ಪೌರಾಣಿಕ ಪ್ರತಿಮೆಗಳಿಗೂ ಗ್ಯಾಡ್ಜೆಟ್ಗಳೇ ಪ್ರೀತಿ!

ಕಲಬುರಗಿಯ ಯುವ ಕಲಾವಿದ ಡಾ.ಷಾಹಿದ್ ಪಾಶಾ ಅವರ ಕಲಾಕೃತಿಗಳ ರಾಮಾಯಣಮಹಾಭಾರತ ಕಥಾನಕಗಳು ಆಧುನಿಕ ಬದುಕಿನ ಹೊಸ ವಿನ್ಯಾಸಗಳಾಗಿವೆ.

-ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ

ರಾತ್ರಿ ಹೊತ್ನಲ್ಲಿ ಬಸವಣ್ಣ ದೇವರಗುಡಿಯ ಹಜಾರದಲ್ಲಿ ಅಪ್ಪಟ ಜನಪದ ಶೈಲಿಯ ಹಾಡು-ಮಾತುಕತೆಯ ಹಿನ್ನೆಲೆಯಲ್ಲಿ ಕಿಳ್ಳೇಕ್ಯಾತರು ಪ್ರದರ್ಶಿಸುತ್ತಿದ್ದ ತೊಗಲುಗೊಂಬೆಯಾಟಗಳು ಎಲ್ಲ ಧರ್ಮದ ಜನಪದರನ್ನು ಒಗ್ಗೂಡಿಸುತ್ತಿದ್ದವು. ರಾಮಾಯಣ-ಮಹಾಭಾರತ ದೃಶ್ಯ ಕಥಾನಕಗಳನ್ನು ತಲೆಯ ಮೇಲೆ ಹೊತ್ತುಕೊಂಡು ಊರೂರು ಅಲೆಯುವ ಕಿಳ್ಳೇಕ್ಯಾತರ ಅಭಿವ್ಯಕ್ತಿಯಲ್ಲಿ ಯಾವುದೇ ಮೈಲಿಗೆಯ ವಾಸನೆಯನ್ನು ಅಂದಿನ ಜನಪದರು ಗ್ರಹಿಸುತ್ತಿದ್ದಿಲ್ಲ ಎಂಬುದು ಮಾಸದ ನೆನಪು. ಆದರೆ ಇಂದು ಸೃಜನಶೀಲ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮರು ವಿಮರ್ಶಿಸಬಹುದಾದ ಭಯಗ್ರಸ್ತ ವಾತಾವರಣ ಈ ದೇಶದಲ್ಲಿದ್ದರೂ, ಕಲಬುರಗಿಯ ಯುವ ಕಲಾವಿದ ಡಾ.ಷಾಹಿದ್ ಪಾಶಾ ಅವರ ಕಲಾಕೃತಿಗಳ ರಾಮಾಯಣ-ಮಹಾಭಾರತ ಕಥಾನಕಗಳು ಆಧುನಿಕ ಬದುಕಿನ ಹೊಸ ವಿನ್ಯಾಸಗಳಾಗಿವೆ.

ಕಲ್ಯಾಣ ಕರ್ನಾಟಕದಲ್ಲಿ ಒಂದು ಕಾಲಕ್ಕೆ ಪ್ರಚಲಿತದಲ್ಲಿದ್ದ ದಖ್ಖನಿ ಕಲೆ ಇಂದು ನೇಪಥ್ಯ ಸೇರಿಕೊಂಡ ಕಾಲಘಟ್ಟದಲ್ಲಿ ವಿಜಯ ಹಾಗರಗುಂಡಗಿಯಂತಹ ಕಲಾಸಾಧಕರು ಬಿಸಿಲನಾಡಿನ ಸಾಂಪ್ರದಾಯಿಕ ಚಿತ್ರಶೈಲಿಗೆ ಮರುಜೀವ ನೀಡಿದ ಸಂದರ್ಭ ಚಾರಿತ್ರಿಕವೇ. ಈ ಮಧ್ಯೆಯೇ ಡಾ.ಷಾಹಿದ್ ಪಾಶಾರಂತಹ ಯುವ ಕಲಾವಿದರು ಬಿಸಿಲನಾಡಿನ ಸಾಂಪ್ರದಾಯಿಕ ಕಲೆಯ ಕೊಂಡಿಯನ್ನು ಪುನರಪಿ ಜೋಡಿಸುವ ನಿಟ್ಟಿನಲ್ಲಿ ರಚಿಸಿರುವ ಕಲಾಕೃತಿಗಳ ಪಾತ್ರ ಅನನ್ಯ. ಸಾಹಿತ್ಯದಲ್ಲಿ ಕುವೆಂಪು, ದರಾ ಬೇಂದ್ರೆ ‘ಓದು’ವಿಕೆಯಂತೆಯೇ ಪಾಶಾರವರ ಕಲಾಕೃತಿಗಳನ್ನು ಸಹ ದೃಶ್ಯಾತ್ಮಕವಾಗಿ ಓದುವ ಅಗತ್ಯವಿದೆ.

