ಪರಿವರ್ತನೆಗೆ ಪ್ರೇರಕವಾದ ಬೈಕ್ ಸವಾರಿ

‘ಎ ರೈಡ್ ಅನ್ ದಿ ರೋಡ್ ಟು ಎಕ್ಸಲೆನ್ಸ್’ ಕೃತಿಯ ಕರ್ತೃ ಡಾ.ಎ.ಬಾಲಮುರುಗನ್ ಪ್ರವಾಸಪ್ರಿಯರು, ಲೇಖಕರು, ಪ್ರೇರಕ ಉಪನ್ಯಾಸಕರು, ಮತ್ತು ಉದ್ದಿಮೆ ಹಾಗು ವ್ಯಕ್ತಿ ಪರಿವರ್ತನೆಯ ತರಬೇತುದಾರರು. ಇವರು ಒಂದು ಸಂಜೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಗೆಳೆಯ ಆರ್ಯ (ಕಥಾನಾಯಕ) ಕರೆ ಮಾಡುತ್ತಾರೆ. ಕಚೇರಿಯಲ್ಲಿ ವಾರ್ಷಿಕ ಮೌಲ್ಯಮಾಪನ ತೃಪ್ತಿದಾಯಕವಾಗಿರದ ಕಾರಣ ತಾನು ಅತ್ಯಂತ ಕಷ್ಟದಲ್ಲಿರುವುದಾಗಿಯೂ, ಮುಂದಿನ ನಡೆಗಾಗಿ ಇವರನ್ನು ಆದಷ್ಟು ಬೇಗ ಕಾಣಬೇಕೆಂದೂ ತಿಳಿಸುತ್ತಾರೆ. ಮರುದಿನ ಭೇಟಿ ನಿಗದಿಯಾಗುತ್ತದೆ. ರಜೆಯನ್ನೂ ತೆಗೆದುಕೊಳ್ಳದೆ ದಿನಕ್ಕೆ ಕನಿಷ್ಠ ಹತ್ತು ತಾಸು ಕಚೇರಿಯಲ್ಲಿ ದುಡಿದರೂ ಕೆಲಸಕ್ಕೆ ಕುತ್ತು ಬಂದಿರುವ ಪರಿಸ್ಥಿತಿಯಿಂದ ಕುಗ್ಗಿರುವ ಕಥಾನಾಯಕನಿಗೆ ಮನೆಯಲ್ಲೂ ನೆಮ್ಮದಿ ಇಲ್ಲದಿರುವುದು ಮಾತುಕತೆಯಿಂದ ಸ್ಪಷ್ಟವಾಗುತ್ತದೆ.

ಪ್ರತಿ ವ್ಯಕ್ತಿಯೂ ಮಹತ್ತರ ಪ್ರತಿಭೆ ಮತ್ತು ಸಾಧ್ಯತೆಗಳನ್ನು ಹೊಂದಿರುತ್ತಾನೆ. ಆದರೆ, ದುರದೃಷ್ಟವಶಾತ್, ಅವುಗಳನ್ನು ಪೂರ್ಣಪ್ರಮಾಣದಲ್ಲಿ ಸಾಕಾರಗೊಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತೆಯೇ ಗೆಳೆಯ ಆರ್ಯ ಸಹ ವಿಫಲರಾಗಿದ್ದಾರೆ. ಅವರಲ್ಲಿರುವ ಸಾಮರ್ಥ್ಯವನ್ನು ಹೊರಹೊಮ್ಮಿಸುವಲ್ಲಿ ತಾವು ನೆರವಾಗಬಹುದೆಂಬ ನಂಬಿಕೆ ಲೇಖಕರದ್ದಾಗಿದೆ. ಅನುಭವದ ಮೂಲಕ ಕೌಶಲ್ಯವನ್ನು ಕಲಿತು ಅಭಿವೃದ್ಧಿಗೊಳಿಸಿಕೊಳ್ಳುವುದು ಉತ್ತಮ ಮಾರ್ಗ ಎನ್ನುವುದು ಅವರ ಅಭಿಪ್ರಾಯವಾಗಿದೆ. ಹಾಗಾಗಿ, ಮತ್ತೊಬ್ಬ ಗೆಳೆಯನೊಡನೆ ಮುಂದಿನ ವಾರ ಬೈಕ್ ಪ್ರವಾಸ ಹೊರಟಿರುವುದಾಗಿಯೂ, ಈ ಪ್ರವಾಸದಲ್ಲಿ ತಮ್ಮ ಜೊತೆ ಬಂದರೆ ಸಮಸ್ಯೆಗೆ ಪರಿಹಾರ ಹುಡುಕಬಹುದೆಂದೂ ಲೇಖಕರು ಆರ್ಯರಿಗೆ ಆಹ್ವಾನ ನೀಡುತ್ತಾರೆ.

