ಪ್ರಜಾಪ್ರಭುತ್ವದಲ್ಲಿ ಮರುಸ್ಥಾಪಿಸಬೇಕಾದ ರಾಜಕೀಯ ನೈತಿಕತೆ

ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ನಡೆದ ಶಾಸಕರ ರೆಸಾರ್ಟ್-ಹೊೈಕೈ ರಾಜಕಾರಣ, ಕುದುರೆ ವ್ಯಾಪಾರ ಹಾಗೂ ಇವೆಲ್ಲಕ್ಕೂ ಮುಕುಟವಿಟ್ಟಂತೆ ನಡೆದ ಆಡಿಯೋ ಪ್ರಕರಣ ಪ್ರಜಾಪ್ರಭುತ್ವದ ಮೇಲೆ ಜನಸಾಮಾನ್ಯರಿಗೆ ಇರುವ ನಂಬಿಕೆ ಮತ್ತು ಭರವಸೆಗಳ ಮೇಲೆ ತೀವ್ರ ಪರಿಣಾಮ ಬೀರಿದ ವಿದ್ಯಮಾನ.

ಸಂವಿಧಾನದ ಚೌಕಟ್ಟಿನಲ್ಲಿ ರೂಪಿತವಾಗುವ ಆಳ್ವಿಕೆಯು ಮೇಲಿನಿಂದ ಹೇರಲ್ಪಟ್ಟ ಆಳ್ವಿಕೆಯಾಗಿರದೆ ಜನರ ಆಶೋತ್ತರಗಳನ್ನು ಪ್ರತಿನಿಧಿಸಬೇಕು. ಇದು ಭಾರತದ ಪ್ರಜೆಗಳಾದ ನಾವು ನಮಗೇ ಕೊಟ್ಟುಕೊಂಡ ಸಂವಿಧಾನದ ಮುನ್ನುಡಿಯ ಪ್ರಾರಂಭದ ಸಾಲುಗಳು. ಇದರರ್ಥ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಭುಗಳಾಗಿರಬೇಕು; ಪ್ರಜಾಪ್ರತಿನಿಧಿಗಳು ಸೇವಕರಾಗಿರಬೇಕು. ಆದರೆ ದೇಶದಲ್ಲಿ ಇಂದು ಪ್ರಜಾಪ್ರತಿನಿಧಿಗಳೆ ಪ್ರಭುಗಳಾಗಿದ್ದಾರೆ! ದೀರ್ಘಾನ್ವೇಷಣೆಯಲ್ಲಿ ಆಳುವವರು ಮತ್ತು ಪ್ರಜೆಗಳ ನಡುವೆ ಮಾಡಿಕೊಂಡ ಸಂಧಾನವೇ ಸಂವಿಧಾನ. ಸಂವಿಧಾನ ಬರೇ ಅಕ್ಷರಗಳಿಂದ ತುಂಬಿದ ತರ್ಕದ ಕಂತೆಯಲ್ಲ; ಇದಕ್ಕೆ ಕೈ, ಕಾಲು, ಹೃದಯ ಎಲ್ಲಕ್ಕಿಂತ ಮಿಗಿಲಾಗಿ ಆತ್ಮವಿದೆ.

ರಾಜಪ್ರಭುತ್ವದಿಂದ ವಂಶಪಾರಂಪರ್ಯ ಆಡಳಿತವ್ಯವಸ್ಥೆಗೆ ಒಳಪಟ್ಟಿದ್ದ ಭಾರತ ಗಣರಾಜ್ಯವಾದ ಘಳಿಗೆಯಿಂದ ಪ್ರಜಾಪ್ರಭುತ್ವದ ಹಾದಿಗೆ ಹೊರಳಿತ್ತು. ಆದರೆ 68 ವರ್ಷಗಳ ಪ್ರಜಾಪ್ರಭುತ್ವದ ಹಾದಿಯನ್ನು ಕ್ರಮಿಸುತ್ತಿರುವ ಈ ಹೊತ್ತಿಗೆ 130 ಕೋಟಿ ಜನಸಂಖ್ಯೆಯ ದೇಶದ ಆಡಳಿತ ಚುಕ್ಕಾಣಿ ಇದೀಗ ಪ್ರಜಾಪ್ರಭುತ್ವದ ಹೆಸರಲ್ಲಿ ರಾಜಪ್ರಭುತ್ವ ನಡೆಸುತ್ತಿರುವ ಕೆಲವೇ ಕೆಲವು ಕುಟುಂಬಗಳ ಕೈಯಲ್ಲಿ ಬಂದು ನಿಂತಿದೆ!

