ಪ್ರತಿಬಿಂಬ ಮುಂದುವರಿದ ಚರ್ಚೆ

ಜ್ಞಾನ ಭಂಡಾರ ಸಮೃದ್ಧ

ಚಿಂತನಾರ್ಹ ಸಂಪಾದಕೀಯ, ಪ್ರಸ್ತುತ ಸಮಸ್ಯೆಗಳ ಕುರಿತು ವಿಷಯತಜ್ಞರ ವಿಚಾರಪೂರ್ಣ ಲೇಖನಗಳು, ಸಮಕಾಲೀನ ಸಂಗತಿಗಳ ಹೂರಣ, ಜಗದರಿವು ಮೂಡಿಸುವ ಬರಹಗಳು, ವಿಸ್ತೃತ ಪುಸ್ತಕ ಪ್ರಪಂಚ, ಸಮೀಚೀನ ಸಂಸ್ಕೃತಿ ಸಂಪದ, ಹಾಗು ಪ್ರತಿಬಿಂಬ ಅಂಕಣಗಳ ಮೂಲಕ ಓದುಗರ ಜ್ಞಾನಭಂಡಾರವನ್ನು ಸಮೃದ್ಧಗೊಳಿಸಿ ಅವರನ್ನು ವಿಚಾರವಂತರನ್ನಾಗಿಸುವ ಸಾಮರ್ಥ್ಯವನ್ನು ಅನ್ನದ ಭಾಷೆಯ ಚಿನ್ನದ ಮಾಸಿಕ ಚಿಂತನಶೀಲ ಸಮಾಜಮುಖಿ ಪಡೆದಿದೆಯೆಂದರೆ ಅತಿಶಯೋಕ್ತಿಯಲ್ಲ. ಅರಂಭದಿಂದಲೂ ಸಮಾಜಮುಖಿ ಬಳಗದ ಸದಸ್ಯನಾಗಿರುವುದಕ್ಕೆ ಹೆಮ್ಮೆಯೆನಿಸುತ್ತಿದೆ. ಮುಂಬರುವ ವರ್ಷಗಳಲ್ಲಿ ನಮ್ಮೆಲ್ಲರ ನೆಚ್ಚಿನ ಈ ಪತ್ರಿಕೆ ಇನ್ನೂ ಹೆಚ್ಚಿನ ಓದುಗರನ್ನು ತಲುಪಲೆಂದು ಆಶಿಸುವೆ.

-ಮಂಜುನಾಥ. ಡಿ.ಎಸ್., ಬೆಂಗಳೂರು.


ಬರಹಗಾರರ ಗಮನಕ್ಕೆ

• ಆಸಕ್ತರು ಪತ್ರಿಕೆಯ ಸ್ವರೂಪ, ಚೌಕಟ್ಟಿಗೆ ತಕ್ಕಂತೆ ಲೇಖನ, ಕವಿತೆ, ನೀಳ್ಗತೆ, ವ್ಯಂಗ್ಯಚಿತ್ರ, ಪ್ರವಾಸ ಕಥನ, ಪ್ರಬಂಧಗಳನ್ನು ಕಳಿಸಬಹುದು. ಅನುವಾದಗಳಿಗೂ ಅವಕಾಶವಿದೆ.

• ಮುಂಚಿತವಾಗಿ ಪ್ರಕಟಿಸುವ ‘ಮುಖ್ಯಚರ್ಚೆ’ಯ ವಿಷಯ ಕುರಿತು ನಿಮ್ಮ ಚಿಂತನೆ, ಅಭಿಪ್ರಾಯ ಹಂಚಿಕೊಳ್ಳಬಹುದು.

• ಪ್ರಚಲಿತ ವಿಷಯಗಳಿಗೆ, ಆಗುಹೋಗುಗಳಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯಲು ‘ಸಮಕಾಲೀನ’ ವಿಭಾಗವಿದೆ.

• ವಿಶ್ವ ವಿದ್ಯಮಾನಗಳ ಕುರಿತು ಸದಾ ಗಮನಹರಿಸುವ ಆಸಕ್ತರಿಗೆ ‘ಜಗದರಿವು’ ವಿಭಾಗವಿದೆ. ಜಾಗತಿಕ ಮಟ್ಟದ ವಿಚಾರಗಳು, ರಾಜಕೀಯ ಘಟನೆಗಳನ್ನು ಕುರಿತು ಇಲ್ಲಿ ಬರೆಯಬಹುದು.

