ಪ್ರತಿಜೀವಕಗಳು ಮತ್ತು ಲಸಿಕೆ ಅತಿಯಾಯಿತೇ ಬಳಕೆ?

ಇಂದು ಪ್ರತಿಜೀವಕಗಳು ಹಾಗೂ ಲಸಿಕೆ ಬಳಕೆಯಲ್ಲಿ ಸುಲಿಗೆ ಅಪಾರವಾಗಿದೆ. ಸರಕಾರ ಮೌನ ಮುರಿಯಬೇಕಿದೆ.

ಪ್ರತಿಜೀವಕಗಳು (ಆ್ಯಂಟಿಬಯಾಟಿಕ್ಸ್) ಹಾಗೂ ಲಸಿಕೆಗಳು ಜೀವರಕ್ಷಕಗಳು. ತೀವ್ರತರ ಸೋಂಕು ರೋಗಕ್ಕೆ ಪ್ರತಿಜೀವಕಗಳನ್ನು ಉಪಯೋಗಿಸುತ್ತಾರೆ. ಔಷಧಿಗಳ ಆವಿಷ್ಕಾರದಲ್ಲಿ ಈ ಔಷಧಿಗಳು ಪ್ರಮುಖ ಸ್ಥಾನ ಹೊಂದಿವೆ. ಲಸಿಕೆಗಳು ಮಕ್ಕಳಲ್ಲಿಯ ಮಾರಣಾಂತಿಕ ರೋಗಗಳನ್ನು ತಡೆಗಟ್ಟಲು ಸಹಾಯಕವಾಗುತ್ತವೆ. ಇಲ್ಲಿಯವರೆಗೆ ಕೋಟ್ಯಂತರ ಮಕ್ಕಳ ಜೀವ ಉಳಿಸಲು ಅವು ಸಹಾಯಕವಾಗಿವೆ. ಈ ಲಸಿಕೆ ಹಾಗೂ ಪ್ರತಿಜೀವಕಗಳು ಆಧುನಿಕ ಯುಗದಲ್ಲಿ ವಿಜ್ಞಾನದ ಅತ್ಯಮೂಲ್ಯ ಕೊಡುಗೆ ಹಾಗೂ ಜಗತ್ತಿನ ಎಲ್ಲೆಡೆ ಬಳಕೆಯಲ್ಲಿವೆ.

ಪ್ರತಿಜೀವಕಗಳನ್ನು ಸಾಮಾನ್ಯ ಕುಟುಂಬ ವೈದ್ಯನಿಂದ ಹಿಡಿದು ಆಸ್ಪತ್ರೆಯ ವಿಶೇಷ ತಜ್ಞರವರೆಗೂ ಎಲ್ಲರೂ ಬಳಸುತ್ತಾರೆ. ದಿನೇದಿನೇ ಆರೋಗ್ಯ ಸಮಸ್ಯೆಗಳಲ್ಲದೇ ತೀವ್ರತರದ ರೋಗಗಳಾದ ಶ್ರಯ ಮಿದುಳಿನ ಸಮಸ್ಯೆ, ರೊಚ್ಚು (ಸೆಪ್ಟಿಕ್ ಶಾಕ್)ಮುಂತಾದವುಗಳಿಗೆ ಅವನ್ನು ಉಪಯೋಗಿಸಿ ಜೀವ ಉಳಿಸಲಾಗುವುದು.

ಇಂದು ವೈದ್ಯರಲ್ಲದೇ ಜನಸಾಮಾನ್ಯರಲ್ಲೂ ಈ ಪ್ರತಿಜೀವಕಗಳು ಆರೋಗ್ಯ ಸುಧಾರಣೆಗೆ ಅತ್ಯಗತ್ಯ ಎಂಬ ನಂಬಿಕೆ ಆಳವಾಗಿ ಬೇರೂ ರಿದೆ. ಈ ಪ್ರತಿಜೀವಕಗಳು ಅತ್ಯಗತ್ಯ, ದುಬಾರಿ ಹಾಗೂ ಅನೇಕ ಅಡ್ಡಪರಿಣಾಮಗಳನ್ನು ಹೊಂದಿವೆ. ಕೆಲವೊಮ್ಮೆ ತೀವ್ರತರದ ಅಡ್ಡಪರಿ ಣಾಮಗಳನ್ನು(ಎನಾಫಿಲಾಕ್ಸಿಸ್)ಹೊಂದಿವೆ. ಹಾಗೂ ಅದರಿಂದ ಸಾವೂ ಸಂಭವಿಸಲು ಸಾಧ್ಯ.

