ಪ್ರಕೃತಿ ಮತ್ತು ನಾನು

ಮಾನವ ಕುಲದ ಉಳಿವಿಗೂ ಏಳಿಗೆಗೂ ಪ್ರಕೃತಿಯ ಮಹತ್ವವನ್ನು ತಿಳಿದುಕೊಂಡು ನಾವೆಲ್ಲರೂ ಸ್ವಪ್ರೇರಣೆಯಿಂದ ನಮ್ಮ ಕಿರು ಪ್ರಯತ್ನಗಳನ್ನು ಮಾಡಬೇಕು. ಅದು ನಮ್ಮೆಲ್ಲರ ಜೀವನಕ್ರಮವಾದರೆ ಮಾತ್ರ ಸಫಲತೆ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿರುವ ಲೇಖಕರು ತಮ್ಮ ಸ್ವಯಂ ಅನುಭವ ಮತ್ತು ಪ್ರಯೋಗಗಳನ್ನು ಹಂಚಿಕೊಂಡಿದ್ದಾರೆ; ಇತರರಿಗೆ ಮಾದರಿ ಒದಗಿಸಿದ್ದಾರೆ.

ನಾನೊಬ್ಬ ಕೃಷಿ ಹಿನ್ನೆಲೆಯಿಂದ ಬಂದ ಆದರೆ ಕೃಷಿಯನ್ನು ಜೀವನಾಧಾರ ಮಾಡಿಕೊಳ್ಳದವನು ಎಂದು ಮೊದಲಿಗೇ ಹೇಳಿಕೊಂಡು ಮುಂದುವರಿಯುತ್ತೇನೆ. ಪ್ರಕೃತಿಯನ್ನು ನಾವು ಪರಿಭಾವಿಸುವ ರೀತಿಯನ್ನು ನಮ್ಮ ಹಿನ್ನೆಲೆ ಪ್ರಭಾವಿಸುತ್ತದೆ ಎಂದು ನನ್ನ ನಂಬಿಕೆ. ನನ್ನ ಆರಂಭಿಕ ವರ್ಷಗಳು ಪ್ರಕೃತಿಯ ಮಡಿಲಿನಲ್ಲಿ ಕಳೆದಿರುವುದರಿಂದ ಪ್ರಕೃತಿಯ ಒಂದು ವ್ಯಕ್ತ ಸ್ವರೂಪ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ. ಪ್ರಕೃತಿ ಎಂದರೆ ನಮ್ಮ ಸುತ್ತು ಕಾಣುವ ಅನುಭವಕ್ಕೆ ಎಟಕುವ ಪ್ರತಿಯೊಂದೂ ಸೇರುತ್ತದೆ. ನೆಲ, ಜಲ, ಪ್ರಾಣಿ, ಪಕ್ಷಿ, ಜೀವ ಸಂಕುಲ, ಗಾಳಿ, ಬೆಳಕು, ಆಕಾ಼ಶ, ಸೂರ್ಯ, ಚಂದ್ರ, ನಕ್ಷತ್ರ, ಹವೆ, ಕಡಲು, ಖನಿಜ ಸಂಪತ್ತು ಎಲ್ಲವೂ ಈ ಶಬ್ದದಲ್ಲಿ ಅಡಕಗೊಂಡಿವೆ. ಈ ಘಟಕಗಳಲ್ಲಿ ಯಾವುದಾದರೂ ಒಂದು ಇಲ್ಲವೆಂದು ಊಹಿಸಿಕೊಂಡರೆ ನಮ್ಮ ಬದುಕು ಎಷ್ಟು ದುಸ್ತರವಾಗಬಹುದು ಎಂಬುದು ಮನನವಾದೀತು. ಪ್ರಕೃತಿ ಒಂದು ಶಕ್ತಿ; ಪ್ರಕೃತಿ ನಮ್ಮನ್ನು ಪ್ರಬಲವಾಗಿ ಪ್ರಭಾವಿಸುತ್ತದೆ ಎಂದೂ ನನಗೆ ಅನಿಸುತ್ತದೆ. ಪಾರಮಾರ್ಥಿಕವಾಗಿ ಮಾತನಾಡುವಾಗ ಮನುಷ್ಯ ಪಂಚಭೂತಗಳು ಸೇರಿದ ಪ್ರಕೃತಿಯಿಂದ ಹುಟ್ಟಿ ಸಾಯುವಾಗ ಪ್ರಕೃತಿಯಲ್ಲಿ ಲೀನವಾಗುತ್ತಾನೆ ಎನ್ನುವ ರೂಢಿಯಿದೆ. ಇದು ಪ್ರಕೃತಿಯನ್ನು ನಮ್ಮನ್ನು ಇನ್ನೂ ಹತ್ತಿರಕ್ಕೆ ಸೆಳೆಯುತ್ತದೆ.  ಹೀಗೆ ಮನುಷ್ಯ ಮತ್ತು ಪ್ರಕೃತಿಗೆ ಅವಿನಾಭಾವ ಸಂಬಂಧ. ಪ್ರಕೃತಿ ಎಲ್ಲಾ ಜೀವಗಳಿಗೂ ದೈವದತ್ತವಾಗಿ ಬಂದ ಬಳುವಳಿ.

