ಪಾಕಿಸ್ತಾನ ಅತ್ತ ದರಿ ಇತ್ತ ಪುಲಿ

ಪ್ರಧಾನಿ ಮೋದಿ ಸಾರ್ವಜನಿಕ ಸಮಾವೇಶವೊಂದರಲ್ಲಿ ‘ಅಭಿನಂದನ್ ವಿಷಯದಲ್ಲಿ ಏನಾಯಿತೆಂದು ನಾನು ಮತ್ತೆ ಹೇಳಬೇಕಾಗಿಲ್ಲ’, ಎಂದು ಎದೆಯುಬ್ಬಿಸಿ ಹೇಳುತ್ತಾರೆ. ಭಾರತ ಹಾಗೂ ಮೋದಿಗೆ ಹೆದರಿ ಪಾಕಿಸ್ತಾನ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್‍ನನ್ನು ಯಾವುದೇ ವಿಳಂಬವಿಲ್ಲದೇ ಬಿಡುಗಡೆ ಮಾಡಿತೇ?

ಪಾಕಿಸ್ತಾನ ಪುಲ್ವಾಮ ಘಟನೆಯ ನಂತರ ಉಗ್ರಗಾಮಿಗಳ ಮೇಲೆ ತೋರ್ಪಡಿಕೆಗಾದರೂ (ಅನಿವಾರ್ಯವೂ ಆಗಿದೆ) ತೆಗೆದುಕೊಳ್ಳುತ್ತಿರುವ ಕಠಿಣ ಕ್ರಮಗಳು ಆ ದೇಶದ ಸದ್ಯದ ಸಂದಿಗ್ಧತೆಯನ್ನು ತೋರಿಸುತ್ತದೆ. ಇದುವರೆಗೆ ಉಗ್ರಗಾಮಿಗಳನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸಿರುವ ಪಾಕಿಸ್ತಾನಕ್ಕೆ ಈ ನಂಟು ಹುಲಿ ಸವಾರಿ ಮಾಡಲು ಹೊರಟಂತಾಗಿದೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಈಗಾಗಲೇ ಅಂತಾರಾಷ್ಟ್ರೀಯ ಒತ್ತಡದಲ್ಲಿ ಹಾಗೂ ‘ಗ್ರೇ’ ಪಟ್ಟಿಯಲ್ಲಿರುವ ಪಾಕಿಸ್ತಾನಕ್ಕೆ ತಾನು ತನ್ನ ನೆಲದಲ್ಲಿ ಹುಟ್ಟಿ ಹೆಮ್ಮರವಾಗಿರುವ ಭಯೋತ್ಪಾದನೆಯ ವಿರುದ್ಧ ತೆಗೆದುಕೊಳ್ಳಬೇಕಾಗಿರುವ ಕ್ರಮ ಕುರಿತಂತೆ ಇಬ್ಬಂದಿತನವಿದೆ. 2008ರಲ್ಲಿ ಮುಂಬೈಯಲ್ಲಿ ನಡೆದ 9/11 ದಾಳಿಯ ನಂತರ ಅಂತಾರಾಷ್ಟ್ರೀಯ ಸಮುದಾಯವು ಜಿಹಾದಿ ಗುಂಪುಗಳ ಮೇಲೆ ಕ್ರಮ ತೆಗೆದುಕೊಳ್ಳಲು ಒತ್ತಡ ಹೇರಿದ್ದರ ಫಲವಾಗಿ ಪಾಕಿಸ್ತಾನ ಜೈಶ್-ಇ-ಮೊಹಮ್ಮದ್ ಹಾಗೂ ಲಷ್ಕರ್-ಇ-ತಾಇಬ ಗುಂಪುಗಳನ್ನು ನಿಷೇಧಿಸುತ್ತದೆ. ಆದರೆ ಮುಂಬೈ ದಾಳಿಯ ಹಿಂದಿನ ರೂವಾರಿ ಝೆಕಿಉರ್ ರೆಹಮಾನ್ ಲಖ್ವಿ 2015ರಲ್ಲಿ ಜಾಮೀನು ಪಡೆಯುತ್ತಾನೆ. ನಿಷೇಧದ ನಂತರದ ದಿನಗಳಲ್ಲಿ ಲಷ್ಕರ್-ಇ-ತಾಇಬ ಗುಂಪು ಜಮಾತ್-ಉದ್-ದಾವ ಗುಂಪಿನ ಹೆಸರಿನಲ್ಲಿ ತನ್ನ ಚಟುವಟಿಕೆಗಳನ್ನು ಮುಂದುವರೆಸುತ್ತದೆ.

