ಪುಕ್ಕ ಬಿಚ್ಚದ ನೆನಪಿನ ಹಕ್ಕಿ!

-ಡಾ.ರಿಯಾಜ಼್ ಪಾಷ

ಒಂದು ದಿನದ ಕ್ರಿಕೆಟ್ ಪಂದ್ಯಾವಳಿಯ “ಹೈಲೈಟ್ಸ್” ನ ಕೆಲವು ತುಣುಕುಗಳನ್ನು ವಾರ್ತೆಗಳಲ್ಲಿ ತೋರಿಸುವಂತೆ, ಲೇಖಕರು ಹಾರಲು ಬಿಟ್ಟ ನೆನಪಿನ ಹಕ್ಕಿಯನ್ನು ಸಣ್ಣಸಣ್ಣ ಅಧ್ಯಾಯಗಳಲ್ಲಿ ಹುಡುಕುತ್ತಾ ಹೋಗಿದ್ದಾರೆ. ಇವರು ಹುಟ್ಟಿನಿಂದ ದಲಿತರಾಗಿದ್ದರೂ, ಬೇರೆ ದಲಿತ ಲೇಖಕರಂತೆ ಹೆಚ್ಚು ಅವಮಾನಗಳನ್ನು ಅನುಭವಿಸಿದ ಯಾತನೆ ಕಾಣುವುದಿಲ್ಲ ಅಥವಾ ಅವುಗಳನ್ನು ಹೇಳಿಕೊಳ್ಳಬೇಕೆಂಬ ಇರಾದೆ ಇಲ್ಲ.

ನೆನಪಿನ ಹಕ್ಕಿಯ ಹಾರಲು ಬಿಟ್ಟು

ಮೂಡ್ನಾಕೂಡು ಚಿನ್ನಸ್ವಾಮಿ

ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು

ಮೊದಲ ಮುದ್ರಣ: 2020

ಮೂಡ್ನಾಕೂಡು ಚಿನ್ನಸ್ವಾಮಿಯವರ `ನೆನಪಿನ ಹಕ್ಕಿ ಹಾರಲು ಬಿಟ್ಟು’ ದಲಿತ ಆತ್ಮ ಕಥನಗಳಿಗೆ ಸೇರುವ ಮತ್ತೊಂದು ಕೃತಿಯಾಗಿದೆ. ಮೂಡ್ನಾಕೂಡು ಚಿನ್ನಸ್ವಾಮಿ “ನಾನೊಂದು ಮರವಾಗಿದ್ದರೆ” ಕವನದ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿರುವವರು. ಕವಿಯಾಗಿ, ನಾಟಕಕಾರವಾಗಿ, ಅಂಕಣ ಬರಹಗಾರರಾಗಿ, ಕಥೆಗಾರರಾಗಿ ಅನುವಾದಕಾರರಾಗಿ ಕನ್ನಡ ಸಾರಸತ್ವಲೋಕದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.

ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದ ಇವರು ಲಂಕೇಶ್, ಸಿದ್ಧಲಿಂಗಯ್ಯ, ಪಾಟೀಲ ಪುಟ್ಟಪ್ಪ, ಕಿ.ರಂ.ನಾಗರಾಜ್, ಸಿ.ನಾಗಣ್ಣರಂತಹ ಸಾಹಿತಿಗಳ ಸಾಂಗತ್ಯದಿಂದಾಗಿ ಮತ್ತಷ್ಟು ಪಕ್ವವಾಗಿದ್ದಾರೆ. ಹೀಗಾಗಿಯೇ ಸತ್ವಯುತವಾದ ಇವರ ಅನೇಕ ಕವನಗಳು ಸ್ಪ್ಯಾನಿಷ್, ಇಂಗ್ಲಿಷ್ ಭಾಷೆಗಳನ್ನೊಳಗೊಂಡಂತೆ ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿವೆ. ಇಂತಹ ಕವಿ ಆತ್ಮಕಥನವನ್ನು ಬರೆದಿದ್ದಾರೆ ಎಂದಾಗ ಸಹಜ ಕುತೂಹಲವುಂಟಾಯಿತು.

