ಪುಲಿಗೆರೆ ಸೋಮನಾಥನ ‘ಸೋಮೇಶ್ವರ ಶತಕ’

ಮಾನವನ ಬಹಿರಂಗ ಜೀವನದ ನಡೆನುಡಿಯ ಏಳ್ಗೆಗಾಗಿ ಲೋಕ ನೀತಿಯನ್ನು ತಿಳಿಸುವ ಈ ಕೃತಿ ಜನಸಾಮಾನ್ಯರ ನೈತಿಕ ಬದುಕಿಗೆ ದಾರಿದೀಪವಾಗಿದ್ದು, ಕನ್ನಡ ಸಾಹಿತ್ಯದಲ್ಲಿ ಜನಾನುರಾಗ ಪಡೆದಿದೆ.

-ಡಾ.ತಿಪ್ಪೇರುದ್ರ ಸಂಡೂರು

ಮಾನವನ ಜೀವನದ ನಿರ್ವಹಣೆಗೆ ನೀತಿಯ ಅಡಿಗಲ್ಲು ಮುಖ್ಯ. ನೀತಿಯೇ ಅವನ ಬಾಳಿಗೆ ಆಧಾರವಾಗಿದ್ದು, ಲೋಕ ವ್ಯವಹಾರವನ್ನು ನೀತಿಶಾಸ್ತ್ರದ ಮೂಲಕ ತಿಳಿಯಲು ಸಾಹಿತ್ಯವು ಸಹಾಯಕವಾಗಿದೆ. ಕನ್ನಡ ಸಾಹಿತ್ಯದ ವೈವಿಧ್ಯಮಯ ರೂಪಗಳಲ್ಲಿ ‘ಶತಕ’ ಸಾಹಿತ್ಯ ಪ್ರಕಾರವೂ ಒಂದು. ಜನಜೀವನಕ್ಕೆ ಪ್ರಯೋಜನಕಾರಿಯಾದ, ಬೋಧನೆಯೇ ಮುಖ್ಯ ಉದ್ದೇಶವಾಗಿರುವ ವೈಶಿಷ್ಟ್ಯಪೂರ್ಣವಾದ ಸಾಹಿತ್ಯ ಪ್ರಕಾರ ಇದಾಗಿದ್ದು, ಸಮಾಜಕ್ಕೆ ನೀತಿಯನ್ನು ಬೋಧಿಸುವಲ್ಲಿ ಶತಕಗಳು ಬಹುಮುಖ್ಯ ಪಾತ್ರವನ್ನು ವಹಿಸಿವೆ.

`ಶತಕ’ ಎಂದರೆ ನೂರು ಪದ್ಯಗಳಿಂದ ಕೂಡಿದ ಕಾವ್ಯ. ಮುಕ್ತಕಗಳಂತಹ ಬಿಡಿ ಪದ್ಯಗಳ ಸಮುದಾಯವೇ ಶತಕವಾಗಿದ್ದು, ಕಂದ, ವೃತ್ತ, ಷಟ್ಪದಿ, ಸಾಂಗತ್ಯ ಮೊದಲಾದ ಛಂದಸ್ಸಿನಲ್ಲಿ ರಚಿತವಾಗಿದ್ದು, ಆತ್ಮನಿಷ್ಠವಾದ, ಭಾವನಿಷ್ಠವಾದ ಒಂದು ಕಾವ್ಯ ಪ್ರಕಾರವಾಗಿದೆ. ಭಕ್ತಿ, ಜ್ಞಾನ, ವೈರಾಗ್ಯ, ನೀತಿ ಮೊದಲಾದ ವಿಚಾರಗಳನ್ನು ಶತಕಗಳು ಪ್ರತಿಪಾದಿಸುತ್ತವೆ.

ಕನ್ನಡದ ಶತಕ ಸಾಹಿತಿಗಳಲ್ಲಿ ಪುಲಿಗೆರೆ ಸೋಮನಾಥನು ಪ್ರಮುಖನಾಗಿದ್ದು, ಆತನ ‘ಸೋಮೇಶ್ವರ ಶತಕ’ವೂ ಅತ್ಯಂತ ಜನಪ್ರಿಯವೂ, ಪ್ರಸಿದ್ಧವೂ ಆಗಿದೆ. ಈ ಕೃತಿ ಉನ್ನತ ಕಾವ್ಯಲಕ್ಷಣಗಳಿಂದಲೂ, ಭಾವಗೀತೆಯ ಲಕ್ಷಣಗಳಿಂದಲೂ ಕೂಡಿದ್ದು, ಸಹೃದಯರ ಮೆಚ್ಚುಗೆಗೆ ಪಾತ್ರವಾಗಿ ಜನಮನದಲ್ಲಿ ನೆಲೆಸಿದೆ.