ಪ್ರಕೃತಿಯಿಲ್ಲದೆ ಬದುಕಿಲ್ಲ

ಪ್ರಕೃತಿ ನಮಗೆ ಬೇಕಾಗುವ ಸಕಲವನ್ನೂ ಕೊಡುತ್ತದೆ. ಎಲ್ಲಾ ಭೌತಿಕ ವಸ್ತುಗಳಿಗೂ ಪ್ರಕೃತಿಯೇ ಮೂಲ. ನಮ್ಮ ಉಸಿರು, ಆಹಾರ, ಬಟ್ಟೆ-ಬರೆ, ಲೋಹಗಳು, ಇಂಧನ ತೈಲಗಳು, ಔಷಧಿಗಳು, ಮರಮಟ್ಟು, ಮನೆಯ ಹಂಚು ಸಕಲವೂ ಪ್ರಕೃತಿಯ ಕೊಡುಗೆಗಳೇ. ಆದ್ದರಿಂದ ನಮ್ಮ ಬದುಕಿನೊಂದಿಗೆ ಪ್ರಕೃತಿ ಹಾಸುಹೊಕ್ಕಾಗಿದೆ. ಮನುಷ್ಯನನ್ನೂ ಒಳಪಡಿಸಿ ಎಲ್ಲಾ ಜೀವ ಜಂತುಗಳಿಗೆ ಉಸಿರೇ ಜೀವ. ನಾವು ಉಸಿರಾಡುವ ಗಾಳಿ, ನಾವು ಉಣ್ಣುವ ಆಹಾರದ ಮೂಲ ಪ್ರ‍ಕೃತಿಯೇ ಆಗಿದೆ. ನಾವು ಉಸಿರಾಡಿ ಉಂಟುಮಾಡುವ ಅಂಗಾರಾಮ್ಲವನ್ನು ಶುದ್ಧಿಗೊಳಿಸುವ ವ್ಯವಸ್ಥೆಯಾಗಿ ಹಸಿರು ಗಿಡಮರಗಳನ್ನು ಬೆಳೆಸಿದ್ದು ಕೂಡ ಪ್ರಕೃತಿಯೇ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಭಾವನಾತ್ಮಕವಾಗಿ ಪ್ರಕೃತಿ ಒಂದು ಆಸರೆ ಮತ್ತು ಭದ್ರತೆಯ ಭಾವವನ್ನು ಕೊಡುವುದು ಮುಖ್ಯವಾಗುತ್ತದೆ. ಆದ್ದರಿಂದ ಪ್ರಕೃತಿ ಮಹತ್ವದ್ದು. 

ನಮ್ಮ ಜೀವನವನ್ನು ಸುಗಮಗೊಳಿಸಲು ನಾವು ತಂತ್ರಜ್ಞಾನದ ಮೂಲಕ ಹಲವು ಅನುಕೂಲಗಳನ್ನು ಕಂಡುಕೊಂಡಿದ್ದೇವೆ. ವಾಹನಗಳು, ಹವಾ ನಿಯಂತ್ರಿತ ವ್ಯವಸ್ಥೆ, ವಿದ್ಯುತ್‌ಶಕ್ತಿ, ಕೃಷಿ ಮಾಡುವ ಉಪಕರಣಗಳು, ಒಳ್ಳೆಯ ಬಟ್ಟೆಬರೆಗಳು, ಬೆಚ್ಚಗೆ ಹೊದ್ದುಕೊಳ್ಳಲು ಚಾದರ ಎಲ್ಲವೂ ಪ್ರಕೃತಿಯ ಕೊಡುಗೆಗಳೇ ಆಗಿವೆ. ಆದ್ದರಿಂದ ನಮ್ಮ ಪ್ರತಿಯೊಂದು ಅಗತ್ಯಕ್ಕೂ ನಾವು ಪ್ರಕೃತಿಯನ್ನು ಅವಲಂಬಿಸಿದ್ದೇವೆ. ಪ್ರಕೃತಿಯಿಲ್ಲದೆ ಬದುಕಿಲ್ಲ.

ಪ್ರಕೃತಿಯ ಮೇಲಿನ ಅಪಚಾರ

ಆದಿ ಮಾನವ ತನ್ನ ಆಹಾರಕ್ಕಾಗಿ ಮಾತ್ರ ಪ್ರಕೃತಿಯ ಮೃಗಗಳನ್ನೂ ಕಾಡಿನ ಹಣ್ಣುಗಳನ್ನೂ, ಗೆಡ್ಡೆಗೆಣಸುಗಳನ್ನೂ ಬಳಸುತ್ತಿದ್ದ; ಅದು ಅಷ್ಟಾಗಿ ಬಾಧಿಸುತ್ತಿರಲಿಲ್ಲ. ಆದರೆ ಈಗ ಜನರ ಮತ್ತು ಸರಕಾರದ ನಿಯಂತ್ರಣವಿಲ್ಲದ ಬಳಕೆಯಿಂದ ಪ್ರಕೃತಿ ಬಡವಾಗುತ್ತದೆ ಎಂಬುದು ಸರ್ವವಿಧಿತ. ನಾಗರಿಕತೆ ಬೆಳೆದಂತೆಲ್ಲ ಪ್ರಕೃತಿಯ ಮೇಲಿನ ದೌರ್ಜನ್ಯ ಹೆಚ್ಚುತ್ತಾ ಬಂದಿರುವುದನ್ನು ಗಮನಿಸಬಹದು.  ಜನರು  ಕೃಷಿಗಾಗಿ, ತನ್ನ ಮನೆ ಕಟ್ಟುವುದಾಕ್ಕಾಗಿ, ಬಳಿಕ ಸಂಚಾರ ಸೌಲಭ್ಯದ ರಸ್ತೆಗಳಿಗಾಗಿ, ಕೈಗಾರಿಕೆಗಳಿಗಾಗಿ ಪೃಕೃತಿಯನ್ನು ದಮನ ಮಾಡುತ್ತಾ ಬಂದಿದ್ದಾನೆ. ಭೂಮಿಯ ಆಳದಿಂದ ವಾಹನಗಳ ಇಂಧನವನ್ನು ಬರಿದು ಮಾಡುತ್ತಿದ್ದಾನೆ; ಭೂಮಿಯ ಹೊದಿಕೆಯಂತಿರುವ ಸಸ್ಯ ಸಂಪತ್ತನ್ನು ನಾಶ ಮಾಡುತ್ತಿದ್ದಾನೆ. ತನ್ನ ಅನುಕೂಲ ಹೆಚ್ಚಿಸಲು ತಯಾರಿಸುವ ವಿವಿಧ ಉತ್ಪನ್ನಗಳಿಗಾಗಿ ಕೈಗಾರಿಕಾ ಸ್ಥಳಗಳಲ್ಲಿ ಹಾನಿಕಾರಕ ಅನಿಲಗಳ ಮೂಲಕ ಮಲಿನತೆಯನ್ನು ಹೆಚ್ಚಿಸುತ್ತಿದ್ದಾನೆ. ಅರಣ್ಯಗಳ್ಳರು ಅಮೂಲ್ಯವಾದ ಮರಗಳನ್ನು ಸೂರೆ ಮಾಡುತ್ತಿದ್ದಾರೆ. ಇವು ಪ್ರಾತಿನಿಧಿಕ ಹಾನಿಗಳಷ್ಟೇ. ಜನಸಂಖ್ಯೆ ಹೆಚ್ಚಿದಂತೆ ನಾಶ ವೇಗ ಪಡೆಯುತ್ತದೆ. ಸರಕಾರವೂ ಅಭಿವೃದ್ಧಿಯ ನೆಪದಲ್ಲಿ ಅರಣ್ಯನಾಶ, ನದಿಗಳ ದುರ್ಬಳಕೆಯಂತಹ ದೌರ್ಜನ್ಯಗಳನ್ನು ನಡೆಸುತ್ತಾ ಬಂದಿದೆ. ನಗರೀಕರಣದ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯೂ, ಇತರ ಪ್ರಕೃತಿ ಸಂಪತ್ತೂ ನಿರ್ನಾಮವಾಗುತ್ತಿದೆ. ಇದು ಧಾರಣ ಶಕ್ತಿಯನ್ನೂ ಮೀರುತ್ತಿರುವುದು ಅಪಾಯದ ಕರೆಗಂಟೆಯಾಗಿದೆ. ಇಂದು ಹದಗೆಡುತ್ತಿರುವ ಜನರ ಸಾಮಾನ್ಯ ಆರೋಗ್ಯ ನಡೆಯುತ್ತಿರುವ ದೌರ್ಜನ್ಯಗಳಿಗೆ ಕೈಗನ್ನಡಿಯಾಗಿದೆ. ಕೈಗಾರಿಕೆಗಳು ಪರಿಸರಕ್ಕೆ ಬಿಡುವ ತ್ಯಾಜ್ಯಗಳು ನೀರನ್ನೂ, ಗಾಳಿಯನ್ನೂ ಭೂಮಿಯನ್ನೂ ಹದಗೆಡಿಸುತ್ತವೆ.

