ಪವನ್ ಕುಮಾರ್ ‘ಶಿಳ್ಳೆಗಾರ’ನ ಒಳ್ಳೆಯ ಕನಸುಗಳು

ವಾಸ್ತವದಲ್ಲಿ ಫಿಲ್ಮ್ ಮೇಕರ್ಸ್ ಯುನೈಟೆಡ್ ಕ್ಲಬ್ ಮೂಲಕ ಪವನ್‌ಕುಮಾರ್ ಕೇವಲ ಕನ್ನಡ ಚಿತ್ರರಂಗವನ್ನು ಬದಲಾಯಿಸಲು ಹೊರಟಂತೆ ಕಾಣುತ್ತಿಲ್ಲ, ಹೊರತಾಗಿ ಇಡೀ ಭಾರತೀಯ ಚಿತ್ರರಂಗವನ್ನೇ ಇದು ಪ್ರಭಾವಿಸುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ.

ಕನ್ನಡ ಚಿತ್ರರಂಗ ಎನ್ನುವಾಗ ನಮ್ಮ ಮನಸ್ಸಿಗೆ ಹಲವು ನಿರ್ದೇಶಕರ ಹೆಸರು ಒಂದೇ ಉಸಿರಿನಲ್ಲಿ ಬಂದುಬಿಡಬಹುದು. ಆದರೆ ಏಕೋ ಏನೊ, ಥಟ್ಟೆಂದು ಹೇಳಲು ನೆನಪಾಗದೆ ಉಳಿಯುವ ಹೆಸರು ಪ್ರತಿಭಾವಂತ, ಸೃಜನಶೀಲ ನಿರ್ದೇಶಕ ಪವನ್‌ಕುಮಾರ್ ಅವರದು. ಪವನ್ ನಿರ್ದೇಶನದ ಚಿತ್ರಗಳು ಮೂರು ಅಷ್ಟೆ. ಆದರೆ ಆ ಮೂರು ಸಿನಿಮಾಗಳೂ ಕೇವಲ ಕನ್ನಡ ಮಾತ್ರವಲ್ಲ, ಹೊರರಾಜ್ಯ, ಹೊರರಾಷ್ಟçಗಳ ಮನಸ್ಸನ್ನೂ ಗೆದ್ದಿವೆ. ಹೆಚ್ಚು ಸುದ್ದಿಯಲ್ಲಿರಲು ಬಯಸದ ಪವನ್, ಲಾಕ್‌ಡೌನ್ ಅವಧಿಯ ಈ ಹೊತ್ತಿನಲ್ಲಿ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಚಿತ್ರರಂಗದಲ್ಲಿ(ಅವರೇ ಹೇಳುವಂತೆ) ಒಬ್ಬ ಶಿಳ್ಳೆಗಾರನ ಪಾತ್ರವನ್ನು ನಿರ್ವಹಿಸಿದ್ದಾರೆ ಎನ್ನಬಹುದು.

ಸಿನಿಮಾರಂಗಕ್ಕೆ ಸಂಬಂಧಿಸಿದ ತಮ್ಮ ಇಪ್ಪತ್ತು ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಹಲವಾರು ಮಹತ್ವಪೂರ್ಣ ಸಂಗತಿಗಳನ್ನು ಪವನ್ ಬಿಚ್ಚಿಟ್ಟಿದ್ದಾರೆ. ಇದುವರೆಗೆ ಇಂತಹ ಪ್ರಯತ್ನಕ್ಕೆ ಯಾರೂ ಕೈ ಹಾಕಿಲ್ಲ. ಒಬ್ಬ ಪ್ರಾಧ್ಯಾಪಕನಂತೆ ಸ್ಪಷ್ಟ, ಸೂಕ್ತ ಉದಾಹರಣೆಗಳೊಂದಿಗೆ ಸಿನಿಮಾ ಕಲಿಕೆಯ ಆರಂಭವನ್ನು ವಿವರಿಸಿದ್ದಾರೆ. ಹಲವು ದಶಕಗಳಿಂದ ನಿರಂತರವಾಗಿ ಚಿತ್ರ ನಿರ್ದೇಶನದಲ್ಲಿ ತೊಡಗಿಕೊಂಡ ಬಹಳಷ್ಟು ನಿರ್ದೇಶಕರು ನಮ್ಮ ನಡುವೆ ಇರುವಾಗ ಪವನ್ ಇಂತಹದ್ದೊಂದು ಯಶಸ್ವೀ ನಡೆ ಮುಂದಿಟ್ಟಿರುವುದು, ಸಿನಿಮಾ ಕುರಿತು ಹುಚ್ಚುತನ ಬೆಳೆಸಿಕೊಂಡ ಯುವ ಮನಸ್ಸುಗಳಿಗೆ ಜೀವಜಲ ಸಿಕ್ಕಂತಾಗಿದೆ.

