ಪ್ರತಿಭಟನೆಯ ಭಿನ್ನ ಸ್ವರೂಪ ಬೆಂಗಳೂರಿನ ‘ಬಿಲಾಲ್ ಬಾಗ್’

ಬೆಂಗಳೂರಿನ ಟಾನರಿ ರಸ್ತೆಯ ಬಿಲಾಲ್ ಮಸೀದಿ ಪಕ್ಕದ ರಸ್ತೆಯಲ್ಲಿ ಸಿಎಎ ವಿರೋಧಿಸಿ ನಡೆಯುತ್ತಿರುವ ವಿನೂತನ ಹೋರಾಟ ‘ಬಿಲಾಲ್ ಬಾಗ್’ ಪ್ರತಿಭಟನೆ ಎಂದು ಗುರುತಿಸಿಕೊಂಡಿದೆ. ಇದಕ್ಕೆ ದೆಹಲಿಯ ಹಲವು ಮಹಿಳಾ ಸಂಘಟನೆಗಳು ನಡೆಸುತ್ತಿರುವ ‘ಶಹೀನ್ ಬಾಗ್’ ಪ್ರತಿಭಟನೆಯೇ ಪ್ರೇರಣೆ ಮತ್ತು ಮಾದರಿ.

-ಶರೀಫ್ ಕಾಡುಮಠ

ಮಹಿಳಾ ಸಂಘಟನೆಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಸೇರಿ ನಡೆಸುತ್ತಿರುವ ‘ಬಿಲಾಲ್ ಬಾಗ್’ ಪ್ರತಿಭಟನೆ ಈಗಾಗಲೇ ಎರಡು ವಾರ ದಾಟಿದೆ. ಹಗಲಿರುಳು ನಿರಂತರವಾಗಿ ನಡೆಯುತ್ತಿರುವ ಹಲವಾರು ಸೃಜನಶೀಲ ಚಟುವಟಿಕೆಗಳು ಈ ಪ್ರತಿಭಟನೆಯ ಭಾಗವಾಗಿದ್ದು, ದಿನದಿಂದ ದಿನಕ್ಕೆ ಬಿಲಾಲ್ ಬಾಗ್‍ಗೆ ಭೇಟಿ ನೀಡುವವರ, ಪ್ರತಿಭಟನೆಗೆ ಸಾಥ್ ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು, ಮಾತನಾಡಲು ಅವಕಾಶವಿದೆ. ಹಾಡು, ಕಾವ್ಯ ವಾಚನ, ವಿಚಾರ ವಿನಿಮಯ, ಘೋಷಣೆಗಳ ಮೂಲಕ ಪ್ರತಿಭಟನೆಯನ್ನು ಜೀವಂತವಾಗಿರಿಸುವ ಪ್ರಯತ್ನ ನಡೆಸುತ್ತಿದೆ. ಮಾತನಾಡುವುದಕ್ಕೆ ಸ್ವಇಚ್ಛೆಯಿಂದ ಮುಂದೆ ಬರುವ ಹಲವು ಮಹಿಳೆಯರು, ಮಾತಿನ ಕೊನೆಯಲ್ಲಿ, ಹೋರಾಟವನ್ನು ಹೀಗೆಯೇ ಮುಂದುವರೆಸಬೇಕು ಎಂಬ ಅಭಿಪ್ರಾಯವನ್ನು ಹೇಳಿ ಹೋಗುತ್ತಾರೆ.

