ಪ್ರಸನ್ನ ಅವರ ‘ದೇಸಿ’ ಆಟಗಳು!

-ಕೆ.ಪಿ.ಸುರೇಶ

ರಂಗಕರ್ಮಿ ಪ್ರಸನ್ನ, ಚಿಂತಕ ಪ್ರಸನ್ನ, ಆಕ್ಟಿವಿಸ್ಟ್ ಪ್ರಸನ್ನ ನಮಗೆಲ್ಲಾ ಗೊತ್ತು; ಈ ಮುಖವಾಡಗಳ ಹಿಂದೆ ಇರುವ ‘ದೇಸಿ’ಯ ನಿರ್ವಾಹಕ ಟ್ರಸ್ಟಿ ಪ್ರಸನ್ನ ಹೀಗಿದ್ದಾರೆ ನೋಡಿ!

ಇದೆಲ್ಲಾ ಶುರುವಾಗಿದ್ದು ಕೆಲವು ತಿಂಗಳುಗಳ ಹಿಂದೆ ಪ್ರಸನ್ನ ಅವರು ಚರಕಾ ದಿವಾಳಿಯಾಗಿದೆ ಎಂಬ ಆಘಾತಕಾರಿ ಹೇಳಿಕೆ ನೀಡಿದ ಬಳಿಕ. ಕೆಲವು ವರ್ಷಗಳ ಹಿಂದೆ ಚರಕಾಕ್ಕೆ ಒಂದು ಪ್ರಸ್ತಾವನೆ ತಯಾರು ಮಾಡುವ ಸಂದರ್ಭದಲ್ಲಿ ಚರಕಾ ಏಕೆ ನಲುಗುತ್ತಿದೆ ಎಂಬ ಅಂಶಗಳನ್ನು ತಜ್ಞನಾಗಿ ಗುರುತು ಹಾಕಿಕೊಂಡಿದ್ದೆ. ಆ ಅಂಶಗಳನ್ನು ನೆನಪಿಸಿಕೊಂಡು ನಾನು ಕೆಲವು ಪ್ರಶ್ನೆಗಳನ್ನು ಹಾಕಿದೆ. ಅದಕ್ಕೆ ಇಂದಿನವರೆಗೂ ಪ್ರಸನ್ನ ಉತ್ತರಿಸಿಲ್ಲ! ಸ್ಥೂಲವಾಗಿ ನನ್ನ ಪ್ರಶ್ನೆಗಳು ದೇಸಿ ಮತ್ತು ಚರಕಾದ ಅಂತರ್ ಸಂಬAಧದ ಬಗ್ಗೆ ಇದ್ದವು. ದೇಸಿ ಚರಕಾವನ್ನು ವ್ಯವಸ್ಥಿತವಾಗಿ ನಿಯಂತ್ರಿಸುವ ವಿವರಗಳನ್ನೂ ನಾನು ಪ್ರಸ್ತಾಪಿಸಿದ್ದೆ. ಅವುಗಳಲ್ಲಿ ಮುಖ್ಯವಾಗಿರುವುದು:

  1. ಚರಕಾ ದೇಸಿಗಷ್ಟೇ ಮಾರಬೇಕು. ದೇಸಿ ಉಳಿದ ಉತ್ಪನ್ನಗಳನ್ನು ಮಾರಬಹುದು.
  2. ಚರಕಾದ ಉತ್ಪನ್ನಗಳಿಗೆ ತನ್ನದೇ ಬ್ರಾಂಡ್ ಮಾಡಿ ಗರಿಷ್ಠ ಬೆಲೆ ನಿಗದಿ ಮಾಡುವುದು ದೇಸಿ!
  3. ಚರಕಾದ ಹೆಸರಿಗೆ ಬರುವ ಯೋಜನೆಗಳನ್ನು ಅನುಷ್ಠಾನ ಮಾಡುವ ಏಜೆನ್ಸಿ ದೇಸಿಯೇ ಹೊರತು ಸ್ವತಃ ಚರಕಾ ಅಲ್ಲ.

