ಪಿ.ಎಚ್.ಡಿ. ಪದವಿಯ ಅವಸ್ಥೆ ಸರಿಯಾಗಬೇಕಿದೆ ವ್ಯವಸ್ಥೆ

-ದೇವನೂರು ನಂದೀಶ

ಪಿ.ಎಚ್.ಡಿ. ಅಧ್ಯಯನ ಮಾಡುವವರಿಗೆ ನಾಮಕಾವಸ್ಥೆ ಮಾರ್ಗದರ್ಶಕರನ್ನು ಒದಗಿಸುವ ಬದಲು ಸಂಶೋಧನಾ ಅಭ್ಯರ್ಥಿಯ ಅರ್ಹತೆ, ಅನುಭವ ಮತ್ತು ಬೇಡಿಕೆಗಳಿಗುಣವಾಗಿ ಮಾರ್ಗದರ್ಶಕರ ಹಸ್ತಕ್ಷೇಪಗಳಿಲ್ಲದ ಸ್ವತಂತ್ರ ಸಂಶೋಧನಾ ಪಿಎಚ್.ಡಿ. ಕೋರ್ಸ್ ಒಂದಕ್ಕೆ ಆದ್ಯತೆ ನೀಡಬೇಕು. ಪಶ್ಚಿಮದ ದೇಶಗಳಲ್ಲಿ ಇಂತಹ ಮಾದರಿಗಳು ಈಗಾಗಲೇ ಜಾರಿಯಲ್ಲಿವೆ.

ಇಂದು ಎಷ್ಟೋ ಸಂಶೋಧಕರು ಯು.ಜಿ.ಸಿ. ಕೊಡಮಾಡುವ ವಿವಿಧ ಧನ ಸಹಾಯ ಪಡೆದು ಆ ಸಂಶೋಧನಾ ವೇತನಗಳ ಅರ್ಹತೆಯ ಆಧಾರದ ಮೇರೆಗೆ ವಿಶ್ವವಿದ್ಯಾಲಯಗಳಲ್ಲಿ ಗೊತ್ತುಮಾಡಿದ ಮಾರ್ಗದರ್ಶಕರ ಬಳಿ ಮುಗಿಬೀಳುತ್ತಿದ್ದಾರೆ. ಇದಕ್ಕೆ ಬಹುಮುಖ್ಯ ಕಾರಣ ಯು.ಜಿ.ಸಿ.ಯ ಸಂಶೋಧನಾ ವೇತನಕ್ಕೆ ಅರ್ಹರಾದ ಸಂಶೋಧನಾ ಅಭ್ಯರ್ಥಿಗಳಿಗನುಗುಣವಾಗಿ ಮಾರ್ಗದರ್ಶಕರೆ ಇಲ್ಲದಿರುವುದು, ಇದ್ದರೂ ಅವರ ಬಳಿಯ ಸೀಟುಗಳ ಕೊರತೆ. ಸ್ನಾತಕೋತ್ತರ ಪದವಿಯಲ್ಲಿರುವಾಗಲೇ ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು ವರ್ಷಕ್ಕೆ ಎರಡು ಬಾರಿ ನಡೆಸುವ ಜೆ.ಆರ್.ಎಫ್., ಎನ್.ಇ.ಟಿ. ಯಂತಹ ಸಂಶೋಧನಾ ಅರ್ಹತಾ ಪರಿಕ್ಷೆಗಳಲ್ಲಿ ಅರ್ಹತೆ ಪಡೆದು ತೇರ್ಗಡೆ ಹೊಂದಿದ ರೆಗ್ಯುಲರ್ ವಿದ್ಯಾರ್ಥಿಗಳಿಗೂ ಆಯಾ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಲ್ಲೆ ಇರುವ ಪಿ.ಎಚ್.ಡಿ. ಕೋರ್ಸ್ನಲ್ಲಿ ಅಗತ್ಯವಾಗಿ ಕೊಡಬೇಕಾದ ತುರ್ತು ಸೀಟುಗಳೂ ದೊರಕುತ್ತಿಲ್ಲ.