1952ರಿಂದ ಇಲ್ಲಿವರೆಗೆ 16 ಲೋಕಸಭಾ ಚುನಾವಣೆಗಳು ನಡೆದಿವೆ. ಗ್ರಾಮಪಂಚಾಯಿತಿಯಿಂದ ಪ್ರಾರಂಭಿಸಿ ಲೋಕಸಭೆವರೆಗೆ ನಡೆಯುವ ಚುನಾವಣೆಗಳಲ್ಲಿ ಈತ್ತೀಚಿನ ವರ್ಷಗಳಲ್ಲಿ ಹೆಚ್ಚು ಹಣ, ಬಲ ಮತ್ತು ಅಪರಾಧದ ಹಿನ್ನೆಲೆಯ ಸಾಕಷ್ಟು ಸಂಖ್ಯೆಯ ಕ್ರಿಮಿನಲ್ ಕೇಸುಗಳನ್ನು ಹೊತ್ತಿರುವ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಿರುವುದು ಪ್ರಜಾಪ್ರಭುತ್ವದ ಸೋಲು! ಅರ್ಹರು, ನಿಷ್ಠಾವಂತರು ಠೇವಣಿ ಕಳೆದುಕೊಳ್ಳುವುದು ದೇಶದ ದೌರ್ಭಾಗ್ಯ! 14, 15 ಮತ್ತು 16ನೇ ಲೋಕಸಭಾ ಚುನಾವಣೆಗಳಲ್ಲಿ ಗೆದ್ದ ಅಭ್ಯರ್ಥಿಗಳು ಘೋಷಿಸಿಕೊಂಡಿರುವ ಕ್ರಿಮಿನಲ್ ಪ್ರಕರಣಗಳು, ಹೊಂದಿರುವ ಸಂಪತ್ತಿನ ಪ್ರಮಾಣದ ಕೋಷ್ಟಕವನ್ನೊಮ್ಮೆ ನೋಡಿದರೆ ನಮ್ಮ ಪ್ರಜಾಪ್ರಭುತ್ವ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ಎಂಬುದು ಅರ್ಥವಾದೀತು.

   ಚುನಾವಣೆ ವರ್ಷ           ಲೋಕಸಭೆ       ಕ್ರಿಮಿನಲ್ ಕೇಸು     ಹೊಂದಿರುವವರ ಸಂಖ್ಯೆ   ಕೋಟ್ಯಾಧಿಪತಿಗಳ ಸಂಖ್ಯೆ     ರಾಜಕೀಯ ಕುಟುಂಬದ             ಹಿನ್ನೆಲೆಯವರ ಸಂಖ್ಯೆ
   2004             14             24%            30%            45%
   2009            15             30%            58%            50%
   2014            16              34%            82%            52%

 

