ಪಲ್ಲಟಗೊಳ್ಳುತ್ತಿರುವ ಪತ್ರಿಕೋದ್ಯಮ:ಉಳಿವಿಗೆ ಹೊಸ ಮಾರ್ಗಗಳು

ಡಾ..ಎಸ್.ಬಾಲಸುಬ್ರಹ್ಮಣ್ಯ

ಹೊಸದಾಗಿ ಚಾಲ್ತಿಗೆ ಬರುತ್ತಿರುವ ಪತ್ರಿಕೆಗಳ ಆದಾಯ ಮಾದರಿಗಳು ಹೀಗಿವೆ: ಸಾರ್ವಜನಿಕರಿಂದ ನೇರವಾಗಿ ಸಹಾಯಧನ ಸ್ವೀಕರಿಸುವುದು; ದಾನ, ದತ್ತಿ ಸಂಸ್ಥೆಗಳಿಂದ ನೆರವು ಪಡೆಯುವುದು, ಪತ್ರಕರ್ತರ ಸೇವೆಯನ್ನು ಉಚಿತವಾಗಿ ಪಡೆಯುವುದು, ಪತ್ರಿಕಾ ಪ್ರಕಟಣಾ ಸಂಸ್ಥೆಯನ್ನು ಲಾಭರಹಿತ ಉದ್ದಿಮೆಯಾಗಿ ಪರಿವರ್ತಿಸಿ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆಯುವುದು ಮತ್ತು ಇತರೆ ಪತ್ರಿಕೆಗಳ ಜತೆ ಸುದ್ದಿ ವಿನಿಮಯ ಮಾಡಿಕೊಂಡು ವೆಚ್ಚ ತಗ್ಗಿಸುವುದು.

ಸ್ವರೂಪಗಳು ಕಾಲಕಾಲಕ್ಕೆ ಬದಲಾಗುತ್ತವೆ. ತಂತ್ರಜ್ಞಾನ ಪ್ರಭಾವಗಳೇ ಇದಕ್ಕೆ ಪ್ರಮುಖ ಕಾರಣ. ಪತ್ರಿಕೋದ್ಯಮವೂ ಇದಕ್ಕೆ ಹೊರತಾಗಿಲ್ಲ. ಮುಂದುವರಿದ ಅಮೆರಿಕಾ ಮತ್ತು ಯೂರೋಪಿನಲ್ಲಿ ಕಳೆದ ಎರಡು ದಶಕಗಳಲ್ಲಿ ಪತ್ರಿಕೋದ್ಯಮ ಪಲ್ಲಟಗೊಳ್ಳುತ್ತಿದೆ. 2004 ರಿಂದೀಚೆಗೆ ಅಮೆರಿಕೆಯಲ್ಲಿ 2100ಕ್ಕೂ ಮಿಕ್ಕಿ ಪತ್ರಿಕೆಗಳು ಮುಚ್ಚಿವೆ. ವಿಶೇಷವಾಗಿ ಸ್ಥಳೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನಗಳೇ ಇಲ್ಲವಾಗಿ `ಸುದ್ದಿ ಮರುಭೂಮಿ‘ `ಸುದ್ದಿ ಬಡತನಸೃಷ್ಟಿಯಾಗಿದೆ. 2008 ಮತ್ತು 2018 ನಡುವೆ ಅಮೆರಿಕೆಯಲ್ಲಿ ವೃತ್ತಪತ್ರಿಕೆಗಳ ಆದಾಯವು ಗಮನಾರ್ಹವಾಗಿ ಕುಸಿದಿದೆ. ಜಾಹೀರಾತು ಆದಾಯ ಅವಧಿಯಲ್ಲಿ ಶೇ.62 ರಷ್ಟು ಇಳಿಕೆಯಾದರೆ ಅಲ್ಲಿನ ಪತ್ರಿಕೆಗಳ ಸುದ್ದಿಮನೆಯಲ್ಲಿ ಕೆಲಸ ನಿರ್ವಹಿಸುವವರ ಸಂಖ್ಯೆ 71,000 ದಿಂದ 38,000ಕ್ಕೆ ಇಳಿದಿದೆ.

