ಪಾಂಚಾಳ ಗಂಗನ ಹಳೆಯ ಕುಮಾರರಾಮನ ಸಾಂಗತ್ಯ

ಕುಮಾರರಾಮನ ಬದುಕನ್ನೇ ಕೇಂದ್ರವಾಗಿಟ್ಟುಕೊಂಡು ಕನ್ನಡದಲ್ಲಿ ಐದು ಕಾವ್ಯಗಳು ರಚನೆಯಾಗಿವೆ. ಇವುಗಳಲ್ಲಿ ಪಾಂಚಾಳ ಗಂಗನ ಕಾವ್ಯವೆ ಮಿಕ್ಕುಳಿದ ಕಾವ್ಯಗಳಿಗೆ ಆಕರ ಸಾಮಗ್ರಿಯನ್ನು ಒದಗಿಸಿತು ಎಂಬುದು ಡಾ.ಎಂ.ಎಂ.ಕಲಬುರ್ಗಿಯವರ ಅಭಿಮತ.

-ಬಸವರಾಜ ಡಂಕನಕಲ್

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪುರಾಣ ಮತ್ತು ಭಕ್ತಿ ಕಾವ್ಯದ ಜೀವಾಳವಾಗಿತ್ತು. ಅವುಗಳಲ್ಲಿ ಯಾವೊಂದು ಕಾವ್ಯವೂ ಕೂಡಾ ರಾಜನ ಬದುಕನ್ನು ವಸ್ತುವನ್ನಾಗಿಸಿಕೊಂಡು ರಚನೆಯಾಗಲಿಲ್ಲ. ಮಧ್ಯಕಾಲೀನ ಕರ್ನಾಟಕ ಚರಿತ್ರೆಯಲ್ಲಿ ಗಂಡುಗಲಿ ಕುಮಾರರಾಮನಂತಹ ಒಬ್ಬ ಸಾಮಂತ ದೊರೆಯ ಬದುಕಿನ ಆದರ್ಶಗಳನ್ನು ಕುರಿತು ಶಿಷ್ಟ ಮತ್ತು ಮೌಖಿಕ ಪರಂಪರೆಯ ಕಾವ್ಯಗಳು ರಚನೆಯಾದದ್ದು ವಿಶೇಷವೇ ಸರಿ. ಈತನನ್ನು ಕುರಿತು ಚೆನ್ನಬಸವ ಪುರಾಣ, ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ, ನವರತ್ನ ಮಾಲಿಕೆ ಮೊದಲಾದ ಕೃತಿಗಳು ಪ್ರಾಸಂಗಿಕವಾಗಿ ಪ್ರಸ್ತಾಪ ಮಾಡುತ್ತವೆ. ಆದರೆ ಕುಮಾರರಾಮನ ಬದುಕನ್ನೇ ಕೇಂದ್ರವಾಗಿಟ್ಟುಕೊಂಡು ಕನ್ನಡದಲ್ಲಿ ಐದು ಕಾವ್ಯಗಳು ರಚನೆಯಾಗಿವೆ. ಅವೆಂದರೆ ಪಾಂಚಾಳಗಂಗನ ಹಳೆಯ ಕುಮಾರರಾಮನ ಸಾಂಗತ್ಯ, ಅನಾಮಧೇಯ ಕವಿಗಳಿಬ್ಬರ ಹೊಸ ಕುಮಾರರಾಮನ ಸಾಂಗತ್ಯ ಮತ್ತು ಕೊಮಾರಯ್ಯನ ಚರಿತೆ, ಮಹಾಲಿಂಗಸ್ವಾಮಿಯ ಬಾಲರಾಮನ ಸಾಂಗತ್ಯ ಮತ್ತು ನಂಜುಂಡ ಕವಿಯ ರಾಮನಾಥ ಚರಿತೆ. ಇವುಗಳಲ್ಲಿ ಪಾಂಚಾಳ ಗಂಗನ ಕಾವ್ಯವೆ ಮಿಕ್ಕುಳಿದ ಕಾವ್ಯಗಳಿಗೆ ಆಕರ ಸಾಮಗ್ರಿಯನ್ನು ಒದಗಿಸಿತು ಎಂಬುದು ಡಾ. ಎಂ.ಎಂ. ಕಲಬುರ್ಗಿಯವರ ಅಭಿಮತ.

ಕುಮಾರರಾಮನ ಜೀವನಾದರ್ಶಗಳನ್ನು ಸಾಹಿತ್ಯ ಕೃತಿಯಾಗಿಸಿದ್ದು ಪಾಂಚಾಳ ಗಂಗಯ್ಯನೆಂಬುದು ಕಾವ್ಯದಲ್ಲಿ ಕವಿ ತನ್ನ ಹೆಸರನ್ನು ಪ್ರಸ್ತಾಪಿಸಿದ ಉಲ್ಲೇಖದಿಂದ ಸಾಬೀತಾಗುತ್ತದೆ.

ಪದ ಜಾತಿಗೆ ಪಾಂಚಾಳ ಗಂಗಯ್ಯನು

ಮುದದಿ ಪೇಳಿದನು ಕೃತಿಯ|

ಸುಧೆಯ ಸೋನೆಯೊ ಮಾನಿತ ಮಂತ್ರದೇಳಿಗೆಯೊ

ಚದುರ ಸೊಬಗಿನಾ ಗರುವ||

ಇದರಿಂದ ಕಾವ್ಯದ ಕತೃ ಗಂಗಯ್ಯನೆಂದೂ, ಜಾತಿಯಿಂದ ಪಾಂಚಾಳನೆಂದೂ ಕಂಡುಬರುತ್ತದೆ. ಅದಾಗಿಯೂ ಈತನ ಕಾಲದ ಬಗ್ಗೆ ಯಾವುದೇ ನಿರ್ದಿಷ್ಟ ಆಕರಗಳು ಇಲ್ಲವಾಗಿ ಈತನ ನೆಲೆಯ ಕುರಿತಾಗಿಯೂ ಅನೇಕ ಗೊಂದಲಗಳಿರುವುದನ್ನು ಡಾ. ಎಂ.ಎಂ. ಕಲಬುರ್ಗಿಯವರು ಕೃತಿ ಪ್ರಸ್ತಾವನೆಯಲ್ಲಿ ಉಲ್ಲೇಖಿಸುತ್ತಾರೆ.