ಕಥಾನಾಯಕ ಅರೆಮನಸ್ಸಿನಿಂದಲೇ ಪ್ರವಾಸಕ್ಕೆ ಸಮ್ಮತಿಸುತ್ತಾರೆ. ಈ ಪ್ರವಾಸದ ಅನುಭವಗಳನ್ನು ಲೇಖಕರು ಹನ್ನೊಂದು ಅಧ್ಯಾಯಗಳಲ್ಲಿ ಸರಳವಾಗಿ ಚಿತ್ರಿಸಿದ್ದಾರೆ. ಪಯಣದಲ್ಲಿ ಎದುರಾದ ಪ್ರತಿಯೊಂದು ಪರಿಸ್ಥಿತಿಗೂ ಆಡಳಿತ ನಿರ್ವಹಣೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೂ ಇರುವ ಸಾಮ್ಯವನ್ನು ಮನದಟ್ಟು ಮಾಡಿಸಿದ್ದಾರೆ. ಕಾಣ್ಕೆ, ಗುರಿ ನಿರ್ಣಯ, ಯೋಜನೆ, ಪೂರ್ವಸಿದ್ಧತೆ, ಸಮಯ ನಿರ್ವಹಣೆ, ಒತ್ತಡ ನಿರ್ವಹಣೆ, ದಿಟ್ಟ ನಿರ್ಧಾರಗಳು, ತೆರೆದ ಮನಸ್ಸು, ವಿನಮ್ರತೆ, ವಿಭಿನ್ನ ದೃಷ್ಟಿಕೋನಗಳ ಸ್ವೀಕಾರ, ಸಹಾನುಭೂತಿ, ಸುರಕ್ಷತೆ, ಕಾರ್ಯ-ಕುಟುಂಬ ಸಮತೋಲನ, ಮುಂತಾದ ಆಡಳಿತ ಕೌಶಲ್ಯಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಿದ್ದಾರೆ.

ಅಷ್ಠೆ ಅಲ್ಲದೆ, ಪ್ರವಾಸ ಕಾಲದಲ್ಲಿ ಎದುರಾದ ಕಠಿಣ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ಕಲಿತ ಪಾಠಗಳನ್ನು ಆಡಳಿತ ನಿರ್ವಹಣೆಗೆ ಅಳವಡಿಸಿಕೊಳ್ಳಬಹುದೆಂಬುದನ್ನೂ ಮನಗಾಣಿಸಿದ್ದಾರೆ. ಅನುಕರಣೀಯ ವ್ಯಕ್ತಿ ಎಲ್ಲಿ ಬೇಕಾದರೂ ಇರಬಹುದು, ನಾವು ಗಮನಿಸಬೇಕಷ್ಠೆ ಎಂಬ ಸೂಕ್ಷ್ಮ ವಿಚಾರವನ್ನೂ ತಿಳಿಸಿದ್ದಾರೆ.

ಆರ್ಯ ಸಂತೋಷಭರಿತರಾಗಿ ‘ಪುನರ್ಜನ್ಮ’ ಆಚರಿಸಿದರು ಎಂದು ಪ್ರವಾಸದ ಯಶಸ್ಸನ್ನು ಬಣ್ಣಿಸುತ್ತಾರೆ. ಇಸ್ರೋ ಚೇರ್ಮನ್ ಆಗಿದ್ದ ಡಾ.ಎ.ಎಸ್.ಕಿರಣ್ ಕುಮಾರ್ ಮುನ್ನುಡಿ ಬರೆದಿರುವ ಈ ಹೊತ್ತಿಗೆಗೆ ಬೆಂಗಳೂರಿನ ಬಾಲ ಕಲಾವಿದ ವಿಷ್ಣು ರಚಿಸಿಕೊಟ್ಟಿರುವ ರೇಖಾಚಿತ್ರಗಳನ್ನು ಬಳಸಿಕೊಂಡಿರುವುದು ವಿಶೇಷ.

