ್ಲಿ ಜ್ಞಾನವಿರಲಿಲ್ಲ. ಮನರಂಜನೆಯೂ ಇರಲಿಲ್ಲ. ರೋಷ ಮಾತ್ರ ಇತ್ತು.

ಒಬ್ಬ ಬರಹಗಾರನಾಗಿ ಹೊಸ ವರ್ಷದಲ್ಲಿ ನಿರೀಕ್ಷಿಸುವ ಮೊದಲ ಬಯಕೆ ಪತ್ರಿಕೆಗಳು ಮತ್ತೆ ಜೀವಜಲದ ಸಂಚಲನದಿAದ ನಳನಳಿಸಲಿ. ನನ್ನ ಬಹು ಮಂದಿ ಪತ್ರಕರ್ತ ಮಿತ್ರರು ಈ ನೆವದಲ್ಲಿ ಕೆಲಸ ಕಳೆದುಕೊಂಡರು. ಬೀದಿ ಬದಿಯಲ್ಲಿ ಟೆಂಟು ಹಾಕಿಕೊಂಡು ಬದುಕುತ್ತಿದ್ದವರ ಕನಿಕರದ ಕಥೆಗೆ ವೇದಿಕೆಯೊದಗಿಸಿದ ಒಬ್ಬರಂತೂ ನಾಳೆಯಿಂದ ನಿಮಗೆ ಕೆಲಸವಿಲ್ಲ ಎಂದು ಹೇಳಿಸಿಕೊಂಡು ಪತ್ರಿಕಾ ಕಚೇರಿಯಿಂದ ಹೊರಬಂದರು. ಆಮೇಲೆ ಇರಲೊಂದು ಮನೆಯಿಲ್ಲದೆ ಸ್ವತಃ ಟೆಂಟು ಹಾಕಿಕೊಂಡು ರಸ್ತೆ ಬದಿಯಲ್ಲಿ ವಾಸವಾಗಿದ್ದರಂತೆ, ಯಾರದೋ ಅಡಿಕೆ ತೋಟದ ಉಸ್ತುವಾರಿ ನೋಡಿಕೊಳ್ಳುವ ಕೆಲಸಕ್ಕೆ ಸೇರಿದರಂತೆ ಎಂಬುದನ್ನು ಕೇಳಿದಾಗ ಹಿಂಡಿಬAದದ್ದು ಕರುಳು. ನವ ವರ್ಷದ ಮುಂದೆ ಪೊಡಮಟ್ಟು ಕೈ ಜೋಡಿಸಿ ಕೇಳಿಕೊಳ್ಳುವುದಿಷ್ಟೇ, `ಕೆಲಸ ಕಳೆದುಕೊಂಡ ಪತ್ರಿಕಾ ಮಿತ್ರರಿಗೆ ಮತ್ತೆ ಉದ್ಯೋಗ ಲಭಿಸಲಿ. ಪತ್ರಿಕೆಗಳು ಮೈದುಂಬಿಕೊAಡು ಬರಲಿ. ಬರಹವೇ ಬದುಕೆಂದುಕೊAಡ ನಮ್ಮಂಥವರಿಗೆ ಅದು ಮತ್ತೆ ಮೈ ತೆರೆದುಕೊಳ್ಳುವಂತಾಗಲಿ’

