ಪೌರತ್ವದ ಪೂರ್ವಾಪರ

ಜರೂರು ಸಮಸ್ಯೆಗಳ ಆಚೆಗೆ, ಒಂದು ವಿಶಾಲ ಚಾರಿತ್ರಿಕ ನೋಟವನ್ನು ನೀಡುವುದು ಈ ಲೇಖನದ ಉದ್ದೇಶ.

ಎ.ಪಿ.ಅಶ್ವಿನ್ ಕುಮಾರ್

ಪೌರತ್ವ ಕುರಿತ ಈತ್ತೀಚೆಗಿನ ವಿದ್ಯಮಾನಗಳು ಹಲವು ಪ್ರಮುಖ ಸೈದ್ಧಾಂತಿಕ ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿವೆ. ನಿರ್ದಿಷ್ಟ ಕಾಯ್ದೆಗಳು, ಕಾನೂನುಗಳ ಅಗತ್ಯ ಅಥವಾ ಅನಗತ್ಯಗಳ ಬಗ್ಗೆ ಹಲವು ರೀತಿಯ ಚರ್ಚೆಗಳು ಈಗಾಗಲೇ ನಡೆದಿವೆ. ಆ ಚರ್ಚೆಗೆ ಇನ್ನೊಂದು ಅಭಿಪ್ರಾಯವನ್ನು ಜೋಡಿಸುವುದು ಈ ಲೇಖನದ ಉದ್ದೇಶವಲ್ಲ. ಅದರ ಬದಲು, ಈ ಇಡೀ ಚರ್ಚೆ ಯಾವ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನಡೆದಿದೆ ಎಂದು ಪರೀಕ್ಷಿಸುವುದು ನನ್ನ ಉದ್ದೇಶ.

ಈ ಲೇಖನದ ಕೊನೆಗೆ ತಿದ್ದುಪಡಿಯಾದ ಪೌರತ್ವ ಕಾಯ್ದೆ ಬೇಕೇ ಬೇಡವೇ, ಅಥವಾ ರಾಷ್ಟ್ರೀಯ ನಾಗರಿಕ ಪಟ್ಟಿಯೊಂದು ಬೇಕೇ ಬೇಡವೇ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಅಂತಹ ಉತ್ತರಗಳನ್ನು ನೀಡುವ ಹಲವಾರು ಲೇಖನಗಳು ಈ ಸಂಚಿಕೆಯಲ್ಲೇ ಪ್ರಕಟವಾಗಿವೆ. ಒಂದು ಪ್ರಮುಖ ರಾಜಕೀಯ ನಿರ್ಧಾರದಲ್ಲಿ ರಾಜಕೀಯ ಪಕ್ಷಗಳ ಅವಕಾಶವಾದಿತನ, ತಮ್ಮ ಚುನಾವಣಾ ಕಸರತ್ತುಗಳ ಕುರಿತ ಲೆಕ್ಕಾಚಾರ, ಸರಕಾರಗಳ ಅಕ್ಷಮತೆಯ ಕಾರಣದಿಂದ ಸಾಮಾನ್ಯ ಜನರ ಮೇಲೆ ಉಂಟಾಗುವ ದುಷ್ಪರಿಣಾಮಗಳು, ಪೋಲಿಸರಿಂದ ಆಗುವ ದುರಾಚಾರ, ಹಿಂಸೆ, ಅನಗತ್ಯ ಪ್ರಾಣಹಾನಿ ಇವೆಲ್ಲ ತಳುಕು ಹಾಕಿಕೊಂಡಿರುತ್ತದೆ. ಆದರೆ, ಅವೆಲ್ಲದರ ಆಚೆಗೆ, ಆಳವಾದ ಚಾರಿತ್ರಿಕ-ವೈಚಾರಿಕ ಕಾರಣಗಳಿಂದ ಇಂತಹ ಆಯ್ಕೆಗಳು ನಿರ್ದಿಷ್ಟ ರೀತಿಯಲ್ಲಿ ನಮ್ಮೆದುರು ಗೋಚರವಾಗುತ್ತವೆ. ಹಾಗಾಗಿ, ಸದ್ಯದ ಜರೂರು ಸಮಸ್ಯೆಗಳ ಆಚೆಗೆ, ಒಂದು ವಿಶಾಲ ಚಾರಿತ್ರಿಕ ನೋಟವನ್ನು ನೀಡುವುದು ಈ ಲೇಖನದ ಉದ್ದೇಶ.

ಆಧುನಿಕ ಜಗತ್ತಿನಲ್ಲಿ ಪೌರತ್ವದ ಎರಡು ಮುಖ್ಯ ರೂಪಗಳನ್ನು ಗುರುತಿಸಬಹುದು. ಒಂದು, ಹುಟ್ಟಿನ ಕಾರಣದಿಂದ ಬರುವಂಥದ್ದು. ಇನ್ನೊಂದು ವಾಸದ ಕಾರಣದಿಂದ ಬರುವಂಥದ್ದು. ಇದರಲ್ಲೇ ಹಲವಾರು ಒಳ ಪ್ರಬೇಧಗಳೂ ಇವೆ. ಆದರೆ ಅವುಗಳ ವಿವರ ಸದ್ಯಕ್ಕೆ ನಮಗೆ ಬೇಡ. ಆದರೆ ಇಲ್ಲಿ ಒಂದು ಮುಖ್ಯ ವಿಚಾರ: ಹುಟ್ಟಿನ ಕಾರಣದಿಂದ ಬರುವ ಪೌರತ್ವ ಭೌಗೋಳಿಕ ಗುರುತಿನೊಂದಿಗೆ ತಳುಕು ಹಾಕಿಕೊಂಡಿದೆ. ನಿರ್ದಿಷ್ಟ ಭೂಪ್ರದೇಶದಲ್ಲಿ ಹುಟ್ಟಿದ್ದು ಎನ್ನುವ ಕಾರಣಕ್ಕೆ ಬಂದ ಪೌರತ್ವ ಅದು. ಇದಕ್ಕೆ ಭಿನ್ನವಾಗಿ, ವಾಸದ ಕಾರಣದಿಂದ ಬರುವ ಪೌರತ್ವ ಸರಕಾರಗಳು ಗುರುತಿಸುವ, ಕಾನೂನುಗಳ ಮೂಲಕ ಕೊಡಮಾಡುವ ಪೌರತ್ವ. ಈ ಪೌರತ್ವ ಆಯಾ ದೇಶದ ಕಾನೂನುಗಳು ಮತ್ತು ಪರಿಸ್ಥಿತಿಗಳನ್ನು ಅವಲಂಬಿಸಿರುವಂಥದ್ದು.

ಭಾರತ, ಆಸ್ಟ್ರೇಲಿಯಾ ಮುಂತಾದ ಕೆಲವೇ ಕೆಲವು ದೇಶಗಳಲ್ಲಿ ಈ ಎರಡರ ನಡುವಿನ ಒಂದು ವ್ಯವಸ್ಥೆ ಇದೆ. ವಲಸೆಯ ಆಧಾರದ ಮೇಲೆ ಬೆಳೆದ ದೇಶಗಳೆಲ್ಲಾ ವಾಸದ ಆಧಾರದ ಮೇಲೆ ಪೌರತ್ವವನ್ನು ಗುರುತಿಸುವ ವ್ಯವಸ್ಥೆಯನ್ನು ಮಾನ್ಯ ಮಾಡಿವೆ.

ಅಮೆರಿಕ, ದಕ್ಷಿಣ ಅಮೆರಿಕ, ಕೆನಡಾ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ವಾಸದ ಕಾರಣದಿಂದ ಬರುವ ಪೌರತ್ವದ ಮಾದರಿ ಇದೆ. ಆದರೆ, ಯುರೋಪಿನ, ಆಫ್ರಿಕಾದ ಮತ್ತು ಏಷಿಯಾದ ಹಲವಾರು ಭಾಗಗಳಲ್ಲಿ ಹುಟ್ಟಿನ ಕಾರಣದಿಂದ ಬರುವ ಪೌರತ್ವವನ್ನು ಮಾತ್ರ ಮಾನ್ಯ ಮಾಡಲಾಗಿದೆ. ಆದರೆ, ಭಾರತ, ಆಸ್ಟ್ರೇಲಿಯಾ ಮುಂತಾದ ಕೆಲವೇ ಕೆಲವು ದೇಶಗಳಲ್ಲಿ ಈ ಎರಡರ ನಡುವಿನ ಒಂದು ವ್ಯವಸ್ಥೆ ಇದೆ. ವಲಸೆಯ ಆಧಾರದ ಮೇಲೆ ಬೆಳೆದ ದೇಶಗಳೆಲ್ಲಾ ವಾಸದ ಆಧಾರದ ಮೇಲೆ ಪೌರತ್ವವನ್ನು ಗುರುತಿಸುವ ವ್ಯವಸ್ಥೆಯನ್ನು ಮಾನ್ಯ ಮಾಡಿವೆ. ಅಮೆರಿಕಾ ವಲಸಿಗರ ದೇಶ. 20ನೇ ಶತಮಾನದ ಇಂಗ್ಲೆಂಡ್ ಕೂಡ ತನ್ನ ಸಾಮ್ರಾಜ್ಯಶಾಹಿ ಚರಿತ್ರೆಯ ಕಾರಣದಿಂದ ವಲಸಿಗರ ದೇಶವೇ ಆಗಿದೆ. ವಿಭಜನೆಯ ಕಾರಣದಿಂದ ಪಾಕಿಸ್ತಾನವೂ ಒಂದು ರೀತಿಯಲ್ಲಿ ವಲಸಿಗರ ದೇಶವೇ. ಆದರೆ ಭಾರತದ ಸ್ಥಿತಿ ಮಾತ್ರ ವಿಚಿತ್ರ.

ತಲತಲಾಂತರದಿಂದ ವಾಸಿಸುತ್ತಿದ್ದ ಹಲವು ಸಮುದಾಯಗಳು ಇಲ್ಲಿವೆ. ಆದರೆ, ದೇಶ ವಿಭಜನೆಯ ಕಾರಣದಿಂದ ವಲಸಿಗರೂ ಇಲ್ಲಿ ಬಂದು ಸೇರಿದ್ದಾರೆ. ಸಮಸ್ಯೆ ಎಂದರೆ, ನಮ್ಮಲ್ಲಿರುವ ವಲಸಿಗರು ಅಮೆರಿಕಾ, ಇಂಗ್ಲೆಂಡ್ ಮಾದರಿಯಲ್ಲಿ ಹೊಸ ಸಾಧ್ಯತೆಗಳನ್ನು ಹುಡುಕಿಕೊಂಡು ಬಂದ ಅನ್ಯದೇಶೀಯರಲ್ಲ. ವಿಭಜನೆಯ ಪೂರ್ವದಲ್ಲಿ ಸುಮಾರು ಒಂದೇ ರೀತಿಯ ನಾಗರಿಕತೆಗೆ ಸೇರಿದ, ಆದರೆ ದೇಶ ವಿಭಜನೆಯ ಕಾರಣದಿಂದ ಬೇರೆಬೇರೆ ರಾಷ್ಟ್ರಗಳಾಗಿ ಹಂಚಿಹೋದ ಜನ. ಅಂದಮೇಲೆ, ಒಂದು ವಿಚಿತ್ರ ರೀತಿಯಲ್ಲಿ ಭಾರತದಲ್ಲಿ ನಾಗರಿಕತೆಯ ಅಡಿಪಾಯವಾಗಿ ಕೇವಲ ಹುಟ್ಟನ್ನು ಪರಿಗಣಿಸಿದರೆ ಸಾಕಾಗುವುದಿಲ್ಲ. ಹಾಗೆಯೇ ಕೇವಲ ವಲಸೆಯನ್ನು ಪರಿಗಣಿಸಿದರೂ ಸಾಕಾಗುವುದಿಲ್ಲ. ಇವೆರಡರ ಜೊತೆಗೆ ಭಾರತೀಯ ನಾಗರಿಕತೆಗೆ ಸೇರಿದ ಜನ ಎನ್ನುವ ಇನ್ನೊಂದು ರೀತಿಯ ಸಮುದಾಯವನ್ನು ಗುರುತಿಸಲೇ ಬೇಕಾಗುತ್ತದೆ. ಇಂತಹ ಭಾರತೀಯ ನಾಗರಿಕತೆಗೆ ಸೇರಿದ ಜನರ ಬಗ್ಗೆ ಭಾರತದ ರಾಷ್ಟ್ರ ಪ್ರಭುತ್ವಕ್ಕೆ ವಿಶೇಷವಾದ ಚಾರಿತ್ರಿಕ ಜವಾಬ್ದಾರಿ ಇದೆ ಎನ್ನುವುದನ್ನು ಒಪ್ಪದೇ ನಿರ್ವಾಹವಿಲ್ಲ.