ಈ ಚರ್ಚೆಯಲ್ಲಿ ಪ್ರತಿಜೀವಕಗಳು ಹಾಗೂ ಲಸಿಕೆಗಳ ಬಳಕೆ ಸೇವೆಯಾಗಿದೆಯೋ ಅಥವಾ ಸುಲಿಗೆಯೋ ಎಂಬುದು ಕೂಡ ಪರಿಶೀಲನಾರ್ಹ. ಪ್ರತಿಜೀವಕಗಳು ಸರಕಾರಿ ಆಸ್ಪತ್ರೆಯಲ್ಲಿ ಹಾಗೂ ಖಾಸಗಿ ಆಸ್ಪತ್ರೆಯಲ್ಲೂ ಬಳಕೆಯಾಗುತ್ತವೆ. ಸರಕಾರಿ ಆಸ್ಪತ್ರೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಮಿತವಾಗಿ ಬಳಸುವಾಗ ಅದನ್ನು ಸೇವೆಯೆನ್ನಬಹುದು. ಆದರೆ ಅನೇಕ ಬಾರಿ ಅನಗತ್ಯವಾಗಿ ಶಕ್ತಿಯುತವಾದ (ವೈಡ್ ಸ್ಪೆಕ್ಟ್ರಮ್) ಪ್ರತಿಜೀವಕಗಳುನ್ನು ಬಳಸುತ್ತಾರೆ. ಅದು ಸುಲಿಗೆಯಾಗುತ್ತದೆ. ವಿಚಿತ್ರವೆಂದರೆ ಅನೇಕ ಬಾರಿ ವೈದ್ಯನಿಗೂ ಇದು ಸುಲಿಗೆಯ ಕ್ರಮ ಎಂಬ ಅರಿವಿರುವುದಿಲ್ಲ. ರೋಗಿಗೂ ಅದು ಗೊತ್ತೆ ಆಗುವುದಿಲ್ಲಬಿಡಿ. ಇಂದು ನಮ್ಮ ದೇಶದಲ್ಲಿ ಖೊಟ್ಟಿ ವೈದ್ಯರು ಕೂಡ ಪ್ರತಿಜೀವಕಗಳುನ್ನು ಬಳಸಲು ಮುಂದಾಗುತ್ತಾರೆ. ಅನೇಕ ಬಾರಿ ಪ್ರತಿಜೀವಕಗಳ ಬಳಕೆಯ ಅಗತ್ಯವೇ ಇರುವುದಿಲ್ಲ (ಉದಾ: ಬೇಧಿ, ವೈರಸ್ ಸೋಂಕು, ಜ್ವರ). ಇಂಥ ಸಂದರ್ಭದಲ್ಲಿ ಪ್ರತಿಜೀವಕಗಳ ಬಳಕೆಯನ್ನು ಸುಲಿಗೆ ಎನ್ನಬಹುದು. ಈ ಸುಲಿಗೆ ರೋಗಿಗೆ ದುಬಾರಿಯಾಗುತ್ತದೆ. ಅನೇಕ ಇತರೆ ತೊಂದರೆಗಳನ್ನು ಉಂಟುಮಾಡುತ್ತದೆ. ಹಾಗೂ ಮೂಲ ಸಮಸ್ಯೆಯ ಮೇಲೆ ಯಾವ ಪರಿಣಾಮವನ್ನೂ ಬೀರದೇ ಇರಬಹುದು.