ಪಾಂಚಾಳ ಗಂಗ ವಿರಚಿತ ಹಳೆಯ ಕುಮಾರರಾಮನ ಸಾಂಗತ್ಯವು ಒಟ್ಟು ಹತ್ತು ಸಂಧಿಗಳನ್ನು ಹೊಂದಿದ್ದು, 1757 ಪದ್ಯಗಳನ್ನೊಳಗೊಂಡಿದೆ. ಹೊಸಮಲೆದುರ್ಗದ ವರ್ಣನೆ, ಕುಮ್ಮಟದುರ್ಗದ ವರ್ಣನೆ, ಬಹಾದೂರನು ಕುಮ್ಮಟಕ್ಕೆ ಬಂದದ್ದು, ನೇಮಿ ಕಾಳಗ, ಓರಗಲ್ಲು ಯುದ್ಧ, ಚೆಂಡಿನಾಟ-ರತ್ನಾಜಿಯ ವ್ಯಾಮೋಹ, ನೆಲಮಾಳಿಗೆಯಲ್ಲಿ ಕುಮಾರರಾಮ, ನೇಮಿಯ ಸೋಲು, ಮಾದಗಿತ್ತಿ ಕಾಳಗ, ತೆಲುಗರ ಸಂಚು- ರಾಮನ ಮರಣ ಇವೇ ಆ ಹತ್ತು ಸಂಧಿಗಳಿಂದ ಪ್ರಸ್ತುತ ಕಾವ್ಯ ಸಹೃದಯರನ್ನು ಆಕರ್ಷಿಸುತ್ತದೆ.

ಮೊದಲ ಸಂಧಿಯಲ್ಲಿ ಕವಿ ಇಷ್ಟದೈವ ಸ್ತುತಿಯ ಮೂಲಕ ಕಾವ್ಯವನ್ನು ಆರಂಭಿಸುತ್ತಾನೆ. ನಂತರ ಕುಮಾರರಾಮನ ಅಜ್ಜನಾದ ಮುಮ್ಮಡಿ ಸಿಂಗಯ್ಯನು ಕಟ್ಟಿದ ಹೊಸಮಲೆದುರ್ಗದ ವರ್ಣನೆ ಬರುತ್ತದೆ. ಹೊಸಮಲೆದುರ್ಗಕ್ಕೆ ಇರುವ ಐತಿಹ್ಯ ಕಾವ್ಯದಲ್ಲಿ ಪ್ರಸ್ತಾಪಿಸುತ್ತಾನೆ. ಲೋಕದ ಎಪ್ಪತ್ತಾರು ನದಿಗಳಲ್ಲಿ ಶ್ರೇಷ್ಟವಾದ ತುಂಗಭದ್ರ ನದಿ ದಂಡೆಯ ಮೇಲೆ ರಾಜವಾಳುತ್ತಿರುವ ಮುಮ್ಮಡಿ ಸಿಂಗೇನಾಯಕನು ಒಮ್ಮೆ ಬೇಟೆಯಾಡಲು ಹೊಸಮಲೆದುರ್ಗಕ್ಕೆ ಹೋಗುತ್ತಾನೆ. ಅಲ್ಲಿ ಆತನ ನಾಯಿ ಮೊಲವನ್ನು ಬೆನ್ನಟ್ಟುವಷ್ಟರಲ್ಲಿ ಮೊಲವೇ ನಾಯಿಯನ್ನು ಬೆನ್ನಟ್ಟಿದ ಪ್ರಸಂಗವನ್ನು ನೋಡಿ, ಇದು ಕಲಿಭೂಮಿ ಎಂದು ಭಾವಿಸಿ ಅಲ್ಲಿಯೇ ಸಾಮ್ರಾಜ್ಯಸ್ಥಾಪನೆ ಮಾಡಿ ಸುಸ್ಥಿರವಾದ ಕೋಟೆ ನಿರ್ಮಾಣ ಮಾಡಿ, ಕುರಿಗಳನ್ನು ಬಲಿಕೊಟ್ಟು ಪಟ್ಟಣವೊಂದನ್ನು ಸ್ಥಾಪನೆ ಮಾಡಿದ. ಅರಮನೆ, ಚಿನಿವಾರ ಅಂಗಡಿ, ಪರಿಮಳದಂಗಡಿ, ಪಟ್ಟೆಸಾಲೆ, ಮಂತ್ರಿಮಾನ್ಯರ ವೈಭವದ ಮನೆಗಳು, ಗರಡಿಮನೆ, ಚಾವಡಿ, ಸೂಳೆಗೇರಿಯಲ್ಲಿ ಅಪ್ಸರೆಯರಿಂದ ಹೊಸಮಲೆದುರ್ಗವು ಶೋಭಿಸುತ್ತಿತ್ತು.

