ಪಾರ್ಲಿಮೆಂಟಲ್ಲಿ ಪ್ರಕೃತಿಗೂ ಜಾಗ!

ನಮ್ಮ ದೇಶದಲ್ಲಿ ನದಿ ಜೋಡಣೆ, ಗಣಿಗಾರಿಕೆಯಂತಹ ಅಭಿವೃದ್ಧಿಯೋಜನೆಗಳ ಬಗ್ಗೆ ನಡೆಯುತ್ತಿರುವ ಸಂವಾದಗಳು ಇನ್ನೂ ಆರ್ಥಿಕ ಲಾಭನಷ್ಟಗಳ ಸುತ್ತ ಗಿರಕಿ ಹೊಡೆಯುತ್ತಿವೆ. ಆದರೆ ಜಗತ್ತಿನಾದ್ಯಂತ ಕೆಲವು ಚಿಂತಕರು, ವಿಜ್ಞಾನಿಗಳು ಮತ್ತು ಮೂಲನಿವಾಸಿಗಳು ಮನುಷ್ಯರ ಆರ್ಥಿಕ ಲಾಭನಷ್ಟಗಳಿಗಷ್ಟೇ ಚರ್ಚೆಯನ್ನ ಸೀಮಿತಗೊಳಿಸದೆ ಪ್ರಕೃತಿಗಿರುವ ಮೂಲಭೂತ ಹಕ್ಕನ್ನೂ ನಾವು ಪರಿಗಣಿಸಬೇಕು ಎನ್ನುತ್ತಿದ್ದಾರೆ.

-ದೀಪಕ್ ಭಟ್ ದುಂಡಿ

ಮಲೆನಾಡಿನಲ್ಲಿ ಗುಡ್ಡಕುಸಿತ, ದೇಶದ ಒಂದುಕಡೆ ಪ್ರವಾಹ ಇನ್ನೊಂದು ಕಡೆ ಬರ, ನೀರಿನ ಬವಣೆ, ಹಿಮಾಲಯದಲ್ಲಿ ಹಿಮನದಿಗಳ ಆಸ್ಫೋಟ, ಉಗ್ರಸ್ವರೂಪಿ ಚಂಡಮಾರುತಗಳು ಮತ್ತು ಜಗತ್ತಿನ ತುಂಬೆಲ್ಲ ವ್ಯಾಪಿಸುತ್ತಿರುವ ಕಾಡ್ಗಿಚ್ಚು ಇಂತಹ ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಕೋಪಗಳ ಪ್ರಮಾಣ ಇತ್ತೀಚಿನ ವರ್ಷಗಲ್ಲಿ ಹೆಚ್ಚಾಗಿರುವುದಂತೂ ನಿಜ. ಇದರ ಜೊತೆಗೆ ಪ್ರತಿ ತಿಂಗಳೂ ವಾತಾವರಣದಲ್ಲಿ ಇಂಗಾಲ ಡೈಆಕ್ಸೈಡ್ ಪ್ರಮಾಣ ಏರುತ್ತಿರುವುದರ ಕುರಿತು, ಜೀವವೈವಿಧ್ಯದ ವಿನಾಶದ ಕುರಿತು ಮತ್ತು ಹೆಚ್ಚು ಕಡಿಮೆ ಪ್ರತಿ ವರ್ಷವೂ  ಭೂಮಿಯ ತಾಪಮಾನ ಕಳೆದ ನೂರಿನ್ನೂರು  ವರ್ಷಗಳ ದಾಖಲೆಯನ್ನ  ಮುರಿಯುತ್ತಿರುವುದರ  ಬಗ್ಗೆ ಹೊಸ ಹೊಸ ಸಂಶೋಧನೆಗಳು ನಮ್ಮನ್ನು ಮತ್ತು ನಮ್ಮ ಸರ್ಕಾರಗಳನ್ನು ಕಳೆದ ಕೆಲವು ವರ್ಷಗಳಿಂದ ಎಚ್ಚರಿಸುತ್ತಿವೆ. ಇವೆಲ್ಲದರ ನಡುವೆ ನಾವಾಗಲೀ ನಮ್ಮ ಸರ್ಕಾರಗಳಾಗಲೀ ನಮ್ಮಲ್ಲಿ ಬಹುತೇಕರನ್ನ ತೀವ್ರವಾಗಿ ಬಾಧಿಸುತ್ತಿರುವ ಪರಿಸರ ಬಿಕ್ಕಟ್ಟನ್ನ ಗಂಭೀರವಾಗಿ ಪರಿಗಣಿಸದೆ ಇರುವುದು ಈ ಕಾಲದ ದುರಂತವೇ ಸರಿ.

ಪರಿಸರ ಸಮಸ್ಯೆಗಳು ಹಿಂದೆಂದಿಗಿಂತಲೂ ಅಧಿಕವಾಗಿ ಈಗೇಕೆ ನಮ್ಮನ್ನ ಬಾಧಿಸುತ್ತಿವೆ ಎಂದು ಯೋಚಿಸುವಾಗ ಪರಿಸರ ತತ್ವಜ್ಞಾನಿ ಇಸಾಬೆಲ್ಲೆ ಸ್ಟೆಂಜರ್ಸ್ ಅವರ ಮಾತು ನೆನಪಾಗುತ್ತದೆ. “ಮನುಷ್ಯರು ತನ್ನ ಮೇಲೆ ನಡೆಸುತ್ತಿರುವ ಅನಾಚಾರ ಮತ್ತು ಮನುಷ್ಯರಿಂದಾಗುತ್ತಿರುವ ಅಪಮಾನದಿಂದಾಗಿ ಭೂತಾಯಿ (Gaia) ಮನುಷ್ಯರ ವಿರುದ್ಧ ತಿರುಗಿ ಬಿದ್ದಿದ್ದಾಳೆ” ಎನ್ನುತ್ತಾರೆ ಅವರು. ಸ್ಟೆಂಜರ್ಸ್ ಅವರ ಮಾತನ್ನ ಕೇಳಿದಾಗ, ಹಾಗಾದರೆ ಭೂಮಿ ಜಡವಲ್ಲವೇ? ಅವಳಿಗೂ ಚೈತನ್ಯವಿದೆಯಾ? ಮನುಷ್ಯರು ತನ್ನ ಮೇಲೆ ನಡಿಸುತ್ತಿರುವ ಆಕ್ರಮಣ ಅವಳ ಅನುಭವಕ್ಕೂ ಬರುತ್ತದೆಯೇ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.

