ಪರಿಸರ ಸಮತೋಲನ ಸಾಧಿಸುವಲ್ಲಿ ನಮ್ಮ ಸಾಧನೆ ಶೂನ್ಯ!

ಪರಿಸರ ಸಮತೋಲನ ಸಾಧಿಸುವುದು ಒಂದು ಸವಾಲಿನ ಕೆಲಸವಾದರೂ ಸರ್ಕಾರದ ಇಚ್ಛಾಶಕ್ತಿ ಮತ್ತು ಸಾರ್ವಜನಿಕ ಸಹಭಾಗಿತ್ವಗಳೆರಡೂ ಒಟ್ಟಾದರೆ ಅಸಾಧ್ಯವೇನಲ್ಲ. ಪರಿಸರ ಸಮತೋಲನಕ್ಕೆ ಪೂರಕವಾಗಿ ನಮ್ಮ ಅಭಿವೃದ್ಧಿ ಕಾರ್ಯಗಳಿರಬೇಕು.

ನಾನು ಕೊಡಗಿನ ಸಂರಕ್ಷಿತಾರಣ್ಯದ ಬಳಿ ವಾಸಿಸುವ ಕೃಷಿಕ ಮಹಿಳೆ. ನಮ್ಮ ಕೃಷಿ ಭೂಮಿಗೆ ಕಳೆದ ಏಳೆಂಟು ವರ್ಷಗಳ ಹಿಂದಿನವರೆಗೂ ಕಾಡುಪ್ರಾಣಿಗಳು ಬಂದದ್ದೆಂದೇ ಇಲ್ಲ. ಈಗ ಆನೆ, ಮಂಗ, ಕಾಡುಹಂದಿಗಳು ನಮ್ಮ ತೋಟಕ್ಕೆ ದಾಳಿ ಮಾಡುವುದು ಮಾಮೂಲಾಗಿ ಬಿಟ್ಟಿದೆ. ನಾವು ಕಷ್ಟಪಟ್ಟು ಬೆಳೆಸಿದ ತೆಂಗು, ಬಾಳೆ, ಅಡಿಕೆ, ಭತ್ತ, ತರಕಾರಿ, ಹಣ್ಣುಹಂಪಲು ಎಲ್ಲವೂ ಅವುಗಳ ಪಾಲಾಗುತ್ತಿವೆ. ನಾವು ಸಾಕಿದ ನಾಯಿಗಳನ್ನು ರಾತ್ರಿ ವೇಳೆ ಚಿರತೆ ಎತ್ತಿಕೊಂಡು ಹೋಗುವುದೂ ಇದೆ.

ಕಳೆದ ಮಳೆಗಾಲದಲ್ಲಿ ಆನೆಗಳು ನಮ್ಮ ತೆಂಗಿನ ತೋಟಕ್ಕೆ ಬಂದು 90ಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ತಿಂದು ಹೋದಾಗ ನಾನು ನನ್ನ ನೆರೆಮನೆಯ 80 ವರ್ಷದ ತನಿಯಜ್ಜ ಅವರಲ್ಲಿ ಕೇಳಿದ್ದೆ, `ನಿಮ್ಮ ಕಾಲದಲ್ಲಿ ಈಗ ಇರುವಂತೆ ತೋಟಕ್ಕೆ ಆನೆಗಳ ದಾಳಿ ಇರಲಿಲ್ಲವೇ?’ ಎಂದು. ಅದಕ್ಕೆ ಅವರು ಹೇಳಿದ್ದರು, `ಆಗ ಆನೆಗಳು ಕಾಡಲ್ಲಿ ಯಥೇಚ್ಛವಾಗಿ ಇದ್ದರೂ ತೋಟಕ್ಕೆ ಲಗ್ಗೆ ಇಡುತ್ತಿರಲಿಲ್ಲ. ನಾವು ಸೌದೆ ತರಲೆಂದು ಕಾಡಿಗೆ ಹೋದರೆ ಕೂಗಳತೆ ದೂರದಲ್ಲಿ ಮೇಯುತ್ತಿದ್ದರೂ ನಮಗೆ ಏನೂ ಹಾನಿ ಮಾಡುತ್ತಿರಲಿಲ್ಲ. ತಮ್ಮ ಪಾಡಿಗೆ ತಾವು ಇರುತ್ತಿದ್ದವು’.