ಕೃತಿ ಓದಿ ಮುಗಿಸಿದ ಮೇಲೆ ಅಧಿಕಾರಿಯಾಗಿ, ಲೇಖಕರಾಗಿ ಅಗಾಧವಾದ ಜೀವನಾನುಭವವನ್ನು ಹೊಂದಿರುವ ಇವರು ಯಾವುದೇ ಮುಜುಗರ ಪಡದೇ ತಮ್ಮ ಅನುಭವಗಳನ್ನು ಇನ್ನೂ ಮುಕ್ತವಾಗಿ ಹಂಚಿಕೊಳ್ಳಬಹುದಾಗಿತ್ತು ಎಂದೆನೆಸಿತು.  ಇರಾದೆ ಇಲ್ಲದೇ ಬರೆಯಲು ಹೊರಟಿದ್ದರಿಂದ ಹೆಚ್ಚು ಮುಕ್ತವಾಗಿ ಬರೆದುಕೊಳ್ಳಲು ಸಾಧ್ಯವಾಗಿಲ್ಲ. ಈಗಾಗಲೇ ಸಮಕಾಲೀನ ದಲಿತ ಕವಿಗಳು ಆತ್ಮಕಥೆಗಳನ್ನು ಬರೆದುಕೊಂಡಿರುವುದರಿಂದ ಹಸಿವು, ಬಡತನ, ಅಸ್ಪøಶ್ಯತೆ, ಅವಮಾನ, ಶೋಷಣೆ ಪುನಾರಾವರ್ತನೆಯಾಗುತ್ತವೆ ಎಂಬ ಭಯ ಆತ್ಮಕಥೆಯ ಬರವಣಿಗೆಗೆ ತೊಡಕಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಪ್ರತಿಯೊಬ್ಬರ ದೇಹದ ರೂಪ, ಸೌಂದರ್ಯ, ಆಕಾರ ಹೇಗೆ ಭಿನ್ನವಾಗಿದೆಯೋ ಅನುಭವವೂ ಕೂಡ ಹಾಗೆಯೇ. ಶಿವರಾಮ ಕಾರಂತರು ಹೇಳುವಂತೆ `ಜೀವನ ಅನುಭವಗಳ ಮಹಾಸಂತೆ’.

ಇಲ್ಲಿ ಪ್ರತಿಯೊಬ್ಬರಿಗೂ ವ್ಯಕ್ತಿಗತವಾಗಿ ವಿಭಿನ್ನವಾಗಿರುವ ಸ್ವಂತ ಅನುಭವಗಳಾಗುತ್ತವೆ. ಹೀಗಾಗಿ ಮೂಡ್ನಾಕೂಡು  ಯಾರದೋ ಒತ್ತಡಕ್ಕೆ ಮಣಿದು ಆತ್ಮಕಥನ ಬರೆಯುವ ಬದಲು ಸ್ವಹಿತಾಸಕ್ತಿಯಿಂದ ಬರೆದಿದ್ದರೆ ಎಳೆಎಳೆಯಾಗಿ ಭಾರತೀಯ ಜಾತಿವ್ಯವಸ್ಥೆಯಲ್ಲಿನ ಹುಳುಕುಗಳು, ಅಧಿಕಾರಸ್ಥರ ಹಣದಾಹ, ಕರ್ತವ್ಯಪ್ರಜ್ಞೆಯಲ್ಲಿನ ಲೋಪಗಳು, ಅಧಿಕಾರಿಗಳ ಕ್ರಿಯಾಶೀಲ ಯೋಚನೆಯಲ್ಲಿನ ನಿರ್ಲಕ್ಷ್ಯತನಗಳನ್ನು ಚಿತ್ರಿಸಿ ಸಮಾಜದ ಕಣ್ಣು ತೆರೆಸಬಹುದಾಗಿತ್ತು. ಇವರು ಕೇವಲ ಅಧಿಕಾರಿ ಮತ್ತು ಕವಿಯ ಅಸ್ಮಿತೆಯ ಹಿನ್ನೆಲೆಯಲ್ಲಿ ಇಡೀ ಆತ್ಮಕಥನವನ್ನು ಒಂದು ಸೀಮಿತ ಚೌಕಟ್ಟಿನ ಒಳಗೆ ಕೂರಿಸಿಬಿಟ್ಟಿದ್ದಾರೆ.