ಅಂತಾರಾಷ್ಟ್ರೀಯ ಒತ್ತಡಗಳಿಂದ ಪಾಕಿಸ್ತಾನ ತೆಗೆದುಕೊಂಡ ಕ್ರಮಗಳ ಪರಿಣಾಮವಾಗಿ ಈಗ ಪಾಕಿಸ್ತಾನದಲ್ಲಿ ಉಗ್ರಗಾಮಿಗಳ ಗುಂಪುಗಳು ಪಾಕಿಸ್ತಾನ-ಪರ ಹಾಗೂ ಪಾಕಿಸ್ತಾನ-ವಿರೋಧಿ ಎಂಬ ಎರಡು ಬಣಗಳಾಗಿ ಮಾರ್ಪಟ್ಟಿವೆ. ಪಾಕಿಸ್ತಾನ-ವಿರೋಧಿ ಬಣಗಳು ಪಾಕಿಸ್ತಾನದ ಭದ್ರತಾ ಪಡೆಗಳು ಹಾಗೂ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಸಹಸ್ರಾರು ಜನರನ್ನು ಹತ್ಯೆ ಮಾಡಿದ್ದರೆ ಪಾಕಿಸ್ತಾನ-ಪರ ಉಗ್ರಗಾಮಿ ಗುಂಪುಗಳು ಆಫ್ಘಾನಿಸ್ತಾನದಲ್ಲಿ ಅಮೆರಿಕ ಪಡೆಗಳ ವಿರುದ್ಧ ಹಾಗೂ ಕಾಶ್ಮೀರದಲ್ಲಿ ಭಾರತೀಯ ಪಡೆಗಳ ವಿರುದ್ಧ ತಮ್ಮ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರೆಸಿವೆ.

ಜಮಾತ್-ಉದ್-ದಾವ ಹಾಗೂ ಜೈಶ್-ಇ-ಮೊಹಮ್ಮದ್‍ನ ನಾಯಕರು ಪಾಕಿಸ್ತಾನದ ಪರವಿದ್ದರೂ, ಜೆ-ಇ-ಎಮ್‍ನಲ್ಲಿದ್ದ ಹಲವಾರು ಉಗ್ರಗಾಮಿಗಳು ಪಾಕಿಸ್ತಾನದ ವಿರುದ್ಧದ ಬಣಗಳಲ್ಲಿ ಗುರುತಿಸಿಕೊಂಡಿದ್ದು ಪಾಕಿಸ್ತಾನದ ವಿರುದ್ಧ ಜಿಹಾದ್ ಸಾರಿದ್ದಾರೆ. ಈ ಪಾಕ್-ವಿರೋಧಿ ಬಣಗಳ ಪ್ರಾಬಲ್ಯವನ್ನು ತಗ್ಗಿಸುವಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳು ಇತ್ತೀಚೆಗಿನ ವರ್ಷಗಳಲ್ಲಿ ಬಹಳ ಮಟ್ಟಿಗೆ ಯಶಸ್ವಿಯಾಗಿವೆ. ಪಾಕಿಸ್ತಾನ ಇನ್ಸ್ಟಿಟ್ಯೂಟ್ ಫಾರ್ ಪೀಸ್ ಸ್ಟಡೀಸ್ ಸಂಸ್ಥೆಯ ಪ್ರಕಾರ ಪಾಕಿಸ್ತಾನದಲ್ಲಿ ಭಯೋತ್ಪಾದಕರ ದಾಳಿಯಲ್ಲಿ 2013ರಲ್ಲಿ 2,500 ಜನರು ಕೊಲ್ಲಲ್ಪಟ್ಟಿದ್ದರೆ, 2018ರಲ್ಲಿ ಈ ಸಂಖ್ಯೆ 595ಕ್ಕೆ ಇಳಿದಿದೆ. ಈಗ ಪಾಕಿಸ್ತಾನದ ಮುಂದಿರುವ ಸವಾಲು ಪಾಕಿಸ್ತಾನ-ಪರ ಉಗ್ರಗಾಮಿಗಳನ್ನು ಏನು ಮಾಡುವುದು ಎಂಬುದಾಗಿದೆ.

