ಪರಿಸರ ಕಾಳಜಿಯ ತರುಣಿ ಗ್ರೇತಾ ಥನ್ ಬರ್ಗ್ ಭಾಷಣ

ಸ್ವೀಡನ್‌ಮೂಲದ ಹದಿನಾರು ವರ್ಷದ ಹುಡುಗಿ ಗ್ರೇತಾ ಥನ್‌ಬರ್ಗ್ 2019 ಸಪ್ಟೆಂಬರ್ 23ರಂದು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣ ಇಡೀ ಜಗತ್ತನ್ನೇ ತಟ್ಟಿ ಎಬ್ಬಿಸಿತ್ತು. ವಿಶ್ವನಾಯಕರನ್ನು ಉದ್ದೇಶಿಸಿ ‘ನಿಮಗೆಷ್ಟು ಧೈರ್ಯ?’ ಎಂದು ಪ್ರಶ್ನಿಸುತ್ತ ಜಾಗತಿಕ ತಾಪಮಾನದ ಎಚ್ಚರವನ್ನು, ನಾಳೆಯ ಆತಂಕವನ್ನು ಅವರ ಮುಂದಿಟ್ಟಿದ್ದಳು. ಗ್ರೇತಾ ಭಾಷಣದ ಭಾವಾನುವಾದ ಇಲ್ಲಿದೆ.

ಇದ್ಯಾವುದೂ ನನಗೆ ಸರಿಕಾಣುತ್ತಿಲ್ಲ. ನಾನು ಇಲ್ಲಿಗೆ ಬರಲೇಬಾರದಾಗಿತ್ತು. ನಾನು ಈ ಮಹಾಸಾಗರದ ಆಚೆ ಮಗ್ಗುಲಲ್ಲಿ ಒಂದು ಶಾಲೆಯಲ್ಲಿ ಪಾಠ ಕೇಳುತ್ತ ಕೂತಿರಬೇಕಾಗಿತ್ತು. ನಮ್ಮ ಬಾಯಿಂದ ದೇಶಭಕ್ತಿಯ ಹಾಡು ಹಾಡಿಸುತ್ತೀರಿ. ಭೂಮಿಯ ಸದ್ಗುಣಗಳ ಬಗ್ಗೆ ಪಾಠ ಮಾಡುತ್ತೀರಿ. ಮಕ್ಕಳೇ ನಾಳಿನ, ನಾಡಿನ ಆಶಾಕಿರಣ ಎಂದೆಲ್ಲ ನಮ್ಮನ್ನು ಹಾಡಿ ಹೊಗಳುತ್ತೀರಿ. ಇಂಥ ಪೊಳ್ಳು ಮಾತುಗಳನ್ನು ಆಡುತ್ತಲೇ ನಮ್ಮ ಕನಸುಗಳನ್ನು ನಾಶ ಮಾಡುತ್ತಿದ್ದೀರಿ. ನಮ್ಮ ಬಾಲ್ಯವನ್ನು ನಮ್ಮಿಂದ ಕಿತ್ತುಕೊಳ್ಳುತ್ತಿದ್ದೀರಿ.

ನಿಮಗೆಷ್ಟು ಧೈರ್ಯ?

ಅಲ್ಲಿ ನೋಡಿದರೆ ಜನರಿಗೆ ಏನೆಲ್ಲ ಸಂಕಷ್ಟಗಳು ಬರುತ್ತಿವೆ. ಜನರು ಸಾಯುತ್ತಿದ್ದಾರೆ. ಇಡೀ ಜೀವಜಾಲವೇ ಧ್ವಂಸ ಆಗುತ್ತಿದೆ. ಜೀವಲೋಕದ ಯುಗಾಂತ್ಯ ಆಗುತ್ತಿದೆ. ಇಲ್ಲಿ ನೋಡಿದರೆ ನೀವು ಹಣ ಹಣ ಎಂದು ಮೇಲಾಟ ನಡೆಸುತ್ತಿದ್ದೀರಿ. ನಿರಂತರ ಅಭಿವೃದ್ಧಿಯ ಕಟ್ಟುಕತೆಗಳನ್ನು ಹೆಣೆಯುತ್ತಿದ್ದೀರಿ.

ನಿಮಗೆಷ್ಟು ಧೈರ್ಯ?

