ಪರಿಸರ ಸಂರಕ್ಷಣೆಯ ಹೊಸ ಮಾದರಿ ಹಾಸನದ ಹಸಿರುಭೂಮಿ ಪ್ರತಿಷ್ಠಾನ

-ತಿರುಪತಿಹಳ್ಳಿ ಶಿವಶಂಕರಪ್ಪ

ಬರಗಾಲದಿಂದ ಬಸವಳಿದ ನಿರಾಶದಾಯಕ ಪರಿಸ್ಥಿತಿಯಲ್ಲಿ ಹುಟ್ಟಿಕೊಂಡಿದೆ ಹಾಸನದ ಹಸಿರುಭೂಮಿ ಪ್ರತಿಷ್ಠಾನ. ಪ್ರಕೃತಿಯ ಸಾಧ್ಯತೆಗಳನ್ನೆಲ್ಲಾ ತಾವೇ ಆಗುಮಾಡುತ್ತೇವೆ ಎಂಬ ಹಮ್ಮು ಹಸಿರುಭೂಮಿ ರೂಪಿಸಿದವರಿಗಿಲ್ಲ. ಆದರೆ ಪ್ರಕೃತಿಯ ಮುನಿಸನ್ನು ಸಣ್ಣ ಪ್ರಮಾಣದಲ್ಲಾದರೂ ಮಣಿಸಬೇಕು ಎಂಬ ರಚನಾತ್ಮಕ ಪ್ರಯತ್ನದಲ್ಲಿ ಗಮನಾರ್ಹ ಸಾಧನೆ ಮಾಡಿದೆ ಈ ತಂಡ. ಹಾಸನದ ಈ ಪ್ರಯೋಗ ಬೇರೆಡೆಯ ಪರಿಸರಾಸಕ್ತರಿಗೂ ಪ್ರೇರಣೆ-ಪ್ರಚೋದನೆ ನೀಡಬಾರದೇಕೆ?

ಆಗಾಗ್ಗೆ ಬರಗಾಲ ಬರುವುದು ನಿಸರ್ಗದ ಸಹಜ ಕ್ರಿಯೆಯಾದರೂ 2016ರ ಬರಗಾಲ ಕನ್ನಡ ನಾಡಿನ ಇತಿಹಾಸದಲ್ಲಿ ಹಿಂದೆAದೂ ಕಂಡರಿಯದ್ದು ಎನ್ನುವುದು ಅನುಭವಿಗಳ ಮಾತು. ರಾಜ್ಯದ 16 ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿತ್ತು. ಅದರಲ್ಲಿ ಅರೆಮಲೆನಾಡು ಪ್ರದೇಶವಾದ ಹಾಸನ ಜಿಲ್ಲೆ ಕೂಡ ಸೇರಿತ್ತು. ನಾಡಿನ ಜೀವನದಿ ಎನಿಸಿದ ಕಾವೇರಿನದಿ ಕಣಿವೆಗೆ ಸೇರಿದ ಕೆ.ಆರ್.ಎಸ್., ಹಾರಂಗಿ, ಕಬಿನಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ವಾಡಿಕೆಯಂತೆ 104.55 ಟಿ.ಎಂ.ಸಿ. ನೀರು ಸಂಗ್ರಹವಾಗಬೇಕಿತ್ತು. ಆದರೆ 2016ರಲ್ಲಿ ಕೇವಲ 15.4 ಟಿ.ಎಂ.ಸಿ. ನೀರು ಸಂಗ್ರಹವಾಯಿತು. ಇದರಿಂದಲೇ ನಮಗೆ ಅರಿವಾಗುತ್ತದೆ ಬರದ ಬಿಸಿಯ ಪ್ರಮಾಣ ಎಷ್ಟೊಂದು ತೀವ್ರವಾಗಿತ್ತು ಎಂಬ ಸತ್ಯ ಸಂಗತಿ.

ನೀರಿಲ್ಲದೇ ಇಡೀ ನಿಸರ್ಗವೇ ಬಣಗುಡುತ್ತಿತ್ತು. ಮಳೆ ಮೋಡವಿಲ್ಲದೆ ಬಾನು ಬಯಲಾಗಿತ್ತು. ನಿತ್ಯವೂ ಬೆಂಕಿಯ ನಾಲಿಗೆಯನ್ನು ಚಾಚಿ ಬರುತ್ತಿದ್ದ ಸೂರ್ಯ. ಆತನ ಪ್ರಖರವಾದ ಕಿರಣಗಳ ಬಿಸಿಗೆ ಸಿಕ್ಕಿದ ಸದಾ ನವೋನವೋನ್ಮೇಷ ಶಾಲಿನಿಯಾದ ಮೇದಿನಿಯ ಮೈಮೇಲಿನ ಹಸಿರು ಉಸಿರುಗಟ್ಟಿತ್ತು. ಗಿಡಮರಗಳು ಬಾಡಿ ಬಸವಳಿದಿದ್ದವು. ಕೆರೆ ಕಟ್ಟೆ ಬಾವಿ ಹಳ್ಳಗಳೆಲ್ಲ ಬತ್ತಿ ಬರಿದಾಗಿದ್ದವು. ಪ್ರಾಣಿ ಪಕ್ಷಿ ಜೀವಸಂಕುಲವೆಲ್ಲ ನೀರಡಿಕೆಯಿಂದ ಪರಿತಪಿಸುತ್ತಿದ್ದವು.

