ಪೌರಪ್ರಜ್ಞೆ ಇಲ್ಲದ ಪೌರತ್ವದಿಂದ ಏನು ಪ್ರಯೋಜನ?

ಲೋಕಸಭೆಯಲ್ಲಿ ಸಕಾಲದಲ್ಲಿ ತಿದ್ದುಪಡಿಗಳನ್ನು ಮಂಡಿಸದೆ, ಮತದಾನಕ್ಕೆ ಗೈರುಹಾಜರಾಗಿ ಈಗ ಬೀದಿಯಲ್ಲಿ ಈ ಮಸೂದೆ ಕುರಿತು ರಂಪಾಟ ಮಾಡುತ್ತಿರುವ ರಾಜಕಾರಣಿಗಳಿಂದ ಏನು ಸಾಧಿಸಲು ಆದೀತು?

ಶಿವಶಂಕರ ಹಿರೇಮಠ

ಭಾರತ ಗಣರಾಜ್ಯದ ಏನೆಲ್ಲ ಸಮಸ್ಯೆಗಳನ್ನು ನಾವು ಸ್ವೀಕೃತ ಭಾರತ ಸಂವಿಧಾನದ ಪರಿಭಾಷೆಯ ಕಕ್ಷೆಯೊಳಗೆ ಚರ್ಚಿಸುವುದೇ ಸೂಕ್ತ. ಸ್ಥಾನಿಕ, ಪ್ರಾದೇಶಿಕ, ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳನ್ನು ರಾಷ್ಟ್ರದ ಹಿತಾಸಕ್ತಿಗಳಿಗೆ ಪೂರಕವಾಗುವಂತೆ ಪರಿವರ್ತಿಸಿಕೊಂಡು ವಿಶ್ಲೇಷಿಸುವುದು ಇಂದಿನ ಅಗತ್ಯವಾಗಿದೆ.

ಯುಎಸ್‍ಎ ಕಟ್ಟುತ್ತಿರುವ ಮೆಕ್ಸಿಕೋ ಗೋಡೆ, ಯುಕೆ ರಾಷ್ಟ್ರ ಯುರೋಪಿಯನ್ ಒಕ್ಕೂಟದಿಂದ ಹೊರಬರುವಿಕೆ, ಯುಎಸ್‍ಎಸ್‍ಆರ್ ವಿಭಜಿತಗೊಂಡು ಅಲ್ಲಿಯ ರಾಜ್ಯರಾಜ್ಯಗಳಲ್ಲಿಯ ಸೆಣಸಾಟಗಳು ಭಾರತದಿಂದ ದೂರದ ಪ್ರದೇಶಗಳಲ್ಲಿ ಜರುಗುತ್ತಿದ್ದರೂ ರಾಷ್ಟ್ರೀಯತೆ, ಪೌರತ್ವಗಳ ತಿಕ್ಕಾಟ, ಅಧಿಕಾರ, ಸೌಲಭ್ಯಗಳ ಈ ವಾದಗಳ ಹಿಂದೆ ಗುಪ್ತಗಾಮಿನಿಯಂತೆ ಹರಿದಾಡುತ್ತಿರುತ್ತದೆ.

ಭಾರತದ ನೆರೆದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶಗಳ ಹುಟ್ಟು, ಪೌರತ್ವ, ರಾಷ್ಟ್ರೀಯತೆಗಳಿಗೆ ಧರ್ಮ, ಜಾತಿ, ಜನಾಂಗ ಭಾಷೆಗಳು ಪ್ರಭಾವ ಬೀರಿವೆ. ಶ್ರೀಲಂಕಾದ ಎಲ್‍ಟಿಟಿಇ ತಮಿಳರು ಬೌದ್ಧ ಧರ್ಮೀಯರ ಸಮಸ್ಯೆ, ಟಿಬೆಟ್-ಚೀನಾ ದ್ವಂದ್ವಗಳು, ಮಾಲಡೀವ ದ್ವೀಪಗಳ ಅಧಿಕಾರದ ಕಿತ್ತಾಟ, ಏಕೈಕ ಹಿಂದೂರಾಷ್ಟ್ರ ಎಂಬ ಹೆಗ್ಗಳಿಕೆ ಇದ್ದ ನೇಪಾಳದಲ್ಲಿಯ ಅರಸೊತ್ತಿಗೆಯ ಅನಿರೀಕ್ಷಿತ ಬದಲಾವಣೆ ಮತ್ತು ಅಲ್ಲಿನ ಅಧಿಕಾರ ರಾಜಕೀಯ, ಮಯನ್ಮಾರದ (ಬರ್ಮಾ) ಮಿಲಿಟರಿ ಆಡಳಿತದ ಬದಲಾವಣೆ, ರೊಹಿಂಗ್ಯಾ ಅಧಿಕಾರ ಮುಂತಾದವುಗಳು ಆಯಾ ದೇಶದ ರಾಷ್ಟ್ರೀಯತೆಗಳ ಸಮಸ್ಯೆಗಳಾದರೂ, ಭಾರತ ಅನ್ಯದೇಶಿಯರಿಗೆ ಪೌರತ್ವವನ್ನು ನೀಡುವಾಗ ಪರೋಕ್ಷ ಅಪರೋಕ್ಷವಾಗಿ ಇವೆಲ್ಲವುಗಳನ್ನು ಗಮನಿಸಲೇಬೇಕಾಗುತ್ತದೆ. ಎಲ್ಲ ರಾಷ್ಟ್ರಗಳು 21ನೆಯ ಶತಮಾನದಲ್ಲಿ ತಮ್ಮ ದೇಶದ ಪೌರತ್ವವನ್ನು ನೀಡುವಾಗ ಬಹುಆಯಾಮಗಳಿಂದ ಪರಿಶೀಲಿಸಬೇಕಾಗುತ್ತದೆ, ವ್ಯಾಖ್ಯಾನಿಸಬೇಕಾಗುತ್ತದೆ.

