ಮೌಢ್ಯ ಮತ್ತು ಮಾಧ್ಯಮಗಳು

ಪಿ.ಹೆಚ್.ಡಿ. ಸಾರಾಂಶ

– ಡಾ.ಲೋಕೇಶ್ ಮೊಸಳೆ

ಸಂಶೋಧನೆಯ ವಿಷಯ: ‘ಕರ್ನಾಟಕ ರಾಜ್ಯದಲ್ಲಿ ಮೌಢ್ಯ ನಿವಾರಣೆಯಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಪಾತ್ರ: ಒಂದು ತೌಲನಿಕ ಅಧ್ಯಯನ’

ಸಂಶೋಧಕರು: ಲೋಕೇಶ್ ಮೊಸಳೆ, ಮೈಸೂರು.         

ಮಾರ್ಗದರ್ಶಕರು: ಪ್ರೊ.ಬಿ.ಪಿ.ಮಹೇಶ್ ಚಂದ್ರ ಗುರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ, ಮಾನಸ ಗಂಗೋತ್ರಿ, ಮೈಸೂರು.

ಮನುಷ್ಯ ಸಮಾಜದಲ್ಲಿ ಮಾನವೀಯತೆ ಮೆರೆಯಬೇಕಾದ ಜಾಗದಲ್ಲಿ ಕಂದಾಚಾರಗಳು, ಶೋಷಣೆ ಮತ್ತು ಅನಾಗರಿಕತೆಗಳು ಬೆಳೆಯುತ್ತ ಭಯ, ಆತಂಕ, ಬೌದ್ಧಿಕ ದಾರಿದ್ರ್ಯಗಳು ವಿಜೃಂಭಿಸುವ ಸನ್ನಿವೇಶವನ್ನು ಈ ವಿಜ್ಞಾನ ತಂತ್ರಜ್ಞಾನ ಯುಗದಲ್ಲೂ ಕಾಣುತ್ತಿದ್ದೇವೆ. ಮಾನವ ಸಂಬಂಧಗಳು ನಂಬಿಕೆ, ಆಚರಣೆ, ಮಾನವೀಯ ಗೌರವವುಳ್ಳ ಸಮಸಮಾಜ ವ್ಯವಸ್ಥೆಗೆ ಹಾತೊರೆಯುವ ನಾಗರಿಕ ಸಮಾಜದ ನಡಿಗೆಯಲ್ಲಿ ‘ಮೌಢ್ಯ’ ಹಾಸುಹೊಕ್ಕಾಗಿದೆ. ಇದರ ಸಾಧಕ ಬಾಧಕಗಳ ಕುರಿತು ಇತಿಹಾಸದುದ್ದಕ್ಕೂ ಚರ್ಚೆ ನಡೆಯುತ್ತಲೇ ಇದೆ.

ವಿಜ್ಞಾನ-ಮೌಢ್ಯದ ನಡುವೆ ನಿರ್ದಿಷ್ಟ ಅಂತರ-ಕಂದಕಗಳು ಕೂಡ ಇವೆ ಎನ್ನುವುದು ನಿರ್ವಿವಾದ ಸಂಗತಿ. ಈ ಹಿನ್ನೆಲೆಯಲ್ಲಿ ‘ಕರ್ನಾಟಕದ ವಿದ್ಯುನ್ಮಾನ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳು ಮೌಢ್ಯ ನಿವಾರಣೆಗಾಗಿ ಹೇಗೆ ಸ್ಪಂದಿಸುತ್ತಿವೆ ಎನ್ನುವುದರ ಒಂದು ತೌಲನಿಕ ಅಧ್ಯಯನದ ಅಗತ್ಯ ಸಮಾಜಶಾಸ್ತ್ರೀಯ ಹಿನ್ನೆಲೆಯಲ್ಲಿ ಇಂದು ಪ್ರಸ್ತುತವಾಗಿರುವುದರಿಂದ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಂವಹನದ ವಿಭಾಗದಲ್ಲಿ ಸಂಶೋಧನೆಯನ್ನು ನಡೆಸಿ ಡಾಕ್ಟರೇಟ್ ಪಡೆಯಲಾಗಿದೆ.

