ಪರದೆ ಸಮಯ ಉಳಿಸುವ ಸವಾಲು!

ನನ್ನ ಅನುಭವ ಹಾಗೂ ಅಭಿಪ್ರಾಯದಲ್ಲಿ ವಿದ್ಯುನ್ಮಾನ ಪರದೆಗಳಿಂದ ಮಕ್ಕಳನ್ನು ಈಗ ಸಂಪೂರ್ಣವಾಗಿ ಬೇರ್ಪಡಿಸಲು ಸಾಧ್ಯವಿಲ್ಲ. ಮಕ್ಕಳನ್ನು ಪರದೆಗಳಿಂದಲೇ ದೂರವಿಡಬೇಕು ಎಂಬುದು ಕಾರ್ಯಸಾಧುವಾದುದಲ್ಲ. ಮಕ್ಕಳ ಸ್ಕ್ರೀನ್ ಟೈಮ್ ಅನ್ನು (ಟಿ.ವಿ. ಹಾಗೂ ಕಂಪ್ಯೂಟರ್ ಅನ್ನು ಒಳಗೊಂಡಂತೆ) ಹೇಗೆ ಮಿತಿಗೊಳಿಸಬಹುದು ಎಂಬುದರ ಬಗ್ಗೆ ಯೋಚಿಸಬೇಕಿದೆ.

– ಎಂ.ಕೆ.ಆನಂದರಾಜೇ ಅರಸ್

ಟಿವಿ ನಮ್ಮ ಮನೆಗಳಿಗೆ ಲಗ್ಗೆಯಿಟ್ಟು 3-4 ದಶಕಗಳಾಗಿವೆ. ಮೊಬೈಲ್ ಚಾಲ್ತಿಗೆ ಬಂದು ಎರಡೂವರೆ ದಶಕಗಳಾಗಿವೆ. ಸ್ಮಾರ್ಟ್ ಫೋನ್ ಕೈಗೆ ಬಂದು ದಶಕ ಕಳೆದಿದೆ. ಈ ಬೆಳವಣಿಗೆಗಳ ಪರಿಣಾಮವಾಗಿ ಈ ಸಹಸ್ರಮಾನದ ಬಹುತೇಕ ಮಕ್ಕಳು ಅಧಿಕ ಸಮಯವನ್ನು ಪರದೆಯೊಂದಿಗೆ ಕಳೆಯುತ್ತಿದ್ದಾರೆ ಎಂಬುದು ಕಹಿ ಸತ್ಯ. ಅಧಿಕ ಪರದೆ ಸಮಯ ಮಕ್ಕಳ ಸಹಜ ಬೆಳವಣಿಗೆಗೆ ಹಾನಿಕರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಪೋಷಕರಿಗೆ ದಾರಿಕಾಣದಾಗಿದೆ.
ಮಂಗನ ಕೈಯಲ್ಲಿ ಬಾಳೆಹಣ್ಣು ಕೊಟ್ಟು ಮತ್ತೆ ಕಿತ್ತುಕೊಳ್ಳಲು ಸಾಧ್ಯವೆ?

ಒಂದು ವರದಿಯ ಪ್ರಕಾರ 12 ತಿಂಗಳಿನ ಮಕ್ಕಳು ದಿನದಲ್ಲಿ ಸರಾಸರಿ 53 ನಿಮಿಷಗಳನ್ನು ಟಿವಿ, ಹಾಗೂ ಮೊಬೈಲ್ ಪರದೆಯೊಂದಿಗೆ ಕಳೆಯುತ್ತಿದ್ದಾರೆ. ಇದು ಮೂರು ವರ್ಷದ ಮಕ್ಕಳಲ್ಲಿ ಮೂರು ಪಟ್ಟಾಗಿದ್ದು ಅವರು ಸರಸಾರಿ 150 ನಿಮಿಷಗಳನ್ನು ಪರದೆಯೊಂದಿಗೆ ಕಳೆಯುತ್ತಿದ್ದಾರೆ. ಪರದೆ ಹವ್ಯಾಸ ಮಕ್ಕಳಲ್ಲಿ ಆರಂಭದಲ್ಲಿಯೇ ಶುರುವಾಗುವುದರಿಂದ, ವಿವಿಧ ಪರದೆಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅಭ್ಯಾಸವನ್ನು ಮಕ್ಕಳಲ್ಲಿ ಬೇಗ ಮೂಡಿಸಿದರೆ ಮಕ್ಕಳ
ಪರದೆ ಸಮಯವನ್ನು ಕಡಿಮೆ ಮಾಡಬಹುದೆಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ.

