ಪೌರತ್ವ ಕಾಯ್ದೆ ತಿದ್ದುಪಡಿ ವಿವಾದ ಅರ್ಧ ಸತ್ಯಗಳ ನರ್ತನ

ಈ ಸಮಸ್ಯೆಯನ್ನು ಜಾಣ್ಮೆಯಿಂದ ನಿರ್ವಹಿಸಬೇಕೇ ಹೊರತು ಮುಸ್ಲೀಮರನ್ನು ಪ್ರತ್ಯೇಕಿಸಿ ಬಂಧನ ಗೃಹದಲ್ಲಿ ಇರಿಸಿಬಿಡೋಣ ಎನ್ನುವ ದಿಢೀರ್ ಪರಿಹಾರ ಅಸಾಧುವೂ ಅಪಾಯಕಾರಿಯೂ ಆಗಿದೆ.

– ಎ.ನಾರಾಯಣ

ಎರಡೂ ಕಡೆಯಿಂದಲೂ ಅರ್ಧ ಸತ್ಯಗಳು ಕೇಳಿಸುತ್ತಿವೆ. ಮಾತ್ರವಲ್ಲ, ಎರಡೂ ಕಡೆಗಳಿಂದಲೂ ಅರ್ಧ ಸತ್ಯವೇ ಸತ್ಯ ಎಂದು ನಂಬಿಸುವ ಪ್ರಯತ್ನಗಳೂ ಜೋರಾಗಿಯೇ ನಡೆಯುತ್ತಿವೆ. ಯಾವುದೇ ಸಂದರ್ಭದಲ್ಲಾದರೂ ಸರಿ, ಸತ್ಯವನ್ನು ಸ್ವೀಕರಿಸುವಾಗ ದುರುದ್ದೇಶದಿಂದ ಹೇಳುವ ಅರ್ಧ ಸತ್ಯಗಳ ಬಗ್ಗೆ ನಾವು ಜಾಗರೂಕರಾಗಿರಬೇಕು. ಅದೇ ರೀತಿ ದೊಡ್ಡ ಅನಾಹುತವೊಂದರಿಂದ ಪಾರಾಗಲು ಬಳಸಲಾಗುವ ಸತ್ಯಗಳ ಅಪೂರ್ಣತೆಯ ಬಗ್ಗೆ ನಾವು ಸಂವೇದನಾಶೀಲರಾಗಿಯೂ ಇರಬೇಕು. ಇಷ್ಟು ಪೀಠಿಕೆ ಹಾಕಿದ ನಂತರ ಈಗ ನರೇಂದ್ರ ಮೋದಿ-ಅಮಿತ ಶಾ ಜೋಡಿ ಮುನ್ನಡೆಸುತ್ತಿರುವ ಬಿಜೆಪಿಯ ಕೇಂದ್ರ ಸರಕಾರ ತಂದಿರುವ ಪೌರತ್ವ ಕಾಯ್ದೆಯ ತಿದ್ದುಪಡಿ ಹುಟ್ಟುಹಾಕಿದ ವಿವಾದವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ.

ತಿದ್ದುಪಡಿಯಾದ ಪೌರತ್ವ ಕಾಯ್ದೆ ಅಪಾಯಕಾರಿ ಎನ್ನುವವರ ವಾದ ಹೀಗಿದೆ: ಸೆಕ್ಯುಲರ್ ಸಂವಿಧಾನವನ್ನು ಹೊಂದಿದ ದೇಶವೊಂದರಲ್ಲಿ ಸರಕಾರ ಧರ್ಮದ ಆಧಾರದ ಮೇಲೆ ಪೌರತ್ವ ನೀಡುವ ಸಂವಿಧಾನ ವಿರೋಧಿ ಕ್ರಮಕ್ಕೆ ಮುಂದಾಗಿದೆ. ಇದು ದೇಶದ ಮುಸ್ಲಿಂ ಸಮುದಾಯದ ವಿರುದ್ಧ ಅನುಸರಿಸುತ್ತಿರುವ ತಾರತಮ್ಯ ನೀತಿಯಾಗಿರುವುದರಿಂದ ಸಂವಿಧಾನದ ಮೂಲ ಆಶಯವಾಗಿರುವ ಸಮಾನತೆಯನ್ನು ಕೂಡಾ ಧಿಕ್ಕರಿಸುವ ಪ್ರಯತ್ನ. ಸಂವಿಧಾನದ ಅಡಿಪಾಯವನ್ನೇ ಬುಡಮೇಲು ಮಾಡುವ ಹುನ್ನಾರಕ್ಕೆ ಪೀಠಿಕೆ.

ಎಲ್ಲರಿಗೂ ತಿಳಿದಿರುವಂತೆ ತಿದ್ದುಪಡಿಯಾದ ಕಾಯ್ದೆಯ ಪ್ರಕಾರ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ (ಡಿಸೆಂಬರ್ 31, 2014ಕ್ಕೆ ಮೊದಲು) ಮುಸ್ಲಿಮೇತರ ವ್ಯಕ್ತಿಗಳಿಗೆ ಭಾರತದ ಪೌರತ್ವ ನೀಡಲಾಗುವುದು. ಮುಸ್ಲಿಮರನ್ನು ಮಾತ್ರ ಅಕ್ರಮ ನಿವಾಸಿಗಳು ಅಂತ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು. ಸರಕಾರದ ಪ್ರಕಾರ ಇದರಲ್ಲಿ ತಾರತಮ್ಯವೂ ಇಲ್ಲ, ಧರ್ಮದ ಆಧಾರದ ಮೇಲೆ ಪೌರತ್ವ ನೀಡಿ ಸಂವಿಧಾನದ ಸೆಕ್ಯುಲರ್ ಅಡಿಪಾಯವನ್ನು ಘಾಸಿಗೊಳಿಸುವ ಪ್ರಶ್ನೆಯೂ ಇಲ್ಲ.

