ಪ್ರಾಚೀನ ಕನ್ನಡ ವೈದ್ಯಗ್ರಂಥಗಳು ಪ್ರಸ್ತಾಪಿಸದ ಸಾಂಕ್ರಾಮಿಕ ರೋಗಗಳು

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವೈದ್ಯಗ್ರಂಥಗಳೂ, ಜೋತಿಷ್ಯ ಗ್ರಂಥಗಳೂ ಅಪಾರ ಸಂಖ್ಯೆಯಲ್ಲಿವೆ. ಆದರೆ ಸಮುದಾಯಗಳನ್ನೇ ನಾಶ ಮಾಡುತ್ತಿದ್ದ ಸಾಂಕ್ರಾಮಿಕ ರೋಗಗಳ ಪ್ರಸ್ತಾಪ ಇವುಗಳಲ್ಲಿರುವುದಿಲ್ಲ.

ಪ್ರಾಚೀನ ಕನ್ನಡ ಕೃತಿಗಳಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಹೆಚ್ಚು ಪ್ರಸ್ತಾಪವಿರುವುದಿಲ್ಲ. ಆದರೆ ಹೆಚ್ಚು ಸಾಂಕ್ರಾಮಿಕವಲ್ಲದ ಕುಷ್ಠ ಹಾಗೂ ತೊನ್ನು ರೋಗಗಳ ವಿವರಗಳಿವೆ. ಕನ್ನಡದ ಆದಿ ಗದ್ಯ ಗ್ರಂಥ ವಡ್ಡಾರಾಧನೆಯ ‘ವಿದ್ಯುಚ್ಚೋರನೆಂಬ ರಿಸಿಯ ಕಥೆ’ಯಲ್ಲಿ ತೊನ್ನು ರೋಗವುಳ್ಳ ಪಾತ್ರ ಸಂಗತಿಯ ಕಥನವಿದೆ. ಆದರೆ ಶಿವಕೋಟ್ಯಾಚಾರ‍್ಯನು ಆ ತೊನ್ನು ರೋಗದ ವಿದ್ಯುತ್‌ಚೋರ ಕಳ್ಳನ ವಿವರ ಕೊಡುವ ಕ್ರಮ ನೋಡಿದರೆ ಅದು ಕುಷ್ಠರೋಗದ ವಿವರದಂತಿದೆ. ಇದೇನೇ ಇರಲಿ ಕನ್ನಡದ ಪ್ರಾಚೀನ ಕವಿಗಳು ಯಾಕೆ ತಮ್ಮ ಕೃತಿಗಳಲ್ಲಿ ಅತಿ ಸಾಂಕ್ರಾಮಿಕವೆನಿಸುವ ಪ್ಲೇಗು, ಕಾಲರಾ ರೋಗಗಳನ್ನು ಪ್ರಸ್ತಾಪಕ್ಕೆ ತರುವುದಿಲ್ಲವೆಂದರೆ ಅವಕ್ಕೆ ಪಾಪಕರ್ಮ ಮತ್ತು ಧರ್ಮ ಸಂಬಂಧಿ ನಂಬಿಕೆಗಳನ್ನು ಲಗತ್ತಿಸಿ ಕಥೆ ಕಟ್ಟಲು ಬರುವುದಿಲ್ಲ ಎಂಬ ಆಶಯವೇ ಕಾರಣವಿದ್ದಂತೆ ತೋರುತ್ತದೆ. ಕಾವ್ಯ ಕಥನಗಳಲ್ಲಿ ಎಂಥ ರೋಗಗಳು ಸ್ಥಾನ ಪಡೆಯುತ್ತವೆಂದರೆ ಅದು ಮನುಷ್ಯನಿಗೆ ಅಂಟಿಕೊಂಡರೆ ಸಾಯುವವರೆಗೂ ಕಾಡಬೇಕು, ಜನ ಅಂಥವರನ್ನು ನೋಡಿ ಹೆದರುತ್ತಿರಬೇಕು. ಅದೇ ವೇಳೆ ಪಂಡಿತರು ಅದಕ್ಕೆ ಪೂರ್ವಜನ್ಮದ ಪಾಪಗಳನ್ನು ನೆನಪಿಸುವಂತಿರಬೇಕು. ಹೀಗಾಗಿ ಹಳೆಯ ಕಾವ್ಯಗಳಲ್ಲಿ ಕುಷ್ಠ, ತೊನ್ನು ರೋಗಗಳು ಜಾಗ ಪಡೆದಿವೆ. ಪ್ಲೇಗು ಕಾಲರಾ ಹಾಗಲ್ಲ, ಅವು ಮನುಷ್ಯ ಸಮೂಹವನ್ನು ಆವರಿಸಿದ ಮೂರು ದಿನಗಳಲ್ಲೇ ಸಾಯುತ್ತಾರೆ. ಆದರೆ ಕುಷ್ಟ ಮತ್ತು ತೊನ್ನು ರೋಗ ಮನುಷ್ಯನ ಬಾಹ್ಯ ರೂಪವನ್ನೇ ಬದಲಾಯಿಸಿ, ಅದನ್ನು ನೋಡುವವರ ಮನಸ್ಸಿನಲ್ಲಿ ಭಯ ಹುಟ್ಟಿಸಿ, ದೇವರು ಧರ್ಮಕರ್ಮ, ಪಾಪಪುಣ್ಯವನ್ನು ನಂಬುವಂತೆ ಮಾಡಿಬಿಡುತ್ತವೆ.