ಅಮೆರಿಕನ್ ಅಕಾಡೆಮಿ ಆಫ್ ಪೆಡಿಯಾಟ್ರಿಕ್ಸ್ 18 ತಿಂಗಳೊಳಗಿನ ಮಕ್ಕಳನ್ನು ಯಾವುದೇ ಪರದೆಗೆ ಪರಿಚಯ ಮಾಡಬಾರದೆಂದು ಹೇಳುತ್ತದೆ. 18 ತಿಂಗಳು ಹಾಗೂ 5 ವರ್ಷಗಳ ನಡುವಿನ ವಯೋಮಾನದ ಮಕ್ಕಳ ಪರದೆ ಬಳಕೆಯನ್ನು (ಗುಣಮಟ್ಟದ ವಿಷಯಕ್ಕೆ ಮಾತ್ರ) ಕೇವಲ ಒಂದು ಗಂಟೆಗೆ ಮಿತಿಗೊಳಿಸಬೇಕೆಂದು ಹಾಗೂ ಈ ಸಮಯದಲ್ಲಿ ಪೋಷಕರು ಅಥವಾ ಆರೈಕೆ ಮಾಡುವವರು ಪರದೆಯಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳ ಜೊತೆ ಸಂವಹನ ಮಾಡಬೇಕೆಂದು ಈ ಅಕಾಡೆಮಿ ಅಭಿಪ್ರಾಯ ಪಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಸಹ ಒಂದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಪರದೆ ಸಮಯ ನೀಡಬಾರದೆಂದು ಹೇಳುತ್ತದೆ. ಈ ವಯೋಮಾನದ ಮಕ್ಕಳಿಗೆ ದಿನದಲ್ಲಿ ಹಲವಾರು ಬಾರಿ ನೆಲದ ಆಧಾರಿತ ಚಟುವಟಿಕೆಗಳಿಗೆ (ಫ್ಲೋರ್ ಬೇಸ್ಡ್ ಚಟುವಟಿಕೆಗಳು) ಪ್ರೊತ್ಸಾಹ ನೀಡಬೇಕೆಂದು, ಚಟುವಟಿಕೆಯಲ್ಲಿಲ್ಲದಿದ್ದಾಗ, ಆರೈಕೆ ಮಾಡುವವರು ಮಕ್ಕಳಿಗೆ ಕಥೆಗಳನ್ನು ಓದುವುದನ್ನು ಅಥವಾ ಹೇಳುವುದನ್ನು ಮಾಡಬೇಕೆಂದು ಸಂಸ್ಥೆ ಹೇಳುತ್ತದೆ.

ಎಂಟು ವರ್ಷದವರೆಗಿನ ಮಕ್ಕಳು ಸರಾಸರಿ 2 ಗಂಟೆ 19 ನಿಮಿಷಗಳನ್ನು ಪರದೆಯ ಮೇಲೆ ವ್ಯಯಿಸುತ್ತಿದ್ದಾರೆಂದು ಕಾಮನ್ ಸೆನ್ಸ್ ಮೀಡಿಯಾ ಎಂಬ ಸಂಸ್ಥೆಯ 2015ರ ವರದಿ ತಿಳಿಸುತ್ತದೆ. 8 ರಿಂದ 12 ವರ್ಷದ ವಯೋಮಾನದ ಮಕ್ಕಳು ಸರಾಸರಿ 4 ಗಂಟೆ 36 ನಿಮಿಷಗಳನ್ನು ಪರದೆಯ ಮೇಲೆ ಕಳೆಯುತ್ತಿದ್ದಾರೆಂದು ಅದೇ ವರದಿ ತಿಳಿಸುತ್ತದೆ. ಹುಡುಗರು ವಿಡಿಯೋ ಆಟಗಳ ಮೇಲೆ ಹೆಚ್ಚು ಸಮಯ ಕಳೆದರೆ, ಹುಡುಗಿಯರು ಸಾಮಾಜಿಕ ತಾಣಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಎಲ್ಲಾ ಪರದೆ ಸಮಯಗಳ ಪೈಕಿ ಮೊಬೈಲ್ ಮೇಲಿನ ಸಮಯ ಶೇ.41 ರಷ್ಟಿದೆ.