ಭಾರತ ಮಾತ್ರವೇ ತನ್ನನ್ನು ಒಂದು ಸೆಕ್ಯುಲರ್ ಆದ (ಮತ್ತು ಪ್ರತ್ಯಕ್ಷವಾಗಿ ಹಾಗೆ ಹೇಳಿಕೊಳ್ಳದಿದ್ದರೂ, ಲಿಬರಲ್ ಆದ) ಪ್ರಜಾತಂತ್ರ ಎಂದು ಗುರುತಿಸಿಕೊಂಡಿರುವುದು.

ಆದರೆ ಸಮಸ್ಯೆ ಇರುವುದು ಇಲ್ಲಿ. ಪೌರತ್ವದ ಕುರಿತ ನಮ್ಮ ಚಿಂತನೆಯೆಲ್ಲಾ ರಾಷ್ಟ್ರಪ್ರಭುತ್ವಗಳ ಚೌಕಟ್ಟಿನೊಳಗೆ ಮಾತ್ರ ನಡೆಯುವುದರಿಂದ, ನಾಗರಿಕತೆಯ ಆಧಾರದ ಮೇಲೆ ನಿಂತಿರುವ ಸಮುದಾಯದ ಪರಿಕಲ್ಪನೆಗಳಿಗೆ ಜಾಗವಿಲ್ಲದಂತಾಗಿದೆ. ಹಾಗೆ ನಾಗರಿಕತೆಯ ಆಧಾರದ ಮೇಲೆ ಮಾತನಾಡಲು ಸಾಧ್ಯವಿಲ್ಲದಿರುವುದರಿಂದ ಜನಾಂಗೀಯ ಅಥವಾ ಧಾರ್ಮಿಕ ಶೋಷಣೆಗೆ ತುತ್ತಾದ ಜನರ ರಕ್ಷಣೆ ಎನ್ನುವ ರೀತಿಯ ರಾಷ್ಟ್ರಪ್ರಭುತ್ವದ ವ್ಯಾಕರಣದೊಳಗೆ ಹೊಂದಿಸಬಹುದಾದ ಪರಿಕಲ್ಪನೆಯ ಅಗತ್ಯ ಬರುವುದು.

ದಕ್ಷಿಣ ಏಷಿಯಾದ ಇತರ ದೇಶಗಳಾದ ಪಾಕಿಸ್ತಾನ ಬಾಂಗ್ಲಾದೇಶಗಳಿಗೆ ಅಂತಹ ನಾಗರಿಕತೆಯ ಕುರಿತ ಜವಾಬ್ದಾರಿ ಇಲ್ಲವಾ? ಬರೀ ಭಾರತಕ್ಕೆ ಏಕೆ ವಿಶೇಷವಾದ ಈ ಜವಾಬ್ದಾರಿ ಎಂದು ಕೇಳಿದರೆ, ಅದಕ್ಕೆ ಉತ್ತರ ಕಷ್ಟ. ಕನಿಷ್ಠ ಇಷ್ಟನ್ನು ಹೇಳಬಹುದು. ಬೇರೆ ಯಾವ ದಕ್ಷಿಣ ಏಷಿಯಾದ ರಾಷ್ಟ್ರವೂ ಅಂತಹ ನಾಗರಿಕತೆಯ ಹೆಸರಿನಲ್ಲಿ ತಮ್ಮನ್ನು ಗುರುತಿಸಿಕೊಂಡಿಲ್ಲ. ಭಾರತ ಮಾತ್ರವೇ ಹಾಗೆ ತನ್ನನ್ನು ಗುರುತಿಸಿಕೊಂಡಿರುವುದು. ಅಷ್ಠೆ ಅಲ್ಲದೇ ಮೊದಲಿನಿಂದಲೂ ಭಾರತದ ಅಧಿಕೃತ ಮತ ಏನೆಂದರೆ ಭಾರತವನ್ನು ಒಡೆದು ಪಾಕಿಸ್ತಾನವೇ ಮುಂತಾದ ಹಲವು ದೇಶಗಳನ್ನು ಮಾಡಿರುವುದೇ ಹೊರತು ಪಾಕಿಸ್ತಾನವನ್ನು ಒಡೆದು ಭಾರತವನ್ನು ಮಾಡಿರುವುದಲ್ಲ. ಮತ್ತೊಂದು ಕಾರಣ ಇನ್ನೂ ವಿಚಿತ್ರವಾದದ್ದು. ಭಾರತ ಮಾತ್ರವೇ ತನ್ನನ್ನು ಒಂದು ಸೆಕ್ಯುಲರ್ ಆದ (ಮತ್ತು ಪ್ರತ್ಯಕ್ಷವಾಗಿ ಹಾಗೆ ಹೇಳಿಕೊಳ್ಳದಿದ್ದರೂ, ಲಿಬರಲ್ ಆದ) ಪ್ರಜಾತಂತ್ರ ಎಂದು ಗುರುತಿಸಿಕೊಂಡಿರುವುದು. ಹಾಗಾಗಿ, ಅಂತಹ ಸೆಕ್ಯುಲರ್ ಲಿಬರಲ್ ಪ್ರಭುತ್ವವಾದ್ದರಿಂದ ಈ ಹಲವು ಚಾರಿತ್ರಿಕ ಜವಾಬ್ದಾರಿಗಳನ್ನು ಮಾನ್ಯ ಮಾಡುವ ಸಾಧ್ಯತೆ ಇರುವುದು ಭಾರತದ ರಾಷ್ಟ್ರ ಪ್ರಭುತ್ವಕ್ಕೆ ಮಾತ್ರ. ಇತ್ತೀಚೆಗಿನ ಪೌರತ್ವ ತಿದ್ದುಪಡಿ ಕಾಯ್ದೆ ಒಂದು ರೀತಿಯಿಂದ ಭಾರತದ ಈ ಚಾರಿತ್ರಿಕ ಜವಾಬ್ದಾರಿಯನ್ನು ನಿಭಾಯಿಸುವ ಉಪಕ್ರಮ.

