ಪ್ರಜೆಗಳ ಪ್ರತಿಬಿಂಬವೇ ಚುನಾಯಿತ ಪ್ರತಿನಿಧಿಗಳು!

-ಡಾ.ಡಿ.ಎಸ್.ಚೌಗಲೆ

ರಾಜಕಾರಣಿಗಳನ್ನು ಮಾತ್ರ ನಾವು ದೂರುತ್ತ ಕೂತರೆ ಸಾಲದು. ಪ್ರಜೆಗಳಾದ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಪ್ರತಿಬಿಂಬವೇ ನಮ್ಮನ್ನಾಳುವ ಜನಪ್ರತಿನಿಧಿಗಳು.

 

 

ನನಗೆ ತಿಳಿವಳಿಕೆ ಬಂದಾದಮೇಲೆ ಅಂದಿನ ಮೂವರು ರಾಜಕೀಯ ಧುರೀಣರ ಭಾಷಣ ಕೇಳುವ ಅವಕಾಶ ದೊರಕಿತ್ತು. ಒಬ್ಬರು ಅಟಲಬಿಹಾರಿ ವಾಜಪೇಯಿ, ಇನ್ನೊಬ್ಬರು ಎಚ್.ಡಿ.ದೇವೆಗೌಡ ಹಾಗೂ ತದನಂತರ ರಾಮಕೃಷ್ಣ ಹೆಗಡೆಯವರು. ಬಾನುಲಿ ಮತ್ತು ಪತ್ರಿಕೆಗಳು ಮಾತ್ರ ಬದುಕಿನ ಭಾಗವಾಗಿದ್ದ ಕಾಲವದು. ಈಗಿನಂತೆ ಘಟನೆಗೆ ಪೂರ್ವದಲ್ಲಿಯೇ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುವ ಪ್ರಶ್ನೆಯೇ ಸಾಧ್ಯವಿರದ ಅಂದು ವಿಚಾರಧಾರೆಗಳ ಅಸಹಿಷ್ಣುತೆ ಕಲ್ಪನಾತೀತವಾಗಿತ್ತು.

ಅಟಲಬಿಹಾರಿ ವಾಜಪೆಯಿವರು ಆಗ ಜನಸಂಘದಲ್ಲಿದ್ದರು. ಅವರ ಮೋಡಿಗೊಳಿಸುವ ಮಾತಿನ ಶೈಲಿ ಅತ್ಯಾಕರ್ಷಕ. ಅವರ ಸುತ್ತಲಿನವರನ್ನು ಕಂಡಾಗ ನನ್ನಂಥ ಹಳ್ಳಿಗನಿಗೆ ಒಂದು ಅಂತರ ಇದೆಯೇನೋ ಎಂಬ ಭಾಸ ಮಾತ್ರ ಮೂಡುತ್ತಿತ್ತು. ಇನ್ನು ದೇವೇಗೌಡರು ತುಂಬಾ ಯುವಕರಂತೆ ಕಾಣುತ್ತಿದ್ದರು. ಅವರು ನನ್ನೂರಿನ ಲಿಂಗಾಯತ ಸಮುದಾಯದ ಪುಢಾರಿಗಳನ್ನು ಭೇಟಿ ಮಾಡಲು ಆಗಮಿಸಿದ್ದರು. ಅಷ್ಟೊಂದು ನೆನಪಿಲ್ಲ. ಮಾತಿನ ಓಘ ಸ್ಮರಣೆಯಲ್ಲಿದೆ. ಮುಂದೆ ಕಾಲೇಜಿನ ದಿನಗಳಲ್ಲಿ ಉತ್ತರಕರ್ನಾಟಕದ ಲಿಂಗಾಯತರ ನಾಯಕರಂತೆ ಕಂಡ ಏಕೈಕ ಹವ್ಯಕ ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆಯವರು ಮಾತಿನ ಶೈಲಿಯಿಂದ ಸೂಜಿಗಲ್ಲಿನಂತೆ ಸೆಳೆದವÀರು.