ಸರಕಾರದ ವಾದ ಹೀಗಿದೆ: ಮುಸ್ಲಿಮೇತರರಿಗೆ ಮಾತ್ರ ಯಾಕೆ ಪೌರತ್ವವನ್ನು ನೀಡಲಾಗುತ್ತಿದೆ ಎಂದರೆ ಅವರು ಅವರ ಮೂಲ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿರುವ ಸಾಧ್ಯತೆ ಇರುವುದರಿಂದ. ಅವರಿಗೆ ಪೌರತ್ವ ನೀಡಲು ಸರಕಾರ ಬಳಸಿಕೊಳ್ಳುವ ಮಾನದಂಡ “ಧರ್ಮ” ಅಲ್ಲ, ಧಾರ್ಮಿಕ ಕಿರುಕುಳಕ್ಕೊಳಗಾದವರ ಸಂತ್ರಸ್ತತೆ. ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಇಸ್ಲಾಮ್ ಅಧಿಕೃತ ರಾಷ್ಟ್ರೀಯ ಧರ್ಮವಾಗಿರುವುದರಿಂದ ಅಲ್ಲಿಂದ ಬರುವ ಮುಸ್ಲಿಮರು ಧಾರ್ಮಿಕ ಕಿರುಕುಳಕ್ಕೊಳಗಾಗಿ ಇಲ್ಲಿ ಬರುವ ಪ್ರಶ್ನೆಯೇ ಇಲ್ಲ. ಆದುದರಿಂದ ಅವರಿಗೆ ಉಳಿದ ಧರ್ಮದವರಿಗೆ ನೀಡಲು ಪ್ರಸ್ತಾಪಿಸಿರುವ ಅನುಕೂಲದ ಅಗತ್ಯವಿಲ್ಲ.

ಸರಿಯಪ್ಪ, ಹಾಗಾದರೆ ಧಾರ್ಮಿಕ ಅಥವಾ ಜನಾಂಗೀಯ (ethnic) ಕಿರುಕುಳಕ್ಕೊಳಗಾಗಿ ಶ್ರೀಲಂಕಾ, ಬರ್ಮಾ ಮುಂತಾದ ದೇಶಗಳಿಂದ ಬರುವವರಿಗೆ ಯಾಕೆ ಪೌರತ್ವ ನೀಡುವುದಿಲ್ಲ ಎಂಬ ಪ್ರಶ್ನೆಗೆ ಸರಕಾರದ ಉತ್ತರ: “ಭಾರತ ಧರ್ಮಛತ್ರವಲ್ಲ”. ಎಲ್ಲರಿಗೂ ಉಪಕಾರ ಮಾಡಿಲ್ಲ ಎಂದಾಕ್ಷಣ, ಕೆಲವರಿಗೆ ಮಾಡಿದ ಉಪಕಾರವನ್ನು ಸಾಂವಿಧಾನಿಕ ಅಪಚಾರ ಅಂತ ಪರಿಗಣಿಸಲು ಸಾಧ್ಯವಿಲ್ಲ. ಹೇಗೂ ಇದು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ನೆಲೆಸಿರುವ ಮುಸ್ಲಿಮರಿಗೆ ಮಾತ್ರ ಸಂಬಂಧಿಸಿದ ಪ್ರಶ್ನೆಯಾದ ಕಾರಣ, ಭಾರತದ ಮುಸ್ಲಿಮರು ತಮ್ಮ ಅಸ್ತಿತ್ವಕ್ಕೆ ಅಪಾಯವಿದೆ ಅಂತ ಭಾವಿಸಿ ಪ್ರತಿಭಟಿಸುವುದರಲ್ಲಿ ಯಾವುದೇ ಅರ್ಥವಿಲ್ಲ.

ಆದರೆ, ಅದ್ಯಾಕೋ ಮೋದಿ ಸರಕಾರದ ವಿರುದ್ಧ ಯಾವತ್ತೂ ಕಾಣಿಸಿರದ ಪ್ರತಿಭಟನೆಯ ಪ್ರವಾಹವೊಂದು ದೇಶಾದ್ಯಂತ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಕಾಯ್ದೆಯ ಸಮರ್ಥನೆ ಕೊಚ್ಚಿಹೋಗುತ್ತಿದೆ. ಇಷ್ಟರ ತನಕ ಮೋದಿ ಸರಕಾರದ ವಿರುದ್ಧ ಧ್ವನಿ ಎತ್ತುತ್ತಿದ್ದದ್ದು ಬುದ್ಧಿಜೀವಿಗಳು ಎಂದು ಮೋದಿ ಭಕ್ತರಿಂದ ಹಂಗಿಸಿಕೊಳ್ಳುತ್ತಿದ್ದ ದೇಶದ ಉದಾರವಾದಿ ಚಿಂತಕರು ಮಾತ್ರ. ಅಲ್ಲಲ್ಲಿ ಒಮ್ಮೊಮ್ಮೆ ವಿರೋಧ ಪಕ್ಷಗಳು ಪ್ರತಿಭಟಿಸಿದ್ದಿದೆ. ಈ ಬಾರಿ ಪ್ರತಿಭಟನೆಯ ಕಿಚ್ಚು ಹತ್ತಿಕೊಂಡಿರುವುದು ಈ ಎರಡು ವರ್ಗಗಳಿಂದ ಮಾತ್ರವಲ್ಲ. ವಿರೋಧ ಪಕ್ಷದ ಬೆಂಬಲಿಗರಲ್ಲದ, ಉದಾರವಾದೀ ಬುದ್ಧಿಜೀವಿಗಳಲ್ಲದ, ಸಾವಿರ ಸಾವಿರ ಸಂಖ್ಯೆಯ ಮುಸ್ಲಿಮೇತರ ಜನತೆ ಬೀದಿಗಿಳಿದಿದೆ.

ಪ್ರತಿಭಟಿಸುವವರೆಲ್ಲಾ ಕೈಯಲ್ಲಿ ಸಂವಿಧಾನ ಮತ್ತು ರಾಷ್ಟ್ರಧ್ವಜ ಹಿಡಿದು ಸಂವಿಧಾನ ರಕ್ಷಿಸಿ ಅಂತ ಬೇಡುತ್ತಿದ್ದಾರೆ. ಇಷ್ಟರ ತನಕ ತಾವು ಆಡಿದ್ದೇ ಮಾತು ಅಂತ ಆಡಳಿತ ನಡೆಸುತ್ತಾ ಬಂದಿದ್ದ ಮೋದಿ-ಶಾ ಜೋಡಿ ಸ್ವಲ್ಪ ಕಂಗೆಟ್ಟಂತೆ ಕಾಣುತ್ತಿದೆ.