ಕನ್ನಡ ಕಾವ್ಯಗಳಿಗಿಂತ ಜನಪದ ಪರಂಪರೆಯಲ್ಲಿ ರೋಗದ ಭಯಕ್ಕಿಂತ ಮಳೆಯ ಆಗಮನ, ಅನಾಗಮನ ಬಗ್ಗೆಯೇ ಜನಕ್ಕೆ ಹೆಚ್ಚು ಆತಂಕ. ಗ್ರಾಮೀಣರ ಬದುಕಿನ ಏಳುಬೀಳು ನಿರ್ಧಾರವಾಗುವುದು ಯುಗಾದಿಯ ನಂತರ ಬರುವ ಮಳೆಯಿಂದಲೇ! ಹೀಗಾಗಿ ಜನಪದರಲ್ಲಿ ರೋಗ ಪ್ರಸ್ತಾಪಕ್ಕಿಂತ ಎಟ್ಟೆಬರ, ಡೊಕ್ಕೆಬರ, ಡೋಗೆಬರ, ಸೋಗೆಬರ, ಕೆಂಧೂಳಿಬರ ಇವುಗಳ ಪ್ರಸ್ತಾಪವೇ ಹೆಚ್ಚು. ಈ ಸಂಬಂಧದಲ್ಲಿ ಕರ್ನಾಟಕದಾದ್ಯಂತ ಜನಪದ ಹಾಡುಗಳೂ ಪ್ರಚಾರದಲ್ಲಿರುತ್ತವೆ. ಈ ಪದಗಳನ್ನು ಹಾಡುವವರು ಮಹಿಳೆಯರು. ವ್ಯವಸಾಯದ ಬಹುತೇಕ ದುಡಿಮೆ ಮತ್ತು ತತ್ಸಂಬಂಧಿ ಉಪಕಸುಬುಗಳಲ್ಲಿ ಹೆಚ್ಚು ಭಾಗವಹಿಸುವವರು ಪುರುಷರೇ ಆದರೂ ಅವರ ನಡುವೆ ಮಹಿಳೆಯರ ಪಾಲ್ಗೊಳ್ಳುವಿಕೆಯೂ ಇದ್ದೇ ಇರುತ್ತದೆ. ಪುರುಷರು ಬರಗಾಲವನ್ನು ಅನುಭವಿಸಿದರೆ, ಹೆಂಗಸರು ಅದರ ಸಂಕಟವನ್ನು ಇನ್ನೂ ತೀವ್ರತರ ಅನುಭವಿಸಿ ಹಾಡಾಗಿಸಿರುತ್ತಾರೆ.

ಅರಮನೆಗಳಲ್ಲಿ ಕಾಣದ ಬರಗಾಲ ಯಾಕೆ ಗ್ರಾಮಗಳಿಗೆ ತಟ್ಟುತ್ತಿದ್ದಿತೆಂದರೆ ಇದಕ್ಕೆ ಕಾರಣವನ್ನು ಸ್ಪಷ್ಟಪಡಿಸಬೇಕಿಲ್ಲ. ಅರಮನೆಯಲ್ಲಿ ಯಾವಾಗಲೂ ಯುದ್ಧಗಳಿಂದ, ಇಲ್ಲವೇ ಗ್ರಾಮೀಣ ರೈತರ ಕಂದಾಯ ವಸೂಲಿಯಿಂದ ಲೂಟಿಗೈದ ಭಂಡಾರವಿದ್ದೇ ಇರುತ್ತಿತ್ತಲ್ಲ! ಇದರಿಂದ ಬರಗಾಲ ಹಾಗೂ ಸಾಂಕ್ರಾಮಿಕ ರೋಗ ಅಂದರೆ ಬಹಳ ಬೇಗ ಬರಿಗೈಯ್ಯಾಗಿ, ಜೀವ ಕಳೆದುಕೊಂಡುಬಿಡುತ್ತಿದ್ದವರು ಜನಪದರೇ. ಯಾಕೆ ಇಲ್ಲಿ ಸಾಂಕ್ರಾಮಿಕ ರೋಗಗಳಿಗಿಂತ ಬರದ ವಿವರವನ್ನೂ ಪ್ರಸ್ತಾಪಿಸಲಾಗುತ್ತಿದೆಯೆಂದರೆ ಬರಕ್ಕೂ, ರೋಗಕ್ಕೂ ಅಂಥ ವ್ಯತ್ಯಾಸವೇನಿಲ್ಲ. ಎರಡೂ ಜನಪದರಿಗೆ ವಿಷಮಸ್ಥಿತಿಯನ್ನು ತಂದೊಡ್ಡುವ ಸಹೋದರ ಸಂಬಂಧಿಗಳೇ!