ಕುವೆಂಪು ತಮ್ಮ ಆತ್ಮಕಥನ `ನೆನಪಿನ ದೋಣಿ’ಯಲ್ಲಿ ದೈನಂದಿನ ಬದುಕಿನ ಎಲ್ಲಾ ಘಟನಾವಳಿಗಳು, ತಮಗಿದ್ದ ರೋಗರುಜಿನಗಳು, ತನ್ನ ಕುಟುಂಬವನ್ನು ಕಂಡ ರೀತಿ ಹೀಗೆ ಎಲ್ಲವನ್ನು ಹೇಳಿಕೊಂಡಿದ್ದಾರೆ. ಆದರೆ ಇಲ್ಲಿ ಮೂಡ್ನಾಕೂಡು ಒಂದು ದಿನದ ಕ್ರಿಕೆಟ್ ಪಂದ್ಯಾವಳಿಯ “ಹೈಲೈಟ್ಸ್” ನ ಕೆಲವು ತುಣುಕುಗಳನ್ನು ವಾರ್ತೆಗಳಲ್ಲಿ ತೋರಿಸುವಂತೆ, ಈ ಆತ್ಮಕಥನದಲ್ಲಿ ಸಣ್ಣಸಣ್ಣ ಅಧ್ಯಾಯಗಳನ್ನು ಮಾಡಿಕೊಂಡು ಹಾರಲು ಬಿಟ್ಟ ನೆನಪಿನ ಹಕ್ಕಿಯನ್ನು ಹುಡುಕುತ್ತಾ ಹೋಗಿದ್ದಾರೆ.

ಬಾಲ್ಯದ ಕೆಲವು ಘಟನೆಗಳನ್ನು ಹಂಚಿಕೊಳ್ಳುವ ಇವರು, ಪೊಲೀಸ್ ಇಲಾಖೆಯಲ್ಲಿದ್ದ ತಂದೆ ಮೀಸೆ ಬಸಪ್ಪ (ಬಸುರಾಜಯ್ಯ) ಮಾಡಿಸಿದ ಅಭ್ಯಾಸದ ಫಲವಾಗಿ ಶಿಸ್ತನ್ನು ಮೈಗೂಡಿಸಿಕೊಂಡಿದ್ದಾರೆ. ಕಷ್ಟ, ನೋವು, ಅವಮಾನಗಳನ್ನು ಅನುಭವಿಸಿದ್ದ ಇವರ ತಂದೆ ತನ್ನ ಮಗ ಸಮಾಜದಲ್ಲಿ ಗೌರವವುಳ್ಳ ಹುದ್ದೆಯಲ್ಲಿರಬೇಕೆಂಬ ಆಸೆಯಿಂದ ಐಎಎಸ್ ಮಾಡಿಸಬೇಕೆಂಬ ಹಂಬಲವುಳ್ಳವರಾಗಿದ್ದರು. ತಮ್ಮ ತಂದೆ ಪ್ರಾಮಾಣಿಕರಾಗಿದ್ದರು ಎಂದು ಹೇಳಿದರೂ, ಕೆಲವೊಮ್ಮೆ ತಂದೆಯ ಬದಲಾಗಿ ಬಸ್ ಸ್ಟ್ಯಾಂಡ್ ಡ್ಯೂಟಿ, ಚೆಕ್ಪೋಸ್ಟ್ ಡ್ಯೂಟಿ, ಸಿನೆಮಾ ಟಾಕೀಸಿನ ಡ್ಯೂಟಿಯನ್ನು ಮಾಡಬೇಕಾದರೆ ಮಾಮೂಲಿ ಕಲೆಕ್ಷನ್ ಆಗುತ್ತಿತ್ತು ಎಂದು ಹೇಳಿಕೊಂಡಿರುವುದರಿಂದ ಈ ವ್ಯವಸ್ಥೆಯ ಭ್ರಷ್ಟತೆ ಅನಾವರಣಗೊಳ್ಳುತ್ತದೆ.