ಇಲ್ಲಿ ತಕ್ಷಣ ಏಳುವ ಇನ್ನೊಂದು ಪ್ರಶ್ನೆ, ಭಾರತೀಯ ನಾಗರಿಕತೆಯ ಕಥೆಯಲ್ಲಿ ಭಾರತೀಯ ಪೌರರಲ್ಲದ ಆದರೆ ಭಾರತೀಯ ಸಂಪ್ರದಾಯಗಳಿಗೆ ಸೇರಿದ ಜನರಿಗೆ ಜಾಗವಿದೆ; ಆದರೆ ಅದೇ ತರ್ಕದ ಆಧಾರದ ಮೇಲೆ ಭಾರತೀಯರಲ್ಲದ ಆದರೆ ದಕ್ಷಿಣ ಏಷಿಯಾದವರಾದ ಮುಸಲ್ಮಾನರಿಗೂ ಜಾಗವಿದೆಯೇ ಎನ್ನುವುದು. ಇತ್ತೀಚೆಗಿನ ದಿನಗಳಲ್ಲಿ ಇಕ್ಕಟ್ಟಿಗೆ ಸಿಲುಕಿರುವ ಪ್ರಶ್ನೆ ಇದು. ಒಂದು ದೃಷ್ಟಿಯಿಂದ, ದಕ್ಷಿಣ ಏಷಿಯಾದ, ಆದರೆ, ದೇಶ ವಿಭಜನೆಯ ನಂತರ, ಭಾರತೀಯರಲ್ಲದ, ಮುಸಲ್ಮಾನರಿಗೆ ಈ ಗುಂಪಿನಲ್ಲಿ ಜಾಗ ಇರಬಾರದು. ಏಕೆಂದರೆ ಅದು ದೇಶ ವಿಭಜನೆಯ ತರ್ಕವನ್ನೇ ಪುನಃ ಪ್ರಶ್ನೆಗೆ ಒಡ್ಡಿದಂತೆ.

ಇಲ್ಲಿ ಧರ್ಮದ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದಾಗಲಿ, ಅಥವಾ ಧರ್ಮದ ಆಧಾರದ ಮೇಲೆ ಜನರ ನಡುವೆ ಭೇದಭಾವ ಮಾಡುತ್ತಿದೆ ಎಂದಾಗಲೀ ಹೇಳಲು ಆಗುವುದಿಲ್ಲ.

ಇನ್ನೊಂದು ದೃಷ್ಟಿಯಿಂದ, ದಕ್ಷಿಣ ಏಷಿಯಾದ ಮುಸಲ್ಮಾನರಿಗೂ ಇದರಲ್ಲಿ ಜಾಗ ಇರಬೇಕು. ಏಕೆಂದರೆ ದೇಶ ವಿಭಜನೆ ಧರ್ಮದ ಆಧಾರದ ಮೇಲೆ ನಡೆದರೂ, ಅದಕ್ಕೆ ಆಯಾ ಧರ್ಮಕ್ಕೆ ಸೇರಿದ ಜನರನ್ನು ಹೊಣೆಗಾರರನ್ನಾಗಿ ಮಾಡಲು ಬರುವುದಿಲ್ಲ. ಇದರಲ್ಲಿ ಯಾವುದು ಸರಿಯೆಂದು ವಾದಿಸುವುದು ಕಷ್ಟ. ಆದರೆ, ಎರಡೂ ವಾದಗಳಿಗೆ ಇಲ್ಲಿ ಅವಕಾಶವಿದೆ ಎಂದಷ್ಠೆ ಹೇಳಬಹುದು. ಒಬ್ಬರ ವಾದವನ್ನು ಇನ್ನೊಬ್ಬರು ಹೀಗಳೆಯುವಾಗ ಈ ಸೂಕ್ಷ್ಮಗಳಿಗೆ ಜಾಗವಿರುವುದಿಲ್ಲ. ಮುಸಲ್ಮಾನರನ್ನು ಒಳಗೊಂಡಿಲ್ಲ ಎನ್ನುವ ಕಾರಣಕ್ಕೆ ಈ ಕಾನೂನು ಸಮಾನವಾದದ್ದನ್ನು (ಅಂದರೆ ದಕ್ಷಿಣ ಏಶಿಯಾದ ಹಿಂದೂಗಳು ಮತ್ತು ಮುಸಲ್ಮಾನರನ್ನು) ಅಸಮಾನವೆಂದು ನೋಡುವ ಕಾನೂನು ಎಂದು ಬೇಕಾದರೆ ಟೀಕೆ ಮಾಡಬಹುದು, ಅನ್-ಎಕ್ವಿಟೆಬಲ್ ಎನ್ನುವ ಅರ್ಥದಲ್ಲಿ. ಆದರೆ, ನಮ್ಮ ದೇಶವು ಸೆಕ್ಯುಲರ್ ಆದದ್ದು ಎನ್ನುವ ಕಾರಣಕ್ಕೆ ಈ ಕಾನೂನನ್ನು ಅಸಿಂಧುವೆಂದು ಹೇಳಲು ಬರುವುದಿಲ್ಲ. ಏಕೆಂದರೆ, ಇಲ್ಲಿ ಧರ್ಮದ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದಾಗಲಿ, ಅಥವಾ ಧರ್ಮದ ಆಧಾರದ ಮೇಲೆ ಜನರ ನಡುವೆ ಭೇದಭಾವ ಮಾಡುತ್ತಿದೆ ಎಂದಾಗಲೀ ಹೇಳಲು ಆಗುವುದಿಲ್ಲ.