ನಾಡಿನ ಅನ್ನದಾತರಾದ ರೈತರು ಆತ್ಮಹತ್ಯೆಯ ಸರಣಿ ಸಾಲಿನಲ್ಲಿ ನಿಂತು ದಿನಕ್ಕೆ ಒಂದಿಬ್ಬರAತೆ ಅಸುನೀಗುತ್ತಿದ್ದರು. ಎಲ್ಲೆಲ್ಲಿಯೂ ನೀರಿನ ಹಾಹಾಕಾರ, ಬತ್ತಿದ ಕೊಳವೆ ಬಾವಿಗಳು, ಸಾವಿರಾರು ಅಡಿ ಆಳದವರೆಗೆ ತೂತು ಕೊರೆದರೂ ಬರುತ್ತಿತ್ತು ಬರೀ ದೂಳು. ಜನ ಜಾನುವಾರುಗಳ ಗೋಳಂತೂ ಹೇಳತೀರದು. ಪರಿಸ್ಥಿತಿ ಒಂದೆರಡು ವರ್ಷ ಹೀಗೆಯೇ ಮುಂದುವರಿದರೆ ಗತಿ ಏನಪ್ಪಾ ಎಂಬ ಆತಂಕ ಪ್ರತಿಯೊಬ್ಬರ ಮುಖದ ಮೇಲೂ ಮೂಡಿತ್ತು. ಇಂತಹ ನಿರಾಶದಾಯಕ ವಿಷಮ ಪರಿಸ್ಥಿತಿಯಲ್ಲಿ ಹುಟ್ಟಿಕೊಂಡಿತು ನಮ್ಮ ಹಾಸನದ ಹಸಿರುಭೂಮಿ ಪ್ರತಿಷ್ಠಾನ. ಪ್ರಕೃತಿ ಪರಿಸರದ ಸೇವೆಯೊಂದಿಗೆ ಗ್ರಾಮೀಣ ಭಾರತವನ್ನು ಬಲಿಷ್ಠವಾಗಿಸಿ ಗ್ರಾಮಸ್ವರಾಜ್ಯವನ್ನು ಸ್ಥಾಪಿಸುವ ಸಂಕಲ್ಪದೊAದಿಗೆ ಪ್ರತಿಷ್ಠಾನ ಕಾರ್ಯೋನ್ಮುಖವಾಯಿತು.

ಪ್ರಕೃತಿಯ ಸಾಧ್ಯತೆಗಳನ್ನೆಲ್ಲಾ ನಾವೇ ಆಗುಮಾಡುತ್ತೇವೆ ಎಂಬ ಹಮ್ಮು ನಮ್ಮದಲ್ಲ. ಜನರ ನಿರಾಶೆಯ ಕಾಲದಲ್ಲಿ ಬದುಕಿನ ಆಸೆಯ ಬೆಳಕು ಚೆಲ್ಲುವ ಸಣ್ಣ ಪ್ರಯತ್ನ ಮಾತ್ರ. ಪ್ರಕೃತಿಯ ಮುನಿಸನ್ನು ಸಣ್ಣ ಪ್ರಮಾಣದಲ್ಲಾದರೂ ಮಣಿಸಬೇಕು. ಪ್ರಕೃತಿ ಪುನಶ್ಚೇತನದಿಂದ ಪ್ರಕೃತಿ ವಿಕೋಪಗಳನ್ನು ತಡೆಯಲು ಪ್ರಯತ್ನಿಸಬೇಕು. ಕಳೆದುಕೊಂಡದ್ದನ್ನು ಆ ಸ್ಥಳದಲ್ಲಿಯೇ ಕಳೆಗೂಡಿಸಬೇಕು. ಬತ್ತಿದ ಕೆರೆ ಕಟ್ಟೆ ಬಾವಿಗಳ ಅಂಗಳದಲ್ಲಿ ಜೀವಜಲದ ಕಣ್ಣುಗಳನ್ನು ತೆರೆಸಬೇಕು. ಬೆತ್ತಲೆಯಾಗಿಸಿದ ಭೂಮಿತಾಯಿಯ ಮೈಯನ್ನು ಗಿಡಗಳ ಹಸಿರು ಉಡುಪುಗಳಿಂದ ಅಲಂಕರಿಸಬೇಕು. ಅದಕ್ಕಾಗಿ ಒಂದಷ್ಟು ಯಶಸ್ವಿ ಮಾದರಿಗಳನ್ನು ಕೆಲವು ಸ್ಥಳಗಳಲ್ಲಾದರೂ ಮಾಡಿ ತೋರಿಸಬೇಕು. ಪ್ರಯತ್ನಿಸಿದರೆ ಯಾವುದೂ ಅಸಾಧ್ಯವಲ್ಲ. ನಂಬಿ ಕೈಹಿಡಿದರೆ ನಿಸರ್ಗ ಯಾರನ್ನು ಕೈ ಬಿಡುವುದಿಲ್ಲ. ಕೈಕಟ್ಟಿ ಕುಳಿತ ಕುರಿತಲೆಯ ಹೇಡಿಗಳನ್ನು ನಿಸರ್ಗ ಎಂದಿಗೂ ಕಾಪಾಡುವುದಿಲ್ಲ. ಬದ್ಧತೆಯಿಂದ ಕಾಯಕ ಮಾಡಿದರೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ನಮ್ಮದು.

ಅದಕ್ಕಾಗಿ ನಾವೇ ಸ್ವತಃ ಮಣ್ಣು ಮುಟ್ಟಿ ಕೆಲಸ ಮಾಡಬೇಕು. ಹಾರೆ ಗುದ್ದಲಿ ಹಿಡಿದು ಗುಂಡಿ ತೋಡಿ ಒಂದಷ್ಟು ಸಸಿಗಳನ್ನು ನೆಟ್ಟು ನೀರೆರೆದು ಪೋಷಿಸಿ ನಿಸರ್ಗಕ್ಕೆ ಅರ್ಪಿಸಬೇಕು. ಜೊತೆಗೆ ಬರುವ ಆಸಕ್ತರನ್ನು ಪ್ರೀತಿಯಿಂದ ಬರಮಾಡಿಕೊಳ್ಳಬೇಕು. ಬರದವರ ಮನಸ್ಸನ್ನು ನಮ್ಮ ಕೆಲಸದ ಮೂಲಕ ಪರಿವರ್ತಿಸಬೇಕು. ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ಪರಿಸರ ಪುನಶ್ಚೇತನದ ಆಂದೋಲನವಾಗಬೇಕೆAದು ನಿರ್ಣಯಿಸಿದೆವು.