ಬಾಲ್ಯವೆಲ್ಲವನ್ನು ತಾಯಿಯ ಊರು ದೊಡ್ಡರಾಯಪೇಟೆ, ತಂದೆಯ ಊರು ಮೂಡ್ನಾಕೂಡು ಹಾಗೂ ಚಾಮರಾಜನಗರದಲ್ಲಿ ಕಳೆದ ಇವರಿಗೆ ಅನೇಕ ಕಹಿ ಅನುಭವಗಳಾಗಿವೆ. ಅವುಗಳಲ್ಲಿ ಈ ಆತ್ಮಕಥನದಲ್ಲಿ ಹೆಚ್ಚು ಚಿಂತೆಗೀಡುಮಾಡುವ ಪ್ರಸಂಗ ನಮ್ಮ ಸಮಾಜದಲ್ಲಿ ಜಾರಿಯಲ್ಲಿರುವ ಹರಕೆ ತೀರಿಸುವ ಪದ್ಧತಿ. ಅದರಲ್ಲೂ ಸ್ವಂತ ತಂಗಿಯನ್ನೇ ದಾನವಾಗಿ ಕೊಟ್ಟುಬಿಡುವ ಪ್ರಸಂಗ. ಜ್ಯೋತಿಷಿಯ ಸಲಹೆಯಂತೆ ತಂಗಿಯನ್ನು ಅನಾಥಾಶ್ರಮಕ್ಕೆ ಕೊಟ್ಟುಬಿಡುತ್ತಾರೆ. ಆಗ ಚಿಕ್ಕ ಬಾಲಕರಾಗಿದ್ದ ಚಿನ್ನಸ್ವಾಮಿ ದೊಡ್ಡವರಾದ ಮೇಲೆ ಆ ತಂಗಿಯನ್ನು ಹುಡುಕಲು ಪ್ರಯತ್ನಿಸಿದರಾ? ಇಂತಹ ಅನಿಷ್ಟ ಪದ್ಧತಿಯ ವಿರುದ್ಧ ಧ್ವನಿ ಎತ್ತಿದ್ದಾರಾ? ಎಂಬುದಕ್ಕೆ ಉತ್ತರ ದೊರೆಯುವುದಿಲ್ಲ.

ಇವರು ಹುಟ್ಟಿನಿಂದ ದಲಿತರಾಗಿದ್ದರೂ, ಬೇರೆ ದಲಿತ ಲೇಖಕರು ಅನುಭವಿಸಿದಂತೆ ಹೆಚ್ಚು ಅವಮಾನಗಳನ್ನು ಅನುಭವಿಸಿದ ಯಾತನೆ ಕಾಣುವುದಿಲ್ಲ ಅಥವಾ ಹೇಳಿಕೊಳ್ಳಬೇಕೆಂಬ ಇರಾದೆ ಇಲ್ಲದಿರುವಂತೆ ಕಾಣುತ್ತದೆ. ಶಾಲೆಯಲ್ಲಿ ಓದುತ್ತಿರುವಾಗ ಹಿಂದಿನಿಂದ “ಧೇಡ್” ಎಂದು ದಲಿತ ಹುಡುಗರನ್ನು ಕುರಿತು ಸಂಬೋಧಿಸುತ್ತಿದ್ದದ್ದು, ಬ್ರಾಹ್ಮಣರಾದ ಕೇಶವಮೂರ್ತಿ ಬೇರೆಯವರಿಗೆ ಊಟಕ್ಕೆ ಕರೆದು, ಚಿನ್ನಸ್ವಾಮಿಯವರಿಗೆ ಊಟಕ್ಕೆ ಕರೆಯದೇ ಇದ್ದದ್ದು. ಇಂತಹ ಜಾತಿಕಾರಣದ ಅವಮಾನಗಳು ಅಲ್ಲಲ್ಲಿ ಕಾಣಿಸುತ್ತವೆ. ಆದ್ದರಿಂದಲೇ ತಾತ ಬೆಳ್ಳಾಶಾಸ್ತ್ರಿಯ ತಮ್ಮಂದಿರಲ್ಲಿ ಒಬ್ಬ ತಮ್ಮ ಕ್ರೈಸ್ತಮತಕ್ಕೆ ಮತಾಂತರಗೊಂಡಿದ್ದರಿಂದ ತಾತನೂ ಕ್ರೈಸ್ತನಾಗಿದ್ದರೆ ಸ್ವಾಭಿಮಾನದ ಬದುಕು ತಮ್ಮದಾಗುತ್ತಿತ್ತು ಎಂದು ನೊಂದುಕೊಂಡಿದ್ದು ಒಂದು ತಳಸಮುದಾಯದ ಶೋಷಿತ ವ್ಯಕ್ತಿ ಬದಲಾವಣೆಗಾಗಿ ಹಾತೊರೆಯುವುದು ಗೋಚರವಾಗುತ್ತದೆ.