ಹಲವಾರು ಜಾಲತಾಣಗಳು ಉಚಿತವಾಗಿ ಜಾಹೀರಾತುಗಳನ್ನು ಪ್ರಕಟಿಸುತ್ತಿವೆ. ಹೀಗಾಗಿ ಪತ್ರಿಕೆಗಳಿಗೆ ಆದಾಯ ಮೂಲ ಬತ್ತಿಹೋಗಿದೆ. ಇದರ ಜತೆಗೆ ಫೇಸ್ ಬುಕ್ ಹಾಗೂ ಗೂಗಲ್ ಸಂಸ್ಥೆಗಳು ಅಪಾರ ಪ್ರಮಾಣದಲ್ಲಿ ಸ್ಥಳೀಯ ಜಾಹೀರಾತುಗಳನ್ನು ಪ್ರಕಟಿಸಿ ಪತ್ರಿಕೆಗಳ ಆದಾಯಕ್ಕೆ ಅಡ್ಡಿಯಾಗಿವೆ.

ಅಂತರ್ಜಾಲ ವಿಸ್ತರಣೆಯಾಗುತ್ತಿದ್ದಂತೆ ಪತ್ರಿಕೆಗಳ ಓದುಗರ ಸಂಖ್ಯೆ ಇಳಿಮುಖ ಕಾಣುತ್ತಿದೆ. ಇದು ಪ್ರಸಾರ ಮತ್ತು ಆದಾಯಗಳೆರಡಕ್ಕೂ ಕತ್ತರಿ ಹಾಕಿದೆ. ಅನಿವಾರ್ಯವಾಗಿ ಪತ್ರಿಕೆಗಳು ಅನ್ಯ ಆದಾಯ ಮೂಲಗಳು ಹಾಗು ಸಾರ್ವಜನಿಕರ ನೆರವಿನತ್ತ ಮುಖ ಮಾಡತೊಡಗಿವೆ. ಪ್ರಧಾನವಾಗಿ ಪತ್ರಿಕೆಗಳ ಆದಾಯ ಮೂಲಗಳು ಜಾಹೀರಾತು ಮತ್ತು ಓದುಗರ ಚಂದಾ ಹಣ. ಇತ್ತೀಚಿನ ದಿನಗಳಲ್ಲಿ ಇವೆಂಟ್ ಮ್ಯಾನೇಜ್ ಮೆಂಟ್ ಹೊಸ ಆದಾಯದ ಮೂಲವಾಗಿದೆ. ಉಚಿತವಾಗಿ ನೀಡುತ್ತಿದ್ದ ಆನ್ಲೈನ್ ಪತ್ರಿಕೆಗೆ ಶುಲ್ಕ ವಿಧಿಸುವ ಪರಿಪಾಠ ಶುರುವಾಗಿದೆ. ಎಲ್ಲ ಆದಾಯ ಮೂಲಗಳು ಪತ್ರಿಕೆ ನಡೆಸಲು ಸಾಲದಾಗುತ್ತಿದೆ. ಪತ್ರಿಕೆಗಳ ಆದಾಯದ ಮಾದರಿ ಬಹುವಾಗಿ ಜಾಹೀರಾತು ಕೇಂದ್ರೀಕೃತ. ಪ್ರತಿಶತ 60ರಿಂದ 70 ಭಾಗ ಇದೊಂದೇ ಮೂಲದಿಂದ ದೊರೆಯುತ್ತಿದೆ.