ಈ ಮೂವರೂ ಭಿನ್ನ ಆಲೋಚನಾ ಕ್ರಮದ ರಾಜಕೀಯ ವ್ಯಕ್ತಿತ್ವ ಹೊಂದಿದ್ದರು. ಒಂದು ನಿರ್ದಿಷ್ಟ ಮತ್ತು ಕನಿಷ್ಠ ಕ್ಕೂ ಅಧಿಕ ಸಾಮಾಜಿಕ ಕಾಳಜಿ ಇತ್ತು ಎನ್ನುವುದು ನನ್ನ ಭಾವನೆ. ಅಧಿಕಾರ ಮತ್ತು ಅದರ ಸ್ಥಿತ್ಯಂತರಗಳನ್ನೆಲ್ಲ ಅನುಭವಿಸಿದ ಇವರನ್ನು ಮೀರಿದ ಸಾಮಾಜಿಕ ಸಮಾನತೆಯಲ್ಲಿ ತಳ ಸಮುದಾಯಗಳ ಹರಿಕಾರನಾದ ಡಿ.ದೇವರಾಜ ಅರಸರು ಹೆಚ್ಚು ಅಂದು ಆಕರ್ಷಿತರಾಗಿದ್ದರು. ಅವರು ನಮ್ಮ ಭಾಗದಲ್ಲಿ ಬಂದಾಗ ನಾನು ಹೈಸ್ಕೂಲು ಓದುತ್ತಿದ್ದೆ, ಆದರೆ ಅವರ ಕುರಿತು ಅವರÀ ಶÀತಮಾನೋತ್ಸವ ಸಂದರ್ಭದಲ್ಲಿ ನಾಟಕ ಬರೆಯುವಾಗ ಅವರನ್ನು ಓದಿಕೊಂಡೆ. ಅವರಂತಹ ಸಾಮಾಜಿಕ ನ್ಯಾಯದ ನಾಯಕ ಕರ್ನಾಟಕದಲ್ಲಿ ಇನ್ನೊಬ್ಬರಾಗಿಲ್ಲ ಎಂದನಿಸಿತು.

ಈ ಧೋರಣೆಯ ಜನಸಮುದಾಯಗಳ ಖರೆ ಅರ್ಥದ ಕಾಳಜಿಯ ನಾಯಕರುಗಳನ್ನು ಈ ನಾಡು ಕಂಡಿದೆ. ತಮಗೆ ನೀಡಿದ ಹೊಣೆಗಾರಿಕೆಯನ್ನು ಅರ್ಥಪೂರ್ಣವಾಗಿ ನಿಭಾಯಿಸಿದವರು ಹಲವರಿದ್ದಾರೆ. ಪ್ರಾಥಃಸ್ಮರಣೀಯ ಅಬ್ದುಲ್ ನಜೀರಸಾಬರು ನೀರುಸಾಬರೆಂದೇ ಕರೆಯಿಸಿಕೊಂಡವರು. ಈಗ ಎಲ್ಲೆಡೆ ಕಾಣುವ ಯಾವ ಜಾತಿ, ಕೋಮುಗಳ ಭÉೀದಗಳು ಅವರಲ್ಲಿರಲಿಲ್ಲ. ಅವರಷ್ಟೇ ಯಾಕೆ ಅಂದಿನವರಿಗೆ ಇವತ್ತಿನ ನಾಯಕರಿಗೆ ಇರುವ ಕೋಮುಬಾಧೆಗಳ ಸೋಂಕು ತಗಲಿರಲಿಲ್ಲ. ಬಹುತಾಂಶ ಜಾತ್ಯತೀತ ಮೌಲ್ಯಗಳ ಪ್ರತೀಕರಂತಿದ್ದರು.