ಸಾಮಾನ್ಯವಾಗಿ ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಸಿನಿಮಾ ಕುರಿತು ಹೆಚ್ಚಿನದೇನೂ ಕಲಿಸುವುದಿಲ್ಲ. ಅದರ ಹಿನ್ನೆಲೆಯೂ ಇಲ್ಲದೆ, ಮುನ್ನೆಲೆಯೂ ಇಲ್ಲದೆ ಸ್ಥಿರವಾದ ಒಂದು ಬಗೆಯಲ್ಲಿ, ಇತರ ವಿಷಯಗಳಂತೆ ಸಿನಿಮಾನೂ ಕಲಿಕೆಯ ಭಾಗವಾಗಿ ಸಾಗುತ್ತ ಇರುತ್ತದೆ. ಸಿನಿಮಾ ಶಾಲೆ, ತರಬೇತಿ, ಕೋರ್ಸು ಮುಂತಾದವು ಪ್ರತ್ಯೇಕವಾಗಿ ಹಲವಿರಬಹುದು. ಆದರೆ, ದೊಡ್ಡ ಮೊತ್ತ ಭರಿಸಿ ಅವುಗಳಿಗೆ ಸೇರಿ ಸಂಪೂರ್ಣವಾಗಿ ತೊಡಗಿಕೊಳ್ಳಲು ಮಧ್ಯಮವರ್ಗದ, ಸಾಧಾರಣ ಕುಟುಂಬಗಳ ವಿದ್ಯಾರ್ಥಿಗಳಿಗೆ ತೊಡಕಿರುತ್ತದೆ. ಅಂತಹ ಆಸಕ್ತರಿಗೆ ಪವನ್ ಅವರ ಯೂಟ್ಯೂಬ್ ಚಾನೆಲ್ ಒಂದು ಸಿನಿಮಾ ಶಾಲೆ ಎಂದೇ ಹೇಳಬಹುದು. ಒಂದು ನಿಮಿಷದ ಅಥವಾ ಅದಕ್ಕೂ ಕಡಿಮೆ ಅವಧಿಯ ವಿಡಿಯೊನೇ ಆಗಿರಲಿ, ಪವನ್ ಅದನ್ನು ಪ್ರಸ್ತುತಪಡಿಸುವ ರೀತಿ, ಅದರ ಗುಣಮಟ್ಟದ ಬಗ್ಗೆ ಅವರಿಗಿರುವ ಶ್ರದ್ಧೆ, ಕಾಳಜಿಯೇ ಅವರನ್ನು ಒಬ್ಬ ಯಶಸ್ವಿ ನಿರ್ದೇಶಕನಾಗಿ, ನಿರ್ಮಾಪಕನಾಗಿ ರೂಪಿಸಿರುವುದು.

ಗಮನಾರ್ಹ ಸಂಗತಿ ಎಂದರೆ, ಭಾರತದಲ್ಲಿ ಲಾಕ್‌ಡೌನ್ ಘೋಷಣೆಯಾಗಿ ಕೆಲವೇ ದಿನಗಳಲ್ಲಿ, ಚಿತ್ರರಂಗದಲ್ಲಿ ದುಡಿಯುವ ಹಲವಾರು ಅಸಹಾಯಕ ಕೆಲಸಗಾರರಿಗೆ ಆರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಆನ್‌ಲೈನ್ ಮೂಲಕ ಹಣ ಒಟ್ಟುಗೂಡಿಸಲು(ಫಂಡಿಂಗ್) ಮೊದಲು ಕರೆಕೊಟ್ಟವರು ಪವನ್‌ಕುಮಾರ್. ಸಾಮಾಜಿಕ ಜಾಲತಾಣಗಳ ಮೂಲಕ ಪವನ್ ಹೀಗೊಂದು ಮನವಿ ಮಾಡಿಕೊಂಡಿದ್ದು, ಚಿತ್ರರಂಗದ ಹಲವಾರು ನಟರು, ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಸಿನಿಮಾಭಿಮಾನಿಗಳೂ ಅವರಿಗೆ ಕೈಜೋಡಿಸಿದ್ದಾರೆ. ಲೂಸಿಯಾಗೆ ಕ್ರೌಡ್ ಫಂಡ್ ಮೂಲಕ ಹಣ ಹೊಂದಿಸಿ, ಕನ್ನಡದ ಮೊತ್ತಮೊದಲ ಕ್ರೌಡ್‌ಫಂಡೆಡ್ ಸಿನಿಮಾ(ಶ್ಯಾಮ್ ಬೆನೆಗಲ್ ನಿರ್ದೇಶನದ ಮಂಥನ್’, ಭಾರತದ ಮೊದಲ ಕ್ರೌಡ್ ಫಂಡೆಡ್ ಸಿನಿಮಾ) ಎಂಬ ವಿಶೇಷತೆಯನ್ನು ಆ ಚಿತ್ರಕ್ಕೆ ಒದಗಿಸಿದ್ದಾರೆ.