ತಾಯಿಯ ಹೆಚ್ಚಿನ ಪರದೆ ಸಮಯ ಮಕ್ಕಳ ಹೆಚ್ಚಿನ ಪರದೆ ಸಮಯದೊಂದಿಗೆ ಜೊತೆಗೂಡಿರುವುದು ಕೆಲವು ಸಮೀಕ್ಷೆಗಳಲ್ಲಿ ಕಂಡು ಬಂದಿದೆ. ಇದು ಮನೆಯಲ್ಲೇ ಮಕ್ಕಳನ್ನು ಆರೈಕೆ ಮಾಡುವ ತಾಯಂದಿರ ಪ್ರಕರಣದಲ್ಲಿ ಹೆಚ್ಚಿದೆ.

ದಿ ಲ್ಯಾನ್ಸೆಟ್ ಚೈಲ್ಡ್ ಅಂಡ್ ಅಡಾಲೆಸೆಂಟ್ ಹೆಲ್ತ್ ಪತ್ರಿಕೆ ಇಂಗ್ಲೆಂಡ್‍ನಲ್ಲಿ ನಡೆಸಿದ ಈ ಸಮೀಕ್ಷೆ 13 ರಿಂದ 16ರ ವಯೋಮಾನದ 10,000 ಮಕ್ಕಳನ್ನು ಒಳಗೊಂಡಿತ್ತು.

ಒಂದರಿಂದ ನಾಲ್ಕು ವರ್ಷಗಳ ನಡುವಿನ ವಯೋಮಾನದ ಮಕ್ಕಳು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಸಮಯವನ್ನು ಪರದೆಯ ಮೇಲೆ ವಿನಿಯೋಗಿಸುವುದು ಒಳ್ಳೆಯದು. ಪ್ರತಿನಿತ್ಯ ಕನಿಷ್ಠ ಒಂದು ಗಂಟೆ ಮಿತವಾದ ಹಾಗೂ ಹುರುಪಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ದೈಹಿಕ ಚಟುವಟಿಕೆಗಳು ಹೆಚ್ಚಿದಷ್ಟು ಹೆಚ್ಚು ಪ್ರಯೋಜನವುಂಟು. ಜೊತೆಗೆ ಪ್ರತಿನಿತ್ಯ 10 ರಿಂದ 14 ಗಂಟೆಗಳ ಕಾಲ ನಿದ್ದೆ ಮಾಡಬೇಕು.

ಹೆಚ್ಚು ಪರದೆ ಸಮಯ ಮಕ್ಕಳು ಹಾಗೂ ಹದಿಹರಯದವರನ್ನು ಬೊಜ್ಜು, ನಿದ್ರೆ ಸಮಸ್ಯೆಗಳು, ಸೈಬರ್ ಬೆದರಿಕೆ ಹಾಗೂ ಋಣಾತ್ಮಕ ಕಾರ್ಯಕ್ಷಮತೆಯಂತಹ ಸಮಸ್ಯೆಗಳಿಗೆ ಸಹ ಒಳಪಡಿಸುತ್ತವೆ. ಹದಿಹರೆಯದ ಹುಡುಗಿಯರಲ್ಲಿ ಸಾಮಾಜಿಕ ಮಾಧ್ಯಮದ ಬಳಕೆ ಖಿನ್ನತೆಗೆ ಕಾರಣವಾಗುತ್ತಿರುವುದು ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಕಂಡುಬಂದಿದೆ. ದಿ ಲ್ಯಾನ್ಸೆಟ್ ಚೈಲ್ಡ್ ಅಂಡ್ ಅಡಾಲೆಸೆಂಟ್ ಹೆಲ್ತ್ ಪತ್ರಿಕೆ ಇಂಗ್ಲೆಂಡ್‍ನಲ್ಲಿ ನಡೆಸಿದ ಈ ಸಮೀಕ್ಷೆ 13 ರಿಂದ 16ರ ವಯೋಮಾನದ 10,000 ಮಕ್ಕಳನ್ನು ಒಳಗೊಂಡಿತ್ತು. ಹದಿಹರೆಯದ  ಯುವತಿಯರನ್ನು ಬೆದರಿಕೆಗೆ ಒಡ್ಡುವ ಮೂಲಕ ಹಾಗೂ ನಿದ್ದೆ ಮತ್ತು ದೈಹಿಕ ಚಟುವಟಿಕೆಗಳನ್ನು ಕಡಿಮೆ ಮಾಡುವ ಮೂಲಕ ಸಾಮಾಜಿಕ ಮಾಧ್ಯಮ ಹುಡುಗಿಯರ ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡುತ್ತಿದೆಯೆಂಬುದು ಸಮೀಕ್ಷೆಯ ವರದಿಯಾಗಿತ್ತು.