ಪರಿಸರ ಸ್ನೇಹಿಗಳು ಬೆಳೆಸುವ ಕಾಡು, ವನಗಳು ಸ್ವಲ್ಪ ಮಟ್ಟಿಗೆ ಒಳಿತನ್ನು ಸಾಧಿಸುತ್ತವೆ. ಸರಕಾರವು ನಡೆಸುವ ಅಭಿಯಾನಗಳು ಪ್ರಕೃತಿಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿರುವುದು ಒಳಿತೇ ಆಗಿದೆ. ಸುಧಾರಿತ ಅಸ್ತ್ರ ಒಲೆಗಳ ಬಳಕೆ, ಪರ್ಯಾಯ ಶಕ್ತಿ ಮೂಲಗಳಾದ ಸೌರ ಶಕ್ತಿಯ ಬಳಕೆಯಂತಹ ವಿಧಾನಗಳು ಪರಿಸರ ಸಂರಕ್ಷಣಾ ಉಪಕ್ರಮಗಳಾಗಿವೆ. ಇರುವುದೊಂದೇ ಭೂಮಿ, ಒಂದೇ ಪ್ರಕೃತಿ. ನಾವು ಇಲ್ಲೇ ಬದುಕು ಕಟ್ಟಿಕೊಳ್ಳಬೇಕಾಗಿದೆ. ಆದ್ದರಿಂದ ನಮ್ಮ ಜೀವನ ಹಸನಾಗಬೇಕಾದರೆ ನಾವು ತಾಯ ಮಡಿಲಂತಿರುವ ಪ್ರಕೃತಿಯನ್ನೂ ಕಾಪಾಡಲೇ ಬೇಕು. 

ನನ್ನ ಪ್ರಯತ್ನಗಳು

ಮನುಷ್ಯನ ಬದುಕೇ ಪ್ರಕೃತಿಯನ್ನು ಅವಲಂಬಿಸಿರುವುದರಿಂದ, ಅದು ಬಡವಾಗುವುದನ್ನು ನಿಯಂತ್ರಿಸಬಹುದೇ ಹೊರತು ಪೂರ್ಣವಾಗಿ ಕೊನೆಗೊಳಿಸಲು ಅಸಾಧ್ಯ. ಪ್ರಕೃತಿಯ ಬಗ್ಗೆ ತುಡಿತವಿರುವುದೇ ಮೊದಲ ಹೆಜ್ಜೆ. ಪ್ರಕೃತಿಗೆ ಪುನರ್ ನಿರ್ಮಿಸುವ ಮಹತ್ವದ ಗುಣವಿದೆ. ಮನಸ್ಸಿದ್ದರೆ ಮಾರ್ಗ ಎನ್ನುವಂತೆ, ಅದಕ್ಕಾಗಿ ಪ್ರಯತ್ನ ಮಾಡಿದರೆ ನಾವು ಬಳಸಿದಷ್ಟಾದರೂ ಮರುಪೂರಣ ಮಾಡಬಹುದು. ಪೇಟೆಯಲ್ಲಿ ವಾಸಿಸುವ ನನಗೆ ನೀರು ಮುಖ್ಯವಾಗಿದೆ. ಇದೊಂದು ಕೊರತೆಯಿರುವ ದಿನ ಬಳಕೆಯ ಸಂಪನ್ಮೂಲ ಎಂಬ ಕಾಳಜಿ ಸದಾ ನನ್ನ ಮನಸ್ಸಿನಲ್ಲಿರುತ್ತದೆ.