ಮೌಢ್ಯ ನಿವಾರಣೆಯಲ್ಲಿ ವಿವಿಧ ಸಂಘಟನೆಗಳ ಪಾತ್ರ ಕುರಿತಂತೆ ಜಗತ್ತಿನೆಲ್ಲೆಡೆ ಸಾಕಷ್ಟು ಸಂಶೋಧನೆಗಳು ಜರುಗಿವೆ. ಮೌಢ್ಯ ನಿವಾರಣೆಯಲ್ಲಿ ಮಾಧ್ಯಮಗಳ ಪಾತ್ರವನ್ನು ಕುರಿತು ಸಂವಹನ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಅಧ್ಯಯನಗಳು ಜರುಗಿಲ್ಲ. ಕರ್ನಾಟಕ ರಾಜ್ಯವನ್ನೂ ಒಳಗೊಂಡಂತೆ ಭಾರತ ದೇಶದಲ್ಲಿ ಮೌಢ್ಯ ನಿವಾರಣೆಯಲ್ಲಿ ಮಾಧ್ಯಮಗಳ ಪಾತ್ರವನ್ನು ಕೇಂದ್ರೀಕರಿಸಿದ ಅಧ್ಯಯನಗಳು ವಿರಳವಾಗಿರುವುದರಿಂದ ಈ ಸಂಶೋಧನೆ ಮಹತ್ವ ಪಡೆದಿದೆ.

ಬುದ್ಧನಿಂದ ಹಿಡಿದು ಕುವೆಂಪು ತನಕ ಅನೇಕ ಸಾಧಕರು ಭಾರತವನ್ನು ಮೌಢ್ಯಮುಕ್ತ ಪ್ರಬುದ್ಧ ಭಾರತವನ್ನಾಗಿ ರೂಪಿಸಲು ನಿರಂತರವಾಗಿ ಶ್ರಮಿಸಿದ್ದಾರೆ. ಈ ಸಹಸ್ರಮಾನದಲ್ಲಿಯೂ ಮೂಢನಂಬಿಕೆಗಳು ಶೋಷಿತ ಸಮುದಾಯಗಳ ಮೂಲಭೂತ ಹಕ್ಕುಗಳ ದಮನ ಹಾಗೂ ಶೋಷಣಾ ಪ್ರವೃತ್ತಿಗಳಿಗೆ ಕಾರಣವಾಗಿವೆ. ಭಾರತೀಯ ಸಂವಿಧಾನ ಪರಿಚ್ಛೇದ 51 ಸಮಸ್ತ ಭಾರತೀಯರು ವೈಚಾರಿಕತೆಯನ್ನು ಅಳವಡಿಸಿಕೊಂಡು ಪ್ರಗತಿಪಥದಲ್ಲಿ ಮುನ್ನಡೆಯಬೇಕೆಂದು ತಿಳಿಸುತ್ತದೆ.

‘ಕರ್ನಾಟಕ ರಾಜ್ಯದಲ್ಲಿ ಮೌಢ್ಯ ನಿವಾರಣೆಯಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಪಾತ್ರ: ಒಂದು ತೌಲನಿಕ ಅಧ್ಯಯನ’ ನಿರ್ದಿಷ್ಟ ಕಾರಣಗಳಿಗಾಗಿ ವಿಶೇಷ ಮಹತ್ವ ಹೊಂದಿದೆ.