ಬಿಲಾಲ್ ಬಾಗ್ ಪ್ರತಿಭಟನೆಯ ಸ್ಥಳಕ್ಕೆ ಯಾವುದೇ ರಾಜಕೀಯ ನಾಯಕರಿಗೆ ಪ್ರವೇಶವಿಲ್ಲ. ಜನರು ಮಾತ್ರ ಸ್ವಇಚ್ಛೆಯಿಂದ ಪ್ರತಿಭಟನೆಯಲ್ಲಿ ಭಾಗವಹಿಸಬಹುದು. ಪ್ರತಿಭಟನೆಯಲ್ಲಿ ತೊಡಗಿರುವವರ ಮಕ್ಕಳು ಸಂಜೆ ಶಾಲೆ ಬಿಟ್ಟ ಬಳಿಕ ನೇರವಾಗಿ ಅಲ್ಲಿಗೇ ಬರುತ್ತಾರೆ. ಆ ಪುಟ್ಟ ಮಕ್ಕಳಿಗೆ ಚಿತ್ರ ಬಿಡಿಸುವುದನ್ನು, ಹಾಡುವುದನ್ನು ಕಲಿಸಿಕೊಡಲು ಹಲವರು ಆಸಕ್ತಿಯಿಂದ ಮುಂದೆ ಬಂದಿದ್ದಾರೆ. ಇನ್ನು ಕೆಲವರು ಪ್ರತಿಭಟನೆ ಪ್ರಾರಂಭವಾದಾಗಿನಿಂದ ನಿತ್ಯ ಅಲ್ಲಿಗೆ ಭೇಟಿ ನೀಡಿ ಮಕ್ಕಳ ಜತೆ ಬೆರೆಯುತ್ತಾರೆ. ಮಕ್ಕಳಿಗೆ ಕತೆ ಹೇಳಿ ಅವರನ್ನು ಖುಷಿಪಡಿಸುವವರೂ ಇದ್ದಾರೆ. ಹಲವಾರು ಪುಟಾಣಿಗಳು ಅವರ ಸುತ್ತ ಕೂತು ಕುತೂಹಲದಿಂದ ಕತೆ ಆಲಿಸುವ, ನಗುತ್ತಾ ಚಪ್ಪಾಳೆ ಹೊಡೆಯುತ್ತಾ ಸಂಭ್ರಮಿಸುವ ದೃಶ್ಯ ಬಿಲಾಲ್ ಬಾಗ್‍ನಲ್ಲೀಗ ಸಾಮಾನ್ಯವಾಗಿದೆ.

ಪ್ರತಿಭಟನೆಯ ಸ್ಥಳದಲ್ಲಿ ಮಕ್ಕಳು ಬಿಡಿಸಿದ ಚಿತ್ರಗಳನ್ನು ತೂಗು ಹಾಕಲಾಗಿದೆ. ಅಲ್ಲದೆ ಪಕ್ಕದ ಕಟ್ಟಡದ ಗೋಡೆಯಲ್ಲಿ ಬಹಳಷ್ಟು ಚಿತ್ರಗಳು, ಘೋಷವಾಕ್ಯಗಳು, ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಅಲ್ಲಿನ ಬಹುತೇಕ ಬರಹಗಳು ಐಕ್ಯತೆಯ ಸಂದೇಶವನ್ನು ಸಾರುತ್ತಿದ್ದು, ಪ್ರತಿಭಟನೆಯಲ್ಲಿ ಹಿಂಸಾತ್ಮಕ ಮಾರ್ಗ ಅನುಸರಿಸದಂತೆ ಕರೆ ನೀಡುವ ಬರಹ ಗಮನ ಸೆಳೆಯುತ್ತದೆ.

ನಿರಂತರ ಪ್ರತಿಭಟನೆಯಲ್ಲಿರುವ ಪ್ರತಿಭಟನಾಕಾರರಿಗೆ ಹೊತ್ತು ಹೊತ್ತಿನ ಆಹಾರ ಸಾಮಾಗ್ರಿಗಳನ್ನು ಪೂರೈಸುವುದು ಸುಲಭದ ಮಾತಲ್ಲ. ಆದರೆ ಹಲವಾರು ದಾನಿಗಳು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ತಮ್ಮ ಬೆಂಬಲ ಸೂಚಿಸಿ ಅನ್ನ, ಆಹಾರ, ನೀರು ಪೂರೈಸುತ್ತಿದ್ದಾರೆ. ಇಲ್ಲಿ ಯಾರೂ ಯಾರನ್ನೂ ಕೇಳಿ, ಬೇಡಿ ಆಹಾರ ತರಿಸುತ್ತಿಲ್ಲ. ಅವರಾಗಿಯೇ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿರುವುದು ವಿಶೇಷ.