ಈ ಕೃತಿಯ ಕರ್ತೃ, ಕಾಲ ಮತ್ತು ಪದ್ಯಗಳ ಬಗೆಗೆ ಹಲವು ಭಿನ್ನಾಭಿಪ್ರಾಯಗಳಿವೆ. ಈ ಕೃತಿಯನ್ನು ಬರೆದವನು ಪಾಲ್ಕುರಿಕೆ ಸೋಮನೆಂದು, ರತ್ನಾಕರವರ್ಣಿಯೆಂದು, ಪುಲಿಗೆರೆ ಸೋಮನೆಂದು ಇತ್ಯಾದಿ ಅಭಿಪ್ರಾಯಗಳಿವೆ. ಆದರೆ, ಇದನ್ನು ರಚಿಸಿದವ ಪುಲಿಗೆರೆ ಸೋಮನಾಥನೆಂದು ವಿದ್ವಾಂಸರು ನಿರ್ಣಯಿಸಿದ್ದಾರೆ. ಅದೇ ರೀತಿ, ಈತನ ಕಾಲದ ಬಗ್ಗೆಯ ಹಲವು ಅಭಿಪ್ರಾಯಗಳಿದ್ದು, ಕ್ರಿ.ಶ.ಸು.1299 ಈತನ ಕಾಲವೆಂದು ನಿರ್ಧರಿಸಲಾಗಿದೆ. 

 ‘ಪುಲಿಗೆರೆಯ ಸೋಮನಾಥ’ ಎಂದೇ ಪ್ರಸಿದ್ಧಿನಾಗಿರುವ ಈತನ ಜನ್ಮಸ್ಥಳ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪುಲಿಗೆರೆ. ಅಂದರೆ ಈಗಿನ ಲಕ್ಷ್ಮೇಶ್ವರದವನು. ‘ಪುಲಿಗೆರೆಯ ಸೋಮೇಶ’ ಈತನ ಇಷ್ಟದೈವ. ಕನ್ನಡ, ಸಂಸ್ಕøತ ಭಾಷಾ ಪಂಡಿತನಾದ ಈತನ ಅಂಕಿತನಾಮ ‘ಹರಹರಾ ಶ್ರೀ ಚೆನ್ನಸೋಮೇಶ್ವರ’. ‘ರತ್ನಕರಂಡಕ’ ಕಾವ್ಯವನ್ನು ಚಂಪೂ ಶೈಲಿಯಲ್ಲಿಯೂ, ‘ಸೋಮೇಶ್ವರ ಶತಕ’ವನ್ನು ವೃತ್ತ ಛಂದಸ್ಸಿನಲ್ಲಿಯೂ ರಚಿಸಿದ್ದಾನೆ.

ಕನ್ನಡದ ಹಲವು ವಿದ್ವಾಂಸರು ಸಂಪಾದಿಸಿದ ಕೃತಿಗಳಲ್ಲಿ 105, 107, 108 ಪದ್ಯಗಳು ಎನ್ನುವ ಉಲ್ಲೇಖಗಳಿವೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ‘ಸೋಮೇಶ್ವರ ಶತಕ’ ಕೃತಿಯಲ್ಲಿ 104 ಸಮವೃತ್ತ ಪದ್ಯಗಳಿದ್ದು, ಇವೆಲ್ಲವೂ ಖ್ಯಾತಕರ್ನಾಟಕಗಳಾಗಿವೆ. ಈ ಕೃತಿಯ ಮೊದಲ ಮತ್ತು ಕೊನೆಯ ಪದ್ಯಗಳು ಸ್ರಗ್ಧರಾ ವೃತ್ತದಲ್ಲಿದ್ದು, ಇನ್ನುಳಿದ ಪದ್ಯಗಳು ಮತ್ತೇಭವೀಕ್ರಿಡಿತ ವೃತ್ತದಲ್ಲಿವೆ. ಮೊದಲ ಪದ್ಯದಲ್ಲಿ ಸೋಮನ ಇಷ್ಟದೈವ ಪುಲಿಗೆರೆ ಸೋಮೇಶನ ಸ್ತುತಿ ಇದೆ. ಎರಡನೆಯ ಪದ್ಯದಲ್ಲಿ ‘ಲೋಕಜ್ಞಾನವನ್ನು ಯಾವ ಮೂಲಗಳಿಂದ ಸಂಗ್ರಹಿಸಬಹುದು’ ಎಂಬುದನ್ನು ತಿಳಿಸಲಾಗಿದೆ. ಮೂರನೇ ಪದ್ಯದಲ್ಲಿ ಕೃತಿ ರಚನೆಯ ಉದ್ದೇಶ, ಕರ್ತೃವಿನ ಹೆಸರು ಮತ್ತು ವಿನಯವಂತಿಕೆಯನ್ನು ಕವಿ ತಿಳಿಸಿದ್ದಾನೆ. ಈ ಕೃತಿಯ ಪ್ರತಿಯೊಂದು ಪದ್ಯದಲ್ಲಿ `ಹರಹರಾ ಶ್ರೀ ಚೆನ್ನ ಸೋಮೇಶ್ವರ’ ಎನ್ನುವ ಅಂಕಿತವಿದೆ. ಶತಕದ ಕೊನೆಯ ಪದ್ಯದಲ್ಲಿ ಸ್ವವಿಷಯದ ಪದ್ಯವಿದ್ದು, ಕಾಲ ಮತ್ತು ತನ್ನ ಹೆಸರು ಸೋಮ ಎಂಬ ವಿಚಾರವನ್ನು ತಿಳಿಸುತ್ತಾನೆ. ಜನರಿಗೆ ನೀತಿಬೋಧನೆಯ ಸಲುವಾಗಿ ‘ವಿಕಾರಿ ನಾಮ ಸಂವತ್ಸರ’ದಲ್ಲಿ ಈ ಕೃತಿಯನ್ನು ರಚಿಸಿರುವ ಸಂಗತಿಗಳನ್ನು ಹೇಳಿದ್ದಾನೆ.