• ನಿಮ್ಮ ಊರಿನ ಜನ, ಭಾಷೆ, ವರ್ತನೆ, ಸಮಭಾವ, ಭೌಗೋಳಿಕ ಹಿನ್ನೆಲೆ, ಸಮಸ್ಯೆ, ಹಿರಿಮೆ ಕುರಿತ ವಿಶೇಷ ಅಂಶಗಳನ್ನೊಳಗೊಂಡ ಬರಹಗಳಿಗಾಗಿ ‘ನಮ್ಮೂರು’ ಅಂಕಣ ಮೀಸಲು.

• ಛಾಯಾಚಿತ್ರಕಾರರು ತಾವು ಕ್ಲಿಕ್ಕಿಸಿದ, ಒಂದು ವಿಷಯ ಕೇಂದ್ರೀಕರಿಸಿದ ಅತ್ಯುತ್ತಮ ಗುಣಮಟ್ಟದ ಛಾಯಾಚಿತ್ರಗಳನ್ನು ‘ನನ್ನ ಕ್ಲಿಕ್’ ಅಂಕಣಕ್ಕೆ ಕಳಿಸಬಹುದು.

• ಪ್ರಕಾಶಕರು/ಲೇಖಕರು ತಮ್ಮ ಹೊಸ ಪುಸ್ತಕಗಳ ಎರಡು ಪ್ರತಿಯನ್ನು ಕಳಿಸಿದರೆ ಪುಸ್ತಕ ವಿಭಾಗದಲ್ಲಿ ಪರಿಚಯಿಸಲಾಗುವುದು. ನೀವು ಓದಿದ ಹೊಸ, ಪ್ರಮುಖ ಕೃತಿಗಳನ್ನು ಕುರಿತು ಅವಲೋಕನ ಬರೆಯಲೂ ಇಲ್ಲಿ ಅವಕಾಶವಿದೆ.

• ಹಳಗನ್ನಡ ಸಾಹಿತ್ಯವನ್ನು ಹೊಸ ತಲೆಮಾರಿನ ಓದುಗರಿಗೆ ಪರಿಚಯಿಸುವ ಉದ್ದೇಶದಿಂದ ‘ಹಳಗನ್ನಡ’ ಅಂಕಣ ಆರಂಭಿಸಲಾಗಿದೆ. ಕ್ರೀಡೆ ಕುರಿತ ಬರಹಗಳಿಗೆ ‘ಕ್ರೀಡಾಂಕಣ’ ತೆರೆದಿದೆ.

• ಪ್ರಚಲಿತ ಘಟನೆಗಳನ್ನು, ರಾಜಕೀಯ ಸನ್ನಿವೇಶಗಳನ್ನು ಅಥವಾ ಯಾವುದೇ ವಿಷಯವನ್ನು ವಿಡಂಬನೆಯ, ವ್ಯಂಗ್ಯದ ಧಾಟಿಯಲ್ಲಿ ಬರೆಯುವವರಿಗೆ ‘ವಿಡಂಬನೆ’ ಅಂಕಣವಿದೆ.

• ಅಲ್ಲದೆ ಪತ್ರಿಕೆಯಲ್ಲಿ ಪ್ರಕಟವಾದ ಬರಹಗಳನ್ನು ಕುರಿತು ನಿಮ್ಮ ಅಭಿಪ್ರಾಯ, ಮೆಚ್ಚುಗೆ, ಟೀಕೆ, ಟಿಪ್ಪಣಿ, ಸಲಹೆಗಳನ್ನೂ ನಮಗೆ ಕಳಿಸಬಹುದು.
ಸಮಾಜಮುಖಿ ಮಾಸಪತ್ರಿಕೆ

ನಂ.8, ಡಾ.ಎಚ್.ಎಲ್.ನಾಗೇಗೌಡ ರಸ್ತೆ (ಸರ್ಪೆಂಟೈನ್ ರಸ್ತೆ), ಕುಮಾರ ಪಾರ್ಕ್ ಪಶ್ಚಿಮ, ಶೇಷಾದ್ರಿಪುರಂ, ಬೆಂಗಳೂರು-560020. ಇಮೇಲ್: samajamukhi2017@gmail.com, ದೂ: 9606934018.


ಉದ್ಯೋಗ ಸೃಷ್ಟಿ ಮನುಷ್ಯರಿಗಲ್ಲ!

ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಲೇಖಕರು, ಒಬ್ಬ ನುರಿತ ಅರ್ಥಶಾಸ್ತ್ರಜ್ಞನ ಹಾಗೆ ಚಿಂತಿಸಿ ಬರೆದಿರುವ ಕ್ರಮ ನನಗೆ ಸಂತೋಷ ಮತ್ತು ಆಶ್ಚರ್ಯ ಎರಡೂ ಒಂದೇ ಬಾರಿಗೆ ಆಯಿತು. ದೇಶದ ಆರ್ಥಿಕ ಸ್ಥಿತಿ-ಗತಿ, ಯಂತ್ರಗಳ ಯಜಮಾನಿಕೆ ಮತ್ತು ಅನಿವಾರ್ಯತೆ, ನಿರುದ್ಯೋಗ ಸಮಸ್ಯೆ ಕುರಿತಂತೆ ಓದುಗರನ್ನು ಯೋಚನೆಗೆ ಹಚ್ಚುವ ಲೇಖನ ಇದು. ಇಂಥ ಅದ್ಭುತ ಲೇಖನ ಬರೆದ ಲೇಖಕರಿಗೆ ಮತ್ತು ಅದನ್ನು ಪ್ರಕಟಿಸಿದ ‘ಸಮಾಜಮುಖಿ ಬಳಗ’ಕ್ಕೆ ಧನ್ಯವಾದಗಳು.

ಇದೇ ಸಂಚಿಕೆಯಲ್ಲಿ ಒಂದು ‘ಕಾರ್ಟೂನ್’ ಪ್ರಕಟವಾಗಿದೆ. (ಪುಟ 72). ಅದರಲ್ಲಿ ಇಬ್ಬರು ಹಿರಿಯ ನಾಗರಿಕರು, ಟ್ರಾಫಿಕ್ ಪೊಲೀಸರು ವಿಧಿಸುವ ದಂಡವನ್ನು ಕುರಿತಂತೆ ಮಾತನಾಡುತ್ತಿದ್ದಾರೆ. ಅವರ ವೇಷ-ಭೂಷಣ ನೋಡಿದರೆ ಅವರು ನಿವೃತ್ತ ಅಧಿಕಾರಿಗಳಂತೆ ಕಾಣುತ್ತಾರೆ. ಆದರೆ ಅವರು ತಮ್ಮ ಮಾತಿನಲ್ಲಿ ಬಳಸಿರುವ “ಕಣ್ಲಾ” ಪದ ಸ್ವಲ್ಪವೂ ಹೊಂದಿಕೆಯಾಗುವುದಿಲ್ಲ. ಭಾಷೆಗೂ ವಯಸ್ಸಿಗೂ, ಭಾಷೆಗೂ ವೇಷ-ಭೂಷಣಕ್ಕೂ ಮತ್ತು ಭಾಷೆಗೂ ಸ್ಥಾನ-ಮಾನಕ್ಕೂ ಸಂಬಂಧ ಇದೆ ಎಂಬುದನ್ನು ಅರ್ಥ ಮಾಡಿಕೊಂಡು ಸೂಕ್ತ ರೀತಿಯಲ್ಲಿ ಭಾಷೆಯನ್ನು ಬಳಸಬೇಕಿದೆ.

-ಸಿ.ಚಿಕ್ಕತಿಮ್ಮಯ್ಯ, ಬೆಂಗಳೂರು.


ತೀರ್ಪು ಓದಿ ಬರೆಯಬೇಕಿತ್ತು

ಡಿಸೆಂಬರ್ ಸಂಚಿಕೆಯ ಅಯೋಧ್ಯಾ ತೀರ್ಪು ಲೇಖನವನ್ನು ಸಮಗ್ರ ತೀರ್ಪು ಓದಿ ಬರೆದಿದ್ದರೆ ಚೆನ್ನಾಗಿತ್ತು. ಒಂದು ಸಾವಿರ ಪುಟಗಳುಳ್ಳ ತೀರ್ಪು ಅರ್ಥಗರ್ಭಿತವಾಗಿದೆ. ವೃತ್ತಿಯಲ್ಲಿ ವಕೀಲನಾದ ನಾನು ಸುಪ್ರೀಂ ತೀರ್ಪನ್ನು ಬಲವಾಗಿ ಬೆಂಬಲಿಸುತ್ತೇನೆ. ನ್ಯಾಯಾಲಯ archeology ವರದಿ ಆಧರಸಿದೆ. ಅದರಲ್ಲಿ, ಈ ಮೊದಲು ಬಾಬ್ರಿ ಅಥವಾ ಮುಸಲ್ಮಾನರ ಕಟ್ಟಡ ನೆಲದೊಳಗೆ ಇತ್ತು ಅನ್ನುವುದು ರುಜುವಾತು ಪಡಿಸಿಲ್ಲ. ಸಂವಿಧಾನ ಮಿತಿಯಲ್ಲಿ ತೀರ್ಪು ಪ್ರಕಟವಾಗಿದ್ದು, ರಾಮನ ಜನ್ಮಸ್ಥಳ ಅಯೋಧ್ಯಾ ಎಂಬುದು ಭಾರತದ ಹಿಂದೂ ಧರ್ಮೀಯರಲ್ಲಿ ಪ್ರಾಚೀನಕಾಲದಿಂದಲೂ ಇರುವ ನಂಬಿಕೆ ಹಾಗು ಆಚರಣೆ. ಸುಪ್ರೀಂ ತೀರ್ಪನ್ನು ಸ್ವಾಗತಿಸುತ್ತೇನೆ.