ಪವನ್ ಅಪ್ಲೋಡ್ ಮಾಡಿರುವ ಏಳು ಎಪಿಸೋಡ್‌ಗಳ ಕನ್ನಡ ಸಿನಿಮಾ ನಿರ್ಮಾಣ ಕುರಿತ ಉಚಿತ ಆನ್‌ಲೈನ್ ಕಾರ್ಯಾಗಾರಬಹಳಷ್ಟು ಮೆಚ್ಚುಗೆ ಗಳಿಸಿದೆ. ಒಳ್ಳೆಯ ಸಿನಿಮಾ-ಕೆಟ್ಟ ಸಿನಿಮಾ, ವೀಕ್ಷಕರು, ನಿರ್ಮಾಣ, ನಿರ್ದೇಶನ ಹೀಗೆ ಹಲವಾರು ಆಯಾಮಗಳಲ್ಲಿ ಸಿನಿಮಾರಂಗವನ್ನು ಸೆಕೆಂಡರಿ ಆಗಿ ಆಯ್ಕೆ ಮಾಡುವುದಕ್ಕಿಂತ ಆಸಕ್ತರು ಅದನ್ನೇ ಬದುಕಿನ ಹಾದಿಯಾಗಿ ಹೇಗೆ ಮತ್ತು ಏಕೆ ಮಾಡಬೇಕು ಎಂಬುದಕ್ಕೆ ಪವನ್ ಅವರ ಈ ಎಪಿಸೋಡ್‌ಗಳು ಉತ್ತರ ನೀಡುತ್ತವೆ. ಇದಷ್ಟೇ ಅಲ್ಲ, ಲೂಸಿಯಾ, ಯೂಟರ್ನ್ ಸಿನಿಮಾಗಳ ಮೇಕಿಂಗ್, ಲಾಕ್‌ಡೌನ್ ಟೇಪ್ಸ್-ಕನ್‌ಫೆಶನ್ ಬೈ ಪವನ್, ಸಂಡೇ ಮೀಟ್‌ಅಪ್ ಹೀಗೆ ಬೇರೆ ಬೇರೆ ರೀತಿಯಲ್ಲಿ ಅಭಿಮಾನಿಗಳ ಜೊತೆಗೆ, ಸಿನಿಮಾಸಕ್ತರೊಂದಿಗೆ ಪವನ್ ಸಂಪರ್ಕದಲ್ಲಿದ್ದಾರೆ.

ಸಂತೋಷದ ವಿಷಯವೆಂದರೆ ಪವನ್, ವೀಕ್ಷಕರಿಗೆ ಎಲ್ಲಿಯೂ ಸಿನಿಮಾವನ್ನು ಒಂದು ರಂಗಿನ ಜಗತ್ತು ಎಂಬಂತೆ ತೋರಿಸುವುದೇ ಇಲ್ಲ ಅಥವಾ ಇದೊಂದು ದೊಡ್ಡ ಹಳ್ಳ, ಈ ಹಳ್ಳಕ್ಕೆ ಬೀಳಬೇಡಿರಪ್ಪಎಂಬ ಭಾವ ಹುಟ್ಟಿಸುವ ನಿರಾಶೆಯ ಮಾತುಗಳನ್ನೂ ಆಡಲಿಲ್ಲ. ಇಡುವ ಹೆಜ್ಜೆಯ ಜೊತೆಗೆ ಗಮನಿಸಬೇಕಾದ ಮಹತ್ವದ ಸಂಗತಿಗಳನ್ನು ಪವನ್ ದಾಖಲಿಸಿದ್ದಾರೆ. ಪವನ್ ಅವರ ವಿಡಿಯೊಗಳಿಗೆ, ಪಾಡ್‌ಕಾಸ್ಟ್ ಗಳಿಗೆ ಬಹಳಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. ಹೊರರಾಜ್ಯಗಳ ಸಿನಿಮಾಸಕ್ತರೂ ಪವನ್ ಪ್ರಯತ್ನಗಳಿಂದ ಖುಷಿಯಾಗಿದ್ದಾರೆ. ಒಂದು ಬಾರಿ ಪವನ್ ಅವರ ಯೂಟ್ಯೂಬ್ ಚಾನೆಲ್ ಹೊಕ್ಕವರು, ಅಲ್ಲಿನ ಬಹುತೇಕ ವಿಡಿಯೊಗಳನ್ನು ಗಮನಿಸಿಯೇ ಹಿಂದಿರುಗುತ್ತಾರೆ.