ಈಗ ಆನೆ ಕೃಷಿಭೂಮಿಗೆ ಬರುವುದು ಮಾತ್ರವಲ್ಲ ಮನುಷ್ಯರನ್ನು ಕಂಡರೆ ಅಟ್ಟಾಡಿಸಿಕೊಂಡು ಹೋಗಿ ಕಾಲಿನಿಂದ ತುಳಿದು ಕೊಂದುಹಾಕುತ್ತದೆ. ಮನುಷ್ಯ ಅದರ ಪರಮ ವೈರಿ ಎಂದು ಅದಕ್ಕೆ ಗೊತ್ತಾಗಿದೆ. ಈಗ ನಡೆಯುತ್ತಿರುವ ವನ್ಯಜೀವಿ-ಮಾನವ ಸಂಘರ್ಷ ಪರಿಸರ ಅಸಮತೋಲನಕ್ಕೆ ಒಂದು ಬಹು ಮುಖ್ಯ ಉದಾಹರಣೆ. ಈ ಹಿಂದೆ ಇಲ್ಲದ ಕಾಡುಪ್ರಾಣಿಗಳ ಹಾವಳಿ ಈಗ ಯಾಕೆ ಆಯಿತು ಎಂದು ಯೋಚಿಸಿದಾಗ ನಾವೇ ಇದಕ್ಕೆ ಹೊಣೆ ಎಂಬುದು ಅರಿವಿಗೆ ಬರುತ್ತದೆ.

ಹದಿನೈದು ವರ್ಷಗಳ ಹಿಂದೆ ನನ್ನ ಸುತ್ತಮುತ್ತಲಿನ ರೈತರು ತಮಗೆ ಇದ್ದ ತುಂಡು ಭೂಮಿಯಲ್ಲಿ ಬೇಸಾಯ ಮಾಡಿಕೊಂಡು ಇದ್ದರು. ನಂತರದ ದಿನಗಳಲ್ಲಿ ಹಲವರು ತಮ್ಮ ಜಮೀನಿನ ಒತ್ತಟ್ಟಿಗೆ ಇರುವ ಅರಣ್ಯ ಭೂಮಿಯನ್ನು ಸವರಿ ಅಲ್ಲಿ ಬೆಳೆಗಳನ್ನು ಬೆಳೆಯಲು ಶುರು ಮಾಡಿದರು. ಆಗಲೇ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಅದು ಹಾಗೆ ಮಾಡದೆ ನೋಡಿಯೂ ನೋಡದಂತೆ ಇದ್ದಿತು. ಇದು ನನ್ನ ಊರಿನ ಕತೆ ಮಾತ್ರ ಅಲ್ಲ; ಎಲ್ಲೆಲ್ಲಿ ಅರಣ್ಯಭೂಮಿ ಇದೆಯೋ ಅಲ್ಲೆಲ್ಲ ಇದೇ ಕತೆ. ಜನ ಕಾಡುಗಳನ್ನು ಅತಿಕ್ರಮಣ ಮಾಡಿ ಸಾಗುವಳಿ ಮಾಡಿದುದರ ಪರಿಣಾಮ ಅವೆಲ್ಲಾ ಬರಿದಾಗಿವೆ. ಇದು ಸಹಜವಾಗಿ ವನ್ಯಜೀವಿಗಳ ಆವಾಸಸ್ಥಳಗಳ ಮೇಲೆ ಪರಿಣಾಮ ಬೀರಿವೆ. ಇರಲು ನೆಲೆ ಇಲ್ಲದೆ, ಕುಡಿಯಲು ನೀರಿಲ್ಲದೆ, ತಿನ್ನಲು ಆಹಾರವಿಲ್ಲದೆ ಕಾಡುಪ್ರಾಣಿಗಳು ನಾಡಿಗೆ ಬರಲಾರಂಭಿಸಿವೆ.

