ಪ್ರಜಾಪ್ರಭುತ್ವದ ಬುನಾದಿಗೆ ಪೆಟ್ಟು ಕೊಟ್ಟ ಕರ್ನಾಟಕದ ಜಾತಿ ರಾಜಕಾರಣ

-ರಾಜೇಂದ್ರ ಚೆನ್ನಿ

ಅನೈತಿಕ ರಾಜಕೀಯವು ಧಾರ್ಮಿಕ ಸಂಸ್ಥೆಗಳನ್ನು ಪ್ರಭಾವಿಸಿದೆ. ಪರಿಣಾಮವೆಂದರೆ ಈ ಸಂಸ್ಥೆಗಳು ಹಾಗೂ ಅವುಗಳ ಧುರೀಣರು ಸದ್ಯದ ರಾಜಕೀಯದ ನುಡಿಗಟ್ಟನ್ನು ಮತ್ತು ಕಾರ್ಯವಿಧಾನಗಳನ್ನು ಸಂಪೂರ್ಣವಾಗಿ ಅನುಸರಿಸುತ್ತಿವೆ. ಈ ಪ್ರಕ್ರಿಯೆಯಲ್ಲಿ ತಮ್ಮ ಆಧ್ಯಾತ್ಮಿಕ ಅಧಿಕಾರವನ್ನು ಕಳೆದುಕೊಂಡಿರುವುದರಿOದ ಈಗ ರಾಜಕೀಯ ಅಧಿಕಾರದ ಅನುಕರಣೆಯ ಹೊರತಾಗಿ ಇನ್ನೇನೂ ಮಾಡಲಾಗದ ಸ್ಥಿತಿಯಲ್ಲಿವೆ.

ಕರ್ನಾಟಕ ರಾಜ್ಯದಲ್ಲಿ ಮಠಗಳು ಮತ್ತು ರಾಜಕೀಯ ಪಕ್ಷಗಳ ಸಂಬAಧವನ್ನು ಗುರುತಿಸುವುದಕ್ಕಾಗಿ ಮುಖ್ಯವಾಗಿ ಮೂರು ವಿದ್ಯಮಾನಗಳನ್ನು ಗಮನಿಸಬೇಕಾಗುತ್ತದೆ. ಮೊದಲನೆಯದು, ಆಧುನಿಕ ಕಾಲದಲ್ಲಿ, ವಸಾಹತುಶಾಹಿ ಸಂದರ್ಭದಲ್ಲಿ ಜಾತಿ ಸಂಘಟನೆಗಳು ಅಸ್ತಿತ್ವಕ್ಕೆ ಬಂದು ಜಾತಿ ಅಥವಾ ಉಪಜಾತಿ ಪ್ರಜ್ಞೆಯನ್ನು ಗಟ್ಟಿಗೊಳಿಸಿದ್ದು. ಎರಡನೆಯದು, ಏಕೀಕರಣ ಚಳವಳಿಯಲ್ಲಿ ಮೂರು ಪ್ರಧಾನ ಜಾತಿಗಳು ವಹಿಸಿದ ಪಾತ್ರ ಮತ್ತು ಮೈಸೂರು ಅಥವಾ ಕರ್ನಾಟಕ ರಾಜ್ಯವು ಒಂದು ವಾಸ್ತವವಾಗುತ್ತಿದ್ದಂತೆಯೆ ಕರ್ನಾಟಕದಲ್ಲಿ ತೀವ್ರಗೊಂಡ ಎರಡು ಪ್ರಭಾವಿ ಜಾತಿಗಳ ರಾಜಕೀಯ ಏರಾಟ. ಮೂರನೆಯದಾಗಿ ಕರ್ನಾಟಕ ರಾಜ್ಯದಲ್ಲಿ ಬಿ.ಜೆ.ಪಿ. ರಾಜಕೀಯವು ಜಾತಿ ರಾಜಕೀಯವಾಗಿ ಮಾರ್ಪಾಡಾದುದು.

ಈ ವಿಷಯಗಳನ್ನು ನಾನು ಚರ್ಚಿಸುತ್ತಿರುವ ಹಿನ್ನೆಲೆಯೆಂದರೆ ಅನೇಕ ವರ್ಷಗಳಿಂದ ನಾನು ಬರೆಯುತ್ತಾ ಬಂದಿರುವAತೆ ‘ಕರ್ನಾಟಕ ಸಮಾಜವು ಜಾತಿಸಮಾಜವಾಗಿ ಆಖೈರಾಗಿ ಪರಿವರ್ತನೆ ಹೊಂದಿದೆ’ ಎನ್ನುವ ವಾಸ್ತವವಾಗಿದೆ. ಇದು ಅವಸರದ ಜಾತಿ ವಿರೋಧಿ ಹೇಳಿಕೆಯಲ್ಲ. ಸಮಾಜವಿಜ್ಞಾನಗಳ ನುಡಿಗಟ್ಟಿನಲ್ಲಿ ಪ್ರಸ್ತಾಪ ಮಾಡುತ್ತಿರುವ ಒಂದು ಗ್ರಹಿಕೆ.

ಬಹುಪಾಲು ವಿದ್ವಾಂಸರು ಒಪ್ಪುವಂತೆ ಭಾರತದಲ್ಲಿ ಜಾತಿವ್ಯವಸ್ಥೆಯು ಖಚಿತವಾಗಿ ಗೊತ್ತಿರದ ಒಂದು ಕಾಲದಲ್ಲಿ ಹುಟ್ಟಿಕೊಂಡು ಸದಾಕಾಲ ಬದಲಾಗುತ್ತ, ಮಾರ್ಪಾಡಾಗುತ್ತಾ ಬಂದಿರುವ ಒಂದು ವ್ಯವಸ್ಥೆಯಾಗಿದೆ. ವರ್ಣವ್ಯವಸ್ಥೆಯಾಗಲಿ, ಜಾತಿವ್ಯವಸ್ಥೆಯಾಗಲಿ ಎಲ್ಲಾ ಕಾಲದಲ್ಲಿಯೂ ಸ್ಥಿರವಾಗಿರಲಿಲ್ಲ; ಜಡವಾಗಿರಲಿಲ್ಲ. ಅವು ಭಾರತೀಯ ಸಮಾಜದಲ್ಲಿ ನಿರಂತರವಾಗಿ ಆಗುತ್ತಿದ್ದ ಸ್ಥಿತ್ಯಂತರಗಳಿಗೆ ಸಂವಾದಿಯಾಗಿ ಬದಲಾಗುತ್ತಲಿದ್ದವು. ಕೇವಲ ಸೈದ್ಧಾಂತಿಕವಾಗಿ ಈ ಪರಿಕಲ್ಪನೆಗಳನ್ನು ಸ್ಥಿರ ಎಂದು ನೋಡಲಾಯಿತು; ವಾಸ್ತವದಲ್ಲಿ ಅವು ಬದಲಾಗುತ್ತಲಿದ್ದವು.

