‘ಪರ್ಯಾಯ’ದ ತಾತ್ವಿಕ ಚೌಕಟ್ಟು

ಸಾಂಸ್ಕೃತಿಕ ರಾಜಕಾರಣದ ಪರ್ಯಾಯ ಸಾಧ್ಯತೆಗಳನ್ನು ಕಂಡರಿಸುವ ಬಗೆಗಳನ್ನು ರವಿ ಎಂ. ಸಿದ್ಲಿಪುರ ಅವರ ಈ ಪುಸ್ತಕದ ಬರಹಗಳಲ್ಲಿ ಕಾಣುತ್ತೇವೆ.

ಸಮೂಹಗಳ ಬದುಕಿನ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳಲು ಎಂತಹ ಬರಹ ಬೇಕು? ಅಂತಹ ಬರಹ ಯಾಕೆ ಬೇಕು? ಆ ಬರಹ ಎದುರಿಸಬೇಕಾದ ತಾತ್ವಿಕ ಮತ್ತು ನೈತಿಕ ಸವಾಲುಗಳು ಎಂತಹವು? ಎಂಬಿತ್ಯಾದಿ ಪ್ರಶ್ನೆಗಳನ್ನು ಇವತ್ತು ಜರೂರಾಗಿ ಕೇಳಬೇಕಾಗಿದೆ. ಏಕೆಂದರೆ, ಆಧುನಿಕತೆ ಎನ್ನುವುದು ಕೇವಲ ಜ್ಞಾನಪರ್ವದ ಪ್ರತಿನಿಧಿಯಾಗಿ ಮಾತ್ರ ನೆಲೆಗೊಳ್ಳಲಿಲ್ಲ. ಶೋಷಣೆ-ಶೋಷಕ ಹಾಗೂ ವೈಜ್ಞಾನಿಕ-ಬಂಡವಾಳಶಾಹಿ ವಿನ್ಯಾಸಗಳನ್ನು ತನ್ನ ಒಡಲಲ್ಲಿರಿಸಿಕೊಂಡು ಇದು ಮುಂಚೂಣೆಗೆ ಬಂತು. ಈ ಆಧುನಿಕತೆ ಜೊತೆಗಿನ ಅನುಸಂಧಾನ ಮತ್ತು ಸಂಘರ್ಷದ ನೆಲೆಗಳನ್ನು ನಿಭಾಯಿಸಲು ಬರಹ ಒಂದು ಮಹತ್ವದ ಅಸ್ತ್ರವಾಗಿದೆ.

ಆತ್ಮವಿಮರ್ಶೆ ಇಲ್ಲದೇ ಜ್ಞಾನದ ವಿಕಾಸವಾಗದು ಹಾಗೂ ಸಾಮಾಜಿಕ-ರಾಜ ಕೀಯ ಪರಿವರ್ತನೆ ಸಾಧ್ಯವಿಲ್ಲ. ಇಂತಹದೊಂದು ಪರಿವರ್ತನೆ ನಮ್ಮ ಗುರಿಯಾಗುವುದಾದರೆ, ನಾವು ಕೇವಲ ರಾಜಕೀಯ ಸರಿತನದ ಗೀಳಿಗೆ ಬಲಿಯಾಗಬಾರದು; ಹೊರತಾಗಿ ಸಾಂಸ್ಕೃತಿಕ ಸರಿತನದ ಆಂದೋಲನವನ್ನಾಗಿ ನೆಲೆಗೊಳಿಸುವ ಗುರಿಯನ್ನು ಬರಹದ ಮೂಲಕ ನೆಲೆಗೊಳ್ಳಬೇಕಿದೆ. ಅಂದರೆ ಬರಹ ಎನ್ನುವುದು ರಾಜಕೀಯ ಹುನ್ನಾರಗಳನ್ನು ಮಾತ್ರ ಟೀಕಿಸುವ ಇಲ್ಲವೇ ಬೆಂಬಲಿಸುವ ಸೀಮಿತ ಇರಾದೆಯನ್ನು ಹೊಂದಬಾರದು. ಅದು ಪರ್ಯಾಯ ಸಾಂಸ್ಕೃತಿಕ ರಾಜಕಾರಣವನ್ನು ರೂಪಿಸುವುದಕ್ಕೆ ತಳಹದಿಯಾಗಬೇಕು. ಸಾಂಸ್ಕೃತಿಕ ರಾಜಕಾರಣದ ಪರ್ಯಾಯ ಸಾಧ್ಯತೆಗಳನ್ನು ಕಂಡರಿಸುವ ಬಗೆಗಳನ್ನು ರವಿ ಎಂ. ಸಿದ್ಲಿಪುರ ಅವರ ಈ ಪುಸ್ತಕದ ಬರಹಗಳಲ್ಲಿ ಕಾಣುತ್ತೇವೆ.

