ಪ್ರತಿಭಟನೆಗೆ ಬೇಕಾಗಿದೆ ಕಾನೂನಿನ ಹೊಸ ವ್ಯಾಖ್ಯಾನ

-ಪ್ರೊ.ವೆಂಕಟಾಚಲ ಹೆಗಡೆ

ಪ್ರತಿಭಟನೆಗಳ ಸ್ವರೂಪಗಳ ಕುರಿತಾಗಿ ಕಾನೂನಿನ ನಿಲುವುಗಳು ಇನ್ನೂ ಸ್ಪಷ್ಟವಾಗಿಲ್ಲ. ನಮ್ಮ ಸಂವಿಧಾನದ ಅನುಚ್ಛೇದ 19 ರನ್ವಯ ಎಲ್ಲ ಪ್ರಜೆಗಳಿಗೂ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕಿದೆ. ಈ ಪ್ರತಿಭಟನೆಯ ಸ್ವರೂಪ ಹೀಗಿರಬೇಕು, ಹಾಗಿರಬೇಕು ಎಂಬುದರ ಬಗ್ಗೆ ಕಾನೂನು ಏನನ್ನೂ ಹೇಳುವುದಿಲ್ಲ. ಅದು ಪ್ರತಿಭಟನಾಕಾರರ ಸ್ವಂತಿಕೆಗೆ ಮತ್ತು ಸೃಜನಶೀಲತೆಗೆ ಬಿಟ್ಟದ್ದು.

ಸಂಸತ್ತು ಅನುಮೋದಿಸಿದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿ ಭಾಗಗಳಲ್ಲಿ ಕಳೆದ ಮೂರು ತಿಂಗಳಿಗೂ ಮೀರಿ ಧರಣಿ ಕುಳಿತ ರೈತರ ಹೋರಾಟ ಸದ್ಯದಲ್ಲಿ ಕೊನೆಗಾಣುವ ಲಕ್ಷಣಗಳು ಕಾಣುತ್ತಿಲ್ಲ. ಒಕ್ಕೂಟ ಸರಕಾರದ ಕೃಷಿ ಮಂತ್ರಿಗಳ ನೇತೃತ್ವದ ಸಮಿತಿ ಹತ್ತಾರು ಬಾರಿ ರೈತರೊಂದಿಗೆ ಮಾತುಕತೆ ನಡೆಸಿ ನಿಮಗೆ ಬೇಕಾದ ಹಾಗೆ ಈ ಕಾಯ್ದೆಗಳಲ್ಲಿ ಬದಲಾವಣೆ ಮಾಡಲು ತಯಾರಿದ್ದೇವೆ ಎಂಬ ಸಂದೇಶವನ್ನು ನೀಡಿದೆ. ರೈತರು ಇದಕ್ಕೆ ಒಪ್ಪದಿದ್ದಾಗ ಈ ಮಸೂದೆಗಳನ್ನು ಮುಂದಿನ ಒಂದುವರೆ ವರ್ಷಗಳ ಕಾಲ ಅನುಷ್ಠಾನಗೊಳಿಸವುದಿಲ್ಲವೆಂಬ ಭರವಸೆಯನ್ನು ಈ ಸಮಿತಿ ರೈತರ ಮುಂದಿಟ್ಟಿತ್ತು. ರೈತರು ಇವೆಲ್ಲದಕ್ಕೂ ತಮ್ಮ ಅಸಮ್ಮತಿ ಸೂಚಿಸಿ ಈ ಕಾಯ್ದೆಗಳನ್ನು ಬೇಷರತ್ತಾಗಿ ರದ್ದು ಮಾಡಬೇಕೆಂಬ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ. ಇದಾಗುವ ತನಕ ನಾವು ಧರಣಿಯಲ್ಲಿ ಕುಳಿತಿರುತ್ತೇವೆಂಬುದನ್ನು ರೈತ ಸಂಘಟನೆಗಳು ಸರಕಾರಕ್ಕೆ ಸ್ಪಷ್ಟ ಮಾಡಿವೆ.