ಇದನ್ನು ವಸಾಹತುಶಾಹಿ ಸಂದರ್ಭದಲ್ಲಿ ನೋಡಬಹುದು. ಬರ್ನಾರ್ಡ್ ಕೋಹ್ನ್ (ಃeಡಿಟಿಚಿಡಿಜ ಏohಟಿ)ರ ಅದ್ಭುತ ವಿಶ್ಲೇಷಣೆಯ ಪ್ರಕಾರ ಭಾರತೀಯ ಜನಗಣತಿ (1891) ಅಲ್ಲಿಯವರೆಗೆ ಅಸ್ಪಷ್ಟ ಗಡಿರೇಖೆಗಳಿದ್ದ ಈuzzಥಿ ಆಗಿದ್ದ ಜಾತಿವ್ಯವಸ್ಥೆಯು ಖಚಿತ ರೂಪ ಪಡೆಯುವಲ್ಲಿ ಸಹಾಯವಾಯಿತು. ಚದುರಿ ಹೋಗಿದ್ದ ಉಪಜಾತಿಗಳು ತಮ್ಮನ್ನು ಒಂದು ಬಲಾಢ್ಯ ಜಾತಿಯ ಭಾಗವಾಗಿ ಗುರುತಿಸಿಕೊಂಡವು. ಜಾತಿ ಸಂಘಟನೆಗಳು, ಸಂಸ್ಥೆಗಳು ಕಾರ್ಯಶೀಲವಾಗಿ ಜಾತಿ ಗುರುತು, ಅಸ್ಮಿತೆ, ಜಾತಿವ್ಯವಸ್ಥೆಯಲ್ಲಿ ತಮ್ಮ ಜಾತಿಯ ಶ್ರೇಣಿ ಅಥವಾ ಸ್ಥಾನಮಾನ ಇವುಗಳನ್ನು ರಚಿಸಿಕೊಂಡು ಜಾತಿಪ್ರಜ್ಞೆಯನ್ನು ಗಟ್ಟಿಗೊಳಿಸಿದವು. ಜಾತಿಯ ಹುಟ್ಟು, ಮೂಲ ಪುರುಷ ಇತ್ಯಾದಿ ಪುರಾಣಗಳು ಹೊಸರೂಪವನ್ನು ಪಡೆದವು. ಆದರೆ ಬ್ರಿಟಿಷ್ ವಸಾಹತುಶಾಹಿಯೇ ಜಾತಿವ್ಯವಸ್ಥೆಯನ್ನು ಹುಟ್ಟುಹಾಕಿತು ಎನ್ನುವ ವಾದವು ಅಚಾರಿತ್ರಿಕವಾಗಿದೆ. ಭಾರತೀಯ ಇತಿಹಾಸದಲ್ಲಿ ನಡೆದ ಎಲ್ಲಾ ಪ್ರಮುಖ ವಿದ್ಯಮಾನಗಳಂತೆ ವಸಾಹತುಶಾಹಿಯೂ ಜಾತಿವ್ಯವಸ್ಥೆಯನ್ನು ಪ್ರಭಾವಿಸಿತು.

ಈ ಪ್ರಕ್ರಿಯೆ ಬೆಳೆದು ಗಟ್ಟಿಗೊಳ್ಳಲು ಇನ್ನೊಂದು ಕಾರಣವೆಂದರೆ ಬ್ರಿಟಿಷ್ ವಸಾಹತುಶಾಹಿಯು ಎಲ್ಲರಿಗೂ ನೀಡಲು ಬಯಸಿದ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲು ಜಾತಿ ಸಂಘಟನೆಗಳು, ಮಠಗಳು ಅವಶ್ಯಕವಾದವು. ಕರ್ನಾಟಕದಲ್ಲಿ ಜಾತಿಸಂಸ್ಥೆಗಳು ಔಪಚಾರಿಕವಾಗಿ ಅಸ್ತಿತ್ವಕ್ಕೆ ಬಂದದ್ದು ಇಂಥ ಸಂದರ್ಭದಲ್ಲಿ. ಯುವಕರಿಗೆ ಉಚಿತ ಹಾಸ್ಟೆಲ್‌ಗಳು, ಶಿಷ್ಯವೇತನ, ಧನಸಹಾಯ ಇವುಗಳನ್ನು ಎಲ್ಲಾ “ಎಚ್ಚೆತ್ತ” ಜಾತಿಗಳು ಮಾಡತೊಡಗಿದವು. ಉದ್ದೇಶವು ಒಳ್ಳೆಯದಾಗಿದ್ದರೂ ಇದು ಖಂಡಿತವಾಗಿ ಜಾತಿಪ್ರಜ್ಞೆಯನ್ನು ಗಟ್ಟಿಗೊಳಿಸಿತು.