ಆ ಸಂಶೋಧಕರ ಪ್ರಕಾರ ಸಾಮಾಜಿಕ ಮಾಧ್ಯಮ ನೇರವಾಗಿ ಹಾನಿ ಮಾಡುತ್ತಿಲ್ಲ, ಆದರೆ ಅದರ ಬಳಕೆ ಧನಾತ್ಮಕ ಪರಿಣಾಮ ಬೀರುವ ಚಟುವಟಿಕೆಗಳನ್ನು ಕಡಿಮೆಗೊಳಿಸುವುದರ ಮೂಲಕ ಹಾಗೂ ಹಾನಿಕರ ವಿಷಯಕ್ಕೆ ಪರಿಚಯಿಸುವುದರ ಮೂಲಕ (ವಿಶೇಷವಾಗಿ ಸೈಬರ್-ಬೆದರಿಕೆಯ ಋಣಾತ್ಮಕ ಅನುಭವ) ಹದಿಹರೆಯದ ಯುವತಿಯರ ಮಾನಸಿಕ ಆರೋಗ್ಯಕ್ಕೆ ಹಾನಿಮಾಡುತ್ತಿದೆ. ಸಾಮಾಜಿಕ ಮಾಧ್ಯಮ ಹದಿಹರೆಯದ ಯುವಕರು ಹಾಗೂ ಯುವತಿಯರಿಬ್ಬರನ್ನೂ ಮಾನಸಿಕ ಖಿನ್ನತೆಗೆ ದೂಡುತ್ತದಾದರೂ ಇದು ಯುವತಿಯರಲ್ಲಿ ಹೆಚ್ಚಾಗಿದೆ.

ಸಾಮಾಜಿಕ ಮಾಧ್ಯಮ ಸಾಮಾಜಿಕ ಸಂವಹನಗಳನ್ನು ಪ್ರೊತ್ಸಾಹಿಸುವುದರ ಮೂಲಕ ಧನಾತ್ಮಕ ಪರಿಣಾಮವನ್ನು ಸಹ ಬೀರುತ್ತದೆ. ಆದರೆ ಆರೋಗ್ಯಕರ ಜೀವನಶೈಲಿಯನ್ನು (ನಿದ್ದೆ ಹಾಗೂ ದೈಹಿಕ ಚಟುವಟಿಕೆಗಳು ಸೇರಿದಂತೆ) ಅನುಸರಿಸುವುದರ ಮೂಲಕ ಸಾಮಾಜಿಕ ಮಾಧ್ಯಮದ ಪ್ರಯೋಜನವನ್ನು ಪಡೆಯಬಹುದು ಹಾಗೂ ಅದರ ಋಣಾತ್ಮಕ ಪರಿಣಾಮವನ್ನು ಕಡಿಮೆ ಮಾಡಬಹುದು. ಮೊಬೈಲ್ ಬಳಕೆಯಿಂದಾಗುವ ಆರೋಗ್ಯದ ದುಷ್ಪರಿಣಾಮಗಳ
ಬಗ್ಗೆ ವಿವಿಧ ಸಂಶೋಧನೆಗಳು ನಡೆಯುತ್ತಿವೆ. ಮೊಬೈಲ್‍ನ ಬಳಕೆಯಿಂದ ಮಕ್ಕಳು ವಿಕಿರಣಕ್ಕೆ ಒಡ್ಡಿಕೊಳ್ಳುತ್ತಾರೆ. ಇದರಿಂದ ಏನಾಗುತ್ತದೆ? ಕ್ಯಾನ್ಸರ್
ಬರುತ್ತದೆಯೇ? ತಲೆಬುರುಡೆ ಮೂಳೆಯ ಸಾಂದ್ರತೆ ಕುಗ್ಗುವುದೇ? ಈ ಪ್ರಶ್ನೆಗಳಿಗೆ ಇನ್ನೂ ನಿರ್ಣಾಯಕ ಉತ್ತರಗಳು ದೊರಕಿಲ್ಲ. ಆದರೆ ಈಗಾಗಲೇ ತೊಂದರೆಯಾಗಿರುವ ಸಾಧ್ಯತೆಯನ್ನಾಗಲಿ ಅಥವಾ ಭವಿಷ್ಯದಲ್ಲಿ ತೊಂದರೆ ಸಂಭವಿಸಬಹುದೆನ್ನುವ ತರ್ಕವನ್ನು ಸುಲಭವಾಗಿ ಅಲ್ಲಗಳೆಯಲು ಸಾಧ್ಯವಿಲ್ಲ.