ಪಾಕಿಸ್ತಾನದ ಹಲವಾರು ಮದರಸಗಳಲ್ಲಿ ಯುವಕರನ್ನು ತೀವ್ರಗಾಮಿಗಳನ್ನಾಗಿ ಮಾಡುವ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಈಗ ಸರ್ಕಾರಿ ಅಧಿಕಾರಿಗಳು ಈ ಮದರಸಗಳನ್ನು ನಿಯಮಿತವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಆದರೆ ಮೇಲ್ವಿಚಾರಕರು ಬದಲಾಗಿಲ್ಲ. ಮೊದಲು ದೇಣಿಗೆಗಳಿಂದ ನಡೆಯುತ್ತಿದ್ದ ಈ ಮದರಸಗಳಿಗೆ ಈಗ ಸರ್ಕಾರವೆ ಹಣ ನೀಡುತ್ತಿದೆ.

ಪಾಕಿಸ್ತಾನಿ ಸೈನ್ಯ ಹಾಗೂ ರಾಜಕಾರಣಿಗಳ ಗುಂಪಿನ ನಡುವೆ ನಡೆದ ಇತ್ತೀಚಿನ ರಹಸ್ಯ ಸಭೆಯೊಂದರಲ್ಲಿ ಉಗ್ರಗಾಮಿ ನಾಯಕರು ಉಗ್ರಗಾಮಿಗಳನ್ನು ನಿಯಂತ್ರಿಸುವುದಾಗಿ ಭರವಸೆ ನೀಡಿದರಂತೆ. ಉಗ್ರಗಾಮಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರನ್ನು ಸೈನ್ಯವು ಪೂರ್ಣವಾಗಿ ನಿರ್ನಾಮ ಮಾಡಲು ಸಾಧ್ಯವಿಲ್ಲವೆಂದು, ಆದ್ದರಿಂದ ಅವರಲ್ಲಿ ಹಲವರನ್ನು ಮುಖ್ಯವಾಹಿನಿಗೆ ತರಬೇಕೆಂದು ಉಗ್ರಗಾಮಿ ನಾಯಕರು ಈ ಸಭೆಯಲ್ಲಿ ಸೂಚಿಸಿದರಂತೆ.

ಪಾಕ್ ಬೇರಿನಿಂದ ಹುಟ್ಟಿಕೊಂಡಿರುವ ಉಗ್ರಗಾಮಿಗಳ ಚಟುವಟಿಕೆಗಳು ಪಾಕಿಸ್ತಾನ ಭಾರತದೊಡನೆ ತನ್ನ ಸಂಬಂಧವನ್ನು ಉತ್ತಮಪಡಿಸಿಕೊಳ್ಳಲು ತೊಡಕಾಗಿವೆ. ಇದಕ್ಕಿಂತ ಮುಖ್ಯವಾಗಿ ಈ ಉಗ್ರಗಾಮಿಗಳ ಚಟುವಟಿಕೆಗಳು ಪಾಕಿಸ್ತಾನವನ್ನು ‘ಗ್ರೇ’ ಪಟ್ಟಿಗೆ ನೂಕಿದ್ದು ಇದರಿಂದ ಬಹುರಾಷ್ಟ್ರೀಯ ಕಂಪೆನಿಗಳು ಪಾಕಿಸ್ತಾನದಲ್ಲಿ ಯಾವುದೇ ವ್ಯವಹಾರವನ್ನು ಮಾಡುವ ಮುನ್ನ ಗಂಭೀರವಾಗಿ ಯೋಚಿಸಬೇಕಾದ ಪರಿಸ್ಥಿತಿಯಿದೆ. ತೀವ್ರ ದುರ್ಬಲವಾಗಿರುವ ಪಾಕಿಸ್ತಾನದ ಆರ್ಥಿಕ ವ್ಯವಸ್ಥೆಗೆ ವಿದೇಶಿ ಬಂಡವಾಳದ ಹೆಚ್ಚಿನ ಅವಶ್ಯಕತೆಯಿದೆ.