ಅಕಾಡೆಮಿಕ್ ವಲಯದಲ್ಲಿನ ಮಾರ್ಗದರ್ಶಕರ ಹತ್ತಿರ ಎಂಟೆಂಟು, ಹತ್ತತ್ತು ಜನ ಸಂಶೋಧಕರು ಇರುತ್ತಾರೆ. ಆದರೂ ಆಸಕ್ತಿವಹಿಸಿ ಉತ್ಸಾಹದಿಂದ ಮಾರ್ಗದರ್ಶನ ಕೇಳಲು ಬಂದ ಹೊಸ ಸಂಶೋಧನಾರ್ಥಿಗಳಿಗೆ ಈ ಮಾರ್ಗದರ್ಶಕರು ತಾವೇ ಮಾರ್ಗದರ್ಶನ ನೀಡುತ್ತೇವೆಂದು ಭರವಸೆ ಹುಟ್ಟಿಸಿ ಹುಸಿ ಆಶ್ವಾಸನೆಗಳನ್ನು ಕೊಡುತ್ತಾರೆ. ಇಲ್ಲ ಸಲ್ಲದ ನೆಪ-ಕಾರಣಗಳನ್ನೊಡ್ಡಿ ಉದ್ದೇಶಪೂರ್ವಕವಾಗಿ ಸೀಟು ಖಾಲಿಯಾಗುವವರೆಗೆ ಅನೇಕ ತಿಂಗಳುಗಳವರೆಗೆ ಅವರನ್ನು ಅನಗತ್ಯವಾಗಿ ಕಾಯಿಸುವುದಲ್ಲದೇ ತಮ್ಮ ಅವಿವೇಕದ ವರ್ತನೆಗಳನ್ನೂ ಅವರು ತೋರುವುದುಂಟು. ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡಲು ಈ ಮಾರ್ಗದರ್ಶಕರು ಮುಂದೆ ಬಂದರೂ ವಾಸ್ತವವಾಗಿ ಪಿಎಚ್.ಡಿ.ಯಂತಹ ಕೋರ್ಸುಗಳಲ್ಲಿ ಆ ಅಭ್ಯರ್ಥಿಗಳಿಗೆ ಸಿಗಬೇಕಾದ ಸೀಟೇ ಇರುವುದಿಲ್ಲ. ಇವರಿಗೆ ಪಿ.ಎಚ್.ಡಿ.ಗೆ ಅಗತ್ಯವಾಗಿ ಆಗಬೇಕಾದ ನೋಂದಣಿ ಆಗುವುದೇ ಇಲ್ಲ; ಯು.ಜಿ.ಸಿ. ಕೊಡಮಾಡುವ ಸಂಶೋಧನಾ ವೇತನವೂ ದೊರೆಯುವುದಿಲ್ಲ. ಇದಕ್ಕೆ ಪರ್ಯಾಯವಾಗಿ ಇಂತಹ ಪ್ರತಿಭಾವಂತ ತರುಣ ಸಂಶೋಧಕರಿಗೆ ಅಗತ್ಯವಾಗಿ ಕಾಲಕ್ಕೆ ತಕ್ಕಂತೆ ಕಲ್ಪಿಸಿಕೊಡಬೇಕಾದ ಯಾವ ವ್ಯವಸ್ಥೆಗಳನ್ನೂ ನಮ್ಮ ವಿಶ್ವವಿದ್ಯಾಲಯಗಳು ಸರಿಯಾಗಿ ಮಾಡುತ್ತಿಲ್ಲ.

ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುವ, ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುವ ಬೇಜವಾಬ್ದಾರಿತನದ ಮಾರ್ಗದರ್ಶಕರೆ ನಮಗಿಂದು ಹೆಚ್ಚಾಗಿ ದೊರೆಯುತ್ತಿದ್ದಾರೆ. ಜೊತೆಗೆ ನೈತಿಕವಾಗಿ ಸಾಗಬೇಕಾದ ಅಧಿಕಾರಿ ವಲಯ ಅಧಿಕಾರದ ದರ್ಪದಿಂದ ವರ್ತಿಸುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳು ಅತ್ತ ಉದ್ಯೋಗದತ್ತಲೂ ಗಮನಹರಿಸಲಾರದೆ, ಇತ್ತ ಪಿಎಚ್.ಡಿ. ಸಂಶೋಧನೆಗೂ ಬರಲಾರದೆ ಕಂಗಾಲಾಗಿ ಬಹಳಷ್ಟು ಸಮಯದವರೆಗೆ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಯು.ಜಿ.ಸಿ.ಯ ಜೆ.ಆರ್.ಎಫ್.ನಂತಹ ಪ್ರಶಸ್ತಿಗೆ ಅರ್ಥವೆ ಇಲ್ಲದಂತಾಗಿದೆ. ಇದನ್ನು ಜೆ.ಆರ್.ಎಫ್. ಎಂದು ಕರೆದರೆ ತಪ್ಪಾಗುತ್ತದೆ. ಜೆ.ಆರ್.ಎಫ್. (ಜೂನಿಯರ್ ರಿಸರ್ಚ್ ಫೆಲೋಶಿಪ್!) ಎನ್ನುವುದಕ್ಕಿಂತ ‘ಜೆಟ್’ (ಅಂದರೆ ಜೂನಿಯರ್ ರಿಸರ್ಚ್ ಎಲಿಜಿಬಿಲಿಟಿ ಟೆಸ್ಟ್ ಎಂದರ್ಥ!) ಎಂದು ಕರೆದರೆ ತಪ್ಪಿಲ್ಲ. ಏಕೆಂದರೆ ಜೆ.ಆರ್.ಎಫ್. ಎಂಬ ಮಾನದಂಡವೊಂದರಿಂದಲೆ ಸಂಶೋಧನಾರ್ಥಿಗೆ ಆ ವೇತನವನ್ನು ನೇರವಾಗಿ ಕೊಡುವುದಿಲ್ಲ. ಆ ವೇತನ ದೊರಕಬೇಕಾದರೆ ಮೊದಲು ಮಾರ್ಗದರ್ಶಕರನ್ನು ಹುಡುಕಬೇಕಾಗುತ್ತದೆ (ಇದಕ್ಕೆ ಮೂರು ವರ್ಷಗಳ ಅವಧಿ. ಒಂದು ವೇಳೆ ಈ ನಿಗದಿತ ಅವಧಿಯಲ್ಲಿ ಮಾರ್ಗದರ್ಶಕರು ತಾಂತ್ರಿಕ ಕಾರಣಗಳಿಂದ ದೊರೆಯದೇ ಇದ್ದ ಪಕ್ಷದಲ್ಲಿ ಈ ಅಭ್ಯರ್ಥಿಗೆ ಆ ಪ್ರಶಸ್ತಿಯು ಇದ್ದರೂ ಇಲ್ಲದಂತಾಗುತ್ತದೆ). ಮಾರ್ಗದರ್ಶಕರು ದೊರಕಿದರೆ ಮೊದಲು ದಾಖಲಾತಿಯಾಗಬೇಕು. ಮಾರ್ಗದರ್ಶಕರು ಸಿಕ್ಕಿ ದಾಖಲಾತಿಗೆ ಮುಂದಾದರೂ ಅಗತ್ಯವಾಗಿ, ತುರ್ತಾಗಿ ಇರಬೇಕಾದ ಸೀಟುಗಳೇ ಅಲ್ಲಿ ಇರುವುದಿಲ್ಲ.