ಮನುಷ್ಯನೇ ಕೇಂದ್ರ

ಹದಿನಾರು ಹದಿನೇಳನೇ ಶತಮಾನದಲ್ಲಿ ಯುರೋಪಿನಲ್ಲಿ ಜ್ಞಾನ ಸ್ಫೋಟವಾದಾಗ ಹುಟ್ಟಿಕೊಂಡ ಜೀವನಕ್ರಮ ಹಾಗೂ ಯೋಚನಾವಿಧಾನಗಳ ಪ್ರಭಾವಕ್ಕೆ ಅಷ್ಟಾಗಿ ತೆರೆದುಕೊಳ್ಳದ ಬಹಳಷ್ಟು ಸಮುದಾಯಗಳಲ್ಲಿ, ಭೂಮಿಯನ್ನ ಚೈತನ್ಯ ರೂಪಿಯಾಗಿ, ತಾಯಿಯಾಗಿ ಮತ್ತು ದೇವತೆಯಾಗಿ ನೋಡುವ ಕ್ರಮ ಇಂದಿಗೂ ಇದೆಯೆಂದು ಬಹಳಷ್ಟು ಮಾನವಶಾಸ್ತ್ರಜ್ಞರು ಗುರುತಿಸುತ್ತಾರೆ. ಆದರೆ ಯೂರೋಪಿನ ಜ್ಞಾನೋದಯದ ನಂತರ ಬಂದ ಜ್ಞಾನಶಾಖೆಗಳು ಭೂಮಿಯನ್ನ ಕೇವಲ ಸಂಪನ್ಮೂಲ ಎಂದು ನೋಡಲು ತೊಡಗಿದವು. ನಮ್ಮ ಚಿಂತನೆಯಲ್ಲಾದ ಈ ಪಲ್ಲಟಕ್ಕೆ ಮುಖ್ಯ ಕಾರಣವೇನೆಂದು ಹುಡುಕಲು ಹೊರಟರೆ ಬಹಳಷ್ಟು ಪರಿಸರ ಇತಿಹಾಸಕಾರರು ಮತ್ತು ತತ್ವಜ್ಞಾನಿಗಳು ಬೆರಳು ತೋರಿಸುವುದು, ಇಡೀ ಭೂಮಿಯಲ್ಲಿ “ಮನುಷ್ಯನೇ ಶ್ರೇಷ್ಠ” ಎಂಬ ಕಲ್ಪನೆಯ ಬಗ್ಗೆ.

ತಮ್ಮ ಜೀವನ ನಿರ್ವಹಣೆಗೆ ಕೃಷಿಯನ್ನ ಅಷ್ಟಾಗಿ ಅವಲಂಬಿಸದೇ ಇದ್ದ, ಭಾರತವೂ ಒಳಗೊಂಡಂತೆ ಜಗತ್ತಿನ ಬಹುತೇಕ ಬುಡಕಟ್ಟು ಜನರು ಅಥವಾ ಮೂಲನಿವಾಸಿಗಳ (ಆಸ್ಟ್ರೇಲಿಯಾ, ಆಫ್ರಿಕಾ, ಅಮೆರಿಕಾ) ಪರಂಪರೆಯಲ್ಲಿ, ಸಂಸ್ಕೃತಿಯಲ್ಲಿ ಈ ನಂಬಿಕೆ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಹಾಗೆಯೇ, ಮನುಷ್ಯ ಕೃಷಿಯನ್ನು ಆರಂಭಿಸಿದಾಗ ಜನ್ಮತಳೆದ ಜಗತ್ತಿನ ಬಹುಪಾಲು ಧರ್ಮಗಳಲ್ಲಿ ಮತ್ತು ಕೆಲವು ಪಂಥಗಳಲ್ಲಿ ಈ ನಂಬಿಕೆ ಕೇವಲ ಸೌಮ್ಯ ಸ್ವರೂಪದಲ್ಲಿ ಮಾತ್ರ ಇತ್ತು ಎಂಬುದು ಇತಿಹಾಸಕಾರರ ಅಭಿಮತ. ಯೂರೋಪಿನ ಜ್ಞಾನೋದಯದ ನಂತರದ ಕಾಲಘಟ್ಟದಲ್ಲಿ “ಮನುಷ್ಯ ಶ್ರೇಷ್ಠತೆ” ಯ ಈ ನಂಬಿಕೆಯು ಉಗ್ರರೂಪವನ್ನ ತಾಳಿ, ಆಧುನಿಕ ಕಾಲದ ಹೆಚ್ಚು ಕಡಿಮೆ ಎಲ್ಲ ಜ್ಞಾನಶಾಖೆಗಳನ್ನ ಅತಿಕ್ರಮಿಸಿತು.