ಮುಸಲ್ಮಾನರು ಮತ್ತು ಮುಸಲ್ಮಾನೇತರರು ಪೌರರಾಗಿ ಒಂದೇ ರೀತಿಯ ವರ್ಗ. ಅವರ ನಡುವೆ ಭೇದ ಮಾಡಿದರೆ, ಅದು ಸೆಕ್ಯುಲರ್ ಆಶಯಗಳಿಗೆ ವಿರುದ್ಧವಾಗುತ್ತದೆ. ಆದರೆ, ದಕ್ಷಿಣ ಏಷಿಯಾದ ಮುಸಲ್ಮಾನರು ಮತ್ತು ದಕ್ಷಿಣ ಏಷಿಯಾದ ಮುಸಲ್ಮಾನೇತರರು ನಿರಾಶ್ರಿತರಾಗಿ ಒಂದೇ ರೀತಿಯ ವರ್ಗವೇ ಅಲ್ಲವೇ ಎನ್ನುವುದು ಒಂದು ನಿರ್ದಿಷ್ಟ ಚಾರಿತ್ರಿಕ ಪ್ರಶ್ನೆ. ಅದನ್ನು ಸೆಕ್ಯುಲರ್ ಆಗಿಯಾಗಲೀ ಅಥವಾ ಸೆಕ್ಯುಲರೇತರವಾಗಿ ಆಗಲೀ ನಿರ್ಧರಿಸಲು ಬರುವುದಿಲ್ಲ. ಅದನ್ನು ಚಾರಿತ್ರಿಕವಾಗಿ, ವಾಸ್ತವಿಕವಾಗಿಯೇ ನಿರ್ಧರಿಸಬೇಕು.

ಚಾರಿತ್ರಿಕ ವ್ಯಾಖ್ಯಾನಗಳಿಂದ ರಾಜಕೀಯ ಆಕಾಂಕ್ಷೆಗಳು ಹುಟ್ಟುತ್ತವೆ ಎನ್ನುವುದೇನೋ ಸರಿ. ರಾಜಕೀಯ ಆಕಾಂಕ್ಷೆಗಳೇ ಚಾರಿತ್ರಿಕ ವ್ಯಾಖ್ಯಾನಗಳಿಗೂ ಇಂಬು ನೀಡುತ್ತವೆ ಎನ್ನುವುದೂ ಹೌದು. ಆದರೆ, ಇವೆರಡನ್ನೂ ಅಭೇದವಾಗಿ ನೋಡುವುದು ಸಮಸ್ಯೆ.

ಇಲ್ಲಿ ಒಂದು ಸಣ್ಣ ಟಿಪ್ಪಣಿಯನ್ನೂ ಸೇರಿಸಬೇಕು. ಸಂಘಪರಿವಾರದ ಅಖಂಡ ಭಾರತದ ಕಲ್ಪನೆ ನಿಂತಿರುವುದೂ ಭಾರತೀಯ ನಾಗರಿಕತೆಯ ಚಿತ್ರಣದ ತಳಹದಿಯ ಮೇಲೆಯೇ. ಆದರೆ, ಭಾರತೀಯ ನಾಗರಿಕತೆಯ ಮಟ್ಟದಲ್ಲಿ ಭಾರತಕ್ಕೆ ಒಂದು ವಿಶೇಷವಾದ ಜವಾಬ್ದಾರಿ ಇದೆ ಎನ್ನುವುದಕ್ಕೂ, ಮತ್ತು ಆ ಕಾರಣದಿಂದ ಭಾರತದ ರಾಷ್ಟಪ್ರಭುತ್ವದ ಕೆಳಗೆ ದಕ್ಷಿಣ ಏಶಿಯಾದ ಮಿಕ್ಕ ರಾಷ್ಟಪ್ರಭುತ್ವಗಳು ವಿಲೀನವಾಗಬೇಕು ಎನ್ನುವುದಕ್ಕೂ ಬಹಳ ವ್ಯತ್ಯಾಸವಿದೆ. ಇದರಲ್ಲಿ ಮೊದಲನೆಯದು ಒಂದು ಚಾರಿತ್ರಿಕ ವ್ಯಾಖ್ಯಾನ. ಎರಡನೆಯದು ಒಂದು ರಾಜಕೀಯ ಆಕಾಂಕ್ಷೆ. ಚಾರಿತ್ರಿಕ ವ್ಯಾಖ್ಯಾನಗಳಿಂದ ರಾಜಕೀಯ ಆಕಾಂಕ್ಷೆಗಳು ಹುಟ್ಟುತ್ತವೆ ಎನ್ನುವುದೇನೋ ಸರಿ. ರಾಜಕೀಯ ಆಕಾಂಕ್ಷೆಗಳೇ ಚಾರಿತ್ರಿಕ ವ್ಯಾಖ್ಯಾನಗಳಿಗೂ ಇಂಬು ನೀಡುತ್ತವೆ ಎನ್ನುವುದೂ ಹೌದು. ಆದರೆ, ಇವೆರಡನ್ನೂ ಅಭೇದವಾಗಿ ನೋಡುವುದು ಸಮಸ್ಯೆ.