ಸಮಾಜದಲ್ಲಿ ತೀರ ಮಡಿವಂತಿಕೆಯಿಂದ ಇರುವ ಬ್ರಾಹ್ಮಣ ಸ್ನೇಹಿತರೇ ಮೊದಲ ಬಾರಿಗೆ “ಬೀರ್” ಕುಡಿಯುವುದನ್ನು ಕಲಿಸಿದ್ದು ಎಂದು ಹೇಳಿಕೊಂಡಿರುವುದರಿಂದ ಜಾತಿ ಧರ್ಮಗಳ ಗೋಡೆಗಳ ದಾಟಬೇಕಾಗಿರುವುದರ ಕಡೆಗೆ ಗಮನ ಹರಿಸಿದ್ದಾರೆ. ಸ್ವಭಾವದಲ್ಲಿ ತೀರ ಖಾಸಗಿತನವನ್ನು ಬಯಸುವ ಇವರು ಸೀಮಿತ ಗೆಳೆಯವರ್ಗವನ್ನು ಮಾತ್ರ ಹೊಂದಿದ್ದಾರೆ.

ಮೂಡ್ನಾಕೂಡು ಅವರ ವ್ಯಕ್ತಿತ್ವದ ಮೇಲೆ ಹೆಚ್ಚು ಪ್ರಭಾವ ಬೀರಿರುವವರು ಬುದ್ಧ ಮತ್ತು ಅಂಬೇಡ್ಕರ್. ಹಾಗಾಗಿಯೇ “ಹಿಂದೂವಾಗಿ ಹುಟ್ಟಿದ್ದೇನೆ; ಹಿಂದೂವಾಗಿ ಸಾಯಲಾರೆ” ಎಂಬ ಅಂಬೇಡ್ಕರರ ಮಾತು ಜಾತಿಹಿಂಸೆಯಿಂದ ಹೊರಬರಲು ನಿರ್ಧಾರ ಕೈಗೊಳ್ಳುವಂತೆ ಮಾಡುತ್ತದೆ. ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ಈ ಮಾತೇ ಪ್ರೇರಕ ಎಂಬುದು ಕೃತಿ ಓದಿದ ಮೇಲೆ ಮನದಟ್ಟಾಗುತ್ತದೆ. ಕಂಡ ಕಂಡ ದೇವರುಗಳಿಗೆ ಕೈ ಮುಗಿಯುತ್ತಿದ್ದ ಮೂಡ್ನಾಕೂಡು ಅವರಿಗೆ ಅಂಬೇಡ್ಕರರ ಬಗೆಗಿನ ಓದು ಆ ಭ್ರಮೆಯಿಂದ ಹೊರಬರುವಂತೆ ಮಾಡುತ್ತದೆ. ಹೀಗಾಗಿ ಹುಟ್ಟಿನಿಂದ ಅನುಸರಿಸಿಕೊಂಡು ಬಂದ ವೈದಿಕ ಧರ್ಮ ಹಾಗೂ ಬೌದ್ಧಧರ್ಮದ ನಡುವಣ ಸೈದ್ಧಾಂತಿಕ ಭಿನ್ನತೆಗಳ ಕುರಿತು ಸ್ಪಷ್ಟ ತಿಳಿವಳಿಕೆ ಇದೆ. ಆದ್ದರಿಂದ ಬೌದ್ಧ ಧರ್ಮವನ್ನು ಸ್ವೀಕರಿಸಿ ವೈದಿಕ ಧರ್ಮ ಈ ಸಮಾಜಕ್ಕೆ ಹೇಗೆ ಮಾರಕ ಎಂಬುದನ್ನು ಸ್ಪಷ್ಟಪಡಿಸುತ್ತಲೇ ಬುದ್ಧ ಪ್ರತಿಪಾದಿಸಿದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿದ್ದಾರೆ.