ಸರಕಾರಕ್ಕಾದರೊ ಇದು ಗಂಟಲೊಳಕ್ಕೆ ಇಳಿಯಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕಳೆದ ಸೆಪ್ಟಂಬರಿನಲ್ಲಿ, ಕೋವಿಡ್‍ನ ಕರಾಳ ನರ್ತನದ ನಡುವೆ ಗಡಿಬಿಡಿಯಲ್ಲಿ ಸಂಸತ್ತಿನಲ್ಲಿ ಹಾದುಬಂದ ಈ ಮಸೂದೆಗಳನ್ನು ಕೂಲಂಕಷವಾಗಿ ಚರ್ಚಿಸದೆ ಅನುಮೋದಿಸಿರುವುದನ್ನು ಎಲ್ಲ ವಿರೋಧ ಪಕ್ಷಗಳು ಸಾರಿಸಾರಿ ಬೆರಳು ಮಾಡಿ ತೋರಿಸುತ್ತಿವೆ. ಜೊತೆಗೆ ತಮ್ಮ ಎಲ್ಲ ಬೆಂಬಲವನ್ನು ರೈತರ ಹೋರಾಟಕ್ಕೆ ಸೂಚಿಸಿವೆ. ಸರಕಾರದ ಭಾಗವಾಗಿದ್ದ ಪಂಜಾಬಿನ ಅಕಾಲಿ ದಳ ಪಕ್ಷದ ನೇತಾರರು ಕೇಂದ್ರದ ಮಂತ್ರಿಮಂಡಲದಿಂದ ಹೊರಬಂದದ್ದು ಈ ರೈತರ ಹೋರಾಟದ ವ್ಯಾಪಕ ರಾಜಕೀಯ ನೆಲೆಗಳನ್ನು ನಮ್ಮ ಮುಂದಿರಿಸುತ್ತದೆ. 

ಇತ್ತೀಚೆಗೆ ಹೊರಬಂದ ಪಂಜಾಬಿನ ನಗರಸಭೆಗಳ ಚುನಾವಣಾ ಫಲಿತಾಂಶಗಳು ರೈತರ ಆಕ್ರೋಶವನ್ನು ಬಿಂಬಿಸುತ್ತವೆ ಎಂಬುದನ್ನು ಹಲವರು ವಾದಿಸುತ್ತಿದ್ದಾರೆ. ಕೇಂದ್ರ ಸರಕಾರ ಸದ್ಯ ತನ್ನ ನಿಲವನ್ನು ಬದಲಾಯಿಸುವ ಸಾಧ್ಯತೆ ಇದ್ದಂತಿಲ್ಲ. ಅವರ ಪ್ರಕಾರ ದೇಶದ ಇತರ ಭಾಗಗಳಲ್ಲಿರುವ ರೈತರು ಈ ಕಾಯ್ದೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂಬ ವಾದವನ್ನು ಪ್ರಧಾನಮಂತ್ರಿಗಳೆ ಬಾರಿಬಾರಿ ಹೇಳುತ್ತಿದ್ದಾರೆ. ಒಟ್ಟಾರೆ ಈ ಅಭೂತಪೂರ್ವ ರೈತರ ಧರಣಿ ಇನ್ನೂ ಹಲವಾರು ಕಾಲ ದೆಹಲಿಯ ಗಡಿಗಳನ್ನು ಅಸಾಮಾನ್ಯ ಪರಿಯಲ್ಲಿ ಘೇರಾಯಿಸಿಡುವ ಎಲ್ಲ ಸಾಧ್ಯತೆಗಳು ಇವೆ.

ಸಿಂಗು, ಟಿಕ್ರಿ ಮತ್ತು ಗಾಝಿಪುರ ಗಡಿಭಾಗಳು ದೆಹಲಿಗೆ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶಗಳಿಂದ ಹಾದು ಬರುವ ಹೆದ್ದಾರಿಗಳಿಗೆ ಹೆಬ್ಬಾಗಿಲುಗಳಾಗಿವೆ. ಇಲ್ಲಿಯ ತನಕ ತಮ್ಮ ಸಾವಿರಾರು ಟ್ರ್ಯಾಕ್ಟರುಗಳನ್ನು ತಂದು ಜಮಾಯಿಸಿದ ರೈತರನ್ನು ದೆಹಲಿಯೊಳಕ್ಕೆ ಬರದಂತೆ ತಡೆಯಲು ಕೇಂದ್ರ ಸರಕಾರದ ಅಧೀನದಲ್ಲಿರುವ ದೆಹಲಿಯ ಪೊಲೀಸ್ ಪಡೆ ಸರ್ವ ಪ್ರಯತ್ನಗಳನ್ನು ಮಾಡುತ್ತಿರುವುದನ್ನು ಮಾಧ್ಯಮಗಳು ವಿವರವಾಗಿ ವರದಿ ಮಾಡುತ್ತಿವೆ. ಗಣರಾಜ್ಯೋತ್ಸವದ ದಿನದಂದು ರೈತರು ಶಾಂತಿಯುತವಾಗಿ ಅಯೋಜಿಸಿದ್ದ ಬ್ರಹತ್ ಟ್ರ್ಯಾಕ್ಟರ್ ಫೇರಿ ಮತ್ತು ಅದರ ಹಿನ್ನೆಲೆಯಲ್ಲಿ ಕೆಲ ಕಡೆ  ನಡೆದ ಹಿಂಸೆ ಮತ್ತು ಕೆಂಪುಕೋಟೆಯನ್ನೊಳಗೊಂಡು ನಡೆದ ಅಹಿತಕರ ಘಟನೆಗಳು ರೈತರ ಈ ಹೋರಾಟದ ಸ್ವರೂಪದ ಮೇಲೆ ಹಲವಾರು ಪ್ರಶ್ನಾತ್ಮಕ ಚಿಹ್ನೆಗಳನ್ನು ಮೂಡಿಸಿದೆ.