  • ಭಾರತವು ಬುದ್ಧನ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಪ್ರಬುದ್ಧ ಭಾರತವಾಗಿ ರೂಪುಗೊಂಡು ಇಡೀ ವಿಶ್ವವನ್ನು ಶಾಂತಿ ಮತ್ತು ಪ್ರಗತಿಗಳೆಡೆಗೆ ಮುನ್ನಡೆಸಿದ ಹೆಗ್ಗಳಿಕೆ ಹೊಂದಿದೆ.
  • ಭಾರತವು ಸರ್ವಧರ್ಮಗಳ ಸಮನ್ವಯತೆ, ಸರ್ವಜನಾಂಗಗಳ ಶ್ರೇಯಸ್ಸು ಮತ್ತು ಸರ್ವಜನರ ಸಬಲೀಕರಣಕ್ಕೆ ಬದ್ಧವಾದ ವಿಶ್ವಶ್ರೇಷ್ಠ ಸಂವಿಧಾನವನ್ನು ಹೊಂದಿದೆ.
  • ಮೌಢ್ಯ ನಿವಾರಣೆಯಾಗದ ಹೊರತು ಪ್ರಬುದ್ಧ ಭಾರತದ ನಿರ್ಮಾಣ ಸಾಧ್ಯವಿಲ್ಲವೆಂಬ ಅರಿವು ಸಮಸ್ತ ಭಾರತೀಯರಲ್ಲಿ ಮೂಡಿಬರಬೇಕು.
  • ಸಕಲ ಅನಿಷ್ಟಗಳು, ಸಂಕಷ್ಟಗಳು ಮತ್ತು ಸಂಕೀರ್ಣತೆಗಳಿಗೆ ಮೂಢನಂಬಿಕೆಗಳು ಮೂಲವಾಗಿರುವುದರಿಂದ ಇವುಗಳನ್ನು ಸಮಷ್ಟಿ ಪ್ರಜ್ಞೆ ಮತ್ತು ಸಾಮೂಹಿಕ ಹೋರಾಟಗಳಿಂದ ನಿವಾರಿಸುವುದು ಪ್ರಸ್ತುತ ಸಂದರ್ಭದಲ್ಲಿ ಅನಿವಾರ್ಯವಾಗಿದೆ.
  • ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾಗಿರುವ ಮಾಧ್ಯಮಗಳು ಪ್ರಕೃತಿ ಧರ್ಮ, ಭಾರತೀಯ ಪರಂಪರೆ, ಸಂವಿಧಾನಾತ್ಮಕ ಆಶಯಗಳು ಮತ್ತು ಮಾನವೀಯ ಮೌಲ್ಯಗಳಿಗೆ ಅನುಗುಣವಾಗಿ ಮೂಢನಂಬಿಕೆಗಳನ್ನು ನಿವಾರಿಸಿ ಸಮಸಮಾಜವನ್ನು ಸೃಷ್ಟಿಸುವುದಕ್ಕೆ ಸಾಮಾಜಿಕ ಹೊಣೆಗಾರಿಕೆಯಿಂದ ಶ್ರಮಿಸುವುದು ವಿಶೇಷ ಮಹತ್ವ ಹೊಂದಿದೆ.

ಈ ಸಹಸ್ರಮಾನದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿರುವ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಮೂಢನಂಬಿಕೆಗಳ ನಿವಾರಣೆಗಾಗಿ ವಹಿಸಿರುವ ಪಾತ್ರವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವುದು ಇಂದು ಔಚಿತ್ಯಪೂರ್ಣವಾಗಿದೆ.