ಭಕ್ತಿ, ಜ್ಞಾನ, ವೈರಾಗ್ಯ, ಶಿವಸ್ತುತಿ, ಲೋಕನೀತಿ, ರಾಜನೀತಿ, ವಿಧಿಪ್ರಾಬಲ್ಯ, ಸಜ್ಜನ-ದುರ್ಜನ ಸ್ವಭಾವ, ಅರಿವಿನ ವಿಸ್ತರಣೆ, ವ್ಯಕ್ತಿಯ ಚಾರಿತ್ರ್ಯ ಸಮಾಜ ಸ್ವಾಸ್ಥ್ಯದ ವಿಚಾರಗಳನ್ನು ಪ್ರತಿಪಾದಿಸುವ ಈ ಕೃತಿಯ ಪದ್ಯಗಳು ಪುಲಿಗೆರೆ ಸೋಮನಾಥನ ಹೆಸರನ್ನು ಕನ್ನಡ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿಸಿವೆ. ನೀತಿಶಾಸ್ತ್ರವನ್ನು ಬೋಧಿಸುವುದೇ ಈ ಕೃತಿಯ ಜೀವಾಳವಾಗಿದ್ದು, ನೀತಿ ಪ್ರಧಾನ ಕೃತಿಗಳಲ್ಲಿ ಸೋಮೇಶ್ವರ ಶತಕ ಅಗ್ರಗಣ್ಯ ಕೃತಿಯಾಗಿದೆ. ಸಾಮಾನ್ಯ ನೀತಿಗಳನ್ನು ಗಾದೆಮಾತುಗಳ ಮೂಲಕ ಹೇಳುವುದು ಕವಿಯ ಭಾಷೆಯ ಶೈಲಿಯನ್ನು ತಿಳಿಸುತ್ತದೆ.

ಈ ಕೃತಿಯ ಮೊದಲ ಪದ್ಯವು ಮಂಗಳಾಚರಣೆಯ ಪದ್ಯವಾಗಿದ್ದು, ಶಿವನಾಮಾವಳಿಯನ್ನು ಕುರಿತು ತಿಳಿಸುತ್ತದೆ. ಇದರಿಂದ ಈತನು ಶೈವಭಕ್ತನೆಂಬುದು ತಿಳಿಯುತ್ತದೆ.