ಡಿಜಿಟಲ್ ಪ್ರಪಂಚದ ವ್ಯಾಪಕ ವಿಸ್ತರಣೆಯ ಹಿನ್ನೆಲೆಯಲ್ಲಿ ಪತ್ರಿಕೆಗಳು ಅನಿವಾರ್ಯವಾಗಿ ಬೇರೆ ಆದಾಯ ಮೂಲಗಳನ್ನು ಹುಡುಕುತ್ತಿವೆ. ಉಚಿತ ಜಾಲತಾಣಗಳು ಪತ್ರಿಕೆಗಳ ಸಮಸ್ಯೆಗಳನ್ನು ಮತ್ತಷ್ಟು ಬಿಗುಗೊಳಿಸಿವೆ. ಅಮೆರಿಕಾ ಮತ್ತು ಯೂರೋಪಿನಲ್ಲಿ ಹೊಸದಾಗಿ ಚಾಲ್ತಿಗೆ ಬರುತ್ತಿರುವ ಆದಾಯ ಮಾದರಿಗಳು ಹೀಗಿವೆ: ಸಾರ್ವಜನಿಕರಿಂದ ನೇರವಾಗಿ ಸಹಾಯಧನ ಸ್ವೀಕರಿಸುವುದು; ದಾನ, ದತ್ತಿ ಸಂಸ್ಥೆಗಳಿಂದ ನೆರವು ಪಡೆಯುವುದು, ಪತ್ರಕರ್ತರ ಸೇವೆಯನ್ನು ಉಚಿತವಾಗಿ ಪಡೆಯುವುದು, ಪತ್ರಿಕಾ ಪ್ರಕಟಣಾ ಸಂಸ್ಥೆಯನ್ನು ಲಾಭರಹಿತ ಉದ್ದಿಮೆಯಾಗಿ ಪರಿವರ್ತಿಸಿ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆಯುವುದು ಮತ್ತು ಇತರೆ ಪತ್ರಿಕೆಗಳ ಜತೆ ಸುದ್ದಿ ವಿನಿಮಯ ಮಾಡಿಕೊಂಡು ವೆಚ್ಚ ತಗ್ಗಿಸುವುದು. ಇಂತಹ ಹಲವಾರು ಪ್ರಯತ್ನಗಳು ಈಗ ಜಾರಿಗೊಳ್ಳುತ್ತಿವೆ. ಇವೆಲ್ಲರ ಉದ್ದೇಶ, ಪತ್ರಿಕೆಗಳು ದೇಶಕ್ಕೆ ಮತ್ತು ಸ್ಥಳೀಯ ಸಮುದಾಯಕ್ಕೆ ಅನಿವಾರ್ಯ ಎಂಬ ಬಲವಾದ ನಂಬುಗೆ.

ಉತ್ತಮವಾಗಿ ಪತ್ರಿಕೆ ನಡೆಸುವುದೆಂದರೆ ಅದರ ಅರ್ಥಪೂರ್ಣ ಪ್ರಕಟಣೆ. ಸಮಾಜದ ಅಂಕುಡೊಂಕುಗಳನ್ನು ಓದುಗರ ಮುಂದೆ ಸಮರ್ಥವಾಗಿ ಮಂಡಿಸುವುದು ಹಾಗೂ ಎಲ್ಲ ಕ್ಷೇತ್ರಗಳ ಬದಲಾವಣೆಗಳನ್ನು ಸಮಗ್ರವಾಗಿ ಜನತೆ ಮತ್ತು ಸರಕಾರದ ಗಮನ ಸೆಳೆಯುವುದು. ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಬರೆಯಲು ಪತ್ರಕರ್ತರು ಬೇಕು. ಅವರಿಗೆ ವೇತನ ನೀಡಬೇಕು. ಖರ್ಚಿಲ್ಲದೆ ಯಾವುದೇ ಕೆಲಸಗಳನ್ನು ನಿಭಾಯಿಸುವುದು ಸರಳವಲ್ಲ. ಮಾಹಿತಿಪೂರ್ಣ ಸುದ್ದಿಲೇಖನಗಳು ಪುಕ್ಕಟೆಯಾಗಿ ದೊರೆಯಲಾರವು. ಸುಳ್ಳು ಸುದ್ದಿ ಸರಮಾಲೆಗಳು ಜಾಲತಾಣಗಳ ಮೂಲಕ ಯಥೇಚ್ಛವಾಗಿ ಲಭ್ಯವಿವೆ. ಆದರೆ ಅವು ನಿರರ್ಥಕ.