ಮನೆವಾರ್ತೆಯಲ್ಲಿ ಸೋರುವ ನಲ್ಲಿಗಳ ನಿರ್ವಹಣೆ, ತುಂತುರು ಸಿಂಪರಣೆಯ (ಶವರ್) ಉಪಯೋಗ, ಸಾಧ್ಯವಾದಷ್ಟು ನೀರಿನ ಮರುಬಳಕೆ ನಾನು ಅಳವಡಿಸಿದ ಉಪಾಯಗಳು. ನೀರು ಅತ್ಯಗತ್ಯ ಮತ್ತು ಅಮೂಲ್ಯ ವಸ್ತುವೆಂಬ ವಿಚಾರವನ್ನು ಮನೆ ಮಂದಿಗೆಲ್ಲ ಮನಗಾಣಿಸಿದ್ದು ನೀರಿನ ಮಿತ ಬಳಕೆಗೆ ಕೈಗೊಂಡ ಕ್ರಮಗಳು. ಮನೆಯಲ್ಲಿ ಕಡಿಮೆ ವಿದ್ಯುತ್ ಬಳಸುವ ಬಲ್ಪುಗಳ ಅಳವಡಿಕೆ, ಫ್ಯಾನುಗಳು ಅಗತ್ಯವಿಲ್ಲದಾಗ ಆರಿಸುವುದು ಪೇಟೆಯ ಮನೆಯಲ್ಲಿ ಅಳವಡಿಸಿದ ಉಪಕ್ರಮಗಳು. ನಾನು ನನ್ನ ಹಳ್ಳಿಯಲ್ಲಿಯೂ ಹೆಚ್ಚಾಗಿ ತೊಡಗಿರುವುದರಿಂದ ಹಲವು ಪ್ರಕೃತಿ ಸಂರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದೇನೆ. ನಾನು ಪೇಟೆಯಲ್ಲಿ ಮಾಡಲಾಗದ ಕೆಲವು ಪ್ರಕೃತಿಪರ  ಪ್ರಯತ್ನಗಳನ್ನು ನನ್ನ ಕುಗ್ರಾಮದಲ್ಲಿ ಮಾಡಲು ಸಾಧ್ಯವಾಗಿದೆ. ನಾನು ಅದರಲ್ಲಿ ತೊಡಗಿಕೊಂಡಿರುವುದು ನನಗೆ ತೃಪ್ತಿ ನೀಡುವ ಕೆಲಸವಾಗಿದೆ; ಧನ್ಯತಾ ಭಾವವನ್ನು ಮೂಡಿಸುತ್ತದೆ.

ಚಿಕ್ಕಂದಿನಿಂದಲೂ ಪ್ರಕೃತಿಯೊಡನೆ ಒಡನಾಟ ನನ್ನಲ್ಲಿ ಭಾವನಾತ್ಮಕ ನಂಟನ್ನು ಬೆಳೆಸಿದೆ. ಇದರಿಂದಾಗಿ ನನಗೆ ಅಂಟಿದ ಹವ್ಯಾಸ ಕಾಡು ಬೆಳೆಸುವಂಥದ್ದು. ಹತ್ತು ವರ್ಷಗಳ ಹಿಂದೆ ಒಂದು ಬಾರಿ ಉಜಿರೆಯ ಹತ್ತಿರ ನೇತ್ರಾವತಿ ನದಿಯ ಮಡಿಲಿನಲ್ಲಿ ಮಳೆಗಾಲದ ಕೊನೆಗೆ ಸಿಗುವ ಮಹಾಗನಿ ಮರದ ಗಿಡಗಳನ್ನು ತಂದು ನಮ್ಮ ಹಿತ್ತಿಲಿನಲ್ಲಿ ನೆಟ್ಟದ್ದು ಮೊದಲ ಪ್ರಯತ್ನ. ಈಗ ಆ ಮರಗಳು ದಟ್ಟ ಅರಣ್ಯವಾಗಿ ಬೆಳೆದು ನನ್ನ ಪರಿಸರದ ಶೋಭೆಯನ್ನು ಹೆಚ್ಚಿಸಿದೆ. ಅದರ ಬೀಜಗಳು ಬಿದ್ದಲ್ಲೆಲ್ಲಾ ಗಿಡಗಳು ಬೆಳೆದು ಸುತ್ತುಮುತ್ತಲಿನ ಪ್ರದೇಶದಲ್ಲೆಲ್ಲಾ ಈಗ ಮಹಾಗನಿ ಗಿಡಗಳು ಬೆಳೆದು ಬಂದಿವೆ.