ವೈವಾಹಿಕ ಜೀವನದ ಕುರಿತು ಹಂಚಿಕೊಳ್ಳುವ ಮೂಡ್ನಾಕೂಡು ಚಿನ್ನಸ್ವಾಮಿ ತಮ್ಮ ಮದುವೆಗೂ ಪೂರ್ವ ಕನ್ಯಾನ್ವೇಷಣೆಗೆ ಹೊರಟ ಸಂದರ್ಭಗಳನ್ನು ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ಕೆಲಸಕ್ಕಾಗಿ ಅರ್ಜಿಗಳನ್ನು ಹಾಕಿಕೊಂಡಾಗ ಸಂಬಂಧಪಟ್ಟ ಅಧಿಕಾರಿಗಳು ಅವರ ಮಗಳು ಅಥವಾ ಸಂಬಂಧಿಕರನ್ನು ಮದುವೆ ಮಾಡಿಕೊಂಡರೆ ಹುದ್ದೆ ಕೊಡುವುದಾಗಿ ಪೀಡಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಯುವಕರಾಗಿದ್ದಾಗ ಇವರು ಇಷ್ಟಪಟ್ಟಿರಬಹುದಾದ ಹೆಣ್ಣುಗಳ ಪ್ರಸ್ತಾಪವಿಲ್ಲ. ತಮ್ಮ ಪತ್ನಿಯ ಜೊತೆಗಿನ ಅನುಭವಗಳನ್ನು ಒಂದೆರಡು ಕಡೆ ಮಾತ್ರ ಹಂಚಿಕೊಂಡಿದ್ದಾರೆ. ಈ ಆತ್ಮಕಥನದಲ್ಲಿ ಅವರ ಹೆಂಡತಿ ಭಾಗ್ಯ ಅವರಿಗೆ ಹೆಚ್ಚು ಜಾಗವೇ ಇಲ್ಲವಾಗಿದೆ. ಒಬ್ಬ ವ್ಯಕ್ತಿಯ ಬೇರೆ ಬೇರೆ ಐಡೆಂಟಿಟಿಗಳ ಹಿನ್ನೆಲೆಯಲ್ಲಿ ತಂದೆಯಾಗಿ, ಗಂಡನಾಗಿ, ಒಬ್ಬ ಸಾಮಾನ್ಯ ಪ್ರಜೆಯಾಗಿ ಕಂಡುಂಡ ಅನುಭವಗಳನ್ನು ಈ ಕೃತಿಯಲ್ಲಿ ಏಕೆ ಹೆಚ್ಚು ದಾಖಲಿಸಲಿಲ್ಲ ಎಂಬ ಪ್ರಶ್ನೆ ಕಾಡದಿರುವುದಿಲ್ಲ.