ಸದ್ಯ ಭಾರತದ ಪರಿಸ್ಥಿತಿ ಬದಲಾಗಿದೆ. ಕೊರೊನಾ ದೆಸೆಯಿಂದ ಬದುಕು ಸಂಪೂರ್ಣ ಹಿಂದಿನ ಹಳಿಗೆ ಮರಳುವುದು ಸಾಧ್ಯವೇ ಎಂಬ ಸಂಕಟ ಎಲ್ಲರನ್ನೂ ಕಾಡುತ್ತಿದೆ. ಸಿನಿಮಾರಂಗವೂ ಇದೇ ಆತಂಕದಲ್ಲಿದೆ. ಆನ್‌ಲೈನ್ ಕ್ರಾಂತಿಯ ಅಲೆ ಸಿನಿಮಾರಂಗಕ್ಕೂ ತಟ್ಟಿರುವುದರಿಂದ ಅಲ್ಲಿ ಕೆಲಸ ಮಾಡುವ ಎಲ್ಲರಿಗೂ ಸಂಕಷ್ಟ ಎದುರಾಗಿದೆ. ಆನ್‌ಲೈನ್ ಮೂಲಕ ಸಿನಿಮಾ ವೀಕ್ಷಣೆಯೇ ಸದ್ಯ ಹೆಚ್ಚಾಗಿರುವುದರಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಾಧ್ಯವಾಗದೆ ಆನ್‌ಲೈನ್‌ಅನ್ನೇ ಸಿನಿಮಾ ಮಾರುಕಟ್ಟೆಯ ಕ್ಷೇತ್ರವಾಗಿ ಬಳಸುವ ಪ್ರಯತ್ನ ಭಾರತೀಯ ಚಿತ್ರರಂಗದಲ್ಲಿ ನಡೆಯುತ್ತಿದೆ. ಹೋಂ ಟಾಕೀಸ್ ಎಂಬ ಹೆಸರಿನಲ್ಲಿ ಆನ್‌ಲೈನ್ ಮೂಲಕ ಸಿನಿಮಾ ಹಂಚಿಕೆಯ ಪ್ರಯೋಗವನ್ನು ಪವನ್ 2012ರಲ್ಲಿಯೇ(ಲೂಸಿಯಾ ಸಿನಿಮಾಗೋಸ್ಕರ) ಮಾಡಿದ್ದರು. ಹಲವರು ಆನ್‌ಲೈನ್ ಮೂಲಕವೇ ಲಿಂಕ್ ಬಳಸಿ ಸಿನಿಮಾ ನೋಡಿದ್ದರು. ಈಗಿನ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್‌ನಂತೆಯೇ ಆಗಿತ್ತದು. ಆದರೆ ಜನರು, ವೀಕ್ಷಕರು ಅದನ್ನು ಅಪ್ಪಿಕೊಳ್ಳುವಷ್ಟು ಮುಂದುವರಿದಿರಲಿಲ್ಲ ಅಥವಾ ನಿರ್ಲಕ್ಷಿಸಿದರು ಎನ್ನಬಹುದು. ಇಂದು ನೆಟ್‌ಫ್ಲಿಕ್ಸ್, ಅಮೆಜಾನ್‌ಗಳಲ್ಲಿ ಅದೇ ವೀಕ್ಷಕರು ಸಿನಿಮಾಗಳನ್ನು ಜಾಲಾಡುತ್ತಿದ್ದಾರೆ ಎನ್ನುವುದು ಪವನ್ ಅವರ ದೂರದರ್ಶಿತ್ವವನ್ನು ಬಿಂಬಿಸುತ್ತದೆ.