ಸರ್ಕಾರ ಆಕ್ರಮಿತ ಅರಣ್ಯವನ್ನು ಗುರುತಿಸಿ ಅದನ್ನು ವಶಕ್ಕೆ ತೆಗೆದುಕೊಳ್ಳದಿದ್ದರೆ ಮತ್ತು ಈಗ ಇರುವ ಅರಣ್ಯಕ್ಕೆ ಜನರ ಪ್ರವೇಶ ಆಗದಂತೆ ಭದ್ರ ಬೇಲಿ ಹಾಕದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಈಗಲೂ ಕಾಲ ಮಿಂಚಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಕಾರ್ಯೋನ್ಮುಖವಾಗಬೇಕು. ಅರಣ್ಯನಾಶವೇ ಪರಿಸರ ಅಸಮತೋಲನಕ್ಕೆ ಕಾರಣ. ಕೆಲವೊಮ್ಮೆ ಅರಣ್ಯರಕ್ಷಕರೇ ಅರಣ್ಯಭಕ್ಷಕರಾಗುತ್ತಾರೆ. ಅದಕ್ಕಾಗಿ ಸರ್ಕಾರ ಅರಣ್ಯ ಇಲಾಖೆಯನ್ನು ಪ್ರಶ್ನಿಸುವ, ತನಿಖೆ ಮಾಡುವ ಸಮಿತಿಯೊಂದನ್ನು ನೇಮಕ ಮಾಡಬೇಕು. ಹೆದ್ದಾರಿ ಮುಂತಾದ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಬೃಹತ್ ಯೋಜನೆಗಳಿಗಾಗಿಯೂ ಕಾಡು ನಾಶವಾಗುತ್ತಿದೆ. ಇದೇ ಕಾರಣಕ್ಕೆ ಹಿಂದೆ ತಿಂಗಳಾನುಗಟ್ಟಲೆ ಎಡೆಬಿಡದೆ ಸುರಿಯುತ್ತಿದ್ದ ಮಳೆಗೂ ಜರಿಯದ ಗುಡ್ಡ ಈಗ ಮೂರು ದಿನದ ಮಳೆಗೇ ಕರಗುತ್ತಿದೆ. ಮರಗಳು ನಾಶವಾಗುವುದರಿಂದ ನೀರಿನ ಸೆಲೆಗಳು ಬತ್ತಿ ಹೋಗುತ್ತಿವೆ. ಕಾಡು ಉಳಿಸಿದರೆ ನಾಡು ಉಳಿಯುವುದು ಎಂಬ ಪರಿಸರ ಪ್ರಜ್ಞೆ ಮೂಡಬೇಕು. ಆಗ ಜೀವ ಜಗತ್ತು ಉಳಿಯುತ್ತದೆ.

 

ಪರಿಸರ ಎಂದರೆ ನಮ್ಮ ಸುತ್ತಲಿನ ಸರ್ವವೂ ಸೇರುತ್ತದೆ. ಮುಖ್ಯವಾಗಿ ನೆಲ, ಜಲ, ಸಸ್ಯ, ವಾತಾವರಣ, ಪ್ರಾಣಿ, ಪಕ್ಷಿ ಎಲ್ಲವೂ. ಇಂದು ಪರಿಸರ ಸಮತೋಲನ ತೀರ ಹದಗೆಟ್ಟಿದ್ದು, ಇಡೀ ಭೂಮಿಯ ಜೀವಜಾಲವೇ ವಿನಾಶದ ಅಂಚಿನಲ್ಲಿ ನಿಂತಿದೆ. ಅಂತರ್ಜಲ ಮಟ್ಟ ಕುಸಿದಿದೆ. ಶುದ್ಧ ನೀರು ದುರ್ಲಭವಾಗುತ್ತಿದೆ. ಪ್ರಗತಿಯ ಅವಸರದಲ್ಲಿ ನಾವು ಪರಿಸರವನ್ನು ಅವಗಣಿಸಿದ್ದೇವೆ; ನಿರ್ಲಕ್ಷಿಸುತ್ತಿದ್ದೇವೆ. ಪರಿಸರವನ್ನು ಹಾಳು ಮಾಡದಂತೆ ನಮ್ಮ ಅವಶ್ಯಕತೆಗಳನ್ನು ಪೂರೈಸುವ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನಗಳು ಪ್ರಾರಂಭವಾಗಬೇಕು. ಪರಿಸರದ ಸಮತೋಲನ ಕದಡದಂತಿರಲು ಸ್ವಾಭಾವಿಕ ಸಸ್ಯ ಹಾಗೂ ಪ್ರಾಣಿ ಸಂಪತ್ತನ್ನು ಕಾಪಾಡಬೇಕು.

