ಪತ್ರಿಕೆಯ ಆತ್ಮ ಕೊಲ್ಲುವ ನೈತಿಕ ಭ್ರಷ್ಟಾಚಾರ

ಮುಂದುವರಿದ ಚರ್ಚೆ

ಪತ್ರಕರ್ತರೂ ಲೋಕಾಯುಕ್ತ ಕಾಯಿದೆಯ ವ್ಯಾಪ್ತಿಗೊಳಪಡುತ್ತಾರೆ. ಲೋಕಾಯುಕ್ತಕ್ಕೆ ಪರ್ಯಾಯವಾಗಿ ಬಂದಿರುವ ಭ್ರಷ್ಟಾಚಾರ ನಿರೋಧ (ಎಸಿಬಿ) ಕಾನೂನಿನ ವ್ಯಾಪ್ತಿಗೂ ಸೇರುತ್ತಾರೆ. ಆದರೆ ಹಿಂದಿನ ಲೋಕಾಯುಕ್ತರಿಗಾಗಲೀ ಅಥವಾ ಈಗಿನ ವ್ಯವಸ್ಥೆಗಾಗಲೀ ಇಂಥ ದೂರು ಹೋಗಿರುವುದು ವರದಿಯಾಗಿಲ್ಲ. ಭ್ರಷ್ಟಾಚಾರಕ್ಕಾಗಿ ಪತ್ರಕರ್ತರಿಗೆ ಶಿಕ್ಷೆಯಾದ ಪ್ರಕರಣಗಳು ಇಲ್ಲವೇ ಇಲ್ಲ!

ಪತ್ರಿಕಾ ವೃತ್ತಿಯು ನೇಗಿಲ ಯೋಗಿಯಂಥ ನಿಸ್ವಾರ್ಥ ಸೇವೆಯ ಪತ್ರಿಕಾ ವ್ಯವಸಾಯವಾಗಿದ್ದ ದಿನಗಳಿದ್ದವು. ಅದು ಸ್ವಾತಂತ್ರ್ಯಪೂರ್ವದಲ್ಲಿ. ಸ್ವಾತಂತ್ರ್ಯಾನಂತರ ಪತ್ರಿಕಾ ವ್ಯವಸಾಯವು ಪತ್ರಿಕೋದ್ಯಮವಾಗಿ ಬೆಳೆದದ್ದು ಈಗ ಇತಿಹಾಸ. ಇತ್ತೀಚೆಗಿನ ದಿನಗಳಲ್ಲಂತೂ ಪತ್ರಿಕೋದ್ಯಮ ಸ್ವಾರ್ಥ ಲಾಲಸೆಯಿಂದ, ಭ್ರಷ್ಟಾಚಾರಗಳಿಂದ ನಾರುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಹೌದೇ? ಪತ್ರಕರ್ತರೂ ಕಾನೂನುಗಳಿಗೆ ಅತೀತರಲ್ಲ. ಭ್ರಷ್ಟಾಚಾರ ನಿರೋಧ ಕಾನೂನುಗಳು ಅವರಿಗೂ ಅನ್ವಯಿಸುತ್ತವೆ. ಆದಾಗ್ಯೂ ಭ್ರಷ್ಟಾಚಾರಕ್ಕಾಗಿ ಪತ್ರಕರ್ತರಿಗೆ ಶಿಕ್ಷಯಾಗಿರುವ ಒಂದು ಪ್ರಕರಣವೂ ವರದಿಯಾಗಿಲ್ಲ. ಹಾಗೆಂದ ಮಾತ್ರಕ್ಕೆ ಪತ್ರಕರ್ತರು ಶುದ್ಧಹಸ್ತರು, ಪತ್ರಿಕೋದ್ಯಮ ಹಾಲುಬಿಳುಪಿನಷ್ಟು ಸ್ವಚ್ಛವಾಗಿದೆ ಎಂದು ಅರ್ಥವಲ್ಲ. ಅದು ಅಕಳಂಕವೇನಲ್ಲ.