ಇನ್ನು ನಮ್ಮ ರಾಜ್ಯದ ಸ್ಥಿತಿ ನೋಡುವುದಾದರೆ; Media Research & Information Bureau ಸಮೀಕ್ಷೆ ಪ್ರಕಾರ; ಕರ್ನಾಟಕದ 224 ವಿಧಾನಸಭಾಕ್ಷೇತ್ರಗಳಲ್ಲಿ ಹೆಚ್ಚೂ ಕಡಿಮೆ 117 ವಿಧಾನಸಭಾಕ್ಷೇತ್ರಗಳು ವ್ಯಕ್ತಿಗತ ಪಾಳೇಪಟ್ಟುಗಳಾಗಿವೆ! ಈ ಕ್ಷೇತ್ರಗಳನ್ನು ನಖಶಿಖಾಂತ ಹಿಡಿತಸಾಧಿಸಿರುವ ಪಾಳೇಗಾರರ ವಿರುದ್ಧ ಸೆಣಸಾಡುವ ಸಾಮಥ್ರ್ಯ ಇನ್ನೊಬ್ಬ ಅಭ್ಯರ್ಥಿಗೆ ಬರಲು ಸಾಧ್ಯವೇ ಇಲ್ಲ! ತಾಲೂಕಿನ ಆಡಳಿತವ್ಯವಸ್ಥೆ ಈ ಪಾಳೇಗಾರರ ಆಣತಿಯಂತೆಯೇ ನಡೆಯುವಷ್ಟರಮಟ್ಟಿಗೆ ಹಿಡಿತವಿದೆ. ಹೀಗಾಗಿ ನಿಜವಾಗಿಯೂ ಚುನಾವಣೆ ನಡೆಯುವುದು ಕೇವಲ 107 ವಿಧಾನಸಭಾಕ್ಷೇತ್ರಗಳಲ್ಲಿ ಮಾತ್ರ!

‘ನಮ್ಮ ಸಾಮಾಜಿಕ ಸ್ಥಿತಿಗತಿಗಳಿಗೂ, ನಾವು ಅಳವಡಿಸಿಕೊಂಡಿರುವ ಶಿಕ್ಷಣಪದ್ಧತಿಗೂ ಅರ್ಥಾರ್ಥ ಸಂಬಂಧ ಕಾಣಿಸುತ್ತಿಲ್ಲ’ ಎಂದಿದ್ದರು. ಶೈಕ್ಷಣಿಕ ಅರ್ಹತೆ ಗಳಿಸಿರುವ ರಾಜಕಾರಣಿಗಳು ಏನೆಲ್ಲಾ ಹಗರಣ ಮಾಡುತ್ತಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ.

ಇತ್ತೀಚೆಗೆ ಭ್ರಷ್ಟರು, ರಿಯಲ್ ಎಸ್ಟೇಟ್ ಉದ್ಯಮಿಗಳು, ರಾಜಕಾರಣಿಗಳ ಮಕ್ಕಳು, ಬಂಧುವರ್ಗದವರು, ಸರ್ಕಾರಿ ನೌಕರರು, ಅಧಿಕಾರಿಗಳ ರಾಜಕಾರಣ ಪ್ರವೇಶ ಸಾಮಾನ್ಯ ಸಂಗತಿಯಾಗಿದೆ. ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಸರ್ಕಾರಿ ನೌಕರಿಯಲ್ಲಿದ್ದಾಗ ಅಧಿಕಾರ, ಸವಲತ್ತುಗಳನ್ನು ಅನುಭವಿಸಿದ್ದಲ್ಲದೆ, ನಿವೃತ್ತಿಯ ನಂತರದಲ್ಲಿಯೂ ರಾಜಕಾರಣ ಪ್ರವೇಶಿಸುವ ಮೂಲಕ ಸ್ವಹಿತಾಸಕ್ತಿಗಳ ಸಂಘರ್ಷಕ್ಕೆ (conflict of interests) ಕಾರಣರಾಗುತ್ತಿದ್ದಾರೆ. ಉದ್ಯಮಿಗಳಾಗಿ, ಶಾಸಕರಾಗಿ, ಮಂತ್ರಿಗಳಾಗುವ ಮೂಲಕ ಶಾಸನರಚಿಸುವವರೂ ಅವರೇ, ಕಾನೂನು ಜಾರಿಮಾಡುವವರೂ ಅವರೇ ಆಗುತ್ತಿದ್ದಾರೆ. ಈ ಬೆಳವಣಿಗೆ ಸದನದ ನಡವಳಿಕೆ ಮೇಲೆ ನೇರ ಹಾಗೂ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿರುವುದು ಸುಳ್ಳಲ್ಲ. ಚರ್ಚೆಯೇ ಇಲ್ಲದೆ ಮಸೂದೆಗಳು ಅಂಗೀಕಾರವಾಗುತ್ತಿರುವುದು, ಕನಿಷ್ಠ ಅವಧಿಯ ಅಧಿವೇಶನವೂ ಸಾಧ್ಯವಾಗದಿರುವುದು, ಗದ್ದಲದಲ್ಲೇ ಅಧಿವೇಶನ ಮುಂದೂಡಲ್ಪಡುವುದು ಮತ್ತು ಮುಕ್ತಾಯಗೊಳ್ಳುವುದರ ಮೂಲಕ ನೂರಾರು ಕೋಟಿ ಮೊತ್ತದ ತೆರಿಗೆ ಹಣ ವ್ಯರ್ಥವಾಗುತ್ತಿದೆ.