ಇದಿಷ್ಟು ಪೌರತ್ವವನ್ನು ಗುರುತಿಸುವ ವಿಷಯಕ್ಕೆ ಸಂಬಂಧಿಸಿದ್ದು. ಇನ್ನು ಪೌರರನ್ನು ಗುರುತಿಸುವ ವಿಷಯ. ಅಸ್ಸಾಮಿನ ಉದಾಹರಣೆ ಇಲ್ಲಿ ಪ್ರಸ್ತುತ. ಅಸ್ಸಾಮಿನಲ್ಲಿ ಚಾರಿತ್ರಿಕವಾಗಿ ಆಗಿರುವ ವಲಸೆಯ ಕಾರಣದಿಂದ ಅಲ್ಲಿನ ಜನರಿಗೆ ತಮ್ಮ ನೆಲದಲ್ಲಿ ತಾವೇ ಪರಕೀಯರಾಗಿರುವ ಭಾವನೆ ಬಂದಿರುವುದು ಹೌದು. ಆದರೆ, ಆ ತರ್ಕವನ್ನು ಒಪ್ಪಿದರೆ, ಪೌರತ್ವದ ಒಂದು ರೀತಿಯನ್ನು ಮಾನ್ಯ ಮಾಡಿ ಇನ್ನೊಂದು ರೀತಿಯನ್ನು ಅಮಾನ್ಯ ಮಾಡಿದಂತೆ ಆಗುತ್ತದೆ. ಅಂದರೆ, ಹುಟ್ಟಿನ ಕಾರಣದ ಪೌರತ್ವವನ್ನು ಮಾನ್ಯ ಮಾಡಿ ವಾಸದ ಕಾರಣದ ಪೌರತ್ವವನ್ನು ಅಮಾನ್ಯ ಮಾಡಿದಂತೆ ಆಗುತ್ತದೆ. ಒಂದು ರೀತಿಯಲ್ಲಿ ಅಸ್ಸಾಂ ಒಪ್ಪಂದವೂ ಭಾರತೀಯ ಸಂವಿಧಾನದಲ್ಲಿ ಮಾನ್ಯ ಮಾಡಲಾದ ಹುಟ್ಟು ಮತ್ತು ವಾಸದ ಎರಡು ರೀತಿಯ ಪೌರತ್ವದ ಮಾದರಿಯ ವಿಕೃತಿಯೇ ಆಗುತ್ತದೆ. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾಗಿರುವುದೇ ಈಶಾನ್ಯದ ರಾಜ್ಯಗಳ ಇಂತಹ ಬೇಡಿಕೆ.

ಈ ವಿಚಾರವನ್ನು ಗುರುತಿಸದೇ, ಕೇವಲ ಬಿಜೆಪಿ-ಕಾಂಗ್ರೆಸ್, ಹಿಂದೂ-ಮುಸಲ್ಮಾನ ಎನ್ನುವ ನೆಲೆಗಟ್ಟಿನಲ್ಲಿ ನೋಡಿದರೆ, ಪರಸ್ಪರ ದೂಷಣೆಗೆ ಹತ್ಯಾರಗಳು ಸಿಗಬಹುದೇ ಹೊರತೂ, ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ.

ಒಟ್ಟಾರೆಯಾಗಿ ನೋಡಿದರೆ, ಭಾರತದಲ್ಲಿ ಮೇಲುನೋಟಕ್ಕೆ ಪೌರತ್ವದ ಒಂದು ಮಾದರಿ ಇದ್ದರೂ, ಆಳದಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ಅನುಗುಣವಾಗಿ ಬೇರೆ ಬೇರೆ ರೀತಿಯ ಪೌರತ್ವದ ಮಾದರಿಗಳೇ ಇರುವಂತೆ ತೋರುತ್ತದೆ. ಈಶಾನ್ಯದ ರಾಜ್ಯಗಳು ಮತ್ತು ಕಾಶ್ಮೀರ ಕಣಿವೆಯಲ್ಲಿ ಹುಟ್ಟಿನ ಆಧಾರದ ಪೌರತ್ವದ ಬೇಡಿಕೆ ಇರುವಂತೆ, ಮಿಕ್ಕ ಪ್ರದೇಶಗಳಲ್ಲಿ, ಅದೂ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ವಾಸದ ಕಾರಣದ ಪೌರತ್ವದ ಮಾದರಿಯ ಕುರಿತೇ ಒಲವಿರುವಂತಿದೆ. ಈ ವಿಚಾರವನ್ನು ಗುರುತಿಸದೇ, ಕೇವಲ ಬಿಜೆಪಿ-ಕಾಂಗ್ರೆಸ್, ಹಿಂದೂ-ಮುಸಲ್ಮಾನ ಎನ್ನುವ ನೆಲೆಗಟ್ಟಿನಲ್ಲಿ ನೋಡಿದರೆ, ಪರಸ್ಪರ ದೂಷಣೆಗೆ ಹತ್ಯಾರಗಳು ಸಿಗಬಹುದೇ ಹೊರತೂ, ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ.

ಪೌರತ್ವದ ಕುರಿತ ಇತ್ತೀಚೆಗಿನ ಚರ್ಚೆಗಳ ಪರ ವಿರೋಧದ ಜಂಜಾಟದಲ್ಲಿ, ಪೌರತ್ವವನ್ನು ಸಾಬೀತು ಪಡಿಸುವ ದಾಖಲೆಗಳ ಕುರಿತ ಸಮಸ್ಯೆಗಳ ನಡುವೆ, ಪೌರತ್ವದ ಮಾದರಿಗಳ ಕುರಿತೇ ಬಿಕ್ಕಟ್ಟು ಉಂಟಾಗಿರುವುದನ್ನು ನಾವು ಗಮನಿಸಿಲ್ಲ. ಪೌರತ್ವದ ವಾಸದ ಮಾದರಿ ಮತ್ತು ಹುಟ್ಟಿನ ಮಾದರಿಯ ಜೊತೆಗೆ ಅಪರೋಕ್ಷವಾಗಿ ಕಾಣಿಸುವ ನಾಗರಿಕತೆಯ ಮೂರನೆಯ ಮಾದರಿಯೂ ಹೇಗೆ ಕೆಲಸ ಮಾಡಿದೆ ಎಂದು ನೋಡಿದೆವು. ಈ ಬಿಕ್ಕಟ್ಟಿಗೆ ಇತ್ತೀಚೆಗಿನ ದಿನಗಳಲ್ಲಿ ಒಂದು ಹೊಸ ಆಯಾಮವೂ ಸೇರಿದೆ. ಅದೇನೆಂದರೆ, ಪೌರತ್ವದ ಕುರಿತು ಸರಕಾರಗಳಿಗೆ ಇರುವ ಆಡಳಿತಾತ್ಮಕವಾದ ನಾಲ್ಕನೆಯ ಮಾದರಿ.