ಹಾಗೆಯೇ ವೈಚಾರಿಕ ನಿಲುವುಗಳ ಪ್ರಖರತೆಯನ್ನು ಉದ್ದೀಪನಗೊಳಿಸುವ ಹಂಬಲದಲ್ಲಿ ಸಮೂಹಗಳ ಏಳ್ಗೆಯನ್ನು ಕಾಣುವುದಕ್ಕೆ ಬೇಕಾದ ತಾತ್ವಿಕತೆಯನ್ನು ಬದಿಗೆ ತಳ್ಳಲಾಗುತ್ತದೆ ಇಲ್ಲವೇ ಕಡೆಗಣಿಸಲಾಗುತ್ತದೆ. ಆದರೆ ಇಂತಹ ಅಪಾಯಗಳಿಂದ ಪಾರಾಗುವ ದಾರಿಗಳನ್ನೂ ಈ ಬರಹಗಳು ಕಂಡುಕೊಂಡಿವೆ. ಈ ಗುಣ ಕೇವಲ ಬರಹದ ಜಾಣ್ಮೆಯನ್ನು ಮಾತ್ರ ಪ್ರಕಟಿಸುವುದಿಲ್ಲ ಜೊತೆಗೆ ಬರಹಗಾರನ ಹೊಣೆಗಾರಿಕೆ ಮತ್ತು ಬದ್ಧತೆಯನ್ನೂ ತೋರುತ್ತದೆ. ಒಬ್ಬ ಯುವಕ ತನ್ನ ಆರಂಭದ ಬರಹಗಳ ಮೂಲಕ ಇಂತಹ ವೈಚಾರಿಕ ಜಾಡನ್ನು ಹಿಡಿದಿರುವುದು ನಮ್ಮ ಯುವಜನತೆಯ ಬಗೆಗಿನ ಭರವಸೆಯನ್ನು ಇದು ಇಮ್ಮಡಿಸುತ್ತದೆ.