ಗ್ರಾಮೀಣರಿಗೆ ಬಂದೆರಗುವ ಸಣ್ಣಪುಟ್ಟ ರೋಗಗಳಿಗೆ ಅವರದೇ ವನಸ್ಪತಿ ಔಷಧಿ ಅನುಪಾನವಿದ್ದಿತಾಗಿ, ಬರ ನಿವಾರಣೆಗೆ ಮಾತ್ರ ಅವರಲ್ಲಿ ಯಾವ ಪರಿಹಾರವೂ ಇರಲಿಲ್ಲವೆಂದೇ ಹೇಳಬೇಕು. ಹಳಗನ್ನಡ ವೈದ್ಯ ಗ್ರಂಥಗಳಲ್ಲಾಗಲಿ, ಜನಪದ ವೈದ್ಯ ಮಾಹಿತಿಗಳಲ್ಲಾಗಲಿ ಸಾಂಕ್ರಾಮಿಕ ರೋಗಗಳ ಮಾಹಿತಿ ಹೆಚ್ಚು ಇಲ್ಲ ಅಥವಾ ಇಲ್ಲವೇ ಇಲ್ಲ ಎಂದು ಈಗಾಗಲೇ ಹೇಳಿಯಾಗಿದೆ. ಇಷ್ಟಾಗಿಯೂ ಪ್ಲೇಗು, ಕಾಲರಾದಂಥ ಮಹಾಮಾರಿ ರೋಗಗಳು ನಿಜಕ್ಕೂ ಶತಶತಮಾನಗಳಲ್ಲಿ ಬಿಟ್ಟೂಬಿಡದೆ ಜನಸಮೂಹವನ್ನು ಬಾಧಿಸಿವೆ. ಸಾಮೂಹಿಕ ಸಾವನ್ನು ತಂದೊಡ್ಡಿರುತ್ತವೆ. ಗ್ರಾಮಗಳಲ್ಲಿ ಇದಕ್ಕೆ ಇದ್ದ ಒಂದೇ ಒಂದು ಪರಿಹಾರವೆಂದರೆ, ಈ ರೋಗಗಳು ತಾತ್ಕಾಲಿಕವಾದುದರಿಂದ, ಅಷ್ಟೇ ತತ್ಕಾಲಕ್ಕೆ ಊರು ಬಿಟ್ಟುಬಿಡುವುದು. ರೋಗದ ಉರುಬು ಕಡಿಮೆಯಾದ ನಂತರ ಮತ್ತೆ ಊರೊಳಗಿನ ಅವರವರ ಮನೆಗಳಿಗೆ ವಾಪಸಾಗುವುದು ಇದ್ದೇ ಇತ್ತು. ಈ ರೋಗಗಳಿಗೆ ಹತ್ತಾರು ದಿನ ಸ್ವಸ್ಥಾನ ಬಿಡುವುದೇ ಮದ್ದಾಗಿದ್ದುದರಿಂದ, ಅದರ ಶಮನಕ್ಕೆ ಯಾವ ವೈದ್ಯಗ್ರಂಥಗಳಲ್ಲೂ ಔಷಧದ ಪ್ರಸ್ತಾಪವಿದ್ದಂತೆ ತೋರುವುದಿಲ್ಲ. ಕಳಲೆ ನಂಜರಾಜನ ‘ಸಕಲ ವೈದ್ಯ ಸಂಹಿತಾ ಸಾರಾರ್ಣವ’ ಎಂಬ ದೀರ್ಘ ವೈದ್ಯಗ್ರಂಥದಲ್ಲಿ ಬಹುಮಟ್ಟಿಗೆ ಎಲ್ಲ ದೈಹಿಕ ರೋಗಗಳ ಪ್ರಸ್ತಾಪವೂ ಇದೆ. ಆದರೆ ಸಾಂಕ್ರಾಮಿಕ ರೋಗಗಳ ಯಾವ ವಿವರವೂ ಇಲ್ಲ. ಒಂದು ಕಡೆ ಮಾತ್ರ ‘ಸಾಂಕ್ರಾಮಿಕ ಕ್ರಿಮಿ ನಿದಾನ’ ಎಂಬ ಪ್ರಸ್ತಾಪವಿದ್ದು ಅಲ್ಲಿ ಹೆಚ್ಚಿನ ವಿವರಗಳಿಲ್ಲ. ಇಷ್ಟಾಗಿ ಜನಪದ ಮಹಿಳೆಯರ ಜಗಳ ಸಂದರ್ಭದಲ್ಲಿ ಈ ಸಾಂಕ್ರಾಮಿಕ ರೋಗಗಳೆನಿಸುವ ಗೆಡ್ಡೆರೋಗ (ಪ್ಲೇಗು) ವಾಂತಿ ಬೇಧಿ (ಕಾಲರಾ) ರೋಗಗಳ ಪ್ರಸ್ತಾಪ ಹೆಚ್ಚು ಪುನರಾವರ್ತನೆಯಾಗುತ್ತದೆ.