ಶಿಕ್ಷಣ ಕ್ಷೇತ್ರಕ್ಕೆ ಒಂದು ಘನತೆ ತಂದುಕೊಟ್ಟ ಗೋವಿಂದೆಗೌಡರು ಸರಳ ಸಜ್ಜನರು. ಅವರ ಬದುಕೇ ಅಕ್ಷರಮೆಚ್ಚಿ ಅಹುದಹುದೆನಿಸುವ ಪರಿಯದ್ದು. ಅಂಥವರ ಒಂದು ದಂಡೇ ಇತ್ತು. ಬಂಗಾರಪ್ಪ, ಪ್ರೊ.ಐ.ಜಿ.ಸನದಿ. ಎಮ್.ಪಿ.ಪ್ರಕಾಶ ಮುಂತಾದ ಚಿಂತನಶೀಲರು ನಾಡ ಕಟ್ಟಿದರು. ಸ್ವಾತಂತ್ರ್ಯ ನಂತರದ ಕಾಲದವರಿಗೆ ದೇಶ ಮತ್ತು ನಾಡಿನ ಪರಿಕಲ್ಪನೆಯಲ್ಲಿ ಸ್ಪಷ್ಟತೆಯಿತ್ತು. ಅಂದಿನ ನಾಯಕರಲ್ಲಿ ಬಹುತಾಂಶ ಗಾಂಧಿ, ನೆಹರು ಪ್ರಣೀತ ಕನಸುಗಳಿದ್ದವು. ಅವು ಪ್ರಾಮಾಣಿಕವಾಗಿದ್ದವು. ಕೇವಲ ಶಾಸಕರಾದ ಸಂತೃಪ್ತಿಯಿತ್ತು. ಜನರ ಸೇವೆ ಮಹತ್ವದ್ದು ಹಾಗೂ ಅವರ ಸಂಕಷ್ಟಗಳಿಗೆ ಕಿವಿಗೊಡುತ್ತಿದ್ದರು. ಶಿಕ್ಷಣ, ಉದ್ಯಮ, ಕೃಷಿ, ಉದ್ಯೋಗ ಸೃಷ್ಟಿಯ ಸಮಾಂತರ ಕಂಡರಿಸುವ ಯೋಜನೆಗಳಿದ್ದವು. ಅವುಗಳನ್ನು ಕಾರ್ಯನಿರ್ವಹಿಸುವುದರಲ್ಲಿ ಸಂತಸ ಕಾಣುತ್ತಿದ್ದರು.

ಆದರೆ ಕಳೆದ ದಶಕಗಳಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಔದ್ಯಮಿಕ ಪಲ್ಲಟಗಳು ಜನ ಮತ್ತು ಜನನಾಯಕರ ದೆಸೆಯನ್ನೇ ಬದಲಿಸಿ ಕಿತ್ತು ಚೆಲ್ಲಿದವು. ಸಹನೀಯವಾದದಿಂದ ಅಸಹನೀಯತೆಗೆ ಇಡೀ ವ್ಯವಸ್ಥೆ ಹೊರಳಿ ಸಮಕಾಲೀನದಲ್ಲಿ ಆತಂಕ, ತಲ್ಲಣಗಳಲ್ಲಿ ಬದುಕು ನೂಕುವಂತಾಗಿದ್ದು ಒಂದು ದುರಂತವೇ ಸರಿ!