ಈ ಹಿಂದೆ ಸರಕಾರದ ವಿರುದ್ಧ ಪ್ರತಿಭಟನೆಗಿಳಿದವರನ್ನೆಲ್ಲಾ “ದೇಶದ್ರೋಹಿಗಳು” “ರಾಷ್ಟ್ರವಿರೋಧಿ ಶಕ್ತಿಗಳು” ಅಂತ ಹೀಯಾಳಿಸಿ ಪ್ರತಿಭಟನೆಗಳ ಸದ್ದದಗಿಸುತ್ತಾ ಬಂದಿರುವ ಬಿಜೆಪಿಯ ತಂತ್ರ ಈ ಬಾರಿ ಕೆಲಸಕ್ಕೆ ಬರುತ್ತಿಲ್ಲ. ಯಾಕೆಂದರೆ ಪ್ರತಿಭಟಿಸುವವರೆಲ್ಲಾ ಕೈಯಲ್ಲಿ ಸಂವಿಧಾನ ಮತ್ತು ರಾಷ್ಟ್ರಧ್ವಜ ಹಿಡಿದು ಸಂವಿಧಾನ ರಕ್ಷಿಸಿ ಅಂತ ಬೇಡುತ್ತಿದ್ದಾರೆ. ಇಷ್ಟರ ತನಕ ತಾವು ಆಡಿದ್ದೇ ಮಾತು ಅಂತ ಆಡಳಿತ ನಡೆಸುತ್ತಾ ಬಂದಿದ್ದ ಮೋದಿ-ಶಾ ಜೋಡಿ ಸ್ವಲ್ಪ ಕಂಗೆಟ್ಟಂತೆ ಕಾಣುತ್ತಿದೆ.

ಹಾಗಾದರೆ ಇಡೀ ಪ್ರತಿಭಟನೆ ಕೇವಲ ರಾಜಕೀಯ ಪ್ರೇರಿತವೇ? ಪ್ರತಿಭಟನಾಕಾರರ ಆತಂಕಗಳು ಅರ್ಥರಹಿತವೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದರೆ ಹಲವಾರು ಅರ್ಧ ಸತ್ಯಗಳನ್ನೂ ಪರಾಂಬರಿಸಬೇಕಾಗುತ್ತದೆ.

ಇಲ್ಲಿ ಸಂವಿಧಾನದ ಉಲ್ಲಂಘನೆಯಾಗಿದೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆಯನ್ನು ನ್ಯಾಯಾಲಯಗಳು ಇತ್ಯರ್ಥಪಡಿಸಬೇಕು. ಆದರೆ ಇಲ್ಲೊಂದು ಸಂವಿಧಾನ ಸೂಕ್ಷ್ಮದ ಪ್ರಶ್ನೆ ಇದೆ, ಸಂವಿಧಾನ ಸಂವೇದನೆಯ ಪ್ರಶ್ನೆ ಇದೆ. “ಧಾರ್ಮಿಕ ಕಿರುಕುಳಕ್ಕೊಳಗಾದ” ನೆರೆ ರಾಷ್ಟ್ರೀಯರಿಗೆ ಪೌರತ್ವ ನೀಡುತ್ತೇವೆ” ಅಂತ ಹೇಳಿದ್ದರೆ ಈ ಸೂಕ್ಷ್ಮ ಮತ್ತು ಸಂವೇದನೆಗೆ ಬೆಲೆ ನೀಡಿದ ಹಾಗೆ ಆಗುತ್ತಿತ್ತು, ಉದ್ದೇಶವೂ ಈಡೇರುತಿತ್ತು. ಇಸ್ಲಾಮ್ ಧರ್ಮಕ್ಕೆ ಸೇರಿದವರನ್ನು ಉಳಿದು ಇನ್ನೆಲ್ಲರಿಗೂ ಅಂದಾಗ, ತಾಂತ್ರಿಕವಾಗಿ ಅದರ ಅರ್ಥ ಏನೇ ಇರಲಿ, ಸಂವಿಧಾನ ಸಂವೇದನೆಯ ಉಲ್ಲಂಘನೆಯಾಗುತ್ತದೆ. ಈ ದೇಶ ಈ ಸಂವಿಧಾನಕ್ಕೆ ಬದ್ಧವಾಗಿದ್ದಷ್ಟು ಕಾಲ ಈ ದೇಶದ ನಾಯಕತ್ವ ಈ ರೀತಿಯ ಸಂವಿಧಾನ ಸಂವೇದನೆಯನ್ನು ಧಿಕ್ಕರಿಸುವ ದಾಷ್ಟ್ರ್ಯ ತೋರಿಸಿದರೆ ಪರಿಣಾಮ ಏನಾಗುತ್ತದೆ ಎನ್ನುವುದಕ್ಕೆ ಈಗ ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಘಟನಾವಳಿಗಳು ಚಾರಿತ್ರಿಕ ಸಾಕ್ಷಿಗಳಾಗಿ ಉಳಿಯುತ್ತವೆ.

ಪೌರತ್ವ ಕಾಯ್ದೆ ತಿದ್ದುಪಡಿಯ ವಿಚಾರದಲ್ಲೂ ಇದುವೇ ಆಗಿದ್ದು. ಎರಡನೇಯದ್ದಾಗಿ, “ಮುಸ್ಲಿಮರನ್ನು ಹೊರಗಿಟ್ಟಿದ್ದೇವೆ” ಅರ್ಥಾತ್ “ಮುಸ್ಲಿಂ ನುಸುಳುಕೋರ”ರನ್ನು ಹೊರಹಾಕಿದ್ದೇವೆ ಎನ್ನುವ ಸಂದೇಶವನ್ನು ದೇಶವ್ಯಾಪೀ ನೀಡಿ ಆ ಮೂಲಕ ಹಿಂದೂ ಹೃದಯ ಸಾಮ್ರಾಟರಾಗಿ ಮೆರೆಯುವ ಉದ್ದೇಶವೂ ಇಲ್ಲಿತ್ತು.