ಇದನ್ನು ಗಮನಿಸಿದ ಮೇಲೆ ಸಹಜವಾಗಿಯೇ ದೇಸಿಯ ಸ್ವರೂಪ ಏನು ಎಂಬುದನ್ನು ಗಮನಿಸಬೇಕಾಗಿ ಬಂತು. ದೇಸಿ ನಾನ್‌ಚಾರಿಟೇಬಲ್ ಟ್ರಸ್ಟ್. ಅಂದರೆ ಇದು ವ್ಯಾಪಾರ-ವ್ಯವಹಾರ ನಡೆಸಬಹುದು. ದೇಸಿಯ ಸಂಸ್ಥಾಪಕ ಧರ್ಮದರ್ಶಿ ಬಿಟ್ಟು ಉಳಿದವರೆಲ್ಲಾ ಗೌರವ ಧರ್ಮದರ್ಶಿಗಳು! ಪ್ರಸನ್ನ ಅವರಲ್ಲಿ ಈ ಒಳವಿವರಗಳನ್ನು ಕೇಳಿದರೆ ಬಾಯಿ ಬಡಿದುಕೊಳ್ಳುತ್ತಾರೆಯೇ ವಿನಾ ನೇರ ಮಾಹಿತಿ ಕೊಡುವುದಿಲ್ಲ.

* ನಾನೊಬ್ಬ ಗ್ರಾಮೀಣ ಜೀವನೋಪಾಯಗಳ ಸಂಪನ್ಮೂಲ ವ್ಯಕ್ತಿಯಾಗಿ ಭಾರತ ಸರಕಾರದ ಗ್ರಾಮೀಣ ಜೀವನೋಪಾಯ ಸಂವರ್ಧನಾ ಮಿಶನ್‌ಗೆ ಕೈಮಗ್ಗದ ಪೈಲೆಟ್ ಯೋಜನೆಯನ್ನು ಮಾಡಲು ಚರಕಾದ ಅಧ್ಯಯನ ಮಾಡಿದಾಗ ನನ್ನೊಂದಿಗೆ ಕೇಂದ್ರ ಸರಕಾರದ ತಜ್ಞರೊಬ್ಬರಿದ್ದರು. ಯಾವುದೇ ಸಮುದಾಯ ಔದ್ಯಮಿಕ ಯೋಜನೆಯಲ್ಲಿ ಆಯಾ ಸಮುದಾಯ ಸಂಸ್ಥೆಗಳೇ ತಮ್ಮ ಉತ್ಪನ್ನವನ್ನು ಮಾರಾಟ ಮಾಡಬೇಕು. ಆದರೆ ಪ್ರಸನ್ನ ಅವರು ‘ಚರಕಾ ಉತ್ಪಾದನೆ ಮಾತ್ರ ಮಾಡುತ್ತೆ. ಮಾರ್ಕೆಟಿಂಗ್ ದೇಸಿಯೇ ಮಾಡುತ್ತೆ’ ಎಂದಾಗ ಆ ತಜ್ಞರು ‘ಕೆಎಂಎಫ್ ತನ್ನ ಉತ್ಪನ್ನಗಳನ್ನು ತಾನೇ ಮಾರುತ್ತದಲ್ಲವೇ?’ ಎಂದು ಮಾರ್ಮಿಕವಾಗಿ ಕೇಳಿದ್ದರು. ಇದಾಗಿದ್ದೇ ಪ್ರಸನ್ನ ಆ ಯೋಜನೆಯನ್ನೇ ಕೈ ಬಿಟ್ಟರು.