-ಸಿ.ಎಂ.ಗುರುಬಸವರಾಜ, ಬಳ್ಳಾರಿ.


ಸಮಾಜಮುಖಿ’ಯಲ್ಲಿ ಪಿ.ಹೆಚ್.ಡಿ. ಸಾರಾಂಶ

ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿವರ್ಷವೂ ನೂರಾರು ಪಿಹೆಚ್ಡಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗುತ್ತಿದೆ. ಈ ಪ್ರಬಂಧಗಳನ್ನು ವಿವಿಯ ಒಳಗಿನ ಹಾಗೂ ಹೊರಗಿನ ನುರಿತ ಪ್ರಾಧ್ಯಾಪಕರಿಂದ ಪರಿಶೀಲಿಸಿ ಡಾಕ್ಟರೇಟ್ ಪದವಿಗಳನ್ನೂ ನೀಡಲಾಗುತ್ತಿದೆ. ಆದರೆ ಈ ಸಂಶೋಧನೆಗಳ ಮಾಹಿತಿ ಮತ್ತು ಪ್ರಯೋಜನ ಸಮಾಜದ ಒಳಿತಿಗೆ ಸುಲಭವಾಗಿ ದಕ್ಕುತ್ತಿಲ್ಲ. ಸಂಶೋಧನೆಯ ಫಲಿತಾಂಶಗಳನ್ನು ಅಳವಡಿಸಿಕೊಳ್ಳಲಾಗುತ್ತಿಲ್ಲ. ಈ ಕೊರತೆಯನ್ನು ಸರಿದೂಗಿಸಲು ಸಮಾಜಮುಖಿ ಪತ್ರಿಕೆ ಮುಂದಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಸಲ್ಲಿಸಲಾದ ನಿಮ್ಮ ಪಿಹೆಚ್ಡಿ ಪ್ರಬಂಧವನ್ನು 1000 ಶಬ್ದಗಳ ಸಾರಾಂಶದೊಂದಿಗೆ ಪ್ರಕಟಣೆಗೆ ಸಲ್ಲಿಸಿ. ಆಯ್ದ ಸಾರಾಂಶಗಳನ್ನು ಮಾಸಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಅತಿ ಉತ್ತಮ ಪ್ರಬಂಧಗಳನ್ನು ಪುಸ್ತಕರೂಪದಲ್ಲಿ ಕೂಡಾ ಹೊರತರಲಾಗುವುದು. ನಿಮ್ಮ ಸಂಶೋಧನೆಯನ್ನು ಸಮಾಜದೊಂದಿಗೆ ಹಂಚಿಕೊಳ್ಳಲು ನೆರವು ನೀಡಲಾಗುವುದು. ಇಮೇಲ್: samajamukhi2017@gmail.com


ಬಹುಕಾಲ ಬದುಕಿ ಬೆಳಗಲಿ

ನನ್ನಂತೆ ಹಲವರ ಪ್ರಜ್ಞೆ ಮತ್ತು ತಿಳಿವಳಿಕೆಯ ಹಸಿವನ್ನು ಇಂಗಿಸುವ ಸಮಾಜಮುಖಿಯು ಕನ್ನಡದ ನೆಲದಲ್ಲಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಎಲ್ಲ ಬಾಲಗ್ರಹಗಳನ್ನು ಮೀರಿ ಸಶಕ್ತವಾಗಿ ಬೆಳೆಯಲಿ ಎಂದು ಮನಸಾರೆ ಹಾರೈಸುತ್ತೇನೆ. ಆಲೋಚನೆ ಎಂಬ ತ್ರೈಮಾಸಿಕದ ಮೂರು ಸಂಚಿಕೆ ತಂದು ನಿಲ್ಲಿಸಬೇಕಾಗಿ ಬಂತು ನನಗೆ. ದಿನಕರ ದೇಸಾಯಿಯವರು ಜನಸೇವಕ ಎಂಬ ವಾರಪತ್ರಿಕೆಯ 915 ಸಂಚಿಕೆ ತಂದು ಪತ್ರಿಕೆ ನಿಲ್ಲಿಸಿದರು. ಆದರೆ ಸಮಾಜಮುಖಿ ಬಹುಕಾಲ ಬದುಕಿ ಬೆಳಗಲಿ.