ಕೋ.ಚೆನ್ನಬಸಪ್ಪನವರು ‘ಮೌಢ್ಯಾಚರಣೆ ನಿಷೇಧ ಕಾಯ್ದೆ ಔಚಿತ್ಯ’ ಎಂಬ ಕೃತಿ (2016) ಯನ್ನು ತತ್ವಜ್ಞಾನ ಮತ್ತು ನ್ಯಾಯಶಾಸ್ತ್ರ ದೃಷ್ಟಿಯಲ್ಲಿ ರಚಿಸಿ, ಮೌಢ್ಯಾಚರಣೆ ನಿಷೇಧಕ್ಕೆ ಸಂಬAಧಿಸಿದ ವಿಚಾರಗಳನ್ನು ವೈಜ್ಞಾನಿಕ ಮತ್ತು ಮಾನವೀಯ ದೃಷ್ಟಿಕೋನಗಳಿಂದಲೂ ವಿಶ್ಲೇಷಿಸಿದ್ದಾರೆ. ‘ಧರ್ಮದ ತಳಹದಿಯೇ ವೈಚಾರಿಕತೆ’ ಎಂಬ ಸಂದೇಶವನ್ನು ಈ ಕೃತಿಯಲ್ಲಿ ನೀಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಮೌಢ್ಯ ನಿವಾರಣೆಯಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಪಾತ್ರವನ್ನು ಕೇಂದ್ರೀಕರಿಸಿದ ಪ್ರಸ್ತುತ ಅಧ್ಯಯನವನ್ನು ಐತಿಹಾಸಿಕ ಅಧ್ಯಯನ, ತಜ್ಞರೊಡನೆ ಸಮಾಲೋಚನೆ ಮತ್ತು ಸಮೀಕ್ಷೆ ಅಧ್ಯಯನ ವಿಧಾನಗಳನ್ನು ನಿರ್ವಹಿಸಲಾಗಿದೆ. ಭಾರತ ಮತ್ತು ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮೌಢ್ಯವನ್ನು ಐತಿಹಾಸಿಕ ವಿಧಾನದಲ್ಲಿ ದಾಖಲಿಸಲಾಗಿದೆ. ತಜ್ಞರೊಡನೆ ಸಮಾಲೋಚನೆ ಅಧ್ಯಯನ ವಿಧಾನದಲ್ಲಿ ಕರ್ನಾಟಕ ರಾಜ್ಯದಲ್ಲಿ ಮೌಢ್ಯ ನಿಷೇಧ ಕುರಿತ ಅಭಿಪ್ರಾಯಗಳನ್ನು ವಿಶ್ಲೇಷಿಸಲಾಗಿದೆ. ಸಮೀಕ್ಷೆಗಳಿಂದ ನಾಡಿನ ಬುದ್ಧಿಜೀವಿಗಳು, ಸಾಮಾಜಿಕ ಸಂಘಟಕರು, ಮಾಧ್ಯಮ ತಜ್ಞರು ಮತ್ತು ಮಾಧ್ಯಮ ಬಳಕೆದಾರರನ್ನು ಪ್ರಶ್ನಾವಳಿ ಮತ್ತು ಸಂದರ್ಶನಗಳ ಮೂಲಕ ಪ್ರಾಥಮಿಕ ಮಾಹಿತಿಗಳೊಂದಿಗೆ ವೈಜ್ಞಾನಿಕವಾಗಿ ವಿಶ್ಲೇಷಣೆ ನಡೆಸಲಾಗಿದೆ.

ಭಾರತೀಯ ಸಮಾಜದಲ್ಲಿ ಮೌಢ್ಯ ಅಸ್ತಿತ್ವದಲ್ಲಿರಲು ವಿವಿಧ ಧರ್ಮಗಳಲ್ಲಿರುವ ನಂಬಿಕೆಗಳು ಮತ್ತು ಆಚರಣೆಗಳು ಕಾರಣವಾಗಿವೆ. ಬಹುಮುಖ್ಯವಾಗಿ ಹಿಂದೂ ಧಾರ್ಮಿಕ ವ್ಯವಸ್ಥೆ ಅತ್ಯಂತ ಅವೈಜ್ಞಾನಿಕ ಹಾಗೂ ಅಮಾನವೀಯ ಮೂಢನಂಬಿಕೆಗಳು ಮತ್ತು ಕಂದಾಚಾರಗಳನ್ನು ರೂಪಿಸಿ ಸ್ವಸ್ಥö ಸಮಾಜ ನಿರ್ಮಾಣಕ್ಕೆ ಅಡ್ಡಬಂದಿದೆ. ಭಾರತದಲ್ಲಿ ಹಿಂದೂ ಮೂಲಭೂತವಾದಿಗಳು ಹಾಗೂ ಪುರೋಹಿತಶಾಹಿ ಮನಸ್ಸುಗಳು ಮೂಢನಂಬಿಕೆಗಳು ಮತ್ತು ಕಂದಾಚಾರಗಳ ಸರಮಾಲೆಯನ್ನು ಸೃಷ್ಟಿಸಿದೆ. ಇಂತಹ ಪುರೋಹಿತಶಾಹಿ ಕೇಂದ್ರಿತ ಮೌಢ್ಯಾರಾಧನೆ ಪುರೋಹಿತರಿಗೆ ಮಾತ್ರ ಲಾಭದಾಯಕವಾಗಿದ್ದು ಪ್ರಜೆಗಳಿಗೆ ಅಪಾರ ಕಷ್ಟ-ನಷ್ಟಗಳನ್ನು ಉಂಟು ಮಾಡಿದೆ.