* ಚರಕಾದ ಆರಂಭದ ವರ್ಷಗಳಲ್ಲಿ ತಮ್ಮದೇ ಏಕ ವ್ಯಕ್ತಿ ಟ್ರಸ್ಟ್ ಆದ ಕವಿ-ಕಾವ್ಯ ಟ್ರಸ್ಟ್ ಮೂಲಕ ಚರಕಾದ ಉತ್ಪನ್ನವನ್ನು ಖರೀದಿಸಿ ಬಳಿಕ ಕವಿ-ಕಾವ್ಯ ಟ್ರಸ್ಟ್, ದೇಸಿಗೆ ಮಾರುವ ವ್ಯಾವಹಾರಿಕ ವ್ಯವಸ್ಥೆ ಮಾಡಿದ್ದರು! ದೇಸಿ ಚರಕಾದ ಮಾರುಕಟ್ಟೆ ವಿಸ್ತರಣೆ ಎಂದು ಪ್ರಸನ್ನ ಪುಂಗಿ ಊದುತ್ತಾರೆ. ಆದರೆ ಕಾನೂನಾತ್ಮಕವಾಗಿ ಇದನ್ನು ಸಮರ್ಥಿಸುವ ಒಂದೇ ಒಂದು ದಾಖಲೆ ಇಲ್ಲ. ದೇಸಿಯಲ್ಲಿ ಚರಕಾದ ಪ್ರತಿನಿಧಿ ಧರ್ಮದರ್ಶಿಗಳಾಗಿದ್ದಾರೆ ಎಂದು ಪ್ರಸನ್ನ ಹೇಳುತ್ತಾರೆ. ಈ ರೀತಿಯ ಸಾಂಸ್ಥಿಕ ನಿಯಂತ್ರಣವಿರಬೇಕಿದ್ದರೆ ಆ ಸಂಸ್ಥೆಯ ಪ್ರತಿನಿಧಿಗಳು ಬಹುಸಂಖ್ಯೆಯಲ್ಲಿರಬೇಕು. ಆದರೆ ದೇಸಿಯಲ್ಲಿ ಚರಕಾದ ಪ್ರತಿನಿಧಿಗಳ ಸಂಖ್ಯೆ ಕೇವಲ 4. ಅಂದರೆ ಮೈನಾರಿಟಿ ಪ್ರಾತಿನಿಧ್ಯ. ಉಳಿದವರೆಲ್ಲಾ ಪ್ರಸನ್ನ ಅವರ ಮರ್ಜಿಯಲ್ಲಿ ಸ್ಥಾನ ಗಳಿಸಿರುವ ಧರ್ಮದರ್ಶಿಗಳು.

ಈ ಪ್ರಶ್ನೆಗಳನ್ನು ಎತ್ತಿದ್ದೇ ಪ್ರಸನ್ನ ಉಚಾವಣೆಯ ಉತ್ತರ ಕೊಟ್ಟರೇ ವಿನಾ ನೇರ ವಿವರಗಳನ್ನು ಕೊಡಲೇ ಇಲ್ಲ! ಈ ಹಿನ್ನೆಲೆಯಲ್ಲಿ ನಾನು ಚರಕಾ ಮತ್ತು ದೇಸಿ ಸಂಸ್ಥೆಗಳಿಗೆ ಮಾಹಿತಿ ಹಕ್ಕಿನಲ್ಲಿ ಕೆಲವು ವಿವರ ಕೇಳಿ ಅರ್ಜಿ ಹಾಕಿದೆ. ಇಂದಿನವರೆಗೂ ಈ ಎರಡೂ ಸಂಸ್ಥೆಗಳು ನನಗೆ ಮಾಹಿತಿ ಕೊಟ್ಟಿಲ್ಲ. ದೇಸಿಯ ನಿರ್ವಾಹಕ ಧರ್ಮದರ್ಶಿ ಈ ಕುರಿತು ‘ಪ್ರಸನ್ನ ಅವರಲ್ಲಿ ಮಾತಾಡಿ ಸಾರ್’ ಎಂದು ಮೆಸೇಜ್ ಹಾಕಿದ್ದ! ಪಾರದರ್ಶಕತೆಯ ಆಧುನಿಕ ಗಾಂಧಿ ನಡೆ ಎಂದರೆ ಇದುವೇ ಇರಬೇಕು!