ನರೇಂದ್ರ ಮೋದಿ-ಅಮಿತ್ ಶಾ ನೇತೃತ್ವದ ಬಿಜೆಪಿ ಕೇಂದ್ರ ಸರಕಾರ ಈ ಸೂಕ್ಷ್ಮಗಳ ಬಗ್ಗೆ ಈ ಸಂವೇದನೆಯ ಬಗ್ಗೆ ತಲೆ ಕೆಡಿಸದೆ ಇರುವುದಕ್ಕೆ ಕಾರಣವಿದೆ. ಮೊದಲನೆಯದಾಗಿ, ಇಲ್ಲಿರುವುದು ಸಂವಿಧಾನದ ಸೆಕ್ಯುಲರ್ ಸಂವೇದನೆಯ ಪ್ರಶ್ನೆ. ಇದರ ಬಗ್ಗೆ ಬಿಜೆಪಿಗೆ ಮತ್ತು ಈ ಈರ್ವರು ನಾಯಕರಿಗೆ ತಾತ್ಸಾರವಿದೆ. ಸಂವಿಧಾನದ ಸೆಕ್ಯುಲರ್ ಸಂವೇದನೆ ಬಿಜೆಪಿಯವರಿಗೆ ಅರ್ಥವಾಗದ ಕಾರಣ ಅಥವಾ ಅರ್ಥವಾದರೂ ಅದರ ಬಗ್ಗೆ ಅವರಿಗೆ ಸಹಮತ ಇಲ್ಲದ ಕಾರಣ, ಧರ್ಮ ನಿರಪೇಕ್ಷತೆಯ ವಿಚಾರ ಬಂದಾಗ ಅವರದ್ದು ಉಡಾಫೆಯ ನಿಲುವು. ಪೌರತ್ವ ಕಾಯ್ದೆ ತಿದ್ದುಪಡಿಯ ವಿಚಾರದಲ್ಲೂ ಇದುವೇ ಆಗಿದ್ದು. ಎರಡನೇಯದ್ದಾಗಿ, “ಮುಸ್ಲಿಮರನ್ನು ಹೊರಗಿಟ್ಟಿದ್ದೇವೆ” ಅರ್ಥಾತ್ “ಮುಸ್ಲಿಂ ನುಸುಳುಕೋರ”ರನ್ನು ಹೊರಹಾಕಿದ್ದೇವೆ ಎನ್ನುವ ಸಂದೇಶವನ್ನು ದೇಶವ್ಯಾಪೀ ನೀಡಿ ಆ ಮೂಲಕ ಹಿಂದೂ ಹೃದಯ ಸಾಮ್ರಾಟರಾಗಿ ಮೆರೆಯುವ ಉದ್ದೇಶವೂ ಇಲ್ಲಿತ್ತು. ರಾಮ ಮಂದಿರ ವಿವಾದ ಇತ್ಯರ್ಥವಾಗಿದೆ. ಧಾರ್ಮಿಕ ಧ್ರುವೀಕರಣಕ್ಕೆ ಇನ್ನೊಂದು ದೊಡ್ಡ ಅಸ್ತ್ರ ಬೇಕಿತ್ತು. ಅದನ್ನು ಅವರು ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಅಕ್ರಮವಾಗಿ ಬಂದ ಮುಸ್ಲಿಮರನ್ನು ಹೊರಹಾಕುವ ವಿಷಯದಲ್ಲಿ ಕಂಡುಕೊಂಡಿರಬೇಕು.

ಇದರಿಂದಾಗಿ ಭಾರತದಲ್ಲಿರುವ ಮುಸ್ಲಿಮರಿಗೆ ಏನೂ ತೊಂದರೆ ಇಲ್ಲ ಎನ್ನುವ ಸರಕಾರದ ವಾದ ಒಂದು ರೀತಿಯಲ್ಲಿ ಇಡೀ ಪ್ರಕರಣ ಪ್ರತಿನಿಧಿಸುವ ಅರ್ಧ ಸತ್ಯದ ಪೂರ್ಣರೂಪದಂತಿದೆ. ಇದು ಯಾಕೆ ಅಂತ ತಿಳಿದುಕೊಳ್ಳಬೇಕಾದರೆ ಪೌರತ್ವ ಕಾಯ್ದೆಯ ತಿದ್ದುಪಡಿಯನ್ನು ಇದರ ಅವಳಿ ಸಂತತಿಯಂತಿರುವ ಎನ್.ಆರ್.ಸಿ. ಜತೆಗೆ ಓದಿಕೊಳ್ಳಬೇಕು. ಈ ಎನ್.ಆರ್.ಸಿ. ಅಂತ ಅಂದರೆ ಭಾರತದ ಪ್ರಜೆಗಳು ನಾವು ಭಾರತೀಯರೇ ಅಂತ ಸರಕಾರಕ್ಕೆ ಮನವರಿಕೆ ಮಾಡಿಕೊಡಲು ಬೇಕಾದ ದಾಖಲೆ ಒದಗಿಸಿ ತಮ್ಮ ಪೌರತ್ವವನ್ನು ಅಧಿಕೃತಗೊಳಿಸುವ ಒಂದು ಪ್ರಕ್ರಿಯೆ. ಭಾರತದಲ್ಲಿ ಅನಧಿಕೃತವಾಗಿ ವಾಸಿಸುವವರನ್ನು ಪತ್ತೆ ಹಚ್ಚಲು ಈ ಪ್ರಕ್ರಿಯೆ ಅಗತ್ಯ ಅಂತ ಸರಕಾರದ ವಾದ. ಅಸ್ಸಾಂ ನಲ್ಲಿ ಈ ಸಾಹಸವನ್ನು ಸರಕಾರ ಮಾಡಿದೆ. ಅದಕ್ಕೆ ಖರ್ಚಾಗಿದ್ದು ಬರೋಬರಿ 1600 ಕೋಟಿ ರೂಪಾಯಿಗಳಂತೆ.

ಎನ್.ಆರ್.ಸಿ. ಮಾಡುವಾಗ ಆ ರಾಜ್ಯದಲ್ಲಿ ಅನಧಿಕೃತವಾಗಿ ನೆಲೆಗೊಂಡವರಲ್ಲಿ ಹೆಚ್ಚಿನವರು ಮುಸ್ಲಿಮರು ಎನ್ನುವ ಗುಮಾನಿಯಿತ್ತು. ಅಂತಹ ಅನಧಿಕೃತ ಮುಸ್ಲಿಮರನ್ನು ಮರಳಿ ಅವರ ದೇಶಕ್ಕೆ ಕಳುಹಿಸಲು, ಸಾಧ್ಯವಾಗದೆ ಹೋದಲ್ಲಿ ಅವರನ್ನು ನಿರಾಶ್ರಿತರ ಕೇಂದ್ರದಲ್ಲಿ ಶಾಶ್ವತವಾಗಿ ಇಡಲು ಸರಕಾರದ ಯೋಚನೆಯಾಗಿತ್ತು. ಯಾಕೆಂದರೆ ಆಗ ಅನಧಿಕೃತವಾಗಿ ದೇಶದಲ್ಲಿ ನೆಲೆಸಿ ದೇಶದ ಭದ್ರತೆಗೆ ಅಪಾಯ ತಂದೊಡ್ಡುವ ಮುಸ್ಲಿಮರನ್ನು ನಾವು ಹೆಡೆಮುರಿಕಟ್ಟಿದ್ದೇವೆ ಅಂತ ಸಾರಿ ಮತ್ತೆ ಹಿಂದೂ ಸಂರಕ್ಷಕ ಸರಕಾರ ಎಂಬ ತನ್ನ ಖ್ಯಾತಿಯನ್ನು ಮತ್ತಷ್ಟೂ ಬಲಗೊಳಿಸಬಹುದು ಎನ್ನುವುದು ಸರಕಾರದ ಯೋಚನೆಯಾಗಿತ್ತು. ಆದರೆ ದುರದೃಷ್ಟವಶಾತ್ ಅಲ್ಲಿ ಅನಧಿಕೃತ ವಾಸಿಗಳು ಅಂತ ಪತ್ತೆಯಾದವರ ಪೈಕಿ ಮುಸ್ಲಿಮರಿಗಿಂತ ಹಿಂದೂಗಳೇ ಹೆಚ್ಚಿದ್ದರು.