ಪ್ರತಿಭಟನೆಯ ಕೇಂದ್ರಬಿಂದುವಿನಂತೆ ವಾರ್ಸಿ ಹಾಗೂ ಅಂಬ್ರೀನಾ ಎಂಬ ಇಬ್ಬರು ಮಹಿಳೆಯರು ಮೊದಲ ದಿನದಿಂದಲೂ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿದ್ದು, ಅಲ್ಲಿಗೆ ಭೇಟಿ ನೀಡುವ ಹಲವಾರು ಮಂದಿ ಈ ಇಬ್ಬರ ಆರೋಗ್ಯ ವಿಚಾರಿಸಿ, ಮಾತನಾಡಿಸಿ ಹೋಗುತ್ತಾರೆ. ‘ಮೊದಲ ದಿನದಿಂದಲೂ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇವೆ. ಕೇಂದ್ರ ಸರ್ಕಾರ ಸಿಎಎ ಕಾಯಿದೆ ಹಿಂಪಡೆಯುವವರೆಗೂ ಹೋರಾಟ ನಡೆಯುತ್ತಲೇ ಇರುತ್ತದೆ’ ಎನ್ನುತ್ತಾರೆ ವಾರ್ಸಿ.

ವಯಸ್ಸು, ಭಾಷೆ, ಜಾತಿ ಧರ್ಮದ ಹಂಗಿಲ್ಲದೆ ಸಾಮಾನ್ಯ ಮಹಿಳೆಯರು ಬಂದು ಪ್ರತಿಭಟನೆಯಲ್ಲಿ ಸೇರಿಕೊಳ್ಳುತ್ತಿದ್ದಾರೆ. ಬಹುತೇಕ ಇಲ್ಲಿ ಮಾತುಕತೆ, ವಿಚಾರ ವಿನಿಮಯ ಉರ್ದು ಭಾಷೆಯಲ್ಲಿ ನಡೆಯುತ್ತಿದೆ. ಹಿಂದಿ ಕವಿತೆಗಳನ್ನು, ದೇಶಭಕ್ತಿಗೀತೆಗಳನ್ನು ಹಾಡಲಾಗುತ್ತಿದೆ. ಆಜಾದಿ ಘೋಷಣೆ ಆಗಾಗ ಮೊಳಗುತ್ತಿರುತ್ತದೆ. ಅಲ್ಲದೆ ಅಲ್ಲಲ್ಲಿ ಅಂಬೇಡ್ಕರ್, ಮಹಾತ್ಮಾ ಗಾಂಧಿ, ಭಗತ್ ಸಿಂಗ್, ಟಿಪ್ಪು ಸುಲ್ತಾನ್ ಮುಂತಾದ ನಾಯಕರ ಫೋಟೋಗಳನ್ನು ಅಂಟಿಸಲಾಗಿದೆ. ಪ್ರವೇಶದ ಸ್ಥಳದ ಪಕ್ಕದಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿದೆ. ದೇಶದ ಇತರೆಡೆಗಳಲ್ಲಿ ನಡೆಯುವ ಪ್ರತಿಭಟನೆಗಳ ವಾತಾವರಣಕ್ಕಿಂತ ಭಿನ್ನವಾದ ದೃಶ್ಯಗಳು ಬಿಲಾಲ್ ಬಾಗ್‍ನಲ್ಲಿ ಕಾಣಸಿಗುತ್ತವೆ.

Leave a Reply

Your email address will not be published.