ನಾನು ಪ್ರಕೃತಿ ಸ್ವಯಂ ಚೇತರಿಸಿಕೊಳ್ಳುವುದನ್ನು ಹತ್ತಿರದಿಂದ ಕಂಡುಕೊಂಡವನು. ನಾನು ಚಿಕ್ಕದಿರುವಾಗ ನಮ್ಮ ಪರಿಸರದಲ್ಲಿದ್ದ ಆದರೆ ಈಗ ಕಣ್ಮರೆಯಾದ ಕೆಲವು ಉಪಯುಕ್ತ ಮರಗಳನ್ನು ನೆಟ್ಟು ಬೆಳೆಸುವ ಹವ್ಯಾಸವನ್ನು ಅಂಟಿಸಿಕೊಂಡಿದ್ದೇನೆ. ಅಂಟುವಾಳದ ಮರ, ಬಿಲ್ವಪತ್ರೆಯ ಗಿಡ, ಅಶೋಕದ ಗಿಡಗಳು ನನ್ನ ಚಿಕ್ಕಂದಿನಲ್ಲಿ ಇದ್ದು ಕಾಲಾಂತರದಲ್ಲಿ ಕಣ್ಮರೆಯಾದವು. ಪ್ರಯತ್ನಪೂರ್ವಕವಾಗಿ ಅವುಗಳನ್ನು ಸಂಗ್ರಹಿಸಿ ತಂದು ನೆಟ್ಟುದರಿಂದ ಈಗ ಅಳೆತ್ತರಕ್ಕೆ ಬೆಳೆದು ನಳನಳಿಸುತ್ತಿವೆ. ಅಂತಹ ಮರಗಳ ಪಟ್ಟಿಯಲ್ಲಿ ನೆಲ್ಲಿ, ಕೆಲವು ಔಷಧ ಗಿಡಗಳು, ಸಾಂಬಾರದ ಗಿಡಗಳು ಸೇರಿವೆ. ಪ್ರತಿ ವರ್ಷ ಇಪ್ಪತ್ತೈದು ತೇಗದ ಸಸಿಗಳನ್ನು ಕಳೆದ ವರ್ಷದಿಂದ ನೆಡಲು ಪ್ರಾರಂಭಿಸಿದ್ದೇನೆ.  ಬದುಕಿ ಉಳಿಯುವ ಸಸಿಗಳು ಕಡಿಮೆಯಾದರೂ ಮುಂದಿನ ವ಼ರ್ಷಗಳಲ್ಲಿ ಹೆಚ್ಚು ಹೆಚ್ಚು ಸಸಿಗಳು ಉಳಿಯಬಹುದೆಂಬ ನಿರೀಕ್ಷೆ. ಕಾಡುನ್ನು ಬೆಳೆಯಲು ಬಿಟ್ಟರೆ ಅದೇ ಬೆಳೆದುಕೊಳ್ಳುವುದನ್ನು ನಾನು ಗಮನಿಸಿದ್ದೇನೆ. ಕಾಡು ಬೆಳೆಸುವ ಹವ್ಯಾಸದಿಂದಾಗಿ ಈಗ ಮನೆಯ ಸುತ್ತ ತಂಪು ಗಾಳಿ. ಕಡು ಬೇಸಿಗೆಯಲ್ಲೂ ಒಳ್ಳೆಯ ಹಸಿರು. ಇದರಿಂದಾಗಿ ಗುಡ್ಡದಿಂದ ಹರಿದು ಬರುವ ನೀರಿನಿಂದ ಮಣ್ಣು ಕೊಚ್ಚಿಹೋಗುತ್ತಿದ್ದುದು ಕಡಿಮೆಯಾಗಿದೆ. ಮರಗಳಿಂದ ಬೀಳುವ ತರಗೆಲೆ ಮಳೆಗೆ ಒದ್ದೆಯಾಗಿ ಒಳ್ಳೆಯ ಸಾವಯವ ನೆಲಕ್ಕೆ ಮರುಪೂರಣಗೊಳ್ಳತ್ತದೆ. ಅಲ್ಲಿ ಎರೆ ಹುಳಗಳನ್ನು ನೆಲಕ್ಕೆ ಬಿಟ್ಟು ಮಣ್ಣಿನ ನುಸುಲು ಹೆಚ್ಚುತ್ತಿರುವುದರಿಂದ ಭೂಮಿ ಫಲವತ್ತಾಗಿದೆ. ಈ ಪ್ರಯತ್ನಗಳೆಲ್ಲ ಒಂದಕ್ಕೊಂದು ಪೂರಕ.

ನಮ್ಮ ಸುತ್ತಲೂ ರಬ್ಬರು ತೋಟಗಳದ್ದೇ ದರ್ಬಾರು. ಪ್ರಕೃತಿಗೆ ಹಾನಿಕಾರಕವಾದ ಯಾವುದೇ ವಾಣಿಜ್ಯ ಕೃಷಿಯಿಂದ ನಾನು ದೂರವೇ ಉಳಿದಿದ್ದೇನೆ. ನಮಗೆ ಸುಮಾರು ಐದು ಎಕರೆ  ರಬ್ಬರ್ ಬೆಳೆಗೆ ಯೋಗ್ಯವಾದ ಹಾಡಿ ಇದ್ದರೂ ನಾವು ರಬ್ಬರ್ ಬೆಳೆಸಲು ಮನಸು ಮಾಡಿಲ್ಲ. ಇದರಿಂದ ಭೂಮಿ ಬಂಜರಾಗುವುದೆಂಬುದು ನನ್ನ ಕಾಳಜಿ. ಬಿದಿರು ಅರುವತ್ತು ವರ್ಷಗಳಿಗೊಂದು ಬಾರಿ ಹೂಬಿಟ್ಟು ನಾಶವಾಗುವುದು ಸರ್ವವಿದಿತ. ಎರಡುಮೂರು ವರ್ಷಗಳ ಕೆಳಗೆ ಅಂತಹ ನೈಸರ್ಗಿಕ ಕಾರಣಗಳಿಂದ ನಮ್ಮ ಬಿದಿರು ಹಿಂಡಿಲುಗಳೂ ನಿರ್ನಾಮಗೊಂಡುವು. ಅರಣ್ಯ ಇಲಾಖೆಯಿಂದ ಸಿಕ್ಕಿದಷ್ಟು ಬಿದಿರಿನ ಸಸಿಗಳನ್ನು ತರಿಸಿ ನೆಟ್ಟು ಬೆಳೆಸಿದ್ದೇವೆ. ಕಳೆದ ವರ್ಷ ಸಾಕಷ್ಟು ಸಸಿಗಳು ಸಿಗದ ಕಾರಣ, ಈ ವರ್ಷ ಜೂನ್‌ನಲ್ಲಿ ಇನ್ನೂರು ಬಿದಿರಿನ  ಸಸಿಗಳಿಗೆ ಈಗಲೇ ಬೇಡಿಕೆ ಸಲ್ಲಿಸಿ ಹಿತ್ತಿಲಿನ ಬದಿಯಲ್ಲಿ ಬೇಲಿಯ ಬದಲಿಗೆ ಬಿದಿರಿನ ಸಸಿಗಳನ್ನು ನೆಟ್ಟು ಬೆಳೆಸುವ ಪ್ರಯೋಗ ಯೋಜಿಸಿದ್ದೇನೆ.