ಕರ್ನಾಟಕದ ಬಹುತೇಕ ಪ್ರಗತಿಪರರು, ಕಲಾವಿದರು, ಸಾಹಿತಿಗಳು, ರಂಗಕರ್ಮಿಗಳು ದೇಸಿ-ಚರಕಾದ ಬಗ್ಗೆ ಇನ್ನಿಲ್ಲದ ಮೆಚ್ಚುಗೆ ಹೊಂದಿದ್ದಾರೆ. ಇವರಲ್ಲಿ ನಾನು, ಚರಕಾದ ಕುರಿತ ನಿಮ್ಮ ಮಾಹಿತಿ ಮೂಲ ಯಾವುದು ಎಂದು ಕೇಳಿದೆ. ಅದುರಿ ಬಿದ್ದ ಅವರು ತಿಣುಕಾಡಿ ಕೊನೆಗೆ ‘ಪ್ರಸನ್ನ’ ಎಂದರು. ಚರಕಾದ ಉತ್ಪಾದನಾ ವ್ಯವಸ್ಥೆ, ಮಾರುಕಟ್ಟೆ ಸಂಬAಧಗಳ ಬಗ್ಗೆ ಒಬ್ಬನೇ ಒಬ್ಬ ವಿಚಾರಿಸಿರಲಿಲ್ಲ. ಆದ್ದರಿಂದಲೇ ಪ್ರಸನ್ನ ಅವರ ಈ ಆಳ ಹುನ್ನಾರದ ಬಗ್ಗೆ ಅವರಿಗೆ ಗೊತ್ತೂ ಇಲ್ಲ.

ರಂಗಕರ್ಮಿ ಪ್ರಸನ್ನ, ಚಿಂತಕ ಪ್ರಸನ್ನ, ಆಕ್ಟಿವಿಸ್ಟ್ ಪ್ರಸನ್ನ ಬೇರೆ. ಈ ಮುಖವಾಡಗಳ ಹಿಂದೆ ಇರುವ ದೇಸಿಯ ನಿರ್ವಾಹಕ ಟ್ರಸ್ಟಿ ಪ್ರಸನ್ನ ಬೇರೆ. ಪ್ರಸನ್ನ ಅವರ ಅಖಿಲ ಭಾರತ ಇಮೇಜ್ ನಿಂತಿರುವುದೇ ಚರಕಾವನ್ನು ಅವರು ಸ್ಥಾಪಿಸಿದರು ಎಂಬ ಕಾರಣಕ್ಕೆ. ಆದ್ದರಿಂದಲೇ ಚರಕಾವನ್ನು ಬಿಟ್ಟುಕೊಡಲು ಸುತಾರಾಂ ಅವರು ತಯಾರಿಲ್ಲ. ಇಂದಲ್ಲ ನಾಳೆ ಚರಕಾದ ಮಹಿಳೆಯರು ಸ್ವಾಯತ್ತವಾದರೆ ಪ್ರಸನ್ನ ಅವರು ಬೇರೆ ದಾರಿ ಹುಡುಕಬೇಕು! ಅದಕ್ಕೇ ದೇಸಿ ಮೂಲಕ ಅವರನ್ನು ಶಾಶ್ವತ ನಿಯಂತ್ರಿಸುವ ವಸಾಹತುಶಾಹಿ ಚೌಕಟ್ಟಿನಲ್ಲಿ ದೇಸಿ ಚರಕಾವನ್ನು ನಿಯಂತ್ರಿಸುತ್ತಿದೆ. ಉದಾ: ಚರಕಾ ಕುರಿತಂತೆ ವಿವಿಧ ಯೋಜನೆಗಳನ್ನು ಪ್ರಸನ್ನ ಹುಡುಕಿ ತರುತ್ತಾರೆ. ಅವೆಲ್ಲವನ್ನೂ ಅನುಷ್ಠಾನಗೊಳಿಸುವುದು ದೇಸಿ. ಶಾಶ್ವತವಾಗಿ ಒಂದು ಸಂಸ್ಥೆಯ ಯೋಜನೆಗಳ ಅನುಷ್ಠಾನದ ಹಕ್ಕು ಇನ್ನೊಂದು ಸಂಸ್ಥೆ ಹೊಂದಿರುವುದನ್ನು ನಾನು ಕೇಳಿಯೇ ಇಲ್ಲ!