ಮುಸ್ಲಿಮರು ಶಾಶ್ವತವಾಗಿ ಅನಧಿಕೃತರಾಗಿಯೇ ಉಳಿದುಬಿಡುತ್ತಾರೆ. ಪ್ರಪಂಚದಲ್ಲಿ ಇರುವುದು ಇದೊಂದೇ ಹಿಂದೂ ದೇಶ, ಆದುದರಿಂದ ಅವರನ್ನು ಇನ್ನೆಲ್ಲಿಗೆ ಕಳುಹಿಸುವುದು;

ಅಂದರೆ ಎನ್.ಆರ್.ಸಿ. ಗಾಗಿ ಖರ್ಚು ಮಾಡಿದ ಅಷ್ಟೂ ಬೃಹತ್ ಮೊತ್ತದ ಹಣವನ್ನು ವ್ಯರ್ಥವಾಗಿ ದೇಶ ಕಳೆದುಕೊಂಡಹಾಗಾಯಿತು. ಈಗ ಅಲ್ಲಿ ಸಿಕ್ಕಿ ಬಿದ್ದಿರುವ ಹಿಂದೂಗಳನ್ನು ದೇಶದಲ್ಲೇ ಇರಗೊಟ್ಟು, ಮುಸ್ಲಿಮರನ್ನು ಮಾತ್ರ ಹೊರಗಟ್ಟಬೇಕಾಗಿದೆ. ಅದಕ್ಕಾಗಿ ಪೌರತ್ವ ಕಾಯ್ದೆಗೆ ತಿದ್ದುಪಡಿ. ಅದರ ಮೂಲಕ ಹಿಂದೂಗಳಾದಿಯಾಗಿ ಮುಸ್ಲಿಮೇತರ ಅನಧಿಕೃತ ವಾಸಿಗಳು ಅಧಿಕೃತ ಪೌರಾಗುತ್ತಾರೆ. ಮುಸ್ಲಿಮರು ಶಾಶ್ವತವಾಗಿ ಅನಧಿಕೃತರಾಗಿಯೇ ಉಳಿದುಬಿಡುತ್ತಾರೆ. ಪ್ರಪಂಚದಲ್ಲಿ ಇರುವುದು ಇದೊಂದೇ ಹಿಂದೂ ದೇಶ, ಆದುದರಿಂದ ಅವರನ್ನು ಇನ್ನೆಲ್ಲಿಗೆ ಕಳುಹಿಸುವುದು; ಮುಸ್ಲಿಮರಿಗಾದರೆ ನೂರಾರು ದೇಶಗಳಿವೆ ಎನ್ನುವುದು ಸರಕಾರದ ವಾದ. ಅದಿರಲಿ, ಈಗ ಇದರಿಂದಾಗಿ ಭಾರತದ ಮುಸ್ಲಿಮರಿಗೆ ಏನೂ ತೊಂದರೆ ಆಗುವುದಿಲ್ಲ ಎನ್ನುವ ವಾದಕ್ಕೆ ಮತ್ತೆ ಬರೋಣ.

ಈಗ ದೇಶವ್ಯಾಪಿಯಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದಾಗ ಏನಾಗುತ್ತದೆ? 2014ರ ನಂತರ ಬಂದಿರಬಹುದಾದ ಎಲ್ಲಾ ಧರ್ಮೀಯರು, 2014ಕ್ಕೆ ಮೊದಲು ಮತ್ತು ಆನಂತರ ಬಂದಿರುವ ಎಲ್ಲಾ ಮುಸ್ಲಿಮರು, ಹಾಗೆಯೇ ಮುಸ್ಲಿಮೇತರರ ಧರ್ಮಕ್ಕೆ ಸೇರಿದ್ದೂ ಧಾರ್ಮಿಕ ಕಿರುಕುಳಕ್ಕೊಳಗಾಗದೆ ಇತರ ಕಾರಣಗಳಿಗೋಸ್ಕರ ಭಾರತಕ್ಕೆ 2014ಕ್ಕೆ ಮೊದಲು ಬಂದು ನೆಲೆಸಿದವರು, ಇವರೆಲ್ಲರೂ ಪೌರತ್ವ ಕಾಯ್ದೆಯ ತಿದ್ದುಪಡಿಯಿಂದ ಭಾರತದ ಅನಧಿಕೃತ ವಾಸಿಗಳಾಗುತ್ತಾರೆ.

ಸರಕಾರದ ಯೋಚನೆಯ ಪ್ರಕಾರ ಈಗಾಗಲೇ ಭಾರತೀಯರ ಮಧ್ಯೆ ಬೆರೆತು ಹೋಗಿ, ವಿವಿಧ ಸಂಬಂಧಗಳನ್ನು ಬೆಳೆಸಿಕೊಂಡಿರಬಹುದಾದ ಇವರನ್ನು ಗುರುತಿಸಬೇಕು ಮತ್ತು ಅವರವರ ದೇಶಗಳಿಗೆ ಕಳುಹಿಸುವ ವ್ಯವಸ್ಥೆ ಆಗಬೇಕು. ಯಾವ ದೇಶದಲ್ಲೂ ಸಲ್ಲದವರನ್ನು ಬಂಧನ ಗೃಹದಲ್ಲಿ ಇರಿಸುವುದೋ, ಅಥವಾ ಅವರ ವಿರುದ್ಧ ಇನ್ನೆಂತಹದ್ದೋ ಕ್ರಮ ಕೈಗೊಳ್ಳುವುದೋ ಆಗಬೇಕು. ಇದಕ್ಕಾಗಿ ಮೊದಲು ದೇಶವ್ಯಾಪೀ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನ ನಂತರ ಎನ್.ಆರ್.ಸಿ. ಅಂತ ಸನ್ಮಾನ್ಯ ಗೃಹ ಮಂತ್ರಿಗಳು ತಣ್ಣನೆ ಸಂಸತ್ತಿನಲ್ಲಿ ಗುಡುಗಿದ್ದು. ಈಗ ಅದು ಜನಸಂಖ್ಯಾ ದಾಖಲಾತಿ  (National Population Register) ಎಂಬ ಇನ್ನೊಂದು ಸ್ವರೂಪದಲ್ಲಿ ಪ್ರವೇಶಿಸುವಂತಿದೆ.