ಪತ್ರಕರ್ತರು ಕೆಲವರು ತಮ್ಮ ಪತ್ರಿಕೆಯ ಪ್ರಭಾವ ಬಳಸಿಕೊಂಡು ವರ್ಗಾವಣೆ ಮಾಡಿಸುವುದು, ಉದ್ಯಮಿಗಳಿಗೆ-ವ್ಯಾಪಾರಿಗಳಿಗೆ ಪರವಾನಗಿ ಕೊಡಿಸುವುದು ಇತ್ಯಾದಿ ಕೆಲಸಗಳನ್ನು ಮಂತ್ರಿಗಳಿಂದ ಮಾಡಿಸಿ ಹಣ ವಸೂಲಿ ಮಾಡುತ್ತಾರೆ ಹಾಗೂ ಸರ್ಕಾರದ ಕೋಟಾದಿಂದ ಕಾರು, ಇನ್ನಿತರ ವಿಶೇಷ ಸೌಕರ್ಯಗಳನ್ನು ಪಡೆಯುತ್ತಾರೆ. ಪತ್ರಿಕಾ ಹೇಳಿಕೆಗಳನ್ನು ಪ್ರಕಟಿಸಲು ಹಣ ತೆಗೆದುಕೊಳ್ಳುತ್ತಾರೆ, ಇಲ್ಲವೆ ಸಂಜೆ ಪಾನಗೋಷ್ಠಿ ಬಯಸುತ್ತಾರೆ. ಇಂಥ ದೂರುಗಳನ್ನು ನನ್ನ ನಲವತ್ತು ವರ್ಷಗಳ ವೃತ್ತಿಜೀವನದಲ್ಲಿ ಅನೇಕ ಬಾರಿ ಕೇಳಿದ್ದೇನೆ. ಇವೆಲ್ಲವೂ ಕೇವಲ ಆರೋಪಗಳಲ್ಲ. ಸತ್ಯವಾದುದೇ. ಇದು ಭ್ರಷ್ಟಾಚಾರವೇ.

ಬೇರೆ ವೃತ್ತಿಗಳಲ್ಲಿ ವೃತ್ತಿ ಧರ್ಮನೀತಿನಿಯಮಗಳ ಉಲ್ಲಂಘನೆಯಾದರೆ ಆಗಬಹುದಾದ ಅಪಾಯ ಸೀಮಿತವಾದದ್ದು. ಆದರೆ ಪತ್ರಿಕಾವೃತ್ತಿಯಲ್ಲಿ ಇಂಥ ಉಲ್ಲಂಘನೆಯಿಂದ ಆಗಬಹುದಾದ ಅಪಾಯ ಒಂದು ಭಾಷೆ, ಒಂದು ದೇಶ, ನಾಗರಿಕತೆ ಅಷ್ಟೇಕೆ ಇಡೀ ಮಾನವಕುಲಕ್ಕೇ ತಟ್ಟಬಹುದಾದಂಥ ದೊಡ್ಡ ಅಪಾಯ.

ಪತ್ರಕರ್ತರೂ ಲೋಕಾಯುಕ್ತ ಕಾಯಿದೆಯ ವ್ಯಾಪ್ತಿಗೊಳಪಡುತ್ತಾರೆ. ಲೋಕಾಯುಕ್ತಕ್ಕೆ ಪರ್ಯಾಯವಾಗಿ ಬಂದಿರುವ ಭ್ರಷ್ಟಾಚಾರ ನಿರೋಧ (ಎಸಿಬಿ) ಕಾನೂನಿನ ವ್ಯಾಪ್ತಿಗೂ ಒಳಪಡುತ್ತಾರೆ. ಆದರೆ ಹಿಂದಿನ ಲೋಕಾಯುಕ್ತರಿಗಾಗಲೀ ಅಥವಾ ಈಗಿನ ವ್ಯವಸ್ಥೆಗಾಗಲೀ ಇಂಥ ದೂರು ಹೋಗಿರುವುದು ವರದಿಯಾಗಿಲ್ಲ. ಈಗ ಕೇಂದ್ರದಲ್ಲಿ ಲೋಕಪಾಲ ಬಂದಿದೆ. ಅದರ ವ್ಯಾಪ್ತಿಯಲ್ಲೂ ಪತ್ರಕರ್ತರು ಬರುತ್ತಾರೆ. ಕೇಂದ್ರದಲ್ಲಿ ವಿಜಿಲೆನ್ಸ್ ಕಮೀಷನರ್ ಇದ್ದಾರೆ. ಅವರಿಗೂ ಪತ್ರತಕರ್ತರ ವಿರುದ್ಧ ದೂರು ಹೋಗಿರುವುದು ಇಷ್ಟು ವರ್ಷಗಳ ಅನುಭವದಲ್ಲಿ ನನ್ನ ಗಮನಕ್ಕೆ ಬಂದಿಲ್ಲ. ಭ್ರಷ್ಟಾಚಾರಕ್ಕಾಗಿ ಪತ್ರಕರ್ತರಿಗೆ ಶಿಕ್ಷೆಯಾಗಿರುವ ಪ್ರಕರಣಗಳೂ ವರದಿಯಾದಂತಿಲ್ಲ.