ಇಂಥ ಅಭ್ಯರ್ಥಿಗಳು ಸೀಟು ಖಾಲಿಯಾಗುವವರೆಗೆ ಯಾವ ಕೆಲಸಕ್ಕೂ ಹೋಗದೆ ವರ್ಷಗಟ್ಟಲೆ ಕಾಯಬೇಕಾಗುತ್ತದೆ. ಒಂದು ವೇಳೆ ಆ ಅಭ್ಯರ್ಥಿಯು ಯಾವುದಾದರೂ ತಾತ್ಕಾಲಿಕ ಕೆಲಸವೊಂದಕ್ಕೆ ಸೇರಿದ ಪಕ್ಷದಲ್ಲಿ ಆ ತಾತ್ಕಾಲಿಕ ಉದ್ಯೋಗದ ಅಕಾಡೆಮಿಕ್ ಅವಧಿಯನ್ನು ಮುಗಿಸುವವರೆಗೂ ಉದ್ಯೋಗಕ್ಕೂ ವಿದಾಯ ಹೇಳುವಂತಿಲ್ಲ. ಒಂದು ವೇಳೆ ಆ ಉದ್ಯೋಗಕ್ಕೆ ವಿದಾಯ ಹೇಳಿ ಪಿ.ಎಚ್.ಡಿ. ದಾಖಲಾತಿಗೆ ಬಂದರೆ ಈ ಜಂಜಾಟಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಈ ಕಾರಣದಿಂದ ಆ ಅಭ್ಯರ್ಥಿಯು ‘ಅತ್ತ ದರಿ ಇತ್ತ ಪುಲಿ’ ಎಂಬAತೆ ಪರದಾಡಬೇಕಾದ ಪರಿಸ್ಥಿತಿಗೆ ಬಂದು ತಲುಪಬೇಕಾಗುತ್ತದೆ. ಉದ್ಯೋಗವನ್ನು ಬಿಟ್ಟು ಪಿ.ಎಚ್.ಡಿ.ಗೆ ಮರಳದಿದ್ದರೆ ನ್ಯಾಯವಾಗಿ ಆ ಅಭ್ಯರ್ಥಿಗೆ ದೊರೆಯಬೇಕಾದ ಸೀಟು ಬೇರೊಬ್ಬ ಅಭ್ಯರ್ಥಿಗೆ ಕಾದುಕುಳಿತಿರುತ್ತದೆ.

ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ತುರ್ತಾಗಿ ಕೊಡಬಹುದಾದ ಅಗತ್ಯ ಸೀಟುಗಳಿಗೂ ಅವಕಾಶ ಕೊಡದಂತೆ ಯು.ಜಿ.ಸಿ.ಯು ಕಟ್ಟಪ್ಪಣೆ ಹೊರಡಿಸಿ ತಂದಿರುವ ನಿಯಮಾವಳಿಗಳ ಕಡಿವಾಣ ಭಾರತದ ಎಲ್ಲ ವಿಶ್ವವಿದ್ಯಾಲಯಗಳ ಮೇಲಿದೆ. ಈ ಕಡಿವಾಣಗಳು ಕೂಡಾ ಹಳೆಯ ಕಾಲದ ಶಾಸ್ತ್ರಗಳು ಹೇಳುವ ಗೊಡ್ಡು ಪುರಾಣಗಳಂತೆ ಮರ‍್ನಾಲ್ಕು ವರ್ಷಗಳ ಹಿಂದೆಯೇ ತಂದ ನಿಯಮಾವಳಿಗಳೇ ಹೊರತು ಪ್ರಸ್ತುತ ವರ್ಷಕ್ಕೆ ಸಂಬಂಧಿಸಿದ ಅಥವ ಆಯಾ ವರ್ಷಗಳಿಗುಣವಾಗಿ, ಪ್ರಸ್ತುತ ಸ್ಥಿತಿಗತಿಗಳಿಗೆ ಅನುಸಾರವಾಗಿ ತಿದ್ದುಪಡಿಗೊಂಡ ನಿಯಮಾವಳಿಗಳಲ್ಲ. ಆದರೂ ಈ ನಿಯಮಾವಳಿಗಳು ಕೂಡಾ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಎಷ್ಟರಮಟ್ಟಿಗೆ ಚಲಾವಣೆಯಲ್ಲಿವೆಯೆಂಬುದೂ ಒಂದು ಗಮನಾರ್ಹ ವಿಷಯ -ಇದು ಒಂದು ಕಡೆ. ಸಮಸ್ಯೆಗಳು ಉಲ್ಬಣವಾದ ಪರಿಸ್ಥಿತಿಯನ್ನು ಗಮನಿಸಿ ಅಂದಿನ ಒತ್ತಡಗಳಿಗೆ ಮಣಿದು ಸಭೆ ಸೇರಿ ತೀರ್ಮಾನ ಮಾಡಿದ ತಿದ್ದುಪಡಿಗಳಿವು. ಇಂಥ ಶೋಚನೀಯ ಸ್ಥಿತಿಯಲ್ಲಿರುವ ಇಂದಿನ ದಿನಮಾನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲೆ ದೊರೆಯಬೇಕಾದ ಅವಕಾಶಗಳು ದೊರೆಯದ ಹೊತ್ತಿನಲ್ಲಿ ಎಷ್ಟೋ ವಿದ್ಯಾರ್ಥಿಗಳ ಧನ-ಮಾನ-ಪ್ರಾಣಹಾನಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸಾರ್ವಜನಿಕ ವಲಯದಲ್ಲಿದ್ದುಕೊಂಡೇ ಸ್ವಾಯತ್ತತೆಯನ್ನು ಘೋಷಿಸಿಕೊಂಡಿರುವ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಮಟ್ಟದಲ್ಲೇ ಅಗತ್ಯವಾಗಿ ನೇಮಕವಾಗಬೇಕಾದ ಖಾಯಂ ಬೋಧಕರ ನೇಮಕಾತಿಗಳೊಂದೂ ನಡೆಯದ ಹೊತ್ತಿನಲ್ಲಿ ಈ ಅಭ್ಯರ್ಥಿಗಳು ಯಾವ ಉದ್ಯೋಗವನ್ನರಸಿ ಹೋಗಬೇಕು? ನ್ಯಾಯವಾಗಿ ದೊರಕಬೇಕಾದ ಉದ್ಯೋಗಗಳ ನೇಮಕಾತಿಗಳೆ ವರ್ಷದಿಂದ ವರ್ಷಕ್ಕೆ ನಡೆಯದ ಹೊತ್ತಿನಲ್ಲಿ ಗಂಜಿಕೇಂದ್ರದಂತಹ ಫೆಲೋಶಿಪ್‌ಗಳು ತಾನೇ ಏನು ಮಾಡಬಲ್ಲವು? ಫೆಲೋಶಿಪ್‌ಗಳ ಆಸೆಯಿಂದ ಸಂಶೋಧನಾರ್ಥಿಗಳು ಎಷ್ಟು ದಿನಗಳ ಕಾಲವನ್ನು ವ್ಯಯ ಮಾಡಬೇಕು? ಕಾಯುವಿಕೆಯ ಪರಿಸ್ಥಿತಿಯಲ್ಲೆ ಇದ್ದುಕೊಂಡು ಸೋತು ಸುಣ್ಣವಾದ ಯಾವ ವಿದ್ಯಾರ್ಥಿಯು ತಾನೇ ಮಾನಸಿಕ ಸಮತೋಲನವನ್ನು ಕಾಯ್ದಿರಿಸಿಕೊಳ್ಳಲು ಸಾಧ್ಯ? -ಈ ಪ್ರಶ್ನೆಗಳಿಗೆ ಉತ್ತರಗಳು ಸಿಗಬೇಕಿದೆ.