ಭಾರತದಲ್ಲಿ ಮೌಢ್ಯಾರಾಧನೆಯಿಂದ ಪ್ರಜೆಗಳು ನೈತಿಕ ದಿವಾಳಿತನ, ಸಾಮಾಜಿಕ ಪಿಡುಗುಗಳು, ಆರ್ಥಿಕ ನಷ್ಟಗಳು ಮೊದಲಾದವುಗಳನ್ನು ಅನುಭವಿಸುತ್ತಿದ್ದಾರೆ. ಮೌಢ್ಯಾರಾಧನೆ ಪ್ರಜೆಗಳ ಬದುಕುವ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದೆ. ಮೌಢ್ಯ ನಿವಾರಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾಮಾಣಿಕವಾಗಿ ಮತ್ತು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಮೌಢ್ಯ ನಿವಾರಣೆಯಲ್ಲಿ ನಾಗರಿಕ ಸಮಾಜ ಜವಾಬ್ದಾರಿಯುತ ಪಾತ್ರ ನಿರ್ವಹಿಸಬೇಕು.

ಮೌಢ್ಯ ನಿವಾರಣೆಯಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದಾಗಿ ಪರಿಣಾಮಕಾರಿ ಪಾತ್ರ ವಹಿಸಿಲ್ಲ. ವಿದ್ಯುನ್ಮಾನ ಮಾಧ್ಯಮಗಳು ಮೌಢ್ಯವನ್ನು ವೈಭವೀಕರಿಸಿ ಸಾರ್ವಜನಿಕರನ್ನು ದಾರಿತಪ್ಪಿಸಿವೆ. ಆದರೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ತಮ್ಮ ವಿವೇಕ ಮತ್ತು ಹೊಣೆಗಾರಿಕೆಗಳನ್ನು ಕಳೆದುಕೊಂಡಿರುವುದರಿAದ ಮೌಢ್ಯ ನಿವಾರಣೆಗೆ ಹೆಚ್ಚಿನ ಪ್ರಾಮುಖ್ಯ ನೀಡಿಲ್ಲ.

ಭಾರತ ಸರ್ಕಾರವು ಮೂಢನಂಬಿಕೆಗಳನ್ನು ಸೃಷ್ಟಿಸಿ ಶೋಷಿತರನ್ನು ದುರ್ಬಲಗೊಳಿಸುವ ಪುರೋಹಿತಶಾಹಿಯ ಹುನ್ನಾರಗಳನ್ನು ನಿಷ್ಕಿçಯಗೊಳಿಸುವ ಸಲುವಾಗಿ ಇಡೀ ದೇಶಕ್ಕೆ ಅನ್ವಯವಾಗುವಂತಹ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕು. ಮೌಢ್ಯ ವಿರೋಧಿ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಪ್ರಗತಿಪರರು ಮತ್ತು ವಿಚಾರವಾದಿಗಳಿಗೆ ಸೂಕ್ತ ರಕ್ಷಣೆ ನೀಡಿ ಮೌಢ್ಯದ ವಿರುದ್ಧ ಜನಾಂದೋಲನವನ್ನು ರೂಪಿಸಲು ಸರ್ಕಾರ ಸಹಕರಿಸಬೇಕು. ವಿವಿಧ ಹಂತಗಳಲ್ಲಿ ಮೌಢ್ಯ ವಿರೋಧಿ ಶಿಕ್ಷಣವನ್ನು ಸರ್ಕಾರ ಪ್ರೋತ್ಸಾಹಿಸಿ ಭಾರತೀಯ ಪುನರುತ್ಥಾನಕ್ಕಾಗಿ ಹಿಂದಿನ ಪೀಳಿಗೆಯ ಸಾಧಕರು ನಡೆಸಿದ ವೈಚಾರಿಕ ಹೋರಾಟಗಳನ್ನು ಸುಸ್ಥಿರಗೊಳಿಸಬೇಕು. ಧರ್ಮಾಧಾರಿತ ಭಾರತ ದೇಶದಲ್ಲಿ ಜಾತ್ಯಾತೀತ ರಾಜ್ಯ ಸ್ಥಾಪನೆಗೆ ಸಾಂವಿಧಾನಿಕ ನೆಲೆಗಟ್ಟಿನಲ್ಲಿ ನೀತಿ ನಿರೂಪಕರು ಮತ್ತು ಆಡಳಿತಗಾರರು ಶ್ರಮಿಸಬೇಕು.

ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಜೆಗಳು ವೈಜ್ಞಾನಿಕ ಮನೋಧರ್ಮವನ್ನು ಅಳವಡಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದನ್ನು ಸಮರ್ಪಕವಾಗಿ ಜಾರಿಗೊಳಿಸಿ ವಿದ್ಯಾರ್ಥಿಗಳನ್ನು ವೈಚಾರಿಕತೆ, ವೈಜ್ಞಾನಿಕತೆ, ಸಮಾನತೆ ಮತ್ತು ಮಾನವೀಯತೆಗಳೆಡೆಗೆ ಮುನ್ನಡೆಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಕರ್ತವ್ಯ ನಿರ್ವಹಿಸುವಂತೆ ಸರ್ಕಾರ ಉತ್ತೇಜಿಸಬೇಕು. ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಮೂಢನಂಬಿಕೆಗಳ ನಿವಾರಣೆಗಾಗಿ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಸಾರ್ವಜನಿಕರನ್ನು ವೈಚಾರಿಕ ಹಾಗೂ ವೈಜ್ಞಾನಿಕ ಶಿಕ್ಷಣಗಳ ಮೂಲಕ ಪರಿವರ್ತನೆ ಮತ್ತು ಪ್ರಗತಿಯೆಡೆಗೆ ಮುಂದುವರೆಸುವ ಸಲುವಾಗಿ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತ್ಯೇಕ ಕರಡು ಮಸೂದೆಗಳನ್ನು ಜಾರಿಗೆ ತಂದು ಮೌಢ್ಯವನ್ನು ಪ್ರತಿಪಾದಿಸುವ ಮತ್ತು ವೈಭವೀಕರಿಸುವ ಸ್ಥಾಪಿತ ಹಿತಾಸಕ್ತಿಗಳನ್ನು ಭಾರತೀಯ ದಂಡಸAಹಿತೆ ಸೆಕ್ಷನ್ 300ರ ರೀತ್ಯ ದಂಡ ಮತ್ತು ಶಿಕ್ಷೆಗಳಿಗೆ ಗುರಿಪಡಿಸಬೇಕು.