ಭಾರತೀಯ ಕಿಸಾನ್ ಯೂನಿಯನ್‍ನ ಸುಮಾರು ನಲವತ್ತು ಸಂಘಟನೆಗಳ ದೇಶದ ಉತ್ತರ ಭಾಗದ, ಅದರಲ್ಲೂ ಪ್ರಮುಖವಾಗಿ ಪಂಜಾಬ್, ಹರಿಯಾಣ, ರಾಜಸ್ತಾನ ಮತ್ತು ಪಶ್ಚಿಮ ಉತ್ತರ ಪ್ರದೇಶಗಳ ಲಕ್ಷಾಂತರ ರೈತರು ಈ ಧರಣಿಯಲ್ಲಿ ಈಗಲೂ ಇಷ್ಟೆಲ್ಲ ಜಟಿಲ ಘಟನಾಕ್ರಮಗಳ ನಂತರವೂ ಪಾಲ್ಗೊಳ್ಳುತ್ತಿರುವುದು ಗಮನಾರ್ಹ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ರೈತರ ಹೋರಾಟಕ್ಕೆ ದೊರಕುತ್ತಿರುವ ಪ್ರಚಾರ ಮತ್ತು ಬೆಂಬಲ ಹಲವಾರು ಬಗೆಯ ಗುಮಾನಿಗಳಿಗೆ ಎಡೆಮಾಡಿಕೊಡುತ್ತಿರುವುದು ದೊಡ್ಡ ವಿಪರ್ಯಾಸವೆಂದೆ ಹೇಳಬೇಕು.

ಇವೆಲ್ಲ ಘಟನಾಕ್ರಮಗಳ ನಡುವೆ ಅತ್ಯಂತ ಸಹಜವೆಂಬಂತೆ ರೈತರ ಧರಣಿಯ ಕುರಿತಾದ ವಿಚಾರಗಳು ಮತ್ತು ಕಾಳಜಿಗಳು ದೇಶದ ಕಾನೂನಿನ ಉತ್ತುಂಗ ಶಿಖರವಾದ ಸರ್ವೋಚ್ಚ ನ್ಯಾಯಾಲಯದ ಉಡಿಯನ್ನು ಸೇರಿವೆ. ಇಲ್ಲಿಯ ತನಕ ಯಾವುದೆ ವ್ಯಕ್ತಿ ಅಥವಾ ಸಂಘಟನೆಗಳು ಈ ಕೃಷಿ ಕಾಯ್ದೆಗಳ ಸಂವಿಧಾನಾತ್ಮಕ ಬದ್ಧತೆಯನ್ನು ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸದೆ ಇರುವುದನ್ನು ನಾವು ಗಮನಿಸಬೇಕು. ಆದರೆ, ನ್ಯಾಯಾಲಯದ ಮುಂದೆ ಈ ರೈತರ ಧರಣಿ ಮತ್ತು ಪ್ರತಿಭಟನೆಗಳಿಂದ ದೆಹಲಿಯ ಗಡಿಗಳಿಂದ ಕೆಲಸಕಾರ್ಯಗಳಿಗೆ ಬರುವ ಜನಸಮುದಾಯಗಳಿಗೆ ಆಗುತ್ತಿರುವ ಅಥವಾ ಆಗಬಹುದಾದ ಸಂಕಷ್ಟಗಳ ಕುರಿತಾಗಿ ಅಹವಾಲುಗಳನ್ನು ತರಲಾಗಿದೆ.