ಪರಿಸರ ಪುನಶ್ಚೇತನದ ಕೆಲಸ ಅಷ್ಟು ಸುಲಭವಾದದ್ದಲ್ಲ. ಪ್ರಕೃತಿ ಪರಿಸರದ ಸಮತೋಲನದ ಬಗ್ಗೆ ಸುಲಭವಾಗಿ ಮಾತನ್ನಾಡಬಹುದು, ಬರೆಯಬಹುದು, ರಚನಾತ್ಮಕ ಕೆಲಸಕ್ಕೆ ನಮ್ಮನ್ನು ತೊಡಗಿಸಿಕೊಂಡಾಗಲೇ ಎದುರಾಗುವ ಸಮಸ್ಯೆಗಳು ಅರಿವಾಗುವುದು.

ನಾವು ಸುಮಾರು ಎರಡು ದಶಕಗಳ ಹಿಂದಿನಿAದಲೂ ಪ್ರಕೃತಿ ವಿಕೋಪಗಳ ಬಗ್ಗೆ, ಭೂಮಿಯ ತಾಪಮಾನದ ಬಗ್ಗೆ ನಗರದ ಕೊಳಚೆ ನೀರು ಕೆರೆ ಕಟ್ಟೆಗಳ ನೀರನ್ನು ಕೊಳಕು ಮಾಡಿ ನದಿಗಳ ನೀರನ್ನು ಮಲಿನಗೊಳಿಸುತ್ತಿರುವುದರ ಬಗ್ಗೆ ಚರ್ಚಿಸುತ್ತಿದ್ದೆವು. ಚರ್ಚಿಸಿ ಸುಮ್ಮನೆ ಇರಲಿಲ್ಲ ‘ನಮ್ಮೂರ ಸೇವೆ’ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಹಾಸನ ನಗರದ ಬೀದಿಗಳನ್ನು ಗುಡಿಸಿ ಶುಭ್ರಗೊಳಿಸಿದ್ದೆವು. ಚರಂಡಿಯ ಕೊಳಕನ್ನು ತೆಗೆದು ಸ್ವಚ್ಛ ಮಾಡಿದ್ದೆವು. ರಸ್ತೆಯ ವಿಭಜಕಗಳಲ್ಲಿ, ಉದ್ಯಾನವನಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲು ಪ್ರಯತ್ನಿಸಿದ್ದೆವು. ಆದರೆ ಸಾರ್ವಜನಿಕರ ಸ್ಪಂದನೆ ಅಷ್ಟಾಗಿ ಇರಲಿಲ್ಲ.

ಆದರೂ ನಾವು ಪ್ರಯತ್ನವನ್ನು ಕೈ ಬಿಡಲಿಲ್ಲ. ಅಣ್ಣಾ ಹಜಾರೆಯವರ ಊರಿನ ಯಶೋಗಾಥೆ ಹಾಗು ರಾಜಸ್ಥಾನದ ಥಾರ್ ಮರುಭೂಮಿಗೆ ಹೊಂದಿಕೊAಡAತಿರುವ ಪ್ರದೇಶದಲ್ಲಿ ಡಾ.ರಾಜೇಂದ್ರ ಸಿಂಗ್ ಅವರು ತರುಣ್ ಭಾರತ್ ಸಂಘದ ಸದಸ್ಯರ ಶ್ರಮದಾನದ ಮೂಲಕ ಜಲಕ್ರಾಂತಿಯನ್ನು ಉಂಟು ಮಾಡಿದ ವಿಚಾರ ನಮ್ಮ ಗಮನ ಸೆಳೆಯಿತು. ಬತ್ತಿ ಹೋಗಿದ್ದ ಐದು ನದಿಗಳ ಒಡಲಲ್ಲಿ ಜೀವಸೆಲೆಯನ್ನು ಸೃಷ್ಟಿಸಿದ ವಿಚಾರ ನಮ್ಮ ಆಸಕ್ತಿಯನ್ನು ಕೆರಳಿಸಿತು. 2002ನೇ ಇಸವಿಯಲ್ಲಿ ಡಾ.ರಾಜೇಂದ್ರಸಿAಗ್ ಅವರನ್ನು ಹಾಗೂ ಅವರ ತಂಡದ ಸದಸ್ಯರನ್ನು ಹಾಸನಕ್ಕೆ ಕರೆಯಿಸಿ ಕಲಾಭವನದಲ್ಲಿ ಬಹುದೊಡ್ಡ ಜಲಜಾಗೃತಿ ಸಭೆಯನ್ನು ಏರ್ಪಡಿಸಿ ವಿಚಾರ ವಿನಿಮಯ ಮಾಡಿಕೊಂಡೆವು. ತರುಣ್ ಭಾರತ್ ಸಂಘದ ಸದಸ್ಯರ ಶ್ರಮದಾನದ ಫಲಿತಾಂಶವನ್ನು ಸಾಕ್ಷö್ಯಚಿತ್ರದ ಮೂಲಕ ಕಂಡು ನಾವೂ ಹಾಸನ ಜಿಲ್ಲೆಯಲ್ಲಿ ಜಲಯೋಧರ ಪಡೆಯನ್ನು ಕಟ್ಟಲು ಪ್ರಯತ್ನಿಸಿ ವಿಫಲವಾದೆವು.