ಸುಲಭವಾಗಿ ಲಭ್ಯವಿರುವಂತಹ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಎಲ್ಲಾ ಈ ಉದ್ದೇಶಕ್ಕೆ ಸಾಕಾಗುವುದಿಲ್ಲ ಎನ್ನುವುದು ಮಾತ್ರ ಸ್ಪಷ್ಟವಿದೆ.

ಭಾರತದ ಮುಸ್ಲಿಮರಿಗಾಗಲೀ, ಇತರ ಧರ್ಮೀಯರಿಗಾಗಲೀ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಅಂತ ಹೇಳುವುದು ತಾಂತ್ರಿಕವಾಗಿ ಸರಿಯಾಗಿದೆ. ಆದರೆ ಇದೂ ಕೂಡಾ ಅರ್ಧ ಸತ್ಯ. ಯಾಕೆಂದರೆ, ಭಾರತದ ಮೂಲವಾಸಿಗಳು ಅಂತ ಸರಕಾರಕ್ಕೆ ಮನದಟ್ಟು ಮಾಡಲು ಒಂದಷ್ಟು ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಆ ದಾಖಲೆಗಳು ಯಾವುವು ಅಂತ ಸ್ಪಷ್ಟವಿಲ್ಲ. ಸುಲಭವಾಗಿ ಲಭ್ಯವಿರುವಂತಹ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಎಲ್ಲಾ ಈ ಉದ್ದೇಶಕ್ಕೆ ಸಾಕಾಗುವುದಿಲ್ಲ ಎನ್ನುವುದು ಮಾತ್ರ ಸ್ಪಷ್ಟವಿದೆ. ಈ ದಾಖಲೆಗಳನ್ನು ಒದಗಿಸಲು ಸಾಧ್ಯವಿಲ್ಲದ ಭಾರತದ್ದೇ ಆದ ಕುಟುಂಬಗಳು ಕೂಡಾ ಆಗ ಅನಧಿಕೃತರಾಗಿಬಿಡುತ್ತಾರೆ. ಅವರೆಲ್ಲಾ ಎಲ್ಲಿಂದಲೋ ಬಂದು ಇಲ್ಲಿ ನೆಲೆಸಿದವರು ಎನ್ನುವ ಗುಮಾನಿಗೊಳಗಾಗುತ್ತಾರೆ. ಮುಖ್ಯವಾಗಿ ಗಡಿ ಪ್ರದೇಶದಲ್ಲಿರುವವರು ಇಲ್ಲಿ ತೊಂದರೆಗೆ ಒಳಗಾಗುವ ಎಲ್ಲಾ ಸಾಧ್ಯತೆಗಳೂ ಇವೆ.

ಈ ದೇಶದಲ್ಲಿ ತಮ್ಮ ಅಸ್ತಿತ್ವವನ್ನು ಒಂದು ನಿರ್ದಿಷ್ಟ ಕಾಲಘಟ್ಟದಿಂದ ಅಂದರೆ ತಮ್ಮ ಹಿರೀಕರ ಕಾಲದಿಂದ ಸರಕಾರದ ಮಂದಿ ಒಪ್ಪುವಂತೆ ಒದಗಿಸುವ ಕೆಲಸ ಅಷ್ಟೇನೂ ಸುಲಭವಲ್ಲ. ಅಸ್ಸಾಂ ನಲ್ಲಿ ಎನ್.ಆರ್.ಸಿ. ನಡೆದಾಗ ಅಲ್ಲಿ ತಮ್ಮ ಪೌರತ್ವವನ್ನು ಸಾಬೀತು ಮಾಡಲಾಗದೆ ಉಳಿದಿರುವ ಕೋಟಿಗಟ್ಟಲೆ ಮುಸ್ಲಿಮರನ್ನೇ ತೆಗೆದುಕೊಳ್ಳೋಣ. ಅವರು ಹಲವು ತಲೆಮಾರುಗಳಿಂದೀಚೆಗೆ ಭಾರತದಲ್ಲಿ ನೆಲೆಸಿರಬಹುದು. ಅವರ ಮಕ್ಕಳು, ಮೊಮ್ಮಕ್ಕಳೆಲ್ಲಾ ಇಲ್ಲೇ ಬೆಳೆದು ದೊಡ್ಡವರಾಗಿರಬಹುದು. ಈಗ ಇದ್ದಕ್ಕಿದ್ದಂತೆಯೇ ನೀವು ಈ ದೇಶದಲ್ಲಿ ಇರಬಾರದು ಎಂದು ಹೇಳಿದಾಗ ಅವರು ಎಲ್ಲಿ ಹೋಗುವುದು, ಅವರನ್ನು ಎಲ್ಲಿಗೆ ಕಳುಹಿಸುವುದು ಎನ್ನುವ ಪ್ರಶ್ನೆ ಬರುತ್ತದೆ. ಅಷ್ಟೇ ಅಲ್ಲ, ಈ ಅನಧಿಕೃತರ ಮಧ್ಯೆ ಭಾರತದವರೇ ಆಗಿದ್ದೂ ಕೂಡಾ ದಾಖಲೆ ಒದಗಿಸಲಾಗದ ಕಾರಣಕ್ಕೆ ಅನಧಿಕೃತರಾಗಿ ಉಳಿಯ ಬಹುದಾದ ಮಂದಿ ಎಷ್ಟೋ ಇರಬಹುದು. ಬಂಧನ ಗೃಹಗಳಲ್ಲಿ ಎಷ್ಟು ಮಂದಿಯನ್ನು ಇರಿಸಬಹುದು? ಎಷ್ಟು ಕಾಲ ಇರಿಸಿಕೊಳ್ಳಬಹುದು? ಅವುಗಳ ನಿರ್ವಹಣೆ ಹೇಗೆ? ದೊಡ್ಡ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಬಹುದಾದ ಯೋಚನೆಯಲ್ಲವೇ ಇದು.