ಸರ್ವೋಚ್ಚ ನ್ಯಾಯಾಲಯ ಮೊದಲಲ್ಲಿ ಈ ಬಗೆಯಲ್ಲಿ ರೈತರು ಗಡಿಭಾಗದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರತಿಭಟನೆಗಾಗಿ ಸೇರಿದರೆ ಅದರಿಂದ ಕೊರೊನಾ ಕುರಿತಾಗಿ ಇರುವ ನಿರ್ಬಂಧನೆಗಳನ್ನು ಉಲ್ಲಂಘಿಸಿದಂತಾಗುವುದು ಮತ್ತು ಅದು ಹೆಚ್ಚಿನ ರೀತಿಯಲ್ಲಿ ಹಬ್ಬುವ ಎಲ್ಲ ಸಾಧ್ಯತೆಗಳು ಇವೆಯೆಂಬ ವಾದವನ್ನು ಒಪ್ಪಿಕೊಂಡಿತ್ತು. ಆದರೆ, ದೇಶದ ಇತರ ಭಾಗಗಳಲ್ಲಿ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಗಳು, ಸಭೆಗಳು, ರಥ ಮತ್ತು ಪರಿವರ್ತನಾ ಯಾತ್ರೆಗಳನ್ನು ಕೊರೊನಾದ ನಿರ್ಬಂಧಗಳ ಯಾವ ಪರಿಧಿಯಲ್ಲಿ ನೋಡಬೇಕೆಂಬುದರ ಬಗ್ಗೆ ಸ್ಪಷ್ಟತೆ ಕೇಂದ್ರ ಸರಕಾರದಿಂದ ಬರದಿರುವ ಕಾರಣದಿಂದಾಗಿ ನ್ಯಾಯಾಲಯ ಕೃಷಿ ಕಾಯ್ದೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿ ಅದರ ಸಾಧಕಬಾಧಕಗಳನ್ನು ನಿರ್ದಿಷ್ಟವಾದ ನೆಲೆಗಳಲ್ಲಿ ಅರಿವು ಮಾಡಿಕೊಳ್ಳುವ ಸಲುವಾಗಿ ತಜ್ಞರ ಸಮಿತಿಯೊಂದನ್ನು ರಚಿಸಿ ಅದರ ಮುಂದೆ ತಮ್ಮ ವಾದಗಳನ್ನು ಮಂಡಿಸಲು ರೈತರನ್ನು (ಅವರ ಸಂಘಟನೆಗಳನ್ನು) ಅಹ್ವಾನಿಸಿತು.

ಧರಣಿ ಕುಳಿತ ರೈತರು ಈ ಎಲ್ಲ ತಜ್ಞರು ಮೊದಲಿನಿಂದಲೆ ಕೃಷಿ ಕಾಯ್ದೆಗಳ ಪರವಾಗಿ ತಮ್ಮ ನಿಲುವುಗಳನ್ನು ಮಂಡಿಸಿದವರಾದ್ದರಿಂದ ನ್ಯಾಯಾಲಯದ ಈ ಸಮಿತಿಯ ಮುಂದೆ ಹಾಜರಾಗಿ ತಮ್ಮ ವಿಚಾರಗಳನ್ನು ಮಂಡಿಸುವುದರಿಂದ ತಮ್ಮ ಸಮಸ್ಯೆಗಳಿಗೆ ಯಾವುದೆ ಪರಿಹಾರ ದೊರೆಯದೆಂಬ ನಿಲುವಿಗೆ ಬದ್ಧರಾಗಿ ಈ ಸಮಿತಿಯ ಕಾರ್ಯಕಲಾಪಗಳಿಂದ ದೂರವೆ ಉಳಿದರು. ಇನ್ನಿತರ ಕೆಲ ರೈತ ಸಂಘಟನೆಗಳು ಈ ಸಮಿತಿಯ ಮುಂದೆ ತಮ್ಮ ವಿಚಾರಗಳನ್ನು ಮಂಡಿಸಿವೆಯೆಂಬ ವರದಿಗಳಿವೆ. ಅತ್ತ ದೆಹಲಿಯ ಗಡಿಗಳಲ್ಲಿ ರೈತರು ಎಂದಿನಂತೆ ತಮ್ಮ ಪ್ರತಿಭಟನೆಯ ಠಿಕಾಣಿಯಲ್ಲಿ ಒಮ್ಮೆ ‘ರಾಸ್ತಾ ರೊಖೊ’ ಇನ್ನೂಮ್ಮೆ ‘ರೈಲ್ ರೊಖೊ’ ಕಾರ್ಯಕ್ರಮಗಳನ್ನು ಶಾಂತಿಯುತವಾಗಿ ಹಮ್ಮಿಕೊಳ್ಳುತ್ತ ಕುಳಿತಿದ್ದಾರೆ.