ಶತಶತಮಾನಗಳಿಂದಲೂ ಇರುವ ಕುಷ್ಠ ರೋಗವನ್ನು ನಮ್ಮ ಹಳಗನ್ನಡ ವೈದ್ಯಗ್ರಂಥಗಳು ಮತ್ತು ಜನಪದ ಜಗತ್ತು, ಅದನ್ನು ಪೂರ್ವಜನ್ಮದ ಪಾಪವೆಂದೇ ತಿಳಿದಿವೆ. ಮೇಲೆ ಹೆಸರಿಸಿದ ಕಳಲೆ ವೀರ ರಾಜೇಂದ್ರ 1720ರಲ್ಲಿ ರಚಿಸಿದ ಸಕಲ ವೈದ್ಯಗ್ರಂಥದಲ್ಲಿ ಕುಷ್ಠರೋಗಕ್ಕೆ ಕಾರಣವಾಗುವ ಪಾಪ ಸಂಗತಿಗಳೆಂದರೆ ಬ್ರಾಹ್ಮಣ ದ್ರೋಹ, ಪರ ದ್ರವ್ಯಾಪಹಾರ, ಪರಸ್ತ್ರೀ ಗಮನ ಎಂದಿದ್ದಾನೆ. ಇದರ ನಿವಾರಣೆಗೆ ಔಷಧಿ ತೆಗೆದುಕೊಳ್ಳುವುದಕ್ಕಿಂತ ಮುಖ್ಯವಾಗಿ ವೈದ್ಯ ಪಂಡಿತ, ಗ್ರಂಥಕರ್ತ ಹೇಳಿರುವುದೆಂದರೆ ‘ಯಮ ನಿಯಮಾದಿಗಳನ್ನಾಚರಿಸಿ, ದಾನ ಧರ್ಮಾದಿಗಳನು ಮಾಡಿ, ದೇವ ಬ್ರಾಹ್ಮಣರುಗಳಂ ಪೂಜೆಗೈದರೆ ಕುಷ್ಠರೋಗ ನಿವಾರಣೆಯಾಗುತ್ತದೆ’ ಎಂದಿದ್ದಾನೆ. ಇನ್ನೂ ಒಂದು ವಿಚಿತ್ರ ಸಂಗತಿ ಎಂದರೆ ಈ ವೈದ್ಯ ಗ್ರಂಥಗಳನ್ನು ಬರೆದವರು ರಾಜರೇ ಎಂದು ಹೇಳಲಾಗಿದೆ.