ಕಳೆದ ಮೂವತ್ತು ವರ್ಷಗಳಿಂದ ವಿಜ್ಞಾನ ಎಷ್ಟು ಸ್ಪಷ್ಟವಾಗಿ ನಮ್ಮನ್ನೆಲ್ಲ ಎಚ್ಚರಿಸುತ್ತಲೇ ಬಂದಿದೆ. ಅದನ್ನು ಕಡೆಗಣಿಸಿದ್ದೀರಿ. ಇಲ್ಲಿ ಬಂದು ‘ನಾವು ಸಾಧ್ಯವಾದುದನೆಲ್ಲ ಮಾಡುತ್ತಿದ್ದೇವೆ’ ಎನ್ನುತ್ತಿದ್ದೀರಿ. ಎಲ್ಲಿದೆ ನಿಮ್ಮ ರಾಜಕೀಯ ನಿರ್ಣಯಗಳು? ಎಲ್ಲಿವೆ ನೀವು ಕೈಗೊಂಡ ಪರಿಹಾರ ಕ್ರಮಗಳು? ಇಲ್ಲಿ ಬಂದು ಏನೆಲ್ಲ ಮಾತಾಡುತ್ತಿದ್ದೀರಿ. ‘ಎಳೆಯರ ಮಾತುಗಳನ್ನು ಆಲಿಸುತ್ತಿದ್ದೇವೆ, ಭೂಮಿಗೆ ಬಂದ ತುರ್ತುಸ್ಥಿತಿ ನಮಗೆ ಅರ್ಥವಾಗಿದೆ’ ಎಂದೆಲ್ಲ ಪೊಳ್ಳು ಮಾತಾಡುತ್ತಿದ್ದೀರಿ.

ನಿಮಗೆಷ್ಟು ಧೈರ್ಯ?

ಇನ್ನು ಹತ್ತು ವರ್ಷಗಳಲ್ಲಿ ನಮ್ಮೆಲ್ಲ ಎಮಿಶನ್‌ಗಳನ್ನು ಅರ್ಧಕ್ಕರ್ಧ ತಗ್ಗಿಸುತ್ತೇವೆ ಎಂದು ಹೇಳಿದ್ದೀರಿ. ಹಾಗೊಮ್ಮೆ ನೀವು ಮಾಡಿದರೂ ಭೂಮಿಯ ತಾಪಮಾನ ಏರಿಕೆಯನ್ನು ಡಿಗ್ರಿ ಸೆಲ್ಸಿಯಸ್‌ನಷ್ಟಕ್ಕೆ ತಡೆಗಟ್ಟುವ ಸಾಧ್ಯತೆ ಕೇವಲ ಶೇಕಡಾ 50ರಷ್ಟಿರುತ್ತದೆ ಅಷ್ಟೆ. ಯಾರ ನಿಯಂತ್ರಣಕ್ಕೂ ಸಿಗದೆ ಭೂಮಿ ತಂತಾನೇ ಬಿಸಿಯಾಗುತ್ತ ಹೋಗುವ ಸಾಧ್ಯತೆಯೂ ಶೇಕಡಾ 50ರಷ್ಟಿರುತ್ತದೆ.

ಅಷ್ಟಾದರೆ ಸಾಕು ಎಂದು ನೀವು ಅಂದುಕೊಳ್ಳಬಹುದು. ಆದರೆ ನಮಗೆ ನೂರಕ್ಕೆ ನೂರು ಗ್ಯಾರೆಂಟಿ ಬೇಕು. ಶೇಕಡಾ 50ರಷ್ಟು ಸಾಧ್ಯತೆ ನಮಗೆ ಒಪ್ಪಿಗೆಯಿಲ್ಲ. ಹೊಸದಾಗಿ ಹೊಗೆ ಕಕ್ಕುವ ಪ್ರಮಾಣವನ್ನು ನೀವು ತಗ್ಗಿಸಿದರೂ ವಾತಾವರಣದಲ್ಲಿ ಈಗಿರುವ ಇಂಗಾಲದ ಪ್ರಮಾಣವೇನೂ ಕಡಿಮೆ ಆಗುವುದಿಲ್ಲ. ನೀವು ಕಕ್ಕಿದ ಕೊಳೆಯಲ್ಲಿ ನಾವು ಬದುಕಬೇಕೆ? ಅಲ್ಲಿನ ನೂರಾರು ಶತಕೋಟಿ ಟನ್‌ಗಳಷ್ಟು ಕೊಳೆಯನ್ನು ಹೀರಿ ತೆಗೆಯುವ ತಂತ್ರಜ್ಞಾನ ಎಲ್ಲೂ ಕಾಣುತ್ತಿಲ್ಲ. ಭೂಮಿ ಆಗಲೂ ಬಿಸಿ ಆಗುತ್ತಲೇ ಇರುತ್ತದೆ. ಬಡವರ, ದುರ್ಬಲರ ಸಂಕಷ್ಟ ಹೆಚ್ಚುತ್ತಲೇ ಇರುತ್ತದೆ.