ಪ್ರತಿಭಟನೆಗಳ ಸ್ವರೂಪಗಳ ಕುರಿತಾಗಿ ಕಾನೂನಿನ ನಿಲುವುಗಳು ಇನ್ನೂ ಸ್ಪಷ್ಟವಾಗಿಲ್ಲ. ಮುಖ್ಯವಾಗಿ, ನಮ್ಮ ದೇಶದ ಸಂವಿಧಾನದ ಅನುಚ್ಚೇದ 19ರನ್ವಯ ಎಲ್ಲ ಪ್ರಜೆಗಳಿಗೂ ಸರಕಾರದ ನಿಲುವುಗಳ ವಿರುದ್ಧ, ಕಾಯ್ದೆಗಳ ವಿರುದ್ಧ ಹಾಗೂ ಅವರ ಬದುಕನ್ನು ತೊಂದರೆಗೆ ಒಳಮಾಡುವ ಯಾವುದೆ ನಿರ್ಧಾರಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕಿದೆ. ಈ ಪ್ರತಿಭಟನೆಯ ಸ್ವರೂಪ ಹೀಗಿರಬೇಕು, ಹಾಗಿರಬೇಕು ಎಂಬುದರ ಬಗ್ಗೆ ಕಾನೂನು ಏನನ್ನೂ ಹೇಳುವುದಿಲ್ಲ. ಅದು ಪ್ರತಿಭಟನಾಕಾರರ ಸ್ವಂತಿಕೆಗೆ ಮತ್ತು ಸೃಜನಶೀಲತೆಗೆ ಬಿಟ್ಟದ್ದು. ಆದರೆ ಅದು ದೇಶದ ಭದ್ರತೆ ಮತ್ತು ಮೂಲಭೂತ ಅಸ್ತಿತ್ವವನ್ನು ತಟ್ಟುವಂತಿರಬಾರದು.

ಮಹಾತ್ಮಾಗಾಂಧಿಯವರ ಉಪ್ಪಿನ ಸತ್ಯಾಗ್ರಹದನ್ವಯ 1930 ರಲ್ಲಿ ಹೊರಟ ದಂಡಿಯಾತ್ರೆಯ ಪರಿಯನ್ನೆ ನೋಡಿ. ಸಹಜವಾಗಿ ಹತ್ತಾರು ದಿನಗಳ ಕಾಲ ತಮ್ಮ ಸಾಬರಮತಿ ಅಶ್ರಮದಿಂದ ದಂಡಿಯವರೆಗೆ ನಡೆಯುತ್ತ ಸಾಗುವುದು ಯಾವ ಕಾನೂನನ್ನು ಉಲ್ಲಂಘಿಸಿದಂತಾಗಲಿಲ್ಲ. ಹೀಗಾಗಿ ಬ್ರಿಟಿಷ್ ಸರಕಾರ ಈ ದಂಡಿಯಾತ್ರೆಯ ಕಾಲದಲ್ಲಿ ಏನು ಮಾಡಲಾಗದೆ ಕುಳಿತಿತ್ತು. ಆದರೆ, ಮಹಾತ್ಮರ ಈ ನಡಿಗೆಯು ಇಡೀ ದೇಶವನ್ನು ರೋಮಾಂಚನಗೊಳಿಸಿ ಉಪ್ಪಿನ

ಸತ್ಯಾಗ್ರಹದಂತಹ ದೇಶವ್ಯಾಪಿ ಆಂದೋಳನವನ್ನೆ ಸೃಷ್ಟಿಸಿಬಿಟ್ಟಿತು. ಕೈಯಲ್ಲಿ ಒಂದು ಮುಷ್ಟಿ ಉಪ್ಪನ್ನು ನೀರಿನಿಂದ ಹಿಡಿದಾಗ ಅದು ಕಾನೂನಿನ ಪರಿಧಿಗೆ ಬಂದು ಬಾಪುರವರನ್ನು ಅಲ್ಲೆ ಕಾದಿದ್ದ ಪೊಲೀಸರು ಬಂಧಿಸಿದರು.