ಈಗ ಒಂದು ಪ್ರಶ್ನೆ ಬರುತ್ತದೆ. ಹಾಗಾದರೆ ಅನಧಿಕೃತವಾಗಿ ಬಂದು ಈ ದೇಶದಲ್ಲಿ ಯಾರಾದರೂ ನೆಲೆಸಿಬಿಡಬಹುದೇ? ಬಿಜೆಪಿಯ ನಾಯಕರು ಬೀದಿ ಬೀದಿಯಲ್ಲಿ ನಿಂತು ಈಗ ಹೇಳುತ್ತಿರುವಂತೆ “ಭಾರತವೇನು ಧರ್ಮಛತ್ರವೇ?” ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸುವ ನೆರೆ ರಾಷ್ಟ್ರದ ಜನಗಳ ಬಗ್ಗೆ ಸರಕಾರ ಏನೂ ಮಾಡುವುದು ಬೇಡವೇ? ಆ ಸಮಸ್ಯೆಯನ್ನು ಹಾಗೆ ಉಳಿಯಗೊಟ್ಟರೆ ಅದು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಂಕಷ್ಟಗಳಿಗೆ ಕಾರಣವಾಗುವುದಿಲ್ಲವೇ?

ಖಂಡಿತವಾಗಿಯೂ ಈ ಸಮಸ್ಯೆಯನ್ನು ಹಾಗೆ ಬಿಡುವಂತಿಲ್ಲ. ಹಾಗಂತ ಅದಕ್ಕೆ ಈಗ ತಂದಿರುವ ಪೌರತ್ವ ಕಾಯ್ದೆ ತಿದ್ದುಪಡಿಯಾಗಲೀ, ಎನ್.ಅರ್.ಸಿ. ಆಗಲೀ ಖಂಡಿತಾ ಪರಿಹಾರವಾಗಲಾರದು. ಇಲ್ಲಿ ಮೂಲಭೂತವಾಗಿ ಇರುವುದು ವಲಸೆಯ ಸಮಸ್ಯೆ. ಬಡ ರಾಷ್ಟ್ರಗಳಿಂದ ಆರ್ಥಿಕವಾಗಿ ಮುಂದುವರಿದ ರಾಷ್ಟ್ರಗಳಿಗೆ ಜನ ಅನಧಿಕೃತವಾಗಿ ವಲಸೆ ಹೋಗುವುದು ಸರ್ವೇ ಸಾಮಾನ್ಯವಾದ ವಿದ್ಯಮಾನ. ಎಷ್ಟೇ ಕಠಿಣ ನಿರ್ಬಂಧಗಳಿರಲಿ, ಇದನ್ನು ನಿಲ್ಲಿಸಲು ತುಂಬಾ ಕಷ್ಟವಿದೆ.

ಮುಂದುವರಿದ ದೇಶವೊಂದನ್ನು ಸೇರಿ ಅಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂಬ ಬಡ ರಾಷ್ಟ್ರಗಳ ಪ್ರಜೆಗಳ ಹಪಾಹಪಿ ಎಂತಹದ್ದು ಎನ್ನುವುದಕ್ಕೆ ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ಶೀತಲೀಕೃತ ಕಂಟೇನರ್ ಒಂದರಲ್ಲಿ ಸಿಕ್ಕ ಸುಮಾರು 40 ಮಂದಿಯ ಮರಗಟ್ಟಿದ ಶವಗಳೇ ಸಾಕ್ಷಿ.

ಭಾರತದ ಕತೆ ಬಿಡಿ, ಯಾಕೆಂದರೆ ಇಲ್ಲಿ ಲಂಚ ನೀಡಿ ಎಂತಹ ಭದ್ರಕೋಟೆಯನ್ನಾದರೂ ಭೇದಿಸಿಕೊಂಡು ಬರಬಹುದು. ಕಾನೂನನ್ನು ಚಾಚೂ ತಪ್ಪದೆ ಪಾಲಿಸುವ ಯುರೋಪಿಯನ್ ದೇಶಗಳಿಗೆ ಕೂಡಾ ಅನಧಿಕೃತ ವಲಸೆಯ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಲಾಗಿಲ್ಲ. ಅರ್ಥಾತ್ ಅಂತಹ ವಲಸೆಯನ್ನು ನಿಲ್ಲಿಸಲಾಗಿಲ್ಲ. ಮುಂದುವರಿದ ದೇಶವೊಂದನ್ನು ಸೇರಿ ಅಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂಬ ಬಡ ರಾಷ್ಟ್ರಗಳ ಪ್ರಜೆಗಳ ಹಪಾಹಪಿ ಎಂತಹದ್ದು ಎನ್ನುವುದಕ್ಕೆ ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ಶೀತಲೀಕೃತ ಕಂಟೇನರ್ ಒಂದರಲ್ಲಿ ಸಿಕ್ಕ ಸುಮಾರು 40 ಮಂದಿಯ ಮರಗಟ್ಟಿದ ಶವಗಳೇ ಸಾಕ್ಷಿ.

ತನ್ನ ನೆರೆ ರಾಷ್ಟ್ರಗಳಿಂದ ಬಂದವರು ಭಾರತದಲ್ಲಿ ತುಂಬುತ್ತಿದ್ದಾರೆ ಎಂದು ಬೊಬ್ಬಿಡುವ ಭಾರತೀಯರು ಒಂದು ವಿಚಾರವನ್ನು ಗಮನಿಸಬೇಕು. ಪ್ರಪಂಚಾದಾದ್ಯಂತ ಮುಂದುವರಿದ ರಾಷ್ಟ್ರಗಳಲ್ಲಿ ಭಾರತದಿಂದ ಹೋದ ಅನಧಿಕೃತ ವಾಸಿಗಳು ಇದ್ದಾರೆ. ಮಲಯಾಳಂ ನಲ್ಲಿ ಪೊತ್ತೆಮಾರಿ ಎನ್ನುವ ಸಿನೆಮಾ ಬಂದಿದೆ. ಅದರಲ್ಲಿ ಕೇರಳದಿಂದ ಅನಧಿಕೃತವಾಗಿ ಕೊಲ್ಲಿ ದೇಶಗಳಿಗೆ ಸಾಗುವ ಮಲಯಾಳಿಗಳ ದಯನೀಯ ಬದುಕಿನ ಮುಖವೊಂದನ್ನು ಅನಾವರಣ ಮಾಡಲಾಗಿದೆ. ಇಡೀ ಮನುಕುಲದ ಚರಿತ್ರೆಯೇ ವಲಸೆಯ ಚರಿತ್ರೆ. ನಿಜ, ಭಾರತದಲ್ಲೀಗ ಕೋಟ್ಯಂತರ ಮಂದಿ ಅನಧಿಕೃತ ವಲಸಿಗರಿದ್ದಾರೆ.