* ಪ್ರಸನ್ನ ಅವರು ಚರಕಾದ ಬಗ್ಗೆ ಇನ್ನಿಲ್ಲದ ಪ್ರೇಮ ಪ್ರದರ್ಶನ ಮಾಡುತ್ತಾರೆ. ಆದರೆ ತಣ್ಣಗೆ ದೇಸಿಯ ಆಸ್ತಿ ವರ್ಧನೆ ಮಾಡುತ್ತಿರುತ್ತಾರೆ. ಬೆಂಗಳೂರಿನ ದೇಸಿ; ಅದೂ ಕೇವಲ ಮಾರುಕಟ್ಟೆ ಏಜೆನ್ಸಿ, ಹಂತಹAತದಲ್ಲಿ ಹೆಗ್ಗೋಡಿನಲ್ಲಿ ಸ್ಥಿರ ಆಸ್ತಿ ಹೊಂದುತ್ತದೆ. ಈ ರೀತಿ ಸುಮಾರು 8.5 ಎಕರೆ ಆಸ್ತಿ ಮಾಡಿಕೊಂಡು ಅದನ್ನು ಪ್ರಸನ್ನ ಅವರು ಕೈಗಾರಿಕಾ ಉದ್ದೇಶಕ್ಕೆ ಭೂಪರಿವರ್ತನೆ ಮಾಡಿಸಿಕೊಳ್ಳುತ್ತಾರೆ. ಇದಕ್ಕೆ ದೇಸಿ ರೂ.25 ಲಕ್ಷದಷ್ಟು ವೆಚ್ಚ ಮಾಡುತ್ತದೆ. ಈ ಹಣ ನೈತಿಕವಾಗಿ ಚರಕಾಕ್ಕೆ ಸಲ್ಲಬೇಕಲ್ಲವೇ? ಚರಕಾದ ಬಗ್ಗೆ ಪ್ರೇಮವಿದ್ದರೆ ಚರಕಾಕ್ಕೆ ಯಾಕೆ ಸ್ಥಿರಾಸ್ತಿ ಮಾಡಿಲ್ಲ? ಚರಕಾದಿಂದ ಉತ್ಪಾದನಾ ವೆಚ್ಚಕ್ಕೆ ಮಾಲುಗಳನ್ನು ಕೊಂಡು ದೇಸಿ ತನ್ನದೇ ಬ್ರಾಂಡಿನಲ್ಲಿ ಬೆಲೆ ನಿಗದಿ ಮಾಡಿ ಮಾರುತ್ತದೆ. ದೇಸಿಯ ಖರ್ಚು ಕಳೆದು ಉಳಿದ ಹಣದಲ್ಲಿ ಚರಕಾದ ನೇಕಾರರಿಗೆ ಬೋನಸ್ ನೀಡುತ್ತದೆ. ನೆನಪಿಡಿ: ಇದು ಚರಕಾದ ಹಕ್ಕಿನ ಬೋನಸ್ ಅಲ್ಲ. ದೇಸಿ ಉದಾರವಾಗಿ ನೀಡುವ ಕೊಡುಗೆ. ದೇಸಿಯ ಖರ್ಚು-ವೆಚ್ಚದಲ್ಲಿ ಪ್ರಸನ್ನ ಅವರ ಪ್ರಯಾಣ ವೆಚ್ಚವೂ ಸೇರಿರುತ್ತದೆ. ಉತ್ಪಾದನಾ ವೆಚ್ಚಕ್ಕೇ ದೇಸಿಗೆ ಮಾರಬೇಕಾದ ವಸಾಹತುಶಾಹಿ ಒಪ್ಪಂದದ ಕಾರಣಕ್ಕೇ ಐದಾರು ಕೋಟಿ ವ್ಯವಹಾರ ತೋರಿಸುವ ಚರಕಾದ ನಿವ್ವಳ ಲಾಭ ಒಂದು ಲಕ್ಷ ಚಿಲ್ಲರೆ! ಗೂಡಂಗಡಿಯವರೂ ಇದಕ್ಕಿಂತ ಜಾಸ್ತಿ ಲಾಭ ಮಾಡುತ್ತಾರೆ.