ಅಧ್ಯಯನದಲ್ಲಿ ಸಿನ್‍ಸಿನಾಟಿ ಪ್ರದೇಶದ 3 ರಿಂದ 5 ವರ್ಷಗಳ ನಡುವಿನ 47 ಆರೋಗ್ಯವಂತ ಮಕ್ಕಳ ಮಿದುಳನ್ನು ಎಮ್.ಆರ್.ಐ. ಹಾಗೂ ಅರಿವಿನ (ಕಾಗ್ನಿಟಿವ್) ಪರೀಕ್ಷೆಗೆ ಒಳಪಡಿಸಲಾಯಿತು. ಈ ಪರೀಕ್ಷೆಯಲ್ಲಿ ಪರದೆ ಸಮಯ ಹೇಗೆ ಮಿದುಳನ್ನು ಬದಲಾಯಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ.

ಅಮೆರಿಕಾದ ಸಿನ್‍ಸಿನಾಟಿ ಮಕ್ಕಳ ಆಸ್ಪತ್ರೆ ಆರೋಗ್ಯ ಕೇಂದ್ರದ ಅಧ್ಯಯನದ ಪ್ರಕಾರ ಹೆಚ್ಚು ಸಮಯ ಪರದೆಯ ಮೇಲೆ ಕಳೆಯುವ ಮಕ್ಕಳ ಭಾಷೇ ಹಾಗೂ ಸ್ವ-ನಿಯಂತ್ರಣಕ್ಕೆ ಸಂಬಂಧಿಸಿದ ಮಿದುಳಿನ ಭಾಗಗಳಲ್ಲಿ ವ್ಯತ್ಯಾಸವಿರುವುದು ಕಂಡುಬಂದಿದೆ. ಆದರೆ ಈ ಬದಲಾವಣೆಗಳು  ಹೇಗೆ ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧ್ಯಯನ ಮಾಡಿದ ಸಂಶೋಧಕರು ಹೇಳುತ್ತಾರೆ. ಈ ಅಧ್ಯಯನದಲ್ಲಿ ಸಿನ್‍ಸಿನಾಟಿ ಪ್ರದೇಶದ 3 ರಿಂದ 5 ವರ್ಷಗಳ ನಡುವಿನ 47 ಆರೋಗ್ಯವಂತ ಮಕ್ಕಳ ಮಿದುಳನ್ನು ಎಮ್.ಆರ್.ಐ. ಹಾಗೂ ಅರಿವಿನ (ಕಾಗ್ನಿಟಿವ್) ಪರೀಕ್ಷೆಗೆ ಒಳಪಡಿಸಲಾಯಿತು. ಈ ಪರೀಕ್ಷೆಯಲ್ಲಿ ಪರದೆ ಸಮಯ ಹೇಗೆ ಮಿದುಳನ್ನು ಬದಲಾಯಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಪರದೆ ಸಮಯದಿಂದ ಮಿದುಳಿನ ಸಂಸ್ಕರಣಾ ವೇಗ ಬಾಧಿತವಾಗಿದ್ದುದು ತಿಳಿದುಬಂದಿತು. ಹೆಚ್ಚು ಪರದೆ ಸಮಯ ಕಳೆಯುವ ಶಾಲಾಪೂರ್ವ ಮಕ್ಕಳಲ್ಲಿ ಗಮನದ ಅವಧಿ ಕಡಿಮೆಯಾಗಿರುವುದು ಕೆನಡಾದಲ್ಲಿ ನಡೆಸಿದ ಒಂದು ಅಧ್ಯಯನದಿಂದ ತಿಳಿದುಬಂದಿದ್ದರೆ, ಹೆಚ್ಚು ಮೊಬೈಲ್ ಬಳಸುವ 18 ತಿಂಗಳಿನ ಮಕ್ಕಳಲ್ಲಿ ಅಭಿವ್ಯಕ್ತಿ ಭಾಯ ಬೆಳವಣಿಗೆ ನಿಧಾನವಾಗಿರುವುದು ಮತ್ತೊಂದು ಆಧ್ಯಯನದಿಂದ ಕಂಡುಬಂದಿದೆ.