ಪಾಕಿಸ್ತಾನಿ ಸೈನ್ಯ ಹಾಗೂ ರಾಜಕಾರಣಿಗಳ ಗುಂಪಿನ ನಡುವೆ ನಡೆದ ಇತ್ತೀಚಿನ ರಹಸ್ಯ ಸಭೆಯೊಂದರಲ್ಲಿ ಉಗ್ರಗಾಮಿ ನಾಯಕರು ಉಗ್ರಗಾಮಿಗಳನ್ನು ನಿಯಂತ್ರಿಸುವುದಾಗಿ ಭರವಸೆ ನೀಡಿದರಂತೆ. ಉಗ್ರಗಾಮಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರನ್ನು ಸೈನ್ಯವು ಪೂರ್ಣವಾಗಿ ನಿರ್ನಾಮ ಮಾಡಲು ಸಾಧ್ಯವಿಲ್ಲವೆಂದು, ಆದ್ದರಿಂದ ಅವರಲ್ಲಿ ಹಲವರನ್ನು ಮುಖ್ಯವಾಹಿನಿಗೆ ತರಬೇಕೆಂದು ಉಗ್ರಗಾಮಿ ನಾಯಕರು ಈ ಸಭೆಯಲ್ಲಿ ಸೂಚಿಸಿದರಂತೆ. ಜೊತೆಗೆ ಸರ್ಕಾರ ಉಗ್ರಗಾಮಿಗಳನ್ನು ಸುಧಾರಿಸಲು ಕೇಂದ್ರಗಳನ್ನು ತೆಗೆಯಲು ಹಾಗೂ ಅವರಿಗೆ ಉದ್ಯೋಗಗಳನ್ನು ಒದಗಿಸುವ ಪ್ರಸ್ತಾವನೆಯನ್ನು ನೀಡಿದೆಯೆಂದು ತಿಳಿದುಬಂದಿದೆ.

ಪಾಕಿಸ್ತಾನ ಇತ್ತೀಚೆಗೆ ಭಯೋತ್ಪಾದಕರ ಮೇಲೆ ತೆಗೆದುಕೊಂಡಿರುವ ಕ್ರಮಗಳನ್ನು ಭಾರತ ಗಂಭೀರವಾಗಿ ಪರಿಗಣಿಸಿಲ್ಲ. ಈ ಹಿಂದೆ ಸಹ ಹಲವಾರು ಬಾರಿ ಪಾಕಿಸ್ತಾನ ತೋರಿಕೆಗಾಗಿ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಮಣಿದು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಅವು ನಿರೀಕ್ಷಿತ ಫಲಿತಾಂಶ ಒದಗಿಸಿಲ್ಲ. ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಭಾರತದ ಪ್ರಾಬಲ್ಯ ಹಾಗೂ ಡೊನಾಲ್ಡ್ ಟ್ರಂಪ್ ದಕ್ಷಿಣ ಏಷಿಯಾ ನೀತಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ಹಾಗೂ ಚೈನಾವನ್ನು ಎದುರಿಸಲು ಟ್ರಂಪ್ ಭಾರತವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಪಾಕ್ ಅನ್ನು ಕಟುವಾಗಿ ಟೀಕಿಸುವ ಅಮೆರಿಕಾದ ಕೆಲವು ರಾಜನೀತಿಜ್ಞರು ಅಮೆರಿಕಾ ಪಾಕ್‍ಗೆ ನೀಡಿರುವ ‘ನ್ಯಾಟೋ ಹೊರತುಪಡಿಸಿದ ಮಿತ್ರರಾಷ್ಟ್ರ’ ಸ್ಥಾನವನ್ನು ರದ್ಧುಪಡಿಸಬೇಕೆಂದು ಹಾಗೂ ಪಾಕ್ ಅನ್ನು ಭಯೋತ್ಪಾದನೆಯನ್ನು ಪ್ರಾಯೋಜಿಸುವ ರಾಷ್ಟ್ರವಾಗಿ ಘೋಷಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ‘ಅತ್ತ ದರಿ ಇತ್ತ ಪುಲಿ’ ಎಂಬ ಸನ್ನಿವೇಶದಲ್ಲಿ ಸಿಕ್ಕಿಕೊಂಡಿದೆ.

Leave a Reply

Your email address will not be published.