ಒಂದು ದೇಶದ ನಾಗರಿಕರ ಗಣತಿ ಮಾಡುವುದು ಜನಸಂಖ್ಯಾ ಗಣತಿ ಮಾಡಿದಂತಲ್ಲ. ಜನಸಂಖ್ಯಾ ಗಣತಿ ಜನರಿಗೆ ಯಾವ ಹಕ್ಕುಗಳನ್ನ ಕೊಡುವುದೂ ಇಲ್ಲ ಅಥವಾ ಕಸಿಯುವುದೂ ಇಲ್ಲ. ಆದರೆ ಪೌರತ್ವದ ಗಣತಿ ಹಾಗಲ್ಲ. ಇದು ಸರಕಾರದ ಎಕ್ಸಿಕ್ಯೂಟಿವ್ ಅಧಿಕಾರವನ್ನು ಬಳಸಿಕೊಂಡು ಜನರ bonafides ಅನ್ನು, ಅಂದರೆ, ಪೌರರ ಪೌರತ್ವದ ಸಿಂಧುತ್ವವನ್ನು ಪ್ರಶ್ನೆ ಮಾಡಿದಂತೆ. ಇದನ್ನು ಮಾಡುವ ಅಧಿಕಾರ ಸರಕಾರಗಳಿಗೆ ಇದೆಯೇ ಅಥವಾ ಇರಬೇಕೇ ಎನ್ನುವುದೂ ಒಂದು ಮುಖ್ಯ ಪ್ರಶ್ನೆ. ಅಷ್ಟಕ್ಕೂ ಪೌರರು ಯಾರು ಮತ್ತು ಯಾರಲ್ಲ ಎನ್ನುವ ಪ್ರಶ್ನೆ ಕಳ್ಳರು ಯಾರು ಮತ್ತು ಯಾರಲ್ಲ ಎನ್ನುವ ರೀತಿಯದ್ದೇ ಪ್ರಶ್ನೆ ಎಂದುಕೊಂಡ ಬಹಳಷ್ಟು ಜನರಿದ್ದಾರೆ. ಆದರೆ, ಇಲ್ಲೊಂದು ಸಮಸ್ಯೆ ಇದೆ. ಒಂದು ವೇಳೆ ಈ ಹೋಲಿಕೆ ಸರಿ ಎಂದುಕೊಂಡರೂ, ಕಳ್ಳರು ಯಾರು ಎಂದು ಹುಡುಕುವಾಗ ಊರಿನ ಜನರನ್ನೆಲ್ಲಾ ನೀವು ಕಳ್ಳರಲ್ಲ ಎಂದು ಸಾಬೀತು ಮಾಡಿ ಎಂದು ಕೇಳಲು ಬರುವುದಿಲ್ಲವಷ್ಠೆ. ಸಂವಿಧಾನದಲ್ಲಿ ಪೌರತ್ವದ ಪಟ್ಟಿಯನ್ನು ಸಿದ್ಧಪಡಿಸಬೇಕು ಎನ್ನುವ ನಿಯಮವಿದ್ದರೂ, ಅದನ್ನು ಕಾರ್ಯಗತಗೊಳಿಸುವ ರೀತಿಯಲ್ಲಿ ಸರಕಾರಗಳು ತಮ್ಮ ಎಕ್ಸಿಕ್ಯುಟಿವ್ ವ್ಯಾಪ್ತಿಯನ್ನು ಮೀರುತ್ತಿವೆಯೇ ಇಲ್ಲವೇ ಎಂದು ಪ್ರಶ್ನಿಸಬೇಕು.

ನಮ್ಮಲ್ಲಿ ಅಂತಹ ಸಮಗ್ರ ದಾಖಲೀಕರಣ ಮೊದಲಾಗಿರುವುದೇ ಇತ್ತೀಚೆಗಿನ ವರ್ಷಗಳಲ್ಲಿ ಎನ್ನುವುದನ್ನೂ ಹಲವರು ತೋರಿಸಿದ್ದಾರೆ. ಯೂರೋಪಿನಲ್ಲಿ ಪೌರತ್ವದ ಸಮಸ್ಯೆ ಇತ್ತೀಚೆಗೆ ವಲಸೆಯ ಕಾರಣದಿಂದ ಮುನ್ನೆಲೆಗೆ ಬರುತ್ತಿದೆ.

ಸಾಮಾನ್ಯವಾಗಿ ಪೌರತ್ವವನ್ನು ಸಾಬೀತು ಪಡಿಸುವ ಕ್ರಮ ಭಾರತದಂತಹ ದೇಶದಲ್ಲಿ ದುಸ್ಸಾಧ್ಯವೆ ಸರಿ. ಯುರೋಪು ಅಮೆರಿಕಾದಲ್ಲಿ ಕನಿಷ್ಠ ಮುನ್ನೂರು-ನಾನೂರು ವರ್ಷಗಳ ಅವಿರತ ದಾಖಲೀಕರಣದ ಇತಿಹಾಸ ಇದೆ. ನಮ್ಮಲ್ಲಿ ಅಂತಹ ಸಮಗ್ರ ದಾಖಲೀಕರಣ ಮೊದಲಾಗಿರುವುದೇ ಇತ್ತೀಚೆಗಿನ ವರ್ಷಗಳಲ್ಲಿ ಎನ್ನುವುದನ್ನೂ ಹಲವರು ತೋರಿಸಿದ್ದಾರೆ. ಯೂರೋಪಿನಲ್ಲಿ ಪೌರತ್ವದ ಸಮಸ್ಯೆ ಇತ್ತೀಚೆಗೆ ವಲಸೆಯ ಕಾರಣದಿಂದ ಮುನ್ನೆಲೆಗೆ ಬರುತ್ತಿದೆ. ಅಲ್ಲಿನ ಕೆಲವು ರಾಜಕೀಯ ಪಕ್ಷಗಳೂ ಪೌರರು ಮತ್ತು ವಲಸಿಗರ ನಡುವಿನ ಭೇದವನ್ನು ಮುಂದುಮಾಡಿಕೊಂಡು ಚುನಾವಣಾ ಲೆಕ್ಕಾಚಾರಗಳನ್ನು ಮಾಡುತ್ತಿವೆ.

