ಶಾಲೆಗಳ ನಡುವೆ ಶುಲ್ಕ ಸ್ಪರ್ಧೆ

ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರಿಗೆ ಸ್ಪರ್ಧಾತ್ಮಕವಾಗಿ ಫೀಸ್ ಕಟ್ಟಿಸಿಕೊಳ್ಳಲು ಅವಕಾಶ ನೀಡಿ ಈ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಸುಧಾರಿಸಬಾರದೇಕೆ?

ಸರ್ಕಾರಿ ಖಾಸಗಿ ಶಾಲೆಗಳ ನಡುವೆ ಶುಲ್ಕ ಸ್ಪರ್ಧೆ

ಸರ್ಕಾರಿ ಶಾಲೆಗಳಲ್ಲಿ ಭರ್ತಿಯಾಗುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದರೆ, ಈ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟವೂ ಕುಸಿಯುತ್ತಿದೆ ಎಂಬ ದೂರಿದೆ. ಈ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕು ಹಾಗೂ ಸದ್ಯಕ್ಕೆ 2-3 ಶಾಲೆಗಳನ್ನು ಒಂದುಗೂಡಿಸಿಯಾದರೂ ನಡೆಸಬೇಕು ಎಂಬ ಮಾತು ಸರ್ಕಾರಿ ವಲಯಗಳಲ್ಲಿ ಪದೇಪದೇ ಕೇಳಿಬಂದಿದೆ. ಕನ್ನಡ ಮಾಧ್ಯಮದ ಮತ್ತು ಸರ್ಕಾರಿ ಶಾಲೆಗಳನ್ನು ಮುಚ್ಚುವ ‘ಘೋರ ಹತ್ಯೆ’ಯ ಭಯದಲ್ಲಿ ಈ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಹಾಗೂ ವಿದ್ಯೆಯೂ ಇಲ್ಲದೆ ಸೊರಗುತ್ತಿವೆ. ಬದಲಿಗೆ, ಖಾಸಗಿ ಇಂಗ್ಲಿಷ್ ಶಾಲೆಗಳು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿವೆ. ಪ್ರತಿಯೊಂದು ತಾಲ್ಲೂಕಿನಲ್ಲಿ ವರ್ಷಕ್ಕೆ ಒಂದೆರಡು ಹೊಸ ಖಾಸಗಿ ಶಾಲೆಗಳು ಮೈದಳೆಯುತ್ತಿವೆ. ಆದರೆ ಈ ಖಾಸಗಿ ಶಾಲೆಗಳ ಇಂಗ್ಲಿಷ್ ಮಾಧ್ಯಮದ ಶೈಕ್ಷಣಿಕ ಗುಣಮಟ್ಟವೂ ಅಷ್ಟರಲ್ಲಿಯೇ ಇದೆ. ಈ ಶಾಲೆಗಳ ಶಿಕ್ಷಕರ ಗೋಳು ಕೂಡ ಕೇಳುವವರು ಇಲ್ಲದೆ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಗೊತ್ತುಗುರಿಯಿಲ್ಲದೆ ಸಾಗುತ್ತಿದೆ.

ಹಾಗಾದರೆ ಇದಕ್ಕೆ ಕಾಯಕಲ್ಪ ಇಲ್ಲವೇ? ಕೇಂದ್ರ ಸರ್ಕಾರವು ರೈಟ್ ಟು ಎಜುಕೇಷನ್ ಎಂಬ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಓದಲು ಫೀಸು ಭರಿಸುವ ಈ ಯೋಜನೆಯಲ್ಲಿ ಖಾಸಗಿ ಶಾಲೆಗಳಿಗೆ ಪ್ರತಿ ವರ್ಷವೂ ಲಕ್ಷಾಂತರ ರೂ.ಗಳ ಅನುದಾನವನ್ನು ಸರ್ಕಾರ ನೀಡುತ್ತಿದೆ. ಇತ್ತ ಸರ್ಕಾರಿ ಶಾಲೆಗಳನ್ನು ಸಂಬಳಸಾರಿಗೆ ನೀಡಿ ನಡೆಸಿ ಅತ್ತ ಖಾಸಗಿ ಶಾಲೆಗಳಲ್ಲಿ ಬಡ ಮಕ್ಕಳನ್ನು ಓದಿಸಲು ಅನುದಾನ ನೀಡಬೇಕಾದಂತಹ ಅಬ್ಬೇಪಾರಿ ಸ್ಥಿತಿಯಲ್ಲಿ ನಮ್ಮ ಸರ್ಕಾರವಿದೆ. ಇದಕ್ಕೆ ಪಯಾರ್ಯವಾಗಿ ಈ ಕೆಳಕಂಡಂತೆ ಯೋಜನೆಯೊಂದಿದೆ:

  • ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಸಮಾನ ರೀತಿಯಲ್ಲಿ ಸ್ಪರ್ಧೆ ಮಾಡಲು ಅನುವು ಮಾಡಿಕೊಡಬೇಕು.
  • ಸರ್ಕಾರಿ ಶಾಲೆಗಳಿಗೆ ಈಗಿನಂತೆ ಕಟ್ಟಡ, ಸಂಬಳ, ಬಿಸಿಯೂಟದ ಸೌಲಭ್ಯ ಮುಂದುವರೆಯಬೇಕು. ಆದರೆ ಇದಕ್ಕೆ ಹೊರತಾಗಿ ಬೇರಾವುದೇ ಸೌಲಭ್ಯವನ್ನು ನೀಡಬಾರದು.
  • ರಾಜ್ಯದಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಓದುವ ಪ್ರತಿಯೊಂದು ಬಿಪಿಎಲ್ ಮಗುವಿಗೂ ತಿಂಗಳಿಗೆ ರೂ.1,000 ವಿದ್ಯಾರ್ಥಿವೇತನದ ಕೂಪನ್‍ಗಳನ್ನು ನೀಡಬೇಕು. ಈ ವಿದ್ಯಾರ್ಥಿವೇತನವನ್ನು ಪೋಷಕರು ವಿದ್ಯಾರ್ಥಿಯ ಶಿಕ್ಷಣಕ್ಕೆ ಮಾತ್ರ ಬಳಸಬೇಕು. ಈ ವಿದ್ಯಾರ್ಥಿ ಕೂಪನ್‍ಗಳನ್ನು ಪಡೆದ ಶಾಲೆಗಳು ಸರ್ಕಾರದ ಬಳಿ ನಗದೀಕರಿಸಬಹುದು. < ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳು ಕೂಡ ಈ ವಿದ್ಯಾರ್ಥಿ ಕೂಪನ್‍ಗಳನ್ನು ಪಡೆದು ತಮ್ಮ ಶಾಲೆಗಳ ಬೇರೆಲ್ಲಾ ಸೌಲಭ್ಯಗಳನ್ನು ಒದಗಿಸಲು ಬಳಸಬಹುದು. ವರ್ಷವೊಂದರಲ್ಲಿ ಸರ್ಕಾರಿ ಶಾಲೆಯು ಗಳಿಸಿದ ವಿದ್ಯಾರ್ಥಿ ಕೂಪನ್‍ಗಳಲ್ಲಿ ಶೇ.50ರಷ್ಟನ್ನು ಅದೇ ಶಾಲೆಯ
  • ಶಿಕ್ಷಕರಿಗೆ ಬೋನಸ್ ನೀಡಲು ಬಳಸಬೇಕು. ಉಳಿದ ಶೇ.50ರಷ್ಟು ಕೂಪನ್ ಹಣವನ್ನು ಅದೇ ಶಾಲೆಯಲ್ಲಿನ ಮಕ್ಕಳ ಸಾರಿಗೆ ಖರ್ಚು ಸೇರಿದಂತೆ ಉಳಿಕೆ ಖರ್ಚಿಗೆ ಬಳಸಬಹುದು.
  • ಸರ್ಕಾರಿ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಗುತ್ತಿಗೆ ಆಧಾರದ ಮೇಲೆ ಸಾರಿಗೆ ಸೌಲಭ್ಯ ಒದಗಿಸಬೇಕು. ಹೆಚ್ಚುಹೆಚ್ಚು ವಿದ್ಯಾರ್ಥಿಗಳನ್ನು ತಮ್ಮ ಶಾಲೆಗೆ ಸೇರಿಸಿಕೊಳ್ಳುವ ಶಾಲೆಯ ಅಧ್ಯಾಪಕ ವೃಂದವು ಹೆಚ್ಚು ಬೋನಸ್ ಕೂಡ ಗಳಿಸಬಹುದಾಗಿದೆ.
  • ಈ ಯೋಜನೆಯಲ್ಲಿ ಖಾಸಗಿ ಶಾಲೆಗಳ ಶಿಕ್ಷಕರಿಗಿಂತ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಹೆಚ್ಚಿನ ಸಂಬಳ ದೊರೆಯುವ ಸಾಧ್ಯತೆಯಿದೆ. ಶಾಲೆಯಲ್ಲಿ ಹೆಚ್ಚಿನ ಸೌಲಭ್ಯ ನೀಡಿ, ಹಾಗೂ ಶಿಕ್ಷಣದ ಗುಣಮಟ್ಟ ಹೆಚ್ಚಿಸಿಕೊಂಡು ಶಾಲೆಗಳು ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸುವ ಸಾಧ್ಯತೆಯಲ್ಲಿ ನಿಧಾನವಾಗಿ ನಮ್ಮ ಪ್ರಾಥಮಿಕ ಶಿಕ್ಷಣ ಮಟ್ಟ ಸುಧಾರಿಸಬಹುದು. ಈ ಯೋಜನೆಯ ಸ್ಥೂಲರೂಪಕ್ಕೆ ವಿಶದವಾಗಿ ಕಾಯಕಲ್ಪ ನೀಡಿದರೆ ಸರ್ಕಾರಿ ಶಾಲೆಗಳನ್ನು ಮತ್ತೆ ನಾವು ಎಂದಿನ ಖ್ಯಾತಿಗೆ ಮರಳಿಸಲು ಸಾಧ್ಯವಿದೆ. ಒಮ್ಮೆ ಯಶಸ್ವಿಯಾದರೆ, ಇದೇ ಮಾದರಿಯನ್ನು ಕಾಲೇಜು ಶಿಕ್ಷಣ ಹಾಗೂ ಉನ್ನತ ಶಿಕ್ಷಣ ವಲಯಕ್ಕೆ ಕೂಡ ವಿಸ್ತರಿಸಬಹುದಾಗಿದೆ.

Leave a Reply

Your email address will not be published.