ಈ `ಉಗ್ರ ಸ್ವರೂಪದ ಮನುಷ್ಯ ಶ್ರೇಷ್ಠತೆ’ಯ ನಂಬಿಕೆಯ ಪ್ರಕಾರ, ಮನುಷ್ಯ ತನ್ನ ಬುದ್ಧಿಬಲದಿಂದ ಇಡೀ ನಿಸರ್ಗವನ್ನೇ ನಿಯಂತ್ರಿಸಬಲ್ಲ ಮತ್ತು ನಿಸರ್ಗ ಮನುಷ್ಯನ ಸ್ವತ್ತಾದ್ದರಿಂದ ಮನುಷ್ಯನಿಗೆ ನಿಸರ್ಗದ ಹಂಗು ಇರಬೇಕಾಗಿಯೂ ಇಲ್ಲ! ಈ ನಂಬಿಕೆ ಹೇಳುವಂತೆ ನಿಸರ್ಗದ ಭಾಗಗಳಾದ ನದಿ, ಕಾಡು, ಪರ್ವತ, ಸಮುದ್ರ ಮತ್ತು ಪ್ರಾಣಿ, ಪಕ್ಷಿ, ಸಸ್ಯ, ಇತರ ಜೀವ ಜಂತುಗಳೆಲ್ಲ ಮನುಷ್ಯನ ಉಪಭೋಗಕ್ಕಿರುವ ಸಂಪನ್ಮೂಲಗಳು. ಇನ್ನು `ಸೌಮ್ಯ ಸ್ವರೂಪದ ಮನುಷ್ಯ ಶ್ರೇಷ್ಠತೆ’ ನಂಬಿಕೆಯು, ಮನುಷ್ಯ ಬದುಕಿ ಬಾಳಲು ನಿಸರ್ಗದ ಅವಶ್ಯಕತೆ ಇರುವುದನ್ನು ಗುರುತಿಸುತ್ತದೆ. ಹಾಗೂ, ಮನುಷ್ಯ ನಿಸರ್ಗದ ಮೇಲೆ ಪೂರ್ಣಪ್ರಮಾಣದಲ್ಲಿ ಅವಲಂಬಿತನಾಗಿರುವುದರಿಂದ ನಿಸರ್ಗ ನಾಶವಾದರೆ ಮನುಷ್ಯನಿಗೆ ಉಳಿಗಾಲವಿಲ್ಲ ಅನ್ನುತ್ತದೆ. ಹೀಗಾಗಿ, `ಉಗ್ರ ಸ್ವರೂಪದ ಮನುಷ್ಯ ಶ್ರೇಷ್ಠತೆ’ಯ ನಂಬಿಕೆಯೇ ಇವತ್ತಿನ ಪರಿಸರ ಬಿಕ್ಕಟ್ಟಿಗೆ ಮುಖ್ಯ ಕಾರಣವೆನ್ನಬೇಕು.

ಉಳಿದ ಜ್ಞಾನಶಾಖೆಗಳ ವಿಷಯ ಬಿಡಿ, ಮಂಗನಿಂದ ಮಾನವ ಎಂದು ಚರ್ಚುಗಳ ಕೆಂಗಣ್ಣಿಗೆ ಗುರಿಯಾಗಿದ್ದ ಜೀವವಿಜ್ಞಾನಕ್ಕೆ ಕೂಡ ಈ ಮಾನವ ಶ್ರೇಷ್ಠತೆಯ ನಂಬಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಉದಾಹರಣೆಗೆ ಡಾರ್ವಿನ್ ವಿಕಾಸವಾದದ ಪ್ರಕಾರ ಭೂಮಿಯ ಮೇಲೆ ವಿಕಾಸ ನಡೆದಿರುವುದು ಏಕಮುಖವಾಗಿ, ಸರಳತೆಯಿಂದ ಸಂಕೀರ್ಣತೆಯೆಡೆಗೆ. ಇಲ್ಲಿಯವರೆಗೆ ಜೀವವಿಕಾಸ ಕಂಡಿರುವ ಅತ್ಯಂತ ಸಂಕೀರ್ಣ ಜೀವಿ ಮನುಷ್ಯ. ಆದುದರಿಂದ ಹಿಂದಿರುವ ಬೇರೆಲ್ಲ ಜೀವಿಗಳಿಗಿಂತ ಅವನ ಮಿದುಳು ಹೆಚ್ಚು ವಿಕಸನಗೊಂಡು ಅವನು ಎಲ್ಲರಿಗಿಂತ ಹೆಚ್ಚು ಬುದ್ಧಿವಂತನೂ, ಸುಸಂಸ್ಕೃತನೂ ಆಗಿದ್ದಾನೆ. ಆದುದರಿಂದ ಮನುಷ್ಯ ಎಲ್ಲರಿಗಿಂತ ಶ್ರೇಷ್ಠ ಎಂಬ ನಂಬಿಕೆ ಇತ್ತೀಚಿನ ತನಕವೂ ಇತ್ತು!