* ಚರಕಾ ವಿವಿಧೋದ್ದೇಶ ಕೈಗಾರಿಕಾ ಸಹಕಾರಿ. ಸಾಮಾನ್ಯವಾಗಿ ಈ ರೀತಿಯ ಸಮುದಾಯ ಸಂಸ್ಥೆಗಳನ್ನು ಸ್ಥಾಪಿಸುವಾಗ ಅದರ ಸದಸ್ಯರ ಸ್ವಭಾವ ಸಹಜ ಕೌಶಲ್ಯಕ್ಕನುಗುಣವಾದ ಉತ್ಪನ್ನಗಳ ರೇಂಜ್ ಇರಬೇಕು. ಉದಾ: ಧರ್ಮಸ್ಥಳದ ಸಿರಿ ಬ್ರಾಂಡಿನಲ್ಲಿ ವೈವಿಧ್ಯಮಯ ಉತ್ಪನ್ನಗಳಿವೆ. ಚರಕಾದಲ್ಲಿ ಅದು ಸಂಪೂರ್ಣ ಮಾಯ! ಪ್ರಸನ್ನ ಅವರಿಗೆ ಕೈಮಗ್ಗದ ಒಬ್ಸೆಶನ್ ಇತ್ತು. ಅದಕ್ಕೇ ಚರಕಾದಲ್ಲಿ ಕೈಮಗ್ಗ ಉತ್ಪಾದನೆ ಮಾತ್ರ ಇರುವಂತೆ ನಿಯಂತ್ರಿಸಿದರು. ಅಸಾಂಪ್ರದಾಯಿಕ ಪ್ರದೇಶವಾದ ಹೆಗ್ಗೋಡಿನಲ್ಲಿ ಕೈಮಗ್ಗ ಶುರುವಾದಾಗ ನನ್ನಂಥವರೂ ಅಚ್ಚರಿಯಲ್ಲಿ ಅದನ್ನು ನೋಡಿ ಮೆಚ್ಚಿದ್ದೆವು. ಆದರೆ ಅಲ್ಲಿನ ಮಹಿಳೆಯರಿಗೆ ಬೇರೆ ಕೌಶಲ್ಯವಿತ್ತೇ? ಗೊತ್ತಿಲ್ಲ. ಅರ್ಥಾತ್ ಪ್ರಸನ್ನ ಅವರು ಚರಕಾದ ಮಹಿಳೆಯರನ್ನು ಗಾರ್ಮೆಂಟ್ ಫ್ಯಾಕ್ಟರಿ ತರ ಬಳಸಿಕೊಂಡದ್ದು ಬಿಟ್ಟರೆ ಬೇರೇನೂ ಸಾಧನೆ ಆಗಲಿಲ್ಲ.

* ಆ ಮಹಿಳೆಯರು ಅನಕ್ಷರಸ್ತರು, ಅವರಿಗೆ ಮಾರ್ಕೆಟಿಂಗ್ ಬರುವುದಿಲ್ಲ ಎಂದು ಪ್ರಸನ್ನ ಶಹನಾಯ್ ದನಿಯಲ್ಲಿ ಅಲವತ್ತುಕೊಳ್ಳುತ್ತಾರೆ. ಇಂತಹ ಸಂಸ್ಥೆಗಳ ಬೆಳವಣಿಗೆಗೆ ಮೊದಲ ಮರ‍್ನಾಲ್ಕು ವರ್ಷ ಯಾರಾದರೂ ಕೈಹಿಡಿದು ಸಂಸ್ಥೆಯ ಸದಸ್ಯರ ಸಾಮರ್ಥ್ಯ ವೃದ್ಧಿ ಮಾಡಬೇಕು. ಅಗತ್ಯ ಬಿದ್ದರೆ ವೃತ್ತಿಪರರನ್ನು ನೇಮಿಸಬೇಕು. ಆ ವೃತ್ತಿಪರರ ಮೂಲಕ ಮಾರ್ಕೆಟ್ ಮಾಡಬೇಕು. ಕೆಎಂಎಫ್‌ನ ಮೂಲ ಸದಸ್ಯರಾದ ಗ್ರಾಮಾಂತರದ ಮಹಿಳೆಯರು, ರೈತರು ಮಾಡಿದ್ದು ಇದನ್ನೇ. ಅವರೇ ಮಾರ್ಕೆಟ್ ಮಾಡುವುದಿಲ್ಲ. ಆದರೆ ಈ ವೃತ್ತಿಪರರು ಸಂಸ್ಥೆಯ ನಿಯಂತ್ರಣದಲ್ಲಿರುವ ಉದ್ಯೋಗಿಗಳು. ಪ್ರಸನ್ನ ಈ ಕೆಲಸವನ್ನು ಇಪ್ಪತ್ತೈದು ವರ್ಷಗಳಿಂದಲೂ ಮಾಡಿಲ್ಲ ಎಂದರೆ ಏನರ್ಥ?