ನೀರಿನ ಮರು ಪೂರಣ ನಮ್ಮ ಜಮೀನಿನಲ್ಲಿ ಕೈಗೆತ್ತಿಕೊಂಡ ಇನ್ನೊಂದು ಪ್ರಯತ್ನ. ಮಳೆಗಾಲದಲ್ಲಿ ಮನೆಯ ಹಂಚಿನ ಮಾಡಿನಿಂದ ಕೆಳಗೆ ಬಿದ್ದು ಪೋಲಾಗಿ ಹೋಗುತ್ತಿದ್ದ ನೀರನ್ನು ತೋಟದ ಬಾವಿಗೆ ಮರುಪೂರಣ ಮಾಡುವ ಪ್ರಯತ್ನ ಕಳೆದ ವರ್ಷ ಪೂರ್ಣವಾಗಿದೆ. ಇದರಿಂದ ತೋಟದ ಬಾವಿಯಲ್ಲಿ ನೀರು ತುಂಬಿ ಕೃಷಿಗೆ ಸಹಾಯವಾಗಿದೆ. ನಮ್ಮ ಬಾವಿ ಮತ್ತು ಕುಡಿಯುವ ನೀರಿನ ಸುರಂಗ ಗುಡ್ಡದ ಇಳಿಜಾರಿನಲ್ಲಿರುವುದರಿಂದ, ಜಲ ತಜ್ಞರ ಸಲಹೆಯ ಅನುಸಾರವಾಗಿ ಮೂರು ಇಂಗುಗುಂಡಿಗಳನ್ನು ಮಾಡಿ ಮರುಪೂರಣದ ಪ್ರಯತ್ನ ಮಾಡಿದೆ. ಇದರ ಪ್ರಮಾಣವನ್ನು ಹೆಚ್ಚಿಸುವ ಯೋಜನೆಯಿದೆ.

ಇಂತಹ ಉಪಕ್ರಮವನ್ನು  ನೆರೆಕರೆಯವರಿಗೆ ತೋರಿಸಿ ತಿಳಿವಳಿಕೆಯನ್ನು ಹಂಚಿದ್ದೇನೆ. ಮನೆಯ ಪಕ್ಕದ ಕಾಲೊನಿಯಲ್ಲಿ ಸರಕಾರ ಕೆಲವು ವರ್ಷಗಳ ಹಿಂದೆ ನಿರ್ಮಿಸಿದ ವಿಫಲ ಬಾವಿಯನ್ನು ಇಂಗು ಗುಂಡಿಯಂತೆ ಬಳಸಿ ರಸ್ತೆ ಬದಿ ಹರಿದು ಹೋಗುವ ಮಳೆನೀರನ್ನು ಹರಿಸಿ ಸಫಲ ಇಂಗುಗುಂಡಿಯಾಗಿ ಮಾಡಲು ಕಾಲೋನಿಯವರಿಗೆ ಉತ್ತೇಜಿಸಿದ್ದೇನೆ. ಈ ಬಗ್ಗೆ ಅಷ್ಟಾಗಿ ತಿಳಿವಳಿಕೆ ಇರದಿದ್ದರೂ, ಈಗ ಸಿಕ್ಕಿದ ಪ್ರಯೋಜನದಿಂದ ಜನರಿಗೆ ಹೆಚ್ಚಿನ ಅರಿವು ಮೂಡಿರುವುದು ಜಲ ಮರು ಪೂರಣದ ವಿಸ್ತರಣೆಗೆ ಸಹಾಯವಾಗಿದೆ. ನಮ್ಮ ಹಿತ್ತಿಲಿನಲ್ಲಿ ಮನೆಕಟ್ಟಲು ಮೊರಕಲ್ಲು ತೆಗೆದ ಕೋರೆ ಕೆಲವು ವರ್ಷಗಳಿಂದ ಸುಮ್ಮನೆ ಇತ್ತು. ಎರಡು ವರ್ಷ ಕೆಳಗೆ ಗುಡ್ಡದಿಂದ ಇಳಿಯುವ ನೀರಿನ ತೋಡನ್ನು ಅದಕ್ಕೆ ಹರಿಯ ಬಿಟ್ಟದ್ದರಿಂದ ನಮ್ಮ ತೋಟದ ಬಾವಿಗೆ ಒರತೆ ಬಲಗೊಂಡಿದೆ. ಇದು ಪ್ರತ್ಯಕ್ಷ ಸಿಕ್ಕಿದ ಪ್ರಯೋಜನ.

ಈ ಮೇಲಿನ ಉಪಕ್ರಮಗಳು ಸಣ್ಣ ಪ್ರಮಾಣದವುಗಳಾದರೂ ನಮ್ಮಲ್ಲಿಗೆ ಬಂದುಹೋಗುವವರ ಗಮನ ಸೆಳೆಯತೊಡಗಿರುವುದು ಇಲ್ಲಿ ಪ್ರತ್ಯಕ್ಷಿಕ ಪರಿಣಾಮವನ್ನು(ಇಲ್ಲಸ್ಟ್ರೇಟಿವ್ ಎಫೆಕ್ಟ್) ಉಂಟುಮಾಡಿದೆ. ಕೆಲವರಿಗಾದರೂ ಇದರ ಬಗ್ಗೆ ಆಸಕ್ತಿ ಮೂಡಿದೆ.  ಈ ಉಪಕ್ರಮಗಳ ಸಫಲತೆಗಾಗಿ ನಾನು ಈಗ ಇರುವ ದೂರದೂರಿನಿಂದ ವರ್ಷಕ್ಕೆ ಕಡಿಮೆಯೆಂದರೆ ನಾಲ್ಕಾರು ಬಾರಿಯಾದರೂ ಮಳೆಗಾಲದಲ್ಲಿ ಊರಿನಲ್ಲಿ ಕೆಲದಿನಗಳನ್ನಾದರೂ ಕಳೆಯುತ್ತೇನೆ. ಪ್ರಯತ್ನ ನೀಡುವ ತೃಪ್ತಿಯೇ ಚಾಲಕ ಶಕ್ತಿ. ಇದರಿಂದ ಪ್ರಕೃತಿಯ ಜೊತೆಗಿನ ನಂಟು ಸ್ಥಾಯಿಯಾಗಿ ಉಳಿದಿದೆ. 