ಆದರೆ ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಹೊಸ ತಂತ್ರಜ್ಞಾನಗಳ ಸಹಾಯದಿಂದ ಜೀವವಿಜ್ಞಾನಿಗಳು ಜೀವಿಗಳ ಅಂಗಾಂಗಗಳಲ್ಲಿ ಅಷ್ಟೇಅಲ್ಲ ಅವುಗಳ ವಂಶವಾಹಿನಿಗಳಲ್ಲೂ ಇಣುಕಲು ಸಾಧ್ಯವಾಯಿತು. ಇದರಿಂದ ಜೀವವಿಜ್ಞಾನದ ಒಳಗೆ ಒಂದಿಷ್ಟು ಹೊಸ ವಿಚಾರಗಳು ಮತ್ತು ಒಳನೋಟಗಳು ಪ್ರವೇಶಿಸಿದವು. ಇವುಗಳಲ್ಲಿ ಒಂದು ಮುಖ್ಯವಾದ ಒಳನೋಟ ಎಂದರೆ:  “ಜೀವವಿಕಾಸ ನಿರ್ದಿಷ್ಟವಾದ ದಿಕ್ಕಿನಲ್ಲಿ ನಡೆಯುವ ಪ್ರಕ್ರಿಯೆಯಲ್ಲ, ನಾವು ಮೊದಲು ತಿಳಿದಂತೆ ಜೀವ ವಿಕಾಸವು ಸರಳ ರೇಖೆಯಲ್ಲಿ ಚಲಿಸುವುದಿಲ್ಲ, ಮತ್ತು ಅದೊಂದು ಅನಿರೀಕ್ಷಿತವಾಗಿ ಸಂಭವಿಸುವ ಕ್ರಿಯೆ. ಆದಕಾರಣ ಮನುಷ್ಯನನ್ನೂ ಒಳಗೊಂಡು ಭೂಮಂಡಲದಲ್ಲಿರುವ ಜೀವಿಗಳ ನಡುವೆ ಮೇಲು ಕೀಳೆನ್ನುವುದಿಲ್ಲ” ಎಂಬುದು.

`ಗಾಯಾ ಪ್ರವೇಶ

20ನೇ ಶತಮಾನದ ಕೊನೆಯ ಭಾಗದಲ್ಲಿ ಸಂಭವಿಸಿದ ಮೂರು ಪ್ರಮುಖ ಘಟನೆಗಳು ಮನುಷ್ಯ ಶ್ರೇಷ್ಠತೆಯ ವಾದಕ್ಕೆ ಸವಾಲೊಡ್ಡುತ್ತವೆ. ಮೊದಲನೆಯದಾಗಿ ನಾಸಾದಲ್ಲಿ ಭೂಮಿ ಮತ್ತು ಮಂಗಳ ಗ್ರಹಗಳ ನಡುವಿರುವ ಸಾಮ್ಯ ಮತ್ತು ವ್ಯತ್ಯಾಸದ ಬಗ್ಗೆ ಅಧ್ಯಯನ ನಡೆಸುತ್ತಿದ್ದ ಜೇಮ್ಸ್ ಲವ್ಲಾಕ್ ಎಂಬ ಹವಾಮಾನ ವಿಜ್ಞಾನಿ ಮತ್ತು ಲಿನ್ ಮಾರ್ಗುಲಿಸ್ ಎಂಬ ಸೂಕ್ಷ್ಮಾಣುಜೀವಿ ವಿಜ್ಞಾನಿ ತಮ್ಮ ಸಂಶೋಧನೆಯನ್ನು ಆಧರಿಸಿ 1970ರಲ್ಲಿ `ಗಾಯಾ’ ಎಂಬ ವೈಜ್ಞಾನಿಕ ಸಿದ್ಧಾಂತವನ್ನು ಮಂಡಿಸುತ್ತಾರೆ.

ಈ ಸಿದ್ಧಾಂತದ ಪ್ರಕಾರ ಗಾಯಾ ಎಂದು ಕರೆಯಲ್ಪಡುವ ಭೂಮಿಯ ಮೇಲ್ಪದರ (ಜೀವಗೋಳ) ಒಂದು ಸ್ವಾವಲಂಬಿ ಬೃಹತ್ ಜೀವಿ (super organism). ಆದರೆ ನಮಗೆ ದಿನನಿತ್ಯ ಗೋಚರಿಸುವ ಪ್ರಾಣಿ-ಪಕ್ಷಿ ಸಸ್ಯಗಳಂತೆ ಈ ಗಾಯಾ ಇಡಿಯಾಗಿ ಗೋಚರಿಸುವುದಿಲ್ಲ. ಆದುದರಿಂದ ಅವಳು ಜೀವಂತೆ ಎಂದು ಗುರುತಿಸಲು ನಾವು ಸೋಲುತ್ತೇವೆ. ಆದರೆ ಅವಳ ಒಳಗೆ ನಿರಂತರವಾಗಿ ನಡೆಯುವ ಸಾವಿರಾರು ರೀತಿಯ ಜೈವಿಕ ಮತ್ತು ರಾಸಾಯನಿಕ ಪ್ರಕ್ರಿಯೆಗಳು ಅವಳು ಚೈತನ್ಯರೂಪಿ ಮತ್ತು ಸಜೀವಿ ಎಂಬುದನ್ನ ಸಾಬೀತು ಪಡಿಸುತ್ತವೆ. ಗಾಯಾ ಸಿದ್ಧಾಂತ ಮನುಷ್ಯನಿಗೆ ವಿಶೇಷ ಸ್ಥಾನಮಾನ ನೀಡುವುದಿಲ್ಲ. ಬದಲಾಗಿ, ಭೂಮಿಯ ಮೇಲೆ ಬದುಕುತ್ತಿರುವ ಕೋಟ್ಯನುಕೋಟಿ ಜೀವಜಾತಿಗಳಂತೆ ಮನುಷ್ಯ ಕೂಡ ಒಂದು ಜೀವಿ ಎಂದಷ್ಟೇ ಹೇಳುತ್ತದೆ.