ನಿವೃತ್ತಿಯ ನಂತರ ನಾನು ಭಾರತೀಯ ವಿದ್ಯಾ ಭವನದಲ್ಲಿ ಪತ್ರಿಕಾ ವ್ಯವಸಾಯವನ್ನು ಕುರಿತು ಬೋಧಿಸುತ್ತಿದ್ದಾಗ ವಿದ್ಯಾರ್ಥಿಯೊಬ್ಬ, ‘ಇಡೀ ಜಗತ್ತೇ ಲಂಚದಲ್ಲಿ ಮುಳುಗಿಹೋಗಿರುವಾಗ ಪತ್ರಕರ್ತರು ಲಂಚ ತೆಗೆದುಕೊಳ್ಳುವುದರಲ್ಲಿ ಏನು ತಪ್ಪು? ಅವರೂ ಬದುಕ ಬೇಡವೆ?’ ಎಂದು ಕೇಳಿದ್ದ. ವಿದ್ಯಾರ್ಥಿಯ ಪ್ರಶ್ನೆ ಇವತ್ತಿನ ಪ್ರಪಂಚದ `ಲಯಾ’ನುಸಾರಿಯಾಗಿಯೇ ಇದೆ. ಪತ್ರಕರ್ತರೂ ಕೇವಲ ಮನುಷ್ಯರೇ. ಅವರಿಗೂ ಎಲ್ಲ ದೌರ್ಬಲ್ಯಗಳೂ ಉಂಟು. ಧನಕನಕವಸ್ತುವಾಹಾನಾದಿ ವ್ಯಾಮೋಹಗಳಿಂದ ಪರಿತ್ಯಕ್ತರಾದ ಸನ್ಯಾಸಿಗಳೇನಲ್ಲ. ಆದ್ದರಿಂದ ನಾವು ಅವರನ್ನು ಸ್ವರ್ಗದಿಂದಿಳಿದು ಬಂದ ಮನುಕುಲದ ಸೇವಕರು ಎಂದು ಭಾವಿಸುವಂತಿಲ್ಲ. ಆದರೆ ಪತ್ರಿಕಾ ಧರ್ಮ ಅಥವಾ ನೀತಿ ಎಂಬುದು ಇದೆ, ಪತ್ರತಕರ್ತರು ನಿಷ್ಪಕ್ಷಪಾತದಿಂದ ಮನುಕುಲದ ಸೇವಕರಾಗಿರಬೇಕೆಂದು ಆ ಧರ್ಮ, ಆ ನೀತಿ ಹೇಳುತ್ತದೆ.

ಎಲ್ಲ ವೃತ್ತಿಗಳಲ್ಲಿರುವಂತೆ ಪತ್ರಿಕಾ ವೃತ್ತಿಗೂ ಒಂದು ವೃತ್ತಿಧರ್ಮ, ನೀತಿ ನಿಯಮಗಳು ಇವೆ. ಬೇರೆ ವೃತ್ತಿಗಳಲ್ಲಿ ವೃತ್ತಿ ಧರ್ಮನೀತಿನಿಯಮಗಳ ಉಲ್ಲಂಘನೆಯಾದರೆ ಆಗಬಹುದಾದ ಅಪಾಯ ಸೀಮಿತವಾದದ್ದು. ಆದರೆ ಪತ್ರಿಕಾವೃತ್ತಿಯಲ್ಲಿ ಇಂಥ ಉಲ್ಲಂಘನೆಯಿಂದ ಆಗಬಹುದಾದ ಅಪಾಯ ಒಂದು ಭಾಷೆ, ಒಂದು ದೇಶ, ನಾಗರಿಕತೆ ಅಷ್ಟೇಕೆ ಇಡೀ ಮಾನವಕುಲಕ್ಕೇ ತಟ್ಟಬಹುದಾದಂಥ ದೊಡ್ಡ ಅಪಾಯ.