ಗೈಡ್‍ಲೈನ್ಸ್ ಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮಾಡಲು ಸರಕಾರ ಆ್ಯಂಟಿಬಯಾಟಿಕ್ ಪ್ರಿಸ್ಕ್ರಿಪ್ಸನ್ ಅಡಿಟಿಂಗ್ ಮಾಡಬೇಕು. ಇದು ಒಂದೆರಡು ಕೇಂದ್ರದಲ್ಲಿ ಮಾತ್ರ ಸಾಧ್ಯ. ಆದರೆ ಯಾರ ನಿಯಂತ್ರಣದಲ್ಲಿರದ, ಹೆಚ್ಚು ಪ್ರತಿಜೀವಕಗಳನ್ನು ಬರೆಯುವ ಖಾಸಗಿ ವೈದ್ಯರ ಮೇಲೆ ಜಾರಿಗೆ ತರುವುದು ಅಸಾಧ್ಯ. ಇದರಿಂದಾಗಿ ಆ್ಯಂಟಿಬಯಾಟಿಕ್ ಬಳಕೆಯು ಸುಲಿಗೆಗೆ ಕಾರಣವಾಗಿದೆ.

ಇಂದು ಹೊಸಹೊಸ ಪ್ರತಿಜೀವಕಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ವೈದ್ಯರ ಸಮಸ್ಯೆಯೆಂದರೆ ಹೊಸ ಪ್ರತಿಜೀವಕಗಳಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡುವುದು. ಹೀಗೆ ಒದಗುವ ಆಯ್ಕೆಯ ಅವಕಾಶವೂ ಸುಲಿಗೆಗೆ ದಾರಿಯಾಗುತ್ತದೆ. ಇಂದು ವೈದ್ಯಕೀಯ/ಔಷಧಿ ಸಂಶೋಧನೆಗಳು ಸ್ಥಗಿತಗೊಂಡಿವೆ. ಕಾರಣ ಅವು ದುಬಾರಿಯಾಗಿವೆ. ಖಾಸಗಿ ಕಂಪನಿಗಳು ಔಷಧಿ ಸಂಶೋಧನೆ ಬಗ್ಗೆ ಒಲವು ತೋರಿಸುತ್ತಿಲ್ಲ. ಅದಲ್ಲದೇ ಈಗಿರುವ ಪ್ರತಿಜೀವಕಗಳನ್ನು ಕಮ್ಮಿ ಕಾರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಳಸಿ ಆ ಪ್ರತಿಜೀವಕಗಳು ಪರಿಣಾಮ ಬೀರದಂತೆ (ಡ್ರಗ್ ರೆಸಿಸ್ಟನ್ಸ್) ಆಗಿವೆ. ಅಂತಹ ಪರಿಸ್ಥಿತಿಯಲ್ಲಿ ಚಿಕಿತ್ಸೆ ದುಬಾರಿಯಾಗುವುದಲ್ಲದೇ ಕೆಲವು ಬಾರಿ ಪರಿಣಾಮಕಾರಿಯಾಗದಿರಬಹುದು.

ಇದನ್ನು ಪ್ರಾರಂಭದಲ್ಲೇ ವೈದ್ಯವಿಜ್ಞಾನ ಮನಗಂಡು ಆ್ಯಂಟಿಬಯಾಟಿಕ್ ಗೈಡ್‍ಲೈನ್ಸ್ ಗಳನ್ನು ರೂಪಿಸಿದೆ. ಆದರೆ ಈ ಮಾರ್ಗದರ್ಶನ ಸೂತ್ರಗಳು ಕೇವಲ ಪುಸ್ತಕದ ನೀತಿಗಳಾಗಿ ಉಳಿದಿವೆ. ಇವುಗಳನ್ನು ವೈದ್ಯರಾರೂ ಪಾಲಿಸುವುದಿಲ್ಲ. ಕಾಲಕಾಲಕ್ಕೆ ಬದಲಾಗುವ ಈ ಮಾರ್ಗದರ್ಶನ ಸೂತ್ರಗಳ ಬಗ್ಗೆ ವೈದ್ಯರಿಗೆ ಯಾರು ಮಾಹಿತಿ ಕೊಡುತ್ತಾರೆ? ಇಂಥ ಗೈಡ್‍ಲೈನ್ಸ್ ಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮಾಡಲು ಸರಕಾರ ಆ್ಯಂಟಿಬಯಾಟಿಕ್ ಪ್ರಿಸ್ಕ್ರಿಪ್ಸನ್ ಅಡಿಟಿಂಗ್ ಮಾಡಬೇಕು. ಇದು ಒಂದೆರಡು ಕೇಂದ್ರದಲ್ಲಿ ಮಾತ್ರ ಸಾಧ್ಯ. ಆದರೆ ಯಾರ ನಿಯಂತ್ರಣದಲ್ಲಿರದ, ಹೆಚ್ಚು ಪ್ರತಿಜೀವಕಗಳನ್ನು ಬರೆಯುವ ಖಾಸಗಿ ವೈದ್ಯರ ಮೇಲೆ ಜಾರಿಗೆ ತರುವುದು ಅಸಾಧ್ಯ. ಇದರಿಂದಾಗಿ ಆ್ಯಂಟಿಬಯಾಟಿಕ್ ಬಳಕೆಯು ಸುಲಿಗೆಗೆ ಕಾರಣವಾಗಿದೆ.