ಒಂದು ಸಿನಿಮಾ ಎಷ್ಟೇ ಉತ್ತಮ ಕಥೆಯನ್ನು ಹೊಂದಿದ್ದರೂ, ದೊಡ್ಡ ಮೊತ್ತ ಹೂಡಿದ್ದರೂ, ಅದನ್ನು ಜನರಿಗೆ ತಲುಪಿಸುವಲ್ಲಿ, ಬೇಕಾದ ಪ್ರಚಾರದ ಯೋಜನೆಗಳು ಸೋತರೆ ಇಡೀ ಸಿನಿಮಾನೇ ಸೋಲುತ್ತದೆ. ಸಿನಿಮಾ ಮಾರ್ಕೆಟಿಂಗ್ ವಿಚಾರದಲ್ಲಿ ಪವನ್‌ಕುಮಾರ್ ತೋರಿಸುವ ಕ್ರಿಯಾಶೀಲತೆ ನಿಜಕ್ಕೂ ಮೆಚ್ಚುವಂಥದ್ದು. ಸಿನಿಮಾರಂಗಕ್ಕೆ ಬರುವ ಮುನ್ನ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಪವನ್‌ಕುಮಾರ್, ರಂಗಶಂಕರ ತಂಡದ ನಾಟಕ ಪ್ರದರ್ಶನಗಳ ಪ್ರಚಾರಕ್ಕೆ ಬಳಸುತ್ತಿದ್ದ ತಂತ್ರಗಳು ಎಂಥವರನ್ನೂ ಸೆಳೆಯುವಂತಿದ್ದವು. ಆ ಪ್ರಚಾರದ ಹಳೆಯ ವಿಡಿಯೊಗಳನ್ನೂ ಅವರ ಚಾನೆಲ್‌ನಲ್ಲಿ ಗಮನಿಸಬಹುದು.

ಒಂದು ಮೊಟ್ಟೆಯ ಕಥೆಸಿನಿಮಾವನ್ನು ನೋಡಿ, ಇಷ್ಟಪಟ್ಟು ನಿರ್ಮಾಪಕರಾಗಿ ಅದರ ಪ್ರಮೊಷನ್‌ನ ಕಾರ್ಯತಂತ್ರಗಳನ್ನು ಅತ್ಯುತ್ತಮವಾಗಿ ಮಾಡಿಕೊಂಡ ಪವನ್, ಪ್ರೇಕ್ಷಕರ ಮನಸೆಳೆವ ರೀತಿಯ ಕುರಿತು ಈ ಘಟನೆಯನ್ನು ಪ್ರಸ್ತಾಪಿಸಬಹುದು- ಒಂದು ಮೊಟ್ಟೆಯ ಕಥೆ ಚಿತ್ರದ ಆಡಿಯೊ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದ ಹಲವರಿಗೆ ವೇದಿಕೆ ಮೇಲೆ ಕಂಡದ್ದು ಮೊಟ್ಟೆ ತಲೆಯ ಹಲವು ಕಲಾವಿದರನ್ನು! ಚಿತ್ರರಂಗದಲ್ಲಿಯೇ ಎಷ್ಟೊಂದು ಕಲಾವಿದರು ಬೋಳು ತಲೆಯವರಿದ್ದಾರೋ ಅವರನ್ನೆಲ್ಲ ಆಹ್ವಾನಿಸಿ ಆಡಿಯೊ ಬಿಡುಗಡೆ ಕಾರ್ಯಕ್ರಮವನ್ನು ಇನ್ನಷ್ಟು ಕುತೂಹಲಕರವಾಗಿಸಿದ್ದರು ಪವನ್. ಇದು ಆ ಸಿನಿಮಾ ಕುರಿತು ಜನರಲ್ಲಿ ಆಸಕ್ತಿ ಹೆಚ್ಚುವುದಕ್ಕೂ ಕಾರಣವಾಯಿತು.