ಗಾಯಾ ಎನ್ನುವುದು ಗ್ರೀಕ್ ಪುರಾಣದಲ್ಲಿ ಬರುವ ಭೂದೇವತೆಯ ಹೆಸರು. ಅವಳು ತನಗೆ ತೊಂದರೆ ಕೊಟ್ಟವರ ವಿರುದ್ಧ ತಿರುಗಿ ಬೀಳುವ ಉಗ್ರ ದೇವತೆಯೂ ಹೌದು. ಜೀವಗೋಳದ ಸಂಕೀರ್ಣ ಸ್ವಭಾವವನ್ನ ವಿವರಿಸಲು ನಮ್ಮ ಆಧುನಿಕ ಭಾಷೆಗೆ ಸಾಧ್ಯವಿಲ್ಲವೆಂದು ಲವ್ಲಾಕ್ ಅವರಿಗೆ ಅನಿಸಿರಬೇಕು. ಆದಕಾರಣ ಅವರು ಗಾಯಾ ಎಂಬ ಪುರಾಣಕಾಲದ ರೂಪಕದ ಮೊರೆಹೋದರು ಅಂತ ಕಾಣುತ್ತದೆ. ಆದರೆ ಬಹಳಷ್ಟು ವಿಜ್ಞಾನಿಗಳಿಗೆ ಗಾಯಾ ಎಂಬ ಪುರಾಣರೂಪಕವನ್ನ ವಿಜ್ಞಾನಕ್ಕೆ ತರುವ ಬಗ್ಗೆ ತಕರಾರಿದ್ದ ಕಾಣರ ಗಾಯಾ ಎಂಬ ಹೆಸರನ್ನ ಕೈಬಿಟ್ಟು `ಭೂಗೋಳ ವ್ಯವಸ್ಥೆ ವಿಜ್ಞಾನ’ (Earth System Science) ಎನ್ನುವ ಹೆಸರಿನ ಅಡಿಯಲ್ಲಿ ಲವ್ಲಾಕ್ ಅವರ ಸಂಶೋಧನೆಯನ್ನ ಮುಂದುವರೆಸುತ್ತಾರೆ.

ಎರಡನೆಯದಾಗಿ, 1970 ದಶಕದಲ್ಲಿ ಆಮೆರಿಕೆಯ ಕಾನೂನು ಪಂಡಿತನೊಬ್ಬ `ನಿಸರ್ಗಕ್ಕೆ ಜೀವ ಮತ್ತು ಪ್ರಜ್ಞೆ ಇರುವುದರಿಂದ ಅದಕ್ಕೆ ಮನುಷ್ಯರ ತರಹವೇ ಮೂಲಭೂತ ಹಕ್ಕುಗಳಿವೆ’ ಎನ್ನುತ್ತಾನೆ. ನಂತರ 1980ರ ದಶಕದ ಕೊನೆಯ ಭಾಗದಲ್ಲಿ ಬ್ರೂನೋ ಲಟೂರ್ ಎನ್ನುವ ವಿಜ್ಞಾನ ತತ್ವಜ್ಞಾನಿ ಮನುಷ್ಯ ಶ್ರೇಷ್ಠತೆಯ ನಂಬಿಕೆಯಿಂದ ತಪ್ಪಿಸಿಕೊಂಡು ಜೀವಗೋಳದ ಸಂಕೀರ್ಣತೆಯನ್ನ ಸಮರ್ಥವಾಗಿ ವಿಶ್ಲೇಷಿಸಿಸುವ ಗಾಯಾ ಸಿದ್ಧಾಂತ ವಿಜ್ಞಾನದ ಇತಿಹಾಸದಲ್ಲೇ ಅತ್ಯಂತ ಕ್ರಾಂತಿಕಾರಕ ಸಿದ್ಧಾಂತ ಎಂದು ನಿರ್ಧರಿಸುತ್ತಾರೆ.  ಜೊತೆಗೆ,  ಗಾಯಾ ಸಿದ್ಧಾಂತದಲ್ಲಿನ ಒಳನೋಟಗಳಲ್ಲಿ ಮನುಷ್ಯ ಕೇಂದ್ರಿತ ಆಧುನಿಕ ಆರ್ಥಿಕ ಮತ್ತು  ರಾಜಕೀಯ ಸಿದ್ಧಾಂತಗಳನ್ನ ಬದಲಾಯಿಸುವ ಎಲ್ಲ ಸಾಮಥ್ರ್ಯವಿದೆ ಎಂದು ಅರಿವಾಗಿ ಲವ್ಲಾಕ್ ಅವರ ಸಿದ್ಧಾಂತವನ್ನ ವಿಸ್ತರಿಸಿ ನಮ್ಮ ರಾಜಕೀಯ ಮತ್ತು ಆರ್ಥಿಕ ಚಿಂತನೆಯನ್ನ ಬದಲಾಯಿಸುವ ಕೆಲಸಕ್ಕೆ ತೊಡಗುತ್ತಾರೆ (ಲಟೂರ್ ಪ್ರಕಾರ, ಎಲ್ಲಿಯವರೆಗೆ ನಮ್ಮ ಆರ್ಥಿಕ ಮತ್ತು ರಾಜಕೀಯ ಚಿಂತನೆಯಲ್ಲಿ ಮನುಷ್ಯ ಕೇಂದ್ರಿತ ವಾದದ ಪ್ರಾಬಲ್ಯವಿರುತ್ತದೆಯೋ ಅಲ್ಲಿಯವರೆಗೆ ನಾವು ಹವಾಮಾನ ಬದಲಾವಣೆಯಂತಹ ಗಹನ ಸಮಸ್ಯೆಗಳನ್ನ ಸಮರ್ಥವಾಗಿ ಎದುರಿಸಲು ಸಾಧ್ಯವಿಲ್ಲ). ಹಾಗೆಯೇ ಅವರ ಈ ಕೆಲಸದ ಮುಂದುವರಿದ ಭಾಗವಾಗಿ ಗಾಯಾಳನ್ನು ನಮ್ಮ ಪ್ರಜಾಪ್ರಭುತ್ವದೊಳಗೆ ತರಲು ಪ್ರಯತ್ನಿಸುತ್ತಾರೆ