ಭೂಮಿಯ ಮೇಲೆ ನಾವು ಜೀವಿಸಿದರೆ ಸಾಲದು. ಸಸ್ಯಸಂಕುಲ, ಪ್ರಾಣಿ ಪಕ್ಷಿಗಳೂ ಇದ್ದರೆ ಮಾತ್ರ ಪರಿಸರದ ಸಮತೋಲನ ಸಾಧ್ಯ. ಪರಿಸರದ ಜೊತೆಗೆ ಹೊಂದಾಣಿಕೆಯ ಸುಸ್ಥಿರ ಬಾಳುವೆ ನಡೆಸಬೇಕೇ ಹೊರತು ಎಲ್ಲದಕ್ಕೂ ತಂತ್ರಜ್ಞಾನದ ಮೂಲಕ ಪರಿಹಾರ ಹುಡುಕಲು ಸಾಧ್ಯವಿಲ್ಲ. ಇಂದು ಅನೇಕ ಬಗೆಯ ತ್ಯಾಜ್ಯ ಭೂಮಿ ಸೇರುತ್ತಿದೆ. ತ್ಯಾಜ್ಯ ನಿರ್ವಹಣೆ ಬಹು ದೊಡ್ಡ ಸಮಸ್ಯೆಯಾಗಿದೆ. ಸಮಸ್ಯೆ ಪರಿಹಾರವಾಗಬೇಕಾದರೆ ಮೊದಲು ಗಮನ ಕೇಂದ್ರೀಕರಿಸಬೇಕಿರುವುದು ತ್ಯಾಜ್ಯ ಉತ್ಪಾದನೆ ತಡೆಯಲು ಇರುವ ದಾರಿಗಳತ್ತ. ನಮ್ಮ ಆರ್ಥಿಕತೆಯ ಚಾಲಕಶಕ್ತಿಯಾಗಿರುವ ಕೊಳ್ಳುಬಾಕ ಮನಃಸ್ಥಿತಿಗೆ ವಿದಾಯ ಹೇಳಲು ಸಾಧ್ಯವೇ? ಕೊಳ್ಳುಬಾಕ ಸಂಸ್ಕೃತಿಯ ಕೊಡುಗೆಯಾದ ಸರಕುಪ್ರಧಾನ ಜೀವನಶೈಲಿಯನ್ನು ತ್ಯಜಿಸಲು ನಾವು ತಯಾರಿದ್ದೇವೆಯೇ? ಸರಕುಗಳ ಉತ್ಪಾದನೆ, ಖರೀದಿ ಮತ್ತು ಬಳಕೆ ಹೆಚ್ಚಿದಂತೆಲ್ಲ ತ್ಯಾಜ್ಯ ಉತ್ಪಾದನೆಯೂ ಏರುವುದು ಸಹಜ. ಸರಳತೆಗೆ ನಮ್ಮ ಬದುಕಿನಲ್ಲಿ ಸ್ಥಾನ ಇಲ್ಲದಿರುವಾಗ, ತ್ಯಾಜ್ಯ ಉತ್ಪಾದನೆಗೆ ಕಡಿವಾಣ ಹಾಕುವ ದಾರಿಗಳು ತೆರೆದುಕೊಳ್ಳಲು ಹೇಗೆ ಸಾಧ್ಯ? ತ್ಯಾಜ್ಯದ ಮರುಬಳಕೆ ಮತ್ತು ಸಮರ್ಪಕ ವಿಲೇವಾರಿಗೆ ಅಗತ್ಯವಿರುವ ನಿರ್ವಹಣಾ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಅಂತಹದ್ದೊಂದು ವ್ಯವಸ್ಥೆ ನಿರ್ಮಿಸುವ ಇಚ್ಛಾಶಕ್ತಿಯನ್ನು ನಮ್ಮನ್ನು ಆಳುವವರು ಪ್ರದರ್ಶಿಸುತ್ತಿಲ್ಲ. ಪ್ರಕೃತಿಯೊಂದಿಗೆ ಸಹಜೀವನ ಸಾಧಿಸಿ, ಬೇಕುಗಳಿಗೆ ಕಡಿವಾಣ ತೊಡಿಸಿದರೆ ಸಾಕು ಪರಿಸರ ಮಾಲಿನ್ಯ ಕಡಿಮೆಯಾದಂತೆಯೇ. ಕೊಳ್ಳುಬಾಕ ಸಂಸ್ಕೃತಿಗೆ ವಿದಾಯ ಹೇಳಿ ಪರಿಸರಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು.