ಸಿನಿಮಾ ಪ್ರಚಾರದ ಸಂದರ್ಭಗಳಲ್ಲೂ ಮೊಟ್ಟೆ ಕಥೆ ಟೈಟಲ್‌ನ ಟಿಶರ್ಟ್ ಗಳನ್ನು ಮಾಡಿಸಿ, ತಂಡಕ್ಕೆ ಹಂಚಿ, ತಂಡದ ಜೊತೆ ಮಂಗಳೂರಿನಾದ್ಯಂತ ಓಡಾಡಿ ಪ್ರಚಾರ ಮಾಡಿದ್ದರು. ಸಿನಿಮಾ ಬಿಡುಗಡೆಯಾಗಿ, ಹೆಚ್ಚು ಜನರನ್ನು ತಲುಪಿ ಬಹಳಷ್ಟು ಮೆಚ್ಚುಗೆಗೆ ಪಾತ್ರವಾಯಿತು. ಅಲ್ಲದೆ 2019ರಲ್ಲಿ ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ರಿಮೇಕ್ ಆಯಿತು. ಒಂದು ವೇಳೆ ಪವನ್‌ಕುಮಾರ್ ಅವರ ಪಾಲ್ಗೊಳ್ಳುವಿಕೆ ಇಲ್ಲದೇ ಹೋಗಿದ್ದರೆ ಬಹುಶಃ ಈ ಸಿನಿಮಾ, ಅತ್ಯುತ್ತಮ ಕಥೆ, ಸಂದೇಶ, ಮೇಕಿಂಗ್ ಹೊಂದಿದ್ದರೂ ಕೂಡ ಖಂಡಿತವಾಗಿಯೂ ಸೋಲುತ್ತಿತ್ತು ಎಂಬುದಕ್ಕೆ ನಮ್ಮ ಬಹುಸಂಖ್ಯೆಯ ಪ್ರೇಕ್ಷಕರ ಮನಸ್ಥಿತಿಯೇ ಸಾಕ್ಷಿ. ರಾಜ್ ಬಿ.ಶೆಟ್ಟಿ ಒಬ್ಬ ಪ್ರತಿಭಾವಂತ ನಿರ್ದೇಶಕ ಎಂಬುದರಲ್ಲಿ ಎರಡು ಮಾತಿಲ್ಲ(ಸಾಮಾನ್ಯ ಹಾಸ್ಯಕ್ಕೆಲ್ಲ ನಗದೆ ಇರುವ ಪವನ್‌ಕುಮಾರ್ ಈ ಚಿತ್ರವನ್ನು ನೋಡಿ ಬಿದ್ದೂ ಬಿದ್ದು ನಕ್ಕಿದ್ದರಂತೆ). ಆದರೆ ಮಾರುಕಟ್ಟೆ, ಪ್ರಚಾರದ ವಿಷಯಕ್ಕೆ ಬಂದಾಗ, ಪವನ್ ಅವರ ಅನುಭವದ ಮುಂದೆ ರಾಜ್ ಅವರದು ಆರಂಭಿಕ ಹಂತ ಎನ್ನಬಹುದು. ಆ ಹಿನ್ನೆಲೆಯಲ್ಲಿ ಮೊಟ್ಟೆ ಕಥೆ ಯಶಸ್ಸಿನ ಹಿಂದೆ ಪ್ರಚಾರ ತಂತ್ರ ಪರಿಣಾಮಕಾರಿಯಾಗಿ ಕೆಲಸ ಮಾಡಿತ್ತು ಎಂಬುದು ಗಮನಿಸಬೇಕಾದ ಅಂಶ.

 

ಫಿಲ್ಮ್ ಮೇಕರ್ಸ್ ಯುನೈಟೆಡ್ ಕ್ಲಬ್(ಎಫ್.ಯು.ಸಿ.): ದೂರದೃಷ್ಟಿಯ ತೀರನೋಟ

ಇದು ಪವನ್‌ಕುಮಾರ್ ಇತ್ತೀಚೆಗೆ ಆರಂಭಿಸಿರುವ ಒಂದು ಹೊಸ ಸಂಘಟನೆ ಅಥವಾ ಸಿನಿಮಾ ಕ್ಲಬ್. ಲಾಕ್‌ಡೌನ್ ಅವಧಿಯಲ್ಲಿಯೇ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿ, ಫಿಲ್ಮ್ ಮೇಕರ್ಸ್ ಕ್ಲಬ್‌ಅನ್ನು ಆರಂಭಿಸಿರುವುದರ ಉದ್ದೇಶ, ಗುರಿ, ಕನಸು ಇವೆಲ್ಲವನ್ನೂ ತಮ್ಮ ಆನ್‌ಲೈನ್ ವರ್ಕ್ಶಾಪ್‌ನ ಆರು ಹಾಗೂ ಏಳನೆಯ ಅಧ್ಯಾಯದಲ್ಲಿ ಸ್ಪಷ್ಟವಾಗಿ, ಸರಳವಾಗಿಯೇ ವಿವರಿಸಿದ್ದಾರೆ. ಈ ಕ್ಲಬ್ ಮೂಲಕ ವೀಕ್ಷಕರು ಹಾಗೂ ಸಿನಿಮಾ ನಿರ್ದೇಶಕರು,ತಂತ್ರಜ್ಞರು ಸಂಪರ್ಕದಲ್ಲಿರಲು ಸಾಧ್ಯ. ವೀಕ್ಷಕರ ಜೊತೆ ಸಂವಾದ, ವಿಚಾರ ಸಂಕಿರಣ, ಕಾರ್ಯಾಗಾರ ಮುಂತಾದ ಚಟುವಟಿಕೆಗಳನ್ನು ನಡೆಸಲು ಅವಕಾಶವಿದೆ. ಈಗಾಗಲೇ ನಿರ್ದೇಶಕ ಯೋಗರಾಜ್ ಭಟ್, ಬಿ.ಎಂ.ಗಿರಿರಾಜ್, ಅಭಯಸಿಂಹ, ಮಂಸೋರೆ ಮುಂತಾದವರು ಫಿಲ್ಮ್ ಮೇಕರ್ಸ್ ಕ್ಲಬ್ ಸದಸ್ಯರಾಗಿದ್ದಾರೆ. ಸಿನಿಮಾಗಳನ್ನು ನೀಡಬೇಕಾದರೆ ಪ್ರೇಕ್ಷಕರಲ್ಲಿ ಅದಕ್ಕೆ ತಕ್ಕಂತೆ ಬೇಡಿಕೆ ಇರಬೇಕು. ಪ್ರೇಕ್ಷಕರ ಸಹಕಾರವೂ ಅತಿಮುಖ್ಯ ಎಂಬುದನ್ನು ಪವನ್ ಒತ್ತಿ ಹೇಳಿದ್ದಾರೆ.