ಆಧುನಿಕತೆಯ ಅಭಿವೃದ್ಧಿ ವೇಗಕ್ಕೆ ಸಿಕ್ಕಿ ಕಾಡುನಾಶವಾಗುತ್ತಿರುವುದು, ಅಕ್ರಮ ಗಣಿಗಾರಿಕೆಯ ದಾಳಿಗೆ ಸಿಕ್ಕಿ ನಮ್ಮ ಬೆಟ್ಟಗುಡ್ಡಗಳೆಲ್ಲ ಧ್ವಂಸವಾಗುತ್ತಿರುವುದು, ಜಲಮೂಲಗಳಾದ ಕೆರೆಕಟ್ಟೆಗಳೆಲ್ಲ ಒತ್ತುವರಿಯಾಗಿ ಮುಚ್ಚಿ ಹೋಗುತ್ತಿರುವ ದೃಶ್ಯ ನಮ್ಮೊಳಗಿನ ಸಂಕಟವಾಗಿ ಕಾಡುತ್ತಿತ್ತು. ಪ್ರಕೃತಿಯ ಮೇಲೆ ಆಧುನಿಕ ಮಾನವ ನಡೆಸುತ್ತಿರುವ ಅತ್ಯಾಚಾರವನ್ನು ಕಣ್ಣಾರೆ ಕಂಡೂ ಸಂಘಟಿತ ಶಕ್ತಿಯಿಲ್ಲದೆ ವಿಷಾದಕರ ಮೌನಕ್ಕೆ ಒಳಗಾಗಿದ್ದೆವು.

2016ರ ತೀವ್ರವಾದ ಬರಗಾಲ ನಮ್ಮೊಳಗಿನ ಪರಿಸರ ತುಡಿತವನ್ನು ಮತ್ತೆ ಜಾಗೃತಿಗೊಳಿಸಿತು. ಚದುರಿ ಹೋಗಿದ್ದವರು ಮತ್ತೆ ಸಂಘಟಿತರಾದೆವು. ‘ಹಸಿರುಭೂಮಿ ಪ್ರತಿಷ್ಠಾನ’ ಎಂಬ ಹೆಸರಿನ ಪರಿಸರ ಸಂರಕ್ಷಣೆಗೆ ಮಾತ್ರ ಕಾರ್ಯಪ್ರವೃತ್ತವಾಗುವ ಸಂಘಟನೆಯನ್ನು ಕಟ್ಟಿದೆವು. ವಿವಿಧ ವೃತ್ತಿಯ ಸಜ್ಜನ ಮನಸ್ಸಿನ ಶ್ರಮಜೀವಿ ವ್ಯಕ್ತಿಗಳು ಹಸಿರುಭೂಮಿ ಪ್ರತಿಷ್ಠಾನದ ಟ್ರಸ್ಟಿಗಳಾಗಿ ಆಯ್ಕೆಯಾದರು. ರೈತ ಚಳವಳಿಯ ಹಿನ್ನೆಲೆಯಿಂದ ಬಂದ ಜಿಲ್ಲಾ ಜನತಾ ಮಾಧ್ಯಮ ಪತ್ರಿಕಾ ಸಂಪಾದಕರು, ಅಂದಿನ ಹಾಸನದ ವಿಭಾಗಾಧಿಕಾರಿಗಳು, ವಿಶ್ರಾಂತ ಪ್ರಿನ್ಸಿಪಾಲರುಗಳು, ಹೆಸರಾಂತ ವೈದ್ಯರುಗಳು, ದಮನಿತ ಮಹಿಳೆಯರ ಮತ್ತು ಮಕ್ಕಳ ಹಕ್ಕುಬಾಧ್ಯತೆಗಳಿಗಾಗಿ ಹತ್ತಾರು ವರ್ಷಗಳಿಂದ ಹೋರಾಟ ನಡೆಸುತ್ತಾ ಬರುತ್ತಿದ್ದ ಪ್ರೇರಣಾ ವಿಕಾಸ ವೇದಿಕೆಯ ಸಂಘಟಕರು, ಹೆಸರಾಂತ ಶಿಕ್ಷಣ ಸಂಸ್ಥೆಯ ಸ್ಥಾಪಕರು, ಇಂದಿರಾ ಪ್ರಿಯದರ್ಶಿನಿ ರಾಷ್ಟಿçÃಯ ಪರಿಸರ ಪ್ರಶಸ್ತಿ ವಿಜೇತರು, ಈ ಹಿಂದೆ ಸಾಕ್ಷರತಾ ಆಂದೋಲನ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು, ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷರು, ಪರಿಸರ ಪ್ರಿಯ ಸಮಾಜ ಸುಧಾರಕರು, ಖ್ಯಾತ ಚಿತ್ರ ಕಲಾವಿದರು ಹೀಗೆ ವಿವಿಧ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದ ಸಮಾಜಮುಖಿ ಪರಿಶ್ರಮಿಗಳು ಒಂದಾದೆವು.