1350ರಲ್ಲಿ ಹೊಯ್ಸಳರ ಕಾಲದಲ್ಲಿ ಚಿಕ್ಕಮುಗಳಿ(ಮಧ್ಯ ಕರ್ನಾಟಕ) ಎಂಬ ಪ್ರದೇಶದಲ್ಲಿ ದೊರೆಯಾಗಿದ್ದ ಒಂದನೆಯ ಮಂಗರಾಜನು `ಖಗೇಂದ್ರಮಣಿ ದರ್ಪಣ’ ಅಥವಾ `ವಿಷವೈದ್ಯ’ ಗ್ರಂಥ ರಚಿಸಿರುತ್ತಾನೆ. ಕೃತಿಗಳ ಕೆಲವು ಪದ್ಯಗಳನ್ನು ಗಮನಿಸಿದರೆ ಆಸ್ಥಾನದಲ್ಲಿದ್ದ ವೈದ್ಯ ಪಂಡಿತರೇ ಈ ಬಗೆಯ ಗ್ರಂಥವನ್ನು ರಚಿಸಿ ಅವನ್ನು ರಾಜನ ಹೆಸರಿಗೆ ಲಗತ್ತಿಸಿದಂತೆ ಸ್ಪಷ್ಟವಾಗಿ ಊಹಿಸಬಹುದಾಗಿರುತ್ತದೆ. ಎಲ್ಲ ವೈದ್ಯಗ್ರಂಥಗಳಲ್ಲೂ ಧರ್ಮಕರ್ಮ, ಪಾಪಪುಣ್ಯದ ಸಂಗತಿಗಳಿಗೆ ರೋಗಗಳನ್ನು ಅಂಟಿಸಲಾಗಿದ್ದು ಜನಗಳು ಆಳುವ ಮಹಾಪ್ರಭುಗಳಿಗೆ ನಿಷ್ಠರಾಗಿ ಇರಬೇಕೆಂದೂ ಹೇಳಲಾಗಿರುತ್ತದೆ. ರಾಜರುಗಳೇ ಯಾಕೆ ಈ ಬಗೆಯ ವೈದ್ಯಗ್ರಂಥ ರಚನೆಗೆ ಪ್ರೋತ್ಸಾಹ ಕೊಟ್ಟರೆಂಬುದು ಮತ್ತೊಂದು ಕುತೂಹಲದ ವಿಷಯ. ಕವಿಗಳು ಚಂದ್ರ ಸರ‍್ಯ, ರಾತ್ರಿ ಹಗಲು, ಸೂಳೆಯರು, ವಿಟರ ಕಥೆಗಳನ್ನು ಹೇಳುತ್ತಾರೆ. ನಾವಾದರೋ ಜನಸಮೂಹಕ್ಕೆ ಉಪಕಾರವಾಗುವಂಥ ವಿವಿಧ ರೋಗಸಂಬಂಧಿ ವೈದ್ಯ ಗ್ರಂಥವನ್ನು ರಚಿಸಿದ್ದೇವೆಂದುಕೊಂಡಿದ್ದಾರೆ.

ಹದಿಮೂರನೇ ಶತಮಾನದ ಮಂಗರಸನೂ ಹಾವು, ಚೇಳು ಕಚ್ಚಿದರೂ ಅದೂ ಕೂಡ ಪೂರ್ವಜನ್ಮದ ಪಾಪವೆಂದು ತೀರ್ಮಾನಿಸಿ ಅದಕ್ಕೆ ವನಸ್ಪತಿ ಔಷಧವನ್ನು ಹೇಳುತ್ತಾನೆ. ಇದರ ಜೊತೆಗೆ ಮೂಢನಂಬಿಕೆಯ ವಿಧಿವಿಧಾನಗಳನ್ನು ಹೇಳುತ್ತಾನೆ. ಕ್ರೂರ ಸರ್ಪ ಕಚ್ಚಿತು, ವ್ಯಕ್ತಿ ಇನ್ನೇನು ಉಳಿಯಲಾರ ಎನ್ನುವಲ್ಲಿ ಅವನು ಬಿದ್ದಿರುವ ಸ್ಥಳದಿಂದ ದಕ್ಷಿಣ ಭಾಗದಲ್ಲಿ ಹಕ್ಕಿಯೊಂದು ಉತ್ಸಾಹದಿಂದ ದನಿ ಮಾಡಿದರೆ ಸರ್ಪದಷ್ಟನು ಬದುಕುತ್ತಾನೆಂದಿದ್ದಾನೆ. ಇದರೊಂದಿಗೆ ಇನ್ನೂ ಒಂದು ನಂಬಿಕೆಯ ಪರಿಹಾರ ನೀಡುತ್ತಾನೆ. ಕೊಕ್ಕರೆಯೊಂದು ಹಾವು ಕಚ್ಚಿ ಬಿದ್ದವನ ಎಡಭಾಗದಲ್ಲಿ ಸದ್ದು ಮಾಡಿದರೆ ಇಲ್ಲ ಗೂಬೆಯು ಮರದ ಮೇಲೆ ಕೂತಿರುವುದು ಕಂಡರೆ ವಿಷವು ಇಳಿಯುವುದೆಂದು ಹೇಳುತ್ತಾನೆ.