ಮೂಡ್ನಾಕೂಡು ಚಿನ್ನಸ್ವಾಮಿಯವರು ಅಧಿಕಾರಿಯಾಗಿ, ಕವಿಯಾಗಿ ವಿದೇಶ ಪ್ರಯಾಣ ಮಾಡಿದಾಗ ವಿಶಿಷ್ಟ ಅನುಭವಗಳಾಗಿವೆ. ಅದರಲ್ಲೂ ವಿದೇಶ ಪ್ರವಾಸದಲ್ಲಿ ಮನೆ ಕೆಲಸದಾಕೆಯನ್ನು, ಮಾಲೀಕಳು, ಆಕೆ ಮನೆಗೆ ಬಂದಾಗ ಮತ್ತು ಹೋಗುವಾಗ ಅಪ್ಪಿಕೊಳ್ಳುವ ದೃಶ್ಯ ಇವರ ಮೇಲೆ ವಿಶೇಷ ಪ್ರಭಾವ ಬೀರಿದೆ. ಭಾರತದಲ್ಲಿ ಮೇಲ್ಜಾತಿಯವರು ಕೆಳಜಾತಿಗಳವರ ಮೇಲೆ ಶೋಷಣೆ, ದಬ್ಬಾಳಿಕೆಯನ್ನೇ ಪ್ರಮುಖ ಅಸ್ತ್ರವನ್ನಾಗಿ ಪ್ರಯೋಗಿಸುವ ಸಂದರ್ಭದಲ್ಲಿ ಇಂತಹ ದೃಶ್ಯ ಇಲ್ಲಿ ಕನಸಿನ ಮಾತೇ ಸರಿ. ಉತ್ತರ ಕರ್ನಾಟಕದ ಬಹುತೇಕ ಕಡೆಗಳಲ್ಲಿ ರಸ್ತೆ ಬದಿಯಲ್ಲಿಯೇ ಕುಳಿತು ಶೌಚ ಮಾಡುವ, ಎಲ್ಲೆಂದರಲ್ಲಿ ಎಲೆ ಅಡಿಕೆ ತಿಂದು ಉಗಿದು ಅಂದಚಂದವನ್ನು ಕೆಡಿಸುವ ವ್ಯಕ್ತಿಗಳನ್ನು ಕಂಡ ಮೂಡ್ನಾಕೂಡು ಚಿನ್ನಸ್ವಾಮಿಯವರಿಗೆ ವಿದೇಶದಲ್ಲಿ ಸ್ವಚ್ಛವಾಗಿ ಕಂಗೊಳಿಸುವ ರಸ್ತೆಗಳು, ಶೌಚಾಲಯಗಳು ಮನಸ್ಸಂತೋಷನ್ನುಂಟು ಮಾಡಿವೆ. ಹಾಗಾಗಿ ವಿದೇಶ ಪ್ರವಾಸ ಮಾಡಿ ಬಂದಾಗಲೆಲ್ಲಾ ಭಾರತದಲ್ಲಿ ಇಂತಹ ಬದಲಾವಣೆ ಯಾವಾಗ ಸಾಧ್ಯವಾಗುತ್ತದೆ ಎಂದು ಯೋಚಿಸಿರುತ್ತಾರೆ. ಸರ್ಕಾರಿ ವ್ಯವಸ್ಥೆಯಲ್ಲಿದ್ದು ಉನ್ನತ ಹುದ್ದೆಯನ್ನು ಅಲಂಕರಿಸಿದ್ದ ಇವರು, ಸಂಬಂಧಪಟ್ಟ ಅಧಿಕಾರದಲ್ಲಿರುವವರ ಗಮನ ಸೆಳೆದು ಈ ರೀತಿಯ ಬದಲಾವಣೆಗೆ ಸ್ಪಲ್ಪಮಟ್ಟಿಗಾದರೂ ಪ್ರಯತ್ನಿಸಬಹುದಾಗಿತ್ತು.