ಕರ್ನಾಟಕದಲ್ಲಿ ಕೆಲವು ಲಿಂಗಾಯತ ಮಠಗಳು ಮುಂದೆ ಎಲ್ಲಾ ಜಾತಿಯ ಯುವಕರಿಗೆ ಆಸರೆ ನೀಡಿದವು ಎನ್ನುವುದು ನಿಜ. ಅಷ್ಟೇ ನಿಜವೆಂದರೆ ಈ ಮಠಗಳು ವಾಸ್ತವವಾಗಿ ಕೆಲವು ಉಪಜಾತಿಗಳಿಂದ ಬೆಂಬಲ ಪಡೆದಿದ್ದರೂ ತಮ್ಮನ್ನು ಉಪಜಾತಿಗಳೊಂದಿಗೆ ಗುರುತಿಸಿಕೊಳ್ಳಲಿಲ್ಲ. ಆಗ ತಾನೆ ಫ.ಗು.ಹಳಕಟ್ಟಿ, ಶಿ.ಶಿ.ಬಸವನಾಳ ಇವರ ಪ್ರಯತ್ನದಿಂದಾಗಿ ಲಿಂಗಾಯತರ ಅಸ್ಮಿತೆಯನ್ನು ವಚನಕಾರರ ಧರ್ಮ ಹಾಗೂ ಸಿದ್ಧಾಂತಗಳ ನೆಲೆಯ ಮೇಲೆ ರಚಿಸುವ ಕೆಲಸ ನಡೆಯುತ್ತಿದ್ದರಿಂದ ಬೆರಳೆಣಿಕೆಯ ಕೆಲವು ಮಠಗಳು ‘ಜಾತ್ಯಾತೀತ’ ನಡುವಳಿಕೆಯನ್ನು ರೂಢಿಸಿಕೊಂಡವು. ಇದರ ಜೊತೆಗೆ ಕರ್ನಾಟಕದಲ್ಲಿ ಆರಂಭವಾದ ಇನ್ನೊಂದು ರೋಚಕವಾದ, ಅಷ್ಟೇ ವಿವಾದಾತ್ಮಕವಾದ ವಿದ್ಯಮಾನವೆಂದರೆ ಲಿಂಗಾಯತ ಬ್ರಾಹ್ಮಣ ಘರ್ಷಣೆಗಳು. ಇದನ್ನು ಎಂ.ಚಿದಾನAದಮೂರ್ತಿ ಹಾಗೂ ವಿಜಯಕುಮಾರ್ ಬೋರಟ್ಟಿಯವರು ವಿವರವಾಗಿ ವಿಶ್ಲೇಷಿಸಿದ್ದಾರೆ. ಇವರ ಬರಹಗಳು ಎತ್ತಿ ತೋರಿಸುವ ಹಾಗೆ ವೀರಶೈವ-ಲಿಂಗಾಯತ ಎನ್ನುವ ವಿವಾದವು ಕೂಡ ಈ ಕಾಲದ ಫಲಶೃತಿಯಾಗಿತ್ತು.

ಏಕೀಕರಣದ ಧಾರವಾಡ ಕೇಂದ್ರಿತ ಚಳವಳಿಯಲ್ಲಿ ಮೊದಲು ನಾಯಕತ್ವ ವಹಿಸಿದ್ದು ಬಾಲಗಂಗಾಧರ ತಿಲಕ್ ಅವರಿಂದ ಪ್ರಭಾವಿತರಾದ ಬ್ರಾಹ್ಮಣ ಶಿಕ್ಷಿತ, ಸಾಹಿತ್ಯಿಕ ವರ್ಗ. ಆದರೆ ಚಳವಳಿಯ ಮುಂದಿನ ಹಂತದಲ್ಲಿ ಲಿಂಗಾಯತರು ಕೂಡ ಮುನ್ನೆಲೆಗೆ ಬಂದು ಚಳವಳಿಯಲ್ಲಿ ಪಾಲುಗೊಂಡರು. ಕೆಲವು ಮಠಗಳ ಸ್ವಾಮಿಗಳು ಕೂಡ ಅತ್ಯಂತ ಕ್ರಿಯಾಶೀಲರಾದರು. ಆದರೆ ಗಾಂಧಿಯವರ ಒಪ್ಪಿಗೆ, ಕಾಂಗ್ರೆಸ್‌ನ ಸಮ್ಮತಿ ಇತ್ಯಾದಿಗಳಿಂದಾಗಿ ಗಟ್ಟಿಗೊಂಡ ಏಕೀಕರಣ ಚಳವಳಿಯು ಸ್ವಾತಂತ್ರö್ಯ ಬಂದ ಮೇಲೆ ನೆಹರೂ ಅವರ ಅಸಮ್ಮತಿಯಿಂದಾಗಿ ಕರ್ನಾಟಕ ರಾಜ್ಯವನ್ನು ಕಾಣುವುದರಲ್ಲಿ ವಿಳಂಬ ಅನುಭವಿಸಿತು. ಇದೇ ಹೊತ್ತಿನಲ್ಲಿ ಕರ್ನಾಟಕವು ಏಕೀಕರಣಗೊಂಡರೆ ಒಟ್ಟು ರಾಜಕೀಯ ಏರಾಟದಲ್ಲಿ ಲಿಂಗಾಯತರು ಅಧಿಕಾರ ಪಡೆದು ಒಕ್ಕಲಿಗರು ಹಿಂದೆ ಬೀಳುತ್ತಾರೆ ಎಂದು ವಾದಿಸಿ ಮೈಸೂರು ಪ್ರಾಂತ್ಯದಲ್ಲಿ ಏಕೀಕರಣವನ್ನು ರಾಜಕೀಯ ಧುರೀಣರು ವಿರೋಧಿಸಿದರು.

ಕೊನೆಗೆ ಕೆಂಗಲ್ ಹನುಮಂತಯ್ಯ ಮತ್ತು ಮುಖ್ಯವಾಗಿ ಕನ್ನಡದ ಸಾಂಸ್ಕೃತಿಕ ಮುಂದಾಳುಗಳಿAದಾಗಿ 1956ರಲ್ಲಿ ವಿಶಾಲ ಮೈಸೂರು ಅಸ್ತಿತ್ವಕ್ಕೆ ಬಂದಿತು. ಅಂದಿನಿAದ ಇಂದಿನವರೆಗೆ ಕರ್ನಾಟಕ ರಾಜಕೀಯವು ಈ ಎರಡು ಪ್ರಭಾವಿ ಜಾತಿಗಳ (ಜomiಟಿಚಿಟಿಣ ಛಿಚಿsಣes) ರಾಜಕೀಯವೇ ಆಗಿದೆ. ಇದು ಅನೇಕ ದಶಕಗಳ ಕಾಲ ಬಿರುಕಿಲ್ಲದಂತೆ ನಡೆಯಿತು. ಬದಲಾವಣೆಗೆ ಕಾರಣಗಳೆಂದರೆ ಶಿಕ್ಷಣ, ಆಧುನಿಕತೆ. ಇವುಗಳಿಂದಾಗಿ ಇತರ ಹಿಂದುಳಿದ ಜಾತಿಗಳು ಸಹಿಷ್ಣುತೀತವಾಗತೊಡಗಿದವು. ತಮ್ಮ ರಾಜಕೀಯ ಅಧಿಕಾರದ ಬಗ್ಗೆ ಚೌಕಾಶಿ ಮಾಡತೊಡಗಿದವು. ಅಲ್ಲದೆ ಸಮಾಜವಾದಿ ಚಿಂತನೆ, ಚಳವಳಿಗಳ ಪ್ರಭಾವದಲ್ಲಿ ಹಿಂದುಳಿದ ಜಾತಿಗಳ ರಾಜಕೀಯವು ಗಟ್ಟಿಗೊಳ್ಳತೊಡಗಿತು. ಉದಾಹರಣೆಗೆ ಕಾಗೋಡು ಸತ್ಯಾಗ್ರಹದ ನಂತರ ಅರಸು, ಬಂಗಾರಪ್ಪ ಕಾಲದವರೆಗೆ ಇದನ್ನು ನೋಡಬಹುದಾಗಿದೆ.

