ಪುತ್ತೂರಿನಿಂದ ಟಿಂಬಕ್ಟೂಗೆ ಸೆಲ್ಫಿ ಇಲ್ಲದ ತಿರುಗಾಟ!

ನಾನು ಟಿಂಬಕ್ಟೂಗೆ ಹೋಗಿದ್ದೆ ಎಂದರೆ, “ಅರೇ, ಅಂತಹ ಊರೇ ಇಲ್ಲ, ಹೇಗೆ ಹೋಗಿಬಂದಿರಿ? ಯಾಕೆ ಹೋದಿರಿ?” ಎಂದು ಕೇಳುವವರೇ ಹೆಚ್ಚು.

ಇದು ನನ್ನ ಜೀವನದಲ್ಲಿಯೇ ಅತ್ಯಂತ ಸ್ವಾರಸ್ಯಕರವಾದ ತಿರುಗಾಟ. ನಾನು ಅಲ್ಲಿಗೆ ಹೋಗಿದ್ದು 2009ರಲ್ಲಿ. ಅದರ ಬಗ್ಗೆ ಈಗ ಏಕೆ ಬರೆಯುತ್ತಿದ್ದೇನೆ ಎಂದು ನಿಮಗೆ ಅನಿಸಬಹುದು. ಮೊದಲ ಕಾರಣ, ನಾನು ನೋಡಿದ ಟಿಂಬಕ್ಟೂವನ್ನು ಈಗ ನಿಮಗೆ ನೋಡಲು ಅಸಾಧ್ಯ. ಟಿಂಬಕ್ಟೂವನ್ನು ಈಗ ಇಸ್ಲಾಮಿನ ಉಗ್ರಗಾಮಿಗಳು ಧ್ವಂಸಮಾಡುವ ಪ್ರಯತ್ನದಲ್ಲಿ ಇದ್ದಾರೆ. ಎರಡನೆಯದಾಗಿ, ಕೊರೊನದ ಗೃಹಬಂಧನದಿಂದಾಗಿ ನನ್ನ ಸತತ ತಿರುಗಾಟಗಳು ನಿಂತುಹೋಗಿವೆ. 2020 ಜೂನ್ನಲ್ಲಿ ಬೊರ್ನಿಯಾ ಮತ್ತು ಸುಮಾತ್ರಾ ಹಾಗೂ ಡಿಸೆಂಬರ್ ನಲ್ಲಿ ಮೆಕ್ಸಿಕೋಗೆ ಹೋಗುವವಳಿದ್ದೆ. ಆದರೆ ಹೋಗಲು ಆಗಲಿಲ್ಲ. ಇನ್ನು ಮುಂದೆ ಏನೋ, ಯಾರಿಗೆ ಗೊತ್ತು? ಆದರೆ ನನ್ನ ಹಿಂದಿನ ತಿರುಗಾಟವನ್ನು ನೆನೆಸಿಕೊಂಡು ಫೋಟೋಗಳನ್ನು ನೋಡಿ, ಮೊದಲು ಹೋದಾಗಿನಂತೆ ಖುಷಿಪಡಬಹುದು. ಖುಷಿಯನ್ನು ನಿಮ್ಮ ಜೊತೆ ಸವಿಯುವ ಪ್ರಯತ್ನವೇ ನನ್ನ ಪಯಣದ ಕಥೆ.

-ಮಾಲವಿಕಾ ಕಪೂರ

ನೀವು ಗೂಗಲ್ ಮತ್ತು ನ್ಯಾಶನಲ್ ಜಿಯೋಗ್ರಾಫಿಕ್ ನೋಡಿದರೆ, ಯಾವ ದೇಶವನ್ನೂ ಕಾಣಬಹುದು, ಅದರ ಬಗ್ಗೆ ತಿಳಿಯಬಹುದು. ಆದರೆ ಇಲ್ಲಿ ಹೇಳುತ್ತಿರುವುದು ಅದೇ ಊರಿನವರಿಂದ ನಾನು ಕೇಳಿ ತಿಳಿದ ಕಥೆಗಳು.

ಬುರ್ಕಿನೋ ಫಾಸೋ ಮತ್ತು ಮಾಲಿ ಇರುವುದು ಪಶ್ಚಿಮ ಆಫ್ರಿಕಾದಲ್ಲಿ. ಇವು ಮೊದಲು ಫ್ರೆಂಚ್ ಕಾಲೋನಿಗಳಾಗಿದ್ದವು. ಈ ಪ್ರಯಾಣಕ್ಕೆ ನಾನು ಒಬ್ಬಳೇ ಹೋಗಿರಲಿಲ್ಲ. ನನ್ನ ಹಳೆಯ ಜೊತೆಗಾರರಾದ ಎಲೆನ್ ಮತ್ತು ಝೀಲ್ ಬಿಬೋ ಜೊತೆಗಿದ್ದರು. ನನ್ನ ಗಂಡ ಡಾ.ಕಪೂರರು ಮತ್ತು ನಾನು ಹಿಂದೆ ನಡೆಸಿದ ನಮ್ಮ ಹಿಮಾಲಯದ ಸನ್ಯಾಸಿಗಳ ಅಧ್ಯಯನದಲ್ಲಿ ಇವರಿಬ್ಬರೂ ನಮ್ಮ ಜೊತೆ ಇದ್ದರು. ನಮ್ಮೊಂದಿಗೆ ಹಿಮಾಲಯದ ಆಶ್ರಮಗಳು ಹಾಗೂ ಕುಂಭಮೇಳ ಸಂದರ್ಶಿಸುತ್ತಿದ್ದರು.   

ಅವರು ಕೆನಡಾದ ಮೆಗ್ಗಿಲ್ ಯುನಿವರ್ಸಿಟಿಯ ಮಾನವಸಮಾಜಶಾಸ್ತ್ರಜ್ಞರು. ಅವರು ಚಿಕ್ಕ ವಯಸ್ಸಿನಿಂದಲೇ ಆಫ್ರಿಕಾದ ಬಗ್ಗೆ ತಿಳಿದವರು. ಝೀಲ್‍ರಿಗೆ ಫ್ರೆಂಚ್ ಅಲ್ಲದೇ, ಆಫ್ರಿಕಾದ ಹತ್ತು ಭಾಷೆಗಳು, ಹಿಂದಿ, ಅರಾಬಿಕ್ ಮತ್ತು ಯುರೋಪಿನ ಭಾಷೆಗಳೂ ಗೊತ್ತಿದ್ದವು.

ಅವರು ಪಶ್ಚಿಮ ಆಫ್ರಿಕಾದ ಬುರ್ಕಿನೋ ಫಾಸೋನಲ್ಲಿ ಇರುವ ನುವಾನೋ ಎಂಬಲ್ಲಿ ಒಂದು ಪರಿಷತ್ತಿಗೆ ಬರುತ್ತೀಯಾ ಎಂದು ಕೇಳಿದಾಗ ನಾನು ತಟ್ಟನೇ ಸಿದ್ಧಳಾದೆ. ಇದು ನನ್ನ ಆಫ್ರಿಕಾದ ಮೂರು ಪಯಣಗಳಲ್ಲಿ ಮೊದಲನೆಯದು. ಇದು ನವೆಂಬರ್ – ಡಿಸೆಂಬರ್ 2009ರಲ್ಲಿ ನಡೆದ ಕಥೆ. ಆಗ ಹಳದಿ ಜ್ವರದ ಲಸಿಕೆ, ಮಲೇರಿಯಾದ ಕ್ವಿನಿನ್ ಮಾತ್ರೆಗಳ ಅಗತ್ಯವಿತ್ತು. ನಾವು ಪ್ಯಾರಿಸ್‍ನಲ್ಲಿ ಕಾನ್ಫರೆನ್ಸಿಗೆ ಬಂದ ಉಳಿದವರ ಜೊತೆ ಬುರ್ಕಿನೋ ಫಾಸೋನ ಓಗಾಡೂಗೂ (Ouagadougou) ವಿಮಾನ ನಿಲ್ದಾಣಕ್ಕೆ ಬಂದೆವು. ಸ್ಥಳೀಯ ಜನ ಇದನ್ನು `ವಾಗಾ’ ಎಂದು ಕರೆಯುತ್ತಾರೆ. ಅಲ್ಲಿಯವರು ಯಾವಾಗಲೂ ನಗು ನಗುತ್ತಾ ಕೈ ಕುಲುಕಿ ಮಾತನಾಡುವ ಜನ. ದೊಡ್ಡ ಮನುಷ್ಯರೇ ಇರಲಿ, ಕೂಲಿಯವರೇ ಇರಲಿ, ಎಲ್ಲರೂ ಸ್ನೇಹಿತರಂತೆ ನಡೆದುಕೊಳ್ಳುತ್ತಿದ್ದರು.

ಮಾಲಿಯ ವೀಸಾ ನಮಗೆ ಬುರ್ಕಿನೋ ಫಾಸೋನಲ್ಲಿ ದೊರೆಯಿತು. ಅದು ಭಾರತದಲ್ಲಿ ಸಿಗುವುದಿಲ್ಲ.

ಝೀಲ್ ಅವರು ಟಿಂಬಕ್ಟೂ ಇಲ್ಲಿಂದ ಬಹಳ ದೂರವಿಲ್ಲ ಎಂದಾಗಿನಿಂದ ನನಗೆ ಅಲ್ಲಿಗೆ ಹೋಗಲೇ ಬೇಕು ಅನ್ನಿಸುತ್ತಿತ್ತು. ಆದರೆ ಎಲೆನ್‍ಗೆ ಹೋಗಲು ಭಯವಿತ್ತು. ನಾವು ಹೋಗುವ ಒಂದು ವಾರದ ಮೊದಲಷ್ಟೇ ಅಲ್ಲಿ ಯಾರೋ ಒಬ್ಬ ಫ್ರೆಂಚ್ ಪಾದ್ರಿಯನ್ನು ಕೊಂದಿದ್ದರು. ಆದರೆ ಅಲ್ಲಿಯವರನ್ನು ಕೇಳಿದಾಗ, “ಇಲ್ಲ, ಅಂತಹ ತೊಂದರೆ ಇಲ್ಲ. ಅದು ಅವರವರ ಜಗಳದ ಕಾರಣದಿಂದ ಆಗಿದ್ದು” ಎಂದಿದ್ದರು.

ನುವಾನೋದಲ್ಲಿ ನನ್ನ ಬೆಳಗ್ಗಿನ ತಿರುಗಾಟ

ಯಾವುದೇ ಸ್ಥಳಕ್ಕೆ ಪ್ರವಾಸಕ್ಕೆ ಹೋದರೂ, ನನ್ನ ಮೊದಲ ಕೆಲಸ ಬೆಳಿಗ್ಗೆ ಎದ್ದು, ಸುತ್ತಮುತ್ತಲಿನ ತಿರುಗಾಟ ಮಾಡುವುದು. ಹೊಸ ಸ್ಥಳದ ಈ ಮೊದಲ ಪರಿಚಯ ನನಗೆ ಬಹಳ ಅಗತ್ಯ. ಬೆಳಗ್ಗೆ ಎದ್ದು ಹೊರಗೆ ಬಂದರೆ ಝಳ ಝಳ ಬಿಸಿಲು, ಸೆಕೆ, ಕೆಂಪು ಮಣ್ಣು ಮತ್ತು ದೂಳು. ಸಣ್ಣ ದಾರಿಗಳು-ಹಳ್ಳಿ ಕೊಂಪೆ. ಚಿಕ್ಕ ಗೂಡಿನ ಅಂಗಡಿಗಳು, ಚಿಮಣಿ ಮತ್ತು ಲಾಟೀನು ದೀಪಗಳು, ಬಾಡಿಗೆ ಸೈಕಲ್ಲುಗಳು. ಇನ್ನು ಮುಂದೆ ಹೋದರೆ, ಗೇರು, ಮಾವು, ಹುಣಸೆ, ಬೇವಿನ ಮರಗಳು. ಎಲ್ಲಿ ನೋಡಿದರೂ ಅಲ್ಲಿ ಕೆಂಪು ಮುರಕಲ್ಲುಗಳು ತುಂಬಿದ್ದವು. ಇದೆಲ್ಲ ನೋಡಿದ ನನಗೆ ನಾನು ಬೇರೆ ದೇಶದಲ್ಲಿ ಇದ್ದೇನೆ ಎಂದು ಅನ್ನಿಸಲಿಲ್ಲ. ನಾನು ಹುಟ್ಟು ಬೆಳೆದ ದಕ್ಷಿಣ ಕನ್ನಡದ ಪುತ್ತೂರಿಗೆ ಬಂದಿದ್ದೇನೆ ಎನಿಸುತಿತ್ತು.