20ನೆಯ ಶತಮಾನವು ಜಾಗತಿಕವಾಗಿ ಮಾನವ ಹಕ್ಕುಗಳನ್ನು ಪ್ರತಿಷೆಷ್ಠಿಸುವಲ್ಲಿ ಮಹತ್ವದ ಕಾಲಘಟ್ಟವಾಗಿದೆ. ಮೊದಲನೆಯ ಮಹಾಯುದ್ಧದ ಪರಿಣಾಮವಾಗಿ ಲೀಗ್ ಆಫ್ ನೇಶನ್ ಹುಟ್ಟಿಕೊಂಡು ರಾಷ್ಟ್ರೀಯತೆ, ಮಾನವಹಕ್ಕುಗಳು, ಪೌರತ್ವ ಮುಂತಾದ ಪರಿಕಲ್ಪನೆಗಳಿಗೆ ಪುಷ್ಟಿ ನೀಡಿತು. ಕಮ್ಯುನಿಸ್ಟ್, ಸಮಾಜವಾದಿ, ರಾಷ್ಟ್ರಪ್ರಭುತ್ವ, ಪ್ರಜಾಪ್ರಭುತ್ವ, ಬಂಡವಾಳಶಾಹಿ ಮೊದಲಾದ ಚಿಂತನೆಗಳು ರಾಷ್ಟ್ರಗಳ ಆಡಳಿತದ ಮೂಲದ್ರವ್ಯಗಳಾದವು.

1950ರಲ್ಲಿ ಸ್ವತಂತ್ರ ಸಾರ್ವಭೌಮ ಗಣತಂತ್ರ ರಾಷ್ಟ್ರವಾದ ಭಾರತ ಈ ಜಾಗತಿಕ ಶಕ್ತಿಗಳ ಪೌರಪ್ರಜ್ಞೆ ಇಲ್ಲದ ಪೌರತ್ವದಿಂದ ಏನು ಪ್ರಯೋಜನ?

ಎರಡನೇ ಮಹಾಯುದ್ಧವು ಎರಡು ಮಹಾಶಕ್ತಿಗಳನ್ನು, ಯುಎನ್‍ಒದಂತಹ ಸಂಸ್ಥೆಯನ್ನು ನಿರ್ಮಿಸಿತು. 1950ರಲ್ಲಿ ಸ್ವತಂತ್ರ ಸಾರ್ವಭೌಮ ಗಣತಂತ್ರ ರಾಷ್ಟ್ರವಾದ ಭಾರತ ಈ ಜಾಗತಿಕ ಶಕ್ತಿಗಳ ಪೌರಪ್ರಜ್ಞೆ ಇಲ್ಲದ ಪೌರತ್ವದಿಂದ ಏನು ಪ್ರಯೋಜನ? ನೆರಳಾಗದೆ, ವಿರೋಧವನ್ನೂ ಕಟ್ಟಿಕೊಳ್ಳದೆ ಇವೇ ಜಾಗತಿಕ ಶಕ್ತಿಗಳ ಕುಮ್ಮಕ್ಕಿನಿಂದ ಪ್ರಾರಂಭಗೊಂಡ ಶೀತಲ ಯುದ್ಧದ ಬಿಸಿಗೆ ಈಡಾಗದೆ ಪ್ರಧಾನಮಂತ್ರಿಗಳಾದ ಕಾಂಗ್ರೆಸ್‍ನ ಜವಾಹರಲಾಲ್ ನೆಹರೂ ನೇತೃತ್ವದಲ್ಲಿ ಭಾರತವನ್ನು ಕಟ್ಟುವುದರಲ್ಲಿ ತಲ್ಲೀನವಾಯಿತು. ಭಾರತ ಜಾತ್ಯತೀತ ರಾಷ್ಟ್ರವೆಂದು ಘೋಷಿಸಿಕೊಂಡರೂ ಅದು ವಾಸ್ತವವಾಗಿ ಆಗ ಹಿಂದೂರಾಷ್ಟ್ರವೇ ಆಗಿತ್ತು. ಇಂಡಿಯಾ ಎಂದು ಯೂರೋಪ್, ಅಮೆರಿಕ ದೇಶಗಳು ಭಾರತವನ್ನು ಗುರುತಿಸಿದರೆ ಅರಬ್ ರಾಷ್ಟ್ರಗಳು ಮತ್ತು ಚೀನಾ, ಹಿಂದೂಸ್ತಾನ ಎಂದೇ ಪರಿಗಣಿಸುತ್ತಿದವು.