ಮೌಢ್ಯ ನಿವಾರಣೆಯಲ್ಲಿ ಮಾಧ್ಯಮಗಳ ಪಾತ್ರ

ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವಾಗಿರುವ ಮಾಧ್ಯಮ ಸಾಮಾಜಿಕ ಹೊಣೆಗಾರಿಕೆಯಿಂದ ಮೂಢನಂಬಿಕೆಗಳನ್ನು ನಿವಾರಿಸಿ ಸ್ವಾಸ್ಥ್ಯ ಸಮಾಜವನ್ನು ಕಟ್ಟಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದೃಶ್ಯ ಮಾಧ್ಯಮಗಳು ಪ್ರೇಕ್ಷಕರ ಅಗತ್ಯಗಳನ್ನು ಪೂರೈಸುವುದಕ್ಕಿಂತ ಹೆಚ್ಚಾಗಿ ಅವರ ಆಸೆಗಳನ್ನು ಪೂರೈಸುತ್ತಿವೆ. ಇಂತಹ ಲೆಕ್ಕಾಚಾರಗಳನ್ನು ಆಧರಿಸಿದ ಮಾಧ್ಯಮ ನಿರ್ವಹಣೆ ತಂತ್ರಕ್ಕೆ ತಿಲಾಂಜಲಿ ನೀಡಿ ಮೌಢ್ಯ ವಿರೋಧಿ ಮನೋಧರ್ಮವನ್ನು ಸಾರ್ವಜನಿಕರಲ್ಲಿ ಮಾಧ್ಯಮಗಳು ಬೆಳೆಸಬೇಕು.

ಆಕಾಶವಾಣಿ ಮತ್ತು ದೂರದರ್ಶನ ಸಂಸ್ಥೆಗಳು ಸರ್ಕಾರದ ಮಾರ್ಗದರ್ಶಿ ಸೂತ್ರಗಳು ಮತ್ತು ನೀತಿ ಸಂಹಿತೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಪ್ರವೃತ್ತಿಯನ್ನು ಖಾಸಗಿ ಬಾನುಲಿ ಮತ್ತು ಟಿವಿ ವಾಹಿನಿಗಳು ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ಟಿವಿ ಸುದ್ದಿವಾಹಿನಿಗಳಿಂದ ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ನಿವಾರಿಸಲು ಮಾಧ್ಯಮಗಳು ಸಾಮಾಜಿಕ ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು.

ಆಧುನಿಕ ಸಮೂಹ ಮಾಧ್ಯಮಗಳು, ನವಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು, ವಿಸ್ತರಣಾ ಸಂವಹನ ಮಾಧ್ಯಮಗಳು ಮತ್ತು ಪ್ರಗತಿಪರ ಸಂಘಟನೆಗಳು ಮೌಢ್ಯ ನಿವಾರಣೆಯಲ್ಲಿ ವಹಿಸಬೇಕಾದ ಪಾತ್ರವನ್ನು ಕುರಿತಂತೆ ಮುಂದಿನ ಪೀಳಿಗೆಯ ಸಂಶೋಧಕರು ಪ್ರತ್ಯೇಕವಾಗಿ ಅಧ್ಯಯನ ಕೈಗೊಳ್ಳಬೇಕು. ವಿದ್ಯುನ್ಮಾನ ಮಾಧ್ಯಮಗಳ ಮೌಢ್ಯ ಕೇಂದ್ರಿತ ಕಾರ್ಯಕ್ರಮಗಳ ವಸ್ತು ವಿಷಯಗಳು ಮತ್ತು ಸಾಮಾಜಿಕ ಜಾಲತಾಣಗಳ ಮೌಢ್ಯ ಕೇಂದ್ರಿತ ವಿಚಾರ ವಿನಿಮಯಗಳನ್ನು ಪ್ರತ್ಯೇಕವಾಗಿ ವಿಷಯ ವಿಶ್ಲೇಷಣೆ ವಿಧಾನವನ್ನು ಅಳವಡಿಸಿಕೊಂಡು ಭವಿಷ್ಯದಲ್ಲಿ ಸಂಶೋಧನೆ ನಿರ್ವಹಿಸಬಹುದು. ಮೌಢ್ಯ ನಿವಾರಣೆಯಲ್ಲಿ ಪತ್ರಿಕೋದ್ಯಮ ಮತ್ತು ಸಂವಹನ ಮುಖ್ಯವಾಹಿನಿಯ ಪಾತ್ರದ ಬಗ್ಗೆ ಮುಂದಿನ ಪೀಳಿಗೆಯ ಸಂಶೋಧಕರು ವಿಸ್ತೃತ ಅಧ್ಯಯನ ಕೈಗೊಳ್ಳಬಹುದಾಗಿದೆ. ವಿಶೇಷವಾಗಿ ಮೌಢ್ಯ ನಿವಾರಣೆಯಲ್ಲಿ ಸಂವಹನ ಕಾಳಜಿಗಳು, ಸವಾಲುಗಳು ಮತ್ತು ಹೊಣೆಗಾರಿಕೆಗಳನ್ನು ಕುರಿತಂತೆ ಭವಿಷ್ಯದಲ್ಲಿ ಹೆಚ್ಚಿನ ಸಂಶೋಧನೆಗಳು ಜರುಗಬೇಕು.