ಪರಿಸರವನ್ನು ಹಾಳುಮಾಡುವುದರಲ್ಲಿ ಪ್ಲಾಸ್ಟಿಕ್‌ಗೆ ಪ್ರಮುಖ ಸ್ಥಾನ. ಪ್ಲಾಸ್ಟಿಕ್‌ನಿಂದ ಅದೆಷ್ಟೋ ಸಮುದ್ರ ಪಕ್ಷಿಗಳು, ಸಸ್ತನಿಗಳು ಜೀವ ಬಿಡುತ್ತಿವೆ. ಅಂಗಡಿಗೆೆ ಸಾಮಾನು ತರಲು ಹೋಗುವಾಗ ಬಟ್ಟೆ ಕೈಚೀಲ ಹಿಡಿದರೆ ಬಹುಮಟ್ಟಿಗೆ ಪ್ಲಾಸ್ಟಿಕ್ ಚೀಲಗಳನ್ನು ಇಲ್ಲವಾಗಿಸಬಹುದು. ಇಂದು ಭೂಮಿಯ ತಾಪಮಾನ ಏರುತ್ತಿದೆ. ಹವಾಮಾನ ಅಸ್ಥಿರವಾಗುತ್ತಿದೆ. ಅತಿವೃಷ್ಟಿ, ಅನಾವೃಷ್ಟಿ, ಅಪಾರ ಬಿಸಿಲು, ಅಕಾಲಿಕ ಮಳೆ ಮುಂತಾದ ಎಲ್ಲ ಲಕ್ಷಣಗಳೂ ಅದನ್ನೇ ಹೇಳುತ್ತಿವೆ. ಪೆಟ್ರೋಲ್, ಡೀಸೆಲ್, ಕಲ್ಲಿದ್ದಲು ಮುಂತಾದ ಇಂಧನಗಳನ್ನು ಸಿಕ್ಕಾಪಟ್ಟೆ ಉರಿಸಿದ್ದರಿಂದಲೇ ಭೂಮಿ ಬಿಸಿಯಾಗುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಭೂಮಿಯ ಆಳಕ್ಕೆ ಕೈಹಾಕಿ ತೆಗೆಯುವ ಪೆಟ್ರೋಲಿಯಂ ಇಂಧನಕ್ಕೆ ಬದಲಾಗಿ ಹೊಂಗೆ, ಹಿಪ್ಪೆ, ಬೇವು, ಪಾಮ್, ಸೋಯಾ, ಜತ್ರೋಫಾ ಇತ್ಯಾದಿ ಸಸ್ಯಗಳ ಎಣ್ಣೆ ಬೀಜಗಳ ತೈಲವನ್ನೇ ಬಳಸಿದರೆ ಹೊಗೆ, ಮಸಿ ಎಲ್ಲವೂ ಕಡಿಮೆಯಾಗಿ ವಾಯು ಮಾಲಿನ್ಯದ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಿದೆ. ಬರಿದಾಗುವ ಪೆಟ್ರೋಲಿಯಂ ಉತ್ಪನ್ನಗಳಿಗೆ ಪರ್ಯಾಯವೇ ಜೈವಿಕ ಇಂಧನ. ಇದು ಭವಿಷ್ಯದ ಭರವಸೆಯ ಇಂಧನ ಸಂಪನ್ಮೂಲವೂ ಹೌದು. ಜೈವಿಕ ಇಂಧನ ತಯಾರಿಕೆ, ಸಂಶೋಧನೆಗೆ ಸರ್ಕಾರ ಅಪಾರ ಹಣವನ್ನೇನೋ ಖರ್ಚು ಮಾಡುತ್ತಿದೆ. ಆದರೆ ಆ ಇಂಧನದ ಬಂಕ್ ಸ್ಥಾಪಿಸಿ ಜನರಿಗೆ ಸಿಗುವ ಹಾಗೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿಲ್ಲ.