ನುವಾನೋದಲ್ಲಿ ಮಿಷನರಿಗಳು ಆಸ್ಪತ್ರೆ ಮತ್ತು ಶಾಲೆಗಳ ಮೂಲಕ ಬಹಳ ಕೆಲಸ ಮಾಡಿದ್ದಾರೆ. ಅಲ್ಲಿಯವರು ನಮ್ಮನ್ನು ಒಂದು ಹಳ್ಳಿಗೆ ಮತ್ತು ಮೇಯರನ ದೊಡ್ಡಸಭೆಗೆ ಕರೆದೊಯ್ದರು. ಅಲ್ಲಿಯ ಜನರಿಗೆ ಆರೋಗ್ಯ ಸೌಲಭ್ಯ ಕೊಡುತ್ತಿರುವ ಡಾಕ್ಟರರೊಂದಿಗೆ ನಾವುಅಲ್ಲಿಗೆ ಹೋದೆವು. ಅಲ್ಲಿಯ ಹಳ್ಳಿಯವರು ನಮ್ಮನ್ನು ಬಹಳ ಸಂಭ್ರಮದಿಂದ ನೋಡಿಕೊಂಡರು. ಅವರ ಹಾಡುಗಳು, ಕುಣಿತಗಳು ಬಹಳ ಸುಂದರವಾಗಿದ್ದವು. ಅವರ ತರತರವಾದ ಡೋಲುಗಳು, ವಾಲಗಗಳು ಬಹಳ ಚೆನ್ನಾಗಿದ್ದವು. ಅದರಲ್ಲಿ ನಮಗೆ ಬೇರೆಬೇರೆ ಭೂತಗಳ ದರ್ಶನಗಳೂ ಆದವು. ಅವು ನಮಗೆ ಆಶೀರ್ವಾದ ಕೊಟ್ಟವು.

ನನಗೆ ನಾನು ಚಿಕ್ಕವಳಿರುವಾಗ ನಮ್ಮ ತಂದೆ ಪುತ್ತೂರಿನ ಹತ್ತಿರದ ಹಳ್ಳಿಗಳಲ್ಲಿ ನಡೆಯುತ್ತಿದ್ದ ಭೂತದ ಕೋಲಗಳಿಗೆ ಕರೆದುಕೊಂಡು ಹೋಗುತ್ತಿದ್ದುದು ನೆನಪಾಯುತು. ಇಲ್ಲಿನ ಸುಗ್ಗಿಯ ಭೂತ, ನಮ್ಮ ಆಡಿನ ಭೂತ (ಆಟಿ ಕೆಳಂಜ) ಇವೆಲ್ಲಾ ನೋಡಿ ನಾನು ಪುತ್ತೂರಿಗೆ ಮರಳಿದೆ ಅನ್ನಿಸಿತು. ದಕ್ಷಿಣಕನ್ನಡದಲ್ಲಿ ಭೂತಾರಾಧನೆ ಮತ್ತು ದೇವಾರಾಧನೆ ಎರಡೂ ಬಹಳ ಪ್ರಬಲ ಸಂಸ್ಕೃತಿಗಳು. ಧರ್ಮಸ್ಥಳದಲ್ಲಿ ಮಂಜುನಾಥರೂ, ಅಣ್ಣಪ್ಪ ದೈವರೂ ಸರಿಸಮಾನರಾಗಿದ್ದಾರೆ. ಆಫ್ರಿಕಾದಲ್ಲೂ ದೇವರಾಗಿ ಏಸು ಅಥವಾ ಅಲ್ಲಾರನ್ನು ನಂಬಿದರೂ, ಅವರ ಭೂತಗಳು ಅವರಿಗೆ ಬಹಳ ಮುಖ್ಯವಾಗಿದ್ದವು. ನಾವು ಹಳ್ಳಿಯ ಭೇಟಿ ಮುಗಿಸಿ ಹೊರಡುವಾಗ, ಹಳ್ಳಿಯ ಮುಖ್ಯಸ್ಥರು ನಮ್ಮ ಡಾಕ್ಟರರ ಕೈಯಲ್ಲಿ ಒಂದು ಜೀವಂತ ಕೋಳಿ ಕಾಣಿಕೆಯಾಗಿ ಕೊಟ್ಟರು. 

ಆಮೇಲೆ ಅಲ್ಲಿಯ ಮೇಯರರ ದೊಡ್ಡ ಸಭೆಗೆ ಹೋದೆವು. ಅಲ್ಲಿ ಏನು ನಡೆಯಿತೋ ನಮಗೆ ಅರ್ಥವಾಗಲಿಲ್ಲ. ನನ್ನ ಪಕ್ಕ ಕುಳಿತ ಹೆಂಗಸು ನಾನು ಯಾವ ದೇಶದವಳು ಎಂದು ಕೇಳಿದರು. ನಾನು ಭಾರತದವಳು ಎಂದಾಗ, “ಭಾರತದಿಂದ ಬಂದವರನ್ನು ನಾನು ಇದೇ ಮೊದಲ ಸಲ ನೋಡುತ್ತಿದ್ದೇನೆ” ಎಂದರು. ಕೊನೆಯಲ್ಲಿ ಕಾಣಿಕೆಯಾಗಿ ಮೇಯರರಿಗೆ ಒಂದು ಆಡನ್ನು ಕೊಟ್ಟರು.

ಅಲ್ಲಿಯ ಹಲವು ಮರಗಿಡಗಳು ನಮ್ಮ ಊರಿನಲ್ಲಿ ಕಾಣಸಿಗುವ ಮರಗಳೇ ಆಗಿದ್ದವು. ಆದರೆ, ಅಲ್ಲಿಯ ಜನರಿಗೆ ಬೇವಿನ ಮರದ ಉಪಯೋಗ ತಿಳಿದಿರಲಿಲ್ಲ. ಇದು ಬಹಳ ಆಶ್ಚರ್ಯಕರ ಎನಿಸಿತು. ಚರಕ ಸಂಹಿತದಲ್ಲಿ ಬರೆದಿದೆ, `ಮಕ್ಕಳನ್ನು ಮರದ ಕೆಳಗೆ, ಕಲ್ಲು ಮುಳ್ಳುಗಳನ್ನು ತೆಗೆದು, ಆಟ ಆಡಲು ಬಿಡಿ. ಮಳೆಯ ನೀರು ಬೇವಿನ ಎಲೆಗಳಿಂದ ಇಳಿದು ನೆಲವನ್ನು ಶುದ್ಧೀಕರಿಸಿರುತ್ತದೆ’ ಎಂದು. ಅಂತಹ ಔಷಧೀಯ ಗಿಡದ ಉಪಯೋಗ ತಿಳಿದಿಲ್ಲ ಎಂಬುದು ನಿಜಕ್ಕೂ ಅಚ್ಚರಿಯ ವಿಷಯ. ಆದರೆ ಅಲ್ಲಿ `ಬೌ ಬೌ’ ಎಂಬ ಮರವಿದೆ. ಅದು ಅವರಿಗೆ ಸುಂದರ ಮತ್ತು ಪವಿತ್ರವಾದ ಮರ. ನಮಗೆ ವಟವೃಕ್ಷ (ತೆಂಗಿನ ಮರ) ಇದ್ದಂತೆ. ಅದರ ಎಲೆ, ಕಾಯಿ, ಹಣ್ಣು, ಬೇರು ಎಲ್ಲಾ ಭಾಗಗಳನ್ನೂ ಅಡುಗೆಗೆ ಮತ್ತು ಔಷಧಿಗೆ ಉಪಯೋಗಿಸುತ್ತಾರೆ. ಅದರ ತುಂಬಾ ಹಕ್ಕಿಗಳ ಗೂಡುಗಳೂ ಇರುತ್ತವೆ. ಆ ಮರವನ್ನು ನೋಡಿ ಎಲೆನ್ ಹೇಳಿದರು, “ಈ ಮರಕ್ಕೆ ಎಷ್ಟು ಚಿತ್ರಹಿಂಸೆ ಕೊಟ್ಟ ಹಾಗೆ – ಸೊಟ್ಟ ಸೊಟ್ಟವಾಗಿದೆ!” ಎಂದು.

ನುವೋನಾವನ್ನು ಬಿಟ್ಟು ನಾವು ಮಾಲಿಗೆ ಹೊರಟೆವು. ದಾರಿ ಉದ್ದಕ್ಕೂ ಸುಂಕದಕಟ್ಟೆಗಳು ಇದ್ದವು. ಮತ್ತು, ನಾವು ನೈಜರ್ ನದಿಯನ್ನು ಫೆರಿ (ferry) ತೆಗೆದುಕೊಂಡು ದಾಟಬೇಕಾಯಿತು. ಈ ಎರಡೂ ರೀತಿಯ ಪಯಣಗಳು ಮತ್ತೆ ನನಗೆ ಪುತ್ತೂರಿನ ನೆನಪು ತಂದವು. ನಾವು ಚಿಕ್ಕವರಿದ್ದಾಗ ಪುತ್ತೂರಿನಿಂದ ಸುಳ್ಯ, ಮಡಿಕೇರಿಗೆ ಹೋಗುವಾಗ ಸುಂಕದ ಕಟ್ಟೆಗಳು ಇರುತ್ತಿದ್ದವು. ಆಗ ನಮ್ಮ ಊರಿನಲ್ಲಿ ಬಸ್ಸುಗಳು ಇರಲಿಲ್ಲ. ಪುತ್ತೂರಿನಿಂದ ಕುಂದಾಪುರಕ್ಕೆ ಹೋಗುವಾಗ ನದಿಗಳನ್ನು ದಾಟಲು ಜಂಗಲ್ ಎಂದು ಕರೆಯುವ ಫೆರಿಗಳು ಇರುತ್ತಿದ್ದವು.

ಝೀಲ್ ಅವರು ಸುಂಕದಕಟ್ಟೆಗಳಲ್ಲಿ ಇಳಿದು, ಅಲ್ಲಿ ಇರುತ್ತಿದ್ದ ಕಾವಲುಗಾರರೊಂದಿಗೆ ನಗುನಗುತ್ತಾ ಸ್ವಲ್ಪ ಸಮಯ ಮಾತನಾಡಿ, ಚಹಾ ಕುಡಿಯಲು ದುಡ್ಡು ಕೊಡುತ್ತಿದ್ದರು. ಅಥವಾ ನಾವೆಲ್ಲರೂ ಸೇರಿ ಚಹಾ ಕುಡಿಯುತ್ತಿದ್ದೆವು. ಒಬ್ಬನಂತೂ ಝೀಲ್ ಹತ್ತಿರ ಹೇಳಿದ, “ನಿಮ್ಮನ್ನು ಹೋಗಲು ಬಿಡುತ್ತೇವೆ. ಆದರೆ, ವಾಪಸ್ಸು ಬರುವಾಗ ಟಿಂಬಕ್ಟೂನಿಂದ ನೀವು ನನಗೆ ಮೂಲವ್ಯಾಧಿಯ ಔಷಧಿ ತಂದುಕೊಡಿ” ಎಂದು. ನಾವು ಅದನ್ನು ಮರೆಯದೇ ತಂದು ಕೊಟ್ಟೆವು. ಆದರೆ ಮಾಲಿಯವರು ನಗು ನಗುತ್ತಲೇ ಲಂಚಕೇಳುತ್ತಿದ್ದರು. ಹಾಗಾಗಿ ನಮಗೂ ಖುಷಿಯಾಯಿತು. 