ಶ್ರೀಮತ್ಕೈಲಾಸವಾಸಂ ಸ್ಮಿತಮೃದುವಚನಂ ಪಂಚವಕ್ತ್ರಂ ತ್ರಿಣೇತ್ರಂ |

ಪ್ರೇಮಾಂಕಂ ಪೂರ್ಣಕಾಮಂ ಪರಮ ಪರಶಿವಂ ಪಾರ್ವತೀಶಂ ಪರೇಶಂ ||

ಧೀಮಂತಂ ದೇವದೇವಂ ಪುಲಿಗಿರಿ ನಗರೀ ಶಾಸನಾಂಕಂ ಮೃಗಾಂಕಂ |

ಸೋಮೇಶಂ ಸರ್ಪಭೂಷಂ ಸಲಹುಗೆ ಜಗಮಂ ಸರ್ವದಾ ಸುಪ್ರಸನ್ನಂ

|| ಪೀಠಿಕಾ ಪದ್ಯ ||

ಶ್ರೀಮತ್ಕೈಲಾಸವಾಸಿಯಾದ, ನಗೆಯಿಂದ ಕೂಡಿದ, ಮೃದುವಾದ ಮಾತುಳ್ಳ, ಐದು ಮುಖವುಳ್ಳ, ಮೂರು ಕಣ್ಣುಳ್ಳ, ಪ್ರೇಮವೇ ಗುರುತಾಗುಳ್ಳ, ಸರ್ವ ಸಮೃದ್ಧಿಯನ್ನೊಳಗೊಂಡಿರುವ, ಸರ್ವೋತ್ಕøಷ್ಟ ಮಂಗಳಸ್ವರೂಪನಾದ, ಪಾರ್ವತೀಪತಿಯಾದ, ಸರ್ವೇಶ್ವರನಾದ, ಜ್ಞಾನಿಯಾದ, ದೇವತೆಗಳಿಗೆ ದೇವನಾದ, ಪುಲಿಗಿರಿ ನಗರಿಯ ಪಾಲನೆಯೇ ಲಕ್ಷಣವಾಗುಳ್ಳ, ಜಿಂಕೆಯನ್ನು ಕೈಯಲ್ಲಿ ಧರಿಸಿರುವ, ನಾಗಾಭರಣನಾದ ಸೋಮೇಶ್ವರನು ಸರ್ವದಾ ದಯೆಯಿಂದ ಲೋಕವನ್ನು ರಕ್ಷಿಸಲಿ ಎಂದು ಈ ಪದ್ಯದಲ್ಲಿ ಶಿವನ ಗುಣಗಳನ್ನು ಹೇಳುತ್ತ ಶಿವಭಕ್ತಿ ಪಾರಮ್ಯವನ್ನು ತೋರ್ಪಡಿಸಿದ್ದಾನೆ. ‘ಶಿವನೇ ದೇವರೊಳುತ್ತಮಂ’(4) ‘ಹರನಿಂದುರ್ವಿಗೆ ದೈವವೇ’(6) ‘ಶಿವ ಬಿಲ್ಲಾಳ್ಗಳೊಳಂಗಜಂ’(13) ‘ಶಿವನಂ ಬಿಟ್ಟವ ಶಿಷ್ಟನೇ’(22) ‘ಹರ ಕೊಲ್ಲಲ್ ಪರ ಕಾಯ್ವನೇ’(29) ‘ಇಡಬೇಕೀಶ್ವರನಲ್ಲಿ ಭಕ್ತಿರಸಮಂ’(79) ‘ಶಿವನೇ ದೇವರ್ಕಳ್ಗೆ ತಾನಾಸ್ಪದಂ’ ‘ಶಿವಜ್ಞಾನವೆ ಯೋಗಿಗಳ್ಗೆ ನಯನಂ’ (86), ಈ ಶತಕದ ಇನ್ನು ಕೆಲವು ಪದ್ಯಗಳು ಶಿವಮಹಿಮೆಯನ್ನು ಸಾರುತ್ತವೆ.

ಈ ಕೆಳಗಿನ ಪದ್ಯ ಆತನ ಪದ್ಯಗಳಲ್ಲಿ ಸುಪ್ರಸಿದ್ಧವಾಗಿದ್ದು, ಓದುಗರ ಬಾಯಲ್ಲಿ ಸದಾ ಇರುವಂತಹ ಪದ್ಯವಾಗಿದೆ. ಇಲ್ಲಿ ಲೋಕನೀತಿಯ ರಸದೌತಣವನ್ನು ಕವಿ ಓದುಗರಿಗೆ ಉಣಬಡಿಸಿದ್ದಾನೆ. ಹಲವು ಹಳ್ಳಗಳು ಸೇರಿ ಸಮುದ್ರವಾದಂತೆ ಹಲವು ಮೂಲಗಳಿಂದ ದೊರೆತ ಜ್ಞಾನದಿಂದ ವ್ಯಕ್ತಿ ಸರ್ವಜ್ಞನಾಗುತ್ತಾನೆ ಎಂದು ತಿಳಿಸಿದ್ದಾನೆ.

ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ |

ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ ||

ಕೆಲವಂ ಸಜ್ಜನ ಸಂಗದಿಂದಲರೆಯಲ್ ಸರ್ವಜ್ಞನಪ್ಪಂತೆ ಕೇಳ್ |

ಪಲವುಂ ಪಳ್ಳ ಸಮುದ್ರವೈ ಹರ ಹರಾ ಶ್ರೀ ಚೆನ್ನಸೋಮೇಶ್ವರಾ || 1 ||

ಕವಿಯ ಬಗ್ಗೆ, ಕಾವ್ಯದ ಬಗೆಗೆ ವಿಶೇಷ ಕಾಳಜಿಯುಳ್ಳ ಸೋಮನಾಥನು ತನ್ನ ಪದ್ಯಗಳಲ್ಲಿ ಕವಿ-ಕಾವ್ಯದ ಮಹತ್ವವನ್ನು ತಿಳಿಸಿದ್ದಾನೆ. “ಕವಿಯೇ ಸರ್ವರೊಳುತ್ತಮಂ”(4) “ಕವಿಯಾಸ್ಥಾನಕೆ ಭೂಷಣಂ”(5) “ಕವಿಗೆ ವಿದ್ಯಾಮಾತೆಯೇಂ ಬಂಜೆಯೇ”(34) “ಕವಿಯೇ ರಾಜರ ಕಣ್ಣೆಲೈ”(86) “ಕವೀಂದ್ರ ಮಹಾದುರ್ಮಾರ್ಗಿಗಳ್, ಕಾವ್ಯದಚ್ಚರಿಯಂ ಗಾಂಪರು ಜರಿಯಲ್ ಕುಂದಾಗದು”(95) ಕವಿಯು ಆಸ್ಥಾನಕ್ಕೆ ಭೂಷಣನೂ, ರಾಜರಿಗೆ ಕಣ್ಣಿನಂತೆ ಎನ್ನುವ ವಿಚಾರವನ್ನು ತಿಳಿಸುತ್ತಾನೆ.