ಮಹಾತ್ಮಾಗಾಂಧಿ ಬಹಳ ಮುಂಚೆಯೇ; ‘ನಮ್ಮ ಸಾಮಾಜಿಕ ಸ್ಥಿತಿಗತಿಗಳಿಗೂ, ನಾವು ಅಳವಡಿಸಿಕೊಂಡಿರುವ ಶಿಕ್ಷಣಪದ್ಧತಿಗೂ ಅರ್ಥಾರ್ಥ ಸಂಬಂಧ ಕಾಣಿಸುತ್ತಿಲ್ಲ’ ಎಂದಿದ್ದರು. ಶೈಕ್ಷಣಿಕ ಅರ್ಹತೆ ಗಳಿಸಿರುವ ರಾಜಕಾರಣಿಗಳು ಏನೆಲ್ಲಾ ಹಗರಣ ಮಾಡುತ್ತಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ.

ಜನಪ್ರತಿನಿಧಿಗಳು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಕರು. ವ್ಯವಸ್ಥೆ ಮತ್ತು ಜನಸಾಮಾನ್ಯರ ನಡುವಿನ ಕೊಂಡಿಗಳು. ಶಾಸನ ರಚಿಸಿ ಕಾನೂನು ಜಾರಿಮಾಡುವವರು. ಸಾಮಾನ್ಯರಿಗೆ ಆದರ್ಶವಾಗಿರಬೇಕಾದವರು. ವಿಶಾಲವಾದ ತಿಳಿವಳಿಕೆ ಹಾಗೂ ಜನರ ಸಮಸ್ಯೆಗಳ ಅರಿವಿರಬೇಕು. ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ ತಾನು ಪ್ರತಿನಿಧಿಸುವ ರಾಜಕೀಯ ಪಕ್ಷದ ಪ್ರತಿನಿಧಿಯಾಗಿರದೆ ಇಡೀ ಕ್ಷೇತ್ರದ ಪ್ರತಿನಿಧಿಯಾಗಿ ನಡಕೊಳ್ಳಬೇಕಾದವರು. ಇವು ಭಾರತೀಯ ಪ್ರಜಾಪ್ರಭುತ್ವದ ಆಶಯಗಳು ಮತ್ತು ನಿರೀಕ್ಷೆಗಳು.

ರಾಜಕಾರಣದಲ್ಲಿ ಸ್ವಲ್ಪಮಟ್ಟಿಗಾದರೂ ನೈತಿಕತೆಯನ್ನು ಪ್ರತಿಷ್ಠಾಪಿಸಬೇಕೆಂಬ ಮಹದಾಶಯದೊಂದಿಗೆ ಜಾರಿಗೆ ತಂದ ‘ಪಕ್ಷಾಂತರ ನಿಷೇಧ ಮಸೂದೆ’ಯನ್ನು ಭಾರತದ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಂಡಿವೆ.

ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ನಡೆದ ಶಾಸಕರ ರೆಸಾರ್ಟ್-ಹೊೈಕೈ ರಾಜಕಾರಣ, ಕುದುರೆ ವ್ಯಾಪಾರ ಹಾಗೂ ಇವೆಲ್ಲಕ್ಕೂ ಮುಕುಟವಿಟ್ಟಂತೆ ನಡೆದ ಆಡಿಯೋ ಪ್ರಕರಣ ಪ್ರಜಾಪ್ರಭುತ್ವದ ಮೇಲೆ ಜನಸಾಮಾನ್ಯರಿಗೆ ಇರುವ ನಂಬಿಕೆ ಮತ್ತು ಭರವಸೆಗಳ ಮೇಲೆ ತೀವ್ರ ಪರಿಣಾಮ ಬೀರಿದ ವಿದ್ಯಮಾನ. ಈ ಘಟನೆಯಲ್ಲಿ ಸಭಾಧ್ಯಕ್ಷರು, ವಿರೋಧಪಕ್ಷದ ನಾಯಕರು, ಶಾಸಕರ ಉಲ್ಲೇಖವಿದ್ದು, ಇಡೀ ಘಟನಾವಳಿ ಸ್ವತಃ ಮುಖ್ಯಮಂತ್ರಿಗಳಿಂದಲೇ ಸಂಘಟಿಸಲ್ಪಟ್ಟಿದೆಯೆಂಬ ಆರೋಪ ಬೇರೆ! ಇಂಥ ಗಂಭೀರ ಸ್ವರೂಪದ ಪ್ರಕರಣದ ತನಿಖೆಯನ್ನು ಸರ್ಕಾರ ವಿಶೇಷ ತನಿಖಾ ದಳಕ್ಕೆ (SIT) ವಹಿಸಿದ್ದು, ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿ, ಸಭಾಧ್ಯಕ್ಷ, ವಿರೋಧಪಕ್ಷ ನಾಯಕ ಮತ್ತು ಶಾಸಕರು ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಒಳಪಡುವ ಸಂದರ್ಭವೇ ಊಹೆಗೂ ನಿಲುಕದ ದುರಂತ. ಮಾತ್ರವಲ್ಲ, ಇದು ನಿಜಕ್ಕೂ ಪ್ರಜಾಪ್ರಭುತ್ವದ ಪರಿಹಾಸ್ಯವೇ!