ನನ್ನ ದೃಷ್ಟಿ ಇಲ್ಲಿ ಮುದ್ರಣ ಮಾಧ್ಯಮದಲ್ಲಿ ಕೇಂದ್ರಿತ. ಏಕೆಂದರೆ ನಾನು ವಿದ್ಯುನ್ಮಾನ ಮಾಧ್ಯಮಗಳಾದ ಸುದ್ದಿವಾಹಿನಿಗಳನ್ನು ಪತ್ರಿಕೋದ್ಯಮ ಎಂದು ಪರಿಗಣಿಸುವುದೇ ಇಲ್ಲ. ಅವು ಪ್ರಚಾರ ಮಾಧ್ಯಮಗಳಷ್ಟೆ. ಅದೊಂದು ಪ್ರಚಾರೋದ್ಯಮ. ದುಡ್ಡುಕೊಟ್ಟು ಯಾರು ಬೇಕಾದರೂ ಈ ದಿನಗಳಲ್ಲಿ ಸುದ್ದಿ ವಾಹಿನಿಗಳನ್ನು ಖರೀದಿಸಬಹುದಾಗಿದೆ.

ಮೊದಲು ಪ್ರತಿ ಪತ್ರಿಕೆಗೂ ತನ್ನದೇ ಆದ ಸಂಪಾದಕೀಯ ನೀತಿ ಮತ್ತು ಜಾಹೀರಾತು ನೀತಿ ಇರುತ್ತಿತ್ತು. ಆದರೆ ಇಂದು ಸಂಪಾದಕೀಯ ನೀತಿಯೂ ಇಲ್ಲ, ಜಾಹೀರಾತು ನೀತಿಯೂ ಇಲ್ಲ. ನಮ್ಮ ಪತ್ರಿಕೆಗಳು ಗೆದ್ದೆತ್ತಿನ ಬಾಲ ಹಿಡಿಯುವುದರಲ್ಲಿ ಯಾವ ಪಕ್ಷಾಂತರಿ ರಾಜಕಾರಣಿಗೂ ಕಡಿಮೆಯಿಲ್ಲ.

ಸುದ್ದಿ-ಸಮಾಚಾರ, ಅಭಿಪ್ರಾಯ, ಟೀಕೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ಮಾಹಿತಿಗಳನ್ನು ಓದುಗರಿಗೆ ನೀಡುವುದು ಪತ್ರಿಕೋದ್ಯಮದ ಧರ್ಮ. ಇವೆಲ್ಲವನ್ನೂ ನೀಡುವಾಗ ನ್ಯಾಯಬದ್ಧತೆ, ನಿಖರತೆ, ನಿಷ್ಪಕ್ಷಪಾತತನ, ಸಜ್ಜನಿಕೆ, ಸಭ್ಯತೆಗಳಿಗೆ ಆದ್ಯ ಗಮನ ಕೊಡಬೇಕು. ವರದಿಗಳು ನಿಖರವಾಗಿರಬೇಕು, ವಸ್ತುನಿಷ್ಠವಾಗಿರಬೇಕು ಹಾಗೂ ನಿಷ್ಪಕ್ಷಪಾತವಾಗಿರಬೇಕು. ಸತ್ಯವನ್ನು ತಿರುಚಿ, ವಿಕೃತಗೊಳಿಸಿ ಬರೆಯಬಾರದು ಎನ್ನುತ್ತದೆ ಭಾರತೀಯ ಪತ್ರಿಕಾ ಮಂಡಳಿಯ ನೀತಿ ಸಂಹಿತೆ. ಸ್ಪಷ್ಟ ನಿರೂಪಣೆ, ನಿಖರತೆ, ನಿಷ್ಪಕ್ಷಪಾತತನ ಮತ್ತು ನ್ಯಾಯನಿಷ್ಠೆ ಹಾಗೂ ಅನ್ಯಾಯದ ವಿರುದ್ಧ ದನಿ ಎತ್ತುವುದು ಪತ್ರಕರ್ತನ ಮೂಲಭೂತ ಗುಣವಾಗಬೇಕು. ಪ್ರತಿಷ್ಠಿತರ ಪ್ರೇರಣೆ, ಪ್ರಲೋಭನೆಗಳಿಂದಾಗಲೀ ದೊಂಬಿಕೂಟದ ಕೂಗಾಟ, ಹೆದರಿಕೆಬೆದರಿಕೆಗಳಿಂದಾಗಲೀ ದಿಕ್ಕುಗೆಡದಿರುವುದು ಯಶಸ್ವೀ ಪತ್ರಕರ್ತನ, ಪತ್ರಿಕೋದ್ಯಮದ ಗುಣಲಕ್ಷಣಗಳೆಂದು ಮಿಸ್ಸೋರಿ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಕಾಲೇಜಿನ ಸಂಸ್ಥಾಪಕ ವಾಲ್ಟರ್ ವಿಲಿಯಮ್ಸ್ ಹೇಳುತ್ತಾನೆ.