ಈ ತಾತ್ವಿಕ ಪ್ರಶ್ನೆಗಳನ್ನು ನಾನು ಎತ್ತಿದಾಗಲೂ ಪ್ರಸನ್ನ ಅವರು ಇತರ ಭಾನಗಡಿಗಳಲ್ಲಿ ನಿರತರಾಗಿದ್ದಾರೆಂಬ ಊಹೆ ನನಗೆ ಇರಲಿಲ್ಲ. ಆದರೆ ಶಿವಮೊಗ್ಗೆಯ ಪತ್ರಕರ್ತರೊಬ್ಬರು ದಾಖಲೆ ಸಮೇತ ಅನಾವರಣಗೊಳಿಸಿದ ಪ್ರಕರಣ ಆಘಾತಕಾರಿ. ಇದರ ಕ್ರೊನಾಲಜಿಯೇ ಕುತೂಹಲಕಾರಿ.

  • ಮೊದಲು ಪ್ರಸನ್ನ ಕೈಗಾರಿಕಾ ಉದ್ದೇಶಕ್ಕೆ ಜಮೀನು ಕೊಳ್ಳಲು ಜಿಲ್ಲಾಧಿಕಾರಿಗಳ ಅನುಮತಿ ಪಡೆಯುತ್ತಾರೆ.
  • ಅದೇ ಆಧಾರದ ಮೇಲೆ ಜಮೀನು ಕೊಳ್ಳುತ್ತಾರೆ.
  • ಇದಾದ ಒಂದೆರಡು ತಿಂಗಳಿಗೆ ನೇಕಾರರ ವಸತಿ ಯೋಜನೆ ಬರುತ್ತದೆ. ನೇಕಾರರು ಶರತ್ತು ರಹಿತ ನೋಂದಾಯಿತ ನಿವೇಶನ ಹೊಂದಿರಬೇಕು ಎಂಬುದು ಇಲಾಖೆಯ ಶರತ್ತು.
  • ಪ್ರಸನ್ನ ದೇಸಿಯ ಒಡೆತನದ ಕೃಷಿ ಜಮೀನನ್ನು 20*30 ನಿವೇಶನಗಳನ್ನಾಗಿ ಮಾಡಿ ಈ ನೇಕಾರರಿಗೆ ಸ್ವಾಧೀನ ಪತ್ರ ಎಂಬ ಯಾವ ಕಾನೂನು ಮಾನ್ಯತೆಯೂ ಇಲ್ಲದ ದಾಖಲೆ ನೀಡುತ್ತಾರೆ. ಅದರಲ್ಲಿ “ನೇಕಾರಿಕೆ ಉದ್ದಿಶ್ಯಕ್ಕೆ ಬಳಸದಿದ್ದರೆ ಈ ನಿವೇಶನ ಚರಕಾ ಸಂಸ್ಥೆಗೆ ಸೇರುತ್ತೆ” ಎಂಬ ಶರತ್ತು ಹಾಕುತ್ತಾರೆ. ದೇಸಿ ಜಮೀನು; ಸ್ವಾಧೀನ ಪತ್ರ ಆಧರಿಸಿ ಚರಕಾಕ್ಕೆ ಸೇರುವುದು ಹೇಗೆ ಎಂಬ ಪ್ರಶ್ನೆ ಬೆಪ್ಪನಿಗೂ ಕಾಡಬಹುದು.
  • ಈ ವಸತಿ ಯೋಜನೆಯ ಮನೆ/ ನಿವೇಶನಗಳನ್ನು ಹತ್ತು ವರ್ಷ ಕಾಲ ಪರಭಾರೆ ಮಾಡಬಾರದು ಎಂಬ ಸರಕಾರಿ ಶರತ್ತು ಇದೆ. ಆದರೆ ಮನೆಗಳಿವೆ ಎಂದು ದಾಖಲೆಗಳಲ್ಲಿರುವ ಇದೇ ಜಮೀನನ್ನು ಪ್ರಸನ್ನ ಅವರು ದೇಸಿಗೆ 2019ರಲ್ಲಿ ಭೂಪರಿವರ್ತನೆ ಮಾಡಿಸಿಕೊಳ್ಳುತ್ತಾರೆ! ಒಂದೋ ಇದು ನೇಕಾರರಿಗೆ ಬಗೆದ ದ್ರೋಹ. ಇಲ್ಲಾ ಸರಕಾರಕ್ಕೆ ಏಲಿಯನೇಶನ್ ಮಾಡಿಸುವಾಗ ಕೊಟ್ಟ ದಾಖಲೆ ನಕಲಿ!