ಎರಡು ಕಾರಣಗಳಿಂದಾಗಿ ಕರ್ನಾಟಕದಲ್ಲಿ ಸಾಂಸ್ಥಿಕವಾದ ಜಾತಿ ರಾಜಕೀಯವು ಅಷ್ಟು ಗಮನಾರ್ಹವಾಗಿ ಬೆಳೆದಿರಲಿಲ್ಲ. ಒಂದು ಯಾವುದನ್ನು ಓehಡಿuಡಿiಚಿಟಿ ಅoಟಿseಟಿsus ಎಂದು ಕರೆಯುತ್ತೇವೆಯೋ ಅಂಥ ಒಂದು ಕಾಂಗ್ರೆಸ್ ರಾಜಕೀಯ ಚೌಕಟ್ಟು ಸ್ವಲ್ಪಮಟ್ಟಿಗಿನ ಜಾತ್ಯಾತೀತತೆಯ ರೆಟರಿಕ್ ಅನ್ನು ಸೈದ್ಧಾಂತಿಕತೆಯನ್ನು ಉಳಿಸಿಕೊಂಡಿದ್ದರಿAದ ಹಾಗೂ ಅದರ ಬಹುಮತವು ಸ್ಥಿರವಾಗಿದ್ದರಿಂದ ಜಾತಿಗಳ ನಡುವೆ ಹೊಂದಾಣಿಕೆಯ ರಾಜಕೀಯವೇ ಮುಖ್ಯವಾಗಿತ್ತು. ಪ್ರತ್ಯೇಕವಾದ ನಿರೀಕ್ಷೆಗಳು, ಬೇಡಿಕೆಗಳು ಇದ್ದರೂ ಕೂಡ ಜಾತಿಗಳು ತಮ್ಮ ಹಕ್ಕೊತ್ತಾಯಗಳನ್ನು ಹೊಂದಾಣಿಕೆ, ಚೌಕಾಶಿ ಮುಂತಾದ ನುಡಿಗಟ್ಟಿನಲ್ಲಿ ಮಂಡಿಸುತ್ತಿದ್ದವು. ಎರಡನೆಯ ಕಾರಣವೆಂದರೆ ಹಳೆಯ ಲಿಂಗಾಯತ ಮಠಗಳು ಮತ್ತು ಬ್ರಾಹ್ಮಣ ಮಠಗಳು ಪ್ರಬಲವಾಗಿದ್ದವು. ಉಪಜಾತಿಯ ಹೆಸರಲ್ಲಿ ಮಠಗಳ ಸ್ಥಾಪನೆ ಆಗಿರಲಿಲ್ಲ (ಹಾಗೆಂದ ಮಾತ್ರಕ್ಕೆ ಉಪಜಾತಿಗಳು ಮುಖ್ಯವಾಗಿರಲಿಲ್ಲವೆಂದಲ್ಲ, ಅವು ಸಾಂಸ್ಥೀಕರಣಗೊAಡಿರಲಿಲ್ಲ).

ಒಕ್ಕಲಿಗರ ಆದಿಚುಂಚನಗಿರಿ ಮಹಾಸಂಸ್ಥಾನ ಹಾಗೂ ಮಠಗಳು ಬೆಳೆದದ್ದು ಕರ್ನಾಟಕ ರಾಜಕೀಯದಲ್ಲಿ ಜಾತಿ ಧ್ರುವೀಕರಣದ ಪ್ರಮುಖ ಹೆಜ್ಜೆ ಆಯಿತು. ಬಹುಮುಖ್ಯವಾದ ಬದಲಾವಣೆ ಬಂದಿದ್ದು ಪ್ರತಿಷ್ಠಿತ ಮಠದ ಸ್ವಾಮಿ ಒಬ್ಬರು ಎಲ್ಲಾ ಹಿಂದುಳಿದ ಜಾತಿಗಳಿಗೆ ಒಂದು ಮಠ, ಮಠಾಧಿಪತಿ ಇರಬೇಕು, ಇದರಿಂದ ಆ ಜಾತಿಗಳ ಉದ್ಧಾರವಾಗುತ್ತದೆ ಎನ್ನುವ ಬೋಳೆ ಆದರೆ ಅತ್ಯಂತ ಅಪಾಯಕಾರಿ ಕ್ರಮವನ್ನು ಆರಂಭಿಸಿದ್ದು. ಅಲ್ಲಮ, ಬಸವ ಯಾರೂ ಮಾಡದಿದ್ದ ‘ಕ್ರಾಂತಿಕಾರಿ’ ಕೆಲಸವನ್ನು ಮಾಡುತ್ತಿದ್ದೇವೆ ಎನ್ನುವ ನಂಬಿಕೆಯಲ್ಲಿ ಈ ವಿದ್ಯಮಾನ ನಡೆಯಿತು. ಜೊತೆಗೆ ನಾವು ಬಲ್ಲ ಚರಿತ್ರೆಯಲ್ಲಿ ಲಿಂಗಾಯತ ಜಾತಿಯು ಯಾವಾಗಲೂ ಅನೇಕ ಉಪಜಾತಿಗಳ ಒಂದು ರಚನೆಯಾಗಿತ್ತು ಹಾಗೂ ಈ ಉಪಜಾತಿಗಳಲ್ಲಿ ಶ್ರೇಣೀಕರಣ ಪ್ರಬಲವಾಗಿತ್ತು.