ಪರಿಹಾರವೇನು?

ಸಮಕಾಲೀನ ಸಂದರ್ಭದ ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಸಂಶೋಧಕರು ಹೆಚ್ಚೊ ಮಾರ್ಗದರ್ಶಕರು ಹೆಚ್ಚೊ ಎಂಬ ಸೂಕ್ಷ್ಮ ವಿಷಯ ಸುಪ್ತವಾಗಿ ಬಂದಾಗಿದೆ. ಮಾರ್ಗದರ್ಶಕರು ಹೇಳುತ್ತಾರೆ, ನಾವು ಹೆಚ್ಚು ಎಂದು. ಅಂತೆಯೇ ಸಂಶೋಧಕರೂ ಹೇಳುತ್ತಾರೆ, ಇಲ್ಲ ನಾವು ಹೆಚ್ಚೆಂದು. ನಾವು ಮಾರ್ಗದರ್ಶಕರಾಗಿ ಒಪ್ಪಿ ಮಾರ್ಗದರ್ಶನ ನೀಡಿದರೆ ಮಾತ್ರ ಸಂಶೋಧಕರಿಗೆ ಸ್ಥಾನ; ಇಲ್ಲದಿದ್ದರೆ ಸಂಶೋಧನೆ ಮಾಡಲು ದೊರಕಬೇಕಾದ ಸ್ಥಾನ/ಸ್ಥಳ ಅಥವ ಕುರ್ಚಿಯೇ ಅವರಿಗಿರುವುದಿಲ್ಲ ಎಂಬುದು ಮಾರ್ಗದರ್ಶಕರ ಧೋರಣೆಯಾದರೆ ಅದರಂತೆಯೇ ಸಂಶೋಧಕರದ್ದೂ ಒಂದು ಧೋರಣೆಯಿದೆ. ನಮ್ಮ ಸಂಶೋಧನೆಯಿಂದಲೆ ಮಾರ್ಗದರ್ಶಕರ ಮೌಲ್ಯ ಹೆಚ್ಚುವುದು; ಹಾಗೆಯೇ ಅವರ ಸ್ಥಾನಮಾನಗಳು ಭದ್ರವಾಗಬೇಕಾದರೂöಅವರ ಸ್ಥಾನ ಎತ್ತರಕ್ಕೇರಬೇಕಾದರೂ ನಮ್ಮ ಸಂಶೋಧನೆಗಳ ಆಧಾರ ಬೇಕು; ಆದುದರಿಂದ ಈ ಮೌಲ್ಯಗಳ ಬೆಂಬಲ ಅವರಿಗೆ ಬೇಕೇ ಬೇಕು ಎಂದು.