ಕೇಂದ್ರದಲ್ಲಿ ಎನ್‍ಡಿಎ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯಿತು. ಹೊಸ ಭರವಸೆ ನೆಚ್ಚಿ ಮತ ನೀಡಿದ ಮತದಾರನು ಹೊಸ ಸವಾಲಿನ ಸರಮಾಲೆಯಲ್ಲಿ ಸಿಕ್ಕು ಒದ್ದಾಡುವಂತಾಯಿತು. ಕಾರ್ಪೋರೇಟ್‍ಗಳ ಒತ್ತಾಸೆಗೆಯೆ ಆಯ್ಕೆಯಾಗಿದ್ದಾರೆÉೀನೋ ಎಂಬ ಗುಮಾನಿಗಳ ಪೊರೆಗಳು ಕಳಚ ಹತ್ತಿದವು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನವೀನತಮ ಅಳುಕು, ಆತಂಕಗಳು. ಸಂವಿಧಾನವನ್ನೇ ಬದಲಿಸುವೆವು ಎಂಬ ಹೂಂಕರಿಕೆ. ಅಧಿಕಾರಕ್ಕೆಂದೇ ಯಾವುದೇ ಹಂತಕ್ಕಿಳಿವ ರಾಜಕೀಯ ಸಂಘರ್ಷ ಮತ್ತು ಮನೋಧರ್ಮದ ಪಕ್ಷಾಂತರಗಳು ಹೇಸಿಗೆ ತರುವ ಹಂತ ತಲುಪಿದವು. ಮಾಧ್ಯಮಗಳು ಜನರ ಹಿಂದೆ ನಿಲ್ಲದೇ ಅಧಿಕಾರದ ಚುಕ್ಕಾಣಿಯ ಕೈಗಳನ್ನು ಬಲಪಡಿಸುತ್ತ ಸಾಗಿದಾಗ ಯಾವ ಆಶೆಯ ಕಿರಣಗಳೂ ಇಲ್ಲದೇ ಸಾಮಾನ್ಯನ ಬದುಕಿನ ಬಗ್ಗೆ ಭರವಸೆ ಕಿತ್ತು ಹೋಗಿದೆ. ಅದರ ನೂರಾರು ಚಿತ್ತಾರಗಳು ಘಟನೆಗಳು ನಮ್ಮ ಆಚೀಚೆ ನಡೆಯುತ್ತಿವೆ. ಧರ್ಮಗಳ ಹೆಸರಿನ ಕಾನೂನು ತಿದ್ದುಪಡಿಗಳು ಕಂಗೆಡಿಸಿವೆ.

ಕೇಂದ್ರದಲ್ಲಿ ಎರಡನೆಯ ಬಾರಿ ಬಹುಮತದಿಂದ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಆಯ್ಕೆಗೊಂಡಾಗಿನಿಂದ ನಿತ್ಯ ಹೊಸ ಹೊಸ ರಾಜಕೀಯ ಮೇಲಾಟಗಳ ‘ತಮಾಶಾ’ ನಮ್ಮ ರಾಜ್ಯದಲ್ಲಿ ಶುರುವುಗೊಂಡವು. ಬಿಜೆಪಿಗೆ ಅಧಿಕಾರ ಪಡೆಯಲು ಅಲ್ಪ ಸಂಖ್ಯೆಯ ಶಾಸಕರ ಅಗತ್ಯವಿದ್ದಾಗ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರ ಆಸ್ತಿತ್ವಕ್ಕೆ ಬಂತು. ಆ ಘಳಿಗೆಯಿಂದ ಆರಂಭಗೊಂಡಿದ್ದು ಇನ್ನೊಂದು ಆಪರೇಷನ್ ಕಮಲದ ಅಪವಿತ್ರ ಪಕ್ಷಾಂತರದ ಹಗ್ಗ ಜಗ್ಗಾಟ.

ಉತ್ತರ ಕರ್ನಾಟಕವು ನೆÀರೆಯಿಂದ ತತ್ತರಿಸಿ ತೊಯ್ದು ತೊಪ್ಪೆಯಾದರೂ ಅತ್ತ ಸುಳಿಯದ ಶಾಸಕರು, ಮಂತ್ರಿಗಳು ದೊಡ್ಡ ಪ್ರಮಾಣದಲ್ಲಿ ಪಕ್ಷಾಂತರಗೊಂಡು ಮುಂಬೈ ಸ್ಟಾರ್ ರಹವಾಸಿಗಳಾಗಿ ಯಡಿಯೂರಪ್ಪನವರ ನೇತೃತ್ವದ ಹೊಸ ಸರಕಾರ ರಚನೆಗೊಂಡಿತು. ಆ ಬಳಿಕ ಸ್ಪೀಕರ್ ಅಮಾನತ್ತು ಪ್ರಕರಣ, ನ್ಯಾಯಾಲಯ ಮತ್ತು ಉಪಚುನಾವಣೆ. ಸೋಜಿಗದ ಸಂತಿಯೆಂದರೆ- ಯಾವ ಪ್ರದೇಶ ಪ್ರವಾಹದಿಂದ ತತ್ತರಿಸಿ ರೈತರು, ಬಡವರ ಬದುಕು ಹರಿದು ಚಿಂದಿಯಾಗಿತ್ತೋ ಅವರೇ ಪುನಃ ಪಕ್ಷಾಂತರಿಗಳನ್ನೇ ಆರಿಸಿ ತಂದದ್ದು. ಈ ರೆಸಾರ್ಟ್ ರಾಜಕಾರಣದಿಂದ ಜನ ರೋಸಿ ಹೋಗಿ ಪಾಠ ಕಲಿಸುತ್ತಾರೆನ್ನುವ ಯೋಚನೆ ತಲೆಕೆಳಗಾಗಿತ್ತು. ಯಡಿಯೂರಪ್ಪನವರ ‘ಕೈ’ಬಲಪಡುತ್ತ ಸಾಗಿತು.