ಮಗನ ಗುಣಲಕ್ಷಣಗಳನ್ನು ಕವಿ ಕೆಲವು ಪದ್ಯಗಳಲ್ಲಿ ತಿಳಿಸಿದ್ದಾನೆ. ಕುವರಂ ವಂಶಕೆ ಭೂಷಣಂ (5) “ಸುತನೇ ಸದ್ಗತಿದಾತನೈ (8) “ಸುತನಿರ್ದೇಂ ಮುಪ್ಪಿನಲ್ಲಾಗದಾ” (16) “ಅವಿನೀತಂ ಮಗನೇ” (22) ಹೀಗೆ ಸುತನ ಮಹತ್ವ ಮತ್ತು ಜವಾಬ್ದಾರಿಯ ಅರಿವನ್ನು ಈತ ನೀಡುತ್ತಾನೆ.

ತನ್ನ ಕಾವ್ಯ ಪ್ರತಿಭೆಯಿಂದ ಶುಷ್ಕವಾದ ನೀತಿಯನ್ನೂ ಕಾವ್ಯದರ್ಜೆಗೆ ಏರಿಸಿರುವುದು ಸೋಮನಾಥನ ಪ್ರತಿಭಾ ಸಾಮರ್ಥಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಮೊದಲಿಂದ ಕಡೆಯವರೆಗೂ ನೀತಿ ತತ್ವಗಳನ್ನು ರಸವತ್ತಾಗಿ ಪ್ರತಿಪಾದಿಸಿದ್ದಾನೆ. ಈತನ ಪದ್ಯಗಳಿಗೆ ನೀತಿಯೇ ತಳಹದಿಯಾಗಿದ್ದು, ‘ನೀತಿಯೆ ಸಾಧನಂ ಸಕಲ ಲೋಕಕ್ಕಾಗಬೇಕೆಂದು ಪೇಳಿದ ಕೃತಿ’ ತನ್ನದೆಂದು ತಿಳಿಸಿದ್ದಾನೆ.

ಮತಿಯ ಬುದ್ಧಿಯಂ ಜಾಣ್ಮೆಯಂ ಗಮಕಮಂ ಗಾಂಭೀರ್ಯಮಂ ನೀತಿಯಾ |

ಯತಮಂ ನಿಶ್ಚಲಚಿತ್ತಮಂ ನೃಪವರಾಸ್ಥಾನೋಚಿತಾರ್ಥಂಗಳಂ ||

ಅತಿ ಮಾಧುರ್ಯ ಸುಭಾಷಿತಂಗಳ ಮಹಾ ಸತ್ಕೀರ್ತಿಯಂ ಬಾಳೈಯಂ |

 ಶತಕಾರ್ಥಂ ಕೊಡದಿರ್ಪುದೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ || 102 ||

ಈ ಶತಕದ ಮಹತ್ವವನ್ನು ಮೇಲಿನ ಪದ್ಯ ಚೆನ್ನಾಗಿ ಸಾರುತ್ತದೆ. ವಿವೇಕ, ಬುದ್ಧಿ, ಜಾಣ್ಮೆ, ಓದುವ ಒಳ್ಳೆಯ ಶೈಲಿ, ಗಾಂಭೀರ್ಯ, ನೀತಿ, ದೃಡಮನಸ್ಸು, ರಾಜಸ್ಥಾನಕ್ಕೆ ತಕ್ಕುದಾದ ಪಾಂಡಿತ್ಯ, ಬಹಳ ಇಂಪಾದ ವಾಕ್ಪಟುತ್ವ, ಮೇಲಾದ ಕೀರ್ತಿ, ಜೀವನ – ಇವೆಲ್ಲ ಶತಕದ ಅರ್ಥ ಹಿಡಿದವರಿಗೆ ದೊರೆಯದೇ? ಎಂಬುದನ್ನು ತಿಳಿಸುತ್ತದೆ.