ಇಂಥ ಸಂದರ್ಭದಲ್ಲಿ ಮಾನ್ಯ ಯಡಿಯೂರಪ್ಪನವರು ಬಿ.ಜೆ.ಪಿ. ಧುರೀಣರಾದ ಮೇಲೆ, ಭಾರತದಲ್ಲಿ ಆಗ ಬೆಳೆಯುತ್ತಿದ್ದ ಬಲಪಂಥೀಯ ರಾಜಕೀಯದ ಬೆಂಬಲದೊAದಿಗೆ ಉಳಿದ ರಾಜ್ಯಗಳಲ್ಲಿ ಕಾಣದ ವಿಶಿಷ್ಟ ಜಾತಿಕೇಂದ್ರಿತ ಬಿ.ಜೆ.ಪಿ. ರಾಜಕಾರಣವನ್ನು ಆರಂಭಿಸಿದರು. ಲೇಖನದ ವ್ಯಾಪ್ತಿಯಲ್ಲಿ ಚರ್ಚಿಸಲಾಗದ ಅನೇಕ ಕಾರಣಗಳಿಂದಾಗಿ ಯಡಿಯೂರಪ್ಪನವರು ಲಿಂಗಾಯತ ಸಮುದಾಯದ ಏಕೈಕ ರಾಜಕೀಯ ಪ್ರತಿನಿಧಿಗಳೆಂದು ಬಿಂಬಿಸುವುದರಲ್ಲಿ ಮಠಗಳು ಬಹುದೊಡ್ಡ ಪಾತ್ರ ವಹಿಸಿದವು. ಅದರ ಜೊತೆಗೆ ಹಿಂದುತ್ವದ ಈ ರಾಜ್ಯಕ್ಕೆ ವಿಶಿಷ್ಟವಾದ ವ್ಯಾಖ್ಯಾನದ ಪ್ರಕಾರ ಎಲ್ಲಾ ಜಾತಿಯ ಎಲ್ಲಾ ಮಠಗಳಿಗೆ, ಧಾರ್ಮಿಕ ಸಂಸ್ಥೆಗಳಿಗೆ ಸರಕಾರವು ನೇರವಾಗಿ ಪ್ರಜೆಗಳು ಕೊಟ್ಟ ದುಡ್ಡನ್ನು ಹಂಚುವ ಪ್ರಜಾಪ್ರಭುತ್ವ ವಿರೋಧಿ ಕಾರ್ಯಚಟುವಟಿಕೆ ಆರಂಭವಾದವು. ಇದಕ್ಕೂ ಸೆಕ್ಯೂಲರಿಸಮ್ ಮತ್ತು ಹಿಂದುತ್ವ ವಾದಕ್ಕೆ ಯಾವ ಸಂಬAಧವೂ ಇಲ್ಲ. ಭಾರತದ ಸಂವಿಧಾನದ ಚೌಕಟ್ಟಿನೊಳಗೆ, ಜನರಿಂದ ಆಯ್ಕೆಯಾದ ಸರಕಾರವು ಕೇವಲ ಆಳುವ ಪಕ್ಷಕ್ಕೆ ಬೆಂಬಲ ಪಡೆಯುವುದಕ್ಕಾಗಿ ಪ್ರಜೆಗಳ ದುಡ್ಡನ್ನು ಹಂಚುವ ಭ್ರಷ್ಟ ಹಾಗೂ ಅನೈತಿಕ ವ್ಯವಹಾರವಿದಾಗಿದೆ. ದೇಶದ ಯಾವ ಕಾನೂನಿನ ಪ್ರಕಾರವೂ ಇದು ಆರ್ಥಿಕ ಅಪರಾಧವಾಗಿದೆ.

ದುರ್ದೈವದಿಂದ ಈ ರಾಜಕೀಯದ ನಂತರವೂ ಬಹುಮತ ಸಿಕ್ಕದ ಮಿಶ್ರಸರಕಾರಗಳ ಶಕೆ ಕರ್ನಾಟಕದಲ್ಲಿ ಆರಂಭವಾಯಿತು. ಇಂಥ ಸರಕಾರಗಳ ಅಸ್ಥಿರತೆಯಿಂದಾಗಿ ಜಾತಿಕೇಂದ್ರಿತವಾದ voಣe bಚಿಟಿಞ ಗಳಾಗಿರುವ ಮಠಗಳು ನೇರವಾಗಿ ಅಖಾಡಾಕ್ಕೆ ಇಳಿದುಬಿಟ್ಟವು. ಇತ್ತೀಚಿನ ವರ್ಷಗಳಲ್ಲಿ ಅವುಗಳು ಎತ್ತಿಕೊಂಡ ಕಾರ್ಯಸೂಚಿಯೆಂದರೆ ತಮ್ಮ ಉಪಜಾತಿ ಅಥವಾ ಜಾತಿಗಳಿಗೆ ಹೆಚ್ಚಿನ ಅವಕಾಶಗಳು ಸಿಗಲು ಅನುಕೂಲವಾಗುವಂತೆ ಮೀಸಲಾತಿಯಲ್ಲಿ ಅವುಗಳನ್ನು ಎಸ್.ಟಿ., 2ಎ, 2ಬಿ ಇತ್ಯಾದಿ ಗುಂಪುಗಳಿಗೆ ಸೇರಿಸಲು ಮಾಡುತ್ತಿರುವ ಒತ್ತಾಯ. ಇವುಗಳಿಗಾಗಿ ಉಗ್ರ ಹೋರಾಟ ಮಾಡುತ್ತಿರುವ ಸಂಸ್ಥೆಗಳು ಬಲಿಷ್ಠವಾದ ಜಾತಿಗಳನ್ನು ಪ್ರತಿನಿಧಿಸುತ್ತವೆ. ಎಸ್.ಟಿ., 2ಎ, 2ಬಿ ಇತ್ಯಾದಿ ಕೆಟೆಗರಿಗಳಲ್ಲಿ ಈಗ ಇರುವ ಅನೇಕಾನೇಕ ದುರ್ಬಲ ಜಾತಿ ಉಪಜಾತಿಗಳಿಗೆ ಇದರಿಂದ ಬಹುದೊಡ್ಡ ಪೆಟ್ಟು ಬೀಳುವುದು ಖಚಿತ.