ಇಂಥ ಸಂದರ್ಭದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಅಳಕೆಮಜಲು ಎಂಬ ಪುಟ್ಟ ಊರಿನಲ್ಲಿ ಕರ್ನಾಟಕದಲ್ಲೇ ಪ್ರಥಮವಾಗಿ ಬಯೋ ಡೀಸೆಲ್ ಬಂಕ್ ಆರಂಭಿಸುವ ಮೂಲಕ ಸರ್ಕಾರ ಮಾಡದ ಕೆಲಸವನ್ನು ಕೇಶವಮೂರ್ತಿ ಎಂಬ ಯುವಕ ಇತ್ತೀಚೆಗೆ ಮಾಡಿದ್ದಾರೆ. ಇಂಥವರಿಗೆ ಸರ್ಕಾರ ಪ್ರೋತ್ಸಾಹ ಕೊಡಬೇಕು. ನಮ್ಮಲ್ಲೇ ಬೆಳೆಯಬಹುದಾದ ಸಸ್ಯಜನ್ಯ ಮೂಲಗಳಿಂದ ಜೈವಿಕ ಇಂಧನ ತಯಾರಿಸಿ ಬಳಸಿದರೆ, ಕಾರ್ಬನ್ ಮಾನಾಕ್ಸೆಡ್ ಮತ್ತಿತರ ಮಾಲಿನ್ಯಕಾರಕ ಅನಿಲಗಳ ಹೊರ ಸೂಸುವಿಕೆಯೂ ಕಡಿಮೆ; ಸ್ವಾವಲಂಬನೆ, ಸುಸ್ಥಿರ ಬದುಕಿನತ್ತ ಹೆಜ್ಜೆ ಇಟ್ಟಂತಾಗುತ್ತದೆ.

ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣು ಫಲವತ್ತತೆ ಕಳೆದುಕೊಂಡಿದೆ ಹಾಗೂ ಆಹಾರ ಸರಪಳಿಯಲ್ಲಿ ವಿಷಯುಕ್ತ ರಾಸಾಯನಿಕಗಳು ಸೇರಿರುತ್ತವೆ. ಸಾವಯವ ರೀತಿಯಲ್ಲಿ ಕೃಷಿ ಮಾಡುವುದೇ ಇದಕ್ಕೆ ಇರುವ ಪರಿಹಾರ. ಆಧುನಿಕ ಜಗತ್ತಿನ ಪ್ರಗತಿಯ ನಾಗಾಲೋಟದಲ್ಲಿ ಮನುಷ್ಯನು ಪರಿಸರವನ್ನು ಕಡೆಗಣಿಸುತ್ತಿರುವುದು ತುಂಬ ಅಪಾಯಕಾರಿಯಾದುದು. ಪರಿಸರಕ್ಕೆ ಮಾರಕವಾಗುತ್ತಿರುವ ನಮ್ಮ ಜೀವನವಿಧಾನವನ್ನು ಬದಲಾಯಿಸಿಕೊಳ್ಳಬೇಕಾದುದು ಅನಿವಾರ್ಯ.

ಅತಿಯಾದ ನಗರೀಕರಣ, ಕೈಗಾರಿಕಾ ತ್ಯಾಜ್ಯ, ಕಾರ್ಖಾನೆಗಳು, ಹೆಚ್ಚುತ್ತಿರುವ ಜನಸಂಖ್ಯೆಗಳಿಂದಾಗಿ ನಮ್ಮ ಪರಿಸರ ಮಲಿನವಾಗುತ್ತಿದೆ. ನದಿ, ಕೆರೆ, ಸರೋವರಗಳ ನೀರು ಕಲುಷಿತಗೊಂಡಿದೆ. ಜಲಚರಗಳು ವಿನಾಶದ ಹಾದಿಯಲ್ಲಿ ಸಾಗುತ್ತಿವೆ. ಪರಿಸರ ಸಮತೋಲನ ಸಾಧಿಸುವುದು ಒಂದು ಸವಾಲಿನ ಕೆಲಸವಾದರೂ ಸರ್ಕಾರದ ಇಚ್ಛಾಶಕ್ತಿ ಮತ್ತು ಸಾರ್ವಜನಿಕ ಸಹಭಾಗಿತ್ವಗಳೆರಡೂ ಒಟ್ಟಾದರೆ ಅಸಾಧ್ಯವೇನಲ್ಲ. ಪರಿಸರ ಸಮತೋಲನಕ್ಕೆ ಪೂರಕವಾಗಿ ನಮ್ಮ ಅಭಿವೃದ್ಧಿ ಕಾರ್ಯಗಳಿರಬೇಕು.