ಮೋಪ್ಟಿ ಮಾರುಕಟ್ಟೆ

ಮಾಲಿಯಲ್ಲಿ ಈ ಮಾರುಕಟ್ಟೆಗೆ ಬಹಳ ಪಾಮುಖ್ಯ ಇದೆ. ಅದು ನೈಜರ್ ನದಿಯ ದೊಡ್ಡ ಬಂದರು. ಇದು ಚಿಕ್ಕ ಮತ್ತು ದೊಡ್ಡ ದೋಣಿಗಳು ಸರಕು ಮತ್ತು ಜನರನ್ನು ನೈಜರ್ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ತಲುಪಿಸುವ ದಾರಿ. ಅಲ್ಲಿಂದ ಒಂದು ರಸ್ತೆ ಮಾರ್ಗ ಟಿಂಬಕ್ಟೂಗೆ, ಇನ್ನೊಂದು ಬಂಡಿಗಾರ ಪರ್ವತಶ್ರೇಣಿ (90 ಮೈಲು) ಇರುವ ಹಳ್ಳಿ ಮತ್ತು ನಗರಗಳಿಗೆ ಹೋಗುತ್ತದೆ. ರಸ್ತೆಗಳು ಜಲ್ಲಿಕಲ್ಲು, ಹೊಂಡಗಳಿಂದ ಕೂಡಿದ್ದು ನಾಲ್ಕು ಗಂಟೆಯ ದಾರಿಗೆ ಹನ್ನೆರಡು ಗಂಟೆ ಹಿಡಿಯುತ್ತದೆ. ರಸ್ತೆಯಲ್ಲಿ ಚಿಕ್ಕ ಚಹಾ ಅಂಗಡಿಗಳಲ್ಲಿ ಎಳ್ಳುಂಡೆ, ನೆಲಗಡಲೆ, ಚಿಕ್ಕಿ ಇತ್ಯಾದಿ ತಿಂಡಿಗಳು ಸಿಗುತ್ತವೆ.

ಮಾರುಕಟ್ಟೆಯಲ್ಲಿ ಆ ಸ್ಥಳದ ಚಿತ್ರಕಲೆ, ಬಟ್ಟೆಗಳು, ಕಂಚು ಹಾಗೂ ಬೆಳ್ಳಿ ಸಾಮಾನುಗಳು, ಮಣಿ ಸರಕುಗಳು, ಆಹಾರಸಾಮಗ್ರಿ ಇತ್ಯಾದಿ ಹೀಗೆ ಎಲ್ಲಾರೀತಿಯ ವಸ್ತುಗಳು ಇದ್ದವು.

ಮಧ್ಯಾಹ್ನದ ಹೊತ್ತಿಗೆ ಇಡೀ ಮಾರುಕಟ್ಟೆ ಸ್ತಬ್ಧವಾಯಿತು. ಇದ್ದಕ್ಕಿದ್ದಂತೆ ವಿಶಾಲವಾದ ಚಾಪೆಗಳನ್ನು ಹಾಸಿ ನೂರಾರು ಜನ ’ನಮಾಜ್’ ಮಾಡಿದರು. ಆಮೇಲೆ ತಮ್ಮ ವ್ಯಾಪಾರ ಶುರುಮಾಡಿದರು.

ಝೀಲ್ ಹೇಳಿದರು, “ನಾವು ಟಿಂಬಕ್ಟೂವಿಗಿಂತ ಮೊದಲು ಬಂಡಿಗಾರ ಪರ್ವತದಲ್ಲಿ ಇರುವ ಕೆಲವು ಹಳ್ಳಿಗಳನ್ನು ನಡೆದು ಹೋಗಿ ನೋಡೋಣ. ಅಲ್ಲಿ ಬಹಳ ಹಿಂದಿನ ಕಾಲದಿಂದ ಬಂದ ’ಡೋಗೋನ’ ಎಂಬ ಜನರು ಇದ್ದಾರೆ. ಅವರು ದುಡ್ಡು ಉಪಯೋಗಿಸುವುದಿಲ್ಲ. ನಾವು ಅವರಿಗೆ ಕಾಣಿಕೆಯಾಗಿ ಅವರು ಬಹಳ ಇಷ್ಟಪಡುವ ಕೋಲಾಬೀಜವನ್ನು (Kola nut) ಕೊಡೋಣ”. ನಮ್ಮಲ್ಲಿ ವೀಳ್ಯ ಕೊಟ್ಟಂತೆ ಅಲ್ಲಿನ ಜನ, ಕೋಲಾಬೀಜವನ್ನು ಕೊಡುತ್ತಾರೆ. ಇದರ ಹಿಂದೆಯೂ ಒಂದು ಸ್ವಾರಸ್ಯಕರ ವಿಷಯವಿದೆ. ಆಫ್ರಿಕಾಕ್ಕೆ ಮೊದಲು ಹೊರಗಿನಿಂದ ಬಂದ ಜನರು ಕೋಲಾಬೀಜಗಳು ತಂಬಾಕಿನಂತೆಯೇ ಎಂದು ತಿಳಿದುಕೊಂಡರು. ಇದನ್ನು ಮೊದಲು ಆರಂಭಮಾಡಿದ ಕೋಕಾಕೋಲ ಕಂಪನಿಯು ಜಗತ್ತಿನಾದ್ಯಂತ ವ್ಯಾಪ್ತವಾಯಿತು. ಈ ಕಂಪನಿಯು ಬಹಳ ಪ್ರಸಿದ್ಧವಾಯಿತು. ನಂತರ ಈ ವಿಷಯವು ಹೊರಬಂದು ಬಹಳ ಗಲಭೆಯಾಯಿತು. ಅದರ ಉಪಯೋಗವನ್ನು ಆನಂತರ ನಿಲ್ಲಿಸಿದರು.

 ಅನಂತರ ನಾವು ಅಲ್ಲಿಯ “ಆಮಾಗುರು” ಎಂಬ ಡೋಗೋನ ಮಾರ್ಗದರ್ಶಕರನ್ನು ಕರೆದುಕೊಂಡು ಕೆಲವು ಪರ್ವತಗಳಿಗೆ ಹೋದೆವು.

ಡೊಗೋನ ಜನರ ಕಥೆ

ಇವರು ಮಾಲಿಯ ಆದಿವಾಸಿಗಳು. ಆಫ್ರಿಕಾಗೆ ಮೊದಲಬಾರಿಗೆ ಇಸ್ಲಾಂ ಧರ್ಮವನ್ನು ಪ್ರಚಾರಮಾಡಲು ಬಂದಾಗ, ಡೋಗೋನ್ ಜನ ತಮ್ಮ ಮತವನ್ನು ಉಳಿಸಿಕೊಳ್ಳಲು ಬಂಡಿಗಾರ ಪರ್ವತ ಶ್ರೇಣಿಯನ್ನು ಹತ್ತಿ ಅಲ್ಲಿ ಅಡಗಿ ಬೀಡುಬಿಟ್ಟರು. ಅಂತಹ ಪರ್ವತವನ್ನು ಹತ್ತಿ ಇವರನ್ನು ಹಿಡಿಯುವ ಕೆಲಸ ಕಷ್ಟದ್ದು. ಹಾಗಾಗಿ ಡೋಗೋನ ಜನ ಅವರದೇ ಧರ್ಮವನ್ನು ಪಾಲಿಸುತ್ತಾರೆ. ಆದರೆ, ನೈಜರ್ ನದಿಯ ಪಕ್ಕ ಇರುವ ಮಾಲಿಯ ಜನರ ಮತ ಬದಲಾಯಿಸಿದರು. ಅವರ ಧರ್ಮದ ಇತಿಹಾಸ ಕೇಳಿದರೆ, ನನಗೆ ಹಿಂದೂ ಧರ್ಮದ ಪುರಾಣದ ಕಥೆಗಳಂತೆಯೇ ಅನಿಸುತ್ತದೆ. ಇಂತಹ ಧರ್ಮಗಳನ್ನು, ಅಂದರೆ ಹಿಂದೂ, ಹಳೆಯ ಗ್ರೀಕ್ ಧರ್ಮಗಳನ್ನು ಪೇಗನ್ (Pagan) ಧರ್ಮ ಅನ್ನುತ್ತಾರೆ. ಅದರ ಅರ್ಥ ಈ ಧರ್ಮಗಳಲ್ಲಿ ಮಾನವನ ಆದಿಯನ್ನು ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಿಗಿಂತ ಬೇರೆಯಾಗಿ ಹೇಳಲಾಗಿದೆ. ಮತ್ತು ಇವರಲ್ಲಿ ದೇವರು ಒಬ್ಬನೇ ಅಲ್ಲ, ಬಹಳ ದೇವರುಗಳು ಇದ್ದಾರೆ. 

ಇಲ್ಲಿಗೆ ಹೋಗುವ ಹಾದಿ ಕಷ್ಟದ್ದು. ಮತ್ತು ಅಲ್ಲಿಯ ಕ್ರಮ, ದೇವರು-ದೈವದ ಪೂಜೆ, ಪೂಜಾಸ್ಥಳಗಳ ಬಗ್ಗೆ ತಿಳಿದು, ನಾವು ಪವಿತ್ರ ಜಾಗಗಳನ್ನು ಮೈಲಿಗೆ ಮಾಡುವ ಸಾಧ್ಯತೆ ಇದೆ ಎನಿಸಿತು. ಹಾಗಾಗಿ ನಾವು ಅಮಾಗುರು ಹೇಳಿದ್ದನ್ನೇ ಅನುಕರಿಸುತ್ತಿದ್ದೆವು. ಇಲ್ಲವಾದರೆ, ಅಲ್ಲಿಯ ಜನರು ನಮ್ಮನ್ನು ಹೊಡೆಯುವ, ಓಡಿಸುವ ಸಂಭವ ಇತ್ತು. ನಾವು ಬೆಟ್ಟದ ತಪ್ಪಲಿನಿಂದ ಹಳ್ಳಿಗಳನ್ನು ತಲುಪಲು ಮೆಟ್ಟಿಲು ಹತ್ತಬೇಕು. ನಮ್ಮ ಕಾರನ್ನು ಮುಂದೆಯೇ ಇನ್ನೊಂದು ದಾರಿಯಲ್ಲಿ ಕಳುಹಿಸಿ ನಾವು ಸಾಂಗಾ ಎಂಬ ಏಳು ಗುಂಪಿನ ಹಳ್ಳಿಗಳನ್ನು ನೋಡಲು ತೆರಳಿದೆವು.

ಬಂಡಿಗಾರ ಶ್ರೇಣಿಯ ಏಳು ಹಳ್ಳಿಗಳನ್ನು ನೋಡಿ ವಾಪಾಸು ಬರಲು ನಮಗೆ ಮೂರು ದಿನಗಳೇ ಬೇಕಾದವು. ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ನಮಗೆ ಕಷ್ಟದ ಕೆಲಸ. ನಮ್ಮ ಚಿಕ್ಕ ಚೀಲಗಳನ್ನು ದೊಡ್ಡ ದೇಹದ ಆಮಾಗುರು ಎತ್ತಿಕೊಂಡು ಸಹಾಯ ಮಾಡಿದರು. ನನಗಂತೂ ಅಲ್ಲಿ ಬಹಳ ಎತ್ತರದ ಚಪ್ಪಡಿ ಕಲ್ಲಿನಿಂದ ಇನ್ನೊಂದರ ಮೇಲೆ ಸೇರಲು ಕೈ ಕೊಟ್ಟು, ಮಗುವಿಗೆ ಮಾಡಿದಂತೆ ಸಹಾಯ ಮಾಡುತ್ತಿದ್ದರು. ಅವರುಗಳದ್ದು ಯಾವಾಗಲೂ ನಗುಮುಖ. ಅಲ್ಲಿಯ ಜನ ಭಾರವಾದ ಧಾನ್ಯದ ಚೀಲ, ಸರಕು ಇತ್ಯಾದಿಗಳನ್ನು ಎತ್ತಿಕೊಂಡು ದಾಪುಗಾಲು ಹಾಕಿ ಬೇಗನೇ ನಡೆದು ಹೋಗುತ್ತಾರೆ. ಯುವತಿಯರೂ ಕೂಡ ಉದ್ದ ಮತ್ತು ಸುಂದರವಾಗಿದ್ದು, ಬಹು ಸುಲಭದಲ್ಲಿ ಭಾರ ಹೊತ್ತು ಓಡಾಡುತ್ತಿದ್ದರು.