ಮೊದಲಿಗೆ ನಾವು ಪ್ರಭಾವಿತರಾಗಿದ್ದು ಮಹಾರಾಷ್ಟç ರಾಜ್ಯದ ಅಮರಾವತಿ ಜಿಲ್ಲೆಯಲ್ಲಿ ಹಿಂದಿ ಚಲನಚಿತ್ರ ನಟ ಅಮೀರ್‌ಖಾನ್ ಸ್ಥಾಪಿಸಿದ ಪಾನಿ ಫೌಂಡೇಷನ್ ಸ್ವಯಂ ಸೇವಕರು ಬರದ ಭೂಮಿಯಲ್ಲಿ ಮಾಡುತ್ತಿದ್ದ ಶ್ರಮದಾನದ ಕೆಲಸದಿಂದ. ಆ ಕೆಲಸದ ಸಾಕ್ಷö್ಯ ಚಿತ್ರ ನಮ್ಮನ್ನು ಒಂದು ಕ್ಷಣವೂ ಸುಮ್ಮನಿರಲು ಬಿಡಲಿಲ್ಲ. ಆ ತಕ್ಷಣವೇ ಕಾರ್ಯಶೀಲರಾದೆವು. ಕಾನೂನು ಸಮ್ಮತವಾಗಿ ಟ್ರಸ್ಟ್ ನೋಂದಣಿಯಾಯಿತು. ಕಾರ್ಯಕಾರಿ ಸಮಿತಿ ರಚನೆಯಾಯಿತು. ಟ್ರಸ್ಟ್ನ ಅಧ್ಯಕ್ಷರ ಅವಧಿ ಒಂದು ವರ್ಷಕ್ಕೆ ಮಾತ್ರ ಸೀಮಿತ ಮಾಡಿಕೊಂಡೆವು. ಮರುವರ್ಷ ಬೇರೊಬ್ಬರು ಹೊಸ ಅಧ್ಯಕ್ಷರು ಆಯ್ಕೆಯಾಗಬೇಕು. ಕಾರಣ ಅಧಿಕಾರ ಕೇಂದ್ರೀಕರಣವಾಗಬಾರದು ಎಂಬುದು ನಮ್ಮ ತೀರ್ಮಾನವಾಗಿತ್ತು. ಹಾಗಾಗಿ ಹಸಿರುಭೂಮಿ ಪ್ರತಿಷ್ಠಾನ ಹುಟ್ಟಿದ ನಾಲ್ಕು ವರ್ಷಗಳಲ್ಲಿ ನಾಲ್ಕು ಜನ ಅಧ್ಯಕ್ಷರು ಆಯ್ಕೆಯಾಗಿದ್ದಾರೆ. ಎಲ್ಲರೂ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಹಣಕಾಸಿನ ವಿಷಯದಲ್ಲಿ ಪಾರದರ್ಶಕತೆ ಇದೆ. ದಾನಿಗಳಿಂದ ದೇಣಿಗೆಯಾಗಿ ಪಡೆದ ಹಣದಲ್ಲಿ ಒಂದು ರೂಪಾಯಿ ಕೂಡ ದುರುಪಯೋಗವಾಗಲು ಅವಕಾಶವಿಲ್ಲ.

ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ಟ್ರಸ್ಟಿಗಳ ಸಭೆ ನಡೆಸಲಾಗುತ್ತದೆ. ಆ ಹದಿನೈದು ದಿನಗಳು ಮಾಡಿದ ಕೆಲಸ ಮತ್ತು ವೆಚ್ಚವಾದ ಹಣ ಟ್ರಸ್ಟಿಗಳ ಸಮ್ಮುಖದಲ್ಲೇ ಚರ್ಚೆಯಾಗುತ್ತದೆ. ಮತ್ತೆ ಮುಂದಿನ ಕೆಲಸ ಕಾರ್ಯಗಳಿಗೂ ಹಣದ ಮಂಜೂರಾತಿಯನ್ನು ನೀಡಲಾಗುತ್ತದೆ. ಹಣದ ವಿಷಯದಲ್ಲಿ ಇದುವರೆಗೂ ಸಣ್ಣ ಸಂಘರ್ಷವೂ ನಡೆದಿಲ್ಲ.

2017 ಮೇ ಒಂದರAದು ಕಾರ್ಮಿಕರ ದಿನ. ದೇಶದ ಶ್ರಮಜೀವಿಗಳ ನೆನಪಾರ್ಥವಾಗಿ ನಮ್ಮ ಹಸಿರುಭೂಮಿ ಪ್ರತಿಷ್ಠಾನದ ಪರಿಸರದ ಕೆಲಸವನ್ನು ಜನಾಂದೋಲನದ ರೂಪದಲ್ಲಿ ಕೈಗೆತ್ತಿಕೊಂಡು ಮೊದಲಿಗೆ ಹಾಸನ ನಗರದ ಸನಿಹದ ದೊಡ್ಡಕೊಂಡಗೊಳ ಗ್ರಾಮವನ್ನು ಆಯ್ಕೆಮಾಡಿಕೊಳ್ಳಲಾಯಿತು. ಮುಚ್ಚಿಹೋಗಿದ್ದ ಮೂರು ಕಲ್ಯಾಣಿಗಳ ಪುನಶ್ಚೇತನ ಪ್ರಾರಂಭವಾಯಿತು. ನೂರಾರು ಜನ ಸ್ವಯಂ ಸೇವಕರು ಶ್ರಮದಾನ ಮಾಡಿದರು. ಒಂದು ರೀತಿಯಲ್ಲಿ ಹಬ್ಬದ ಸಂಭ್ರಮದಲ್ಲಿ ಶ್ರಮದಾನ ನಡೆಯತು. ಜೆ.ಸಿ.ಬಿ. ಯಂತ್ರನ್ನು ಬಳಸಿಕೊಳ್ಳಲಾಯಿತು. ಪರಿಣಾಮವಾಗಿ ಹದಿನೈದು ವರ್ಷದಿಂದ ಒಂದು ಹನಿಯೂ ನೀರಿಲ್ಲದ ಕಲ್ಯಾಣಿಯ ನಡುವಿನಲ್ಲಿ ಅಂತರ್ಗAಗೆ ಕಣ್ಣು ತೆರೆಯಿತು. ಬರಗಾಲದ ಆ ಸಂದರ್ಭದಲ್ಲಿ ಜಲ ಉಕ್ಕಿ ಬಂದಿದ್ದನ್ನು ಕಂಡು ನಮ್ಮೊಳಗೆ ಹೊಸ ಉತ್ಸಾಹ ಚಿಮ್ಮಿತು.