ಭಾರತವು ಬಹಳಷ್ಟು ಜಾತಿ ಪಂಗಡಗಳು, ಭಾಷೆ ಧರ್ಮಗಳಿಂದ ಕೂಡಿದ ಮತ್ತು ಆಳುವ ವರ್ಗಗಳಿಂದ ಸದಾ ಶೋಷಣೆಗೆ ಒಳಗಾದ, ರಾಜಮಹಾರಾಜರುಗಳ ಅಧಿಕಾರದ ಮುಷ್ಟಿಯಲ್ಲಿ ನಲುಗುತ್ತಿದ್ದ ಬಹುಪ್ರದೇಶಗಳ ಗುಂಪಾಗಿತ್ತು. ಭಾರತದ ಸನಾತನ ವೇದಿಕ್ ಧರ್ಮವು ಪುರೋಹಿತಶಾಹಿಗಳ ಇಡಿಗಂಟಾಗಿದ್ದರೂ ಅದು ತನ್ನನ್ನು ಹಿಂದೂ ಎಂದು ಗುರುತಿಸಿಕೊಳ್ಳುತ್ತಿತ್ತು. ಪ್ರಾಚೀನ ಉಪನಿಷತ್ ಚಿಂತನೆಗಳಿಂದ ಪ್ರಭಾವಿತರಾದ ಸಾಧುಸಂತರು, ಋಷಿಮುನಿಗಳು, ಇಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಗಡಿ, ರಾಜ್ಯಗಳ ಭೇದವಿಲ್ಲದೆ ಆಧ್ಯಾತ್ಮಿಕ ಏಕತೆಯನ್ನು ಇತಿಹಾಸದುದ್ದಕ್ಕೂ ಸಾಧಿಸಿ ಮುಂದುವರೆಸಿಕೊಂಡು ಬಂದಿದ್ದಾರೆ.

ನೂರಾರು ರಾಜರುಗಳ ಅಧೀನದಲ್ಲಿ ಆಳಲ್ಪಡುತ್ತಿದ್ದರೂ ಭರತವರ್ಷವೆಂದರೆ ಗಡಿರೇಖೆಗಳಿಲ್ಲದ ಏಕಪ್ರದೇಶ ಎಂಬ ಗೌರವವನ್ನು ಭಾರತ ಗಳಿಸಿತ್ತು. ಜಗತ್ತಿನ ಪಾಶ್ಚಿಮಾತ್ಯ ಮತ್ತು ಪೂರ್ವದ ದೇಶಗಳು ಹಾಗೂ ಅಲ್ಲಿಯ ರಾಜರುಗಳು ಈ ಪ್ರದೇಶವನ್ನೆಲ್ಲ ಹಿಂದುಸ್ತಾನ ಎಂದೇ, ಅದು ಏಕೈಕ ಭೂಖಂಡವೆಂದೇ ಪರಿಗಣಿಸುತ್ತಿದ್ದರು. 19ನೆಯ ಶತಮಾನದಲ್ಲಿ ಬ್ರಿಟಿಷರು ಹಿಂದುಸ್ತಾನಕ್ಕೆ ಬಂದು ಭೌಗೋಳಿಕ ಎಲ್ಲೆಯನ್ನು ನೀಡಿದರು. ಆಧುನಿಕ ಪೌರತ್ವ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆಗಳ ಬೆಳವಣಿಗೆಯು ಈ ಕಾಲಮಾನದಲ್ಲಿ ಆರಂಭವಾಯಿತು. ಶಿಥಿಲಸ್ವರೂಪದ ಈ ಪರಿಕಲ್ಪನೆಗೆ ಭಾರತವು ಜೀವರಸವನ್ನು ತುಂಬಬೇಕಾಗಿತ್ತು.