ಮೂರನೆಯದಾಗಿ ಇದೆ ಸಂದರ್ಭದಲ್ಲಿ ವಿಜ್ಞಾನ ಮತ್ತು ಸಮಾಜವಿಜ್ಞಾನದ ವಿವಿಧ ಶಾಖೆಗಳ ಪರಿಣತರಲ್ಲಿ ಕೆಲವರು ಮಾನವೋತ್ತರವಾದ (Posthumanism) ಎಂಬ ಚಿಂತನಾ ಕ್ರಮದಡಿಯಲ್ಲಿ ಒಟ್ಟುಗೂಡಿ ಮಾನವ ಕೇಂದ್ರ ಸಿದ್ಧಾಂತದ ಭಾರದಿಂದ ತಪ್ಪಿಸಿಕೊಂಡು ಹೊಸರೀತಿಯ ಸಂಶೋಧನಾಕ್ರಮಗಳನ್ನ ಸೃಷ್ಟಿಸುವತ್ತ ಹೆಜ್ಜೆಹಾಕಿ ಅದರಲ್ಲಿ ಯಶಸ್ವಿಕೂಡ ಆಗುತ್ತಿದ್ದಾರೆ. ಮಾನವೋತ್ತರವಾದದ ಸಂಶೋಧನೆಗಳು ಹೇಗೆ ಹೊಸ ಒಳನೋಟಗಳನ್ನು ನೀಡಿದವು ಎನ್ನುವುದನ್ನ ಒಂದು ಉದಾಹರಣೆಯ ಮೂಲಕ ವಿವರಿಸುವುದು ಒಳ್ಳೆಯದು.

ಗಾಯಾ ಸಿದ್ಧಾಂತ ಈ ಭೂಮಿಯಮೇಲೆ ಮನುಷ್ಯ ನಗಣ್ಯ ಎಂದರೆ, ಮಾನವೋತ್ತರ ವಾದದ ಪ್ರಭಾವಕ್ಕೊಳಪಟ್ಟ ಕೆಲವು ಸೂಕ್ಶ್ಮಜೀವಿ ತಜ್ಞರು ಮನುಷ್ಯ ದೇಹದಲ್ಲೇ ಮನುಷ್ಯ ನಗಣ್ಯ ಎನ್ನುತ್ತಾರೆ. ಇವರ ಸಂಶೋಧನೆಯ ಪ್ರಕಾರ ಮನುಷ್ಯ ದೇಹದಲ್ಲಿ ಮನುಷ್ಯ ಜೀವಕೋಶಗಳಿರುವುದು ಕೇವಲ ಶೇ.10ರಷ್ಟು ಮಾತ್ರ. ಉಳಿದ ಶೇ.90 ಜೀವಕೋಶಗಳು ಬ್ಯಾಕ್ಟೀರಿಯಾ, ಫಂಗಸ್ ಮತ್ತಿತರ ಸೂಕ್ಷ್ಮಜೀವಿಗಳಿಂದ ಬಂದವು! ಅಷ್ಟೇ ಅಲ್ಲ, ನಮ್ಮ ವಂಶವಾಹಿಗಳಲ್ಲೂ ಕೂಡಾ ಸೂಕ್ಷ್ಮಜೀವಿಗಳ ವಂಶವಾಹಿಗಳು ಸೇರಿಕೊಂಡಿವೆ.

ಸಾವಿರಾರು ವರ್ಷಗಳಿಂದ ನಾವು ಮತ್ತು ಸೂಕ್ಷ್ಮಜೀವಿಗಳು ಒಟ್ಟೊಟ್ಟಿಗೆ ವಿಕಾಸ ಹೊಂದಿರುವುದರಿಂದ ನಮ್ಮ ದೇಹ ಮತ್ತು ಸೂಕ್ಷ್ಮ ಜೀವಿಗಳ ನಡುವೆ ಅವಿನಾಭಾವ ಸಂಬಂಧ ಏರ್ಪಟ್ಟಿದೆ. ಆದ ಕಾರಣ ನಮ್ಮ ವಂಶಾಭಿವೃದ್ಧಿಯಿಂದ ಹಿಡಿದು ನಮ್ಮದೇಹದ ಬಹಳಷ್ಟು ಜೀವರಾಸಾಯನಿಕ ಕ್ರಿಯೆಗಳು ಈ ಸೂಕ್ಷ್ಮಜೀವಿಗಳಿಲ್ಲದೆ ಸಾಗಲು ಸಾಧ್ಯವಿಲ್ಲ. ಇದೆಲ್ಲದರ ಹೊರತಾಗಿ ನಮ್ಮ ಮಾನಸಿಕ ಸ್ಥಿತಿಗೂ ನಮ್ಮ ಹೊಟ್ಟೆಯಲ್ಲಿರುವ ಸೂಕ್ಷ್ಮಜೀವಿಗಳಿಗೂ ಸಂಬಂಧ ಇದೆ ಎಂದು ಇತ್ತೀಚಿನ ಬಹಳಷ್ಟು ಸಂಶೋಧನೆಗಳು ತಿಳಿಸುತ್ತವೆ. ಹೀಗಾಗಿ, ಈ ಎಲ್ಲ ವಿಜ್ಞಾನಿಗಳು ಮನುಷ್ಯ ದೇಹವು ಬಹುಜೀವಿಗಳ ಒಂದು ಒಕ್ಕೂಟ (multispecies assemblage) ಎನ್ನುತ್ತಾರೆ.