ಡೋಗೊನ ಹಳ್ಳಿಯಿಂದ ಮೇಲಕ್ಕೆ, ಪರ್ವತ ಶ್ರೇಣಿಗಳಲ್ಲಿ ಬಹಳಷ್ಟು ಗುಹೆಗಳು ಕಣ್ಣು ಹಾಯಿಸಿದಷ್ಟೂ ಕಂಡು ಬರುತ್ತಿದ್ದವು. ಇವುಗಳನ್ನು `ತೆಲ್ಲಂ’ ಗುಹೆಗಳು ಎಂದು ಕರೆಯುತ್ತಾರೆ.

ತೆಲ್ಲಂ ಜನರ ಕಥೆಯೇ ಬೇರೆ. ಇಸ್ಲಾಂ ನಿಂದ ತಪ್ಪಿಸಿಕೊಂಡು, ಬಂಡಿಗಾರ ಹಳ್ಳಿಗೆ ಡೋಗೋನ ಜನರು ಬಂದಾಗ ತೆಲ್ಲಂ ಗುಹೆಗಳಲ್ಲಿ ಸಣ್ಣ ದೇಹ ಮತ್ತು ಕೆಂಪುಕೂದಲಿನ ಜನರು ಮೊದಲೇ ವಾಸವಾಗಿದ್ದರಂತೆ. ಆದರೆ ಈ ಎರಡು ಆದಿವಾಸಿಗಳಲ್ಲಿ ಜಗಳವಿರಲಿಲ್ಲ. ಆ ಎರಡೂ ಗುಂಪುಗಳು ಶಾಂತಿಯಿಂದ ಸಹಬಾಳ್ವೆ ಮಾಡಿದರು. ತೆಲ್ಲಂನವರು ತಾವು ಕೈಯಲ್ಲಿ ಮಾಡಿದ ಸರಕುಗಳನ್ನು, ಡೋಗೋನ್ ಜನ ತಾವು ಬೆಳೆದ ಬೆಳೆಗಳನ್ನು ಹಗ್ಗದ ಏಣಿಯ ಮೂಲಕ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದರಂತೆ.

ಕೆಲವು ಶತಕ ಅಥವಾ ದಶಕದ ಹಿಂದೆ ರಾತ್ರೋರಾತ್ರಿ ಎಲ್ಲಾ ತೆಲ್ಲಂ ಗುಹಾವಾಸಿಗಳು ಮಾಯವಾದರು! ಗುಹೆಗಳು ಹಾಳುಬಿದ್ದವು. ಆಗ ಡೋಗೋನ ಜನ ಅವರಲ್ಲಿ ಹಿರಿಯರ ಶವಸಂಸ್ಕಾರವನ್ನು ಗುಹೆಗಳಲ್ಲಿ ಮಾಡಲು ಶುರು ಮಾಡಿದರು. ಇದು ಒಂದು ವಿಶಿಷ್ಟ ಕ್ರಮ. ಫಾರ್ಸಿ ಜನರು ಶವಗಳನ್ನು ಅವರ ಟವರ್ ಆಫ್ ಸೈಲೆನ್ಸ್‍ನಲ್ಲಿ ಹದ್ದುಗಳು ತಿನ್ನಲು ಬಿಡುತ್ತಾರೆ. ಚೈನಾದ ಶಾಂಗ್ರೀಲಾದಲ್ಲಿ ಆಕಾಶದಲ್ಲಿ ಸಮಾಧಿ ಎಂದು ಮಾಡುತ್ತಾರೆ. ಅಂದರೆ ಮಣ್ಣು ಮಾಡುವುದೂ ಅಲ್ಲ, ಸುಡುವುದೂ ಅಲ್ಲ. ಅಂದರೆ ಪ್ರಕೃತಿಯಿಂದ ದೇಹವನ್ನು ಪ್ರಕೃತಿಗೆ ಹಿಂದಿರುಗಿಸುವ ಕ್ರಮವಿದು.

ಡೋಗೋನ್ ಗುರುವಿನಿಂದ ಈ ಜನರ ಬಗೆಗೆ ತಿಳಿದುಕೊಂಡ ಮಾರ್ಸೆಲ್ ಗ್ರಿಯಾಉಲ್ ಎಂಬ ಫ್ರೆಂಚ್ ಮಾನವಶಾಸ್ತ್ರಜ್ಞ ಡೋಗೋನ್ ಜನರ ಅಸ್ತಿತ್ವವನ್ನು 1948ರಲ್ಲಿ ಜಗತ್ತಿಗೆ ತಿಳಿಸಿದನು. ಅವನು ಸಾಯುವ ಸಮಯದಲ್ಲಿ `ಎಲ್ಲಿ 40 ವರ್ಷಗಳನ್ನು ಕಳೆದಿದ್ದೆನೋ ಅಲ್ಲಿಯೇ ಡೋಗೋನ್ ಕ್ರಮದಲ್ಲಿ, ನನ್ನ ಶವಸಂಸ್ಕಾರ ಮಾಡಿ’ ಎಂದು ಬಯಸಿದ್ದ. ಹಾಗೆಯೇ ಅವನು ತೀರಿಹೋದ ಮೇಲೆ 1956ನೆಯ ಇಸವಿಯಲ್ಲಿ ಅವನ ಆತ್ಮದ ಸಂಸ್ಕಾರವನ್ನು, ಶವವಿಲ್ಲದೆಯೇ ವಿಜೃಂಭಣೆಯಿಂದ ಡೋಗೋನ್ ಕ್ರಮದಂತೆಯೇ ಮಾಡಿದರು.

ಡೋಗೋನ ಸಂಸ್ಕೃತಿ: ಮೊದಲ ಮಾನವನ ಕಥೆ

ಇಲ್ಲಿನ ಕಥೆಗಳು ನಮ್ಮ ದಶಾವತಾರ, ನವಗ್ರಹಗಳು, ಸೃಷ್ಟಿ, ಪ್ರಳಯದ ನೆನಪನ್ನು ಕೊಡುತ್ತವೆ. ಮೊದಲ ಮಾನವನ ಜನ್ಮವನ್ನು ಅವರು ಹೀಗೆ ವಿವರಿಸುತ್ತಾರೆ. ಮೊದಲ ಮಾನವನನ್ನು “ಅಮ್ಮಾ” ಎಂದು ಕರೆಯುತ್ತಾರೆ. ಅವನು ಭೂಮಿತಾಯಿಯ ಜೊತೆ ಸೇರಿ, ಅವರಿಬ್ಬರಿಗೆ ಅವಳಿ ಹಾವುಗಳು ಹುಟ್ಟುತ್ತವೆ. ಇವನ್ನು “ನೊನೊ” ಎಂದು ಕರೆಯುತ್ತಾರೆ. ಈ ಅವಳಿ ಹಾವುಗಳಿಗೆ ಅವಳಿ ಮಕ್ಕಳು ಹುಟ್ಟುತ್ತಾರೆ. ಅವಳಿಗಳಲ್ಲಿ ಒಂದು ಗಂಡು ಇರುತ್ತದೆ. ಹೀಗೆ ಎಂಟು ಮಾನವರು ಹುಟ್ಟಿ, ಮನುಷ್ಯ ಜನಾಂಗವೇ ಶುರುವಾಗುತ್ತದೆ. ಮಾನವರ ಹುಟ್ಟು ಅಲ್ಲೇ ಆಯಿತು.

ಅರೇಬಿಯಾ ಮತ್ತು ಆಫ್ರಿಕಾದಲ್ಲಿ ಗಂಡು ಮತ್ತು ಹೆಣ್ಣಿನ ಜನನೇಂದ್ರಿಯವನ್ನು ಚಿಕ್ಕವಯಸ್ಸಿನಲ್ಲಿ ಕತ್ತರಿಸುವ ಒಂದು ಕ್ರಮ ಬಹಳ ಹಳೆಯದು. ಇದು ಅವಳಿ ಹಾವುಗಳಿಂದ ಶುರುವಾಯಿತು ಎಂದು ಅವರ ನಂಬಿಕೆ. ಅವರ ಮುಖ್ಯ ದೇವರು `ಅಮ್ಮ’ ಆದರೆ, ಒಂದು ಬಹಳ ದೊಡ್ಡ ಹಾವಿನ ಮೂರ್ತಿಯನ್ನು ಅವರು ಪೂಜೆ ಮಾಡುತ್ತಾರೆ. ಅದನ್ನು ವರ್ಷಕ್ಕೆ ಒಂದು ಬಾರಿ ಡೋಗೋನ ಜನರು ನೋಡಬಹುದು. ಹೊರಗಿನವರು ನೋಡುವಂತಿಲ್ಲ. ದೊಡ್ಡ ಹಾವು ಹಿಂದೂ ಧರ್ಮದಲ್ಲಿ ಏಳು ಹೆಡೆಯ ಶೇಷನಾಗ ಮತ್ತು ಕಾಳಿಯರಲ್ಲಿ ನಾವು ಕಾಣುತ್ತೇವೆ.

ಡೋಗೋನ ಜನರಿಗೆ ಕಾಸ್ಮೋಲಜಿ (ವಿಶ್ವವಿಜ್ಞಾನ) ತಿಳಿದಿತ್ತು. ಸಿರಿಯಸ್ (Sirius) ಅಥವಾ ಡಾಗ್ ಸ್ಟಾರ್ (Dog Star) ಎಂಬ ನಕ್ಷತ್ರ ಅವರಿಗೆ ತಿಳಿದಿತ್ತು. ಯಾವ ಸಮಯದಲ್ಲಿ ಎಷ್ಟು ವರ್ಷಗಳ ಬಳಿಕ ಅದರ ಸಂಯೋಗ ಎಂದು ತಿಳಿದು, ಆ ಸಮಯದಲ್ಲಿ ಅದನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಅವರು ಹಿಂದುಳಿದ ಆದಿವಾಸಿಗಳಾಗಿರಲಿಲ್ಲ. ಇದು 1698ರಲ್ಲಿ ಆಗಿತ್ತು. ನಮ್ಮ ಮಹಾಭಾರತದಲ್ಲಿ ಯುದ್ಧದ ಬಳಿಕ ಪಾಂಡವರು ತಪೋವನದಿಂದ ತೆರಳಿದಾಗ ಅಲ್ಲಿ ಕೊನೆಗೆ ಉಳಿದವರು ಯುಧಿಷ್ಟಿರ ಮತ್ತು ಅವನ ಶ್ವಾನ. ಅದು ಒಂದು ನಕ್ಷತ್ರ/ಗ್ರಹ. ತಪೋವನ ನನ್ನ ಜೀವನದಲ್ಲಿ ಮಹತ್ವದ ಸ್ಥಳ. ನಾನು ಮತ್ತು ನನ್ನ ಗಂಡ ಅಲ್ಲಿಗೆ ಹೋಗಿದ್ದೆವು.