ಭಾರತದ ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಸೂತ್ರ ಹಿಡಿದವರು ಶೇ.70 ಇದ್ದ ಅನಕ್ಷರಸ್ಥ ಪ್ರಜೆಗಳಿಗೆ ರಾಷ್ಟ್ರೀಯತೆ, ಪೌರತ್ವ, ಮತಾಧಿಕಾರ, ನಾಗರಿಕ ಹಕ್ಕು, ಕರ್ತವ್ಯಗಳ ಬಗ್ಗೆ ಸಮಂಜಸ ಪ್ರಜ್ಞೆ ಒಡಮೂಡುವಂತಹ ಶಿಕ್ಷಣ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಮಾಡಲಿಲ್ಲ.

ರಾಷ್ಟ್ರೀಯತೆಯ ಸಲುವಾಗಿ ತಾವೂ ಶ್ರಮಿಸಬೇಕಾಗುತ್ತದೆ, ತ್ಯಾಗ ಮಾಡಬೇಕಾಗುತ್ತದೆ ಎಂಬ ಅರಿವು ಭಾರತದ ಬಹುಸಂಖ್ಯಾತ ಜನಸಾಮಾನ್ಯರಲ್ಲಿ ಮೂಡಿದ್ದು, 1961ರ ಚೀನೀ ಆಕ್ರಮಣ ಮತ್ತು ಪಾಕಿಸ್ತಾನದ ಜತೆಗಿನ ಯುದ್ಧಪ್ರಸಂಗಗಳಲ್ಲಿ. ಭಾರತದ ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಸೂತ್ರ ಹಿಡಿದವರು ಶೇ.70 ಇದ್ದ ಅನಕ್ಷರಸ್ಥ ಪ್ರಜೆಗಳಿಗೆ ರಾಷ್ಟ್ರೀಯತೆ, ಪೌರತ್ವ, ಮತಾಧಿಕಾರ, ನಾಗರಿಕ ಹಕ್ಕು, ಕರ್ತವ್ಯಗಳ ಬಗ್ಗೆ ಸಮಂಜಸ ಪ್ರಜ್ಞೆ ಒಡಮೂಡುವಂತಹ ಶಿಕ್ಷಣ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಮಾಡಲಿಲ್ಲ.

ಪಂಡಿತ್ ನೆಹರೂ ನಂತರ ಅಧಿಕಾರಕ್ಕೆ ಬಂದ ವಿಭಜಿತ ಕಾಂಗ್ರೆಸ್‍ನ ಸರ್ವಾಧಿಕಾರಿ ಧುರೀಣೆ ಇಂದಿರಾಗಾಂಧಿಯವರ ಪಕ್ಷ ತನ್ನ ಚುನಾವಣೆಯ ಹುರಿಯಾಳುಗಳಾಗಿ ಪ್ರಬಲ ಜಾತಿಗಳು, ಮುಸ್ಲಿಂ, ದಲಿತ, ಅಲ್ಪಸಂಖ್ಯಾತ ಅಹಿಂದ ಎಂದು ಹೆಸರಿಸಿ ಆಯಾ ಗುಂಪಿನಲ್ಲಿ ಹೆಚ್ಚಿಗೆ ಆಯಾ ಜಾತಿಯವರೇ ನೆಲೆಸಿದ ಮತಕ್ಷೇತ್ರಗಳಿಂದ ಆರಿಸಿ ತರತೊಡಗಿತು. ಪ್ರತಿತಂತ್ರವೆಂಬಂತೆ ಉಳಿದ ಪುಡಿ ಪಕ್ಷಗಳೂ ಜಾತಿಯಾಧಾರಿತ ಚುನಾವಣಾ ರಂಗದಲ್ಲಿ ಧುಮುಕಿದವು. ಪ್ರಚಾರ ಮಾಡುವದು, ತದನಂತರದಲ್ಲಿ ಆಳುವ ಅಧಿಕಾರವೂ ಜಾತಿ ವಶವಾಯಿತು.