ಮೇಲೆ ಹೇಳಿದ ವಿಷಯಗಳೊಂದಿಗೆ ಯಾವ ಪಂಡಿತ, ರಾಜ ಅಥವಾ ವೈದ್ಯಕವಿ, ತಾನು ಯಾವ ಧರ್ಮವನ್ನು ಅನುಸರಿಸಿರುವನೋ, ಆ ಧರ್ಮ ಪ್ರಚಾರ ಮಾಡುವುದಕ್ಕೆ ಮನುಷ್ಯನಿಗೆ ಬಂದರೆಗುವ ಕಾಯಿಲೆ, ಕಸಾಲೆಗಳನ್ನು ಬಳಸಿಕೊಂಡಿರುವುದು ವೈದ್ಯಗ್ರಂಥಗಳ ತುಂಬ ಕಂಡುಬರುತ್ತದೆ. ಆದರೆ ಈ ವೈದ್ಯಗ್ರಂಥಗಳು ವಾತ, ಪಿತ್ತ. ಕಫದ ಹಿನ್ನೆಲೆಯಲ್ಲಿ ರೋಗಗಳಿಗೆ ನೀಡುವ ವನಸ್ಪತಿ ವೈದ್ಯ ವಿವರಗಳು ಮಾತ್ರ ಓದುಗನಲ್ಲಿ ಆಶ್ಚರ್ಯ, ದಿಗ್ಭ್ರಮೆ ಹುಟ್ಟಿಸುವಂತಿದೆ. ಬಹುಶಃ ಈ ನೆಲದಲ್ಲಿ ಅದೆಷ್ಟು ಬಗೆಯ ಗಿಡಮೂಲಿಕೆಗಳು ಇರುವುವೋ ಅದೆಲ್ಲವನ್ನು ಬಿಡದೆ ಶೋಧಿಸಿ ಔಷಧೋಪಯೋಗಿಯನ್ನಾಗಿಸಿರುವ ಕ್ರಮವನ್ನು ಈ ಹೊತ್ತಿನ ಆಯುರ್ವೇದ ವೈದ್ಯವಿಜ್ಞಾನ ಸರಿಯಾಗಿ, ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕಾಗಿದೆ.

13ನೇ ಶತಮಾನದ ವೈದ್ಯ ಒಂದನೆಯ ಮಂಗರಸ ರಾಜನು ಅತ್ಯಂತ ಸರಳವಾಗಿ ಹೇಳಬಹುದಾದ ತನ್ನ ವಿಷವೈದ್ಯ ಗ್ರಂಥವನ್ನು ಚಂಪೂಶೈಲಿಯಲ್ಲಿ ಹೇಳಿರುವುದು ಇನ್ನೊಂದು ವಿಚಿತ್ರ. ದೇಹಕ್ಕೆ ಔಷಧಿಯ ಮಾರ್ಗೋಪಾಯಗಳನ್ನು ಸರಳವಾಗಿ ಹೇಳಬೇಕಾದ ಒಬ್ಬ ಪಂಡಿತನೂ ಸಹ ತಾನು ಕವಿಯಾಗಲೇಬೇಕು ಎಂಬ ಹಠ ಹಿಡಿದು ವರ್ಣನೆಯ, ರಮ್ಯಶೈಲಿಯ ಹಾದಿ ಹಿಡಿದಿರುತ್ತಾನೆ. ಎಲ್ಲ ವೈದ್ಯ ಕವಿಗಳೂ ತಮ್ಮೆದುರಿನ ಶ್ರೋತೃಗಳು ಸಾಮಾನ್ಯ ಜನ, ರೋಗಬಾಧೆಗೆ ಒಳಗಾದವರು ಎಂಬುದನ್ನು ಮರೆತು ಕೇಳುವವರೂ, ಓದುವವರೂ ಪಂಡಿತರು, ಕವಿಗಳೇ ಆಗಿರುತ್ತಾರೆಂದು ತಿಳಿದು ತಂತಮ್ಮ ಪಾಂಡಿತ್ಯ ಪ್ರದರ್ಶಿಸಿರುವಂತಿದೆ ವೈದ್ಯಗ್ರಂಥಗಳ ಬರವಣಿಗೆಯ ಕ್ರಮ.

ಇಷ್ಟಾಗಿಯೂ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವೈದ್ಯಗ್ರಂಥಗಳೂ, ಜೋತಿಷ್ಯ ಗ್ರಂಥಗಳೂ ಅಪಾರ ಸಂಖ್ಯೆಯಲ್ಲಿವೆ. ಆದರೆ ಈಗಾಗಲೇ ಹೇಳಿದಂತೆ ಸಮುದಾಯಗಳನ್ನೇ ನಾಶ ಮಾಡುತ್ತಿದ್ದ ಸಾಂಕ್ರಾಮಿಕ ರೋಗಗಳ ಪ್ರಸ್ತಾಪ ಇವುಗಳಲ್ಲಿರುವುದಿಲ್ಲ. ಈ ಬಗೆಯ ರೋಗಗಳಿಗೆ ಜನ ಔಷಧಿಗಳಿಗಿಂತ ಊರದೇವತೆಗಳನ್ನೇ ನಂಬಿ ಅವೇ ಸಾಂಕ್ರಾಮಿಕ ರೋಗಗಳನ್ನು ಶಮನಗೊಳಿಸುತ್ತವೆಂದು ತೀವ್ರವಾಗಿ ನಂಬಿರುವುದನ್ನು ಈಗಲೂ ಕಾಣಬಹುದು. ಹೀಗಾಗಿ ಪ್ಲೇಗು ಮಾರಿ, ಕಾಲರಾ ಮಾರಿ, ಸಿಡುಬಿನ ಮಾರಿಗಳು ಈಗಲೂ ಗ್ರಾಮಗಳಲ್ಲಿ ಇದ್ದೇ ಇವೆ. ಆದರೆ ವೈದ್ಯವಿಜ್ಞಾನದ ತೀವ್ರ ಬೆಳವಣಿಗೆಯ ನೆರವಿನಿಂದ ಈ ಸಾಂಕ್ರಾಮಿಕ ರೋಗಗಳ ಹಾವಳಿ ಇದೀಗ ಪೂರ್ಣ ಕಡಿಮೆಯಾಗಿವೆ.