ಆಯಾ ಕ್ಷೇತ್ರಕ್ಕನುಗುಣವಾಗಿ ಆಸಕ್ತ ಸಂಶೋಧಕರು ಇಲ್ಲದಿರುವಾಗ ಕೇವಲ ಮಾರ್ಗದರ್ಶನ ಮಾಡುತ್ತೇವೆಂದು ಸಿಕ್ಕ ಸಿಕ್ಕಿದವರನ್ನೆಲ್ಲ, ‘ಸಂಶೋಧನೆ ಮಾಡಿ ಸಂಶೋಧನೆ ಮಾಡಿ’ ಎಂದು ದುಂಬಾಲುಬಿದ್ದು ತಿರುಗುವ ಎಷ್ಟೋ ಮಾರ್ಗದರ್ಶಕರು ಇಂದೂ ಇದ್ದಾರೆ. ಇದು ಅವರ ಮೂರ್ಖತನ ಎಂದು ಹೀಯಾಳಿಸುವವರೂ ಕೆಲವರು ಇದ್ದಾರೆ. ಇದು ಅವರೊಬ್ಬರ ಮೂರ್ಖತನವಲ್ಲ; ಬದಲಿಗೆ ಈ ಇಡೀ ವ್ಯವಸ್ಥೆಯ ಮೂರ್ಖತನದ ಪರಮಾವಧಿ ಎಂದು ಮಾತ್ರ ಹೇಳಬಹುದು. ಇಂತಹ ವ್ಯವಸ್ಥೆಯಲ್ಲಿ ಉತ್ಕೃಷ್ಟವಾದ ಯಾವ ಸಂಶೋಧನೆಯೂ ಹೊಸದಾಗಿ ಉದ್ಭವವಾಗುವುದಿಲ್ಲ. ಅಂತೆಯೇ ಯಾವ ಸಂಶೋಧನಾ ಪ್ರಗತಿಯನ್ನೂ ಇಲ್ಲಿ ಕಾಣುವುದಕ್ಕಾಗಲೀ ಸಾಧಿಸುವುದಕ್ಕಾಗಲೀ ಬರುವುದಿಲ್ಲ. ಆಗ ನಿಷ್ಠಾವಂತ, ಕರ್ತವ್ಯಪ್ರಜ್ಞೆಯಿರುವ ಮಾರ್ಗದರ್ಶಕನೆ ಸಂಶೋಧಕನ ಕೆಲಸವನ್ನೂ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ. ಜೊತೆಗೆ ಮಾರ್ಗದರ್ಶಕನೆ ಸಂಶೋಧಕನಾಗಿ ನಿಲ್ಲಬೇಕಾಗುತ್ತದೆ. ಮಾರ್ಗದರ್ಶಕನೆ ಸಂಶೋಧಕನಾಗುತ್ತಾನೆ ಎಂದಾದ ಮೇಲೆ ಮಾರ್ಗದರ್ಶಕನೂ ಒಬ್ಬ ಸಂಶೋಧಕ ತಾನೇ? ಅಲ್ಲದೇ ಸಂಶೋಧನೆ ಮಾಡುತ್ತ ತಾನೆ ಒಬ್ಬ ಮಾರ್ಗದರ್ಶಕನಾಗಿರಲು ಹೇಗೆ ಸಾಧ್ಯ!

ವಿಶ್ವವಿದ್ಯಾಲಯಗಳಲ್ಲಿ ಮಾರ್ಗದರ್ಶನ ಮಾಡಲು ಅರ್ಹತೆ ಪಡೆದ ಪ್ರಾಧ್ಯಾಪಕರ ಕಥೆ ಇಂದು ವ್ಯಥೆಯಾಗಿ ಪರಿಣಮಿಸಿದೆ. ಅವರಿಗೆ ಕುಡಿಕೆ ಹೊನ್ನು ಸಾಲದಾಗಿ, ನಾವು ನಿಮಗೆ ಮಾರ್ಗದರ್ಶನ ಮಾಡುವುದರಿಂದ ನಮಗೆ ಅದರಿಂದ ಯಾವುದೇ ಲಾಭವೂ ಪ್ರಯೋಜನವೂ ಇಲ್ಲವೆಂದು ಹೇಳುತ್ತಾ, ‘ಲಕ್ಷ ಕೊಟ್ಟರೂ ಭಿಕ್ಷೆ ಬೇಡುವುದಾ ಬಿಡಲಾರೆ’ ಎಂಬಂತೆ ವರ್ತಿಸುತ್ತಿದ್ದಾರೆ. ಹೀಗೆ ಉದಾಸೀನದ ಮಾತುಗಳನ್ನಾಡುತ್ತ ಕರ್ತವ್ಯಪ್ರಜ್ಞೆಯನ್ನೆ ಮರೆತಿರುವ ಮಾರ್ಗದರ್ಶಕರು ನಮಗಿಂದು ಸಿಗುತ್ತಿದ್ದಾರೆ. ಸಂಶೋಧನೆಯ ಬಗೆಗೆ ಪ್ರೀತಿ, ಕಾಳಜಿಯನ್ನೇ ತೋರದೇ ಶ್ರಮ, ಉತ್ತೇಜನಗಳನ್ನೇ ಕೊಡದೇ ಜೋಕರ್‌ಗಳಂತೆ ನಟಿಸುವ ಮಾರ್ಗದರ್ಶಕ ಮಹಾಶಯರುಗಳಿಂದಲೇ ನಮ್ಮ ವಿಶ್ವವಿದ್ಯಾಲಯಗಳು ಹೆಚ್ಚಾಗಿ ಭರ್ತಿಯಾಗಿ ಹೋಗಿವೆ.