ರವಿಯಾಕಾಶಕೆ ಭೂಷಣಂ ರಜನಿಗಾ ಚಂದ್ರಂ ಮಹಾ ಭೂಷಣಂ |

ಕುವರಂ ವಂಶಕೆ ಭೂಷಣಂ ಸರಸಿಗಂಭೋಜಾತಗಳ್ ಭೂಷಣಂ || 

ಹವಿ ಯಜ್ಞಾಳಿಗೆ ಭೂಷಣಂ ಸತಿಗೆ ಪಾತಿವ್ರತ್ಯವೇ ಭೂಷಣಂ |

ಕವಿಯಾಸ್ಥಾನಕೆ ಭೂಷಣಂ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ || 5 ||

ಈ ಪದ್ಯದಲ್ಲಿ ಸಾಮಾನ್ಯ ಲೋಕನೀತಿಯನ್ನು ತಿಳಿಸುತ್ತಾ ಆಕಾಶಕ್ಕೆ ರವಿ, ರಜನಿಗೆ ಚಂದ್ರ, ಸರೋವರಗಳಿಗೆ ಕಮಲ, ಯಜ್ಞಕ್ಕೆ ಹವಿಸ್ಸು, ರಾಜಾಸ್ಥಾನಕ್ಕೆ ಭೂಷಣ ಎನ್ನುವುದನ್ನು ಉದಾಹರಣೆಗಳ ಮೂಲಕ ತಿಳಿಸುತ್ತಾನೆ. 

ನೀತಿಯನ್ನು ಹೇಳುವಾಗ ಪುರಾಣ ಕಥೆಗಳನ್ನು ಪ್ರಸ್ತಾಪಿಸಿರುವುದು, ರಾಮಾಯಣ, ಮಹಾಭಾರತ, ಭಾಗವತ, ಪುರಾಣ ಪ್ರಸಿದ್ಧ ವ್ಯಕ್ತಿಗತ ಕಥೆಗಳನ್ನು ನೀಡಿರುವುದು ‘ಸೋಮೇಶ್ವರ ಶತಕ’ದ ವೈಶಿಷ್ಟ್ಯತೆಯಾಗಿದೆ.

ಮದನಂ ದೇಹವ ನೀಗಿದಂ ನೃಪವರಂ ಚಂಡಾಲಗಾಳಾದ ಪೋ |

ದುದು ಬೊಮ್ಮಂಗೆ ಶಿರಸ್ಸು ಭಾರ್ಗವನು ಕಣ್ಗಾಣಮ ನಳಂ ವಾಜಿಪಂ ||

ಸುಧೆಯಂ ಕೊಟ್ಟು ಸುರೇಂದ್ರ ಸೋಲ್ತ ಸತಿಯಂ ಪೋಗಾಡಿದಂ ರಾಘವಂ |

ವಿಧಿಯಂ ಮೀರುವನಾವನೈ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ || 27 ||

ಮನ್ಮಥನು ದೇಹವನ್ನೇ ಕಳೆದುಕೊಂಡದ್ದನ್ನು, ಹರಿಶ್ಚಂದ್ರನು ಚಂಡಾಲನಿಗೆ ದಾಸನಾದದ್ದನ್ನು, ಶ್ರೀರಾಮನು ಹೆಂಡತಿಯನ್ನು ಕಳೆದುಕೊಂಡದ್ದನ್ನು, ಬೊಮ್ಮನ ಶಿರಸ್ಸು ಹೋದದನ್ನು – ಹೀಗೆ ಹಲವಾರು ಪುರಾತನ ಕತೆಗಳನ್ನು ಸಂದರ್ಭೋಚಿತವಾಗಿ ತಂದು ತನ್ನ ನೀತಿಬೋಧೆಗೆ ಪುರಾಣದ ಲೇಪವನ್ನು ಹಚ್ಚಿದ್ದಾನೆ. ‘ಕಾವ್ಯದಲ್ಲಿ ಉಪದೇಶವು ನೀರಸವಾಗಿರದೇ ಅದು ರಸದ ಅಂಗವಾಗಿರಬೇಕು’ ಎನ್ನುವ ಅಭಿಪ್ರಾಯದಂತೆ ನೀತಿಪ್ರಧಾನವಾದ ಅನೇಕ ಕಥೆಗಳನ್ನು ಸಾಂದರ್ಭಿಕವಾಗಿ ಪ್ರಸ್ತಾಪಿಸಿರುವುದು ಇಲ್ಲಿ ಕಂಡುಬರುತ್ತದೆ. ರಾಜ, ಮಂತ್ರಿ, ಶಾನುಭೋಗ, ತಳವಾರ ಮೊದಲಾದವರ ಕರ್ತವ್ಯಗಳನ್ನು, ಅವರ ಗುಣಲಕ್ಷಣಗಳನ್ನು ಹಲವು ಪದ್ಯಗಳಲ್ಲಿ ವಿವರಿಸಿದ್ದಾನೆ.