ಇದರಿಂದಾಗಿ ಸಮಾನತೆ, ಜಾತ್ಯಾತೀತತೆ ಮುಂತಾದ ಪ್ರಜಾಪ್ರಭುತ್ವದ ಬೇರುಗಳು ಸಡಿಲಗೊಂಡವು. ಹುರಿಗಾಳುಗಳಂತಿದ್ದ ಆಯ್ಕೆಗೊಂಡ ಪಕ್ಷದ ಹುರಿಯಾಳುಗಳನ್ನು ಕೇಂದ್ರ-ರಾಜ್ಯಗಳಲ್ಲಿ ಏಕವ್ಯಕ್ತಿ ಅಥವಾ ಇಬ್ಬರು, ಮೂವರಿದ್ದ ಹೈಕಮಾಂಡ್ ನಿಯಂತ್ರಿಸುತ್ತಿತ್ತು. ಇಂತಹ ಸಾಮಾಜಿಕ ರಾಜಕೀಯ ವಾಸ್ತವದಲ್ಲಿ ಜನಮಾನಸದಲ್ಲಿ ಗಾಢವಾದ, ಗಂಭೀರ ರಾಷ್ಟ್ರೀಯ ಭಾವನೆಗಳು ಮೂಡುವದು ಸಹಜ ಕ್ರಿಯೆಯಾಗಲಿಲ್ಲ.

ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಪ್ರಜಾಪ್ರಭುತ್ವಕ್ಕೆ ಸಮ್ಮತವೆನಿಸದ ಕುಟುಂಬ ರಾಜಕಾರಣ ತಲೆಯೆತ್ತಿ ಪ್ರತಿಷ್ಠಿತ ಕುಟುಂಬಗಳು ಅಧಿಕಾರವನ್ನು ಪಡೆಯತೊಡಗಿದವು. ಪೌರತ್ವದಿಂದ ದತ್ತವಾದ ಮತಾಧಿಕಾರವನ್ನು 5ವರ್ಷಗಳಿಗೊಮ್ಮೆ ಚಲಾಯಿಸುವುದನ್ನು ಅರಿತ ಮತದಾರಪ್ರಭು ಮೊದಲಿನ ಒಂದೆರಡು ಚುನಾವಣೆಗಳಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಎಂದು ಕಾಂಗ್ರೆಸ್‍ಗೆ ಕಣ್ಣುಮುಚ್ಚಿ ಮತ ನೀಡುತ್ತಿದ್ದ. ಬಹುಪಾಲು ಜನರಿಗೆ ಯಾವ ವ್ಯಕ್ತಿಗೆ ತಾವು ಮತ ನೀಡಿದ್ದಾರೆಯೋ ಅವರ ಪರಿಚಯ ಹೋಗಲಿ, ಹೆಸರೂ ಗೊತ್ತಿರಲಿಲ್ಲ. ಮತ ಯಾರಿಗೆ ಎಂದಾಗ ಕಾಂಗ್ರೆಸ್ ಕಾಂಗ್ರೆಸ್ ಎಂಬ ಕೂಗು; ಓದಲು ಬಾರದ ಅವನಿ/ಳಿಗೆ ಕಾಂಗ್ರೆಸ್ ಚಿಹ್ನೆಯಷ್ಠೆ ಗೊತ್ತಿರುತ್ತಿತ್ತು. ಕಾಂಗ್ರೆಸ್ಸಿಗಾಗಿ ಸ್ವಾತಂತ್ರ್ಯಕ್ಕಾಗಿ ತ್ಯಾಗಮಾಡಿದ ತಲೆಮಾರಿನ ಜನರಿಗೆ, ಉಳಿದವರಿಗೆ ಅಧಿಕಾರದ ರುಚಿ ಹತ್ತಿದ ಮೇಲೆ ಗೆಲ್ಲುವ ಆಮಿಷಗಳ ಬಲೆ ಚುನಾವಣೆಗಳಲ್ಲಿ ಜಾತಿ ಹಣ ಹೆಂಡ, ಸಂಬಂಧಗಳ ರೂಪಗಳಲ್ಲಿ ಗೋಚರಿಸತೊಡಗಿತು. ಅರ್ಹರು ಆರಿಸಿಬರುವ ಆಶಯ ಕ್ಷೀಣವಾಯತೆಂದು ಕೆಲವು ಮತದಾರರು ಚುನಾವಣೆಗಳಲ್ಲಿ ಭಾಗವಹಿಸುವುದನ್ನೇ ಬಿಟ್ಟರು.

ಭ್ರಷ್ಠಚಾರದ ಆಡಳಿತ, ಕುಟುಂಬ ಕೇಂದ್ರಿತ ಅಧಿಕಾರವನ್ನು ಪೌರತ್ವ ಶಿಕ್ಷಣ ಹೊಂದಿದ ಮತದಾರ ಸಾಮಾನ್ಯವಾಗಿ ಒಪ್ಪುವುದಿಲ್ಲ.