ಸಾಂಗಾದ ಹಳ್ಳಿಗಳು: ಮೊದಲ ಹಳ್ಳಿಯಲ್ಲಿ ಅಮಾಗುರು ಹಳ್ಳಿಯ ಹಿರಿಯರ ಜೊತೆ ಮಾತನಾಡಲು ಶುರುಮಾಡಿ, “ನೀವು ಹೇಗಿದ್ದೀರಿ, ನಿಮ್ಮ ತಂದೆ, ತಾಯಿ, ಗಂಡ, ಅಕ್ಕ, ತಮ್ಮ, ಮಕ್ಕಳು?” ಎಂದು ಇಡೀ ಹಳ್ಳಿಯ ಸಂಬಂಧಿಕರ ಬಗ್ಗೆ ಕೇಳುತ್ತಿದ್ದರು. ಆ ಬಳಿಕ ಹಳ್ಳಿಯ ಹಿರಿಯರು ಅಮಾಗುರುವಿನ ಕುಟುಂಬದ ಬಗ್ಗೆ ಕೇಳುತ್ತಿದ್ದರು -ಅಷ್ಟೇ ಪ್ರಶ್ನೆಗಳು. ಎಲ್ಲದಕ್ಕೂ ಉತ್ತರ ಒಂದೇ. “ಸೇವಾ” ಅಂದರೆ `ಚೆನ್ನಾಗಿದ್ದಾರೆ’. ನಂತರ ಅರ್ಧಗಂಟೆ ವಿವರವಾಗಿ ಮಾತನಾಡಿ, ಆಮೇಲೆ ನಮ್ಮ ಬಗ್ಗೆ ಹೇಳಿದರು, “ಇವರು ಬೇರೆ ದೇಶದಿಂದ ನಿಮ್ಮನ್ನು ನೋಡಲು, ಮಾತನಾಡಿಸಲು ಬಂದಿದ್ದಾರೆ. ಅವರು ನಿಮಗೆ ಕಾಣಿಕೆಗಳನ್ನು ತಂದಿದ್ದಾರೆ. ಸ್ವೀಕರಿಸುವಿರಾ?” ಎಂದು. ಅವರು ಸಂತೋಷದಿಂದ ಒಪ್ಪಿದ ಮೇಲೆ ಕೋಲಾನಟ್ ಮತ್ತು ಸ್ಕಾರ್ಫ್‍ಗಳನ್ನು ಅವರಿಗೆ ಕೊಟ್ಟು, ಮಾತನಾಡಿಸಿ ಮುಂದಿನ ಹಳ್ಳಿಗೆ ಹೊರಟೆವು.

ಅಮಾಗುರುವನ್ನು ಕೇಳಿದೆವು, “ನೀವೆಲ್ಲರೂ ಹತ್ತಿರ ಇರುವ ಹಳ್ಳಿಯವರು ದಿನಾ ಒಬ್ಬರನ್ನೊಬ್ಬರು ನೋಡುತ್ತೀರಿ. ಮತ್ತೇಕೆ ಅಷ್ಟೊಂದು ಮಾತನಾಡುತ್ತೀರಿ?’ ಅವನು ಹೇಳಿದ, “ಒಬ್ಬರ ಕಷ್ಟ ಸುಖ ವಿಚಾರಿಸುವುದು ಅವರಿಗೆ ಗೌರವ ತೋರಿಸುವ ವಿಧಾನ. ನಾನು ಹೋಗಿ, `ನಿಮ್ಮನ್ನು ನೋಡಲು ಬಂದಿದ್ದಾರೆ, ಫೋಟೋ ತೆಗೆಯುತ್ತಾರೆ’ ಎಂದರೆ ನಾಳೆ ನನ್ನನ್ನು ಈ ಹಳ್ಳಿಯ ಒಳಗೆ ಬಿಡುವುದಿಲ್ಲ!” ಎಂದರು. “ನಮಗೆ ಏನಾದರೂ ಬೇಕಾದಾಗ ಮಾತ್ರ ಮಾತನಾಡಿದರೆ ಅದು ಕೆಟ್ಟ ನಡವಳಿಕೆ” ಎಂದರು.  ಆನಂತರ ಎಲ್ಲಾ ಹಳ್ಳಿಯಲ್ಲೂ ಈ ಮಾತಿನ ಸೌಹಾರ್ದ ನಮಗೆ ಇಷ್ಟವಾಯಿತು. ಝೀಲ್ ಅವರು ಕೂಡ ಇದೇ ತರಹ ಎಲ್ಲರೊಂದಿಗೆ ಮಾತನಾಡುತ್ತಾ ಇದ್ದದ್ದು ನನಗೆ ಮೊದಲು ವಿಚಿತ್ರ ಎಂದು ಅನ್ನಿಸಿತ್ತು. ಈಗ ನನಗೆ ಅರ್ಥವಾಯಿತು, ಇದು ಆಫ್ರಿಕಾದಲ್ಲಿ ಅವರು ಕಲಿತ ವಿಚಾರ ಎಂದು.

ನಮ್ಮ ಹಳ್ಳಿಗಳಲ್ಲೂ ಈ ಕ್ರಮವನ್ನು ನಾವು ಈಗಲೂ ಕಾಣಬಹುದು. “ಊಟ ಆಯಿತೇ? ಏನು ತಿಂದಿರಿ? ಎಲ್ಲಿಂದ ಬಂದಿರಿ? ಹೇಗೆ ಬಂದಿರಿ? ನಿಮ್ಮ ವಯಸ್ಸೆಷ್ಟು? ಆದಾಯವೆಷ್ಟು?” ಹೀಗೆ ಕೇಳುವರು. ಅವರಲ್ಲಿ ಗೌಪ್ಯತೆ (confidentiality) ಅಥವಾ ಖಾಸಗೀತನ (privacy) ಎಂಬ ವಿಚಾರವಗಳಿಲ್ಲ. ಮನುಷ್ಯರು ಪರಸ್ಪರ ಮಾತಾಡಬೇಕು. ಹೊಂದಾಣಿಕೆಯಿಂದ ಇರಬೇಕು ಎಂಬುದೇ ಇದರ ಅರ್ಥ. ನಾವು ನಗರವಾಸಿಗಳು ಇದನ್ನು ಮರೆತಿದ್ದೇವೆ.

ಇದೇ ರೀತಿ ಏಳು ಹಳ್ಳಿಗಳನ್ನು ಸುತ್ತಿದೆವು. ಎಲ್ಲೆಲ್ಲೂ ಮರದ ಆಕೃತಿಗಳು -ಮನುಷ್ಯ, ದೆವ್ವ, ಪ್ರಾಣಿ, ಪಕ್ಷಿ ಇತ್ಯಾದಿ. ಕಡವೆ ಅವರ ಶುಭ ಚಿಹ್ನೆ. ಕಂಚಿನ, ಬೆಳ್ಳಿಯ ಪಾತ್ರೆಗಳು, ಮಣಿಸರಗಳು ಇತ್ಯಾದಿ ಅಲ್ಲಿಯ ಮುಖವಾಡಗಳು ಬಹಳ ಅಮೋಘವಾದ ಕಲೆಗಳು. ಎರಡು ರಾತ್ರಿ ಒಂದು ಚಿಕ್ಕ ರೆಸಾರ್ಟ್ ಟೆಂಟ್‍ನಲ್ಲಿ ಉಳಿದುಕೊಂಡೆವು.

ಡೋಗೋನ ಪಂಚಾಯತಿ

ಒಂದು ಕಡೆ 4 ಅಡಿ ಎತ್ತರದ ಒಂದು ಚಿಕ್ಕ ಮಂಟಪವಿತ್ತು. ಒಳಗೆ 8-10 ಜನ ಕುಳಿತುಕೊಳ್ಳಬಹುದು. ಆಮಾಗುರು ಹೇಳಿದರು, “ಇಲ್ಲಿ ಹಿರಿಯರು ಗ್ರಾಮ ಪಂಚಾಯಿತಿಗಳನ್ನು ನಡೆಸುತ್ತಾರೆ.” ಅದರ ಮಾಡು ಬಹಳ ಕೆಳಮಟ್ಟದಲ್ಲಿ ಇತ್ತು. ಒಳಗೆ ಹೋಗಲು ಬಗ್ಗಿ ಹೋಗಬೇಕಿತ್ತು. “ಯಾಕೆ ಹೀಗೆ ಇದೆ?” ಎಂದು ಕೇಳಿದೆವು. ಅವರು ಹೇಳಿದರು, “ಇದರ ಒಳಗೆ ಹೋದವರು ಸಿಟ್ಟು ಕೆದರಿದಾಗ ಜಗಳಕ್ಕೆ ಏಳುತ್ತಾರೆ. ಆಗ ತಲೆಗೆ ಮಾಡು ಹೊಡೆದು ನೆನಪು ತರಿಸುತ್ತದೆ. ನೀವು ಎಲ್ಲಿದ್ದೀರಿ, ಹೇಗೆ ಗೌರವವಾಗಿ, ಗಂಭೀರವಾಗಿ ನಡೆಯಬೇಕು ಎಂದು. ಆಮೇಲೆ ಶಾಂತವಾಗಿ ಚರ್ಚೆ ಮಾಡುತ್ತಾರೆ. ಇನ್ನೊಬ್ಬರು ಇದನ್ನು ಹೇಳಬೇಕಿಲ್ಲ. ಅವರೇ ತಿಳಿಯುತ್ತಾರೆ.”

ಇದನ್ನು ಕೇಳಿ ನಮಗೆ ಬಹಳ ಖುಷಿಯಾಯಿತು. ನಮ್ಮ ಪಂಚಾಯಿತಿಗಳಲ್ಲೂ, ಸಂಸತ್ತಿನಲ್ಲೂ ಹೀಗೆಯೇ ಇದ್ದರೆ ಎಷ್ಟು ಚೆನ್ನಾಗಿತ್ತು. ನಿಮಗೂ ಹಾಗೆಯೇ ಅನ್ನಿಸುವುದಿಲ್ಲವೇ? ನಾವು ಹಿಂದುಳಿದವರು ಎಂದು ತಿಳಿಯುವವರಲ್ಲಿ ಎಷ್ಟು ಅನುಕಂಪ ಮತ್ತು ವಿವೇಕ ಇದೆ ಎಂದು ನಾವು ಕಲಿಯಬೇಕಾದ ವಿಷಯ.

ಪುಟ್ಟ ಶಾಲೆ

ಅಲ್ಲಿಯ ಪುಟ್ಟ ಶಾಲೆಯಲ್ಲಿ ನಮ್ಮ ಹಳ್ಳಿ ಶಾಲೆಗಳ ತರಹ ಡೆಸ್ಕ್, ಕುರ್ಚಿ ಮತ್ತು ಕಪ್ಪು ಹಲಗೆಗಳು ಇದ್ದವು. ಅದರ ಮೇಲೆ ಅಕ್ಷರಗಳೂ, ಚಿತ್ರಗಳೂ ಇದ್ದವು. ಅಲ್ಲದೇ ಸಂಬಂಧಿಕರ ಚಿತ್ರಗಳೂ, ಅವರ ನಡುವಿನ ಸಂಬಂಧ ಇತ್ಯಾದಿ ವಿವರಗಳು ಇದ್ದವು. ಕುಟುಂಬದ ಮೌಲ್ಯವನ್ನು ಶಾಲೆಯಲ್ಲೂ ಹೇಳಿಕೊಡುತ್ತಾರೆ. ಇದೂ ಕೂಡ ನಾವು ಕಲಿಯಬೇಕಾದ ವಿಷಯ.

ಮೊಸಳೆ ಪೂಜೆ

ಒಂದು ಹಳ್ಳಿಯಲ್ಲಿ ಚಿಕ್ಕ ನೀರಿನ ಹೊಂಡವಿದ್ದು, ಅದಲ್ಲಿ ಮೊಸಳೆಯಿತ್ತು. “ಇದನ್ನು ನಾವು ಪೂಜೆ ಮಾಡುತ್ತೇವೆ. ಅದಕ್ಕೆ ಹರಕೆ ಕೊಡುತ್ತೇವೆ. ನಾವು ನೀರಾನೆಗಳನ್ನೂ ಪೂಜೆ ಮಾಡುತ್ತೇವೆ. ನಿಮಗೆ ಮೊಸಳೆ ಸರಿಯಾಗಿ ಕಾಣಬೇಕೆಂದರೆ ನಾನು ಒಂದು ಕೋಳಿಯನ್ನು ಕೊಡುತ್ತೇನೆ” ಎಂದು ಅಲ್ಲಿಯವನೊಬ್ಬ ನಮ್ಮ ಹತ್ತಿರ ಒಂದು ಡಾಲರ್ ತೆಗೆದುಕೊಂಡ. ನಾನು, “ಬೇಡ.. ಬೇಡ.. ನಮಗೋಸ್ಕರ ಕೋಳಿ ಕೊಲ್ಲಬೇಡಿ” ಎಂದೆ. ಅವನು, “ಇಲ್ಲ. ಕೋಳಿ ಕಾಲಿಗೆ ಹಗ್ಗ ಕಟ್ಟಿ ಬಿಡುತ್ತೇನೆ. ಮೊಸಳೆ ಹೊರಬಂದ ಕೂಡಲೇ ಅದನ್ನು ಹಿಂದೆ ಎಳೆಯುತ್ತೇನೆ” ಎಂದ.