ಯಡಿಯೂರಪ್ಪನವರು ಹೋರಾಟದ ಮೂಲಕ ಬಂದ ಹಿರಿಯ ರಾಜಕಾರಣಿಗಳು. ಅವರ ಸುತ್ತ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿರುವುದು ಹೊಸದೇನಲ್ಲ. ಅದು ಜನಜನಿತ. ಪುತ್ರನ ಹಸ್ತಕ್ಷೇಪವೆಂಬ ಆರೋಪಗಳು ಬೇರೆ ಸ್ವಪಕ್ಷದವರಿಂದಲೇ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಅದರಿಂದ ಅವರ ಪಕ್ಷದಲ್ಲಿಯೆ ಒಡಕಿದೆ ಎನ್ನುವುದು ಮೇಲ್ನೋಟಕ್ಕೆ ಅರಿವಿಗೆ ಬರುತ್ತದೆ. ಎಲ್ಲವೂ ಸುರಳಿತವಾಗಿಲ್ಲವೆಂಬ ಮೆಸೆಜು ಹರಿದಾಡುತ್ತಿದೆ. ವಿಜಯಪುರದ ಶಾಸಕ ಬಸವರಾಜ ಪಾಟೀಲ ಯತ್ನಾಳರು ಬೇರೆ ಕೈತೊಳಕೊಂಡು ಬೆನ್ನತ್ತಿರುವರು.

ಕೇಂದ್ರದಲ್ಲಿಯ ಬಿಜೆಪಿ ಹೈಕಮಾಂಡು ಅವರನ್ನು ಕೆಳಗಿಳಿಸಲು ಹೊರಟ ಹುನ್ನಾರಗಳು ಕೇಳಿಬರತೊಡಗಿದಾಗ ಮತ್ತು ಉಪಚುನಾವಣೆಗೆ ಹೇಗಾದರು ಗೆಲ್ಲಲು ಜಾತಿ ಓಲೈಕೆಯ ಪಟ್ಟುಗಳನ್ನು ಬಳಸತೊಡಗಿದರು. ಆಗ ಹುಟ್ಟಿಕೊಂಡದ್ದೆ ಮರಾಠಾ ಅಭಿವೃದ್ಧಿ ಪ್ರಾಧೀಕಾರ. ಅದು ಬೆಳಗಾವಿ ಲೋಕಸಭೆ ಚುನಾವಣೆಗೆ ಬರೆದ ಮುನ್ನುಡಿ. ಆದರೆ ವಿಚಿತ್ರವೆಂದರೆ ವಿಧಾನಸಭೆ ಚುನಾವಣೆಗೆ ಒಂದು ’ಥ್ರೆಟ್’ ಆಗಬಲ್ಲ ಎಮ್.ಇ.ಎಸ್ ಮತಗಳು ಲೋಕಸಭಾ ಚುನಾವಣೆಯಲ್ಲಿ ಗಣನೆಗೆಯೇ ಬರುವುದಿಲ್ಲ. ಆದರೆ ಅದು ಬಸವಕಲ್ಯಾಣ ಉಪಚುನಾವಣೆಗೆಂದೇ ಒಲೈಕೆಯ ಒಂದು ಹೆಜ್ಜೆಯೆ ಸರಿ. ಕೇಂದ್ರದ ಒತ್ತಡಕ್ಕೆ ಪ್ರತಿತಂತ್ರವಾಗಿ ಬಳಕೆಯಾದುದು ಲಿಂಗಾಯತ ಸಮುದಾಯ ಓಲೈಕೆಯ ಪ್ರಾಧಿಕಾರ. ಯಾವತ್ತು ಮಠಮಾನ್ಯಗಳಿಗೆ ಅನುದಾನ ಆರಂಭಗೊಂಡಿತೋ ಅಂದಿನಿಂದ ಜಾತ್ಯತೀತ ನಿಲುವುಗಳು ಸಡಿಲುಗೊಂಡವು. ಮಠಾಧಿಪತಿಗಳ ರಾಜಕೀಯ ಹಸ್ತಕ್ಷೇಪಗಳು ಮೊಳಕೆಯೊಡೆದವು.