ಅವಾಂತರಗಳಿಗೆ ಕಾರಣಗಳು

ಪ್ರಕೃತಿಗೂ ಒಂದು ಲಯವೆಂದಿರುತ್ತದೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ಅರ್ಥವಾದೀತು. ಉದಾಹರಣೆಗೆ ಒಂದು ಪ್ರಬೇಧದ ಮರ ನಾಶವಾದರೆ ಅಥವಾ ಕಡಿದರೆ ಅದೇ ಸರಹದ್ದಿನಲ್ಲಿ ಇನ್ನೊಂದು ಮರವನ್ನು ಪ್ರಕೃತಿಯೇ ಹುಟ್ಟುಹಾಕುವುದು ನೈಸರ್ಗಿಕ ಕ್ರಿಯೆ. ಯಾವುದೇ ಹಸ್ತಕ್ಷೇಪವಿಲ್ಲದಿದ್ದರೆ ಪ್ರಕೃತಿಯೇ ಅದನ್ನು ಸಾಧಿಸಿಕೊಳ್ಳುವುದು ವಿಸ್ಮಯ ಮೂಡಿಸುವ ಸಂಗತಿ. ಆದರೆ ಬಾಹ್ಯ ಹಸ್ತಕ್ಷೇಪವಾದರೆ ಪ್ರಕೃತಿ ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇದು ಸುಧಾರಿಸಬೇಕಾದರೆ ಬಹಳಷ್ಟು ವರ್ಷಗಳೇ ಬೇಕಾಗುತ್ತವೆ. 

ಪ್ರಾಕೃತಿಕ ಅವಾಂತರಗಳಾದ ಜಲಸ್ಫೋಟ, ಪ್ರವಾಹ, ಭೂಕುಸಿತ, ಬರಗಾಲ ಮುಂತಾದುವು ಮುಖ್ಯವಾಗಿ ಪ್ರಕೃತಿ ಲಯ ಕಳೆದುಕೊಳ್ಳುವುದರಿಂದ ಉಂಟಾಗುವ ಅವಾಂತರಗಳು. ಜಲಸ್ಫೋಟ ಮೋಡಗಳ ಕುಸಿತದಿಂದ ಉಂಟಾಗುವ ಅನಾಹುತ. ಅರಣ್ಯಗಳು ಆಗಸಕ್ಕೆ ಕಳಿಸುವ ತಂಪು ಗಾಳಿ ಮೋಡಗಳನ್ನು ಮಳೆಯಾಗಿಸುತ್ತದೆ ಎಂಬುದು ಸಾಮಾನ್ಯ ಜ್ಞಾನ. ಮನುಷ್ಯ ತನ್ನ ತುರ್ತಿಗೆ ಅರಣ್ಯವನ್ನು ನಾಶ ಮಾಡಿದರೆ ತಂಪು ಗಾಳಿ ಎಲ್ಲಿಂದ ಉತ್ಪನ್ನವಾಗಬೇಕು? ನೈಸರ್ಗಿಕ ಕ್ರಿಯೆ ಸಂಭವಿಸದಿರುವಾಗ ಯಕಃಶ್ಚಿತ್ ಕಾರಣದಿಂದ ಮೋಡಗಳು ಕುಸಿಯುವುದು ಜಲಸ್ಫೋಟಕ್ಕೆ ಕಾರಣವೆಂದು ವಿಜ್ಞಾನಿಗಳ ವಿವರಣೆ. 

ಪ್ರವಾಹಗಳಿಗೆ ಅತಿವೃಷ್ಟಿಯೇ ಮುಖ್ಯ ಕಾರಣ. ಕೆಲಮೊಮ್ಮೆ ಅಣೆಕಟ್ಟುಗಳು ಒಡೆಯುವುದು, ಮುಂಜಾಗ್ರತಾ ಕ್ರಮವಾಗಿ ಮಳೆಗಾಲದಲ್ಲಿ ಮಿತಿಮೀರುವ ನೀರಿನ ಸಂಗ್ರಹವನ್ನು ಏಕಕಾಲದಲ್ಲಿ ಹರಿಯ ಬಿಡುವುದು ಮುಂತಾದುವು ಪ್ರವಾಹಕ್ಕೆ ಕಾರಣಗಳು. ಇವುಗಳೆಲ್ಲ ಪ್ರಾಕೃತಿಕ ವಿಕೋಪಗಳು. ಅತಿವೃಷ್ಟಿಗೆ ಸಕಾರಣವನ್ನು ಕಾಣುವುದು ಕಷ್ಟಸಾಧ್ಯ. ಇಂತಹ ಅನಿರೀಕ್ಷಿತ ಫಟನೆಗಳಿಗೆ ಪೂರ್ವ ತಯಾರಿ ಮತ್ತು ಕ್ಷಿಪ್ರ ಕ್ರಮದಿಂದ ಪರಿಣಾಮದ ತೀವ್ರತೆಯನ್ನು ಕಡಿಮೆಮಾಡಿಬಹುದು. ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ ಉತ್ತರ-ದಕ್ಷಿಣ ನದಿಗಳ ಜೋಡಣೆ ಸ್ವಲ್ಪ ಮಟ್ಟಿನ ಪರಿಹಾರ ನೀಡಬಹುದೇನೋ!