ಫಿಲ್ಮ್ ಮೇಕರ್ಸ್ ಕ್ಲಬ್ ಮೂಲಕ ನಡೆಯಬೇಕಾದ ಕೆಲಸ ಕಾರ್ಯದ ಪ್ರಕ್ರಿಯೆಯನ್ನು ಪವನ್‌ಕುಮಾರ್ ಬಾರ್ಟರ್ ಸಿಸ್ಟಂಗೆ ಹೋಲಿಸಿದ್ದಾರೆ. ಸಿನಿಮಾಭಿಮಾನಿಗಳ ಹಣದ ಹೂಡಿಕೆಯಿಂದ ಅವರಿಗೆ ಬೇಕಾದಂತಹ ಅಭಿರುಚಿಯ, ಸಿನಿಮಾಗಳನ್ನು ನಿರ್ಮಿಸಿ ಅವರಿಗೆ ತಲುಪಿಸುವುದು ಇಲ್ಲಿನ ಪ್ರಕ್ರಿಯೆ. ಅದಕ್ಕಾಗಿಯೇ ಅವರು ಕನ್ನಡ ಮೂವಿ ಪೆಟ್ರನ್ಸ್(Kannada Movie Patrons 120K) ಎಂಬ ಟೆಲಿಗ್ರಾಂ ಖಾತೆಯನ್ನು ಆರಂಭಿಸಿದ್ದಾರೆ. 120ಏ(1,20,000) ಕುರಿತ ಪವನ್ ಲೆಕ್ಕಾಚಾರ ಬೇರೆಯೇ. ಆರು ಕೋಟಿ ಕನ್ನಡಿಗರಲ್ಲಿ 0.2ರಷ್ಟು ಕನ್ನಡಿಗರ ಸಂಖ್ಯೆ 1,20,000. ಅಂದರೆ ಕನ್ನಡ ಸಿನಿಮಾಭಿಮಾನಿಗಳಲ್ಲಿ ಇಷ್ಟು ಜನರಾದರೂ ವೀಕ್ಷಕರು ಉತ್ತಮ ಕಥಾವಸ್ತುವುಳ್ಳ ಚಿತ್ರಗಳನ್ನು ಬೆಂಬಲಿಸಬಹುದು ಎಂಬ ಆಲೋಚನೆಯಿಂದ ಹೀಗೊಂದು ಲೆಕ್ಕ ಮಾಡಿಟ್ಟಿದ್ದಾರೆ ಪವನ್.