ಸಮಸ್ಯೆ ಮನಗಂಡ ಪತ್ರಿಕೆಗಳು ಕಂಡುಕೊಂಡ ಮೊದಲ ಮಾರ್ಗ ನೇರವಾಗಿ ಸಾರ್ವಜನಿಕರು/ಓದುಗರಿಂದ ನೆರವಿಗಾಗಿ ಮನವಿ ಮಾಡುವುದು. ಹೆಸರಾಂತ ಪತ್ರಿಕೆ ದಿ ಗಾರ್ಡಿಯನ್ಎಷ್ಟೇ ಹಣ ನೀಡಿದರೂ ಸ್ವೀಕರಿಸುತ್ತದೆ. ಪತ್ರಿಕೆಗೆ ನೆರವು ನೀಡಲು ತನ್ನ ಜಾಲತಾಣದಲ್ಲಿ ಮತ್ತು ಪತ್ರಿಕೆಯಲ್ಲಿ ನೇರವಾಗಿ ಮನವಿ ಮಾಡುತ್ತಿದೆ. 2020ಲ್ಲಿ ವಂತಿಗೆಗಳ ಮೂಲಕ 90 ಲಕ್ಷ ಅಮೆರಿಕನ್ ಡಾಲರ್ ಸಂಗ್ರಹಿಸಲು `ದಿ ಗಾರ್ಡಿಯನ್ಪತ್ರಿಕೆ ಯಶಸ್ವಿಯಾಗಿದೆ.

ಅಮೆರಿಕ ಹಾಗೂ ಯುರೋಪಿನಲ್ಲಿ ದಾನದತ್ತಿ ಸಂಸ್ಥೆಗಳು ಅಧಿಕ ಸಂಖ್ಯೆಯಲ್ಲಿವೆ. ಅಪಾರ ಪ್ರಮಾಣದಲ್ಲಿ ಅವು ಲೋಕೋಪಕಾರಿ ಯೋಜನೆಗಳಿಗೆ ಹಣಕಾಸಿನ ನೆರವು ನೀಡುತ್ತಿವೆ. ಅಂತಹ ಸಂಸ್ಥೆಗಳು ಈಗ ಪತ್ರಿಕೆಗಳ ಸಹಾಯಕ್ಕೆ ಧಾವಿಸುತ್ತಿವೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಯಾವ ಮಾಧ್ಯಮಗಳು ಚಕಾರವೆತ್ತುತ್ತಿಲ್ಲ. ಸರಕಾರ ತರುವ ಹಲವಾರು ಶಾಸನಗಳ ಬಗ್ಗೆ ಸಮರ್ಪಕ ಚರ್ಚೆಗಳೇ ನಡೆಯುತ್ತಿಲ್ಲ. ಪ್ರಜಾಸತ್ತೆಯ ಬೇರುಗಳನ್ನು ಗಟ್ಟಿಗೊಳಿಸುವುದು ಸಮುದಾಯ ಮಟ್ಟದಲ್ಲಿ ಅವಶ್ಯ ಎಂದು ಮನಗಂಡ ಅನೇಕ ದತ್ತಿ ನಿಧಿಗಳು ಹಾಗು ಬೃಹತ್ ಉದ್ದಿಮೆಗಳು ಪತ್ರಿಕೆಗಳಿಗೆ ನೆರವು ನೀಡಲಾರಂಭಿಸಿವೆ. ಇಂತಹ ನೆರವುಗಳನ್ನುಕ್ರೌಢೀಕರಿಸಿಪತ್ರಿಕೆಗಳಿಗೆ ನೆರವಾಗುವ ಸಂಸ್ಥೆಗಳು ಸಹ ಹುಟ್ಟಿಕೊಂಡಿವೆ.

