ಪತ್ರಿಕೆಯ ಉದ್ದೇಶವೇ ವಿಫಲವಾದೀತು!

‘ಅನ್ನದ ಭಾಷೆಯ ಚಿನ್ನದ ಮಾಸಿಕ’ ಎಂಬ ಅಭೀಪ್ಸೆಗೆ ತಕ್ಕಂತೆ ‘ಸಮಾಜಮುಖಿ’ ಪತ್ರಿಕೆ ಒಂದು ವರ್ಷ ಕಳೆದು ಬೆಳೆದದ್ದು ಸಂತೋಷದಾಯಕ. ಫೆಬ್ರವರಿ 2019ರ ಸಂಚಿಕೆಯು ಕರ್ನಾಟಕ ರೈತ ಚಳವಳಿ ಪ್ರಸ್ತುತತೆ ಉಳಿಸಿಕೊಂಡಿದೆಯೆ? ಎಂಬ ಮುಖ್ಯಚರ್ಚೆಯನ್ನು ಕೈಗೆತ್ತಿಕೊಂಡು, ರೈತ ಚಳವಳಿಯ ಆಗು-ಹೋಗುಗಳನ್ನು ಕುರಿತು ಅದರಲ್ಲಿ ತೊಡಗಿಸಿಕೊಂಡಿದ್ದ ಹಾಗೂ ಇಂದಿಗೂ ಚಳವಳಿಯ ಭಾಗವಾಗಿರುವ ಕೆಲವರಿಂದ ಬರೆಸಿ ದಾಖಲಿಸಿರುವುದು ಸ್ವಾಗತಾರ್ಹ. ಸಂಘ-ಸಂಸ್ಥೆಗಳನ್ನು ಕಟ್ಟಿ ಬೆಳೆಸುವವರಿಗೆ ಇದೊಂದು ಪಾಠ ಕೈಪಿಡಿಯಾಗಬಹುದು. ಹೀಗೆ ‘ದಲಿತ ಸಂಘರ್ಷ ಸಮಿತಿ’, ಹಾಗೂ ‘ಮಹಿಳಾ ಚಳವಳಿ’ಗಳ ಬಗ್ಗೆಯೂ ದಾಖಲೆಗಳಾಗಬೇಕು.

ಈ ಸಂಚಿಕೆಯಲ್ಲಿರುವ ಕೆ.ಪುಟ್ಟಸ್ವಾಮಿ ಅವರ ‘ಆದರ್ಶಗಳಲ್ಲಿ ಅಮರ ಡಾ.ಕೆ.ಮಧುಕರಶೆಟ್ಟಿ’ ಎಂಬ ಲೇಖನ ಕಣ್ಣು ಒದ್ದೆಯಾಗುವಷ್ಟು ಆಪ್ತತೆಯಿಂದ ಕೂಡಿ ಇಂತಪ್ಪ ಪೊಲೀಸ್ ಅಧಿಕಾರಿಯೂ ಉಂಟೆ ಎಂಬ ಹೆಮ್ಮೆಯೂ ಅವರನ್ನು ಕಳಕೊಂಡ ಸಂಕಟವೂ ಒಟ್ಟಿಗೆ ಮೂಡುತ್ತದೆ. ಜಗದರಿವಿಗೆ ಸಾಕ್ಷಿಯಾಗಿದೆ ಪುರುಷೋತ್ತಮ ಆಲದಳ್ಳಿ ಅವರ ಯುಕೆ ಕುರಿತ ‘ಬ್ರೆಕ್ಸಿಟ್ ಪ್ರಹಸನದ ಅಂತಿಮ ಚರಣ’ ಎಂಬ ಲೇಖನ. ಸನ್‍ಶೂಯನ್ ಎಂಬ ಚೀನಿ ಮಹಿಳೆ ಹುಯೆನ್‍ತ್ಸಾಂಗ್ ಹಾದಿಯಲ್ಲಿ ನಡೆದು ‘ಟೆನ್ ಥೌಸಂಡ್ ಮೈಲ್ಸ್ ವಿತೌಟ್ ಎ ಕ್ಲೌಡ್’ ಎಂಬ ಕೃತಿಯಲ್ಲಿ ತನ್ನ ಆ ಮಹಾ ಪಯಣದ ಅನುಭವ ಕಥನ ನಿರೂಪಿಸಿರುವುದನ್ನು ಕುರಿತು ರವಿ ಹಂಜ್ ಅವರು ಅದರ ಪರಿಚಯವನ್ನು ಮನೋಜ್ಞವಾಗಿ ಮಾಡಿಕೊಟ್ಟಿರುತ್ತಾರೆ. ರವಿಹಂಜ್ ಅವರು ‘ಹುಯೆನ್‍ತ್ಸಾಂಗ್‍ನ ಮಹಾಪಯಣ’ ಕುರಿತು ಪ್ರತ್ಯೇಕ ಪುಸ್ತಕ ಬರೆದಂತೆ ಪ್ರಸ್ತುತ ಅವನ ಹಾದಿಯಲ್ಲೇ ಭಾರತಕ್ಕೆ ಬಂದು ಹೋದ ಸನ್‍ಶೂಯನ್‍ಳ ಈ ಕೃತಿಯನ್ನು ಕನ್ನಡಕ್ಕೆ ತಂದರೆ ಅವರಿಗೆ ಪುಣ್ಯ ಬಂದೀತು!

ಆದರೆ ‘ಸಂಸ್ಕತಿ ಸಂಪದ’ ವಿಭಾಗದಲ್ಲಿರುವ ಡಾ.ಚಂದ್ರಕಲಾ ಹೆಚ್.ಆರ್. ಅವರ ನಾಗವರ್ಮನ ಕರ್ಣಾಟಕ ಕಾದಂಬರಿ ಕುರಿತಾದ ‘ಯುವ ಮನಗಳ ವಿಕಾರಗಳಿಗೆ ಹಿಡಿದ ಕನ್ನಡಿ’ ಎಂಬ ಲೇಖನ ಮಾತ್ರ ‘ಸಮಾಜಮುಖಿ’ ಅಂಥ ಗುಣಮಟ್ಟದ ಪತ್ರಿಕೆಗೆ ಅಪವಾದವಾಗಿದೆ. ಆ ಹಳಗನ್ನಡ ಕಾವ್ಯದ ಅಮರ ಪ್ರೇಮದ ಕಥೆಯ ನಾಡಿಮಿಡಿತವೇ ಈ ಲೇಖಕರಿಗೆ ಸಿಕ್ಕಿಲ್ಲ. ಅದರ ಸ್ವರ್ಗೀಯ ಸೌಂದರ್ಯಕ್ಕೆ ಇಂದಿನ ಯುವ ಮನದ ವಿಕಾರಗಳನ್ನು ಕ್ಲಿಪ್ ಹಾಕಿ ಅಪಚಾರವೆಸಗಿದ್ದಾರೆ. ‘ಕಾದಂಬರಿ ಕಾವ್ಯ ಪ್ರೇಮದ ಅಮರಕಥೆ. ವೈರಾಗ್ಯವು ಶೃಂಗಾರಕ್ಕೆ ಶರಣಾದ ಕಥೆ’ (ಕುವೆಂಪು, ಮಹಾಶ್ವೇತ ತಪಸ್ಸು) ದೈಹಿಕ ಕಾಮ ತನ್ನ ಕಾಳಿಕೆಯನ್ನು ಕಳೆದುಕೊಂಡು ದೈವಿಕ ಪ್ರೇಮವಾಗಿ ಪರಿವರ್ತಿತವಾಗುವ ಅಮರ ಪುಣ್ಯಕಥೆ. ಅವಳ ಸಮಾಗಮಕ್ಕೆ ಜನ್ಮ ಜನ್ಮಾಂತರಗಳಲ್ಲಿ ಬರುವ ಮುನಿಕುಮಾರ; ಆ ಅಶರೀರವಾಣಿಯ ಮಾತು ನಂಬಿ ಆತ ಬಂದೇ ಬರುವನೆಂದು ನಂಬಿ ತಪಸ್ಸಿಗೆ ಕೂರುವ ಗಂಧರ್ವ ಕನ್ಯೆ ಹಾಗೂ ಅವರಿಗೆ ಅನುಕೂಲಶೀಲರಾಗಿ ಬರುವ ಸ್ನೇಹ ವಲಯದ ಸಖಿ ಸಖರು ಇತ್ಯಾದಿ.