ಎರಡನೇ ಸಂಧಿಯಲ್ಲಿ ಮುಮ್ಮಡಿ ಸಿಂಗೇನಾಯಕನ ಮಗನಾದ ಕಂಪಿಲರಾಯನು ಆಳುತ್ತಿರುವ ಕುಮ್ಮಟದುರ್ಗದ ವರ್ಣನೆ ಬರುತ್ತದೆ. ಇಲ್ಲಿ ವಿಭಿನ್ನ ವಸ್ತ್ರಾಭರಣದ ಅಂಗಡಿಗಳು, ಬ್ರಾಹ್ಮಣ, ಮಲ್ಲ, ಮಾಲವರ, ತಳವಾರ-ಭಟ್ಟಗೊಲ್ಲ, ತೆಲುಗರ ಕೇರಿಗಳಿದ್ದವು. ಟಗರಿನ ಕಾಳಗ, ಕಬ್ಬಿನ ಜೂಜು, ಲೆತ್ತ, ಪಗಡೆ, ಚದುರಂಗಗಳಲ್ಲಿ ಪಳಗಿದವರು ಅಲ್ಲಿದ್ದರು. ವಿಸ್ತಾರವಾದ ಸೂಳೆಗೇರಿಯಲ್ಲಿ ಪದ್ಮಿನಿ, ಚಿತ್ತಿನಿ, ಶಂಕಿನಿ, ಹಸ್ತಿನಿ ಜಾತಿಯ ಸ್ತ್ರೀಯರಿದ್ದರು. ಕಂಪಿಲನ ಅರಮನೆಯು ನಾಟಕಸಾಲೆ, ಛಾವಡಿಗಳಿದ್ದವು. ಮಂತ್ರಿಮಾನ್ಯರ ಮಧ್ಯದಲ್ಲಿ ಕಂಪಿಲರಾಯ ಕುಳಿತಾಗ ಅಷ್ಟದಿಕ್ಕುಗಳಿಂದಲೂ ರಾಜರುಗಳು ಇವನಿಗೆ ಕಪ್ಪ ಕಾಣಿಕೆಗಳನ್ನು ಸಲ್ಲಿಸುತ್ತಿದ್ದರು. ಇಂತಹ ಕಂಪಿಲರಾಯನಿಗೆ ಹರಿಯಾಲದೇವಿ ಮತ್ತು ರತ್ನಾಜಿಯೆಂಬ ರಾಣಿಯರು ಹಾಗೂ ಕುಮಾರರಾಮನೊಡಗೂಡಿ ಐದು ಜನ ಮಕ್ಕಳಿದ್ದರು.

ಮೂರನೇ ಸಂಧಿಯಲ್ಲಿ ಕಂಪಿಲರಾಯನ ಸಮಕಾಲೀನರಾದ ಉತ್ತರದ ದೆಹಲಿ ಸುಲ್ತಾನರ ಓಲಗದ ಪ್ರಸ್ತಾಪ ಬರುತ್ತದೆ. ಕಂಪಿಲರಾಯನ ಸಾಮ್ರಾಜ್ಯ ಬೆಳವಣಿಗೆ ಸಹಿಸಿಕೊಳ್ಳದೆ ಸುರಿತಾಳ ಮತ್ತು ನೇಮಿಖಾನನು ಒಳಸಂಚು ಮಾಡಿ ಕುಮ್ಮಟದುರ್ಗದ ಮೇಲೆ ಆಕ್ರಮಣ ಮಾಡುವ ಪ್ರಯತ್ನ ಮಾಡುವುದರ ಸಂದರ್ಭವಿದೆ.

ನಾಲ್ಕನೇ ಸಂಧಿಯು ನೇಮಿ ಕಾಳಗವನ್ನು ಕುರಿತುದಾಗಿದೆ. ನೇಮಿಖಾನನು ಕುಮ್ಮಟದುರ್ಗದ ಮೇಲೆ ಆಕ್ರಮಣ ಮಾಡುತ್ತಾನೆ. ಬೇಹಿನವರ ಮೂಲಕ ಈ ವಿಷಯ ಕಂಪಿಲನಿಗೆ ತಿಳಿದಾಗ ತನ್ನ ಹಿರಿಮಗನಿಗೆ (ಕಾಟಣ್ಣ) ಯುದ್ಧ ಜಯಿಸುವುದರ ಸೂಚನೆ ನೀಡುತ್ತಾನೆ. ಅದರಂತೆ ಕಾಟಣ್ಣನು ಹುಲ್ಲು ಮಾರುವವನ ವೇಷದ ಮೂಲಕ ಹೋಗಿ ನೇಮಿಖಾನನನ್ನು ಭೇಟಿಯಾಗಿ ರಾಮನಾಥನನ್ನು ಸೋಲಿಸುವುದಾಗಿ ಮಾತುಕೊಟ್ಟು ನಂಬಿಸಿ ಅವರಿಂದ ಐವತ್ತು ಕುದುರೆಗಳನ್ನು ಪಡೆದು, ಕೊನೆಗೆ ಅವರನ್ನೇ ಸೋಲಿಸಿದನು. ಇದು ರಾಮಯ್ಯನಿಗೆ ಮನಃಸಂತೋಷಪಡಿಸಿತು.

ಐದನೇ ಸಂಧಿಯು ಓರಗಲ್ಲು ಯುದ್ಧದ ಕುರಿತಾಗಿದೆ.  ಗುತ್ತಿಯ ಜಗತಾಪಿಯನ್ನು ಸೋಲಿಸಿ ರಾಮಯ್ಯನು ಸುಖವಾಗಿರುವಾಗ ಕಂಪಿಲರಾಯನ ಐವರು ಮಕ್ಕಳು ತಮ್ಮ ಕುದುರೆಗಳನ್ನು ಕುಮಾರರಾಮ ಕಸಿದುಕೊಂಡನೆಂದು ಚಾಡಿ ಹೇಳುತ್ತಾರೆ. ಆಗ ಕಂಪಿಲರಾಯ ಮಗ ಕುಮಾರರಾಮನನ್ನು ಕರೆಯಿಸಿ ಅವನಿಂದ ಕುದುರೆಗಳನ್ನು ಪಡೆದು ತನ್ನೆಲ್ಲಾ ಮಕ್ಕಳಿಗೆ ಕೊಡಿಸುತ್ತಾನೆ. ಆಗ ಕುಮಾರರಾಮ “ನಾನು ಗೆದ್ದು ತಂದ ಕುದುರೆಗಳನ್ನು ಇವರಿಗೆ ಕೊಡಿಸಿದೆ. ಗೆದ್ದು ತರಲಿಕ್ಕಾಗದ ಇವರು ಹೆಣ್ಣುಗಳಿಗೆ ಸಮಾನರೆಂದು ಹಂಗಿಸುತ್ತಾನೆ”. ಅಲ್ಲದೇ ಮತ್ತೆ ನಾನು ಎಪ್ಪತ್ತಿರಾಜನ ಬೊಲ್ಲ ಕುದುರೆಯನ್ನೇ ಗೆದ್ದು ತರುತ್ತೇನೆಂದು ತಾಯಿ ಹರಿಯಾಲದೇವಿಯ ಆಶೀರ್ವಾದ ಪಡೆದು ಓರಗಲ್ಲಿನ ಮೇಲೆ ಯುದ್ಧಕ್ಕೆ ಹೊರಡುತ್ತಾನೆ. ತೆಕ್ಕಲಕೋಟೆ, ಆದವಾನಿ ಮೂಲಕ ಪಾತಾಳಗಂಗೆಗೆ ಬಂದು ಅಲ್ಲಿರುವ ಗುಂಡಬ್ರಹ್ಮಯ್ಯನ ದೇವಾಲಯಕ್ಕೆ, “ತಂದೆಯೊಂದಿಗೆ ಜಗಳವಾಡಿ ಬಂದ ನನಗೆ ನೀವೇ ಗತಿ. ಎಪ್ಪತಿರಾಜನ ಬೊಲ್ಲ ಕೈವಶವಾದರೆ ಶೂಲದ ಹಬ್ಬ ಆಚರಿಸುವೆನೆಂದು ಬೇಡಿಕೊಳ್ಳುತ್ತಾನೆ. ಅದರಂತೆ ಕನಸಿನಲ್ಲಿ ಗುಂಡಬ್ರಹ್ಮಯ್ಯ ವರವನ್ನು ದಯಪಾಲಿಸುತ್ತಾನೆ”. ನಂತರ ಪ್ರತಾಪರುದ್ರನ ಬೇಹು ಲಿಂಗನ ಬಳಿಹೋಗಿ ತಾನು ಬಂದ ಕಾರಣ ಹೇಳುತ್ತಾನೆ. ಪ್ರತಾಪರುದ್ರನ ಓಲಗದಲ್ಲಿ ಕುಮಾರರಾಮನ ಸೈನಿಕರು ಕುಮಾರರಾಮನ ಕುರಿತು ಹೊಗಳಿಕೆಯ ಮಾತುಗಳನ್ನಾಡುತ್ತಾರೆ, ಜಯಗೋಷ ಕೂಗುತ್ತಾರೆ. ಅನ್ಯರಾಜನೊಬ್ಬನ ಜಯಘೋಷ ತನ್ನ ಓಲಗದಲ್ಲಿ ಸಹಿಸಿಕೊಳ್ಳಲಾಗದ ಪ್ರತಾಪರುದ್ರನು ಲಿಂಗನ ಮೂಲಕ ಈತ ಜಯಘೋಷ, ಬಿರುದಾವಳಿಗಳನ್ನು ಬಿಟ್ಟರೆ ಮಾತ್ರ ತಾನು ಸಹಾಯ ಮಾಡುವುದಾಗಿ ಹೇಳುತ್ತಾನೆ. ತತ್‍ಕ್ಷಣಕ್ಕೆ ಲಿಂಗನೂ ಕೂಡಾ ಕುಮಾರರಾಮನ ಪರ ಮಾತನಾಡುತ್ತಾನೆ. ಆಗ ಪ್ರತಾಪರುದ್ರ ಇಬ್ಬರನ್ನು ನಿಂದಿಸುತ್ತಾನೆ. ಕೋಪಗೊಂಡ ಇಬ್ಬರೂ ಪ್ರತಾಪರುದ್ರನ ಮೇಲೆ ಆಕ್ರಮಣ ಮಾಡಿದಾಗ ಪ್ರತಾಪರುದ್ರನ ಮಗನಾಗ ಎಪ್ಪತಿರಾಜ ಬೊಲ್ಲನನ್ನೇರಿ ಯುದ್ಧಕ್ಕೆ ಬರುತ್ತಾನೆ. ಲಿಂಗನು ವಿಷಘಳಿಗೆಯಲ್ಲಿ ಹುಟ್ಟಿದ ಆ ಬೊಲ್ಲದ ಹಿನ್ನೆಲೆಯನ್ನೆಲ್ಲಾ ಕುಮಾರರಾಮನಿಗೆ ಹೇಳಿದನು. ನಂತರ ಎಪ್ಪತಿರಾಜನನ್ನು ಸೋಲಿಸಿ ಬೊಲ್ಲನೇರಿಕೊಂಡು ಕುಮ್ಮಟಕ್ಕೆ ಬಂದ ಕುಮಾರರಾಮನನ್ನು ಕಂಡು ಕಂಪಿಲರಾಯ ಹರ್ಷಗೊಂಡನು. ತಾಯಿ ಹರಿಯಾಲದೇವಿ ರಾಮನಿಗೆ ಆರತಿ ಎತ್ತುತ್ತಾಳೆ.

ಸಂಧಿ ಆರು ಚೆಂಡಾಟ, ರತ್ನಾಜಿಯ ಮೋಹ ಮತ್ತು ಕುಮಾರರಾಮನ ಆದರ್ಶ ವ್ಯಕ್ತಿತ್ವವನ್ನು ದರ್ಶಿಸುತ್ತದೆ. ಕಂಪಿಲರಾಯ ಬೇಟೆಯಾಡಲು ಹೋದಾಗ ರಾಮಯ್ಯನು ಸ್ನೇಹಿತರಾದ ಗುಜ್ಜಮಲ್ಲ, ಸಾಳುವ ತಿಮ್ಮ ಮುಂತಾದವರೊಂದಿಗೆ ಹಂಪಿಯ ಹೊಳೆಗೆ ನೀರಾಟವಾಡಲು ಹೋಗುತ್ತಾನೆ. ಮನೆಗೆ ಬಂದು ಊಟ ಮಾಡಿ, ತೂಗುಮಂಚದಲ್ಲಿ ನಿದ್ರೆ ಮಾಡುವಾಗ ನಿದ್ರೆ ಬಾರದ ಕಾರಣ ಚೆಂಡಾಟವಾಡಲು ನಿರ್ಧರಿಸಿ ಸರ್ವಾಲಂಕೃತಗೊಂಡನು. ಅಲ್ಲದೇ ತಾನಾಡುವ ಚೆಂಡಾಟ ನೋಡಲು ಪಟ್ಟಣದ ಪ್ರಜೆಗಳಿಗೆ ಬರಹೇಳಿದ. ಸೂಳೆ ಹಂಪಾಯಿ, ಬೊಮ್ಮಿ, ವಿರುಪಾಯಿ, ಪೆನುಗೊಂಡೆಯ ಸೋಮಿ, ಓರುಗಲ್ಲ ಯಲ್ಲಾಯಿ ಮುಂತಾದವರೆಲ್ಲ ಬಂದಿದ್ದರು.