ಐಪಿಸಿಸಿ ತಜ್ಞರು ಹೇಳುವ ಪ್ರಕಾರ, ಹೆಚ್ಚೆಂದರೆ 440 ಗಿಗಾಟನ್ ಇಂಗಾಲದ ಭಸ್ಮವನ್ನು ವಾತವರಣಕ್ಕೆ ಹರಿಬಿಡುವ ಅವಕಾಶ ನಮಗಿದೆ. ಅದು 2018ಜನವರಿ ತಿಂಗಳಲ್ಲಿ ನಮಗಿದ್ದ ಕೋಟಾ ಆಗಿತ್ತು. ಆದರೆ ಆಗಲೇ ಈ ಮಿತಿ 350ಗಿಗಾಟನ್‌ಗೆ ಇಳಿದಿದೆ. ಈಗ ನೀವು ಫಾಸಿಲ್ ಇಂಧನವನ್ನು ಉರಿಸುತ್ತಿರುವ ಪ್ರಮಾಣವನ್ನು ನೋಡಿದರೆ ಇನ್ನು ಎಂಟೂವರೆ ವರ್ಷಗಳಲ್ಲಿ ಅದೂ ಮುಗಿದುಹೋಗುತ್ತದೆ. ಅದೇನೂ ತಲೆಹೋಗುವ ವಿಚಾರ ಅಲ್ಲವೆಂಬAತೆ, ನಿತ್ಯದಂತೆ ಕಾರ್ಬನ್ ಉರಿಸುತ್ತ ಬರೀ ಬಾಯುಪಚಾರದ ಮಾತಾಡುತ್ತಿದ್ದೀರಿ.

ನಿಮಗೆಷ್ಟು ಧೈರ್ಯ?

ಈ ಅಂಕಿಸAಖ್ಯೆಗಳು ನಿಮ್ಮನ್ನು ಕಂಗಾಲು ಮಾಡುತ್ತಿವೆ. ಬರಲಿರುವ ಕಂಟಕದ ಪರಿಹಾರಕ್ಕೆ ನಿಮ್ಮಲ್ಲಿ ಯಾವ ಉಪಾಯವೂ ಕಾಣುತ್ತಿಲ್ಲ. ಆದರೆ ಅದನ್ನು ಒಪ್ಪಿಕೊಳ್ಳಲು ನೀವು ಸಿದ್ಧರಿಲ್ಲ. ಪ್ರಾಂಜಲವಾಗಿ ಒಪ್ಪಿಕೊಳ್ಳುವಷ್ಟು ಪ್ರೌಢಿಮೆ ನಿಮಗೆ ಬಂದೇ ಇಲ್ಲ.

ನೀವು ನಮ್ಮನ್ನು ವಂಚಿಸುತ್ತಿದ್ದೀರಿ. ನಿಮ್ಮ ಕಪಟವನ್ನು ನಾವು ಎಳೆಯ ಪೀಳಿಗೆಯ ಮಂದಿ ಅರ್ಥಮಾಡಿಕೊಳ್ಳಲು ಆರಂಭಿಸಿದ್ದೇವೆ. ಮುಂದಿನ ಪೀಳಿಗೆಯ ಎಲ್ಲರ ದೃಷ್ಟಿಯೂ ನಿಮ್ಮ ಮೇಲಿದೆ. ನೀವು ನಮ್ಮನ್ನು ವಂಚಿಸಲು ಉದ್ಯುಕ್ತರಾದರೆ ನಾವು ನಿಮ್ಮನ್ನು ಎಂದೂ ಕ್ಷಮಿಸಲಾರೆವು. ನೀವು ನಮ್ಮಿಂದ ತಪ್ಪಿಸಿಕೊಂಡು ಹೋಗುವ ಹಾಗಿಲ್ಲ.

ಈ ತಾಣದಲ್ಲಿ, ಈ ಕ್ಷಣದಲ್ಲಿ ನಾವು ಗೆರೆ ಎಳೆಯುತ್ತಿದ್ದೇವೆ. ಜಗತ್ತು ಎದ್ದೇಳುತ್ತಿದೆ. ನಿಮಗೆ ಇಷ್ಟವಿರಲಿ, ಇಲ್ಲದಿರಲಿ, ಬದಲಾವಣೆ ನಿಮ್ಮತ್ತ ಬರುತ್ತಿದೆ. ಧನ್ಯವಾದ.

ಅನುವಾದ: ನಾಗೇಶ ಹೆಗಡೆ

ಗ್ರೇತಾ ಥನ್‌ಬರ್ಗ್ ಭಾಷಣದ ವಿಡಿಯೋ ವೀಕ್ಷಿಸಲು ಕೆಳಗಿನ ಕೋಡ್ ಸ್ಕ್ಯಾನ್ ಮಾಡಿ:

Leave a Reply

Your email address will not be published.