ಗ್ರೌಂಡ್ ಟ್ರುತ್ ಎಂಬ ಸಂಘಟನೆ ರಿಪೆÇೀರ್ಟ್ ಫಾರ್ ಅಮೆರಿಕಾ ಆಂದೋಲನ ಆರಂಭಿಸಿ ವಿವಿಧ ಮೂಲಗಳಿಂದ ಸಂಗ್ರಹಿಸಿದ ಹಣದಿಂದ ಅಗತ್ಯ ಇರುವ ಪತ್ರಿಕೆ/ಬಾನುಲಿ/ ಬಹುಮಾಧ್ಯಮ ಜಾಲತಾಣಗಳ ಸುದ್ದಿ ಮನೆಗಳಿಗೆ ವರದಿಗಾರರನ್ನು ಎರಡು ವರ್ಷದ ಅವಧಿಗೆ ನೇಮಕಮಾಡುತ್ತದೆ. ಅರ್ಧವೇತನ ಸಂಸ್ಥೆ ಭರಿಸಿದರೆ ಕಾಲು ಭಾಗ ಪತ್ರಿಕೆ ನೀಡಬೇಕು ಹಾಗೂ ಉಳಿದ ಹಣವನ್ನು ಸ್ಥಳೀಯವಾಗಿ ಪತ್ರಿಕೆಗಳು ಆಯಾ ಸ್ಥಳೀಯ ಸಮುದಾಯಗಳಿಂದ ಸಂಗ್ರಹಿಸಬೇಕು. ಸಂಘಟನೆ 2017 ರಿಂದ ಸಕ್ರಿಯವಾಗಿದ್ದು, 2021 ರಲ್ಲಿ ಅಮೆರಿಕೆಯ ಹಲವು ರಾಜ್ಯಗಳಲ್ಲಿ ಮತ್ತು ಕೆಲ ಹೊರ ದೇಶಗಳಲ್ಲಿ 200 ಮಾಧ್ಯಮ ಸುದ್ದಿ ಮನೆಗಳಿಗೆ 300 ಪತ್ರಕರ್ತರನ್ನು ಎರಡು ವರ್ಷಗಳ ಅವಧಿಗೆ ಒದಗಿಸಿದೆ. ಸ್ಥಳೀಯ ಸಮುದಾಯದ ವ್ಯಾಪ್ತಿಯನ್ನು ಅವರಿಗೆ ಸೂಚಿಸಲಾಗಿದ್ದು ಅವರು ವರದಿ ಮಾಡಬೇಕಾದ ಬಹು ಸಂದಿಗ್ಧ ಸಮಸ್ಯೆಗಳನ್ನು ತಿಳಿಸಲಾಗಿದೆ. ಇದರಿಂದ ಸ್ಥಳೀಯ ಪತ್ರಿಕೆಗಳಿಗೆ ಕೊಂಚಮಟ್ಟಿನ ನೆರವಾಗಲಿದೆ.