ಯಾವುದೇ ಬರಹವನ್ನು ಕೇವಲ ಮಾಹಿತಿಗಳನ್ನು ರವಾನಿಸುವ ಮಾಧ್ಯಮವನ್ನಾಗಿ ರೂಪಿಸಬಾರದು. ಬದಲಾಗಿ ಅದೊಂದು ವಿಶ್ಲೇಷಣೆಯ ಪ್ರಮಾಣವಾಗಿ ಒಡಮೂಡಬೇಕು. ಆಯಾ ಬರಹಗಾರನ ಸಾಮಾಜಿಕ ಮತ್ತು ರಾಜಕೀಯ ಬದ್ಧತೆಗೆ ಅನುಗುಣವಾಗಿ ಆಕರ ಮತ್ತು ಪರಿಕರಗಳನ್ನು ಬಳಸಿಕೊಳ್ಳುವ ಒಂದು ತಾತ್ವಿಕ ಎಚ್ಚರ ಹಾಗೂ ವಿವೇಕ ರೂಪುಗೊಳ್ಳುತ್ತದೆ. ಪ್ರಸ್ತುತ ಪುಸ್ತಕದ ಬರಹಗಳು ಈ ಜಾಡಿನಲ್ಲಿಯೇ ಸಾಗಿರುತ್ತವೆ ಎಂಬುದು ಗಮನಾರ್ಹ. ಏಕೆಂದರೆ ಇಂತಹದೊಂದು ಪುಸ್ತಕದ ಬರಹಗಳು ಯಾವುದೇ ಒಂದು ನಿರ್ದಿಷ್ಟ ವಿಚಾರಕ್ಕೆ ಮಾತ್ರ ಸೀಮಿತವಾಗದೇ, ಸಾಹಿತ್ಯ, ಸಂಸ್ಕೃತಿ, ರಾಜಕಾರಣ ಹಾಗೂ ಜಾಗತೀಕರಣ ಇಲ್ಲವೇ ಆಧುನೀಕರಣಗಳ ಹಾವಳಿಯಿಂದ ಏರ್ಪಟ್ಟಿರುವಂತಹ ಪ್ರಭಾವ ಮತ್ತು ಪರಿಣಾಮಗಳನ್ನು ಕುರಿತು ಚಿಂತಿಸುವ ಬಗೆಯೊಂದು ಇಲ್ಲಿ ಎದ್ದು ಕಾಣುತ್ತದೆ. ಹೀಗೆ ವಿವಿಧ ಶಿಸ್ತುಗಳ ತಾತ್ವಿಕ ಹಿನ್ನೆಲೆಯಿಂದ ವಿಶ್ಲೇಷಣೆಗಳನ್ನು ಮಾಡುವುದು ಒಂದು ಸವಾಲೇ ಸರಿ. ಈ ಸವಾಲನ್ನು ನಿಭಾಯಿಸುವ ಸುಳಿವುಗಳು ಈ ಪುಸ್ತಕದ ಉದ್ದಕ್ಕೂ ತಲೆಯೆತ್ತಿವೆ.

ಪ್ರಾಚೀನ ಕಾವ್ಯಗಳು, ಆಧುನಿಕ ಸಾಹಿತ್ಯ, ಸಾಮಾಜಿಕ ಚಿಂತನೆಗಳು ಹಾಗೂ ಜಾನಪದೀಯ ವಿನ್ಯಾಸಗಳನ್ನು ಒಳ್ಗೊಂಡಿರುವ ಬರಹಗಳು ಈ ಪುಸ್ತಕದಲ್ಲಿವೆ. ಒಂದೊಂದು ಲೇಖನದ ಆಶಯ ಭಿನ್ನವಾಗಿದೆ.