1900ರ ಸುಮಾರಿಗೆ ಹುಟ್ಟಿ ದೀರ್ಘಕಾಲ ಬದುಕಿದ್ದ ಹಿರಿಯರುಗಳು, ಈ ಸಾಂಕ್ರಾಮಿಕ ರೋಗಗಳ ಹಾವಳಿಯನ್ನು ಕೇಳುವವರು ಬೆಚ್ಚಿ ಬೀಳಿಸುವಂತೆ ವಿವರಿಸುತ್ತಿದ್ದುದು, ಈಗಲೂ ಇರುವ ಅವರ ಮುಂದಿನ ತಲೆಮಾರಿನವರ ನೆನಪಿನಲ್ಲಿ ಉಳಿದಿರುತ್ತದೆ. 1940ರ ದಶಕದಲ್ಲಿ ದಕ್ಷಿಣ ಕರ್ನಾಟಕದ ಮಲೆಯ ಮಹದೇಶ್ವರನ ಜಾತ್ರೆಗೆ ಹೋಗಿದ್ದ ಲಕ್ಷಾಂತರ ಜನ ಭಕ್ತರಲ್ಲಿ ಸುಮಾರು ಇಪ್ಪತ್ತು-ಮೂವತ್ತು ಸಾವಿರ ಜನ ತೀರಿಕೊಂಡರು. ಅದಕ್ಕೆ ಕಾರಣವಾದದ್ದು ಕಾಲರಾ. ಬೆಟ್ಟದಲ್ಲಿ ಲಕ್ಷಾಂತರ ಜನ ಸೇರಿದ್ದ ದೀಪಾವಳಿ ಜಾತ್ರೆಯ ಹೊತ್ತಿನಲ್ಲಿ ಧಾರಾಕಾರ ಮಳೆ ಬಂದು ಆ ನೀರಿಗೆ ಬೆರೆತ ಕಸ, ಕಡ್ಡಿ, ಮಲ, ಮೂತ್ರ ಕೆರೆಗೆ ಬಂದು ಸೇರಿ, ಜನ ಅದೇ ನೀರು ಕುಡಿದು, ಎರಡು ಮೂರು ದಿನದಲ್ಲಿ ರೋಗ ಹಬ್ಬಿತು. ಆಗ ಬೆಟ್ಟಕ್ಕೆ ಬಸ್ಸಿನ ದಾರಿಯೇ ಇರಲಿಲ್ಲ. ಆ ಸುತ್ತಿನ ನೂರು ಮೈಲಿ ಫಾಸಲೆಯಲ್ಲಿ ಆಸ್ಪತ್ರೆ ಇರಲಿಲ್ಲ. ಸತ್ತವರ, ಇದ್ದವರ ಸಂಕಟಗಳನ್ನು ಬಿತ್ತರಿಸಲು ಮಾಧ್ಯಮಗಳೂ ಇರಲಿಲ್ಲ. ಸಾವಿರ ಸಾವಿರ ಸಂಖ್ಯೆಯಲ್ಲಿ ಸತ್ತ ಜನ ಸಮೂಹದ ಆ ದುರಂತ ವಿವರ, ಕಳೆದ ದಶಕಗಳಲ್ಲಿ ಬದುಕಿದ್ದ ಹಿರಿಯರ ನೆನಪಿನಲ್ಲಿ ಮಾತ್ರ ಒಂದು ದುಃಸ್ವಪ್ನದಂತೆ ಇದ್ದಿತೇ ಹೊರತು ಅದು ಎಲ್ಲೂ ದಾಖಲಾಗಿಲ್ಲ!

