ಮುಖ್ಯಚರ್ಚೆಗೆ ಪ್ರವೇಶ

ಸಾಮಾನ್ಯ ಕನ್ನಡಿಗನ ಅಸಾಮಾನ್ಯ ಚಿತ್ರಣ.

ನೀವು ಪತ್ರಿಕೆಗಳಲ್ಲಿ ರಾಜಕಾರಣಿಗಳ, ಮಂತ್ರಿಗಳ, ಹೆಸರಾಂತರ ಅಥವಾ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಿದವರ ಜೀವನಚಿತ್ರಣಗಳನ್ನು ಓದುತ್ತೀರಿ. ಚುನಾವಣೆಯ ಸಮಯದಲ್ಲಂತೂ ಅಭ್ಯರ್ಥಿಗಳ ಆಸ್ತಿ, ಋಣ, ವಾಹನಗಳು, ಬ್ಯಾಂಕ್ ಬ್ಯಾಲೆನ್ಸ್ ಇತ್ಯಾದಿ ವಿವರಗಳನ್ನು ಓದುತ್ತೀರಿ. ಕೆಲವು ವಾಹಿನಿಗಳಲ್ಲಿ ಸ್ಯಾಂಡಲ್‍ವುಡ್ ಸ್ಟಾರ್‍ಗಳು ಧರಿಸಿದ ಕೂಲಿಂಗ್ ಗ್ಲಾಸ್‍ನಿಂದ ಹಿಡಿದು ಅವರ ಹೆಂಡತಿಯರ ನಡುವಿನ ಜಗಳದ ‘ಪಿನ್ ಟು ಪಿನ್’ ವಿವರಗಳನ್ನೂ ಕೇಳಿಸಿಕೊಂಡಿರುತ್ತೀರಿ.

ಆದರೆ ಸಾಮಾನ್ಯ ಕನ್ನಡಿಗನೊಬ್ಬನ ಜೀವನದ ಚಿತ್ರಣವನ್ನು ನಿಮಗೆ ಯಾರೂ ನೀಡಿರಲಿಕ್ಕಿಲ್ಲ. ಅವನ ಕುಟುಂಬದ ಆದಾಯ, ಆಸ್ತಿ, ಖರ್ಚುವೆಚ್ಚ, ವೃತ್ತಿ-ಶಿಕ್ಷಣ, ಹೂಡಿಕೆ-ಉಳಿತಾಯ, ಸಾಲ-ಬಡ್ಡಿ ಮತ್ತಿತರ ವಿವರಗಳನ್ನು ಯಾರೂ ಗಮನಿಸಿರಲಿಕ್ಕಿಲ್ಲ. ಈ ಕುಟುಂಬದ ಸದಸ್ಯರ ಅಗತ್ಯಗಳು, ಅಪೇಕ್ಷೆಗಳು ಹಾಗೂ ಆಶಯಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಕ್ಕಿಲ್ಲ. ಈ ಸಾಮಾನ್ಯರ ಬವಣೆಗಳನ್ನು ಪರಿಹರಿಸುವ ಮತ್ತು ಆಶಯಗಳನ್ನು ಪೂರೈಸಲು ಪೂರಕ ಸೌಲಭ್ಯ ನೀಡುವ ಜವಾಬ್ದಾರಿಯುಳ್ಳ ಅಧಿಕಾರಿ-ಮಂತ್ರಿ ವಲಯವೂ ಇವರನ್ನು ಅರಿಯುವ ಕಾಳಜಿ ತೋರಿರಲಿಕ್ಕಿಲ್ಲ. ಕೇವಲ ಸಮಷ್ಠಿ ಅಂಕಿ-ಅಂಶಗಳನ್ನು ಪಟ್ಟಿಮಾಡಿ ಬಡತನದ ರೇಖೆಯ ಕೆಳಗಿನ ಮಂದಿಯನ್ನು ಗುರುತಿಸಲಷ್ಟಕ್ಕೆ ಮಾತ್ರ ಸೀಮಿತವಾದ ಅಧ್ಯಯನದಿಂದ ಈ ಸಾಮಾನ್ಯರ ಕುಟುಂಬ ಕೇಂದ್ರಿತ ಸಮಸ್ಯೆಗಳು ಹಾಗೂ ಗೊತ್ತುಗುರಿಗಳು ಗಣನೆಗೆ ಸಿಕ್ಕಿರಲಿಕ್ಕಿಲ್ಲ.

ಈ ಉದ್ದೇಶದಿಂದ ಇಲ್ಲಿನ ಸಂಚಿಕೆಯಲ್ಲಿ ‘ಸಾಮಾನ್ಯ ಕನ್ನಡಿಗನ ಅಸಾಮಾನ್ಯ ಚಿತ್ರಣ’ದ ಮಾಲಿಕೆಯಲ್ಲಿ 10 ಸಾಮಾನ್ಯ ಕನ್ನಡಿಗರ ಜೀವನ ಚಿತ್ರಣವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಚಿತ್ರಣಕ್ಕೆ ಚೌಕಟ್ಟು ನೀಡಲೋಸುಗ ಕಳೆದ ಸಂಚಿಕೆಯಲ್ಲಿ ನಮೂನೆಯೊಂದನ್ನು ನಾವು ನೀಡಿದ್ದೆವು. ಈ ಮಾದರಿಯಲ್ಲಿ ಸಮಾಜಮುಖಿ ಬರಹಗಾರರು ಬದುಕಿನ ಹಲವು ಸ್ತರಗಳ ಜನರ ಚಿತ್ರಣವನ್ನು ನಿಮ್ಮ ಮುಂದೆ ಇಟ್ಟಿದ್ದಾರೆ. ಮುಂದಿನ ಸಂಚಿಕೆಗಳಲ್ಲಿ ಕೂಡಾ ಈ ‘ಅಸಾಮಾನ್ಯ ಚಿತ್ರಣ’ ಮುಂದುವರಿಯಲಿದೆ.

Leave a Reply

Your email address will not be published.