ಮೌಢ್ಯಗಳ ಮೂಲಕ ಮಾನಸಿಕ ಗುಲಾಮಗಿರಿಯ ಬೇಡಿಗಳನ್ನು ತೊಡಿಸುವ ಆರ್ಯಮೂಲ ಬ್ರಾಹ್ಮಣಶಾಹಿಯ ಕುತಂತ್ರಗಳ ವಿರುದ್ಧ ದ್ರಾವಿಡ ಮೂಲನಿವಾಸಿಗಳನ್ನು ಎಲ್ಲ ಕುತಂತ್ರಗಳಿಂದ ರಕ್ಷಿಸುವ ಕಾಯಕದಲ್ಲಿ ಆಧುನಿಕ ಸಾಮಾಜಿಕ ಮಾಧ್ಯಮಗಳನ್ನು ಸಕ್ರಿಯವಾಗಿ ಬಳಸಿಕೊಂಡು ಪ್ರಗತಿಪರ ಸಂಘಟನೆಗಳ ನೇತಾರರು ಮತ್ತು ಕಾರ್ಯಕರ್ತರು ಮುನ್ನಡೆಯಬೇಕು. ಶಿಕ್ಷಣ ಸಂಸ್ಥೆಗಳೂ ಕೂಡ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಜಾಗೃತಗೊಳಿಸಿ ಮೂಢನಂಬಿಕೆಗಳನ್ನು ಮೂಲೋತ್ಪಾಟನೆ ಮಾಡಬೇಕು. ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವಲ್ಲಿ ಸ್ವಯಂ ಸೇವಾ ಸಂಸ್ಥೆಗಳೂ ಸಹ ಜವಾಬ್ದಾರಿಯುತವಾಗಿ ಮತ್ತು ವ್ಯವಸ್ಥಿತವಾಗಿ ಕರ್ತವ್ಯ ನಿರ್ವಹಿಸಬೇಕು. ಕರ್ನಾಟಕ ವಿಜ್ಞಾನ ಪರಿಷತ್ತು, ಸಾಹಿತ್ಯ ಅಕಾಡೆಮಿ, ವಿಶ್ವವಿದ್ಯಾನಿಲಯಗಳು ಮೊದಲಾದ ಸಂಸ್ಥೆಗಳು ಆದ್ಯತೆ ಮೇರೆಗೆ ಸಾರ್ವಜನಿಕರಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಮನೋಧರ್ಮವನ್ನು ಬೆಳೆಸಿ ಮೌಢ್ಯ ನಿವಾರಿಸಬೇಕು. ಪ್ರಗತಿಪರರು ಮತ್ತು ಜನಪರ ಸಂಘಟನೆಗಳು ಸಾಮಾಜಿಕ ಮಾಧ್ಯಮಗಳನ್ನು ಸಕ್ರಿಯವಾಗಿ ಬಳಸಿಕೊಂಡು ಮೌಢ್ಯ ನಿವಾರಣೆ ಕರ್ಮಯೋಗದಲ್ಲಿ ತೊಡಗಿಸಿಕೊಳ್ಳಬೇಕು. 

*ಲೇಖಕರು ಪತ್ರಕರ್ತರಾಗಿ, ವನ್ಯಜೀವಿ ಛಾಯಚಿತ್ರಗ್ರಾಹಕರಾಗಿ ಗುರುತಿಸಿಕೊಂಡಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ಮೊಸಳೆ ಗ್ರಾಮದವರು, ಮೈಸೂರಿನಲ್ಲಿ ವಾಸ.

Leave a Reply

Your email address will not be published.