ನನ್ನ ದೃಷ್ಟಿಯಲ್ಲಿ ಈ ಚಟುವಟಿಕೆಗಳ ಹಿಂದೆ ಇರುವ ಬಹು ಕ್ರೂರವಾದ ರಾಜಕೀಯವೆಂದರೆ ಸಂವಿಧಾನವು ಕಲ್ಪಿಸಿದ ಮೀಸಲಾತಿಯ ಪರಿಕಲ್ಪನೆಯನ್ನೇ ನಾಶಮಾಡಿ, ಕೊನೆಗೆ ದಲಿತರನ್ನು ಅನಾಥsÀರನ್ನಾಗಿ ಮಾಡುವುದು. ‘ಅವರಿಗ್ಯಾಕೆ ಮೀಸಲಾತಿ’ ಎನ್ನುವ ಪೂರ್ವಗ್ರಹದ ಆಧಾರದ ಮೇಲೆ ‘ನಮಗೇಕೆ ಬೇಡ’ ಎನ್ನುವ ಚಳವಳಿಗಳು ಅನೇಕ ರಾಜ್ಯಗಳಲ್ಲಿ ಆರಂಭವಾಗಿವೆ. ಎಲ್ಲಾ ರಾಜ್ಯಗಳಲ್ಲಿ ಇವುಗಳ ಮುಂಚೂಣಿಯಲ್ಲಿ ಪ್ರಬಲ ಶೂದ್ರ, ಹಿಂದುಳಿದ ಜಾತಿಗಳೇ ಇವೆ. ಮೀಸಲಾತಿಯನ್ನು ಯಾವತ್ತೂ ದ್ವೇಶಿಸುವ ಬ್ರಾಹ್ಮಣ ವರ್ಗವಂತೂ ‘ಮೆರಿಟ್’ ಎನ್ನುವ ಅಸ್ತçವನ್ನು ಝಳಪಿಸುತ್ತಲೇ ಬಂದಿದೆ.

ಇಷ್ಟೊAದು ಅವಸರವೇಕೆಂದರೆ ಜಾತಿ ಆಧಾರಿತ ಜನಗಣತಿಯ ವರದಿ ಹೊರಬರುವ ಮೊದಲು ಕಾರ್ಯಸಾಧಿಸಬೇಕಾಗಿದೆ. ಈ ವಿದ್ಯಮಾನದ ವಿರುದ್ಧ ದಲಿತ ರಾಜಕೀಯವು ಮೂಕವಾಗಿದೆ. ಏಕೆಂದರೆ ಕರ್ನಾಟಕದ ಎಲ್ಲಾ ಧಾರ್ಮಿಕ ಸಂಸ್ಥೆಗಳು ಅಪಾರ ಆಸ್ತಿ, ಭೂ ಒಡೆತನ ಅಲ್ಲದೆ ನಾನು ಹೇಳಲಾಗದ ಹಣದ ಶಕ್ತಿ ಇರುವ ಸಂಸ್ಥೆಗಳಾಗಿವೆ. ಹೀಗಾಗಿ, ಒಂದು ಕಾಲದಲ್ಲಿ ಖಾದಿ, ಕಾವಿ, ಖಾಕಿ ಇವುಗಳನ್ನು ನಂಬಬೇಡ ಎನ್ನುವ ನಾಣ್ಣುಡಿಯಿದ್ದ ಕರ್ನಾಟಕದಲ್ಲಿ ಕಾವಿಯು ಖಾದಿಯನ್ನು ದಾಟಿಕೊಂಡು ರಾಜಕೀಯ ಅಧಿಕಾರವನ್ನು ಪಡೆದುಕೊಳ್ಳುತ್ತಿದೆ. ಅಥವಾ ಇವೆರಡರ ಅಮರಪ್ರೇಮದಿಂದಾಗಿ ಕರ್ನಾಟಕ ರಾಜಕೀಯದ ಕೆಲವು ಒಳ್ಳೆಯ ಅಂಶಗಳಾಗಿದ್ದ ವಿಕೇಂದ್ರೀಕರಣ, ಸಮಾಜ ಕಲ್ಯಾಣಬದ್ಧ ಸರಕಾರ, ದುರ್ಬಲ ಜಾತಿಗಳಿಗೆ ಬೆಂಬಲ, ಮತಾಂಧತೆಯಿAದ ದೂರವಿಟ್ಟುಕೊಂಡು ಆಡಳಿತ ಇವೆಲ್ಲವೂ ಸಂಪೂರ್ಣ ವಿನಾಶವಾಗುತ್ತಲಿವೆ.

ಈಗ ನಡೆಯುತ್ತಿರುವ ವಿವಾದಾತ್ಮಕವಾದ ಚರ್ಚೆಯೆಂದರೆ ಮಠಗಳು ತಾವು ಪ್ರತಿನಿಧಿಸುವ ಜಾತಿಯ ಉದ್ಧಾರಕ್ಕಾಗಿ ಯಾಕೆ ಹಕ್ಕೊತ್ತಾಯ ಮಂಡಿಸಬಾರದು? ಪ್ರಜಾಪ್ರಭುತ್ವದಲ್ಲಿ ಅನೇಕ ಸಂಸ್ಥೆಗಳು ಇಂಥ ಚಳವಳಿಗಳ ಮೂಲಕ ಭಾಗವಹಿಸುತ್ತವೆಯಲ್ಲವೆ? ಈ ಪ್ರಶ್ನೆಗಳನ್ನು ಉತ್ತರಿಸುವಾಗ ಕರ್ನಾಟಕದ ಚರಿತ್ರೆಗೆ ವಿಶಿಷ್ಟವಾದ ಒಂದೆರಡು ಸಂಗತಿಗಳನ್ನು ಗಮನಿಸಬೇಕು. ರಾಜಕೀಯದಲ್ಲಿ ಅಲ್ಲದಿದ್ದರೂ ಶಿಕ್ಷಣದ ಮೂಲಕ ಸಾಮಾಜಿಕ ಬದಲಾವಣೆಯಲ್ಲಿ ಮಠಗಳು ಬಹುದೊಡ್ಡ ಪಾತ್ರವಹಿಸಿವೆ. ಬಡ ಕುಟುಂಬಗಳಿAದ ಬಂದ ಮತ್ತು ಅನಾಥರಾಗಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಈ ಮಠಗಳು ಹಿಂದೆ ಆಸರೆ ನೀಡಿವೆ.

ಸರಕಾರದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಮರ್ಪಕವಾದ ಹೂಡಿಕೆ ಇಲ್ಲದ ಮತ್ತು ಕ್ರಿಯಾಶೀಲ ನೀತಿಗಳೇ ಇಲ್ಲದ ಸಂದರ್ಭದಲ್ಲಿ ಮಠಗಳು ಸರಕಾರದ ಕೆಲಸವನ್ನೂ ತಾವೇ ಮಾಡಿದವು. ಇದರಿಂದಾಗಿ ಶಿಕ್ಷಣ ಪಡೆದ ಅಪಾರ ಸಂಖ್ಯೆಯ ವ್ಯಕ್ತಿಗಳಿಂದಾಗಿ ಕರ್ನಾಟಕ ಸಮಾಜದಲ್ಲಿ ಉಂಟಾದ ಬದಲಾವಣೆಗಳನ್ನು ಸಮಾಜಶಾಸ್ತçಜ್ಞರು ಇನ್ನೂ ಅಭ್ಯಾಸ ಮಾಡಿಲ್ಲ. ಅಲ್ಲದೆ ಸ್ಥಳೀಯ ಸಮುದಾಯಗಳಿಗೆ ಎಷ್ಟೋ ಸಾರಿ ಪರ್ಯಾಯ ನ್ಯಾಯವ್ಯವಸ್ಥೆಯಾಗಿಯೂ ಅವು ಕೆಲಸ ಮಾಡಿವೆ. ಧಾರ್ಮಿಕ ಮತ್ತು ಸಾಮಾಜಿಕವೆಂದು ಎರಡು ಹೋಳು ಮಾಡಿ ವಿಶ್ಲೇಷಿಸಿದರೆ ಒಬ್ಬ ನಾರಾಯಣಗುರು ತಂದ ಸಾಮಾಜಿಕ ಬದಲಾವಣೆಗಳನ್ನು ನಾವು ಅರ್ಥಮಾಡಿಕೊಳ್ಳುವುದು ಕಷ್ಟ.

ಈ ಸಂಸ್ಥೆಗಳ ಅವನತಿಯು ಶುರುವಾಗಿದ್ದು ಚುನಾವಣಾ ರಾಜಕೀಯವು ಪಡೆದುಕೊಂಡ ಸ್ವರೂಪದಿಂದಾಗಿ. ಕರ್ನಾಟಕದಲ್ಲಿ ಸೈದ್ಧಾಂತಿಕ ರಾಜಕಾರಣವು ಕಣ್ಮರೆಯಾಗಿ ಬಹಳ ದಶಕಗಳಾಗಿವೆ. ಆದ್ದರಿಂದಾಗಿ ಇಂದು ಕರ್ನಾಟಕದ ರಾಜಕಾರಣ ಭಾರತದ ಚರಿತ್ರೆಯಲ್ಲಿಯೇ ಕಂಡಿರದಷ್ಟು ಭ್ರಷ್ಟವಾಗಿವೆ. ಜನ ಪ್ರತಿನಿಧಿಗಳು ಹಾಗೂ ಸರಕಾರಗಳು ಕಲ್ಪನೆಯನ್ನೂ ಮೀರಿದ ಅನೈತಿಕ ಭ್ರಷ್ಟ ಸರಕಾರಗಳೇ ಆಗಿವೆ. ಇಂಥ ರಾಜಕೀಯದಲ್ಲಿ ಚುನಾವಣೆ ಗೆಲ್ಲುವುದೇ ಏಕಮಾತ್ರ ಆದ್ಯತೆಯಾಗಿದೆ. ಇದರ ಪರಿಣಾಮವಾಗಿ ಅನೈತಿಕ ರಾಜಕೀಯವು ಧಾರ್ಮಿಕ ಸಂಸ್ಥೆಗಳನ್ನು ಪ್ರಭಾವಿಸಿದೆ. ಪರಿಣಾಮವೆಂದರೆ ಈ ಸಂಸ್ಥೆಗಳು ಹಾಗೂ ಅವುಗಳ ಧುರೀಣರು ಸದ್ಯದ ರಾಜಕೀಯದ ನುಡಿಗಟ್ಟನ್ನು ಮತ್ತು ಕಾರ್ಯವಿಧಾನಗಳನ್ನು ಸಂಪೂರ್ಣವಾಗಿ ಅನುಸರಿಸುತ್ತಿವೆ. ಈ ಪ್ರಕ್ರಿಯೆಯಲ್ಲಿ ತಮ್ಮ ಆಧ್ಯಾತ್ಮಿಕ ಅಧಿಕಾರವನ್ನು ಕಳೆದುಕೊಂಡಿರುವುದರಿAದ ಈಗ ರಾಜಕೀಯ ಅಧಿಕಾರದ ಅನುಕರಣೆಯ ಹೊರತಾಗಿ ಇನ್ನೇನೂ ಮಾಡಲಾಗದ ಸ್ಥಿತಿಯಲ್ಲಿವೆ.

ಗದಗಿನ ತೋಂಟದಾರ್ಯ ಸ್ವಾಮಿಗಳು ಪೋಸ್ಕೋ ಕಂಪನಿಯ ಭೂಕಸಿತದ ವಿರುದ್ಧ ನಡೆಸಿದ ಚಳವಳಿಯಂಥ ಉಜ್ವಲ ವಿದ್ಯಮಾನಗಳು ಇನ್ನು ಸಾಧ್ಯವಿಲ್ಲ. ಏಕೆಂದರೆ ಅಂಥ ಚಳವಳಿಗಳನ್ನು ಮಾಡಬೇಕಾದರೆ ರಾಜಕೀಯ ಅಧಿಕಾರವನ್ನು ವಿರೋಧಿಸಬೇಕಾಗುತ್ತದೆ. ಸರಳ ಮದುವೆಗಳು, ಮೂಢನಂಬಿಕೆಗಳನ್ನು ಪ್ರಶ್ನಿಸಿ ತ್ಯಜಿಸಲು ಪ್ರೇರೇಪಿಸುವ ಪ್ರಯತ್ನಗಳನ್ನು ಕೆಲವು ಮಠಗಳು ಮಾಡುತ್ತಿದ್ದರೂ ಅವು ಈಗ ಹಿನ್ನೆಲೆಗೆ ಹೋಗಿವೆ.