ಪೌರತ್ವದ ಹಕ್ಕು ಚಲಾಯಿಸುವಾಗ ಯೋಗ್ಯವ್ಯಕ್ತಿಗಳ ಆಯ್ಕೆಯ ಸ್ವಾತಂತ್ರ್ಯವನ್ನು ಜಾಗೃತಗೊಳಿಸುವ, ಮತದಾರರಲ್ಲಿ, ಸಾರಾಸಾರಾ ವಿಚಾರಮಾಡಿ ಮತದಾನ ಮಾಡಬೇಕೆಂಬ ಅರಿವು ಮೂಡಿಸುವ ಶಿಕ್ಷಣ, ಪ್ರಚಾರಕ್ರಿಯೆಯೂ ಪ್ರಾರಂಭವಾಯಿತು. ಅಧಿಕಾರದಲ್ಲಿ ಇರಲೇಬೇಕೆಂದು ನ್ಯಾಯಾಂಗವನ್ನು ಧಿಕ್ಕರಿಸಿ, ತುರ್ತುಪರಿಸ್ಥಿತಿಯನ್ನು ತಂದು ಅಧಿಕಾರಕ್ಕೆ ಅಂಟಿಕೊಂಡ ಇಂದಿರಾಗಾಂಧಿ ಮತ್ತವರ ಪಕ್ಷವನ್ನು ಕೇಂದ್ರಮಟ್ಟದಲ್ಲಿ ಮತದಾರ ಧಿಕ್ಕರಿಸಿದಾಗ ಭಾರತದ ಅಧಿಕಾರ ರಾಜಕಾರಣದಲ್ಲಿ ಮತ್ತೊಂದು ಯುಗ ಪ್ರಾರಂಭವಾಯಿತು.

ಆರಿಸಿ ಬಂದವರಲ್ಲಿಯ ಅನೈಕ್ಯತೆ ತಿಕ್ಕಾಟ, ಒಳಜಗಳಗಳನ್ನು ಕಂಡು ಮತದಾರ ಮತ್ತೆ ಇಂದಿರಾಗಾಂಧಿಯವರನ್ನೇ ಅಧಿಕಾರಕ್ಕೆ ತರುತ್ತಾನೆ. ಪೌರಪ್ರಜ್ಞೆಯನ್ನು ಎಚ್ಚರಿಸುವ ಕ್ರಿಯೆ ಪ್ರತಿ ಚುನಾವಣಾ ಸಂದರ್ಭದಲ್ಲಿ ಜರುಗುತ್ತದೆ. ಭ್ರಷ್ಠಚಾರದ ಆಡಳಿತ, ಕುಟುಂಬ ಕೇಂದ್ರಿತ ಅಧಿಕಾರವನ್ನು ಪೌರತ್ವ ಶಿಕ್ಷಣ ಹೊಂದಿದ ಮತದಾರ ಸಾಮಾನ್ಯವಾಗಿ ಒಪ್ಪುವುದಿಲ್ಲ. ಇಂತಹ ಪ್ರಸಂಗಗಳಲ್ಲಿ ಬಹುಜನರಿಗೆ ಜಾತಿ, ಹಣ, ಹೆಂಡಗಳೆಂಬ ತ್ರಿಕೂಟ ಸಂಗತಿ ಅಷ್ಠೆoದು ಪರಿಣಾಮ ಬೀರುವುದಿಲ್ಲ ಎಂಬುದು ರಾಜೀವಗಾಂಧಿಯವರನ್ನೂ ಹಿಂದೆ ಸರಿಸಿದ ಪ್ರಸಂಗ, ಮಾಯಾವತಿ, ಲಾಲೂಪ್ರಸಾದ್ ಯಾದವರನ್ನು ಮತದಾರ ಬಿಟ್ಟುಕೊಟ್ಟ ಸನ್ನಿವೇಶಗಳು ತಿಳಿಸುತ್ತವೆ.