ಇನ್ನು, ಲಸಿಕೆಗಳನ್ನು ಮಕ್ಕಳಲ್ಲಿ ಅಲ್ಲದೇ ಗರ್ಭಿಣಿ ಮಹಿಳೆ ಹಾಗೂ ಇನ್ನೂ ಹಲವಾರು ಸನ್ನಿವೇಶಗಳಲ್ಲಿ ಬಳಸಲಾಗುವುದು. ಉದಾ: ರೇಬೀಸ್ ಕಾಯಿಲೆ ತಡೆಯಲು. ಸರಕಾರ ನಮ್ಮ ದೇಶದ ರೋಗಗಳ ಆಧಾರದ ಮೇಲೆ ಲಸಿಕಾ ಪಟ್ಟಿಯನ್ನು ಜಾರಿಮಾಡಿದೆ. ಈ ಲಸಿಕೆಗಳು ಸರಕಾರಿ ಆಸ್ಪತ್ರೆಗಳಲ್ಲಿ ದೊರಕುತ್ತವೆ. ಈ ಲಸಿಕೆ ಬಿಟ್ಟರೆ ಬೇರೆ ಯಾವ ಲಸಿಕೆಯ ಅಗತ್ಯ ಇಲ್ಲ. ಆದರೆ ಖಾಸಗಿ ವೈದ್ಯರು ಇನ್ನೂ ಹಲವಾರು ದುಬಾರಿ ಲಸಿಕೆಗಳನ್ನು ನೀಡುತ್ತ ಬಂದಿದ್ದಾರೆ. ಇದು ಕೂಡ ಸುಲಿಗೆಯ ಇನ್ನೊಂದು ಮಾದರಿ, ದಾರಿ ಎನ್ನಬಹುದು.

ಲಸಿಕೆಗಳು ವಿಜ್ಞಾನದ ಕೊಡುಗೆ. ಆದರೆ ನಮ್ಮ ಜನರಿಗೆ ಅಗತ್ಯವಿರುವ ಲಸಿಕೆಯ ಬಳಕೆ ಬಗ್ಗೆ ಅರಿವು ಅಗತ್ಯ. ಆದ್ದರಿಂದ ದುಬಾರಿ ಲಸಿಕೆಗಳು ವೈಜ್ಞಾನಿಕ ಆವಿಷ್ಕಾರಗಳಾದರೂ ಅದನ್ನು ಬಳಸಬೇಕಿಲ್ಲ. ಇಂದು ಪ್ರತಿಜೀವಕಗಳು ಹಾಗೂ ಲಸಿಕೆ ಬಳಕೆಯಲ್ಲಿ ಸುಲಿಗೆ ಅಪಾರವಾಗಿದೆ. ಸರಕಾರ ಮೌನಮುರಿಯಬೇಕಿದೆ.

*ಲೇಖಕರು ಬಾಗಲಕೋಟೆಯವರು, ಮಾನಸಿಕರೋಗ ತಜ್ಞರು; ಕಳೆದ 40 ವರ್ಷಗಳಿಂದ ಬೆಂಗಳೂರಿನಲ್ಲಿ ವೈದ್ಯವೃತ್ತಿಯಲ್ಲಿದ್ದಾರೆ, ಜನಾರೋಗ್ಯ ಕುರಿತ 25 ಕೃತಿಗಳನ್ನು ಪ್ರಕಟಿಸಿದ್ದಾರೆ. 

Leave a Reply

Your email address will not be published.