ಕೋಳಿಯನ್ನು ತೋರಿಸಿದಾಗ ಮೊಸಳೆ ಮೇಲೆ ಬಂತು. ಅವನು ಕೋಳಿಯನ್ನು ಹಿಂದೆ ಎಳೆದನು. ಝೀಲ್ ಮತ್ತು ಎಲೆನ್ ನನ್ನನ್ನು ನೋಡಿ ತುಂಬಾ ನಕ್ಕರು. “ನೀನು ಕೋಳಿಯನ್ನು ಮೊಸಳೆ ಹೊಟ್ಟೆಯಿಂದ ತಪ್ಪಿಸಿ, ಇವನ ಮಧ್ಯಾಹ್ನದ ಊಟಕ್ಕೆ ಕೊಟ್ಟೆ!” ಎಂದರು. ನಾನು ಮಾಡಿದ್ದು ಸರಿಯೇ, ಅಲ್ಲವೇ ಇಂದಿಗೂ ನನಗೆ ತಿಳಿಯದು.

ನಾವೂ ನಮ್ಮ ದೇಶದಲ್ಲಿ ಹಾವುಗಳನ್ನು ಪೂಜೆ ಮಾಡುತ್ತೇವೆ. ಕೋತಿ, ಹಸುಗಳನ್ನು ಪೂಜೆ ಮಾಡುತ್ತೇವೆ. ಇವೆಲ್ಲಾ ನಮ್ಮ ನಂಬಿಕೆಗಳು. ನೇಪಾಳದ ಪಶುಪತಿನಾಥನ ದೇವಳದಲ್ಲಿ ಎಲ್ಲಾ ಪ್ರಾಣಿಗಳನ್ನು ಪೂಜೆ ಮಾಡುತ್ತಾರೆ. ಅದರಲ್ಲಿ ತಪ್ಪೇನು?

ಸುತ್ತು ಹಾಕುತ್ತಿದ್ದ ಮಕ್ಕಳು

ನಾವು ಹೋದಲ್ಲೆಲ್ಲಾ ಮಕ್ಕಳು ನಮ್ಮ ಹತ್ತಿರ ಬಂದು ಕೈಹಿಡಿದು ನಗುತ್ತಿದ್ದರು. ಮಕ್ಕಳ ಕೇಶಶೃಂಗಾರ ಬಲು ಸುಂದರವಾಗಿತ್ತು. ಅವರ ಬಟ್ಟೆ ಸಾಮಾನ್ಯ ಬಡತನವನ್ನು ತೋರಿಸುತ್ತಿತ್ತು. ಬಂಡಿಗಾರದ ಸೆಖೆಯಿಂದಾಗಿ ಹೆಚ್ಚಿರುವುದರಿಂದಾಗಿ ಮಕ್ಕಳ ಮೈಯಲ್ಲಿ ಬಟ್ಟೆ ಕಡಿಮೆಯೇ ಇರುತ್ತಿತ್ತು. ಅಲ್ಲಿನ ಮತ್ತೊಂದು ವಿಶೇಷವೆಂದರೆ, ಹೆಚ್ಚಿನ ಮಕ್ಕಳ ಹೊಕ್ಕಳಲ್ಲಿ ನೆಲ್ಲಿಕಾಯಿ ಗಾತ್ರದ ಮಾಂಸ ಇರುತ್ತಿದ್ದುದು. ಅದನ್ನು ’ಬಕ್ಟೂ’ ಎನ್ನುತ್ತಾರೆ. ಮಗು ಹುಟ್ಟಿದಾಗ ಹೊಕ್ಕಳುಬಳ್ಳಿಯನ್ನು ಜಾಗ್ರತೆಯಿಂದ ಸರಿಯಾಗಿ ನೋಡದೆಯೇ ಹೀಗೆ ಆಗುತ್ತದೆ.

ನಾವು ನೈಜರ್ ನದಿಯ ಒಂದು ದ್ವೀಪಕ್ಕೆ ದೋಣಿಯಲ್ಲಿ ಹೋಗಿದ್ದೆವು. ಆ ದ್ವೀಪದಲ್ಲಿ ಮೀನು ಹಿಡಿಯುವ ಜನರು ಇದ್ದರು. ಒಂದು ಹುಡುಗಿ ಓಡಿಬಂದು ನನ್ನ ಕೈಯಲ್ಲಿ ಏನೋ ಕೊಟ್ಟು ಓಡಿಹೋದಳು. ನನ್ನ ಕೈಯಲ್ಲಿ ತಣ್ಣಗೆ ಏನೋ ಒದ್ದಾಡಿತು. ನೋಡಿದರೆ, ಅದು ಆಗತಾನೆ ಹಿಡಿದ ಜೀವಂತ ಮೀನು. ನಾನು ಅದನ್ನು ದೂರ ಎಸೆದೆ. ಅದು ಅವರಿಗೆ ಅವಮಾನ ಆಗಿರಬಹುದು. ಆಮೇಲೆ ಆಫ್ರಿಕಾದ ಮಕ್ಕಳು ಬಂದರೆ ನನ್ನ ಕೈಗಳನ್ನು ಬೆನ್ನಹಿಂದೆ ಇಟ್ಟುಕೊಂಡೇ ಇರುತ್ತಿದ್ದೆ.

ಆ ದ್ವೀಪದಲ್ಲಿ ಇನ್ನೊಂದು ವಿಚಿತ್ರವನ್ನು ಕಂಡೆ. ಅಲ್ಲಿ ಹದಿಹರೆಯದ ಹೆಣ್ಣುಮಕ್ಕಳು ಸೊಂಟದ ತನಕ ಬಟ್ಟೆ ಕಟ್ಟಿಕೊಂಡು ಬರೀ ಎದೆಯಲ್ಲಿ ಇರುತ್ತಿದ್ದರು. ನಾನು ಕೇಳಿದೆ, “ಇವರು ಮುಸ್ಲಿಂ ಜನರಲ್ಲವೇ? ಹೆಣ್ಣುಮಕ್ಕಳನ್ನು ಹೀಗೆ ಹೇಗೆ ಬಿಡುತ್ತಾರೆ?” ಉತ್ತರ ಬಂತು, “ನಾವು ಮುಸ್ಲಿಂ. ಆದರೆ ನಮ್ಮ ಹಳೆಯ ಪದ್ಧತಿಗಳನ್ನು ಬಿಟ್ಟಿಲ್ಲ.” ಎಂದರು. ನಮ್ಮ ದೇಶದಲ್ಲಿ ಮೊದಲು ಮಲಬಾರಿನಲ್ಲಿ, ಹಾಗೂ ಕೆಲವು ಆದಿವಾಸಿಗಳಲ್ಲಿ ಈಗಲೂ ಈ ಕ್ರಮ ಇದೆ. ಮುಖ್ಯವಾಗಿ ಮಾಲಿ ಮತ್ತು ಬುರ್ಕಿನೋ ಫಾಸೋನಲ್ಲಿ ಇಸ್ಲಾಂ ಮತ್ತು ಕ್ರೈಸ್ತಮತಕ್ಕೆ ಬದಲಾದರೂ ಅವರು ಆಫ್ರಿಕಾದ ಉಡುಪು, ಊಟ, ಮಾತು ಮತ್ತು ಅವರ ಸಂಸ್ಕೃತಿಗಳನ್ನು ಕಳೆದುಕೊಂಡಿಲ್ಲ.

ಬಹುರಾಷ್ಟ್ರೀಯ ಕಂಪನಿಗಳು

ನಮ್ಮ ದೇಶದಲ್ಲೂ ಹೊರದೇಶದ ದೊಡ್ಡ ಕಂಪನಿಗಳು ಬಹಳ ಇವೆ. ಕೋಕಾಕೋಲಾ, ನೆಸ್ಲೆ ಎಲ್ಲಾ ಇವೆ. ಆದರೆ ನಮ್ಮ ಕಂಪನಿಗಳೂ ಇವೆ. ಆಫ್ರಿಕಾದಲ್ಲಿ ಜಮೀನು ಜಾಸ್ತಿ, ಜನ ಕಡಿಮೆ. ನಮ್ಮ ದೇಶದಲ್ಲಿ ಜನಸಂಖ್ಯೆ ಜಾಸ್ತಿ, ಜಮೀನು ಕಡಿಮೆ. ಆದ್ದರಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ಜಮೀನು ನುಂಗಲು ಬಹಳ ಸುಲಭ. ಹೊರದೇಶದ ಕಂಪನಿಗಳು ಸ್ಥಳೀಯ ಆರ್ಥಿಕ ಶಕ್ತಿ, ಆರೋಗ್ಯ, ಪೌಷ್ಟಿಕತೆ, ವಿದ್ಯಾಭ್ಯಾಸವನ್ನು ಬಡದೇಶಗಳಲ್ಲಿ ಹೇಗೆ ಕೆಡಿಸುತ್ತವೆ ಎಂದು ಕಣ್ಣಾರೆ ನೋಡಿದೆ.

ಅಲ್ಲಿ beuls ಎಂದರೆ ಗೋಮಾಳಗಳಿಗೆ ಜನರು ಸಾವಿರಾರು ಹಸುಕರುಗಳನ್ನು ಮೇವಿಗಾಗಿ ದೇಶದ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ಕರೆದುಕೊಂಡು ಹೋಗುತ್ತಾರೆ. ಅಂತಹ ಒಂದು ಬ್ಯೂಲ್‍ಗೆ ಜನರು ನೈಜರ್ ನದಿ ದಾಟಿ ಹುಲ್ಲಿನ ಕಡೆ ಹೋಗುವುದನ್ನು ನೋಡಿದೆ. ನಮ್ಮಲ್ಲೂ ಗುರ್ಜರ ಜನರು ಹಾಗೇ ಹಿಮಾಲಯದ ತಪ್ಪಲಿಗೆ ಹೋಗಿ ಬರುತ್ತಾರೆ. ನೆಸ್ಲೆ ಕಂಪನಿಯವರು ಅಲ್ಲಿನ ಎಲ್ಲಾ ಹಾಲು, ಕಾಫಿ, ಟೀ ಯನ್ನು instant(ಬಳಸಲು ಸಿದ್ಧ) ಉತ್ಪನ್ನ ಮಾಡಿ ಬಹಳ ಬೆಲೆಗೆ ಮಾರುತ್ತಾರೆ. ಅಲ್ಲಿ ಎಲ್ಲೂ ನಿಜವಾದ ಹಾಲು, ಕಾಫಿ ಯಾವುದೂ ಸಿಗುವುದಿಲ್ಲ. ನಮ್ಮಲ್ಲಿ ಸಹಕಾರ ಸಂಘಗಳಿಂದ ಅಮುಲ್‍ನಂತಹ ಕಂಪನಿ ಇದ್ದರೂ ಹಳ್ಳಿಯ ಮಕ್ಕಳಿಗೆ, ರಸ್ತೆಯ ಚಹಾ ಅಂಗಡಿಗಳಲ್ಲಿ ನಮಗೆ ನಿಜವಾದ ಹಾಲು ಸಿಗುತ್ತದೆ. ಬಂಡಿಗಾರದ ಶಿಖರದಲ್ಲಿ ಹೆಚ್ಚು ಬೆಲೆಯ ಕೋಕಾಕೋಲಾ ಬೇಕು. ಅಲ್ಲಿಯ ಶುಂಠಿ ಮತ್ತು ನಿಂಬೆಯ ಶರಬತ್ತು ಬೇಡ. ನಮ್ಮ ದೇಶದಲ್ಲಿ ರಾಗಿಯ ಬದಲು ಮ್ಯಾಗಿ (ನೆಸ್ಲೆ) ನೂಡಲ್ಸ್ ಬೇಕು!