ಪೌರತ್ವದ ವ್ಯಕ್ತಿಗತ ಶಕ್ತಿ ಸಾರ್ವಭೌಮ. ಅದು ಸರ್ವಾಧಿಕಾರಿಯ ತಾಕತ್ತಿಗಿಂತ ಬಲಶಾಲಿಯಾಗಿರುತ್ತದೆ. ರಾಷ್ಟ್ರೀಯತೆಯ ಅಳುಕಿನಿಂದಾಗಿ ಸೋನಿಯಾಗಾಂಧಿ ಜಾಣ್ಮೆಯಿಂದ ಪ್ರಧಾನಮಂತ್ರಿ ಗದ್ದುಗೆ ಏರದೆ ಅಧಿಕಾರವನ್ನು ಅಪರೋಕ್ಷವಾಗಿ ಅನುಭವಿಸಿದರು. ಪ್ರಜಾಪ್ರಭುತ್ವದಲ್ಲಿ ರಾಷ್ಟ್ರೀಯತೆ ಮತ್ತು ಪೌರತ್ವ ಸ್ವಾಭಾವಿಕ, ಸಹಜ ಮತ್ತು ಆನುಷಂಗಿಕ ಎಂಬ ಪರಿಕಲ್ಪನೆಗೆ ಭಾರತದ ರಾಜಕಾರಣ ಇಂಬು ನೀಡಲಿಲ್ಲ. ವೈಚಾರಿಕ ಪ್ರಜ್ಞೆಯನ್ನು ಕುದುರಿಸಿ ಭಾರತದ ಸಾಂಪ್ರದಾಯಿಕ ಧರ್ಮಾಚರಣೆಗಳನ್ನು ಧಿಕ್ಕರಿಸಿದ ತಮಿಳುನಾಡಿನ ಪೆರಿಯಾರ ಪಕ್ಷ ಸಿನಿಮಾ ನಟ-ನಟಿಯರ ಆಡಂಬೋಲವಾಯಿತು. ಸ್ವಾಭಿಮಾನ ಹಾಗೂ ಭಾಷಪ್ರೇಮದ ನಟ ಎನ್‍ಟಿಆರ್ ಪಕ್ಷ ಅಧಿಕಾರ ಲಾಲಸೆಯಿಂದಾಗಿ ಒಡೆದುಹೋಗಿ ಎರಡು ಆಂಧ್ರರಾಜ್ಯಕ್ಕೆ ಕಾರಣವಾಯಿತು. ಪೌರಪ್ರಜ್ಞೆಯನ್ನು ಎಚ್ಚರದಲ್ಲಿಡುವ ಕ್ರಿಯೆಯನ್ನು ನಿರಂತರವಾಗಿ ವಿಚಾರವಂತರು ಮಾಡಬೇಕಾಗಿದೆ.

ಮೋದಿಯವರ ಪ್ರಾಬಲ್ಯವನ್ನು ಕುಂದಿಸಲು ಸಿಎಎ, ಎನ್‍ಆರ್‍ಸಿ ವ್ಯಾಖ್ಯಾನ, ಮರುವ್ಯಾಖ್ಯಾನ, ಸುಳ್ಳುವ್ಯಾಖ್ಯಾನಗಳ ಜಾತ್ರೆ ಜರುಗುತ್ತಿದೆ. ಅಖಂಡ ಭಾರತದ ವಿವಿಧ ಪ್ರದೇಶಗಳಲ್ಲಿ ಜನಿಸಿದರೂ ಜಾತಿಯಾಧಾರಿತ ಭಾರತದ ವಿಭಜನೆಯಿಂದಾಗಿ ಹುಟ್ಟುಪ್ರದೇಶದಲ್ಲಿಯ ಕಿರುಕುಳಗಳಿಂದಾಗಿ ನೆಲೆತಪ್ಪಿಸಿಕೊಂಡ ಭಾರತ ಸಂಜಾತರಿಗೆ ಪೌರತ್ವ- ನಾಗರಿಕ ಹಕ್ಕುಗಳನ್ನೊದಗಿಸುವ ಮಾನವೀಯ ಕ್ರಿಯೆಯನ್ನು ಆದ್ಯತೆಯ ಮೇರೆಗೆ ಅನುಷ್ಠನಗೊಳಿಸಬೇಕಾಗಿದೆ.