‘ಬೇಬಿ ಸ್ಟ್ರೋಲರ್ ಆನ್ ಕೃಷ್ಣ’ ಕಲಾಕೃತಿಯಲ್ಲಿ ಯಶೋದೆ ಕೃಷ್ಣನನ್ನು ತಳ್ಳುಗಾಡಿಯಲ್ಲಿ ವಿಹಾರಕ್ಕೆ ಕರೆದುಕೊಂಡು ಹೋಗುತ್ತಿರುವ ಸಂದರ್ಭ. ಕೃಷ್ಣ ಮೊಬೈಲ್‍ನಲ್ಲಿ ಗೋವುಗಳ ಚಿತ್ರಗಳನ್ನು ಸೆರೆಹಿಡಿಯುವದರಲ್ಲಿ ತಲ್ಲೀನ! ಆಕಾಶದಲ್ಲಿ ಖೇಚರರು ಪುಷ್ಪಧಾರೆಯರೆಯುತ್ತಿದ್ದಾರೆ. ‘ಮೆಸೆಂಜರ್’ ಶೀರ್ಷಿಕೆಯ ಚಿತ್ರದಲ್ಲಿ ದೇವಮಾನವನೊಬ್ಬ ಎಡಗೈಯಲ್ಲಿ ಹಸ್ತಪ್ರತಿಗಳನ್ನು ಹಿಡಿದುಕೊಂಡು ಮೊಬೈಲ್ ಮೂಲಕ ಖೇಚರರು ಕಳಿಸುತ್ತಿರುವ ಸಂದೇಶಗಳನ್ನು ಹಸನ್ಮುಖನಾಗಿ ವೀಕ್ಷಿಸುತ್ತಿರುವ ಹಾಗೆ ಚಿತ್ರಿಸಿದ್ದಾರೆ.

‘ವಿತ್ ಎಂಟರ್‍ಟೈನ್ಮೆಂಟ್’ ಶೀರ್ಷಿಕೆಯ ಕಲಾಕೃತಿಯಲ್ಲಿ ಖೇಚರರು ಮೊಬೈಲ್ ಮೂಲಕ ಮನೋರಂಜಿಸುತ್ತಿರುವಂತೆ ಚಿತ್ರಿತವಾಗಿದ್ದರೆ, ನಾರದ ವೇಷಧಾರಿಯಂತಹ ಆಕೃತಿ ಸೆಲ್ಫೀಸ್ಟಿಕ್‍ಗೆ ಮೊಬೈಲ್ ಹಾಕಿಕೊಂಡು ಪ್ರಿಯತಮೆಯೊಂದಿಗೆ ಸಂಭ್ರಮಿಸುತ್ತಿರುವ ಹಾಗೆ ಚಿತ್ರಿತವಾಗಿದ್ದಾರೆ. ಯಶೋದೆ ರೈಲುನಿಲ್ದಾಣದಲ್ಲಿ ಲಗ್ಗೇಜು ಹೊತ್ತುಕೊಂಡ ಕೂಲಿಯವನ ಜೊತೆ ಕೃಷ್ಣನ ಚಿತ್ರವನ್ನು ಮೊಬೈಲ್‍ನಲ್ಲಿ ಸೆರೆಹಿಡಿಯುತ್ತಿರುವ ಚಿತ್ರದಲ್ಲಿ ಭಾವಸ್ಫುರಣೆಗೆ ಆದ್ಯತೆ. ‘ಮದರ್ ಅಂಡ್ ಚೈಲ್ಡ್’ ಶೀರ್ಷಿಕೆಯ ಚಿತ್ರದಲ್ಲಿ ಕೃಷ್ಣ ಮೊಬೈಲ್‍ನಲ್ಲಿ ಹಾಡುಗಳನ್ನು ಹಾಕಿ ಯಶೋದೆಯನ್ನು ರಂಜಿಸುತ್ತಿದ್ದಾನೆ. ‘ಪ್ಯಾರಾಡೈಸ್’ ಕಲಾಕೃತಿಯಲ್ಲಿ ನಿಜಾಮ ದೊರೆಯೊಬ್ಬ ಲ್ಯಾಪ್‍ಟಾಪ್‍ನಲ್ಲಿ ತಲ್ಲಿನನಾಗಿದ್ದಾನೆ. ಎಡಗೈಯಲ್ಲಿ ಪಾನೀಯ, ಹಿಂಭಾಗದಲ್ಲಿ ಹುಕ್ಕಾ ನಿಲುವು ಜೊತೆಗೆ ಪೆಪ್ಸಿ ಕೂಡ ಚಿತ್ರಿಸಿದ್ದಾರೆ.