ಒಟ್ಟಿನಲ್ಲಿ ಸ್ವಕೇಂದ್ರಿತ ಆತ್ಮಕಥನದಂತೆ ಕಾಣುವ ಈ ಕೃತಿ, ಸಾಹಿತಿಗಳ ಒಡನಾಟ, ವೃತ್ತಿ ಬದುಕು, ಮತಾಂತರ, ಅಂತರರಾಷ್ಟ್ರೀಯ ಸಮ್ಮೇಳನಗಳು, ಹೆಚ್ಚಾಗಿ ವಿದೇಶಿ ಪ್ರವಾಸದ ಸುತ್ತಲೇ ಗಿರಕಿ ಹೊಡೆಯುತ್ತದೆ. ಜಾತಿ ಪದ್ಧತಿಯ ಸುಳಿಗೆ ಸಿಕ್ಕಿಹಾಕಿಕೊಂಡಿರುವ ತಳಸಮುದಾಯದ ಉದ್ಧಾರ ಹೇಗೆ ಎನ್ನುವುದು ಒಂದು ಪ್ರಶ್ನೆಯಾಗಿ ಉಳಿದುಬಿಡುತ್ತದೆ. ತಾನುಂಡ ಕಷ್ಟ ಕಾರ್ಪಣ್ಯಗಳಿಗೆ ಮತಾಂತರವೊಂದೆ ಪರಿಹಾರವೇ? ಹುಟ್ಟಿನಿಂದ ಕೊನೆಯವರೆಗೂ ಶೋಷಣೆ, ದಬ್ಬಾಳಿಕೆಗೆ ಒಳಗಾಗುವ ದಲಿತ ಸಮುದಾಯ, ತಮ್ಮನ್ನು ಸುತ್ತುವರಿದ ವಿಷವರ್ತುಲದಿಂದ ಬಿಡಿಸಿಕೊಳ್ಳುವ ಬಗೆ ಹೇಗೆ? ಎನ್ನುವ ಪ್ರಶ್ನೆಗಳನ್ನು ಎದುರುಗೊಳ್ಳಬಹುದಾಗಿತ್ತು. ಆ ಬಗೆಗಿನ ಚಿಂತನೆಯನ್ನು ಒರೆಗೆ ಹಚ್ಚಬಹುದಾಗಿತ್ತು.

ಹಾಗೆಯೇ ಆತ್ಮ ಕಥನದ ಬರವಣಿಗೆಯ ವಿಚಾರಕ್ಕೆ ಬಂದರೆ “ಒಬ್ಬ ಕವಿಗೆ ಅಥವಾ ಬರಹಗಾರನಿಗೆ ಅನುಭವವೇ ದ್ರವ್ಯವಾಗುವುದರಿಂದ ತನ್ನ ಸೃಜನಶೀಲ ಬರವಣಿಗೆಯಲ್ಲಿ ಅವು ಅಪ್ರಜ್ಞಾಪೂರ್ವಕವಾಗಿ ಸೇರಿಕೊಂಡು ಬಿಡುತ್ತವೆ ಎಂದುಕೊಂಡು ಆತ್ಮಕಥೆ ಬರೆಯದೇ ನಿರ್ಲಿಪ್ತನಾಗಿದ್ದೆ” ಎಂದಿದ್ದಾರೆ. ಒಬ್ಬ ಬರಹಗಾರನ ಆಂತರ್ಯವನ್ನು ಅರ್ಥಮಾಡಿಕೊಂಡು ಓದುಗ ಕಾವ್ಯವನ್ನಾಗಲೀ, ಸಾಹಿತ್ಯವನ್ನಾಗಲೀ ಓದುವುದಿಲ್ಲ, ಬದಲಾಗಿ ತನ್ನ ಅರಿವಿನ ಚೌಕಟ್ಟಿನೊಳಗೆ ಇಟ್ಟು ಓದುತ್ತಾನೆ. ಹಾಗಾಗಿ ವ್ಯಕ್ತಿಗತವಾದ ಅನುಭವಗಳ ಹಿನ್ನೆಲೆಯಲ್ಲಿ ಸಮಾಜಕೇಂದ್ರಿತ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದರೆ ಈ ಕೃತಿಗೆ ಇನ್ನಷ್ಟು ಮೆರುಗು ಬರುತ್ತಿತ್ತು.

*ಲೇಖಕರು ಯಲಹಂಕದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರು; ‘ಜನಪದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ನೆಲೆಗಳು’ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ. ಪಡೆದಿದ್ದಾರೆ.

 

Leave a Reply

Your email address will not be published.