-ಡಾ.ಶ್ರೀಪಾದ ಶೆಟ್ಟಿ, ಹೊನ್ನಾವರ.


ಅನಾಮಧೇಯರ ಬಗ್ಗೆ ಗಮನವಿರಲಿ

ನನ್ನ ಅನುವಾದಿತ ಕವನವನ್ನು ನೀವು ಇಷ್ಟು ಶೀಘ್ರದಲ್ಲಿಯೇ ಪ್ರಕಟಿಸಿದ್ದು ಬಹಳ ಸಂತಸವನ್ನು ನೀಡಿತು. ತಮಗೆ ನನ್ನ ಹೃದಯದುಂಬಿ ಕೃತಜ್ಞತೆಗಳು. ಕವಿತೆಯ ಆತ್ಮವನ್ನು ಚಿತ್ರದಲ್ಲಿ ಸೆರೆ ಹಿಡಿದದ್ದೂ ಆನಂದದ ಅನುಭವ ನೀಡಿತು. ಕಲಾಕಾರರಿಗೆ ನನ್ನ ಮೆಚ್ಚಿಗೆಗಳನ್ನು ತಿಳಿಸಿರಿ. ತಮ್ಮ ಪತ್ರಿಕೆಯ ಸಹಕಾರ ನಮ್ಮಂಥ ಅನಾಮಧೇಯ ಸಾಹಿತ್ಯ ಪ್ರೇಮಿಗಳ ಮೇಲೆ ಸದಾ ಇರಲಿ ಎಂದು ಬೇಡಿಕೊಳ್ಳುತ್ತೇನೆ.

-ಅರುಂಧತಿ ಸವದತ್ತಿ, ಧಾರವಾಡ.


ಡಾ.ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ಕಥಾಸ್ಪರ್ಧೆ

ಹುಬ್ಬಳ್ಳಿಯ ‘ಅಕ್ಷರ ಸಾಹಿತ್ಯ ವೇದಿಕೆ’ಯು ಕನ್ನಡದ ಪ್ರಖ್ಯಾತ ಕಥೆಗಾರ ಡಾ.ಪ್ರಹ್ಲಾದ ಅಗಸನಕಟ್ಟೆಯವರ ಸ್ಮರಣಾರ್ಥವಾಗಿ, ಕಳೆದ ವರ್ಷದಂತೆ ‘ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ/ನಿ ಕಥಾ ಸ್ಪರ್ಧೆಯನ್ನು ಏರ್ಪಡಿಸಿದ್ದು, 25ರೊಳಗಿನ ವಯೋಮಾನದ ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಯ್ಕೆಯಾದ ಕಥೆಗೆ ರೂ.5000 ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಡಾ.ಪ್ರಹ್ಲಾದರ ಜನ್ಮದಿನವಾದ ಜೂನ್ 3 ರಂದು ವಿತರಿಸಲಾಗುವುದು.

ಉದಯೋನ್ಮುಖ ಕತೆಗಾರರು ತಮ್ಮ ಕಾಲೇಜಿನ ಮುಖ್ಯಸ್ಥರಿಂದ ಪಡೆದ ‘ನಮ್ಮ ಕಾಲೇಜಿನ ವಿದ್ಯಾರ್ಥಿ/ನಿ’ ಎಂಬ ದೃಢೀಕೃತ ಪ್ರಮಾಣ ಪತ್ರದೊಂದಿಗೆ ತಮ್ಮ ಅಪ್ರಕಟಿತ ಸ್ವರಚಿತ ಕಥೆಯೊಂದನ್ನು ಕಳುಹಿಸಬೇಕು.

ಕೊನೆಯ ದಿನಾಂಕ: 30 ಜನೆವರಿ 2020. ವಿಳಾಸ: ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ವಿದ್ಯಾರ್ಥಿ/ನಿ ಕಥಾಸ್ಪರ್ಧೆ, ಅಕ್ಷರ ಸಾಹಿತ್ಯ ವೇದಿಕೆ, ನಂ.90, ‘ನಾಗಸುಧೆ’ 6/ಬಿ ಕ್ರಾಸ್, ಕಾಳಿದಾಸನಗರ, ವಿದ್ಯಾನಗರ ವಿಸ್ತೀರ್ಣ, ಹುಬ್ಬಳ್ಳಿ-580031, ದೂರವಾಣಿ: 9845779387 ಇಮೇಲ್: sunandakadame@gmail.com

Leave a Reply

Your email address will not be published.