ಆದರೆ, ಯೂರೋಪಿನಲ್ಲಿ, ಅದೂ ವಿಶೇಷವಾಗಿ ಉತ್ತರ ಯುರೋಪಿನಲ್ಲಿ ಪೌರತ್ವದ ಪ್ರಶ್ನೆಯನ್ನು ನಿಭಾಯಿಸುವ ಒಂದು ನಿರ್ದಿಷ್ಟ ಚೌಕ್ಕಟ್ಟಿದೆ. ರಾಷ್ಟ್ರ-ಪ್ರಭುತ್ವ ಎನ್ನುವ ಪರಿಕಲ್ಪನೆಯೇ ಆ ಚೌಕಟ್ಟು. ಅಂದರೆ,ಒಂದೆರಡು ಶತಮಾನಗಳಿಂದ, ಈ ದೇಶಗಳು ಒಂದು ನಿರ್ದಿಷ್ಟ ಧರ್ಮ, ಜನಾಂಗ, ಭಾಷ ಮತ್ತು ಪ್ರದೇಶದ ಏಕಸೂತ್ರದ ಆಧಾರವನ್ನು ಮಾನ್ಯ ಮಾಡಿವೆ. ಅದರರ್ಥ ಯುರೋಪಿನಲ್ಲಿ ರಾಷ್ಟಪ್ರಭುತ್ವಗಳು ಅಚ್ಚುಕಟ್ಟಾಗಿ ಒಂದೊಂದು ಜನಾಂಗವನ್ನು ಪ್ರತಿನಿಧಿಸುತ್ತವೆ ಎಂದಲ್ಲ. ಬದಲಾಗಿ, ರಾಷ್ಟ್ರೀಯ ಸಮುದಾಯದ ಕಲ್ಪನೆ ಹಿಂದಿನ ರಿಲಿಜಿಯಸ್ ಸಮುದಾಯದ ಕಲ್ಪನೆಗಳ ಮುಂದುವರಿಕೆಯಾಗಿ ಬಂದಿದೆ ಎಂಬುದು ಮತ್ತು ರಿಲಿಜಿಯಸ್ ಸಮುದಾಯಗಳು ನಿರ್ದಿಷ್ಟ ಜನಾಂಗೀಯ ಮತ್ತಿತರ ಗುರುತುಗಳನ್ನು ಒಂದು ಹೊಸ ಐಕ್ಯತೆಗೆ ಬಗ್ಗಿಸಿ ಹೊಂದಿಸಿವೆ ಎಂಬುದು.

ಹಾಗಾಗಿ, ರಾಷ್ಟ್ರೀಯತೆಯ ಭಾಷ ಯೂರೋಪಿನಲ್ಲಿ ಸುಸೂತ್ರವಾಗಿ ನಡೆಯುವಂತೆ ಭಾರತದಂತಹ ದೇಶದಲ್ಲಿ ನಡೆಯುವುದಿಲ್ಲ. ಹಾಗಾಗಿಯ ಪೌರತ್ವದ ಕುರಿತ ವಿಚಾರಗಳೂ, ರಾಷ್ಟ್ರೀಯತೆಯ ಆಧಾರದ ಮೇಲೆಯೇ ನಡೆಯುವುದರಿಂದ, ಯುರೋಪಿನಲ್ಲಿ ಇರುವಷ್ಟು ಸರಳವಾಗಿ ಇಂಡಿಯಾದಲ್ಲಿಯೂ ಇರುತ್ತದೆ ಅಥವಾ ಇರಬೇಕು ಎಂದು ಅಪೇಕ್ಷಿಸುವುದೇ ಸರಿಯಲ್ಲ. ಅದರಲ್ಲೂ ವಿಶೇಷವಾಗಿ ದೇಶ ವಿಭಜನೆಯ ಕಾರಣದಿಂದ, ನಮ್ಮ ಪೌರತ್ವದ ಮಾದರಿಗಳು ಬಹಳ ಭಿನ್ನ ನೆಲೆಗಳಿಂದ ಹೊರಡದೆ ನಿರ್ವಾಹವಿಲ್ಲ. ಪೌರತ್ವದ ಕುರಿತು ಭಾರತದ ಸಂವಿಧಾನದ ಆಡಳಿತಾತ್ಮಕ ಮಾದರಿಯ ವ್ಯಾಖ್ಯಾನವೂ ನಮ್ಮ ಅಗತ್ಯಕ್ಕೆ ಸಾಲದೇ ಬರುವುದು ಈ ಕಾರಣಕ್ಕೆ.

* ಲೇಖಕರು ಅಹಮದಾಬಾದ್ ವಿಶ್ವವಿದ್ಯಾಲಯದ ‘ಸೆಂಟರ್ ಫಾರ್ ಲರ್ನಿಂಗ್ ಫ್ಯೂಚರ್ಸ್’ ನಲ್ಲಿ ಸೀನಿಯರ್ ಫೆಲೋ ಆಗಿದ್ದಾರೆ. ರಾಷ್ಟ್ರೀಯತೆಯ ಸಾಂಸ್ಕೃತಿಕ ಇತಿಹಾಸವನ್ನು ಕುರಿತ ಅವರ ಪುಸ್ತಕ Nationalism, Language and Identity in India: Measures of Community ಅನ್ನು ರೂಟ್ಲೇಜ್ ಪ್ರಕಟಿಸಿದೆ. 

Leave a Reply

Your email address will not be published.