ಈ ಮಾತುಗಳ ಹಿನ್ನೆಲೆಯಲ್ಲಿ ನಮ್ಮ ಪತ್ರಿಕೆಗಳ ವರದಿಗಾರಿಕೆ, ಟೀಕೆಟಿಪ್ಪಣಿಗಳನ್ನು ನೋಡಿದಾಗ ಅವು ಎಷ್ಟು ನಿಷ್ಪಕ್ಷಪಾತದಿಂದ ಕೂಡಿವೆ ಎಂದು ಕೇಳುವಂತಾಗುತ್ತದೆ. ಈ ಚುನಾವಣೆಯಲ್ಲಿ ಎಲ್ಲೆಲ್ಲೂ ಮೋದಿ ಅಲೆ ಇದೆಯೆಂದು ಬಹುತೇಕ ಎಲ್ಲ ಪತ್ರಿಕೆಗಳೂ ಬರೆಯುತ್ತಿವೆ. ಏನು ಮೋದಿ ಅಲೆ ಎಂದರೆ? ಯಾರಿಗೂ ಸ್ಪಷ್ಟವಾದ ಕಲ್ಪನೆ ಇದ್ದಂತಿಲ್ಲ. ನಾಲ್ಕೈದು ಮಂದಿ ಪಡ್ಡೆ ಹುಡುಗರನ್ನು ಸಭೆಗಳ ಮಧ್ಯೆ ಬಿತ್ತನೆ ಮಾಡಿ `ಮೋದಿ-ಮೋದಿ’ ಎಂದು ಅವರಿಂದ ಕೂಗಿಸಿದರೆ ಅದು ಮೋದಿ ಅಲೆಯಾದೀತೆ? ಮೋದಿ ಅಲೆ ಎನ್ನುವವರು, ಅದಕ್ಕಿಂತ ಪ್ರಬಲವಾಗಿರುವ ನೋಟು ಅನಾಣ್ಯೀಕರಣ, ಜಿ.ಎಸ್.ಟಿ. -ಇವು ಜನರ ಮೇಲೆ ಉಂಟುಮಾಡಿರುವ ತೀವ್ರ ಪರಿಣಾಮವನ್ನು ಕೋಪವನ್ನು ಏಕೆ ಹಿಂದಕ್ಕೆ ಸರಿಸುತ್ತಾರೆ?