ರಾಜಕಾರಣದಲ್ಲಿ ಸ್ವಲ್ಪಮಟ್ಟಿಗಾದರೂ ನೈತಿಕತೆಯನ್ನು ಪ್ರತಿಷ್ಠಾಪಿಸಬೇಕೆಂಬ ಮಹದಾಶಯದೊಂದಿಗೆ ಜಾರಿಗೆ ತಂದ ‘ಪಕ್ಷಾಂತರ ನಿಷೇಧ ಮಸೂದೆ’ಯನ್ನು ಭಾರತದ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಂಡಿವೆ. ನರಸಿಂಹರಾವ್ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾದ ಸಂಸದರ ಖರೀದಿ ಪ್ರಕರಣ; ಸೋಮನಾಥ ಚಟರ್ಜಿಯವರು ಲೋಕಸಭಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ವಿದೇಶ ಪ್ರವಾಸದ ಬಗ್ಗೆ ನಕಲಿಬಿಲ್ಲುಗಳನ್ನು ನೀಡಿದ ಪ್ರಕರಣದಲ್ಲಿ 10 ಲೋಕಸಭಾ ಸದಸ್ಯರನ್ನು ಅಮಾನತುಗೊಳಿಸಿದ ಪ್ರಕರಣ; ಹರ್ಯಾಣದಲ್ಲಿ ಭಜನ್‍ಲಾಲ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಯಾರಾಂ-ಗಯಾರಾಂ ಪ್ರಕರಣ; ತೆಲಂಗಾಣದಲ್ಲಿ ತೆಲುಗುದೇಶಂ ಶಾಸಕರು ಸಾಮೂಹಿಕವಾಗಿ ತೆಲಂಗಾಣ ರಾಷ್ತ್ರೀಯ ಪಕ್ಷವನ್ನು ಸೇರಿದ್ದ ಘಟನೆ; ತೆಲಂಗಾಣ ರಚನೆಗೆ ಒತ್ತಾಯಿಸಿ ಟಿ.ಆರ್.ಎಸ್. ಪಕ್ಷ ತನ್ನ 18 ಲೋಕಸಭಾ ಸದಸ್ಯರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದ ವಿದ್ಯಮಾನ; ಕರ್ನಾಟಕದಲ್ಲಿ ‘ಆಪರೇಷನ್ ಕಮಲ’ದ ಹಿನ್ನೆಲೆಯಲ್ಲಿ 23 ಉಪಚುನಾವಣೆಗಳು ನಡೆಯುವಂತಾಗಿದ್ದು; ತಮಿಳುನಾಡಿನಲ್ಲಿ 18 ಮಂದಿ ಶಾಸಕರ ಅನರ್ಹತೆ ಮತ್ತು ತದನಂತರದಲ್ಲಿ ಶಾಸಕರ ಅನರ್ಹತೆಯನ್ನು ಸುಪ್ರೀಂಕೋರ್ಟಿನಲ್ಲಿ ಎತ್ತಿಹಿಡಿದದ್ದು; ಕರ್ನಾಟಕದಲ್ಲಿ ಯಡಿಯೂರಪ್ಪನವರ ಅಧಿಕಾರಾವಧಿಯಲ್ಲಿ 16 ಶಾಸಕರ ಅನರ್ಹತೆ ವಿಚಾರದಲ್ಲಿ ಅಂದಿನ ವಿಧಾನಸಭಾ ಅಧ್ಯಕ್ಷರು ನಡೆದುಕೊಂಡ ರೀತಿ ಸಭಾಧ್ಯಕ್ಷರ ಪಕ್ಷಪಾತದ ನಡವಳಿಕೆಯನ್ನು ಹಾಗೂ ರಾಜಕಾರಣದಲ್ಲಿನ ನೈತಿಕತೆಯನ್ನೇ ಪ್ರಶ್ನಿಸುವಷ್ಟರಮಟ್ಟಿಗೆ ಸಾರ್ವಜನಿಕ ಚರ್ಚೆಗೆ ಒಳಗಾಗಿದ್ದು ಹಾಗೂ ಈ ಪ್ರಕರಣ ನಂತರದಲ್ಲಿ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಗೆ ಒಳಗಾಗಿದ್ದು -ಇವೆಲ್ಲಾ ಇತಿಹಾಸದಲ್ಲಿ ದಾಖಲಾಗಿವೆ.

ಅಗಾಧ ವ್ಯೆವಿಧ್ಯ ಹೊಂದಿರುವ ಭಾರತದಂತಹ ದೇಶದಲ್ಲಿ ಇಂತಹ ವಿದ್ಯಮಾನಗಳು ಕಂಡುಬರುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಇಷ್ಟೆಲ್ಲಾ ಗೊಂದಲ ಹಾಗೂ ವಿವಾದಗಳ ನಡುವೆಯೂ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಮುಂದುವರಿದುಕೊಂಡು ಬಂದಿದೆ ಹಾಗೂ ಅದು ಮುಂದೆಯೂ ಹೀಗೆಯೇ ಮುಂದುವರಿದುಕೊಂಡು ಹೋಗುವ ಲಕ್ಷಣಗಳಿವೆ ಎನ್ನುವುದನ್ನು ನಾವು ಗುರುತಿಸಿದರೆ ಭಾರತದ ಪ್ರಜಾಪ್ರಭುತ್ವದ ಅಗಾಧ ಅಂತಃಶಕ್ತಿಯ ಅರಿವು ನಮಗಾಗುತ್ತದೆ.

*ಲೇಖಕರು ಮಾಜಿ ಸಭಾಪತಿಗಳು, ಕರ್ನಾಟಕ ವಿಧಾನಪರಿಷತ್ತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷರು.

Leave a Reply

Your email address will not be published.