ಪ್ರಕೃತಿ ಪಾರ್ಲಿಮೆಂಟ್

ಈ ಎಲ್ಲ ಬೆಳವಣಿಗೆಗಳ ನಡುವೆ ಜಗತ್ತಿನಲ್ಲಿಯೇ ಮೊದಲನೆಯದಾಗಿ ಈಕ್ವೆಡಾರ್ ಮತ್ತು ಬೊಲಿವಿಯಾ ದೇಶಗಳು ಕ್ರಮವಾಗಿ 2008 ಮತ್ತು 2010ರಲ್ಲಿ ಪ್ರಕೃತಿಗಿರುವ ಹಕ್ಕನ್ನು ಗುರುತಿಸಿ, ಅವುಗಳ ರಕ್ಷಣೆಗೆ ಕಾನೂನುಗಳನ್ನ ರೂಪಿಸುತ್ತವೆ. ಪಚಮಾಮಾ ಎಂದು ತಾವು ಗೌರವದಿಂದ ಪೂಜಿಸುವ ಭೂತಾಯಿಯನ್ನು ಬಂಡವಾಳಶಾಹಿಯಿಂದ ರಕ್ಷಿಸಲು, ಆ ದೇಶಗಳ ಮೂಲನಿವಾಸಿಗಳು ಮಾಡಿದ ಹೋರಾಟದ ಫಲವಿದು. ಈ ಎರಡೂ ದೇಶಗಳ ಪ್ರಕೃತಿಯ ಹಕ್ಕನ್ನು ಒಪ್ಪಿಕೊಳ್ಳುವ ಕಾನೂನುಗಳು ತುಂಬಾ ಪ್ರಬಲವಾಗಿದ್ದರೂ, ಅವುಗಳನ್ನು ಜಾರಿಗೊಳಿಸುವಲ್ಲಿ ಈ ಎರಡೂ ದೇಶಗಳು ಹೇಳಿಕೊಳ್ಳುವಂತಹ ಪ್ರಗತಿಯನ್ನು ಇನ್ನೂ ಸಾಧಿಸದಿರುವದು ಬೇರೆ ಸಂಗತಿ.

ಈ ಎರಡು ದೇಶಗಳ ಮಾದರಿಯಿಂದ ಪಡೆದ ಪ್ರೇರಣೆ ಎಂಬಂತೆ, ನ್ಯೂಜಿಲ್ಯಾಂಡ್ ದೇಶವು 2017ರಲ್ಲಿ ವಾನ್ಗನುಇ ನದಿಯನ್ನು ಓರ್ವ ವ್ಯಕ್ತಿಯೆಂಬಂತೆ ಗುರುತಿಸಿ, ನದಿಗಿರುವ ಮೂಲಭೂತ ಹಕ್ಕುಗಳನ್ನು ಒಪ್ಪಿಕೊಂಡಿತು (legal person). ವಾನ್ಗನುಇ ನದಿಗೆ ನ್ಯೂಜಿಲ್ಯಾಂಡ್ ದೇಶದ ಕಾನೂನಿನ ಮಾನ್ಯತೆ ನೀಡುವಲ್ಲಿ, ಮಓರಿ ಎಂಬ ಆ ನದಿಪಾತ್ರದಲ್ಲಿ ವಾಸಿಸುತ್ತಿರುವ ಮೂಲನಿವಾಸಿಗಳ ಪಾತ್ರ ದೊಡ್ಡದು. ಅವರು 1870 ರಿಂದಲೇ ವಾನ್ಗನುಇ ನದಿಯ ಮೂಲಭೂತ ಹಕ್ಕಿಗಾಗಿ ಹೋರಾಟ ಆರಂಭಿಸಿದ್ದರು. ಮಓರಿ ಮೂಲನಿವಾಸಿಗಳು ವಾನ್ಗನುಇ ನದಿಯನ್ನ ತಮ್ಮ ಪೂರ್ವಜ ಎಂದೇ ನಂಬುತ್ತಾರೆ. ಹೀಗಾಗಿ, ಅವರಿಗೆ ನದಿಯ ಜೊತೆಗಿರುವ ಸಂಬಂಧ ಎಷ್ಟು ಗಾಢವಾದದ್ದು ಅಂದರೆ, ತಾವು ಮತ್ತು ನದಿಯನ್ನು ಬೇರ್ಪಡಿಸಿ ನೋಡಲು ಅವರಿಗೆ ಸಾಧ್ಯವೇ ಇಲ್ಲ! ಆದಕಾರಣ ಅಲ್ಲಿನ ಸರ್ಕಾರ ನದಿಯ ಹಕ್ಕಿನ ರಕ್ಷಣೆಯ, ಮುಖ್ಯವಾಗಿ ನದಿಯ ಆರೋಗ್ಯ ಮತ್ತು ಮುಕ್ತವಾಗಿ ಹರಿಯುವ ಹಕ್ಕಿನ ರಕ್ಷಣೆಯ ಹೊಣೆಯನ್ನ  ಮಓರಿ  ಮೂಲನಿವಾಸಿಗಳಿಗೇ ವಹಿಸಿದೆ.