ಕಳೆದ ಒಂದೆರಡು ದಶಕಗಳಲ್ಲಿ ಪತ್ರಿಕೋದ್ಯಮದಲ್ಲಿ ಉಂಟಾಗಿರುವ ಕೊರಳು ಕೊಯ್ಯುವ ಸ್ಪರ್ಧೆ-ಪೈಪೋಟಿಗಳು ಹಾಗೂ ಇದರ ಪರಿಣಾಮವಾಗಿ ಉಂಟಾಗಿರುವ ಆರ್ಥಿಕ ಅಭದ್ರತೆಯನ್ನು ಗಮನಿಸಬೇಕು. ಕಾರ್ಪೊರೆಟ್ ವಲಯ ಸೃಷ್ಟಿಸಿರುವ ಈ ಸ್ಪರ್ಧೆ ಮತ್ತು ಅಭದ್ರತೆ ಪತ್ರಿಕೆಗಳ ನೀತಿಯಲ್ಲೇ ಅಲ್ಲೋಲಕಲ್ಲೋಲ ಉಂಟುಮಾಡಿದೆ. ಮೊದಲು ಪ್ರತಿ ಪತ್ರಿಕೆಗೂ ತನ್ನದೇ ಆದ ಸಂಪಾದಕೀಯ ನೀತಿ ಮತ್ತು ಜಾಹೀರಾತು ನೀತಿ ಇರುತ್ತಿತ್ತು. ಆದರೆ ಇಂದು ಸಂಪಾದಕೀಯ ನೀತಿಯೂ ಇಲ್ಲ, ಜಾಹೀರಾತು ನೀತಿಯೂ ಇಲ್ಲ. ನಮ್ಮ ಪತ್ರಿಕೆಗಳು ಗೆದ್ದೆತ್ತಿನ ಬಾಲ ಹಿಡಿಯುವುದರಲ್ಲಿ ಯಾವ ಪಕ್ಷಾಂತರಿ ರಾಜಕಾರಣಿಗೂ ಕಡಿಮೆಯಿಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ, ಕಾವಲು ನಾಯಿ ಎಂದೆಲ್ಲ ವರ್ಣಿಸಲಾಗುವ ಪತ್ರಿಕೆಗಳು ತಮ್ಮ ಈ ಸ್ಥಾನಮಾನ ಮರೆತು ಆಡಳಿತಾರೂಢ ಪಕ್ಷಗಳ ಕೃಪಾಪೋಷಿತ ಮಂಡಲಿಗಳಾಗಿವೆ. ಆಡಳಿತ ಪಕ್ಷ ಹೇಳಿದ್ದೇ ಪರಮ ಸತ್ಯ ಎಂದು ಸ್ವೀಕರಿಸುತ್ತಿವೆ.

ಪತ್ರಿಕೆಗಳು ಇಂದು ತಮ್ಮ ಸಂಪಾದಕೀಯ ಅಸ್ಮಿತೆಯನ್ನು ಕಳೆದುಕೊಂಡು ಆಳುವ ಪಕ್ಷದ ಮುಖವಾಣಿಗಳಂತೆ ಕಾಣುತ್ತಿವೆ. ಈ ನೈತಿಕ ಭ್ರಷ್ಟತೆಗಿಂತ ಮಿಗಿಲಾದ ಇನೊಂದು ಭ್ರಷ್ಟಾಚಾರ ಇರಬಹುದೆ? ನೈತಿಕ ಭ್ರಷ್ಟಾಚಾರ ಪತ್ರಿಕೆಯ ಆತ್ಮವನ್ನು ಕೊಂದರೆ ಮತ್ತೊಂದು ಅಸ್ಮಿತೆಯನ್ನು ಕೊಲ್ಲುತ್ತಿದೆ.

ಒಂದು ಕಾಲಕ್ಕೆ ಪತ್ರಿಕೆಗಳ ಬತ್ತಳಿಕೆಯಲ್ಲಿ ಪ್ರಬಲ ಅಸ್ತ್ರವಾಗಿದ್ದ ತನಿಖಾ ವರದಿಗಳು ಇಂದು ನೇಪಥ್ಯಕ್ಕೆ ಸರಿದಿವೆ. ಜನಧನ್, ಉಜ್ವಲ, ಸ್ವಚ್ಛ ಭಾರತ, ರೈತರಿಗೆ ಬೆಳೆ ವಿಮೆ, ಆಯುಷ್ಮಾನ್, ಅಸಂಘಟಿತ ಕಾರ್ಮಿರಿಗೆ ಪಿಂಚಣಿ ಈ ಯೋಜನೆಗಳ ಸತ್ಯಾಸತ್ಯತೆ ಏನು? ಇವುಗಳಿಂದ ಜನರಿಗೆ ಎಷ್ಟರಮಟ್ಟಿನ ಪ್ರಯೋಜನವಾಗಿದೆ? ಸ್ಮಾರ್ಟ್ ಸಿಟಿಗಳ ಸ್ಥಿತಿ ಏನಾಗಿದೆ? ಕೈಯ್ಯಲ್ಲಿ ಮಲ ಬಳಿಯುವ ಪರಿಸ್ಥಿತಿ ದೇಶದಲ್ಲಿ ಅನೇಕ ಕಡೆ ಇನ್ನೂ ಇರುವಾಗ ಸ್ವಚ್ಛ ಭಾರತದಿಂದ ಅಮಿತಾಬ್ ಬಚ್ಚನ್ ಹೊರತಾಗಿ ಬೇರೆ ಎಷ್ಟು ಮಂದಿಗೆ ಅನುಕೂಲವಾಗಿದೆ? ನಿಜವಾಗಿ ಸರ್ಕಾರದ ಬೊಕ್ಕಸದಿಂದ ಈ ಯೋಜನೆಗಳ ಮೂಲಕ ಸರ್ಕಾರ ಜನರಿಗೆ ಕೊಟ್ಟಿರುವುದಾದರೂ ಏನನ್ನು?