ಮೇಲೆ ಹೇಳಿದ ದುರಂತಕ್ಕೂ ದೈವ ಸಂಬಂಧಿ ನಂಬಿಕೆ ಬಲವಾಗಿ ಅಂಟಿಕೊಂಡದ್ದು ಮತ್ತೊಂದು ವಿಚಿತ್ರ. ಅದೆಂದರೆ ಮೈಸೂರು ದೊರೆಗಳು ಮಲೆಯ ಮಹದೇಶ್ವರರಿಗೆ ಆಗ ಬೆಳ್ಳಿಯ ಹುಲಿವಾಹನ ಮಾಡಿಸಿ ಕಳುಹಿಸಿದರಂತೆ. ಹಾಗೆ ಶಿಲ್ಪಿ ತಯಾರಿಸಿದ ಹುಲಿಗೆ ಮುಖದಲ್ಲಿ ಏರುದೃಷ್ಟಿ ಇದ್ದು, ಅದನ್ನು ಯಾವ ದಾರಿಯಲ್ಲಿ ಬೆಟ್ಟಕ್ಕೆ ಸಾಗಿಸಲ್ಪಟ್ಟಿತೋ ಅಲ್ಲಿ ಉದ್ದಕ್ಕೂ ಹೆಣ ಬಿದ್ದಿತೆಂದು ಹೇಳಲಾಯಿತು. ಆ ನಂಬಿಕೆಯಂತೆ ಮತ್ತೆ ಹುಲಿವಾಹನವನ್ನು ವಾಪಸು ತರಿಸಿ ಇಳಿದೃಷ್ಟಿಯನ್ನು ಮಾಡಿಸಿ ಕಳಿಸಿದ ಮೇಲೆ ರೋಗ ತಗ್ಗಿತಂತೆ. ಅಂದರೆ ಅಷ್ಟುಹೊತ್ತಿಗೆ ಜಾತ್ರೆಯೇ ಮುಗಿದುಹೋಗಿದ್ದಿತು! ಈ ದಂತಕಥೆಗೂ, ಪ್ರಾಚೀನ ವೈದ್ಯಗ್ರಂಥಗಳಲ್ಲಿ ಬರುವ ದೈವ ಸಂಬಂಧೀ ನಂಬಿಕೆಗಳಿಗೂ ಯಾವುದೇ ಅಂತರವಿಲ್ಲ ಎಂಬುದನ್ನು ಗಮನಿಸಬೇಕು. ಈ ಹೊತ್ತಿಗೂ ಭಾರತೀಯ ಜೀವನಕ್ರಮದಲ್ಲಿ ಜಾತಿ, ಧರ್ಮ, ದೈವ ಸಂಬಂಧದ ನಂಬಿಕೆಗಳು ಅಪಾಯಕಾರಿ ಸ್ವರೂಪದಲ್ಲೇ ಇವೆಯಲ್ಲ!

ಇನ್ನು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಾಂಕ್ರಾಮಿಕ ರೋಗಗಳ ದಾಖಲೆ, ಪ್ರಸ್ತಾಪ ತುಂಬ ಕಡಿಮೆಯೆಂದೇ ಹೇಳಬೇಕು. ರಾವ್‌ಬಹದ್ದೂರರ `ಗ್ರಾಮಾಯಣ’, ಎಸ್.ಎಲ್.ಭೈರಪ್ಪನವರ `ಗೃಹಭಂಗ’, ಯು.ಆರ್.ಅನಂತಮೂರ್ತಿ ಅವರ `ಸಂಸ್ಕಾರ’ ಈ ಮೂರೂ ಮುಖ್ಯ ಕಾದಂಬರಿಗಳಲ್ಲಿ ಪ್ಲೇಗಿನ ವಿವರ ಚಿತ್ರಣಗಳಿವೆ. ಆದರೆ ಇಡೀ ಕಾದಂಬರಿಯ ವಸ್ತು, ವಿವರ, ಸಂಗತಿಗಳು ಬೇರೆ ಬೇರೆಯೇ ಇದ್ದು ಪ್ಲೇಗಿನ ಪ್ರಸ್ತಾಪ ಅಲ್ಲಿ ಆನುಷಂಗಿಕವಾಗಿ ಬಂದಿರುತ್ತದೆ. ಆಲ್ಬರ್ಟ್ ಕಮೂನ `ಪ್ಲೇಗ್’ ಕಾದಂಬರಿಯಲ್ಲಿಯಂತೆ ಅದು ಮನುಷ್ಯನ ಅಂತರಂಗ, ಬಹಿರಂಗವನ್ನು ಮತ್ತು ಇಡೀ ಸಮಾಜವನ್ನೂ, ಲೋಕವನ್ನೂ ವ್ಯಾಪಿಸಿಕೊಂಡಂತೆ ಅರ್ಥಪೂರ್ಣ ಧ್ವನಿ, ಪ್ರತಿಮೆಯಾಗಿ ಮೂಡಿ ಬಂದಿರುವುದಿಲ್ಲ.

Leave a Reply

Your email address will not be published.