ಬರಹಗಾರನಿಗೆ ಗ್ರಹಿಕೆ ಎನ್ನುವುದು ಎರಡು ಕಾರಣಗಳಿಗಾಗಿ ಅತ್ಯಂತ ಮುಖ್ಯವಾದ ಸಂಗತಿ. ಕಾಲದೇಶಗಳ ಹಂಗು ತೊರೆದು ಯಾವುದೇ ಒಂದು ವಿದ್ಯಮಾನದ ಬಗೆಗೆ ವಸ್ತುನಿಷ್ಠ ವಿಶ್ಲೇಷಣೆ ಮಾಡುವುದು ಒಂದು ಬಗೆಯಾದರೆ, ಅಂತಹವೊಂದು ವಿಶ್ಲೇಷಣೆಗೆ ಬಳಸಿಕೊಳ್ಳುವ ಆಕರ ಮತ್ತು ಪರಿಕರಗಳ ನಡುವಣ ಸಂಬಂಧ ಯಾವ ಬಗೆಯ ಸಾಮಾಜಿಕ ಕಾಳಜಿಯನ್ನು ಎತ್ತಿ ಹಿಡಿಯುತ್ತದೆ ಎನ್ನುವುದು ಇದರ ಮತ್ತೊಂದು ಬಗೆಯಾಗಿದೆ. ಗ್ರಹಿಕೆಯು ಕೇವಲ ವಿಷಯಗಳಿಗೆ ಮಾತ್ರ ಸಂಬಂಧಿಸಿಲ್ಲ ಬದಲಾಗಿ ಆಲೋಚನಕ್ರಮ ಮತ್ತು ಅದನ್ನು ಈಡೇರಿಸುವ ವಿಧಿ ವಿಧಾನಕ್ಕೂ ಸಂಬಂಧಿಸಿರುತ್ತದೆ. ಈ ತಾತ್ವಿಕ-ವೈಜ್ಞಾನಿಕ ಎಚ್ಚರವನ್ನು ಗ್ರಹಿಸುವಲ್ಲಿ ಇಲ್ಲಿನ ಲೇಖನಗಳು ಸಫಲವಾಗಿವೆ. ಹೇಗೆಂದರೆ, ಪ್ರಾಚೀನ ಕಾವ್ಯಗಳು, ಆಧುನಿಕ ಸಾಹಿತ್ಯ, ಸಾಮಾಜಿಕ ಚಿಂತನೆಗಳು ಹಾಗೂ ಜಾನಪದೀಯ ವಿನ್ಯಾಸಗಳನ್ನು ಒಳ್ಗೊಂಡಿರುವ ಬರಹಗಳು ಈ ಪುಸ್ತಕದಲ್ಲಿವೆ. ಒಂದೊಂದು ಲೇಖನದ ಆಶಯ ಭಿನ್ನವಾಗಿದೆ. ಪ್ರಾಚೀನ ಸಾಹಿತ್ಯದ ಬಗೆಗಿನ ಗ್ರಹಿಕೆಗೂ ಮತ್ತು ಆಧುನಿಕ ಸಾಹಿತ್ಯದ ಗ್ರಹಿಕೆಗೂ ಸಾಕಷ್ಟು ತಾತ್ವಿಕ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನು ವೈಚಾರಿಕವಾಗಿ ಗ್ರಹಿಸುವ ಕಸುವನ್ನು ರವಿ ಪಡೆದಿದ್ದಾರೆ.

ಇಲ್ಲಿ ನನ್ನ ಅಭಿಪ್ರಾಯಗಳು ಈ ಪುಸ್ತಕದ ಪ್ರತಿಯೊಂದು ಲೇಖನವನ್ನು ಉಲ್ಲೇಖಿಸಿ ವಿಶ್ಲೇಷಿಸುವ ಧಾಟಿಯಲ್ಲಿ ಇಲ್ಲ. ಆದರೆ ಇಲ್ಲಿರುವ ಎಲ್ಲಾ ಲೇಖನಗಳ ತಾತ್ವಿಕ ಚೌಕಟ್ಟು ಎಂತಹದು? ಮತ್ತು ಇಂತಹದೊಂದು ತಾತ್ವಿಕತೆಯ ಅವಶ್ಯಕತೆ ಏನು? ಹಾಗೂ ಯುವ ಬರಹಗಾರ ರವಿ ಇದೆಲ್ಲವನ್ನು ಸಾಧಿಸಿಕೊಂಡದ್ದು ಹೇಗೆ ಎನ್ನುವುದನ್ನು ತಾತ್ವಿಕವಾಗಿ ವಿವರಿಸುವ ಪ್ರಯತ್ನವನ್ನು ಮಾಡಿರುತ್ತೇನೆ. ಹಾಗೂ ಈ ಲೇಖನಗಳಲ್ಲಿರುವ ತಾತ್ವಿಕ ಸ್ಪಷ್ಟತೆ ಹಾಗೂ ವೈಚಾರಿಕ ತೀಕ್ಷ್ಣತೆಯನ್ನು ಕುರಿತು ನಾನು ಹೆಚ್ಚು ವಿವರಿಸುವ ಇರಾದೆಯನ್ನು ಹೊಂದಿರುತ್ತೇನೆ.

Leave a Reply

Your email address will not be published.