ರಾಮಯ್ಯನು ಚೆಂಡು ಬೇಡಲು ತಾಯಿ ಹರಿಯಾಲದೇವಿಯ ಮನೆಗೆ ಹೋಗುತ್ತಾನೆ. ಆಗ ಅವನ ನಡಿಗೆ ನೋಡಿದ ಸ್ತ್ರೀಯರ ಕಾಮಜ್ವರವನ್ನು ಕೆರಳಿಸಿತ್ತು. ಸ್ತ್ರೀಯರ ಕೈಲಿದ್ದ ವೀಳ್ಯ ಆ ಬಿಸಿಗೆ ಒಣಗಿ ಪಡಿಪುಡಿಯಾಗಿತ್ತು. ದಾರಿಯಲ್ಲಿ ಮೂದಿಸೂಳೆಯೊಬ್ಬಳು ಇವನು ಬರುವ ದಾರಿಯಲ್ಲಿ ಒಲಿಯಲೆಂದು ಮಂತ್ರಿಸಿದ ಮಾಣಿಕವನ್ನಿಟ್ಟಳು. ತಾಯಿ ಬಳಿ ಬಂದು ಮುತ್ತಿನ ಚೆಂಡು ಕೇಳಿದಾಗ ಹರಿಯಲದೇವಿ ದಿಗ್ಭ್ರಮೆಗೊಳ್ಳುತ್ತಾಳೆ. ಆಕೆಗೆ ತನ್ನ ಮಗನ ವಿನಾಶದ ಸುಳಿವು ದೊರೆತು ಆತಂಕಕ್ಕೊಳಗಾಗಿ ಕೊಡಲು ನಿರಾಕರಿಸುತ್ತಾಳೆ. ಆದರೂ ಎಲ್ಲರನ್ನು ಕರೆಯಿಸಿ ಆಡಿಯೇ ತೀರುತ್ತೇನೆಂಬ ಇವನ ಹಠಕ್ಕೆ ಸೋತು “ಪರನಾರಿ ಸಹೋದರ” ಎಂಬ ಪ್ರತಿಜ್ಞೆ ಮಾಡಿಸಿಕೊಂಡು ಆತಂಕದಲ್ಲೆ ಚೆಂಡು ಕೊಡುತ್ತಾಳೆ.

ಇತ್ತ ರಾಮಯ್ಯನ ಚಿಕ್ಕಮ್ಮಳಾದ ರತ್ನಾಜಿಯು ಮುದುಕನಾದ ಕಂಪಿಲರಾಯನಿಂದ ದೈಹಿಕ ಸುಖಭೋಗಗಳನ್ನು ಅನುಭವಿಸಲಿಕ್ಕಾಗದೆ ತನ್ನ ಗಂಡನ ಮೊದಲ ಹೆಂಡತಿ ಹರಿಯಾಲದೇವಿಯ ಮಗ (ಅಕ್ಕನ ಮಗ) ರಾಮನ ಸಂಭೋಗದಿಂದ ಒಂದು ಮಗು ಹುಟ್ಟಲಿ ಎಂದು ವಿಭಿನ್ನ ದೇವರುಗಳಿಗೆ ವಿಭಿನ್ನ ರೀತಿಯ ಹರಕೆ ಕಟ್ಟಿಕೊಂಡಿರುತ್ತಾಳೆ. ಕಂಪಿಲರಾಯ ಯಾತಕ್ಕಾಗಿ ಈ ಹರಕೆ ಎಂದು ಕೇಳಿದರೆ ಬೇಟೆಯಲ್ಲಿ ನಿಮಗೆ ಯಶಸ್ಸು ಸಿಗಲೆಂದು ಹೇಳಿ ನಟಿಸುತ್ತಾಳೆ. ಚೆಂಡಾಟದಲ್ಲಿದ್ದ ರಾಮನ ಸೌಂದರ್ಯಕ್ಕೆ ಮೂರ್ಛೆ ಹೋಗುತ್ತಾಳೆ. ಎಚ್ಚೆತ್ತುಕೊಂಡು ಶುಶ್ರೂಷಕಿ ನಾಗಾಯಿಯಲ್ಲಿ “ಪ್ರಾಯದವಳಾದ ನಾನು ಮುಪ್ಪಿನ ಗಂಡನನ್ನು ಕೂಡುವುದಕ್ಕಿಂತ ಸಾಯುವುದೇ ಲೇಸು, ಅದಕ್ಕಾಗಿ ರಾಮನನ್ನು ನನ್ನ ಜೊತೆ ಕೂಡುವಂತೆ ಮಾಡೆಂದು ಒತ್ತಾಯಿಸುತ್ತಾಳೆ.

ರಾಮನು ಚೆಂಡಾಟ ಆಡುತ್ತಾಡುತ್ತಾ ಅದು ರತ್ನಾಜಿಯ ಮನೆ ಮುಂದೆ ಬೀಳುತ್ತದೆ. ಅದನ್ನು ತರಲು ರಾಮಯ್ಯನ ಸಹೋದರ ಕಾಟಣ್ಣ ಬರುತ್ತಾನೆ. ಆಗ ರತ್ನಾಜಿ ಚೆಂಡು ನನ್ನಲ್ಲಿಲ್ಲವೆಂದು ಹುಡುಕಲು ರಾಮನೇ ಬರಲೆಂದು ಹೇಳಿ ಕಳಿಸಿದಾಗ ಚೆಂಡನ್ನು ಹುಡುಕುತ್ತಾ ರಾಮನು ರತ್ನಾಜಿಯ ಮನೆಯನ್ನು ಪ್ರವೇಶಿಸುತ್ತಾನೆ. ಆಗ ಮನೆಯ ಬಾಗಿಲಿನ ಮೇಲಿದ್ದ ಗಿಳಿಯು,