ಹೆಚ್ಚು ಪರದೆ ಸಮಯದಿಂದ ಶೈಕ್ಷಣಿಕ ಚಟುವಟಿಕೆಯೂ ಸೇರಿದಂತೆ ಇತರೆ ಚಟುವಟಿಕೆಗಳಿಗೆ ಮಕ್ಕಳು ನೀಡುವ ಸಮಯ ಕಡಿಮೆಯಾಗುತ್ತದೆ. ಇದರ ಪರಿಣಾಮ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಹಿನ್ನೆಡೆಯಾಗುತ್ತಿದೆ. ಕೆಲವು ಮನೆಗಳಲ್ಲಿ ಮಕ್ಕಳಿಗೆ ಮೊಬೈಲ್ ಸಿಗದಂತೆ ಮಾಡುತ್ತಾರೆ. ಡಿಟಿಹೆಚ್ ಬಂದ್ ಮಾಡುತ್ತಾರೆ. ಕಂಪ್ಯೂಟರ್ ಇಡುವುದಿಲ್ಲ. ಮಕ್ಕಳು ತಂದೆ-ತಾಯಿಯರ ಉದ್ದೇಶ ಅರಿತು ಆಟ-ಪಾಠದೆಡೆ ಗಮನ ಹರಿಸಿದರೆ ಚೆಂದ ಅನ್ನಿಸುತ್ತದೆ. ಆದರೆ ಇದನ್ನು ಎಲ್ಲಾ ಮನೆಗಳಲ್ಲೂ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ. ಬಹಳಷ್ಟು ಕುಟುಂಬಗಳಲ್ಲಿ ಇದೊಂದು ಹಾರೈಕೆಯಾಗಬಹುದಷ್ಠೆ.

ಮಕ್ಕಳು ಹಾಗೂ ಪರದೆಯ ನಡುವೆಯ ಬೆಸುಗೆಯನ್ನು ಸಂಪೂರ್ಣವಾಗಿ ಕಡಿಯಲು ಸಾಧ್ಯವಿಲ್ಲ. ಆದರೆ ಕಡಿತಗೊಳಿಸಲು ಸಾಧ್ಯವಿದೆ. ಮಕ್ಕಳು ಹೆಚ್ಚಾಗಿ ದೈಹಿಕ ಚಟುವಟಿಕೆಗಳಲ್ಲಿ, ಆಟೋಟಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕು. ಮಕ್ಕಳು ನಮ್ಮ ಜೊತೆಯಲ್ಲಿದ್ದಾಗ ನಾವು ಟಿ.ವಿ. ಹಾಕದಿದ್ದರೆ ಒಳ್ಳೆಯದು.ಮನೆಯಲ್ಲಿ ಒಳಾಂಗಣ ಆಟಗಳಾದ ಕೇರಂ, ಚೆಸ್, ಚೌಕಾಬಾರ, ಇತ್ಯಾದಿ ಆಟಗಳನ್ನು ಮರುಪರಿಚಯಿಸಬೇಕು. ನಾವು ಮಕ್ಕಳೊಂದಿಗೆ ಮಾತನಾಡಬೇಕು ಹಾಗೂ ಹೆಚ್ಚು ಹೆಚ್ಚು ಸಮಯ ಕಳೆಯಬೇಕು. ಮಕ್ಕಳಿಗೆ ಕಥೆಗಳನ್ನು ಹೇಳಬೇಕು. ಓದಲು ಪ್ರೇರೇಪಿಸಬೇಕು. ಮಕ್ಕಳ ಜೊತೆ ಆಸಕ್ತಿಯುತ ವಿಷಯಗಳ ಬಗ್ಗೆ ಮಾತನಾಡಬೇಕು. ಮಕ್ಕಳ ಜೊತೆ ನಾವು ಆಟವಾಡಬೇಕು. ಸ್ಕ್ರೀನ್ ಟೈಮ್ ಫ್ರೀ ದಿನಗಳನ್ನು ಹಾಗೂ ಗಂಟೆಗಳನ್ನು ಹಾಕಿಕೊಂಡು, ತಪ್ಪದೇ ಪಾಲಿಸಬೇಕು. ಫೋಷಕರಾಗಿ ನಾವು ನಮ್ಮ ತಲೆಗೆ ಸ್ವಲ್ಪ ಕೆಲಸ ಕೊಟ್ಟರೆ ಹಾಗೂ ಸೃಜನಾತ್ಮಕವಾಗಿ ಯೋಚಿಸಿದರೆ ಮಕ್ಕಳ ಪರದೆ ಸಮಯ ಕಡಿಮೆ ಮಾಡಲು ಖಂಡಿತ ಸಾಧ್ಯವಿದೆ.

Leave a Reply

Your email address will not be published.