ಕರ್ನಾಟಕದ ಜಾತಿ ರಾಜಕೀಯವು ಪ್ರಜಾಪ್ರಭುತ್ವದ ಬುನಾದಿಯನ್ನು ನಾಶಮಾಡಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ತಮ್ಮ ಜಾತಿ ಅಸ್ಮಿತೆಯನ್ನು ಬದಿಗಿಟ್ಟು ಸಂವಿಧಾನ, ಜನಪ್ರತಿನಿಧಿ ಸರಕಾರ, ಕಾನೂನುಗಳು ನೀಡುವ ಅಸ್ಮಿತೆಯನ್ನು ಒಪ್ಪಿಕೊಳ್ಳಬೇಕು. ಜಾತಿ ಅಸ್ಮಿತೆಯನ್ನೇ ಪ್ರಧಾನವಾಗಿರಿಸಿಕೊಂಡರೆ ಪ್ರಜಾಪ್ರಭುತ್ವವು ದುರ್ಬಲವಾಗಿಬಿಡುತ್ತದೆ. ಏಕೆಂದರೆ ಇದರಿಂದಾಗಿ ರಾಜಕೀಯ ನೀತಿಗಳು, ನೌಕರಶಾಹಿ, ಅಧಿಕಾರಶಾಹಿಯ ನಡವಳಿಕೆಗಳು ವಿಕೃತವಾಗತೊಡಗುತ್ತವೆ. ಸಾಮಾಜಿಕ ನ್ಯಾಯದ ಬದಲು ಜಾತಿ ನ್ಯಾಯವು ಸ್ವೀಕೃತವಾಗತೊಡಗುತ್ತವೆ. ಹೀಗಾದಾಗ ಧಾರ್ಮಿಕ ಸಂಸ್ಥೆಗಳು ಅನಗತ್ಯವಾದ ಮತ್ತು ಅನೈತಿಕವಾದ ಪಾತ್ರವನ್ನು ವಹಿಸತೊಡಗುತ್ತವೆ.

ಜಾತಿ ರಾಜಕೀಯವು ಒಳ್ಳೆಯದನ್ನು ಮಾಡಿದ ಉದಾಹರಣೇ ಇಲ್ಲ, ಒಂದು ಕಾಲದಲ್ಲಿ ಹಿಂದುಳಿದ ಜಾತಿಗಳ ರಾಜಕೀಯದಿಂದ ಸಮಾನತೆಯ ಕಡೆಗೆ ಹೆಜ್ಜೆ ಇಡಬಹುದೆಂದು ನಂಬಲಾಗಿತ್ತು. ಆದರೆ ಆಗಿದ್ದೇನೆಂದರೆ ಮೇಲ್ಜಾತಿಯ ಯಾಜಮಾನ್ಯದ ಬದಲಾಗಿ ಹಿಂದುಳಿದ ಜಾತಿಗಳ ಯಾಜಮಾನ್ಯವು ಅಧಿಕಾರಕ್ಕೆ ಬಂದಿತು. ಹಿಂದುಳಿದ ಜಾತಿಗಳ ನಾಯಕರು ಜಾತಿವಿನಾಶದ ಬದಲಾಗಿ ಜಾತಿ ಸಂಘಟನೆಯ ರಾಜಕೀಯದಲ್ಲಿ ತೊಡಗಿದರು. ಅನುಕೂಲ ಸಿಂಧು ರಾಜಕೀಯ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದರು.

ಇಂದಿನ ಮಠಗಳ ರಾಜಕೀಯವನ್ನು ಅರ್ಥಮಾಡಿಕೊಳ್ಳಲು ನಾವು ಅದಕ್ಕೆ ಈ ಮಟ್ಟದ ಸ್ಪೇಸ್ ಹೇಗೆ ಲಭ್ಯವಾಯಿತು ಎಂದು ಪ್ರಶ್ನಿಸಿಕೊಳ್ಳಬೇಕು. ಸಾಮಾಜಿಕ ನ್ಯಾಯದ ಬಗ್ಗೆ ನಮ್ಮ ಚಿಂತನೆ ಹಾಗೂ ಚಳವಳಿಗಳು ಜಾತಿಕೇಂದ್ರಿತ ನೆಲೆಗಳಿಂದ ಹೊರಬರದೇ ಇದ್ದುದು ಒಂದು ಕಾರಣವಾಗಿದೆ. ಹಾಗೆಯೆ ಮೀಸಲಾತಿಯನ್ನು ನಮ್ಮ ಸಂವಿಧಾನವು ಕಲ್ಪಿಸಿದ ಹಾಗೆ ಸಾಮಾಜಿಕ ಸಮಾನತೆಯ ಮಾಧ್ಯಮವನ್ನಾಗಿ ನೋಡುವ ಬದಲು ಕೇವಲ ರಾಜಕೀಯ ಅಸ್ತçವಾಗಿ ನೋಡಿದ್ದು ಇನ್ನೊಂದು ಕಾರಣವಾಗಿದೆ.

ನಮ್ಮ ರಾಜ್ಯದ ಬಹುಮುಖ್ಯ ಚಳವಳಿಗಳಾದ ದಲಿತ, ರೈತ ಕಾರ್ಮಿಕ ಚಳವಳಿಗಳು ಚದುರಿಹೋಗಿದ್ದರಿಂದ ಪ್ರಜಾಪ್ರಭುತ್ವಕ್ಕೆ ಅವಶ್ಯಕವಾದ ‘ಒತ್ತಡ ಗುಂಪು’ ಇಲ್ಲದಂತಾಗಿದೆ. ಅಪಾರವಾದ ಹಣವಿಲ್ಲದೆ ಯಾವ ಅಭ್ಯರ್ಥಿಯೂ ಗೆಲ್ಲಲಾರದ ಚುನಾವಣಾ ವ್ಯವಸ್ಥೆಯನ್ನು ನಾವು ನಿರ್ಮಿಸಿಕೊಂಡಿದ್ದೇವೆ. ದುಡ್ಡಿಗೆ ಕೊಳ್ಳಬಹುದಾದ ಕುದುರೆಗಳು, ಅಧಿಕಾರದಲ್ಲಿರುವ ಕ್ರಿಮಿನಲ್‌ಗಳಿಂದ ಆರೋಗ್ಯಕರ ರಾಜಕೀಯವನ್ನು ನಿರೀಕ್ಷಿಸುವುದು ಮೂರ್ಖತನವಾಗಿದೆ. ಇಂಥ ನಿರ್ವಾತದಲ್ಲಿ ಮಠಗಳ ರಾಜಕೀಯವು ಅತ್ಯಂತ ಪ್ರಭಾವಶಾಲಿಯಾಗಿ ಬೆಳೆಯುತ್ತಿದೆ.

*ಲೇಖಕರು ಕನ್ನಡದ ಪ್ರಮುಖ ವಿಮರ್ಶಕರು, ಕಥೆಗಾರರು. ಹುಟ್ಟೂರು ಧಾರವಾಡ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಈಗ ಶಿವಮೊಗ್ಗೆಯ ಮಾನಸ ಸಾಂಸ್ಕöÈತಿಕ ಅಧ್ಯಯನಗಳ ಕೇಂದ್ರದ ನಿರ್ದೇಶಕರು.

 

Leave a Reply

Your email address will not be published.