ಎಂದಿನಂತೆ ಸಾಂಪ್ರದಾಯಿಕ ರಚನಾ ಶೈಲಿಯ ಮುಂದುವರೆದ ಭಾಗವಾಗಿರುವ ಅವರ ಚಿತ್ರಗಳಲ್ಲಿ ಏಕಪ್ರಕಾರವಾದ ವರ್ಣಲೇಪನ, ಚಿತ್ರದ ಒಟ್ಟಂದಕ್ಕೆ ಶಿಸ್ತು ಮತ್ತು ಮೌಲ್ಯವನ್ನು ತಂದುಕೊಡುತ್ತದೆ. ಷಾಹಿದ್ ಪ್ರಖರ ವರ್ಣಗಳನ್ನು ನಾಜೂಕಿನಿಂದಲೇ ನಿರ್ವಹಿಸಿರುವ ರೀತಿ ಬೆರಗು ಮೂಡಿಸುತ್ತದೆ. ‘ಮೆಸೆಂಜರ್’ ಕಲಾಕೃತಿಗಳಂತಹ ಸರಣಿಯಲ್ಲಿ ಸುಜಾತಾ ಬಜಾಜ್‍ರಂತೆ ದೇವನಾಗರಿ ಲಿಪಿಯನ್ನು ಹಿನ್ನೆಲೆಯಲ್ಲಿ ಮೈವಳಿಕೆಯಂತೆ ಚಿತ್ರಿಸುವ ಪ್ರಯೋಗ ಮಾಡಿದ್ದಾರೆ. ಇದೇ ಸರಣಿಯ ಚಿತ್ರಗಳಲ್ಲಿ ಖೇಚರರನನ್ನು ಮೈವಳಿಕೆಯ ಹಾಗೆ ಹಿನ್ನೆಲೆಯಲ್ಲಿ ದುಡಿಸಿಕೊಳ್ಳುತ್ತಲೇ, ಪ್ರಸ್ತುತ ಆಧುನಿಕ ಕಲಾಪ್ರಯೋಗಗಳಲ್ಲಿ ಮೈವಳಿಕೆ (Texture) ಗೆ ಇರುವ ಮಹತ್ವ ಮತ್ತು ಮೌಲ್ಯವನ್ನು ಸಾರುತ್ತವೆ ಇವರ ಕಲಾಕೃತಿಗಳು.

ದಖ್ಖನಿ ಚಿತ್ರಶೈಲಿಯ ಪ್ರಭಾವಕ್ಕೊಳಗಾಗಿರುವ ಪಾಶಾರವರ ಕಲಾಕೃತಿಗಳಿಗೆ ಸಾಂಪ್ರದಾಯಿಕ ವಿನ್ಯಾಸಗಳೇ ಜೀವಾಳ. ಇಂತಹ ಆಕೃತಿಗಳನ್ನೇ ಆಧುನಿಕವಾಗಿ ದುಡಿಸಿಕೊಳ್ಳುವ ಬಗೆಯೂ ಅನನ್ಯ. ಪ್ರಣೀತ ಸಂಯೋಜನೆಯಲ್ಲೂ ವರ್ಣಗಳ ತಾಜಾತನ ಉಳಿಸಿಕೊಳ್ಳುವಲ್ಲಿ ಪಾಶಾ ನಡೆ ಅನನ್ಯ. ಹಿಂದೂ ಧರ್ಮಗ್ರಂಥಗಳ ರೂಪಕಗಳೇ ಇವರ ಕಲಾಕೃತಿಗಳಲ್ಲಿನ ಹೂರಣ, ಆಧುನಿಕ ಗ್ಯಾಡ್ಜೆಟ್ ವಿನ್ಯಾಸಗಳೇ ಕಲಾಕೃತಿಗಳ ವಿಸ್ಮಯವಷ್ಟೇ ಅಲ್ಲ, ದೃಶ್ಯಕಾವ್ಯದ ಪ್ರಾಸಬದ್ಧ ಸಂಯೋಜನೆಗಳಿವು.

ಇವರ ಈ ಸರಣಿಯ ಕಲಾಕೃತಿಗಳ ಪ್ರದರ್ಶನ ಈಗಾಗಲೇ ಎರಡು ಬಾರಿ ಅರಬ್ ರಾಷ್ಟ್ರಗಳಲ್ಲಿ ಪ್ರದರ್ಶನ ಕಂಡು, ಅರಬರೂ ಸಹ ರಾಮಾಯಣ-ಮಹಾಭಾರತದ ದೃಶ್ಯರೂಪಕಗಳಿಗೆ ‘ಫಿದಾ’ ಹೇಳಿದ್ದಲ್ಲದೇ, ಪಾಶಾರವರ ಕಲಾಪ್ರತಿಭೆಗೆ ಹುಬ್ಬೇರಿಸಿ, ಅಂತರ್ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಸಹ ಪ್ರದಾನಿಸಿದ್ದು ಕನ್ನಡದ ಹೆಮ್ಮೆ!

Leave a Reply

Your email address will not be published.