ಟಿಂಬಕ್ಟೂದಂತಕಥೆಗಳ ಊರು

ಮೋಪ್ಟಿಗೆ ವಾಪಾಸು ಬಂದು ಅಲ್ಲಿಂದ ಜೀಪಿನಂತಹ ಒಂದು ಬಾಡಿಗೆಯ ವಾಹನವನ್ನು ತೆಗೆದುಕೊಂಡು ಟಿಂಬಕ್ಟೂ ಕಡೆಗೆ ಪಯಣ ಆರಂಭಿಸಿದೆವು. ಮರುಭೂಮಿಯಾದುದರಿಂದ ದೂಳಿನ ಬಿರುಗಾಳಿ ಸದಾ ಇರುತ್ತದೆ. ನಾವೆಲ್ಲರೂ ಸ್ಕಾರ್ಫ್‍ನಿಂದ ಮುಖ, ತಲೆ ಮುಚ್ಚಿ, ಅಲ್ಲಿಯ ಜನರಂತೆ ಓಡಾಡಲು ಕಲಿತೆವು. ಅಲ್ಲಿ ರಸ್ತೆಯ ಬದಿಯಲ್ಲಿ ಎಕ್ಕೆ (Yucca)) ಮರಗಳಿದ್ದವು. ನಮ್ಮೂರಲ್ಲಿ ಅವು ಗಿಡಗಳು, ಅಲ್ಲಿ ಮರಗಳು.

ರಸ್ತೆ ಬಹಳ ಕೆಟ್ಟದಾದುದರಿಂದ ನಮ್ಮ ಪಯಣ ನಿಧಾನ. ನಡುವಿನಲ್ಲಿ ಜೀಪ್ ಕೆಡುತ್ತಿತ್ತು. ಅದರ ರಿಪೇರಿ ಮಾಡಬೇಕಾಗುತ್ತಿತ್ತು. ಬಹಳ ಗಂಟೆಗಳ ಬಳಿಕ ನೈಜರ್ ನದಿಯ ಒಂದು ಪಕ್ಕಕ್ಕೆ ತಲುಪಿದೆವು. ಅಲ್ಲಿ ನಮ್ಮನ್ನು ಟಿಂಬಕ್ಟೂಗೆ ಕರೆದೊಯ್ಯುವ ಫೆರಿ ದೋಣಿಗಳನ್ನು ಕಾಯಬೇಕಾಯಿತು. ಅಲ್ಲೇ ಪಕ್ಕದಲ್ಲಿ ಒಂಟೆಯ ಒಡೆಯರು ಉಪ್ಪಿನ ಚಪ್ಪಡಿಗಳನ್ನು ಒಂಟೆಯ ಬೆನ್ನಿನಿಂದ ಇಳಿಸುತ್ತಿದ್ದರು. ನಾನು ನನ್ನ ಪುಟ್ಟ ಕ್ಯಾಮೆರಾದಿಂದ ಫೋಟೋ ತೆಗೆಯುವ ಪ್ರಯತ್ನ ಮಾಡುವಾಗ, ಒಂದು ಗುಂಪು ತುರೇಗ ಜನ ನನ್ನ ಕಡೆ ಧಾವಿಸಿ ಬಂದು ನನ್ನನ್ನು ಜೋರು ಮಾಡಿ ಹೆದರಿಸಿದರು. ನಮ್ಮ ಜೀಪಿನ ಚಾಲಕ ನಮ್ಮನ್ನು ದೂರಕಳಿಸಿ, ಅವರನ್ನು ಸಮಾಧಾನಪಡಿಸಿದ. ಕೆಲವು ಸಲ ಬೇರೆ ದೇಶದಲ್ಲಿ ಅಲ್ಲಿನ ಕ್ರಮ, ನಿಯಮ ತಿಳಿಯದಿದ್ದರೆ ಅಪಾಯಕ್ಕೆ ಸಿಲುಕಬಹುದು, ಜೀವಕ್ಕೂ ಹಾನಿಯಾಗಬಹುದು. ತುರೇಗ ಜನರು ಬಹಳ ಪ್ರಮುಖ ಯೋಧರೂ ಕೂಡ. ಲಿಬಿಯಾದ ಕರ್ನಲ್ ಗಡಾಫಿಯ ಪತನ ಮತ್ತು ಕೊಲೆಯ ಕಾಲದಲ್ಲಿ ಅಲ್ಲಿಯ ಸೇನೆಯಲ್ಲಿ ಯೋಧರಾಗಿದ್ದರು.

ಕೊನೆಗೂ ನಮ್ಮ ಫೆರಿ ಬಂತು. ಅದಕ್ಕೆ ಹಲಗೆಗಳನ್ನು ಇಟ್ಟು ನಮ್ಮ ಜೀಪನ್ನು ಹತ್ತಿಸಿದರು. ನಮ್ಮ ಬಳಿಕ ಒಂದು ಒಂಟೆಯನ್ನು ಹತ್ತಿಸಿದರು. ಅದು ಬಹಳ ಭಯಗೊಂಡು ಚಡಪಡಿಸಲು ಶುರುಮಾಡಿತು. ನಮ್ಮ ಫೆರಿಯು ಜೋರಾಗಿ ಅಲ್ಲಾಡಲು ಶುರುವಾಯಿತು. ಆಮೇಲೆ ಸಮತೋಲನ ತಪ್ಪಿ ಅದು ಕುಳಿತುಕೊಂಡಿತು. ಆಮೇಲೆ ಅದರ ಭಯ ಕಡಿಮೆ ಆಯಿತು. ಜೇಸಲ್‍ಮೇರ್ನಲ್ಲಿ ಒಂಟೆಯ ಮೇಲೆ ಸವಾರಿ ಮಾಡಿದ ನನಗೆ ಒಂಟೆ ಸಹಪ್ರಯಾಣಿಕನಾದಾಗ ಭಯವೇ ಆಯಿತು. ಅಲ್ಲಿ ಇದ್ದ ಒಬ್ಬನು ಒಂದು ಸೀಮೆ ಎಣ್ಣೆ ಒಲೆಯಲ್ಲಿ ಕೆಟಲ್ ಇಟ್ಟು ಚಹಾ ಮಾಡುತ್ತಿದ್ದನು. ಅವನಿಗೆ ನಮ್ಮನ್ನು ನೋಡಿ ಅಯ್ಯೋ ಪಾಪ ಸುಸ್ತಾಗಿದ್ದಾರೆ ಅನ್ನಿಸಿರಬೇಕು. ನಮ್ಮೆಲ್ಲರಿಗೂ ಬಿಸಿಬಿಸಿ ಟೀ ಮಾಡಿಕೊಟ್ಟ. ನಾವು ದುಡ್ಡು ಕೊಡಲು ಮುಂದಾದ್ದಾಗ ನಗುತ್ತಾ ಬೇಡ ಎಂದು ಸನ್ನೆ ಮಾಡಿದ.

 ಹೀಗೆ ಫೆರಿ ಮುಂದೆ ಹೋಗುತ್ತಾ ಕೊನೆಗೂ ನಮ್ಮ ಕಣ್ಣಮುಂದೆ ಬಂತು “ಮಾಯಾನಗರ ಟಿಂಬಕ್ಟೂ”. ನದಿಯ ಇನ್ನೊಂದು ತಟದಲ್ಲಿ ದೂರದಲ್ಲಿ ಕಂಡಿತು ಟಿಂಬಕ್ಟೂ. ನದಿಯ ಬದಿಯಲ್ಲಿ ಉದ್ದಕ್ಕೂ ಹಚ್ಚಹಸಿರು ಭತ್ತದ ಗದ್ದೆಗಳು. ಅಂತೂ ಕತ್ತಲಾಗುತ್ತಾ ಬರುವಾಗ ಟಿಂಬಕ್ಟೂ ತಲುಪಿ, ಹೋಟೆಲ್ ಒಂದನ್ನು ಹುಡುಕಿದೆವು. ಟಿಂಬಕ್ಟೂ ನಗರದ ರಸ್ತೆಗಳಲ್ಲಿ ಜನರ ನೂಕು ನುಗ್ಗಲು. ಎಲ್ಲರಿಗೂ ನಾವು ಪ್ರವಾಸಿಗಳು ಎಂದು ಗೊತ್ತು. ಕೆತ್ತನೆಯ ಕತ್ತಿ, ಖಡ್ಗ, ಸರಗಳು, ಚಿತ್ರಪಟಗಳನ್ನು ಕೊಳ್ಳಿ ಎಂದು ಒತ್ತಾಯ ಮಾಡುತ್ತಾರೆ. ಅಲ್ಲಿ ಚೌಕಾಸಿ ಮಾಡುವುದು ಬಹಳ ಮುಖ್ಯ. ಇಷ್ಟವಿಲ್ಲದಿದ್ದರೂ ಒತ್ತಾಯ ಮಾಡಿದುದರಿಂದ ಕೆಲವು ವಸ್ತುಗಳನ್ನು ತೆಗೆದುಕೊಳ್ಳಬೇಕಾಯಿತು.

ಟಿಂಬಕ್ಟೂವಿನ ಚರಿತ್ರೆಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈಗ ಅದು ರಾಜಧಾನಿಯಲ್ಲ. ಆದರೆ ಅದರ ಕಥೆ ಒಂದು ದಂತಕಥೆಯಂತೆ ಇದೆ.

ಪಶ್ಚಿಮ ಆಫ್ರಿಕಾದ ಮಾಲಿ ಮತ್ತು ಬುರ್ಕಿನೋ ಫಾಸೋನಲ್ಲಿರುವ ಆದಿವಾಸಿಗಳು ಇಸ್ಲಾಂಗೆ ಮತಾಂತರ ಹೊಂದಿದರು. ಆಮೇಲೆ ಅದು ಫ್ರೆಂಚ್ ಕಾಲೋನಿಯಾಯಿತು. ಆಗ ಕೆಲವರು ಕ್ರೈಸ್ತಮತಕ್ಕೆ ಸೇರಿದರು. ಫ್ರೆಂಚರಿಂದ 1960ನೇ ಇಸವಿಯಲ್ಲಿ ಅವರಿಗೆ ಸ್ವರಾಜ್ಯ ಸಿಕ್ಕಿತು. ಆದರೆ ಆಫ್ರಿಕಾದಲ್ಲಿ ಅಲ್ಲಿಯ ಜನರ ನಡುವೆ ಆಂತರಿಕ ಯುದ್ಧಗಳೂ, ಹೊರಗಿನವರ ದಾಳಿಯೂ ನಡೆಯುತ್ತಲೇ ಇರುತ್ತವೆ.

ಟಿಂಬಕ್ಟೂನ ಪ್ರತೀತಿ

ಇದು 5ನೇ ಶತಮಾನದಿಂದಲೂ ಬಹಳ ಮುಖ್ಯ ವ್ಯಾಪಾರೀ ಕೇಂದ್ರ. ಇದನ್ನು ಅಲ್ಲಿಯ ಮಾತಿನಲ್ಲಿ ಮತ್ತು ಬರಹದಲ್ಲಿ ವಿವರಿಸುತ್ತೇನೆ.

ಇದು ನಾಲ್ಕು ದಿಶೆಗಳಿಂದ ಬರುವ ಮಾರ್ಗಗಳು ಕೂಡುವ ಜಾಗ. ಉಪ್ಪು, ಚಿನ್ನ, ಇತರೆ ಸರಕುಗಳು, ಆಫ್ರಿಕಾದ ಗುಲಾಮರು ಎಲ್ಲವೂ ಹಡಗಿನಲ್ಲಿ ಹಾಗೂ ಒಂಟೆಯ ಮೇಲೆ ಆಮದು-ರಫ್ತು ಆಗುವ ಕೇಂದ್ರವಾಗಿತ್ತು.