ಯೋಜನೆಯಡಿ ನೇಮಕಗೊಂಡವರಿಗೆ ಪೂರ್ಣ ಪ್ರಮಾಣದ ತರಬೇತಿ ನೀಡಿ ಕಳುಹಿಸಲಾಗುತ್ತಿದೆ. ರಿಪೆೀರ್ಟ್ ಫಾರ್ ಅಮೆರಿಕಾ ಸಂಸ್ಥೆಯೊಡನೆ ಕೈಜೋಡಿಸಿರುವ ಸಮುದಾಯ ಪತ್ರಿಕೆಗಳು 2020ರಲ್ಲಿ 46 ಲಕ್ಷ ಅಮೆರಿಕನ್ ಡಾಲರ್ ಸಂಗ್ರಹಿಸಲು ಶಕ್ಯವಾಗಿದೆ. ಇದರರ್ಥ ಸ್ಥಳೀಯ ಮಟ್ಟದಲ್ಲಿ ಸಹ ಪತ್ರಿಕೆಗಳಿಗೆ ನೆರವಾಗಲು ಸಮುದಾಯ ಸಿದ್ಧವಿದೆ ಎಂದರ್ಥ. ಇಂಗ್ಲೆಂಡ್ ನಲ್ಲಿ ಬಿ.ಬಿ.ಸಿ. ಮತ್ತು ಕೆನಡಾ ಸರಕಾರ ಇಂತಹ ಯೋಜನೆಯಡಿ ಅನೇಕ ಸಮುದಾಯ ಪತ್ರಿಕೆಗಳು ಪತ್ರಕರ್ತರನ್ನು ಪಡೆದು ತಮ್ಮ ಸುದ್ದಿ ಹಾಗೂ ಲೇಖನ ಪ್ರಕಟಣೆಗಳ ಗುಣಮಟ್ಟವನ್ನು ವೃದ್ಧಿಸಿಕೊಳ್ಳುತ್ತಿವೆ. ಸ್ಥಳೀಯ ಪತ್ರಿಕೋದ್ಯಮ ರಕ್ಷಣೆಗೆ ಐದು ವರ್ಷಗಳ `ನ್ಯೂಸ್ ಮೀಡಿಯಾ ಕೆನಡಾಯೋಜನೆಯೊಂದನ್ನು ಕೆನಡಾ ಸರ್ಕಾರ ಜಾರಿಗೊಳಿಸಿ ನಾಗರಿಕ ಪತ್ರಿಕೋದ್ಯಮವನ್ನು ಬೆಂಬಲಿಸುವ ಯೋಜನೆ ಅಡಿಯಲ್ಲಿ ದೇಶದ 162 ಸುದ್ದಿ ಮನೆಗಳಲ್ಲಿ 199 ಪತ್ರಕರ್ತರಿಗೆ ಧನಸಹಾಯವನ್ನು ಅನುಮೋದಿಸಿದೆ. ಸಂಕಷ್ಟದಲ್ಲಿರುವ ಸಮುದಾಯಗಳಗಳ ಮೇಲೆ ಬೆಳಕು ಚೆಲ್ಲುವ ಲೇಖನಗಳ ಪ್ರಕಟಣೆಗೆ ಒತ್ತು ನೀಡಲಾಗಿದೆ. ಪತ್ರಕರ್ತರ ತಂಡ ಬರೆಯುವ ಲೇಖನಗಳನ್ನು, ದೇಶದ ಎಲ್ಲ ಪತ್ರಿಕೆಗಳು ಉಚಿತವಾಗಿ ಪ್ರಕಟಿಸಬಹುದಾಗಿದೆ.

ಯೋಜನೆಯಡಿ ವಸ್ತುನಿಷ್ಠವಾಗಿ ಕೆಲಸ ಮಾಡಬೇಕಾದದ್ದು ಪತ್ರಕರ್ತರ ಹೊಣೆ. ಉದಾಹರಣೆಗೆ, ಅಮೆರಿಕಾದ ರೋಚೆಸ್ಟರ್ ನಗರದಲ್ಲಿನ `ಡೆಮೋಕ್ರಾಟ್ ಮತ್ತು ಕ್ರಾನಿಕಲ್ಪತ್ರಿಕೆಗೆ ಇಬ್ಬರು ವರದಿಗಾರರು ನೇಮಕವಾಗಿದ್ದು, ಸಂಕಷ್ಟದಲ್ಲಿರುವ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಕುರಿತು ಓರ್ವ ಮತ್ತು ಇನ್ನೊಬ್ಬರು ಸ್ಥಳೀಯ ಪೆÇೀರ್ಟೊರಿಕನ್ ಸಮುದಾಯದ ಸಮಸ್ಯೆಗಳ ಮೇಲೆ ಅಧ್ಯಯನ ನಡೆಸಿ ವರದಿಗಳನ್ನು ಪ್ರಕಟಿಸಲಿವೆ. ಪತ್ರಿಕೆಗಳ ಪ್ರಗತಿ ಮತ್ತು ಅವುಗಳ ಉಪಯುಕ್ತತತೆ ಸಮಾಜದ ಒಳಿತಿಗೆ ನೆರವಾಗಬೇಕು. ಇಂತಹ ಜನೋಪಕಾರಿ ಕೆಲಸಗಳು ಪತ್ರಿಕೋದ್ಯಮದ ಗುಣಮಟ್ಟ ಮತ್ತು ಅದರ ವಿಸ್ತಾರವನ್ನು ಹೆಚ್ಚಿಸುತ್ತದೆ. ಅಲ್ಲದೆ ಹೊಸ ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಹಳಬರನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ತಮ್ಮ ಹರಿತ ಲೇಖನಿಯೊಂದಿಗೆ ಪರಿಣಾಮಕಾರಿ ಅಭಿವೃದ್ಧಿ ಕಾರ್ಯಾಚರಣೆಯಲ್ಲಿ ತಮ್ಮ ಪ್ರಭಾವವನ್ನು ಸ್ಥಳೀಯ ಪತ್ರಿಕೆಗಳು ಪ್ರದರ್ಶಿಸಿದರೆ, ಸಾರ್ವಜನಿಕರ ದೇಣಿಗೆಗಳು ನಿರಂತರ ಆದಾಯದ ಮೂಲವಾಗಬಹುದು ಎಂದು ಮಾಧ್ಯಮ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಅಮೆರಿಕಾದಲ್ಲಿ ಒಂದು ಕೋಟಿಗೂ ಮಿಕ್ಕಿ ಕೋಟ್ಯಧಿಪತಿಗಳಿದ್ದಾರೆ. ಇವರು ಅಲ್ಪ ಪ್ರಮಾಣದಲ್ಲಿಯಾದರೂ ಪತ್ರಿಕೆಗಳಿಗೆ ನೆರವು ನೀಡಬಲ್ಲರು ಎಂಬ ನಂಬಿಕೆ ತಜ್ಞರದು.