ಜಮ್ಮು-ಕಾಶ್ಮೀರ, ವಾಯವ್ಯ ಭಾರತದ ಅಸ್ಸಾಮ್, ಮಣಿಪುರ, ಮಿಜೊರಾಂಗಳಲ್ಲಿ ರಾಷ್ಟ್ರೀಯತೆ-ಪೌರತ್ವಗಳ ಪರೀಕ್ಷೆ ನಡೆದಿದೆ. ಈ ಹಂತದಲ್ಲಿ ಭ್ರಷ್ಠಚಾರರಹಿತ ಪಾರದರ್ಶಕ ಕೇಂದ್ರಾಡಳಿತಕ್ಕೆ ಮತದಾರ ಬಂದಿದ್ದಾನೆ. ಮೋದಿ ಜಾತಿಲೆಕ್ಕಾಚಾರದ ಮತದಾನದ ಗಣಿತವನ್ನು ಅಳಿಸಿಹಾಕಿದ್ದಾರೆ. ಅಭಿವೃದ್ಧಿ, ರಾಷ್ಟ್ರೀಯತೆಯ ಪಾಠವನ್ನು ಆರಂಭಿಸಿದ್ದಾರೆ. ಮೋದಿಯವರ ಪ್ರಾಬಲ್ಯವನ್ನು ಕುಂದಿಸಲು ಸಿಎಎ, ಎನ್‍ಆರ್‍ಸಿ ವ್ಯಾಖ್ಯಾನ, ಮರುವ್ಯಾಖ್ಯಾನ, ಸುಳ್ಳುವ್ಯಾಖ್ಯಾನಗಳ ಜಾತ್ರೆ ಜರುಗುತ್ತಿದೆ. ಅಖಂಡ ಭಾರತದ ವಿವಿಧ ಪ್ರದೇಶಗಳಲ್ಲಿ ಜನಿಸಿದರೂ ಜಾತಿಯಾಧಾರಿತ ಭಾರತದ ವಿಭಜನೆಯಿಂದಾಗಿ ಹುಟ್ಟುಪ್ರದೇಶದಲ್ಲಿಯ ಕಿರುಕುಳಗಳಿಂದಾಗಿ ನೆಲೆತಪ್ಪಿಸಿಕೊಂಡ ಭಾರತ ಸಂಜಾತರಿಗೆ ಪೌರತ್ವ- ನಾಗರಿಕ ಹಕ್ಕುಗಳನ್ನೊದಗಿಸುವ ಮಾನವೀಯ ಕ್ರಿಯೆಯನ್ನು ಆದ್ಯತೆಯ ಮೇರೆಗೆ ಅನುಷ್ಠನಗೊಳಿಸಬೇಕಾಗಿದೆ. ಇದಕ್ಕಾಗಿ ವಿರಚಿತಗೊಂಡ ಕಾಯಿದೆಗಳ ಸಾಂವಿಧಾನಿಕ ಸಮರ್ಪಕತೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಸಂವಿಧಾನದ ಆಶಯಗಳ ಮೌಲ್ಯಗಳ ನೈತಿಕ ಪರಿಶೀಲನೆಯನ್ನು ಸರ್ವೋಚ್ಚ ನ್ಯಾಯಾಲಯ ಮಾಡಬೇಕು.

ಲೋಕಸಭೆಯಲ್ಲಿ ಮೂಕವಾಗಿದ್ದುಕೊಂಡು, ಸಮರ್ಪಕ ಕಾಲದಲ್ಲಿ ಅದಕ್ಕೆ ತಿದ್ದುಪಡಿಗಳನ್ನು ಮಂಡಿಸದೆ ಮತದಾನದ ಅವಧಿಯ ಸಭೆಗೆ ಗೈರುಹಾಜರಾಗಿ ಈಗ ಬೀದಿಯಲ್ಲಿ ಈ ಮಸೂದೆಗಳ ಕುರಿತು ರಂಪಾಟ ಮಾಡುತ್ತಿರುವ ರಾಜಕಾರಣಿಗಳಿಂದ ಏನು ಸಾಧಿಸಲು ಆದೀತು?

ಪ್ರಬಲ ರಾಷ್ಟ್ರೀಯತೆಯನ್ನು ಸ್ವಾರ್ಥ ಅಧಿಕಾರಕ್ಕಾಗಿ ದುರುಪಯೋಗಪಡಿಸಿಕೊಂಡ ಸರ್ವಾಧಿಕಾರಿಗಳನ್ನು ಯಾವುದೇ ರಾಷ್ಟ್ರ ಕ್ಷಮಿಸುವುದಿಲ್ಲ. ಪ್ರಧಾನಮಂತ್ರಿ ಮೋದಿಯವರಿಗೆ ಇದು ತಿಳಿದಿದೆಯಾದರೂ, ನಾವೂ ಜಾಗೃತರಾಗಿದ್ದುಕೊಂಡು ಸಂವಿಧಾನವನ್ನು ರಕ್ಷಿಸೋಣ. ಅರ್ಧಸತ್ಯವನ್ನು ಸತ್ಯವೆಂದು ಬಿಂಬಿಸುವ, ಸತ್ಯವನ್ನು ಅರ್ಧಸತ್ಯವೆಂದು ಪ್ರಚಾರಮಾಡುವ ವಾದಗಳಿಗೆ ಸುಪ್ರೀಂಕೋರ್ಟ್ ಭಾಷ್ಯವನ್ನು ಬರೆಯಲಿ. ಜನಶಕ್ತಿ ಪೋಲಾಗುತ್ತಿರುವುದು ತಪ್ಪಲಿ

Leave a Reply

Your email address will not be published.