‘ಕಳವೇಂ ಕೊಲ್ಲದೆ ಕಾಯ್ವುದೇ?’ ‘ಎಳೆಗರುಂ ಎತ್ತಾಗದೆ? ಬಡವಂ ಬಲ್ಲಿದನಾಗನೇ?’ ‘ವರ್ಣಮಾತ್ರಂ ಕಲಿಸಿದಾತಂ ಗುರು’ ‘ಕುಲವೆಣ್ಣಿಂಗೆಣೆಯಾವುದೈ’ ‘ಜಗದೊಳ್ ಸುಂಡಗೆ ಯುದ್ಧವೇ?’ ‘ಆಪತ್ತಿನೊಳ್ ಮಣಿದುಂ ನೋಡದ ಬಂಧುವೇತಕೆ?’ ‘ಸನ್ನೆ ಸಾವಿರ ಕಾಲಾಳಿನ ಸತ್ತ್ವವೈ’ ‘ಸರಿಯೇ ಸೂರ್ಯಗೆ ಕೋಟಿ ಮಿಂಚುಬುಳುಗಳ್’ ‘ದೊರೆಗಳ್ಗೆತ್ತಣ ನಂಟರೈ’ ‘ಮದನಂಗಾಳಾಗಿಹನ್ ಲೋಕದೊಳ್ ದೊರೆಯೇ?’ ‘ಮುಕುರಂ ಕೈಯೊಳಿರಲ್ಕೆ ನೀರನೆಳಲೇಕೈ’ ‘ನಾಯಬಾಲ ಸೆಡೆಯಂ ಕಟ್ಟಲಕೆ ಚೆನ್ನಪ್ಪುದೇ?’ ಬಡವಂ ಬಲ್ಲಿದನಾಗನೇ? ಮಡಿಯೇ ನಿರ್ಮಲ ಚಿತ್ತವೈ, ಕಾಲೋಚಿತಕ್ಕೈದಿದಾ ತೃಣವೇ ಪರ್ವತವಲ್ಲವೇ? ಎಂಬುವು ಇಂದಿಗೂ ಜನತೆಯ ನಾಣ್ಣುಡಿಗಳಾಗಿವೆ. ಅಲ್ಲದೇ ಕವಿಯ ಸ್ವಾನುಭವದ ಹಿನ್ನೆಲೆಯಲ್ಲಿ ರಚನೆಯಾದ ನೀತಿಪ್ರಧಾನ ಪದ್ಯಗಳು, ಹಲವು ನಿದರ್ಶನಗಳು ಕಾವ್ಯಸೌಂದರ್ಯಕ್ಕೆ ಮೆರುಗನ್ನು ನೀಡಿವೆ.

ಈ ಶತಕದಲ್ಲಿ ಪೀಠಿಕೆ, ಶ್ರೇಷ್ಠತೆ, ನಿಕೃಷ್ಟತೆ, ವಿಧಿಮಹಿಮೆ, ದುಸ್ವಭಾವ, ಧನ ಪ್ರಶಂಸೆ, ರಾಜನೀತಿ, ಶಕುನ, ಸ್ವಪ್ನ, ವೇಶ್ಯಾಪದ್ಧತಿ, ಪರಸೇನೆ, ಸಾಮಾನ್ಯ ನೀತಿ, ಜ್ಞಾನ ಪ್ರಶಂಸೆ ಎಂಬ ವಿಭಾಗಗಳಿವೆ. ಇದೊಂದು ನೀತಿ ಬೋಧಪ್ರದವಾದ ಕಾವ್ಯ ಪ್ರಕಾರವಾದರೂ ಸೋಮನಾಥ ಕವಿ ತನ್ನ ಪ್ರತಿಭಾಶಕ್ತಿ, ಕಲ್ಪನಾಚಾತುರ್ಯ ಹಾಗೂ ರಚನಾ ಕೌಶಲಗಳಿಂದ ನೀರಸವಾಗಿರುವ ವಿಷಯಗಳನ್ನು ರಸಮಯವನ್ನಾಗಿ ಮಾಡಿದ್ದಾನೆ. ಬದುಕಿನ ನೈಜ ಚಿತ್ರಣವಿರುವ ಈ ಶತಕದಲ್ಲಿ ವ್ಯಕ್ತಿ, ಸಮಾಜ ಹಾಗೂ ಜಗತ್ತಿಗೆ ಸಂಬಂಧಿಸಿದ ಸಾರ್ವಕಾಲಿಕ ನೀತಿಯ ಚಿತ್ರಣವಿದೆ.