ಮುಖಂಡನಾದವನು ಎಲ್ಲವನ್ನೂ ಆಳವಾಗಿ ಅರಿತಿರಬೇಕಾದ ಅಗತ್ಯವಿಲ್ಲ. ಎಲ್ಲಿಂದ ವಿಷಯ ತಿಳಿದುಕೊಳ್ಳಬಹುದೆಂಬ ಅರಿವಿದ್ದರೆ ಸಾಕು. ತಂಡದ ಪ್ರತಿ ಸದಸ್ಯನ ಕೌಶಲ್ಯಗಳನ್ನು ಗುರ್ತಿಸಿ ಅವುಗಳನ್ನು ಪರಿಸ್ಥಿತಿಗನುಗುಣವಾಗಿ ಬಳಸಿಕೊಳ್ಳುವ ಕಲೆಯನ್ನು ರೂಢಿಸಿಕೊಳ್ಳಬೇಕು ಎಂಬ ಸಲಹೆ ಉಪಯುಕ್ತ ಎನಿಸುತ್ತದೆ. ಮುಖಂಡರು ಮಾನ್ಯರೆನಿಸಿಕೊಳ್ಳುವುದು ಅವರ ಸಾಮರ್ಥ್ಯದಿಂದಲ್ಲ, ಬದಲಿಗೆ ಇತರರನ್ನು ಸಬಲರನ್ನಾಗಿಸುವ ಗುಣದಿಂದಾಗಿ ಎಂದು ನಾಯಕರ ಪ್ರಮುಖ ಗುಣಗಳಲ್ಲೊಂದನ್ನು ಉಲ್ಲೇಖಿಸಿದ್ದಾರೆ.

ಪ್ರಕೃತಿ ಮತ್ತು ಪರಿಸರದಿಂದಲೂ ನಾವು ಕಲಿಯಬೇಕಾದದ್ದು ಬಹಳಷ್ಟಿದೆ ಎಂಬುದನ್ನೂ ಲೇಖಕರು ಈ ಕೃತಿಯ ಮೂಲಕ ಪ್ರಚುರಗೊಳಿಸಲು ಪ್ರಯತ್ನಿಸಿದ್ದಾರೆ. ಭೂಮಿಯ ಬಹುಪಾಲನ್ನು ಆಕ್ರಮಿಸಿಕೊಂಡಿರುವ ಸಾಗರಗಳದ್ದೇ ಆದ ಪ್ರತ್ಯೇಕ ಪ್ರಪಂಚದಲ್ಲಿ ಅನ್ವೇಷಿಸಲು ವಿಪುಲ ಅವಕಾಶಗಳಿವೆ ಎಂದು ಅಭಿಪ್ರಾಯ ಪಡುತ್ತಾರೆ. ಪರ್ವತಗಳ ಹೊಸ ಗಾಳಿ ನಮ್ಮ ಮನದ ಮುಚ್ಚಿದ ಪದರಗಳನ್ನು ತೆರೆದು ಹೊಸ ಆಲೋಚನೆಗಳಿಗೆ ನಾಂದಿ ಹಾಡಬಹುದೆಂದು ಕಾವ್ಯಮಯವಾಗಿ ತಿಳಿಸಿದ್ದಾರೆ. ಮೌನವೂ ಕಣ್ತೆರೆಸಬಲ್ಲದು, ಯಶಸ್ಸಿನ ಪ್ರಬಲ ಅಸ್ತ್ರವಾಗಬಲ್ಲದು ಎಂದಿದ್ದಾರೆ. ‘ನಾವು ಈ ಭೂಮಿಯ ಒಡೆಯರಲ್ಲ, ಜೀವಿಸುವ ತನಕ ಬಳಸಿಕೊಳ್ಳಲು ಪ್ರಕೃತಿಯಿಂದ ಎರವಲು ಪಡೆದಿದ್ದೇವೆ; ನಿರ್ಗಮಿಸುವಾಗ ಸುಸ್ಥಿತಿಯಲ್ಲಿ ಭೂಮಾತೆಯನ್ನು ಪ್ರಕೃತಿಗೆ ಒಪ್ಪಿಸಿ ಹೋಗಬೇಕು’, ‘ಸ್ಥಳವೊಂದನ್ನು ಸಂದರ್ಶಿಸುವ ಸ್ವಾತಂತ್ರ್ಯ ಆ ಸ್ಥಳವನ್ನು ಸ್ವಚ್ಛವಾಗಿರಿಸುವ ಜವಾಬ್ದಾರಿಯನ್ನೂ ಹೊರಿಸುತ್ತದೆ’ ಹಾಗು ‘ಸುಂದರ ನೆನಪುಗಳನ್ನಷ್ಠೆ ಅಲ್ಲದೆ ನಾವು ಸೃಜಿಸಿದ ಕಸವನ್ನೂ ಕೊಂಡೊಯ್ಯಬೇಕು’ ಎಂಬ ಮಾತುಗಳಲ್ಲಿ ಲೇಖಕರ ಪರಿಸರ ಕಾಳಜಿ ವ್ಯಕ್ತವಾಗಿದೆ.