ಬಂದರಾಮನ ಕಂಡು ನುಡಿಯಿತು ಅರಗಿಣಿ

ಚಂದ್ರಲೋಕದ ಚೆನ್ನಿಗನೆ|

ಇಂದು ಕಂಪಿಲರಾಯನ್ನಿಲ್ಲದ ಬಳಿಕಲಿ

ಬಂದವನಾರೆಲೊ ಪಾಪಿ||

ಕಂಪಿಲರಾಯನಿಲ್ಲದ ಈ ಒಂಟಿ ಹೆಣ್ಣಿನ ಮನೆಯನ್ನು ಪ್ರವೇಶ ಮಾಡಬೇಡೆಂದು ಎಚ್ಚರಿಸುತ್ತದೆ. ಆದರೂ ಒಳಗೆ ಹೋದ ಕುಮಾರರಾಮನಿಗೆ ಆಪತ್ತು ಕಾದಿತ್ತು.

ರಾಮ ಕೇಳಲೊ ನಿನ್ನ ಚೆಂಡು ಬೇಕಾದರೆ

ಪ್ರೇಮವ ಪರಿಹರಿಸೆನಗೆ|

ಕಾ[ಮದ] ಕಣ್ಣು ನೆಟ್ಟಿತು ಚಿಕ್ಕಂದು ಕೇಳ್

ಸೋಮಧರನ ಪಾದದಾಣೆ||

ಕಾಮದಾಹದಲ್ಲಿ ಇದ್ದ ರತ್ನಾಜಿಯು ನಿನಗೆ ಚೆಂಡು ಬೇಕಾದರೆ ತನ್ನ ಆಸೆ ಈಡೇರಿಸಲು ವಿನಂತಿಸಿಕೊಳ್ಳುತ್ತಾಳೆ. ಆಗ ರಾಮನು ನೀನು ನನ್ನ ತಾಯಿಯಾಗತಕ್ಕವಳು. ನಿನ್ನೊಂದಿಗೆ ಸರಸ ತಕ್ಕುದಲ್ಲ ಎಂದು ನೂಕುತ್ತಾನೆ. ಆಗ ರತ್ನಾಜಿ ಬ್ರಹ್ಮ ತನ್ನ ಮಗಳನ್ನು ಭೋಗಿಸಿದ, ತಂದೆ ಏರುವ ಪಲ್ಲಕ್ಕಿ ಮಗನು ಏರುವ, ಊರ್ವಶಿಯ ಶಾಪದಿಂದ ಅರ್ಜುನನ ಕೈಗೆ ಬಳೆ ಬಂದ ಅನೇಕ ನಿದರ್ಶನ ಹೇಳಿದಾಗಲೂ ರಾಮ ಆಕೆಯ ದೈಹಿಕ ಆಸೆಯನ್ನು ತಿರಸ್ಕರಿಸುತ್ತಾನೆ. ಆಕೆಯ ಕಾಮ ತೀವ್ರತೆ ಎಷ್ಟಿತ್ತೆಂದರೆ

ಸಾವ ಮದ್ದನಿಕ್ಕಿ ಕೊಲ್ಲಿಸುವೆನು ಕಂಪನ

ಹಾವು ಮೆಕ್ಕೆಯ ಹಾಕಿಸುವೆನು|

ಭುವನದೊಳಗೆ ನಾ ಹೆಂಡತಿ ನೀ ಗಂಡ

ರಾಜಪಟ್ಟವ ಕಟ್ಟಿಸುವೆನು||

ಗಂಡನಾದ ಕಂಪಿಲನನ್ನೆ ಕೊಲ್ಲಿಸುತ್ತೇನೆಂಬ ಆಕೆಯ ಮಾತು ಕಾಮಕ್ಕೂ, ಹಿಂಸೆಗೂ ಇರುವ ಕಡಿಮೆ ಅಂತರವನ್ನು ಧ್ವನಿಸುತ್ತದೆ. ಎಷ್ಟದಾರೂ ನೀ ನನ್ನ ತಾಯಿಯಾಗುವಳೆಂದು ಆಕೆಯನ್ನು ನೂಕಿ ರಾಮ ಅಲ್ಲಿಂದ ಹೊರನಡೆದ. ಇದರಿಂದ ಕುಪಿತಗೊಂಡ ರತ್ನಾಜಿ ಕುಮಾರರಾಮನನ್ನು ಸಾಯಿಸುವೆನೆಂದು ಪ್ರತಿಜ್ಞೆ ಮಾಡುತ್ತಾಳೆ.

ಸಂಧಿ ಏಳರಲ್ಲಿ, ಕಂಪಿಲ ಮನೆಗೆ ಬಂದಾಗ ಹುಚ್ಚಿಯಂತಾಗಿದ್ದ ರತ್ನಾಜಿಯನ್ನು ಕಂಡ ಕಂಪಿಲ ಕಾರಣ ಕೇಳಲು ರತ್ನಾಜಿಯು ಚೆಂಡಿನ ನೆಪದಲ್ಲಿ ಮನೆ ಪ್ರವೇಶಿಸಿದ ರಾಮನು ತನ್ನ ಸೆರಗ ಸೆಳೆದ, ನನಗೆ ಗಂಡರಿಬ್ಬರಾದರೆಂದು ನಾಟಕೀಯ ಕಣ್ಣೀರಾಕಿದಾಳು. ಇದರಿಂದ ಕೋಪಗೊಂಡ ಕಂಪಿಲ ಬೈಚಪ್ಪನನ್ನು ಕರೆಸಿ ರಾಮನನ್ನು ಕೊಲ್ಲಲು ಆಜ್ಞಾಪಿಸಿದ. ಬೈಚಪ್ಪನಿಗೆ ಸತ್ಯ ತಿಳಿದಿದ್ದರೂ ರಾಜಾಜ್ಞೆಯನ್ನು ವಿರೋಧಿಸುವಂತಿರಲಿಲ್ಲ. ಅದಕ್ಕಾಗಿ ರಾಮನನ್ನು ಕರೆದೊಯ್ದು ನೆಲಮಾಳಿಗೆಯೊಂದರಲ್ಲಿ ಬಚ್ಚಿಟ್ಟು, ಏಳು ತಿಂಗಳಿಗಾಗುವಷ್ಟು ಆಹಾರವನ್ನು ಕೊಟ್ಟನು. ಅದರಂತೆ ಹೊಸಮಲೆಗೆ ಬಂದು ಕಳ್ಳರಾಮನಿಗೆ ವಿಷಯ ತಿಳಿಸಿದಾಗ ಅವನು ಕುಮಾರರಾಮನ ಬದಲಿಗೆ ನನ್ನ ರುಂಡ ಕತ್ತರಿಸಿ ತೋರಿಸೆಂದು ಹೇಳಿದ. ಕಳ್ಳರಾಮನ ಮೀಸೆ, ಹುಬ್ಬು, ಗದ್ದಗಳನ್ನು ರಾಮನಂತೆ ತಿದ್ದಿಸಿ ಅವನ ರುಂಡವನ್ನು ಚಿನ್ನದ ತಟ್ಟೆಯಲ್ಲಿ ತಂದು ತೋರಿಸಲಾಯಿತು. ಕಂಪಿಲನಿಗೆ ಮಗನ ರುಂಡ ನೋಡಿ ದುಃಖವಾದರೆ ಮಲತಾಯಿಯಾದ ರತ್ನಾಜಿಯು ಅವನ ರುಂಡವನ್ನು ಕಾಲಿನ ಕೆಳಗೆ ಇಟ್ಟು ಸಂಭ್ರಮಿಸಿ ಕೋಪ ತೀರಿಸಿಕೊಳ್ಳುತ್ತಾಳೆ. ಈ ಸುದ್ಧಿ ತಿಳಿದ ರಾಮನ ಐವರು ಹೆಂಡತಿಯರೂ ಸತಿ ಹೋಗಬೇಕಿತ್ತು. ಅತೀ ದುಃಖದಿಂದ ರಾಜಪರಿವಾರದವರು ಸತಿ ಹೋಗುವ ರಾಮನ ರಾಣಿಯರನ್ನು ಸಿಂಗರಿಸಿ ಬೀಳ್ಕೊಟ್ಟರು. ಕೆರೆಯ ಬಾಗಿನದಲ್ಲಿ ಏಳು ಜನ್ಮದಲ್ಲಿ ರಾಮನೇ ತಮ್ಮ ಗಂಡನಾಗಲೆಂದು ಬೇಡಿ, ಕೊಂಡಕ್ಕೆ ಕೈ ಮುಗಿದು ಎಣ್ಣೆಯಲ್ಲಿ ತಮ್ಮ ಗಂಡನ ಪ್ರತಿರೂಪ ನೋಡಲು ಹೋದಾಗ ಅದರಲ್ಲಿ ರಾಮನ ಪ್ರತಿರೂಪ ಕಾಣಿಸುವುದಿಲ್ಲ. ಆಗ ಅವರಿಗೆ ತಮ್ಮ ಗಂಡ ಸತ್ತಿಲ್ಲವೆಂದು ತಿಳಿಯುತ್ತದೆ. ಬೈಚ್ಚಪ್ಪನ ಬಳಿ ಸತ್ಯ ಕೇಳಿದಾಗ ಅವನು ಈ ಐದು ಜನ ರಾಣಿಯರನ್ನು ರಾಮನೊಡನೆ ನೆಲಮಾಳಿಗೆಗೆ ಕಳಿಸುತ್ತಾನೆ.

ಸಂಧಿ ಎಂಟರಲ್ಲಿ, ರಾಮ ಸತ್ತ ಸುದ್ದಿ ತಿಳಿದ ಸುರಿತಾಳನು, ನೇಮಿಖಾನನು ಮತ್ತೆ ಕುಮ್ಮಟದ ಮೇಲೆ ದಾಳಿ ಮಾಡುತ್ತಾರೆ. ಆಗ ಕಂಪಿಲನಿಗೆ ಭಯ ಉಂಟಾಗುತ್ತದೆ. ಅವನು ಬೈಚಪ್ಪನನ್ನು ಕರೆದು ನೀನು ರಾಣಿಯರೊಂದಿಗೆ ಹೊಸಮಲೆದುರ್ಗಕ್ಕೆ ಹೋಗು ನಾನು ಕಾದುತ್ತೇನೆ ಎಂದು ಹೇಳುತ್ತಾನೆ. ಬೈಚಪ್ಪ ನೀನು ಒಪ್ಪುವುದಾದರೆ ರಾಮನಿಗೂ ಇಮ್ಮಡಿ ಪರಾಕ್ರಮಿಯೊಬ್ಬನಿದ್ದಾನೆ ಅವನನ್ನು ಕರೆಸುತ್ತೇನೆಂದು ಹೇಳುತ್ತಾನೆ. ಕಂಪಿಲನ ಒಪ್ಪಿಗೆ ಪಡೆದು ನೆಲಮಾಳಿಗೆ ತೆಗೆದು ರಾಮನಿಗೆ ವಿಷಯ ತಿಳಿಸುತ್ತಾನೆ. ಮತ್ತೆ ರಾಮನು ಬೊಲ್ಲನನ್ನೇರಿ ಯುದ್ಧ ಮಾಡಿ ನೇಮಿಯನ್ನು ಸೋಲಿಸಿ ಕಳಿಸುತ್ತಾನೆ. ಆಗ ಇವನನ್ನು ನೋಡಿದ ಕಂಪಿಲರಾಯನಿಗೆ ತನ್ನ ತಪ್ಪಿನ ಅರಿವು ಅದಕ್ಕೆ ಕಾರಣ ರತ್ನಾಜಿ ಎಂಬ ಸತ್ಯ ತಿಳಿಯುತ್ತದೆ. ಕಂಪಿಲನಿಗೆ ಈ ಸತ್ಯ ತಿಳಿದಿದೆಯೆಂದು ಗೊತ್ತಾದಾಗ ರತ್ನಾಜಿ ನೇಣು ಬಿಗಿದುಕೊಂಡು ಸಾಯುತ್ತಾಳೆ. ರಾಮಯ್ಯ ಆಕೆಯ ಶವವನ್ನು ಹೂಳಿಸುತ್ತಾನೆ.