ಮರುದಿನವೇ ಕೆರೆಯ ಪುನಶ್ಚೇತನದ ಕಾಯಕಕ್ಕೆ ಕೈ ಹಾಕಲಾಯಿತು. ದೊಡ್ಡಕೊಂಡಗೊಳ ಗ್ರಾಮದ ಮುಂಭಾಗದಲ್ಲಿ ಇದ್ದ ಕೆರೆಯೊಂದು ಹೂಳಿನಿಂದ ತುಂಬಿ ಸಂಪೂರ್ಣ ಮುಚ್ಚಿ ಹೋಗಿತ್ತು. ಅದು ಕೆರೆಯ ಸ್ವರೂಪವನ್ನು ಕಳೆದುಕೊಂಡು ಮಕ್ಕಳ ಆಟದ ಮೈದಾನದಂತಿತ್ತು. ಒಂದು ವಾರದ ಕಾಲ ನಿರಂತರವಾಗಿ ಹೂಳು ತೆಗೆಯುವ ಕೆಲಸಕ್ಕೆ ಕೈ ಹಾಕಿದೆವು. ನಂಬಲು ಅಸಾಧ್ಯವಾದಂತಹ ಜಲದ ಕಣ್ಣು ಕೆರೆಯ ನಡುಭಾಗದಲ್ಲಿ ತೆರೆದುಕೊಂಡಿತು. ಪುಣ್ಯಕ್ಕೆ ಮುಂಗಾರಿನ ಮಳೆಯೂ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಕೆರೆ ತುಂಬಿ ಕೋಡಿಹರಿಯಿತು.

ಅಂದು ತುಂಬಿದ ಕೆರೆ ಇಂದಿನವರೆಗೂ ಬತ್ತಿಲ್ಲ. ಅಲ್ಲಿನ ಸ್ಥಳೀಯ ಗ್ರಾಮಸ್ಥರನ್ನು ಒಳಗೊಂಡAತೆ ಗ್ರಾಮ ಸ್ವರಾಜ್ ಸಮಿತಿಯನ್ನು ಅಸ್ತಿತ್ವಕ್ಕೆ ತಂದು ಕೆರೆಯ ಉಸ್ತುವಾರಿ ಜವಾಬ್ದಾರಿಯನ್ನು ಅವರಿಗೆ ವಹಿಸಲಾಯಿತು. ಗ್ರಾಮಸ್ವರಾಜ್ ಸಮಿತಿಯ ಯುವಕರು ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಕೆರೆಯ ಉತ್ಪನ್ನ ಹಾಗೂ ಜನಪ್ರತಿನಿಧಿಗಳ ದೇಣಿಗೆ ನೆರವಿನಿಂದ ಗ್ರಾಮ ಸ್ವರಾಜ್ ಭವನವನ್ನೂ ಕೂಡ ನಿರ್ಮಿಸುತ್ತಿದ್ದಾರೆ. ದೊಡ್ಡಕೊಂಡಗೊಳ ಒಂದು ಮಾದರಿ ಗ್ರಾಮವಾಗಿ ರೂಪುಗೊಳ್ಳುತ್ತಿದೆ. ಸ್ಥಳೀಯ ಕಲೆ ಸಾಹಿತ್ಯವನ್ನು ಪ್ರೋತ್ಸಾಹಿಸಲಾಗುತ್ತಿದೆ. ಸಾಹಿತ್ಯ ಸಂಸ್ಕೃತಿಯ ಸಂವರ್ಧನೆಗೂ ಒತ್ತು ನೀಡಲಾಗುತ್ತದೆ. ಹಸಿರುಭೂಮಿ ಪ್ರತಿಷ್ಠಾನದ ಆಶಯ ಪ್ರತಿಯೊಂದು ಗ್ರಾಮವೂ ಸ್ವಯಂ ಶಕ್ತಿಯಿಂದ ಸಂವರ್ಧನೆಗೊಳ್ಳಬೇಕು. ಪ್ರತಿ ಗ್ರಾಮದಲ್ಲೂ ಗ್ರಾಮ ಸರ್ಕಾರಗಳು ಅಸ್ತಿತ್ವಕ್ಕೆ ಬರಬೇಕು. ಗಾಂಧೀಜಿ ಕಂಡAತಹ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕು ಎಂದು ಆ ದಿಕ್ಕಿನಲ್ಲಿ ಪ್ರಾಮಾಣಿಕವಾಗಿ ಹೆಜ್ಜೆ ಹಾಕುತ್ತಿದ್ದೇವೆ.

ದೊಡ್ಡಕೊಂಡಗುಳದ ಯಶೋಗಾಥೆಯ ನಂತರ ದುದ್ದ ಹೋಬಳಿಯ ತಿರುಪತಿಹಳ್ಳಿ ಕೆರೆ, ಹಾಸನ ನಗರಕ್ಕೆ ಹೊಂದಿಕೊAಡಿರುವ ಚಿಕ್ಕಹೊನ್ನೇನಹಳ್ಳಿ ಕೆರೆ ಕೈಗೆತ್ತಿಕೊಂಡೆವು; ನಂತರ ಜವೇನಹಳ್ಳಿ ಕೆರೆ, ಶಾಂತಿನಗರದ ಚಿಕ್ಕಟ್ಟೆ, ಬಿ.ಕಾಟೀಹಳ್ಳಿಯ ಎರಡು ಕೆರೆಗಳು, ಹೆಚ್.ಪಿ.ಸಿ.ಎಲ್ ಕಂಪೆನಿ ನೆರವಿನಿಂದ ಸಿ.ಎಸ್.ಆರ್. ನಿಧಿಯಿಂದ ಗವೇನಹಳ್ಳಿ ಕೆರೆ, ಹಾಸನ ನಗರದ 72 ಎಕರೆ ವಿಸ್ತೀರ್ಣದ ಸತ್ಯವಂಗಲ ಕೆರೆ, 213 ಎಕರೆ ವಿಸ್ತೀರ್ಣದ ಹುಣಸಿನಕೆರೆಯನ್ನು ಪುನಶ್ಚೇತನಗೊಳಿಸುವ ಕೆಲಸ ನಡೆದಿದೆ. ಕೆರೆಗಳ ಪುನಶ್ಚೇತನಕ್ಕಾಗಿ ಶ್ರಮದಾನವಲ್ಲದೆ, ದಾನಿಗಳು 60 ಲಕ್ಷ ರೂಪಾಯಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ. ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ, ಸಣ್ಣ ನೀರಾವರಿ ಇಲಾಖೆ ಹಣ ನೀಡಿದೆ.