ಹೀಗೆ ಸೋಮೇಶ್ವರ ಶತಕದ ಪ್ರತಿಪದ್ಯಗಳು ನೀತಿಯ ನೆಲೆಗಟ್ಟಿನಲ್ಲಿ ಒಡಮೂಡಿ ಬಂದ ಮುಕ್ತಕಗಳಾಗಿದ್ದು, ಸಾಮಾಜಿಕ ಸುಧಾರಣೆಯ ಹಿನ್ನೆಲೆಯಲ್ಲಿ ಈ ಪದ್ಯಗಳು ಮಾನವರನ್ನು ಸನ್ಮಾರ್ಗಕ್ಕೆ ತರುತ್ತವೆ. ಈ ಕೃತಿಯ ಪದ್ಯಗಳು ಆಕಾರದಲ್ಲಿ ಸಣ್ಣಗಿದ್ದರೂ, ಅನುಭವ ಪೂರ್ಣವಾದ ವ್ಯವಹಾರ ಜ್ಞಾನವನ್ನು ತಿಳಿಸುತ್ತವೆ. ಈ ಎಲ್ಲಾ ಕಾರಣಗಳಿಂದ ಸೋಮೇಶ್ವರ ಶತಕವು ನೀತಿಯ ರಸಬುಗ್ಗೆಯಾಗಿದ್ದು, ‘ಕನ್ನಡದ ನೀತಿಶತಕ’ ಎಂದೇ ಓದುಗ ವಲಯದಲ್ಲಿ ಪ್ರಸಿದ್ಧಿಯಾಗಿದ್ದರಿಂದ ವಿಮರ್ಶಕರು ಸೋಮನಾಥನನ್ನು ‘ಕನ್ನಡದ ಭರ್ತೃಹರಿ’ ಎಂದು ಕರೆದಿದ್ದಾರೆ.

ಮಾನವನ ಬಹಿರಂಗ ಜೀವನದ ನಡೆನುಡಿಯ ಏಳ್ಗೆಗಾಗಿ ಲೋಕ ನೀತಿಯನ್ನು ತಿಳಿಸುವ ಈ ಕೃತಿ ಜನಸಾಮಾನ್ಯರ ನೈತಿಕ ಬದುಕಿಗೆ ದಾರಿದೀಪವಾಗಿದ್ದು, ಕನ್ನಡ ಸಾಹಿತ್ಯದಲ್ಲಿ ಜನಾನುರಾಗ ಪಡೆದ ಕೃತಿಯಾಗಿದೆ. “ಸೋಮೇಶ್ವರ ಶತಕವು ಮಾರ್ಮಿಕವಾದ ಲೋಕಾನುಭವ, ವಿವೇಕ ಇವುಗಳ ಆಗರವಾಗಿದ್ದು ಕನ್ನಡ ಜನಕ್ಕೆ ಹಲವಾರು ಪಡೆನುಡಿಗಳನ್ನು ಒದಗಿಸಿರುತ್ತದೆ. ಸರ್ವಜ್ಞನ ವಚನಗಳಂತೆ ಈ ಶತಕದ ಪದ್ಯಗಳು ಜನಪ್ರಿಯವಾಗಿ ನಾಲಿಗೆಯ ಮೇಲೆ ನಲಿದಾಡುತ್ತವೆ. ಅವುಗಳ ಮಿಶ್ರಶೈಲಿ ಜನಪ್ರಿಯತೆಗೆ ಬಾಧಕವಾಗಿಲ್ಲ. ಬಹುಶಃ ಹಳಗನ್ನಡದ ಬಿಗುವಿನಿಂದ ಅದು ಬಿಡುಗಡೆ ಹೊಂದಿ ಪ್ರಚಲಿತ ರೀತಿಗೆ ಕೆಲಮಟ್ಟಿಗೆ ಸಮೀಪವಾಗಿರುವುದರಿಂದಲೇ ತನ್ನದೇ ಆದ ಒಂದು ರುಚಿಯನ್ನು ಹೊಂದಿ ಜನಮನವನ್ನು ಸೆಳೆಯುತ್ತ ಬಂದಿರಬೇಕು” ಎನ್ನುವ ರಂ.ಶ್ರೀ. ಮುಗಳಿಯವರ ಅಭಿಪ್ರಾಯ ಈ ಕೃತಿಯ ಮಹತ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ಕವಿಯ ಲೋಕಾನುಭವ, ಧರ್ಮವಿವೇಕ ಮತ್ತು ಕಾವ್ಯಶಕ್ತಿಗಳು ಮುಪ್ಪರಿಗೊಂಡು ‘ನೀತಿಬೋಧೆಯ ಕೈದೀವಿಗೆ’ ಎಂದೇ ಈ ಕೃತಿ ಪ್ರಸಿದ್ಧಿ ಪಡೆದಿದೆ.

*ಲೇಖಕರು ಬಳ್ಳಾರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು; ‘ಸಾಹಿತ್ಯ ಸುರಭಿ (ಲೇಖನಗಳ ಸಂಕಲನ), ‘ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು-ಒಂದು ಅಧ್ಯಯನ (ಸಂಶೋಧನಾ ಮಹಾಪ್ರಬಂಧ) ಪ್ರಕಟಿಸಿದ್ದಾರೆ. ಸ್ಕಂದ ಮಂದಾರ, ಕನ್ನಡ ಹಣತೆ-1 ಸಂಪಾದಿತ ಕೃತಿಗಳು.

Leave a Reply

Your email address will not be published.