ಸಂಧಿ ಒಂಭತ್ತರಲ್ಲಿ, ರಾಮನು ಕುಮ್ಮಟದಲ್ಲಿ ತುರುಕರನ್ನು ಕೊಂದ ಸುದ್ದಿ ತಿಳಿಯಿತು. ಬೈಚಪ್ಪನ ಬುದ್ಧಿವಂತಿಕೆ ಸುಲ್ತಾನನಿಗೂ ಮತ್ತು ಕುಮ್ಮಟದವರಿಗೆಲ್ಲರಿಗೂ ಹಿಡಿಸಿತು. ಕುಮ್ಮಟದ ಮೇಲೆ ಆಕ್ರಮಣ ಮಾಡಿ ಗೆಲ್ಲಲು ಸಾಧ್ಯವಿಲ್ಲವೆಂದು ಅರಿತ ಸುರಿತಾಳನು ಮೋಸದಿಂದ ಗೆಲ್ಲುವುದಕ್ಕಾಗಿ ಮಾದಿಗಿತ್ತಿಯನ್ನು ಕರೆಸಿದ. ಮಾದಿಗಿತ್ತಿ ಕುಮ್ಮಟದ ಮೇಲೆ ದಾಳಿ ಮಾಡಿದಾಗ ಬೇಡರ ಸೈನ್ಯ ಎಲ್ಲಾ ತಯಾರಿ ಮಾಡಿಕೊಂಡು ಅವರನ್ನು ಹಿಮ್ಮೆಟಿಸಿತು. ಮಾದಿಗಿತ್ತಿಯ ಸೈನ್ಯ ಹಿಂದೆ ಸರಿದು ಚಿಂತಿಸಿತು.

ಸಂಧಿ ಹತ್ತರಲ್ಲಿ, ಮಾದಿಗಿತ್ತಿಯನ್ನು ನಂಬಿ ಬಂದು ಕೆಟ್ಟೆವು ಎಂದು ಜಲ್ಲಾರಿಖಾನ ಹೇಳುತ್ತಾನೆ. ಅವರಿಗೆ ಸೋಲು ಖಚಿತ ಎನಿಸುತ್ತಿರುವಾಗಲೇ ಪಕ್ಷದೊಳಗಿನ ಶತ್ರುಗಳೆಂಬಂತೆ ಕುಮಾರರಾಮನ ಸೈನ್ಯದಲ್ಲಿದ್ದ ತೆಲುಗರು ತಮಗೆ ಸೂಕ್ತ ಸ್ಥಾನಮಾನ ಸಿಗಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಗುಪ್ತ ಸಭೆ ಸೇರಿ ಮಾದಿಗಿತ್ತಿಗೆ ಪತ್ರ ಬರೆದು, ನಾವು ಕೋಟೆ ಬಾಗಿಲು ತೆರೆದು ನಿಮ್ಮ ಆಕ್ರಮಣಕ್ಕೆ ಸಹಕರಿಸುತ್ತೇವೆ ಬನ್ನಿ ಎಂದು ವಿನಂತಿಸುತ್ತಾರೆ. ಅದರಂತೆ ಮಾದಿಗಿತ್ತಿ ಆಕ್ರಮಣ ಮಾಡಿದಾಗ ಕುಮಾರರಾಮ ಆಕೆಯ ಎದುರುಗೊಂಡು ಹೆಣ್ಣಿನ ವಿರುದ್ಧ ಯುದ್ಧವೆ? ಎಂದು ಸುಮ್ಮನಾಗುತ್ತಾನೆ. ಈ ಸಮಯ ಉಪಯೋಗಿಸಿಕೊಂಡ ಮಾದಿಗಿತ್ತಿ ಕುಮಾರರಾಮನ ಶಿರಚ್ಛೇದನ ಮಾಡುತ್ತಾಳೆ. ಅವನ ರುಂಡವನ್ನು ದಿಲ್ಲಿಗೆ ಕಳಿಸಲಾಗುತ್ತದೆ. ಆದರೆ ಅಲ್ಲಿಯ ಶಾಸ್ತ್ರಿಗಳಿಂದ ಈ ರುಂಡವು ಮುಂಡದ ಜೊತೆಗೆ ಮೋಕ್ಷ ಹೊಂದಬೇಕು ಪುನಃ ಅಲ್ಲಿಗೆ ಕಳಿಸಿರೆಂದಾಗ ಮತ್ತೇ ಅದನ್ನು ಕುಮ್ಮಟಕ್ಕೆ ಕಳಿಸಿಕೊಡಲಾಯಿತು. ಹೀಗೆ ಕುಮಾರರಾಮನ ಬದುಕು ತನ್ನ ಶೌರ್ಯ, ಪರಾಕ್ರಮ, ಆದರ್ಶ ಗುಣಗಳಿಂದ ಇಂದಿಗೂ ಜೀವಂತವಾಗಿ ಕಾವ್ಯಗಳಲ್ಲಿ ಮತ್ತು ಜನಪದರ ನಾಲಿಗೆಯ ಮೇಲಿದೆ.

ಪ್ರಸ್ತುತ ಕಾವ್ಯದಲ್ಲಿ ಬರುವ ಕೆಲವು ವಿಷಯಗಳಲ್ಲಿನ ವಾಸ್ತವತೆ ಕುರಿತು ಇನ್ನೂ ಚರ್ಚೆಯ ಅಗತ್ಯವಿದ್ದು. ಕವಿಯಾದವನು ಕಾವ್ಯದ ಸ್ವಾರಸ್ಯವನ್ನು ತನ್ನ ಪ್ರತಿಭೆಯಿಂದ ಹೆಚ್ಚಿಸಿದ್ದಾನೆ.

*ಗಂಗಾವತಿಯ ಸಂಕಲ್ಪ ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರು.

Leave a Reply

Your email address will not be published.