ಕೇವಲ ಮೂರುವರೆ ವರ್ಷಗಳ ಅವಧಿಯಲ್ಲಿ ಹದಿನೈದು ಕೆರೆಗಳನ್ನು ಪುನಶ್ಚೇತನಗೊಳಿಸಲು ಬೆಂಬಲವಾಗಿ ನಿಂತಿದ್ದೇವೆ. ಐವತ್ತಕ್ಕಿಂತ ಹೆಚ್ಚು ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ ಸುಸ್ಥಿರಗೊಳಿಸಲಾಗಿದೆ. 25 ಸಾವಿರಕ್ಕಿಂತ ಹೆಚ್ಚು ಗಿಡಗಳನ್ನು ನೆಟ್ಟು ನೀರುಣಿಸಿ ಜೋಪಾನವಾಗಿ ಕಾಪಾಡಲಾಗುತ್ತಿವೆ. ಹಾಸನ ನಗರದ ರಸ್ತೆಗಳ ಸ್ವಚ್ಛತೆಗಾಗಿ ಶ್ರಮಿಸಲಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹಾಸನ ನಗರಕ್ಕೆ ಹೊಂದಿಕೊAತಿರುವ 213 ಎಕರೆ ಪ್ರದೇಶದ ವಿಸ್ತೀರ್ಣವುಳ್ಳ ಐತಿಹಾಸಿಕ ಹುಣಸಿನಕೆರೆಯನ್ನು ಸ್ವಚ್ಛಗೊಳಿಸಿದ್ದು. ಕೆರೆ ಕೊಳಚೆಯಿಂದ ತುಂಬಿ ಗಬ್ಬೆದ್ದು ದುರ್ನಾತ ಹೊಡೆಯುತ್ತಿತ್ತು. ನಾಗರಿಕರು ಎನಿಸಿಕೊಂಡವರು ಅಲ್ಲಿ ಮೂಗು ತೆರೆದು ನಿಲ್ಲಲಾಗುತ್ತಿರಲಿಲ್ಲ. ಕೋಳಿಗಳನ್ನು ಸ್ವಚ್ಛಗೊಳಿಸಿದ ತ್ಯಾಜ್ಯವನ್ನು, ಸತ್ತದನಗಳನ್ನು, ಕೊಳೆತ ಮಾಂಸವನ್ನು ಕೆರೆಯ ಒಡಲಿಗೆ ತುಂಬಲಾಗಿತ್ತು. ಜೊತೆಗೆ ನಗರದ ಕೊಳಚೆ ನೀರೂ ಕೂಡ ಸೇರುತ್ತಿತ್ತು. ಅಂತರ್ಗAಗೆ ಎಂಬ ಕಳೆ ಬೆಳೆದು ನೀರೂ ಕೂಡ ಕಾಣದ ಹಾಗೆ ಇಡೀ ಕೆರೆಯನ್ನು ಆವರಿಸಿತ್ತು. ಇಂದು ಕೆರೆ ಬಹುಪಾಲು ಶುಭ್ರವಾಗಿದೆ. ನೀರು ಸರೋವರ ನೀರಿನಂತೆ ತಿಳಿಯಾಗಿದೆ. ನೋಡುವ ಕಣ್ಣುಗಳಿಗೆ ಆನಂದವಾಗುತ್ತಿದೆ.

ಇನ್ನೂ ಕೆಲಸ ಬಾಕಿಯಿದೆ. ಕೆರೆಗಳೊಂದಿಗೆ ಜನರ ಸಂಬAಧ ಬೆಸೆಯುವ ಉದ್ದೇಶದಿಂದ ಈ ವರ್ಷದಿಂದ ಕೆರೆಗಳಹಬ್ಬ ಆಚರಿಸುತ್ತಿದ್ದೇವೆ. ಎರಡು ತಿಂಗಳ ಹಿಂದೆ ಸತ್ಯವಂಗಲ ಕೆರೆ ಅಭಿವೃದ್ಧಿ ಸಮಿತಿಯವರು ಹಳದಿ ಹೂವಿನ ಹಬ್ಬ ಆಚರಿಸಿದರು. ಹುಣಸಿನಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಸಮಿತಿಯವರು ಒಂದು ದಿನ ಪರಿಸರ ಜಾಗೃತಿ ಜಾಥಾ ನಡೆಸಿ ಮರುದಿನ ಹುಣಸಿನಕೆರೆ ಹಬ್ಬ ಆಚರಿಸಿ ಸಂಭ್ರಮಿಸಿದರು. ಚಿಕ್ಕಟ್ಟೆ ಅಭಿವೃದ್ಧಿ ಸಮಿತಿಯವರು ಜನವರಿ 30 ಹಾಗೂ 31ರಂದು ಸಂಕ್ರಾAತಿಸುಗ್ಗಿ ಸಂಭ್ರಮ ಹಾಗು ಚಿಕ್ಕಟ್ಟೆ ಹಬ್ಬ ಹಾಗೂ ಜವೇನಹಳ್ಳಿ ಕೆರೆ ಅಭಿವೃದ್ಧಿ ಸಮಿತಿಯವರು ಶಿವರಾತ್ರಿ ಸಂಭ್ರಮ ಮತ್ತು ಕೆರೆ ಹಬ್ಬ ಆಚರಿಸಲು ಸಿದ್ಧತೆ ನಡೆಸಿದ್ದಾರೆ.