ಭೂಕುಸಿತ ಇತ್ತೀಚಿನ ಕೆಲವು ವರ್ಷಗಳಲ್ಲಿ ತೀವ್ರಗೊಂಡ ಪ್ರಕೃತಿ ವಿಕೋಪ. ಇದು ಭೂಮಿಯ ಮೇಲ್ಪದರವನ್ನು ರಕ್ಷಿಸುವ ಸಸ್ಯಸಂಪತ್ತು ನಷ್ಟವಾದಾಗ ನೀರು ಮಣ್ಣನ್ನು ಕೊರೆದುಕೊಂಡು ಹೋಗುವುದು ಸಾಮಾನ್ಯ ಪ್ರಕ್ರಿಯೆ. ಇದು ತೀವ್ರಗೊಂಡಾಗ ಉಂಟಾಗುವ ಅನಾಹುತವೇ ಭೂಕುಸಿತ. ಅರಣ್ಯ ನಾಶವೇ ಇದಕ್ಕೆ ಮುಖ್ಯ ಹೇತು. ಅನಿರ್ಬಂಧಿತ ಮರಗಳ ಕಡಿಯುವಿಕೆ, ಭೂಖನನ ಮುಂತಾದ ಮಾನವ ನಿರ್ಮಿತ ಅವಾಂತರಗಳು ಭೂಕುಸಿತಕ್ಕೆ ಮುಖ್ಯ ಕಾರಣಗಳು. ಸಸ್ಯ ಸಂಪತ್ತನ್ನು ಉಳಿಸುವುದು, ಭೂ ಕೊರೆತವನ್ನು ತಡೆಯುವುದು ಮುಂತಾದ ಎಚ್ಚರದ ಉಪಕ್ರಮಗಳಿಂದ ಇಂತಹ ದುರಂತವನ್ನು ತಡೆಗಟ್ಟಬಹುದು.

ಬರಗಾಲವೆನ್ನುವುದು ನೈಸರ್ಗಿಕ ಕಾರಣಗಳಿಗಾಗಿ ಮಳೆ ನೆರಳಿನ ಪ್ರದೇಶಗಳಲ್ಲಿ ದೀರ್ಘ ಕಾಲ ಮಳೆಯೇ ಆಗದಿರುವುದರಿಂದ ಉಂಟಾಗುವ ಪರಿಸ್ಥಿತಿ. ಇದು ಆ ಪ್ರದೇಶದ ಜನರನ್ನೂ ಅವಲಂಬಿಸಿದ ಜಾನುವಾರುಗಳನ್ನೂ ಸಂಕಷ್ಟಕ್ಕೆ ಸಿಲುಕಿಸುತ್ತವೆ. ನದಿಗಳನ್ನೂ ಜೋಡಿಸುವುದು ಮುಂತಾದ ಉಪಾಯಗಳ ಮೂಲಕ ಈ ಅನಿಶ್ಚಿತತೆಯನ್ನು ತಕ್ಕ ಮಟ್ಟಿಗೆ ಹತೋಟಿಗೆ ತರಬಹುದು.

ಫಲಿತಗಳು

ಪ್ರಕೃತಿ ಏಕಮಾದ್ವಿತೀಯ; ನಮಗೆ ಪರ್ಯಾಯವಿಲ್ಲದ್ದು. ನಮ್ಮ ಬದುಕಿಗೆ ಅನಿವಾರ್ಯವಾದದ್ದು ಕೂಡ. ಇದು ನವiಗೆ ದೈವದತ್ತ ಬಳುವಳಿ: ಯಾರೊಬ್ಬರ ಖಾಸಗಿ ಆಸ್ತಿಯಲ್ಲ. ಇದನ್ನು ಸಾಮೂಹಿಕ ಒಡೆತನ ಎನ್ನಬಹುದು. ಅದನ್ನು ನ್ಯಾಯೋಚಿತವಾಗಿ ಉಪಯೋಗಿಸಿ ಸಲಹಿಕೊಂಡು ಬರುವುದು ಮಾನವ ಕುಲದ ಹೊಣೆ ಮತ್ತು ಜವಾಬ್ದಾರಿ. ಈ ಆಶಯವನ್ನು ಕಾರ್ಯಗತಗೊಳಿಸಲು ಕೇಂದ್ರ ಮತ್ತು ರಾಜ್ಯಗಳಲ್ಲಿ ಪರ್ಯಾವರಣ ಮಂತ್ರಾಲಯ ಕಾರ್ಯವೆಸಗುತ್ತದೆ. ಇದರ ಜವಾಬ್ದಾರಿ ಮಹತ್ತರವಾದುದು.

ಮಾನವ ಕುಲದ ಉಳಿವಿಗೂ ಏಳಿಗೆಗೂ ಪ್ರಕೃತಿಯ ಮಹತ್ವವನ್ನು ತಿಳಿದುಕೊಂಡು ನಾವೆಲ್ಲರೂ ಸ್ವಪ್ರೇರಣೆಯಿಂದ ನಮ್ಮ ಕಿರು ಪ್ರಯತ್ನಗಳನ್ನು ಮಾಡಬೇಕು. ಅದು ನಮ್ಮೆಲ್ಲರ ಜೀವನಕ್ರಮವಾದರೆ ಮಾತ್ರ ಸಫಲತೆ ಪಡೆಯಲು ಸಾಧ್ಯ. ಪ್ರಕೃತಿ ನಮ್ಮನ್ನು ಸಲಹುವ ತಾಯಿ ಎಂಬ ಪ್ರಜ್ಞೆ ಇದ್ದರೆ ಮಾತ್ರ ಬದುಕು ಹಸನವಾದೀತು.

*ಲೇಖಕರು ಮೂಲತಃ ಕಾಸರಗೋಡು ತಾಲೂಕಿನ ಕೊಳ್ಚಪ್ಪೆಯವರು; ಸಾಹಿತಿ, ಅಂಕಣಕಾರರು, ಬ್ಯಾಂಕ್ ಉದ್ಯೋಗದಿಂದ ನಿವೃತ್ತರಾಗಿ ಮುಂಬೈನಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ. ಮಾಡಿದ್ದಾರೆ.

Leave a Reply

Your email address will not be published.