ಇಷ್ಟಾದರೆ ಸಾಕೆ? ವರ್ಷವೂ ನಮ್ಮ ಪುಸ್ತಕಗಳನ್ನು ಮುದ್ರಿಸುವ ಪ್ರಕಾಶಕ ಮಿತ್ರರಿದ್ದಾರೆ. ಉದ್ಯಮದ ಒಳಗೆ ಹಲವು ಮಂದಿಗೆ ಉದ್ಯೋಗ ಕೊಟ್ಟಿದ್ದಾರೆ. ಕೋವಿಡ್ ಹೆಸರನ್ನು ಮುಂದೆ ಮಾಡಿ ಸರಕಾರ ಈ ವರ್ಷ ಪುಸ್ತಕ ಖರೀದಿಯ ಪ್ರಸ್ತಾವನೆ ಮಾಡಿಲ್ಲ. 2017ರಲ್ಲಿ ವಾಚನಾಲಯಗಳಿಗೆ ಪೂರೈಸಿದ ಮೊತ್ತವನ್ನೂ ಕೊಟ್ಟಿಲ್ಲ. ಬರಿದಾದ ಬರಹಗಾರರ ಅನ್ನದ ಬಟ್ಟಲಿಗೆ ಹಿಡಿಯನ್ನವೂ ಬಿದ್ದಿಲ್ಲ. ಸರಕಾರದ ದೃಷ್ಟಿಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರು ಮಾತ್ರ ಬಡವರು. ಅವರ ಹಿತಾಸಕ್ತಿಗೆ ಏನು ಬೇಕೋ ಅದನ್ನು ಮಾತ್ರ ಕೊಟ್ಟು ಅವರ ಹಾಗೆಯೇ ನಾನಾ ಉದ್ಯಮಗಳು ಸ್ಥಗಿತವಾದ ಫಲವಾಗಿ ನಿತ್ಯ ನರಕ ಅನುಭವಿಸುತ್ತಿರುವವರ ಕಡೆಗೆ ಕಣ್ಣು ಹಾಯಿಸಿಯೂ ನೋಡಿಲ್ಲ. ಹೊಸ ವರ್ಷದಲ್ಲಿ ಪ್ರಕಾಶನ ಸಂಸ್ಥೆಗಳು ಮತ್ತೆ ಮೊದಲಿನಂತೆ ತಮ್ಮ ಕಾರ್ಯಕ್ಷೇತ್ರದಲ್ಲಿ ಚಟುವಟಿಕೆ ನಡೆಸುವಂತಾದರೆ ಬರಹಗಾರರು ಮತ್ತು ಆ ಉದ್ಯಮವನ್ನು ನಂಬಿ ಬದುಕುವವರ ಪಾಲಿಗೂ ನೆಮ್ಮದಿಯ ನಾಳೆಗಳು ದೊರೆಯಬಹುದು.

ಹಲವರ ಬದುಕಿನ ಸುಖ ಕೋವಿಡ್ ಹೆಸರಿನಲ್ಲಿ ಸಮಾಧಿಯಾಗಿದೆ. ವಿದ್ಯಾರ್ಥಿಗಳ ಚಟುವಟಿಕೆ ಒಂದು ದಶಕದಷ್ಟು ಹಿಂದೆ ಸರಿದಿದೆ. ಸಣ್ಣ ಸಣ್ಣ ಕೆಲಸ ಮಾಡಿಕೊಂಡು ಗುಬ್ಬಚ್ಚಿಯ ಗೂಡಿನಂತಹ ಮನೆಯೊಳಗೆ ಸುಖವಾಗಿ ಕಾಲಕ್ಷೇಪ ಮಾಡುತ್ತಿದ್ದ ದುಡಿದು ಉಣ್ಣುವವರ ಬದುಕಿನ ಮೇಲೆ ಸಂಕಷ್ಟದ ಗೋರಿ ಕಟ್ಟಿದಂತಾಗಿದೆ. ಹಳೆಯ ಕಹಿ ನೆನಪುಗಳನ್ನು ಮೂಟೆ ಕಟ್ಟಿ ಗತ ವರ್ಷದ ಹೆಗಲಿಗೇರಿಸಿ ಕಳುಹಿಸುತ್ತಿದ್ದೇವೆ. ಹೊಸ ವರ್ಷದಲ್ಲಿ ಬದುಕಿನ ಮೇಲೆ ಕಟ್ಟಿಕೊಂಡ ಗೋರಿಗಳಿಗೆ ಚೆಲ್ಲಿದ ತಿಲ ತರ್ಪಣದ ಎಳ್ಳು ಮೊಳಕೆಯೊಡೆದು ಗಿಡವಾಗಿ ತಂಪು ಮತ್ತು ನಿಶ್ಚಿಂತ ಬದುಕಿನ ಹೂವರಳಿಸಬಹುದೇ, ಕಮರಿ ಹೋದ ಮಾಮರದಲ್ಲಿ ಹೂವಿನ ಜೊಂಪೆ ಅರಳಿ ಕೋಗಿಲೆಯ ನಾದ ಮಾರ್ದನಿಸಬಹುದೇ ಎಂಬ ನಿರೀಕ್ಷೆ ನನ್ನದು.

Leave a Reply

Your email address will not be published.