ಹಬ್ಬಗಳ ನೆಪದಲ್ಲಿ ಕೆರೆ ಅಭಿವೃದ್ಧಿ ಸಮಿತಿಗಳು ಕ್ರಿಯಾಶೀಲಗೊಳ್ಳುತ್ತಿವೆ. ಕೆರೆ ಮತ್ತು ಪರಿಸರದಲ್ಲಿ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಕೆರೆಗಳನ್ನು ಪರಿಶುದ್ಧವಾಗಿ ಇಟ್ಟುಕೊಳ್ಳಬೇಕೆಂಬ ಅರಿವು ಮೂಡುತ್ತಿದೆ. ಹಾಸನ ನಗರದಿಂದ ಸಾಗಿಸುವ ಮನೆಗಳ ಕಸ ಹತ್ತಿರದ ಅಗಿಲೆ ಎಂಬ ಗ್ರಾಮದಲ್ಲಿ ಸುಮಾರು 60 ಸಾವಿರ ಟನ್‌ಗಳಷ್ಟು ತುಂಬಿ ಹೋಗಿದೆ. ಅಗಿಲೆ ಮತ್ತು ಸುತ್ತಮುತ್ತಲ ಪರಿಸರ ಹದಗೆಡುತ್ತಿದೆ; ಅಲ್ಲಿನ ಕೆರೆಗಳು ಕಲುಷಿತಗೊಳ್ಳುತ್ತವೆ; ಅಲ್ಲದೆ ಜನರು ಕೂಡ ರಸ್ತೆ ಬದಿಯಲ್ಲಿ, ಚರಂಡಿಗಳಲ್ಲಿ, ಖಾಲಿ ನಿವೇಶನಗಳಲ್ಲಿ, ಕಾಲುವೆಗಳಲ್ಲಿ, ಕೆರೆ ಕಟ್ಟೆಗಳಲ್ಲಿ ಕಸ ಮತ್ತು ಮನೆಗಳ ತ್ಯಾಜ್ಯವನ್ನು ಸುರಿಯುತ್ತಿದ್ದಾರೆ. ಕಸದಿಂದ ಕಲುಷಿತಗೊಳ್ಳುವ ನೀರು ಹಳ್ಳ, ಹೊಳೆಗಳ ಮೂಲಕ ಯಗಚಿ, ಹೇಮಾವತಿ ನದಿ ಸೇರುತ್ತಿದೆ.

ನದಿ ಮತ್ತಿತರ ಜಲಮೂಲಗಳು ಕಲುಷಿತಗೊಳ್ಳುವುದು ತಪ್ಪಬೇಕಿದ್ದರೆ, ನಗರಗಳಲ್ಲಿ ಉತ್ಪತ್ತಿಯಾಗುವ ಕಸ ವ್ಯವಸ್ಥಿತವಾಗಿ ನಿರ್ವಹಣೆ ಆಗಲೇಬೇಕು. ಈ ದೃಷ್ಟಿಯಿಂದ ಹಸಿರುಭೂಮಿ ಪ್ರತಿಷ್ಠಾನ ಹಾಗು ಅದರ ಅಂಗಸAಸ್ಥೆಯಾದ ಹಸಿರುಭೂಮಿ ಆಂದೋಲನ ಬಳಗವು ಹಾಸನ ನಗರ ಹಾಗು ಸುತ್ತಮುತ್ತಲ ಆರು ಗ್ರಾಮ ಪಂಚಾಯ್ತಿಗಳಲ್ಲಿ ಪರಿಸರ ಜಾಗೃತಿ ಅಭಿಯಾನ ಆರಂಭಿಸಿದೆ. ನಗರದಲ್ಲಿ 35 ವಾರ್ಡ್ಗಳಲ್ಲಿ ಹಾಗು 6 ಪಂಚಾಯ್ತಿಗಳಲ್ಲಿ ನಾಗರಿಕರ ಸಮಿತಿಗಳನ್ನು ರಚಿಸಲಾಗುತ್ತಿದೆ. ಈ ತಂಡಗಳು ಮನೆ ಮನೆಗೆ ತೆರಳಿ ಪರಿಸರದ ಕುರಿತು ಜಾಗೃತಿ ಮೂಡಿಸುತ್ತಿವೆ. ಹಸಿ ಕಸವನ್ನು ಸಾವಯವ ಗೊಬ್ಬರವಾಗಿ ತಯಾರಿಸುವ ಪ್ರಾತ್ಯಕ್ಷಿಕೆಗಳೂ ನಡೆಯುತ್ತಿವೆ. ಒಂದು ವರ್ಷದ ಕಾಲ ಈ ಅಭಿಯಾನ ನಡೆಸಬೇಕೆಂಬುದು ಪ್ರತಿಷ್ಠಾನದ ಸಂಕಲ್ಪವಾಗಿದೆ. ಜನತೆಯಿಂದ ಅದ್ಭುತವಾದ ಸ್ಪಂದನೆ ಸಿಗುತ್ತಿರುವುದು ವಿಶೇಷವಾಗಿದೆ. ನಾಗರಿಕರಲ್ಲಿ ಹಕ್ಕುಗಳ ಜೊತೆಗೆ, ಕರ್ತವ್ಯ ಪ್ರಜ್ಞೆಯನ್ನು ಹುಟ್ಟು ಹಾಕುವುದೂ ನಮ್ಮ ಉದ್ದೇಶವಾಗಿದೆ.

Leave a Reply

Your email address will not be published.