ಪರಿಸರ ಸಮತೋಲನಕ್ಕಾಗಿ ಸಾಕಷ್ಟು ಪ್ರಯತ್ನಗಳಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಸಾಧನೆ ಮಾತ್ರ ಶೂನ್ಯ. ಸರ್ಕಾರ ಪರಿಸರ ರಕ್ಷಣೆಗಾಗಿ ಅಪಾರ ಹಣ ಖರ್ಚು ಮಾಡಿದರೂ ಅಭಿವೃದ್ಧಿ ಹೆಸರಿನ ಪರಿಸರ ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸಲು ಸಾಧ್ಯವೇ? ಪರಿಸರದ ಉಳಿಯುವಿಕೆಯಿಂದಲೇ ನೈಸರ್ಗಿಕ ಸಂಪನ್ಮೂಲಗಳ ಉಳಿಯುವಿಕೆ ಸಾಧ್ಯ. ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸುವಂತೆ ಎಚ್ಚರ ವಹಿಸಬೇಕು. ನೀರಿನ ಸಮರ್ಥ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಖರ್ಚು ಮಾಡಿದ ಪ್ರತಿ ರೂಪಾಯಿ ಉದ್ದೇಶಿತ ಗುರಿಯ ಸಾಧನೆಯಲ್ಲಿ ವ್ಯಯವಾಗಿದೆಯೇ ಎಂಬುದು ಮುಖ್ಯ. ಅಂಕಿಸಂಖ್ಯೆಗಳ ಪ್ರಕಾರ ಸಾಮಾಜಿಕ ಅರಣ್ಯಗಳನ್ನು ಬೆಳೆಸಲು ಬಹಳಷ್ಟು ಗಿಡಗಳನ್ನು ನೆಟ್ಟ ಬಗ್ಗೆ ಪ್ರಚಾರ ಮಾಡಲಾಗಿದೆ. ಆದರೆ ಎಷ್ಟು ಗಿಡಗಳು ಮರಗಳಾಗಿ ಬೆಳೆದಿವೆ, ಉಳಿದಿವೆ ಎನ್ನುವುದು ಮುಖ್ಯವಾಗುತ್ತದೆ.

ನಿರುದ್ಯೋಗ, ಆದಾಯದ ಕೊರತೆಗಳಿಂದಾಗಿ ಗ್ರಾಮೀಣ ಜನ ಹಳ್ಳಿ ಬಿಟ್ಟು ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ಇದರಿಂದ ನಗರಗಳಲ್ಲಿ ಕೊಳೆಗೇರಿ ಬೆಳೆದು ಪರಿಸರ ಮಾಲಿನ್ಯಕ್ಕೆ ಎಡೆ ನೀಡುತ್ತಿದೆ. ಮಹಾತ್ಮಾ ಗಾಂಧಿಯವರು ಹೇಳಿದಂತೆ ನಮ್ಮ ಯುವಕರನ್ನು ಹಳ್ಳಿಗಳಲ್ಲೇ ಉಳಿಸಬೇಕಾದ ಅಗತ್ಯವಿದೆ. ಹಳ್ಳಿಗಳಲ್ಲಿ ಹೆಚ್ಚು ಹೆಚ್ಚು ಗುಡಿಕೈಗಾರಿಕೆಗಳನ್ನು ಸ್ಥಾಪಿಸಬೇಕು. ಪರಿಸರಕ್ಕೆ ಹಾನಿಯುಂಟುಮಾಡುವ ದೊಡ್ಡದೊಡ್ಡ ಉದ್ಯಮಗಳಿಗೆ ವಿದಾಯ ಹೇಳಬೇಕಾಗಿದೆ.