ನ್ಯೂಜಿಲ್ಯಾಂಡ್ ಸಂಸತ್ತು ನದಿಯ ಹಕ್ಕನ್ನು ಮಾನ್ಯ ಮಾಡಿದ ಕೆಲವೇ ದಿನಗಳಲ್ಲಿ ಉತ್ತರಾಖಂಡದ ಉಚ್ಚನ್ಯಾಯಾಲಯವು ಗಂಗಾ-ಯಮುನಾ ನದಿಗಳು, ಅವುಗಳ ಉಪನದಿಗಳು, ನದಿಗಳಿಗೆ ನೀರು ಪೂರೈಕೆ ಮಾಡುವ ಹಿಮರಾಶಿ, ನದಿಯ ದಂಡೆಯಲ್ಲಿರುವ ಕಾಡು- ಇವೆಲ್ಲ ಜೀವಂತ ವ್ಯಕ್ತಿಗಳಿಗೆ ಸಮ ಎಂದು ನಿರ್ಧರಿಸಿ, ಇವರೆಲ್ಲ “ಲೀಗಲ್ ಪರ್ಸನ್” (Legal person) ಎಂದು ಕರೆದು, ಅವುಗಳಿಗಿರುವ ಮೂಲಭೂತ ಹಕ್ಕಿಗೆ ಕಾನೂನಿ ಮಾನ್ಯತೆ ಕೂಡ ನೀಡಿತ್ತು.

ಹಾಗಾದರೆ, ಲೀಗಲ್-ಪರ್ಸನ್ ಯಾವೆಲ್ಲ ಹಕ್ಕುಗಳನ್ನ ಹೊಂದಿರುತ್ತಾನೆ? ಇದನ್ನು ವಿವರಿಸುವಾಗ ನ್ಯಾಯಾಲಯವು ಒಂದು ತುಂಬಾ ಮಹತ್ವವಾದ ಮಾತನ್ನ ಹೇಳುತ್ತದೆ. ಅದೇನೆಂದರೆ: “ಈ ಲೀಗಲ್ ಪರ್ಸನ್ ಗಳನ್ನ ಮಲಿನ ಗೊಳಿಸಿದರೆ, ಅವುಗಳ ದೇಹವನ್ನ ಘಾಸಿಗೊಳಿಸಿದರೆ, ಅವುಗಳ ಆರೋಗ್ಯ ಹಾಳಾಗುವಂತೆ ಮಾಡಿದರೆ, ಅದು ಮನುಷ್ಯರ ಮೇಲೆ ನಡೆಯುವ ದಾಳಿಗೆ ಸಮ. ಆದಕಾರಣ, ತನ್ನ ಮೂಲಭೂತ ಹಕ್ಕುಗಳು ಹರಣವಾದಲ್ಲಿ ಲೀಗಲ್ ಪರ್ಸನ್ ನ್ಯಾಯಾಲಯದ ಮೆಟ್ಟಿಲನ್ನ ಏರಬಹುದು”.

ಇನ್ನೂ ಶೈಶವಾವಸ್ಥೆಯಲ್ಲಿರುವ ನಿಸರ್ಗದ ಹಕ್ಕಿನ ಕಾನೂನುಗಳು, ಅಷ್ಟೇನೂ ಸಾರ್ವತ್ರಿಕ ಮನ್ನಣೆ ಗಳಿಸಿಲ್ಲ. ಹೀಗಾಗಿ, ಅವುಗಳ ಅನುಷ್ಠಾನವೂ ಸರಿಯಾಗಿ ಆಗುತ್ತಿಲ್ಲವೆಂಬುದು, ನಿರಾಸೆ ಸಂಗತಿ. ಆದರೆ, ಮನುಷ್ಯ ಶ್ರೇಷ್ಠತೆಯ ನಂಬಿಕೆಯಿಂದ ಬಳಲುತ್ತಿರುವ ನಮ್ಮ ಕಾನೂನು ಹಾಗೂ ರಾಜಕೀಯ ಆರ್ಥಿಕ ಚಿಂತನೆಗಳಿಗೂ ಕೂಡ ನಿಧಾನವಾಗಿ ನದಿಗಳಿಗೆ, ಹಿಮಾಲಯಕ್ಕೆ, ಕಾಡಿಗೆ ಆ ಮೂಲಕ, ಇಡೀ ನಿಸರ್ಗಕ್ಕೇ ಜೀವವಿದೆ ಮತ್ತು ಹಕ್ಕುಗಳಿವೆ- ಎಂದು ಸ್ವಲ್ಪವಾದರೂ ಈಗ ಮನವರಿಕೆಯಾಗುತ್ತಿರುವುದೇ ಆಶಾದಾಯಕ ವಿಚಾರ.

ಇಂದಿಗೂ, ನಿಸರ್ಗದ ಒಳಹೊರ ಮೈಗಳನ್ನೆಲ್ಲ ಬೇಕೆಂದ ರೀತಿಯಲ್ಲಿ ಬಳಸುತ್ತ, ಅದರ ಚಕ್ರಿಯ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವ ಮನುಷ್ಯ ಸಮಾಜದ ಆಡಳಿತ ವ್ಯವಸ್ಥೆಯಲ್ಲಿ, ಪ್ರಕೃತಿಗೂ ಒಂದು ಜಾಗ ಕಲ್ಪಿಸಬೇಕಾದ ಅನಿವಾರ್ಯತೆ ಬಹುಬೇಗ ಬರಬಹುದು.

*ಲೇಖಕರು ಬ್ರಿಟನ್ ರೋಹಾಂಪ್ಟನ್ ವಿಶ್ವವಿದ್ಯಾಲಯದ ಜೀವ ಮಾನವಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿ.

Leave a Reply

Your email address will not be published.