ಜಾತಿಗೊಂದು ಮಠಗಳು ಮತ್ತು ಮಠಾಧೀಶರು ತಮ್ಮ ಅಸ್ಮಿತೆಯ ರೂಪದಲ್ಲಿ ಪ್ರಶ್ನಿಸುವುದನ್ನು ಮಾಡುತ್ತಲೇ ಸರಕಾರಗಳ ಮೇಲೆ ತಮ್ಮ ಒತ್ತಡ ತಂತ್ರಗಳನ್ನು ಪ್ರಯೋಗಿಸತೊಡಗಿದರು. ನಿಗಮ ಮಂಡಳಿಗಳು, ಮೀಸಲಾತಿಗಳು ಯಾವ ಹಂತ ತಲುಪಿದವೆಂದರೆ ಅದನ್ನು ಶತಾಯ ಗತಾಯ ಪಡೆದೇ ತೀರುವೆವು ಎಂಬಂತೆ ಪಣವು ಸೃಷ್ಟಿಯಾಯಿತು. ಇದಕ್ಕಾಗಿ ಜಾತಿಯ ಒಳಪಂಗಡಗಳು ಮತ್ತದರ ಮಠಾಧೀಶರ ಹರತಾಳ, ಸತ್ಯಾಗ್ರಹಗಳ ಒತ್ತಡಗಳು ಮುಖ್ಯಮಂತ್ರಿಗಳನ್ನು ಮುಜುಗರಕ್ಕೀಡು ಮಾಡಿದವು. ತುಂಬಿದ ಸಭೆಗಳಲ್ಲಿ ಅವರ ಸಂಘರ್ಷದ ಚರ್ಚೆಗಳು ವೈರಲ್ ಆದುದು ಸರ್ವವಿಧಿತ. ಈ ಬಗೆಯ ಭಾಷಿಕ ಮತ್ತು ಧಾರ್ಮಿಕ ಅಸಂಬದ್ಧ ಅಸಹಜ ಎನ್ನುವ ಯೋಜನೆಗಳು ಜಾತ್ಯತೀತ ಮೌಲ್ಯಗಳಿಗೆ ಮಾರಕವಾದವು. ಅಧಿಕಾರಕ್ಕಾಗಿ ಮತ ಬ್ಯಾಂಕಿನ ಈ ಧರ್ಮ, ಜಾತಿಯ ಲೆಕ್ಕಾಚಾರಗಳು ಒಟ್ಟು ಆರೋಗ್ಯಕರ ವ್ಯವಸ್ಥೆಯನ್ನು ಹೊಸಕಿ ಹಾಕಿ ಹಾಳುಮಾಡದೇ ಇರದು.