ಪವನ್, ಫಿಲ್ಮ್ ಮೇಕರ್ಸ್ ಕ್ಲಬ್‌ಅನ್ನು ಬೇಕಾಬಿಟ್ಟಿಯಾಗಿ ಅಥವಾ ಕಾಟಾಚಾರಕ್ಕಾಗಿಯೋ, ಹೆಸರು ಗಳಿಕೆಗಾಗಿಯೋ ಆರಂಭಿಸಿಲ್ಲ ಎಂಬುದಕ್ಕೆ ಅವರು ಕ್ಲಬ್ ಕುರಿತು ನೀಡುವ ಸುದೀರ್ಘ ಆಲೋಚನೆ, ಯೋಜನೆಯ ಮಾಹಿತಿಗಳೇ ಸಾಕ್ಷಿ. ಸದ್ಯ ಡಿಜಿಟಲ್ ಕ್ಷೇತ್ರ(ಒಟಿಟಿ) ಸಿನಿಮಾ ಜಗತ್ತನ್ನು ಆಳುತ್ತಿದೆ. ಆದರೆ ಅಲ್ಲಿ ಸಿನಿಮಾಗಳನ್ನು ವೀಕ್ಷಿಸುವ ವೀಕ್ಷಕರ ಅಭಿರುಚಿ ಬಹುತೇಕ ಆ್ಯಕ್ಷನ್ ಸಿನಿಮಾಗಳ ಬಗ್ಗೆ ಇದೆ. ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳಿಗೆ ಮಾತ್ರ ಅಲ್ಲಿ ಬೇಡಿಕೆ. ಕಲಾತ್ಮಕ, ಸದಭಿರುಚಿಯ ಸಿನಿಮಾಗಳಿಗೆ ಅದು ಸೂಕ್ತ ವೇದಿಕೆಯಲ್ಲ. ಅಲ್ಲದೆ ಡಿಜಿಟಲ್ ಪ್ಲಾಟ್‌ಫಾರ್ಮ್ ಬೃಹತ್ ಮೊತ್ತವನ್ನೇ ಬೇಡುತ್ತದೆ. ಹಾಗಾಗಿ ಸಾಧಾರಣ ಮಟ್ಟಿನ ಉತ್ತಮ ನಿರ್ದೇಶಕರಿಗೆ ಅದು ಸಾಧ್ಯವಲ್ಲ. ಆನ್‌ಲೈನ್ ಮೂಲಕ ಒಳ್ಳೆಯ ಸಿನಿಮಾಗಳನ್ನು, ಅಥವಾ ತಮ್ಮ ಅಭಿರುಚಿಯ ಸಿನಿಮಾಗಳನ್ನು ವೀಕ್ಷಿಸಲು ಫಿಲ್ಮ್ ಮೇಕರ್ಸ್ ಕ್ಲಬ್ ಒಂದು ಪರ್ಯಾಯವಾಗಬಹುದು ಎಂಬುದು ಪವನ್ ಅವರ ಅಭಿಪ್ರಾಯ. ಇವೆಲ್ಲದರ ಕುರಿತು ಸವಿವರವಾಗಿ ತಿಳಿಯುವ ಕುತೂಹಲ ನಿಮಗಿದ್ದರೆ, ಪವನ್‌ಕುಮಾರ್ ಅವರ ಯೂಟ್ಯೂಬ್ ಚಾನೆಲ್‌ಗೆ ಭೇಟಿ ನೀಡಬಹುದು.

ವಾಸ್ತವದಲ್ಲಿ ಫಿಲ್ಮ್ ಮೇಕರ್ಸ್ ಯುನೈಟೆಡ್ ಕ್ಲಬ್ ಮೂಲಕ ಪವನ್‌ಕುಮಾರ್ ಕೇವಲ ಕನ್ನಡ ಚಿತ್ರರಂಗವನ್ನು ಬದಲಾಯಿಸಲು ಹೊರಟಂತೆ ಕಾಣುತ್ತಿಲ್ಲ, ಹೊರತಾಗಿ ಇಡೀ ಭಾರತೀಯ ಚಿತ್ರರಂಗವನ್ನೇ ಇದು ಪ್ರಭಾವಿಸುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಪವನ್ ಹಾದಿ ಅಷ್ಟರಮಟ್ಟಿಗೆ ಪಕ್ವ ಆಲೋಚನೆಗಳನ್ನು ಆವರಿಸಿಕೊಂಡಿದ್ದು, ವೃತ್ತಿಕ್ಷೇತ್ರದ ಕುರಿತು ಅಪಾರ ಕಾಳಜಿ ಹಾಗೂ ನಿಷ್ಠೆ ಅವರ ಪ್ರತಿ ಕೆಲಸದಲ್ಲಿಯೂ ಎದ್ದು ಕಾಣುತ್ತದೆ. ಭಾರತೀಯ ಸಿನಿಮಾರಂಗದಲ್ಲಿ ಹೀಗೊಂದು ಕ್ಲಬ್ ಸ್ಥಾಪನೆಯಾಗಿದ್ದು ಇದೇ ಮೊದಲು. ಎಲ್ಲಾ ಮೊದಲುಗಳಿಗೆ ಮೊದಲಾಗುವ ಪವನ್ ಎದೆಗಾರಿಕೆಯನ್ನು ಮೆಚ್ಚಲೇಬೇಕು.

Leave a Reply

Your email address will not be published.