ನಮ್ಮ ಪ್ರಗತಿಗೆ ಮತ್ತು ಮೂಲಸೌಕರ್ಯಗಳಿಗೆ ಮಾಡಿದ ಪರಿಸರ ನಾಶವನ್ನು ಗಮನಿಸಿದರೆ, ಪರಿಸರದ ಮರುಪೂರಣಕ್ಕೆ ಮಾಡಿದ ಕಾರ್ಯಗಳು ತೀರಾ ಕಡಿಮೆ. ಜಾಗತೀಕರಣದಿಂದ ಅನಿವಾರ್ಯವಾದ ಪರಿಸರ ನಾಶಕ್ಕೆ ಹಂತಹಂತವಾಗಿ ಮರುಪೂರಣ ಮಾಡಬೇಕಿತ್ತು. ಸಮಯ ಮಿಂಚುವ ಮೊದಲು ಆದ್ಯತೆಯ ಮೇರೆಗೆ ಮಾಡಬೇಕಿದೆ. ಓಟು ಕೇಳಲೆಂದು ಮನೆಮನೆಗೆ ಬರುವ ಅಭ್ಯರ್ಥಿಗಳಲ್ಲಿ ಏನೇನೋ ಬೇಡಿಕೆಗಳನ್ನಿಡುವ ಜನರು, `ನಮ್ಮ ಪರಿಸರ ಉಳಿಸಲು ನೀವೇನು ಮಾಡುತ್ತೀರಿ?’ ಎಂದು ಪ್ರಶ್ನಿಸಬೇಕಿದೆ. ಪಕ್ಷಗಳಿಗೆ ಪರಿಸರ ರಕ್ಷಣೆಯ ನೈಜ ಕಾಳಜಿಯಿಲ್ಲ. ಅಭಿವೃದ್ಧಿ ಎಂದರೆ ಏನು? ಹೆದ್ದಾರಿಗಳೇ? ಬಹುಮಹಡಿ ಕಟ್ಟಡಗಳೇ? ಫ್ಲೈಓವರ್‌ಗಳೇ? ಕೋಟ್ಯಂತರ ವಾಹನಗಳೇ? ಈ ರೀತಿಯ ಬೆಳವಣಿಗೆ ಬೇಕೇ?

ನಾವು ಮತ್ತು ನಮ್ಮನ್ನಾಳುವ ಸರ್ಕಾರ ಪರಿಸರ ಸಮತೋಲನ ಸಾಧಿಸುವಲ್ಲಿ ಏನೇನೂ ಯಶಸ್ವಿಯಾಗಿಲ್ಲ. ಪರಿಸರ ರಕ್ಷಣೆಗೆ ನಾವು ಸರ್ಕಾರವನ್ನು ನಂಬಿ ಕೂರಬಾರದು. ಸರ್ಕಾರಕ್ಕೆ ಎಲ್ಲವನ್ನೂ ಮಾಡಲಾಗುವುದಿಲ್ಲ. ನಮ್ಮ ಜವಾಬ್ದಾರಿಯನ್ನು ನಾವು ನಿರ್ವಹಿಸಬೇಕು. ಇದು ಪ್ರತಿಯೊಬ್ಬನ ಕರ್ತವ್ಯ. ಪರಿಸರ ಮಲಿನವಾಗದಂತೆ ಆಯಾ ಭೌಗೋಳಿಕ ಸನ್ನಿವೇಶಕ್ಕೆ ಅನುಗುಣವಾಗಿ ಸೂಕ್ತ ಕಾನೂನುಗಳನ್ನು ರಚಿಸಿ ಅವುಗಳು ಅನುಷ್ಠಾನಗೊಳ್ಳುವಂತೆ ಮಾಡುವುದು ಸರ್ಕಾರದ ಹೊಣೆಗಾರಿಕೆ. ಪರಿಸರ ಎನ್ನುವುದು ಬಂಗಾರದ ಮೊಟ್ಟೆಯನ್ನು ನೀಡುವ ಕೋಳಿಯಂತೆ. ಅತ್ಯಾಶೆಯಿಂದ ಕೋಳಿಯನ್ನು ಕೊಯ್ದು ಗೋಳಿಟ್ಟಂತೆ ಪರಿಪೂರ್ಣ ಜೀವನಮೂಲವಾದ ಪರಿಸರವನ್ನು ಬೆದಕಿ ಬರಡಾಗಿಸಿದರೆ ಮನುಕುಲಕ್ಕೆ ಭವಿಷ್ಯವಿರಲಾರದು.

*ಲೇಖಕಿ ಮಡಿಕೇರಿ ತಾಲೂಕು ಬಾಲಂಬಿ ಗ್ರಾಮದಲ್ಲಿ ಸ್ವತಃ ಕೃಷಿಯಲ್ಲಿ ನಿರತರಾಗಿರುವ ಗೃಹಿಣಿ; ಕವಯತ್ರಿ.

Leave a Reply

Your email address will not be published.