ಆದರೆ, ಇಂದು ಪ್ರತಿಭಟನೆಗಳ ವ್ಯಾಖ್ಯಾನವೆ ಬದಲಾಗಿ ಹೋಗಿದೆ. ಅದು ಬರಿ ಕಾನೂನಿನ ಉಲ್ಲಂಘನೆಯಾಗದೆ ಪ್ರತಿಭಟನಾಕಾರರ ಮೇಲೆ ದೇಶದ್ರೋಹದ ಆರೋಪಗಳ ಪಟ್ಟಿಯನ್ನು ದಾಖಲು ಮಾಡಲಾಗುತ್ತಿದೆ. ಈ ಆರೋಪಗಳು ನಿರಾಧಾರವೆಂದು ನ್ಯಾಯಾಲಯಗಳಲ್ಲಿ ಸಾಬೀತಾಗುವವರೆಗೆ ಸೆರೆಮನೆಯ ವಾಸದಲ್ಲಿರುವುದರ ಕುರಿತಾಗಿ ಕಾನೂನುಗಳನ್ನು ರಚಿಸಲಾಗಿದೆ ಮತ್ತು ಇದಕ್ಕೆ ನಮ್ಮ ಸರ್ವೋಚ್ಚ ನ್ಯಾಯಾಲಯ ನೀಡಿರುವ ವಾಖ್ಯಾನಗಳು ಸಂವಿಧಾನದ ಅನುಚ್ಛೇದ 19ನ್ನು ಎತ್ತಿ ಹಿಡಿಯುವಂತೆ ತೋರುತ್ತಿಲ್ಲ.

ಇತ್ತೀಚೆಗೆ ಶಾಹಿನ್ ಭಾಗ್ ಕುರಿತಾದ ತೀರ್ಪಿನಲ್ಲಿ (ಅಮಿತ್ ಸಹಾನಿ ಮತ್ತು ದೆಹಲಿ ಪೊಲೀಸ್ ಆಯುಕ್ತರು) ಸರ್ವೋಚ್ಚ ನ್ಯಾಯಾಲಯ “ಎಲ್ಲರಿಗೂ ತಮಗೆ ಬೇಕಾದಲ್ಲಿ, ತಮಗೆ ಸರಿಕಂಡ ರೀತಿಯಲ್ಲಿ ಪ್ರತಿಭಟನೆ ಮಾಡುವ ಹಕ್ಕಿಲ್ಲ ಮತ್ತು ಅಂತಹ ಸಂದರ್ಭಗಳಲ್ಲಿ ಇತರರಿಗೆ ತೊಂದರೆಯಾಗದ ರೀತಿಯಲ್ಲಿ ಈ ಪ್ರತಿಭಟನೆಗಳು ಇರಬೇಕು” ಎಂಬ ವ್ಯಾಖ್ಯಾನ ನೀಡಿರುವುದು ಸಾಕಷ್ಟು ವಿವರಣೆಗಳಿಗೆ ಎಡೆ ಮಾಡಿಕೊಟ್ಟಿದೆ. ಸರ್ವೋಚ್ಚ ನ್ಯಾಯಾಲಯ ಈ ತೀರ್ಪಿನಲ್ಲಿ ಹೇಳಿದಂತೆ “ನಮ್ಮ ಪ್ರತಿಭಟನೆಯ ಸ್ವರೂಪಗಳು ಸ್ವಾತಂತ್ರ್ಯ ಹೋರಾಟದ ಮೂಲಗಳಿಂದ ಬಂದು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ರೂಪಿಸುವಲ್ಲಿ ಸಹಕಾರಿಯಾಗಿದ್ದರೂ, ನಾವು ಈಗಿನ ಸಂದರ್ಭದಲ್ಲಿ ಸಂವಿಧಾನ ಹಾಕಿಕೊಟ್ಟ ಚೌಕಟ್ಟಿನ ಮೂಲಕವೇ ನಡೆಯಬೇಕು. ವಸಾಹತುಶಾಹಿ ಕಾಲದಲ್ಲಿ ನಾವು ಕಂಡ ಪ್ರತಿಭಟನೆಯ ಸ್ವರೂಪಗಳನ್ನು ಈಗಿನ ನಮ್ಮ ಸ್ವತಂತ್ರ್ಯ ಹೊಂದಿದ ಮತ್ತು ಪ್ರಜಾಸತ್ತಾತ್ಮಕ ಆಡಳಿತ ಹೊಂದಿರುವ ದೇಶದಲ್ಲಿ ಪುನರಾವರ್ತಿಸುವುದು ಸಮಂಜಸವಲ್ಲ” ಎನ್ನುವ ವಾಖ್ಯಾನವನ್ನು ಮುಂದಿಡಲಾಗಿದೆ.