ಸಂಶೋಧನೆಯಲ್ಲಿ ಸಾಮರಸ್ಯ

ಸಮಕಾಲೀನ ಸಂದರ್ಭದ ಗಂಭೀರ ಪ್ರಶ್ನೆಗಳಿಗೆ ಉತ್ತರ ಹುಡುಕುವಲ್ಲಿ ಪ್ರಯತ್ನವನ್ನೇ ಮಾಡದ ಸಂಶೋಧಕರು ಇಂದು ಹೆಚ್ಚಾಗಿಯೇ ಸಿಗುತ್ತಿದ್ದಾರೆ. ಸಮಸ್ಯೆಗಳು ತಾಂಡವವಾಡುತ್ತಿರುವ ಈ ಹೊತ್ತಿನಲ್ಲಿ ಆಯಾ ಕ್ಷೇತ್ರಕ್ಕೆ ಅಗತ್ಯವಾಗಿಯೂ ತುರ್ತಾಗಿಯೂ ಇಲ್ಲದ ಸಲ್ಲದ ವಸ್ತುವಿಷಯಗಳನ್ನು ಆರಿಸಿಕೊಂಡು ಸಂಶೋಧನೆ ಕೈಗೊಳ್ಳುತ್ತೇವೆಂದು ಹೊರಡುತ್ತಿರುವ ಸಂಶೋಧಕರೆ ಇಂದು ಹೆಚ್ಚು; ‘ಸಂತೆಯ ಹೊತ್ತಿಗೆ ಮೂರು ಮೊಳ ನೇಯ್ದರು’ ಎಂಬಂತೆ. ಅಂತೆಯೇ ಈ ಗಂಭೀರ ಪ್ರಶ್ನೆಗಳಿಗೆ ಉತ್ತರಗಳನ್ನೂ ಸೂಚಿಸಲಾರದ ಮಾರ್ಗದರ್ಶಕರೆ ಪ್ರಸ್ತುತದಲ್ಲಿ ಹೆಚ್ಚುಹೆಚ್ಚಾಗಿ ದೊರಕುತ್ತಿದ್ದಾರೆ.

ಸಮಕಾಲೀನ ಪ್ರಜ್ಞೆಯ ತೊಟ್ಟಿಗೆ ಸಾಗದ ಸಂಶೋಧಕರು ಸಂಶೋಧಕರೆ ಅಲ್ಲ; ಮಾರ್ಗದರ್ಶಕರೂ ಮಾರ್ಗದರ್ಶಕರೇ ಅಲ್ಲ. ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಹುಡುಕಲಾರದ ಸಂಶೋಧಕರು ಸಂಶೋಧಕರೆ ಅಲ್ಲ; ಅಂತೆಯೇ ಸಮಕಾಲೀನ ಸಂದರ್ಭದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಪರಿಹರಿಸಲಾರದ ಮಾರ್ಗದರ್ಶಕರು ಮಾರ್ಗದರ್ಶಕರುಗಳೇ ಅಲ್ಲ ಎಂದು ಇಂದಿನ ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಹೇಳಬೇಕೆನಿಸುತ್ತದೆ.

ಇಂಥ ವ್ಯವಸ್ಥೆಯಲ್ಲಿರುವ ಸಂಶೋಧಕರಲ್ಲಾಗಲೀ ಮಾರ್ಗದರ್ಶಕರಲ್ಲಾಗಲೀ ಯಾರು ಹೆಚ್ಚು? ಯಾರು ಕಡಿಮೆ? ಎಂಬ ಭೇದ-ಭಾವ ಬೇಡ. ತಾರತಮ್ಯ, ಶ್ರೇಷ್ಠ-ಕನಿಷ್ಠ, ಮೇಲರಿಮೆ-ಕೀಳರಿಮೆಗಳೂ ಬೇಡ. ಇಲ್ಲಿ ಸಂಶೋಧಕರೂ ಹೆಚ್ಚಲ್ಲ, ಮಾರ್ಗದರ್ಶಕರೂ ಹೆಚ್ಚಲ್ಲ; ಹೆಚ್ಚಾಗಬೇಕಾದ್ದು ಸಂಶೋಧನೆ. ಸಂಶೋಧನೆಯು ಹೆಚ್ಚಿದಂತೆಲ್ಲ ಸಂಶೋಧಕರೂ ಮಾರ್ಗದರ್ಶಕರೂ ಹೆಚ್ಚುತ್ತಾರೆ; ಹೆಚ್ಚಾಗುತ್ತಾರೆ. ಅಂತೆಯೇ ಮಾರ್ಗದರ್ಶಕರೂ ಸಂಶೋಧಕರೂ ಹೆಚ್ಚಿದರೆ (ಹೆಚ್ಚಿದಂತೆಲ್ಲ) ಸಂಶೋಧನೆಯೂ ಹೆಚ್ಚುತ್ತದೆ; ಹೆಚ್ಚುತ್ತಾ ಹೋಗುತ್ತದೆ ಕೂಡಾ.

ಪರ್ಯಾಯ ವ್ಯವಸ್ಥೆ

ಮಾರ್ಗದರ್ಶನವಿಲ್ಲದೆ ಸ್ವಂತ ಪರಿಶ್ರಮದಿಂದ ಎಷ್ಟೋ ಸಂಶೋಧನೆಗಳು ಈ ಕ್ಷೇತ್ರದಲ್ಲಿ ಬಂದಿವೆ. ಮಾರ್ಗದರ್ಶಕರ ಸಹಾಯವಿಲ್ಲದೆ ಎಷ್ಟೋ ಸಂಶೋಧಕರು ತಮ್ಮ ಪ್ರತಿಭೆ, ಸ್ಫೂರ್ತಿ, ಶ್ರದ್ಧೆ, ಶ್ರಮ, ಬದ್ಧತೆ, ಆತ್ಮವಿಶ್ವಾಸಗಳಿಂದ ಮನಸ್ಸನ್ನು ಗಟ್ಟಿಮಾಡಿಕೊಂಡು ಈ ಕ್ಷೇತ್ರದ ಪರಿಣತರ ಕೆಲಸಗಳಿಂದ ಪ್ರೇರಣೆ ಪಡೆದು ಬಹಳ ಆಸಕ್ತಿಯಿಂದ ಮುನ್ನುಗ್ಗಿ ದುಡಿಮೆ ಮಾಡಿದ್ದಾರೆ.