ರಿಯಲ್ ಎಸ್ಟೇಟ್ ಖದೀಮರೂ ಬೆರಗಾಗಬಹುದಾದ ಯಾಮಾರಿಸುವ ಆಟ ಇದು. ಹೋಗಲಿ, ಈ ಮನೆಗಳಿವೆಯಾ ಎಂದರೆ ಅವು ಅಸ್ತಿತ್ವದಲ್ಲೇ ಇಲ್ಲ!

ಪ್ರಸನ್ನ ಅವರ ತಾತ್ವಿಕ ಚಿಂತನೆಯ ಚೌಕಟ್ಟೂ ಎಷ್ಟು ಅನುಕೂಲಸಿಂಧು ಎಂಬ ಬಗ್ಗೆ ಪ್ರತ್ಯೇಕವಾಗಿ ಬರೆಯಬೇಕು. ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ಪವಿತ್ರ ಆರ್ಥಿಕತೆ ಎಂಬ ನುಡಿಗಟ್ಟು ಚಾಲ್ತಿಗೆ ತಂದರು. ಅದರ ಮುಂದುವರಿದ ಭಾಗವಾಗಿ ಮಠಗಳಿಗೆ ಬಟ್ಟೆ ಸರಬರಾಜು ಮಾಡುವ ಪವಿತ್ರ ವಸ್ತç ಎಂಬ ಯೋಜನೆಗೆ ಅನುದಾನ ಕೇಳಿದರು.

ಈಗಿರುವಂತೆ ದೇಸಿ ಅನುಷ್ಠಾನ ಮಾಡುತ್ತಿರುವ ವಿವಿಧ ಯೋಜನೆಗಳ ಮೊತ್ತ ಹಲವಾರು ಕೋಟಿ ಇದೆ! ಚರಕಾದ ಹೆಸರು, ಅನುಷ್ಠಾನ ದೇಸಿಯದ್ದು. ದೇಸಿಯ ಸಕಲ ದಾಖಲೆಗಳನ್ನು ಪ್ರಸನ್ನ ಪಾರದರ್ಶಕವಾಗಿ ಸಾರ್ವಜನಿಕಗೊಳಿಸಿದರೆ ಇಂಥ ಹತ್ತು ಹಲವು ಹುಳುಕುಗಳು ಎದ್ದೆದ್ದು ಬರುವುದು ಖಂಡಿತ.

ಸಮಸ್ಯೆ ನಮ್ಮ ಕಾಲದ್ದು. ಇಮೇಜ್ ವೃದ್ಧಿಸಿಕೊಂಡಿರುವ ಕಾಲಪುರುಷರನ್ನು ನಿಕಷಕ್ಕೊಡ್ಡಲು ಸುತಾರಾಂ ಒಪ್ಪದ ಹುಳ್ಳ ಮನಸ್ಸು ನಮ್ಮದು. ಆದರೆ ಈ ಹುಳ್ಳತನವೇ ಒಂದು ಮೌಲ್ಯ, ಆದರ್ಶ ಕಿಲುಬುಗಟ್ಟಲು ಸಾಕು. ಪ್ರಸನ್ನ ನಮ್ಮ ಕಾಲದ ಆತ್ಮವಂಚನೆಯ ರೂಪಕ. ಅವರ ಬಗ್ಗೆ ಬರೆಯುವುದೆಂದರೆ ನಮ್ಮ ಸಾಂಸ್ಕೃತಿಕ ಲೋಕದ ಲೆಕ್ಕಾಚಾರದ ಮೌನದ ಬಗ್ಗೆ ಬರೆಯುವ ಟಿಪ್ಪಣಿ ಕೂಡಾ!

Leave a Reply

Your email address will not be published.