ದತ್ತಿ ನಿಧಿಗಳು ಹಾಗೂ ವೈಯುಕ್ತಿಕ ದೇಣಿಗೆಗಳ ಮೂಲಕ ಪತ್ರಕರ್ತರ ಸೇವೆಯನ್ನು ಪಡೆಯುವುದು ಒಂದು ಮಾರ್ಗವಾದರೆ, ಪತ್ರಿಕಾ ಪ್ರಕಟಣಾ ಸಂಸ್ಥೆಯನ್ನು ಲಾಭರಹಿತ ಉದ್ದಿಮೆಯಾಗಿ ಇಲ್ಲವೇ ಸಹಕಾರಿ ಸಂಸ್ಥೆಯಾಗಿ ಪರಿವರ್ತಿಸಿ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆಯುವುದರಿಂದ ಸಹ ಪತ್ರಿಕೆಯ ಉತ್ಪಾದನಾ ವೆಚ್ಚವನ್ನು ತಗ್ಗಿಸುವ ಸಾಧ್ಯತೆಗಳಿವೆ. ಲಾಭವನ್ನು ಅನೇಕ ಸಮುದಾಯ ಪತ್ರಿಕೆಗಳು ಪಡೆಯುತ್ತಿವೆ. ಕೆಲಸ ಕಳೆದುಕೊಂಡ ಅನೇಕ ಪತ್ರಕರ್ತರು ಒಟ್ಟುಗೂಡಿ ಇಂತಹ ಲಾಭರಹಿತ ಪತ್ರಿಕೆಗಳು ಇಲ್ಲವೆ ಬಹುಮಾಧ್ಯಮ ಸುದ್ದಿ ಜಾಲತಾಣಗಳನ್ನು ಆರಂಭಿಸಿ ಸಮುದಾಯದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಾಮಾಣಿಕ ಪ್ರಯತ್ನ ನಡೆಸಿವೆ.

ಬೃಹತ್ ತಾಂತ್ರಿಕ ಕಂಪನಿಗಳಾದ ಗೂಗಲ್ ಹಾಗು ಮೈಕ್ರೋಸಾಫ್ಟ್ ಸಮುದಾಯ ಪತ್ರಿಕೆಗಳು/ಬಾನುಲಿ/ಜಾಲತಾಣಗಳ ಕರ್ತವ್ಯ ನಿರ್ವಹಣೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಅವುಗಳ ನೆರವಿಗೆ ಧಾವಿಸುತ್ತಿವೆ. ಪತ್ರಕರ್ತರಿಗೆ ತರಬೇತಿ ಹಾಗು ನೂತನ ತಂತ್ರಾಂಶ ಅಳವಡಿಸಿ ಪತ್ರಿಕೆಗಳ ಆಕರ್ಷಣೆಯನ್ನು ಹೆಚ್ಚಿಸಲು ಇವು ಪ್ರಯತ್ನಿಸುತ್ತಿವೆ.