ಈ ಬಗೆಯ ಸರ್ವೋಚ್ಚ ನ್ಯಾಯಾಲಯದ ವ್ಯಾಖ್ಯಾನ ಎಷ್ಟರ ಮಟ್ಟಿಗೆ ಸರಿ ಎಂಬುದರ ಬಗ್ಗೆ ವಿವೇಚನೆಯ ಅಗತ್ಯವಿದೆ. ಪ್ರಜಾಸತ್ತೆಯಲ್ಲಿ ಪ್ರತಿಭಟನೆಗಳು ಸಮುದಾಯಕ್ಕೆ ತಮ್ಮ ಅಳಲನ್ನು ತೋಡಿಕೊಳ್ಳುವ ಮತ್ತು ಸರಕಾರಗಳನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತವೆ ಎಂಬ ವಿಚಾರವನ್ನು ಸರ್ವೋಚ್ಚ ನ್ಯಾಯಾಲಯವೆ ತನ್ನ ಹಲವಾರು ತೀರ್ಪುಗಳಲ್ಲಿ ಕಳೆದ ಏಳು ದಶಕಗಳಲ್ಲಿ ಮಂಡಿಸಿದೆ.

1950ರಲ್ಲಿ ರೊಮೆಶ್ ಥಾಪರ್ ತೀರ್ಪಿನಿಂದ ಪ್ರಾರಂಭವಾದ ಸರ್ವೋಚ್ಚ ನ್ಯಾಯಾಲಯದ ಈ ಪ್ರತಿಭಟನೆಗಳ ಕುರಿತಾದ ವಿಚಾರಗಳು 1960ರ ರಾಮ ಮನೋಹರ ಲೋಹಿಯಾ, 1962ರ ರಾಜ್ ನಾರಾಯಣ್ ಮತ್ತು ಕಾಮೇಶ್ವರ ಸಿಂಗ್, 1986ರ ಎಕ್ಸಪ್ರೆಸ್ ನ್ಯೂಸ್ ಪೇಪರ್ಸ್… ಹೀಗೆ ಹಲವಾರು ತೀರ್ಪುಗಳಲ್ಲಿ ಪ್ರತಿಭಟನೆಗಳ ಸ್ವರೂಪ ಮತ್ತು ಅವುಗಳನ್ನು ನಿಯಂತ್ರಿಸಬಯಸುವ ಸತ್ತೆಯ ಮೇಲಿನ ನಿರ್ಬಂಧಗಳ ಕುರಿತಾಗಿ ಇವೆ. ಈ ಎಲ್ಲ ತೀರ್ಪುಗಳನ್ನು ಗಮನಿಸಿಕೊಂಡು ನಮ್ಮ ಸರ್ವೋಚ್ಚ ನ್ಯಾಯಾಲಯ

ಈ ಬಗೆಯ ಪ್ರತಿಭಟನೆಗಳಲ್ಲಿ ದೇಶದಾದ್ಯಂತ ತೊಡಗಿಕೊಂಡಿರುವ ರೈತರಿಗೆ (ಮತ್ತು ಇತರರಿಗೆ) ಅದರಲ್ಲೂ ಮುಖ್ಯವಾಗಿ ದೆಹಲಿಯ ಗಡಿಗಳಲ್ಲಿ ಶಾಂತವಾಗಿ ಕುಳಿತವರಿಗೆ ತನ್ನ ಮೊದಲಿನ ಈ ಎಲ್ಲ ವಾಖ್ಯಾನಗಳ ಮೂಲಕ ನೆರವಾಗಲೆಂದು ಅಶಿಸೋಣ.

*ಲೇಖಕರು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಕಾನೂನು ವಿಷಯದ ಪ್ರಾಧ್ಯಾಪಕರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು.

Leave a Reply

Your email address will not be published.