ಟಿಂಬಕ್ಟೂವಿನಲ್ಲಿ ಬಹಳ ಶತಮಾನಗಳಿಂದ ಬಂದ ಇಸ್ಲಾಂ ಮತ್ತು ಗ್ರೀಕ್ ಪುರಾತನ ಪುಸ್ತಕ ಭಂಡಾರಗಳು ಇವೆ. ಅಲ್ಲಿ ಚಿನ್ನ ಮತ್ತು ಬಣ್ಣದಿಂದ ಕೂಡಿದ ಬಹಳ ಪ್ರಾಚೀನ ಕ್ಯಾಲಿಗ್ರಫಿ ಪುಸ್ತಕಗಳು ಇವೆ. ಅಲ್ಲಿಯ ದೊಡ್ಡ ಮನೆತನಗಳಲ್ಲಿ ಅವರದ್ದೇ ಗ್ರಂಥಭಂಡಾರಗಳು ಇವೆ.

ಇನ್ನೊಂದು ಕಥೆ: ಇಲ್ಲಿಯ ಅರಸನೊಬ್ಬ ದೂರದಿಂದ ದಣಿದು ಬರುವ ಪ್ರಯಾಣಿಕರಿಗೆ ನೀರು ಮುಖ್ಯ ಎಂದು, ಒಂದು ಬಾವಿ ತೋಡಿ ಅದರ ಪಕ್ಕ ಕಾಯಲು “ಬಕ್ಟೂ” ಎಂಬ ವಯಸ್ಕಳನ್ನು ನೇಮಿಸಿದ. ಅವಳ ಕೆಲಸ, ಬಂದವರಿಗೆ ಒಂಟೆಚರ್ಮದ ಚೀಲದಲ್ಲಿ ನೀರನ್ನು ಸೇದಿ ಕೊಡುವುದು. ಅವಳ ಹೊಕ್ಕಳು ಬಹಳಾ ದೊಡ್ಡದಾಗಿತ್ತು. ಆದ್ದರಿಂದ ಅವಳ ಹೆಸರು ಬಕ್ಟೂ. ನಂತರ ಆ ಸ್ಥಳವನ್ನು ಕೂಡ ಬಕ್ಟೂವಿನ ಹೆಸರಲ್ಲೇ ಕರೆಯಲಾಯಿತು. ಟಿಂಬಕ್ಟೂ ಎಂಬ ಹೆಸರಿನ ಅರ್ಥ “ಬಕ್ಟೂ ಬಾವಿ” (Tom Baktu) ಎಂದು. ಆ ಬಾವಿಯಲ್ಲಿ ಎಂದೂ ನೀರು ಆರಿಲ್ಲ ಎಂಬ ಪ್ರತೀತಿ ಇದೆ.

ಅಲ್ಲಿಯ ಸಿರಿತನ, ಸಂಸ್ಕೃತಿ, ಪುಸ್ತಕಗಳ ಭಂಡಾರಗಳ ಬಗ್ಗೆ ಕೇಳಿ ಬಹಳ ಜನರು ಅಲ್ಲಿಗೆ ಬರಲು, ದಾಳಿ ಮಾಡಲು ಪ್ರಯತ್ನಿಸಿದರು. 1588 ರಿಂದ 1855 ರ ತನಕ ಹೊರಗಿನ 43 ಜನ ಟಿಂಬಕ್ಟೂಗೆ ಹೋದರು. ಆದರೆ ಹಿಂದೆ ಬಂದವರು 4 ಜನ ಮಾತ್ರ ಎಂಬುದು ಒಂದು ಕಥೆ. ಇಂತಹ ಭಯಾನಕ ಜಾಗ, ಹಾಗಾಗಿ ಹೆಚ್ಚಿನವರು ಟಿಂಬಕ್ಟೂ ಎಂಬ ಊರೇ ಇಲ್ಲ ಎಂಬ ಸುದ್ದಿಯನ್ನು ಹಬ್ಬಿಸಿದ್ದರು. ಹೊರಗಿನಿಂದ ಬಂದವರನ್ನು ಕೊಲ್ಲುತ್ತಾರೆ ಎಂದೂ ಹೇಳುತ್ತಿದ್ದರು.

ನಾವು ಹೋದಾಗ ಟಿಂಬಕ್ಟೂ ಬಹಳ ಆಕರ್ಷಕ ಜಾಗವಾಗಿತ್ತು. ಹೊರಗಿನಿಂದ ಬಂದವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಕ್ಯಾಲಿಗ್ರಫಿ, ಚಿನ್ನ-ಬೆಳ್ಳಿ ಆಭರಣಗಳು, ಕಂಚಿನ, ತಾಮ್ರದ ಆಯುಧಗಳು, ಮಣಿಸರಗಳು ಬಹಳ ಆಕರ್ಷಕವಾಗಿದ್ದವು. ಅಲ್ಲಿಯ ಹಾಡು, ಕುಣಿತ ಎಲ್ಲವೂ ಬಹಳ ಚೆನ್ನಾಗಿತ್ತು. ಅಲ್ಲಿ ಮಾಡಿದ ಸರಕುಗಳನ್ನು, ವಿಶೇಷ ವಸ್ತುಗಳನ್ನು ಮಾರಲು ಅವರಿಗೆ ಹೊರಗಿನ ಜನರು ಬೇಕಾಗಿದ್ದರು.

ಅಲ್ಲಿಯ ದೊಡ್ಡ ಮಣ್ಣಿನ ಮಸೀದಿ ಬಹಳ ಹಳೆಯದು ಮತ್ತು ಪವಿತ್ರವಾದುದು. ಅದನ್ನು ನೋಡಲು ಹೊರಗಿನವರನ್ನು ಬಿಡುವುದಿಲ್ಲ. ಇದಕ್ಕೂ ಒಂದು ಕಥೆ ಇದೆ. ಯಾರೋ ಒಬ್ಬ ಅಪರಿಚಿತ ಬಂದು ಭಕ್ತರ ಜೊತೆ ಸೇರಿ, ಒಳಗೆ ಹೋಗಿ ನಮಾಜು ಮಾಡಿದನಂತೆ. ನಂತರ ಅವನು ಮನುಷ್ಯ ದೇಹ ಬದಲಾಯಿಸಿ ಸಿಂಹವಾದನಂತೆ. ಜನರು ಅವನನ್ನು ಬಂಧಿಸಿ, ಹಿಂದೆ ಇರುವ ಕೋಣೆಯಲ್ಲಿ ಹಾಕಿ ಬಾಗಿಲು ಮುಚ್ಚಿ, ಬೀಗ ಹಾಕಿ, ಅದರ ಮೇಲೆ ಒಂದು ತೆರೆ ಹಾಕಿದರಂತೆ. ಆ ತೆರೆ ಇಂದಿಗೂ ಇದೆ. ಆ ಬಾಗಿಲನ್ನು ತೆರೆದರೆ ಜಗತ್ತಿನ ಬಹಳ ದೊಡ್ಡ ಆತಂಕವು ಹೊರಗೆ ಬಂದು ಎಲ್ಲವನ್ನೂ ನಿರ್ಮೂಲ ಮಾಡುತ್ತದೆ ಎಂದು ಅಲ್ಲಿಯವರಿಗೆ ಈಗಲೂ ನಂಬಿಕೆ ಇದೆ.

ನಾವು ನೋಡಿದ ಈ ಟಿಂಬಕ್ಟೂ ವನ್ನು ನೀವು ಇಂದು ನೋಡುವಂತಿಲ್ಲ. 2011ರಲ್ಲಿ ಗಡಾಫಿಯ ಪತನದ ಬಳಿಕ ಅವನ ಸೇನೆಯ ಹೆಚ್ಚಿನ ವೀರರು, ಐ.ಎಸ್.ಐ. ಅಲ್-ಖೈದಾವನ್ನು ಸೇರಿ, ಮಾಲಿಯನ್ನು ಇಸ್ಲಾಮಿಕ್ ಸ್ಟೇಟ್ ಎಂದರು. ಆ ಬಳಿಕ ಫ್ರೆಂಚ್ ಸೇನೆ ಸಹಾಯ ಮಾಡುತ್ತಿದ್ದರೂ ಹೆಚ್ಚಿನ ಉಪಯೋಗವಾಗುತ್ತಿಲ್ಲ. ಇಸ್ಲಾಂ ಯೋಧರು, ಬಹಳ ಕ್ರೂರರಾಗಿ ಅಲ್ಲಿನ ಜನರನ್ನು ಜೈಲಿಗೆ ತಳ್ಳಿ, ಚಿತ್ರ ಹಿಂಸೆ ಮಾಡಿದರು. ಮಾಲಿಯ ಹೆಂಗಸರಿಗೆ ಬುರ್ಖಾ ಹಾಕಿಸಿ, ಅವರು ನಗುತ್ತಾ, ಹಾಡುತ್ತಾ, ಕುಣಿಯುತ್ತಾ ಇರುವ ಸಂಸ್ಕೃತಿಯೂ, ಸಂಗೀತ, ನೃತ್ಯ ಹಾಗೂ ಇತರ ಕಲೆಗಳು ಇಸ್ಲಾಂನಲ್ಲಿ ವರ್ಜಿತ (ಹರಾಮ್) ಎಂದು ಹೇಳಿದರು. 2013ರಲ್ಲಿ ಫ್ರೆಂಚ್ ಸೇನೆ ಅವರನ್ನು ಓಡಿಸಿದಾಗ ಟಿಂಬಕ್ಟೂವಿನ ಪ್ರಾಚೀನ ಗ್ರಂಥಭಂಡಾರವನ್ನು ಸುಟ್ಟು ಧ್ವಂಸ ಮಾಡಿದರು.

ಒಂದು ಸಂತೋಷ ಏನೆಂದರೆ, ಹೀಗೆ ಆಗಬಹುದು ಎಂದು ಊಹಿಸಿ ಸ್ವಂತ ಗ್ರಂಥಭಂಡಾರಗಳಿದ್ದ ಎಲ್ಲ ಮನೆತನದವರೂ, ಮೊದಲೇ ಸಾಕಷ್ಟು ಗ್ರಂಥಗಳನ್ನು ತಮ್ಮ ತಮ್ಮ ಭಂಡಾರಗಳಲ್ಲಿ ಅಡಗಿಸಿ ಇಟ್ಟಿದ್ದರು.

ನಾನು ನೋಡಿದ ಟಿಂಬಕ್ಟೂ ವಾಪಸ್ಸು ಬರಲಿ, ಡೋಗನ ಜನರು ಮತ್ತೆ ತಮ್ಮ ಜಗತ್ತಿನಲ್ಲಿ ಮೊದಲಿನಂತೆಯೇ ಇರಬಹುದು- ಇರಲಿ ಎಂಬುದೇ ನನ್ನ ಹಾರೈಕೆ.

* ಎಚ್.ಆರ್.ಸಿಂಧು ಅವರ ನೆರವಿಗೆ ಕೃತಜ್ಞತೆಗಳು.

ಮಾಲವಿಕಾ ಕಪೂರ ಅವರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‍ಡ ಸ್ಟಡೀಸ್ (ನಿಯಾಸ್) ನಲ್ಲಿ ಸಂದರ್ಶಕ ಪ್ರಾಧ್ಯಾಪಕರು; ನಿಮ್ಹಾನ್ಸ್ ಸಂಸ್ಥೆಯ ಕ್ಲಿನಿಕಲ್ ಸೈಕಾಲಾಜಿ ವಿಭಾಗದ ಮುಖ್ಯಸ್ಥರಾಗಿದ್ದರು. ಮಕ್ಕಳು ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯ ವಿಷಯದಲ್ಲಿ ವಿಶೇಷ ಆಸಕ್ತಿ ಮತ್ತು ಪರಿಣತಿ. 15ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಡಾ.ಶಿವರಾಮ ಕಾರಂತರ ಮಗಳು.

Leave a Reply

Your email address will not be published.