ಅನೇಕ ಸ್ಥಳೀಯ ಪತ್ರಿಕೆಗಳು ಹಲವು ಸುದ್ದಿಗಳನ್ನು ವಿನಿಮಯ ಮಾಡಿಕೊಳ್ಳಲಾರಂಭಿಸಿವೆ. ತಾನು ಸಂಗ್ರಹಿಸುವ ಅಪರಾಧ ಸುದ್ದಿಯನ್ನು ಇನ್ನೊಂದು ಪತ್ರಿಕೆಗೆ ನೀಡುವುದು ಮತ್ತು ಪತ್ರಿಕೆ ಸಂಗ್ರಹಿಸುವ ಕ್ರೀಡಾ ಸುದ್ದಿಯನ್ನು ಅದರೊಂದಿಗೆ ವಿನಿಮಯ ಮಾಡಿಕೊಳ್ಳುವುದು. ಇದರಿಂದ ಸ್ಥಳೀಯ ಮಟ್ಟದಲ್ಲಿ ಸುದ್ದಿ ಸಂಗ್ರಹ ವೆಚ್ಚವನ್ನು ಕಡಿತಗೊಳಿಸಬಹುದಾಗಿದೆ.

ಎಲ್ಲ ಪ್ರಯತ್ನಗಳಲ್ಲಿ ಹಲವಾರು ಒತ್ತಡಗಳು ಇಲ್ಲವೆ ಸಮಸ್ಯೆಗಳು ಉದ್ಭವಿಸುತ್ತವೆ. ಅವುಗಳನ್ನು ಪತ್ರಿಕೆಗಳು ತಮ್ಮ ಸ್ಪಷ್ಟ ನಿಲುವುಗಳಿಂದ ಹಾಗು ಜಾಣ್ಮೆಯಿಂದ ನಿಭಾಯಿಸಬೇಕಾಗುತ್ತದೆ. ಆದರೆ ವೈವಿಧ್ಯಮಯ ನೆರವು ಮೂಲಗಳನ್ನು ಹೊಂದುವ ಮೂಲಕ ಪತ್ರಿಕೆಗಳು ಒತ್ತಡಗಳನ್ನು ನಿಭಾಯಿಸುವ ತಂತ್ರಗಾರಿಕೆಯನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಜಾಹೀರಾತುದಾರರು ಸಹ ಇದೇ ಬಗೆಯ ತಂತ್ರಗಳನ್ನು ಅನುಸರಿಸಿ ಪತ್ರಿಕೆಗಳನ್ನು ಮಣಿಸುವ ಪ್ರಯತ್ನಗಳನ್ನು ನಡೆಸುತ್ತಲೇ ಇರುತ್ತಾರೆ. ಆದರೆ ಸುದ್ದಿ ಪಾವಿತ್ರತೆಯನ್ನು ರಕ್ಷಿಸುವ ಚಾಣಾಕ್ಷತನ ಪತ್ರಿಕೆಗಳಿಗಿರಬೇಕು. ಬಹುತೇಕ ಮುಂದುವರಿದ ದೇಶಗಳಲ್ಲಿ ಸ್ಥಳೀಯ ಪತ್ರಿಕೆಗಳನ್ನು ಉಳಿಸಿ ಪೆÇೀಷಿಸುವ ಪ್ರಯತ್ನಗಳು ಯಶಸ್ಸಿನ ಹಾದಿ ಕಂಡಿವೆ. ನಿರ್ಭೀತ ಸುದ್ದಿ ಮಾಧ್ಯಮಗಳಿಂದ ಮಾತ್ರ ಪ್ರಜಾಸತ್ತೆಯ ರಕ್ಷಣೆ ಸಾಧ್ಯವೆಂಬ ಅಚಲ ನಂಬಿಕೆ ಪ್ರಯತ್ನಗಳಿಗೆ ನೀರೆರೆಯುತ್ತಿವೆ.

*ಲೇಖಕರು ವಿಶ್ರಾಂತ ಪತ್ರಿಕೋದ್ಯಮ ಪ್ರಾಧ್ಯಾಪಕರು ಮತ್ತು ಮಾಧ್ಯಮ ತಜ್ಞರು.

Leave a Reply

Your email address will not be published.