ಇವೆಲ್ಲವನ್ನೂ ಕೂಲಂಕಷವಾಗಿ ತನಿಖೆ ಮಾಡಿ ಜನರಿಗೆ ಸತ್ಯ ತಿಳಿಸಬೇಕಾದ ಪತ್ರಿಕೆಗಳು ಅವುಗಳನ್ನು ವೈಭವೀಕರಿಸುತ್ತಿರುವುದು ಇಂದಿನ ಪತ್ರಿಕೋದ್ಯಮದ ದುರಂತ. ಪತ್ರಿಕೆಗಳಿಗೆ ಸಂಪಾದಕೀಯ ನೀತಿಯೊಂದು ಇಲ್ಲದಿರುವುದರಿಂದ, ತಾನು ಕೆಲಸ ಮಾಡುವ ಪತ್ರಿಕೆಗೆ ನಿಷ್ಠನಾಗಿರಬೇಕಾದ ಪತ್ರಕರ್ತನ ನಿಷ್ಠೆ ಬೇರೆಲ್ಲೋ ಇರುವುದರಿಂದ ಇಂಥ ವೈಭವೀಕರಣ ಸಾಧ್ಯವಾಗಿದೆ. `ವಿಕ್ರಮ’ ಮತ್ತು `ಆರ್ಗನೈಸರ್’ ನಲ್ಲಿರಬೇಕಾದವರು ಮುಖ್ಯಪತ್ರಿಕೆಗಳಿಗೆ ನುಸುಳಿರುವುದರಿಂದ ಮೋದಿ ಬಹುಪರಾಕು ಎಗ್ಗಿಲ್ಲದೆ ಸಾಗಿದೆ.

ಸಂಪಾದಕೀಯ ನೀತಿಯ ಹಾಗೆ ಜಾಹೀರಾತು ನೀತಿಯೂ ಇಲ್ಲದಿರುವುದರಿಂದ ಜಾಹೀರಾತುಗಳು ಮುಖಪುಟವನ್ನೂ, ಪತ್ರಿಕೆಯ ಅಸ್ಮಿತೆಯಾದ ಹೆಸರಿನ (ಮಾಸ್ಟ್ ಹೆಡ್) ಸ್ಥಳವನ್ನೂ ಆಕ್ರಮಿಸುತ್ತಿವೆ. ಈ ಪರಿಯ ನೈತಿಕ ದಿವಾಳಿತನದಿಂದಾಗಿ ಪತ್ರಿಕೆಗಳು ಇಂದು ತಮ್ಮ ಸಂಪಾದಕೀಯ ಅಸ್ಮಿತೆಯನ್ನು ಕಳೆದುಕೊಂಡು ಆಳುವ ಪಕ್ಷದ ಮುಖವಾಣಿಗಳಂತೆ ಕಾಣುತ್ತಿವೆ. ಈ ನೈತಿಕ ಭ್ರಷ್ಟತೆಗಿಂತ ಮಿಗಿಲಾದ ಇನೊಂದು ಭ್ರಷ್ಟಾಚಾರ ಇರಬಹುದೆ? ನೈತಿಕ ಭ್ರಷ್ಟಾಚಾರ ಪತ್ರಿಕೆಯ ಆತ್ಮವನ್ನು ಕೊಂದರೆ ಮತ್ತೊಂದು ಅಸ್ಮಿತೆಯನ್ನು ಕೊಲ್ಲುತ್ತಿದೆ.

*’ತಾಯಿನಾಡು’ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಲೇಖಕರ ವೃತ್ತಿ ಜೀವನದ ಆರಂಭ. ‘ಪ್ರಜಾವಾಣಿ’ ಬಳಗದಲ್ಲಿ 34 ವರ್ಷಗಳ ಸೇವೆ ನಂತರ ನಿವೃತ್ತರಾಗಿ ಬೋಧನೆ, ಅಂಕಣ ಬರಹದಲ್ಲಿ ನಿರತರು.

Leave a Reply

Your email address will not be published.