ಈ ಸಮಸ್ಯೆಯನ್ನು ಜಾಣ್ಮೆಯಿಂದ ನಿರ್ವಹಿಸಬೇಕೇ ಹೊರತು ಇವರ ನಡುವೆ ಇರುವ ಮುಸ್ಲಿಮರನ್ನು ಪ್ರತ್ಯೇಕಿಸಿ ಬಂಧನ ಗೃಹದಲ್ಲಿ ಇರಿಸಿಬಿಡೋಣ ಎನ್ನುವ ದಿಢೀರ್ ಪರಿಹಾರ ಅಸಾಧುವೂ ಅಪಾಯಕಾರಿಯೂ ಆಗಿದೆ. ಇನ್ನು ಮುಂದೆ ಅಕ್ರಮವಾಗಿ ಜನ ಭಾರತದ ಗಡಿ ದಾಟದಂತೆ ಎಷ್ಟು ಸಾಧ್ಯವೋ ಅಷ್ಟು ಬಿಗಿ ಕಾವಲು ನೇಮಿಸಬಹುದು. ಇನ್ನೂ ಹೇಗೋ ಗಡಿ ದಾಟಿ ಬರುವವರನ್ನು ಯಾವ ರೀತಿ ನಿಭಾಯಿಸುವುದು ಅಂತ ಒಂದು ಸ್ಪಷ್ಟ ನೀತಿಯನ್ನು ನಿರೂಪಿಸಿ ಅನುಸರಿಸಬಹುದು. ಆದರೆ ಈಗಾಗಲೇ ಈ ದೇಶದಲ್ಲಿ ತಲೆಮಾರುಗಳಿಂದ ನೆಲೆಸಿರುವ ಕೋಟ್ಯಂತರ ಮಂದಿಯನ್ನು ಅಕ್ರಮ ವಾಸಿಗಳು ಅಂತ ಗುರುತಿಸುವ ದುಸ್ಸಾಹಸಕ್ಕೆ ಕೈಹಾಕಿದರೆ, ಈ ಪ್ರಕ್ರಿಯೆಯಲ್ಲಿ ದೇಶವಾಸಿಗಳೇ ಅಕ್ರಮವಾಸಿಗಳಾಗಿ ಗುರುತಿಸಲ್ಪಡಬಹುದಾದ ಅಪಾಯ ಖಂಡಿತಾ ಇದೆ.

ನೋಟು ಅಮಾನ್ಯಕರಣದ ಪರಿಣಾಮಗಳನ್ನು ನಿಭಾಯಿಸಲಾಗದ ಸರಕಾರ, ಜಿ.ಎಸ್.ಟಿ. ಯ ಜಾರಿಯಲ್ಲಿ ಮತ್ತೆ ಮತ್ತೆ ಜಾರಿ ಬೀಳುತ್ತಿರುವ ಸರಕಾರ, ಉಜ್ವಲ ಯೋಜನೆಯಂತಹ ಸರಳ ಕಲ್ಯಾಣ ಕಾರ್ಯಕ್ರಮಗಳ ವಿಚಾರದಲ್ಲೇ ಮುಗ್ಗರಿಸಿರುವ ಸರಕಾರ ಕೋಟ್ಯಂತರ ಅಕ್ರಮ ವಾಸಿಗಳನ್ನು ಪ್ರತ್ಯೇಕಿಸುತ್ತೇವೆ, ಅಕ್ರಮ ಸಾಬೀತಾದ ಜನರನ್ನು ಬಂಧನ ಗೃಹದಲ್ಲಿಟ್ಟು ನಿಭಾಯಿಸುತ್ತೇವೆ ಅಂತ ಹೇಳುತ್ತಿರುವುದು ಸಂಪೂರ್ಣ ಅವಾಸ್ತವಿಕ ಯೋಜನೆ. ಅಷ್ಟು ಮಾತ್ರವಲ್ಲ. ಈಗಾಗಲೇ ಹಲವು ರಾಜ್ಯಗಳು ಈ ರೀತಿಯ ಯಾವುದೇ ಕಾನೂನುಗಳನ್ನು ಜಾರಿಗೊಳಿಸುವುದಿಲ್ಲ ಎಂದಿದ್ದಾವೆ. ಈ ರಾಜ್ಯಗಳನ್ನು ಒತ್ತಾಯಿಸಿ ಯೋಜನೆಗಳನ್ನು ಜಾರಿಗೊಳಿಸಲು ಕೇಂದ್ರಕ್ಕೆ ಅಸಾಧ್ಯ.

ಸಂವಿಧಾನದ 356ನೆಯ ವಿಧಿ ಬಳಸಿ ಅಂತಹ ರಾಜ್ಯಗಳಲ್ಲಿ ಕೇಂದ್ರದ ಆಡಳಿತ ಹೇರಲಾಯಿತು ಅಂದುಕೊಳ್ಳಿ. ಮತ್ತೆ ಆರು ತಿಂಗಳಲ್ಲಿ ಚುನಾವಣೆ ನಡೆದು ಮತ್ತೆ ವಿರೋಧ ಪಕ್ಷಗಳೇ ಜಯಗಳಿಸಿದರೆ ಕೇಂದ್ರ ಏನು ತಾನೇ ಮಾಡಲಾದೀತು. ಎಲ್ಲದಕ್ಕಿಂತಲೂ ಮುಖ್ಯವಾಗಿ ಇಡೀ ದೇಶದಲ್ಲಿ ಇದಕ್ಕೆ ತಗಲುವ ಖರ್ಚು ಎಷ್ಟಾಗಬಹುದು. ಅಷ್ಟೆಲ್ಲಾ ಖರ್ಚು ಮಾಡಿದ ನಂತರವೂ ಸಮಸ್ಯೆ ಪರಿಹಾರ ಆಗಬಹುದಾದ ಯಾವ ಸಾಧ್ಯತೆಯೂ ನಿಚ್ಚಳವಾಗಿಲ್ಲದಾಗ ಈ ಅವಸರದ ಹುಚ್ಚು ಸಾಹಸ ಬೇಕೇ? ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆಗಳೆಲ್ಲಾ ಇವೆ.

*ಲೇಖಕರು ಮಂಗಳೂರು ವಿವಿಯಲ್ಲಿ ಎಂ.ಎ., ಇಂಗ್ಲೆಂಡಿನ ಸುಸೆಕ್ಸ್ ವಿವಿಯಿಂದ ಅಭಿವೃದ್ಧಿ ಅಧ್ಯಯನ ವಿಷಯದಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಪ್ರಸ್ತುತ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು, ಅಂಕಣಕಾರರು.

Leave a Reply

Your email address will not be published.