ಆಯ್ಕೆಗೊಂಡ ಪ್ರತಿ ಶಾಸಕ ರಾಜಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದು ಸ್ವಹಿತಕ್ಕಾಗಿ, ಲಾಭಕ್ಕಾಗಿ. ಅವನು ಆಡುವ ಮೌಲಿಕ ನುಡಿಗಳೆಲ್ಲ ಪೊಳ್ಳು ಮತ್ತು ಮೋಸದ ಜಾಲಗಳು ಎಂಬುದನ್ನು ಜನ ಅರಿಯಬೇಕು. ಅವನಿಗೂ ಒಂದು ಪ್ರಗತಿಯ ಗ್ರಾಫ್ ಕಡ್ಡಾಯಗೊಳಿಸಬೇಕು. ಜನಸೇವೆಯೆಂಬುದು ಮರೀಚಿಕೆಯಾದ ಕಾಲಘಟ್ಟದಲ್ಲಿದ್ದೇವೆ. ರಾಜಕಾರಣಿಗಳನ್ನು ಮಾತ್ರ ನಾವು ದೂರುತ್ತ ಕೂತರೆ ಸಾಲದು. ಪ್ರಜೆಗಳಾದ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಪ್ರತಿಬಿಂಬವೇ ನಮ್ಮನ್ನಾಳುವ ಜನಪ್ರತಿನಿಧಿಗಳು.

ಹಳ್ಳಿಯಿಂದ ನಗರದವರೆಗಿನ ನಮ್ಮ ಮಾನಸಿಕತೆ ಬದಲಾಗಬೇಕು. ಮೊನ್ನೆಯ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಒಂದು ಮತಕ್ಕೆ ರೂ.500 ರಿಂದ 2000 ತನಕ ಮತಗಳನ್ನು ಮಾರಿಕೊಂಡ ವರದಿಗಳು ಬಂದವು. ಅದನ್ನು ಗಮನಿಸಿದಾಗ ನಮ್ಮ ಪ್ರಜಾಪ್ರಭುತ್ವ ಕೇವಲ ಅಧಿಕಾರ ಕೇಂದ್ರಿತವಾದÀ ಸಾಮಾಜಿಕ, ರಾಜಕೀಯವಾದ ಮಾನಸಿಕ ಸ್ಥಿತಿಯನ್ನು ಹೊಂದಿದೆ ಎಂಬುದರ ಅರಿವು ಮೂಡುತ್ತದೆ. ವರ್ತಮಾನದ ಇಪ್ಪತ್ತೊಂದನೆಯ ಶತಮಾನದಲ್ಲೂ ನಮ್ಮನ್ನು ನಾವು ಮಾರಿಕೊಳ್ಳುವ ತನಕ ಕೊಂಡುಕೊಳ್ಳುವ ದಲ್ಲಾಳಿಗಳೂ ಜಾಗೃತವಾಗಿರುತ್ತಾರೆನ್ನುವ ಸತ್ಯದ ದರುಶನ ಆಗುವ ತನಕ ನಮ್ಮ ವ್ಯವಸ್ಥೆ ಇದಕ್ಕೂ ಭೀಕರವಾಗುವ ಸಾಧ್ಯತೆಗಳೇ ಅಧಿಕವೆನ್ನುವುದು ಮಾತ್ರ ಅಚಲ ಸತ್ಯ. ಇದು ವರ್ತಮಾನದ ವ್ಯಂಗ್ಯವೇ ಹೌದು. ಮತ್ತೆ ಸ್ವಾತಂತ್ರ್ಯ ನಂತರದ ಕಾಲಘಟ್ಟ ಹೆಚ್ಚು ಸಶಕ್ತ ಮತ್ತು ಪ್ರಜಾಸತ್ತಾತ್ಮಕವಾದುದು ಎಂದು ಭಾಸವಾಗುತ್ತದೆ.

*ಲೇಖಕರು ಬೆಳಗಾವಿಯ ಬೇಡಕಿಹಾಳ ಗ್ರಾಮದವರು; ಕನ್ನಡ ಪ್ರಾಧ್ಯಾಪಕರು, ನಾಟಕಕಾರರು, ಅನುವಾದಕರು, ಅಂಕಣಕಾರರು.

 

Leave a Reply

Your email address will not be published.