ಒಟ್ಟಾರೆ ಇಂಥ ಪ್ರಣಯ ಹಾಗೂ ಸ್ನೇಹ ತಂತುವಿನಿಂದ ಬುವಿ ಬಾನಿಗೆ ನೂತನ ಸೇತುವೆ ಕಟ್ಟುವ ಈ ಮಹಾಕಾವ್ಯ ಸಾವಿರ ವರ್ಷ ಸಂದರೂ ನಿಚ್ಚಂಪೊಸತಾಗಿದೆ. ಪಂಪ ರನ್ನಾದಿಗಳ ರಕ್ತಚರಿತೆಗಳಿಂದ ದೂರ ನಿಂತು ಸಹೃದಯರನ್ನು ಪ್ರೇಮಲೋಕಕ್ಕೆ ಆಹ್ವಾನಿಸುವ ಈ ಕಾವ್ಯ ಭುವನದ ಭಾಗ್ಯವೇ ಸರಿ. ಚಂದ್ರಕಲಾ ಅವರು ಇಂಥ ಕೃತಿಯನ್ನು ಕುರಿತು ಇಂದಿನ ಯುವ ಮನಗಳ ವಿಕಾರಗಳಿಗೆ ಒಡ್ಡಿದ ಕನ್ನಡಿ ಎಂದು ವಿಮರ್ಶಿಸಿರುವುದು ಅಕ್ಷಮ್ಯ ಪ್ರಮಾದ. ಈ ಮಾತಿಗೆ ಅವರ ಲೇಖನದ ಹಲವಾರು ವಿರೋಧಾತ್ಮಕವಾದ ಜಾರು ನೋಟಗಳನ್ನು ಉಲ್ಲೇಖಿಸಬಹುದು. ಉದಾಹರಣೆಗೆ: ‘ಗಂಧರ್ವ ಕನ್ನೆ (ಮಹಾಶ್ವೇತೆ)ಗೆ ಗಂಧರ್ವ ಪುರುಷನನ್ನೆ ಆಯ್ಕೆಯಾಗಿಸದೆ ಋಷಿಕುಮಾರ (ಪುಂಡರೀಕ)ನ ಆಯ್ಕೆಯಲ್ಲಿ ಕವಿ ಸೋತಿರುವುದು ವೇದ್ಯವಾಗುತ್ತಿದೆ’ (ಇದೇನು ಮರ್ಯಾದೆಗೇಡು ಒಳನೋಟವೆ?), ‘ಮುನಿಕುಮಾರ ಮಹಾಶ್ವೇತೆಯನ್ನು ಕಂಡು ವಿರಹದಲ್ಲಿ ತೊಳಲಾಡಿಸುವ ಪ್ರಸಂಗ ವ್ಯಂಗ್ಯವಾಗಿದೆ. ಕವಿ ಇಲ್ಲಿ ವಿರೋಧಾಭಾಸ ವ್ಯಕ್ತಿತ್ವವನ್ನು ಸೃಷ್ಟಿಸಿದ್ದಾನೆ’ (ಇದರ ಅರ್ಥ ಗೊತ್ತಾಗುತ್ತಿಲ್ಲ), ‘ಋಷಿಕುಮಾರನ ವ್ಯಕ್ತಿತ್ವ, ಪ್ರಸ್ತುತದಲ್ಲಿನ ಮಠಾಧೀಶರ ಹತ್ತುಹಲವು ಹಗರಣಗಳಿಗೆ ಕನ್ನಡಿ ಹಿಡಿದಂತಿದೆ’ (ಎಲ್ಲಿಂದೆಲ್ಲಿಗೆ ಥಳಕು ಹಾಕುವುದು?), ‘ಕವಿ ಹೀಗೆ ವರ್ಣಿಸುವುದರಲ್ಲಿ ಪ್ರೇಮದ ಪರಿತಾಪಕ್ಕಿಂತ ಕಾಮದ ವ್ಯತಿರಿಕ್ತತೆಯನ್ನು ಗುರುತಿಸಬಹುದು’ (ಏನಿದರ ತಾತ್ಪರ್ಯ?), ‘ಮಹಾಶ್ವೇತೆಯ ಪಾತ್ರ ಚಿತ್ರಣಕ್ಕೆ ಬಳಸಿರುವ ‘ಸೊರ್ಕಿದಳಿನಿಯ ತೆರದಿಂ’ ಎಂಬ ಉಪಮೆ ಇಂದಿನ ಯುವ ಮನಸ್ಸುಗಳ ಹಲವು ವಿಕಾರಗಳನ್ನು ಕನ್ನಡಿಸಿದಂತಿದೆ’ (ಇದರ ಅನ್ವಯವೆ ಅಸಂಬದ್ಧವಾಗಿದೆ). ಕಂಸದಲ್ಲಿರುವ ಮಾತುಗಳು ನನ್ನವು.

ಇದೆಲ್ಲವೂ ಹಾಗಿರಲಿ. ಚಂದ್ರಕಲಾ ಅವರು ಮಹಾಶ್ವೇತೆಗೂ ಜನ್ನನ ಯಶೋಧರ ಚರಿತೆಯ ಅಮೃತಮತಿಗೂ ಸಮೀಕರಣ ಮಾಡ ಹೊರಟಿರುವುದು ತೀರ ಆಭಾಸವಾಗಿದೆ. ಅಮೃತಮತಿ ಧೂಮಪ್ರಭೆ ಎಂಬ ನರಕದಲ್ಲಿ ಬೀಳಲು ಹವಣಿಸುವ ಕಾಮ ವಿಕಾರಕ್ಕೊಳಗಾಗುವ ಯಶೋಧರನ ಪಟ್ಟದ ರಾಣಿ; ಮಹಾಶ್ವೇತೆಯಾದರೊ ಮುನಿಕುಮಾರನನ್ನೇ ಆತ್ಮಸಖನನ್ನಾಗಿಸಲು ಬಯಸಿ ಅವನು ಜನ್ಮಾಂತರದಲ್ಲಿ ಬರುವವರೆಗೂ ಕಾದ ತಪಸ್ವಿನಿ. ಆ ಅಮೃತಮತಿ ಪಾತ್ರ ಕುರಿತು ‘ಚಿತ್ರಮ ಪಾತ್ರೆ ರಮತೇ ನಾರಿ’ ಎಂಬ ಜನ್ನ ಕವಿಯ ಮಾತನ್ನೇ ನಾಗವರ್ಮನ ಮಹಾಶ್ವೇತೆಗೆ ಅನ್ವಯಿಸುತ್ತ ‘ಸ್ತ್ರೀಸ್ವಭಾವವೇ ಚಂಚಲತೆಯೇನೋ’ ಎಂದು ಪ್ರಶ್ನಿಸುವುದು ಆ ಪಾತ್ರಕ್ಕೆ ಬಗೆದ ಮಹಾ ಅಪಚಾರವಾಗುತ್ತದೆಯಲ್ಲವೆ? ಅಷ್ಟೇ ಅಲ್ಲ, ಈ ಪ್ರಣಯ ಕಾವ್ಯದ ಪ್ರಭಾವದಿಂದಲೇ ಜನ್ನನ ಯಶೋಧರ ಚರಿತೆ ರಚನೆಯಾಗಿರಬಹುದು ಎಂದು ತಮ್ಮ ಊಹೆಯನ್ನೂ ತೇಲಿಬಿಡುವ ಲೇಖಕರು ಈ ಎರಡು ಕಾವ್ಯಗಳಿಗೂ ಬುವಿ-ಬಾನಿನ ಅಂತರವಿದೆ ಎಂಬುದನ್ನು ಮರೆತುಬಿಡುತ್ತಾರೆ. ಹಾಗೆ ನೋಡಿದರೆ, ಅಮೃತಮತಿ ಪಾತ್ರ ಜೈನ ಧರ್ಮದ ಪ್ರಚಾರ ತಂತ್ರವಾಗಿ, ಯಶೋಧರನ ವೈರಾಗ್ಯ ನಡೆಗೆ ಕೇವಲ ಒಂದು ಉಪಕರಣವಾಗಿ ಮಾತ್ರ ಬಳಕೆಯಾಗುತ್ತದೆ. ಆ ಕಾವ್ಯದ ವಸ್ತು ಹೆಣ್ಣಿನ ಸಂಬಂಧವಾಗಿ ಅಷ್ಟು ನಿಷ್ಕಾರುಣ್ಯವಾಗಿದ್ದು, ಆಕೆಗೆ ತನ್ನ ಪಾತ್ರ ನಟಿಸಿಯಾದ ಮೇಲೆ ಅವಳಿಗೆ ಏನಾದರೇನಂತೆ ಎಂಬ ಧೋರಣೆಯದು. ಆದರೆ ಮಹಾಶ್ವೇತೆಯ ತಪೋಭೂಮಿ ಹಾಗಲ್ಲ. ಹಾದಿ ತಪ್ಪಿ ಬರುವರಿಗೂ ಅಲ್ಲಿ ಆತಿಥ್ಯವಿದೆ. ಆದ್ದರಿಂದ ಈ ಎರಡು ಕಾವ್ಯಗಳ ತುಲನೆಯೇ ಅಪ್ರಕೃತ ಅಪ್ರಸ್ತುತ. ಕೊನೆಯದಾಗಿ, ಚಂದ್ರಕಲಾ ಅಂಥವರ ವಿಮರ್ಶೆಯ ದಾರಿಯಲ್ಲಿ ಹಳಗನ್ನಡ ಕಾವ್ಯ ಕೃತಿಗಳನ್ನು ಪ್ರವೇಶ ಮಾಡಲು ಹೊರಟರೆ ಇಂದಿನ ಯುವಜನರು ದಾರಿ ತಪ್ಪುತ್ತಾರೆ. ಇದರಿಂದ ಸಮಾಜಮುಖಿ ಪತ್ರಿಕೆಯ ಉದ್ದೇಶವೇ ವಿಫಲವಾಗಿ ಪ್ರಾಚೀನ ಮಹಾಕಾವ್ಯಗಳ ಬಗ್ಗೆ ತಪ್ಪು ಸಂದೇಶಗಳು ರವಾನೆಯಾಗುತ್ತವೆ. ಇಂದಿನ ಸ್ತ್ರೀವಾದಿ ವಿಮರ್ಶಕರು ಹಳಗನ್ನಡ ಕಾವ್ಯಗಳ ಸ್ತ್ರೀಸಂವೇದನೆ ಕುರಿತಾದ ಕುವೆಂಪು ಅವರ ‘ತಪೋನಂದನ’ ದ ವಿಮರ್ಶಾ ಲೇಖನಗಳನ್ನು ಗಮನಿಸುವುದು ಸೂಕ್ತ.

-ಪ್ರೊ. ಶಿವರಾಮಯ್ಯ, ಬೆಂಗಳೂರು.

Leave a Reply

Your email address will not be published.