ಗೆಲಿಲಿಯೋ, ಕೊಪರ್ನಿಕಸ್, ನ್ಯೂಟನ್, ಐನ್‌ಸ್ಟೀನ್, ಥಾಮಸ್ ಆಲ್ವ ಎಡಿಸನ್ (ಇವನಿಗೆ ಇವನ ತಾಯಿಯೇ ನಿಜವಾದ ಮಾರ್ಗದರ್ಶಕಿ!) ಅಂತಹವರಿಗೆ ಅಕಾಡೆಮಿಕ್ ವಲಯದಲ್ಲಿ ಯಾವ ಮಾರ್ಗದರ್ಶಕರಿದ್ದರು? ಕನ್ನಡದಲ್ಲೆ ನೆನೆಯುವುದಾದರೆ ಕರ್ನಲ್ ಮೆಕೆಂಝಿ, ಬೆಂಜ್ಙಮಿನ್ ಲೀವಿಸ್ ರೈಸ್, ಎಂ.ಗೋವಿಂದ ಪೈ, ಶಂಬಾ ಜೋಷಿ, ರಾಜಪುರೋಹಿತರಂತಹವರಿಗೆ ಜೀವನ ಪರ್ಯಂತ ಯಾವ ಮಾರ್ಗದರ್ಶಕರಿದ್ದರು? ಇವರು ಯಾವ ವಿಶ್ವವಿದ್ಯಾಲಯಗಳಲ್ಲಿ ಪಿಎಚ್.ಡಿ. ಪದವಿ ಗಳಿಸಿದ್ದರು? ಕುವೆಂಪು, ಬೇಂದ್ರೆ, ಕಾರಂತರAತವರು ಯಾವ ವಿಶ್ವವಿದ್ಯಾಲಯಗಳಲ್ಲೂ ಪಿಎಚ್.ಡಿ. ಪದವಿ ಪಡೆಯದಿದ್ದರೂ ಅವರಿಗೆ ವಿಶ್ವವಿದ್ಯಾಲಯಗಳಿಂದ ಕೊಡಮಾಡಿದ ಡಾಕ್ಟರೇಟ್ ಪದವಿ ತಪ್ಪೀತೇ? ವಿಶ್ವವಿದ್ಯಾಲಯಗಳಲ್ಲೆ ಪದವಿಯನ್ನು ಅಭ್ಯಾಸ ಮಾಡಿದ ಕೆ.ಬಿ.ಪಾಠಕ್, ಎ.ಎನ್.ನರಸಿಂಹಯ್ಯ, ಆ.ನೇ.ಉಪಾಧ್ಯೆ, ಎಲ್.ಬಸವರಾಜು ಅಂತಹವರಿಗೆ ಯಾವ ಮಾರ್ಗದರ್ಶಕರ ಸಹಾಯದಿಂದ ಡಾಕ್ಟರೇಟ್ ದೊರೆಯುವಂತಾಯಿತು? -ಎಂಬ ಪ್ರಶ್ನೆ ಎದುರಾಗದೇ ಇರದು. ಈ ಮಹನೀಯರಿಗೆ ಡಾಕ್ಟರೇಟ್ ಪದವಿಗಳು ಗೌರವಯುತವಾಗಿ ಸಂದದ್ದು ಅವಿರತ ಶ್ರಮವಹಿಸಿ ಮಾಡಿದ ಕನ್ನಡದ ಕೆಲಸಗಳಿಗಾಗಿಯೇ ಹೊರತು ಕೇವಲ ಪದವಿಗಳಿಗೋಸ್ಕರವೇ ಮಾಡಲು ಹೊರಟ ಕನ್ನಡದ ಕೆಲಸಗಳಿಗಲ್ಲ!

ಇಂದು ಅಕಾಡೆಮಿಕ್ ವಲಯದ ಎಲ್ಲಾ ಕ್ಷೇತ್ರಗಳಲ್ಲೂ ಪರಿಣತ ಮಾರ್ಗದರ್ಶಕರ ಕೊರತೆ, ಅಗತ್ಯ ತುಂಬಾ ಇದೆ. ಅಂತೆಯೇ ಆಯಾ ಕ್ಷೇತ್ರಗಳಲ್ಲಿ ಆಸಕ್ತಿವಹಿಸಿ ಕೆಲಸ ಮಾಡುವ ಸಂಶೋಧಕರ ಪಡೆಯೂ ಇಲ್ಲದಂತಾಗಿದೆ. ಕೇವಲ ನೆಪಮಾತ್ರವಾಗಿ ಇರುವ ಮಾರ್ಗದರ್ಶಕರ ಮಾರ್ಗದರ್ಶನವನ್ನು ನಾಮಕಾವಸ್ಥೆಯಲ್ಲೆ ಪಡೆದ ಸಂಶೋಧಕರೆ ಇಂದು ಹೆಚ್ಚು. ಪ್ರಾಮಾಣಿಕ, ನಿಷ್ಠೆಯುಳ್ಳ ಎಷ್ಟೋ ಸಂಶೋಧಕರು ಮಾರ್ಗದರ್ಶನದ ಸಹಾಯ ಹಸ್ತಕ್ಕಾಗಿ ನಾಮಕಾವಸ್ಥೆಯಲ್ಲಿರುವ ಮಾರ್ಗದರ್ಶಕರನ್ನು ಹೆಚ್ಚು ಆಶ್ರಯಿಸದೇ ಅಕಾಡೆಮಿಕ್ ವಲಯದಲ್ಲಿಲ್ಲದ, ಅಂದರೆ ಈಗ ನಿವೃತ್ತರಾಗಿ ವಿಶ್ರಾಂತ ಜೀವನವನ್ನು ಕಳೆಯುತ್ತಿರುವ ಆಯಾ ಕ್ಷೇತ್ರದ ಪರಿಣತ ಮಾರ್ಗದರ್ಶಕರ ಮೊರೆ ಹೋಗುತ್ತಿರುವುದು ಸತ್ಯಸಂಗತಿ.