ಧನಾತ್ಮಕ ಪರಿವರ್ತನೆಗೆ ಸಾಕ್ಷಿಯಾಗಿರುವ ಕಥಾನಾಯಕ, ಪಯಣ ಪೂರೈಸಿದ ಮೂರು ತಿಂಗಳುಗಳ ನಂತರ ಲೇಖಕರನ್ನು ಮತ್ತೆ ಭೇಟಿಯಾಗುತ್ತಾರೆ. ಅವರ ಮತ್ತು ಪಯಣದಲ್ಲಿ ಭಾಗಿಯಾಗಿದ್ದ ಇನ್ನೋರ್ವ ಗೆಳೆಯರ ಜೊತೆ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಾರೆ. ಕಥಾನಾಯಕ ಕಚೇರಿಯಲ್ಲಿ ಯಶಸ್ವಿ ಅಧಿಕಾರಿಯಾಗಿ ಮತ್ತು ಮನೆಯಲ್ಲಿ ಒಳ್ಳೆಯ ಪತಿಯಾಗಿ ಮಾರ್ಪಾಟಾಗುವಲ್ಲಿ ಬೈಕ್ ಸವಾರಿಯ ಪಾತ್ರವನ್ನು ಲೇಖಕರು ಹಿನ್ನುಡಿಯಲ್ಲಿ ಉಲ್ಲೇಖಿಸುತ್ತಾರೆ. ಆರ್ಯ ಸಂತೋಷಭರಿತರಾಗಿ ‘ಪುನರ್ಜನ್ಮ’ ಆಚರಿಸಿದರು ಎಂದು ಪ್ರವಾಸದ ಯಶಸ್ಸನ್ನು ಬಣ್ಣಿಸುತ್ತಾರೆ. ಇಸ್ರೋ ಚೇರ್ಮನ್ ಆಗಿದ್ದ ಡಾ.ಎ.ಎಸ್.ಕಿರಣ್ ಕುಮಾರ್ ಮುನ್ನುಡಿ ಬರೆದಿರುವ ಈ ಹೊತ್ತಿಗೆಗೆ ಬೆಂಗಳೂರಿನ ಬಾಲ ಕಲಾವಿದ ವಿಷ್ಣು ರಚಿಸಿಕೊಟ್ಟಿರುವ ರೇಖಾಚಿತ್ರಗಳನ್ನು ಬಳಸಿಕೊಂಡಿರುವುದು ವಿಶೇಷ. ಈ ಪುಸ್ತಕದ ಪ್ರತಿ ಅಧ್ಯಾಯದ ಕೊನೆಯಲ್ಲಿ, ಯಶಸ್ಸಿನ ಕೆಲವು ಸೂತ್ರಗಳು ಮತ್ತು ಅಭ್ಯಾಸಕ್ಕಾಗಿ ಅನೇಕ ಚಟುವಟಿಕೆಗಳನ್ನು ನೀಡಲಾಗಿದೆ. ಅಂತ್ಯದಲ್ಲಿ, ಹೆಚ್ಚಿನ ಓದಿಗಾಗಿ ಹಲವು ಪುಸ್ತಕ/ಲೇಖನಗಳ ಪಟ್ಟಿಯೂ ಇದೆ.

ಜೀವನದಲ್ಲಿ ಯಶಸ್ಸು ಗಳಿಸಬೇಕೆಂದು ಬಯಸುವವರಿಗೆ, ‘ಮನರಂಜನೆಯೊಡನೆ ಮನೋವಿಕಾಸ’ ಎಂಬ ತತ್ತ್ವವನ್ನು ಅನುಸರಿಸಿರುವ ಈ ಪುಸ್ತಕ ಮಾರ್ಗದರ್ಶಿಯಾಗಬಲ್ಲದು.

Leave a Reply

Your email address will not be published.