ವಿಶ್ವವಿದ್ಯಾನಿಲಯಗಳಲ್ಲಿರುವ ಈ ಸಮಸ್ಯೆಗಳನ್ನು ಯು.ಜಿ.ಸಿ.ಯಂತಹ ಆಯೋಗಗಳು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿರುವುದು ಅತ್ಯಂತ ತುರ್ತಾದ ಕೆಲಸವೆಂದು ಒತ್ತಿ ಒತ್ತಿ ಹೇಳಬೇಕಿದೆ.

ಪಿ.ಎಚ್.ಡಿ. ಅಧ್ಯಯನ ಮಾಡುವವರಿಗೆ ನಾಮಾಕಾವಸ್ಥೆ ಮಾರ್ಗದರ್ಶಕರನ್ನು ಒದಗಿಸುವ ಬದಲಿಗೆ ಪರಿಹಾರವಾಗಿ, ಪರ್ಯಾಯವಾಗಿ ಸಂಶೋಧನಾ ಅಭ್ಯರ್ಥಿಯ ಅರ್ಹತೆ, ಅನುಭವ ಮತ್ತು ಬೇಡಿಕೆಗಳಿಗುಣವಾಗಿ ಮಾರ್ಗದರ್ಶಕರ ಹಸ್ತಕ್ಷೇಪಗಳಿಲ್ಲದ ಸ್ವತಂತ್ರ ಸಂಶೋಧನಾ ಪಿಎಚ್.ಡಿ. ಕೋರ್ಸ್ ಒಂದಕ್ಕೆ ಆದ್ಯತೆ ನೀಡಬೇಕಿರುವುದು ಅತ್ಯಂತ ತುರ್ತೆಂದು ತೋರುತ್ತದೆ. ಈ ರೀತಿಯ ಹೊಸ ಪಿಎಚ್.ಡಿ. ಮಾದರಿ ಕ್ರಮವೊಂದು ಪಶ್ಚಿಮದ ದೇಶಗಳಲ್ಲಿರುವಂತೆ ಭಾರತದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಜಾರಿಗೆ ಬಂದರೆ ಎಷ್ಟೋ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅಲ್ಲದೆ ಪಿ.ಎಚ್.ಡಿ. ವಲಯದಲ್ಲಾಗಬೇಕಾದ ಎಷ್ಟೋ ಅಮೂಲ್ಯ ಸಂಶೋಧನೆಗಳು ಸಾಧ್ಯವಾಗುತ್ತವೆ. ಜೊತೆಗೆ ಇದರಿಂದ ಸಂಶೋಧನಾ ಪ್ರಗತಿ ಕೈಗೂಡುತ್ತದೆ; ವಿಶ್ವವಿದ್ಯಾಲಯಗಳ ಘನತೆಯೂ ಹೆಚ್ಚಿದಂತಾಗುವುದು. ಅಸಂಖ್ಯಾತ ಯುವ ಸಂಶೋಧಕರ ಕನಸೂ ನನಸಾಗಿ ಅವರ ಭವಿಷ್ಯವೂ ರೂಪುಗೊಂಡೀತು.

[ಈ ಲೇಖನಕ್ಕೆ ಪ್ರೇರಣೆ: ಸಿ.ಎನ್.ರಾಮಚಂದ್ರನ್ ಅವರ “ಪಿಎಚ್.ಡಿ. ಎಂಬ ವ್ಯವಸ್ಥೆ-ಒಂದು ಚಿಂತನೆ” (ಕೃತಿ-ಆಖ್ಯಾನ-ವ್ಯಾಖ್ಯಾನ); ಡಿ.ಆರ್.ನಾಗರಾಜ್ ಬರೆದಿರುವ “ಕನ್ನಡ ಸಂಶೋಧನೆಯ ದುಸ್ಥಿತಿ” (ಕೃತಿ-ಸಂಸ್ಕೃತಿ ಕಥನ, ಸಂ: ಅಗ್ರಹಾರ ಕೃಷ್ಣಮೂರ್ತಿ). ಆಸಕ್ತರು ಇವೆರಡನ್ನೂ ಅಗತ್ಯವಾಗಿ ಗಮನಿಸಬೇಕು.]

*ಲೇಖಕರು ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಕವಿರಾಜಮಾರ್ಗದ ಅಧ್ಯಯನ’ ವಿಷಯದಲ್ಲಿ ಸಂಶೋಧನಾರ್ಥಿ; ಜೊತೆಗೆ ‘ಕನ್ನಡದಲ್ಲಿ ಪಿ.ಎಚ್.ಡಿ. ಅಧ್ಯಯನ’ ಕುರಿತ ಸ್ವಂತ ಯೋಜನೆಯಲ್ಲಿ ನಿರತರು, ಹಳಗನ್ನಡ ಮತ್ತು ವಿಚಾರ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ.

 

Leave a Reply

Your email address will not be published.