ಪ್ರಾಧ್ಯಾಪಕರ ನೇಮಕಾತಿ: ಭ್ರಶ್ಟತೆ ಮತ್ತು ಸಮಾಜದ ನೈತಿಕ ಅಧಃಪತನ!

ಪರಿಯಲ್ಲಿ ನೇಮಕಾತಿಯ ಭ್ರಶ್ಟಾಚಾರದಲ್ಲಿ ಮುಳುಗಿರುವ ವಿಶ್ವವಿದ್ಯಾಲಯಗಳು ಮತ್ತು ಪದವಿ ಕಾಲೇಜುಗಳು ಹೇಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡಲು ಸಾಧ್ಯ? ಭ್ರಶ್ಟಾಚಾರದ ಕೂಪದಲ್ಲಿ ಬಿದ್ದಿರುವ ವಿಶ್ವವಿದ್ಯಾಲಯಗಳು ಮತ್ತು ‘ಭ್ರಶ್ಟ ಅಧ್ಯಾಪಕರು’ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಏನನ್ನು ಮತ್ತು ಹೇಗೆ ಕಲಿಸಬಹುದು?

ಕಲ್ಬುರ್ಗಿಯಲ್ಲಿರುವ ರಾಜ್ಯದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 67 ಪ್ರಾಧ್ಯಾಪಕರ ನೇಮಕಾತಿಯ ‘ಭ್ರಶ್ಟಾಚಾರ’ ವರದಿಗಳನ್ನು ಪತ್ರಿಕೆಗಳು ಪ್ರಕಟಿಸಿವೆ. ಈ ಹಿಂದೆಯೂ ಅನೇಕ ವಿಶ್ವವಿದ್ಯಾಲಯಗಳ ನೇಮಕಾತಿಗಳಲ್ಲಿ ಅಕ್ರಮ ವ್ಯವಹಾರ ನಡೆದ ಆರೋಪಗಳು ಕೇಳಿ ಬಂದಿದ್ದವು.  ಕೆಲವು ವಿಶ್ವವಿದ್ಯಾಲಯಗಳ ನೇಮಕಾತಿಗಳಲ್ಲಿನ ಅಕ್ರಮ ವ್ಯವಹಾರಗಳು ಹೆಚ್ಚು ಸುದ್ದಿ ಮಾಡದಿದ್ದರೂ ಆ ಬಗೆಗೆ ಗುಸುಗುಸು ಮಾತುಗಳು ಕೇಳಿ ಬಂದಿದ್ದವು. ಅಂದರೆ ಯಾವುದೇ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ನೇಮಕಾತಿಗಳು ಭ್ರಶ್ಟಾಚಾರದ ಕಳಂಕವಿಲ್ಲದೆ ನ್ಯಾಯಬದ್ಧವಾಗಿ ನಡೆದ ಉದಾಹರಣೆಗಳಿಲ್ಲ. ಇಂತಹ ಅಕ್ರಮ ನೇಮಕಾತಿಗಳಲ್ಲಿ ರಾತ್ರೋರಾತ್ರಿ ನೇಮಕಾತಿಯ ಆದೇಶ ಹೊರಡಿಸಿ ಕಚೇರಿ ವೇಳೆ ಮುಗಿದ ನಂತರ ಕರ್ತವ್ಯಕ್ಕೆ ವರದಿ ಮಾಡಿಸಿಕೊಳ್ಳುವ ಪ್ರಕರಣಗಳು ನಡೆದಿವೆ.

ಇಂತಹ ಸಂದರ್ಭದಲ್ಲಿ 2017ರಲ್ಲಿ ಸರ್ಕಾರಿ ಪದವಿ ಕಾಲೇಜುಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆದ ಅಧ್ಯಾಪಕರ ನೇಮಕಾತಿ ಬಹುತೇಕ ಪಾರದರ್ಶಕವಾಗಿ ನಡೆದಿದೆ ಎನ್ನಬಹುದು. ಅದರ ಬಗೆಗೂ ಕೆಲವರು ಭ್ರಶ್ಟಾಚಾರದ ಆರೋಪ ಮಾಡುವುದುಂಟು. ಪ್ರಶ್ನೆಪತ್ರಿಕೆಗಳನ್ನು ಸಿದ್ದಪಡಿಸುವ ಹಂತದಲ್ಲಿಯೇ ಕೆಲವರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಲಾಗಿದೆ ಎಂಬ ಆರೋಪವಿದೆ.

ಈ ನಡುವೆ ಕಳೆದೆರಡು ವರ್ಷಗಳಲ್ಲಿ ರಾಜ್ಯದಲ್ಲಿರುವ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿರುವ ಖಾಲಿಯಿದ್ದ ಸುಮಾರು 1500 ಮಂಜೂರಾದ ಬ್ಯಾಕ್‌ಲಾಗ್ ಮತ್ತು ಸಾಮಾನ್ಯ ಹುದ್ದೆಗಳನ್ನು ರ‍್ತಿ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಖಾಸಗಿ ಅನುದಾನಿತ ಕಾಲೇಜುಗಳಲ್ಲಿನ ನೇಮಕಾತಿಗಳಲ್ಲಿ ನಡೆದಿರುವ ಭ್ರಶ್ಟಾಚಾರದ ಬಗ್ಗೆ ಒಂದು ಸಣ್ಣ ಚರ್ಚೆಯೂ ಆಗಿಲ್ಲ. ಇಲ್ಲಿ ಆಯ್ಕೆಯಾದವರು ಮತ್ತು ಅವಕಾಶ ಕಳೆದುಕೊಂಡವರು ಹೇಳುವಂತೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ 15 ಲಕ್ಷದಿಂದ 50 ಲಕ್ಷದವರೆಗೂ ಹಣದ ವಹಿವಾಟು ನಡೆದಿರುವ ಉದಾಹರಣೆಗಳಿವೆ. ಇದಲ್ಲದೆ ಈ ಹಿಂದೆ 2009ರಲ್ಲಿ ಸರ್ಕಾರಿ ಪದವಿ ಕಾಲೇಜುಗಳಿಗೆ 2000 ಅಧ್ಯಾಪಕರನ್ನು ನೇರ ನೇಮಕಾತಿ ಮೂಲಕ ರ‍್ತಿ ಮಾಡಲಾಗಿತ್ತು. ಆಗ ನೇಮಕ ಮಾಡುವ ಹೊಣೆಯನ್ನು ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗಕ್ಕೆ ನೀಡಲಾಗಿತ್ತು. ಅದರಲ್ಲಿ ನಡೆದಿರುವ ಅಕ್ರಮ ವ್ಯವಹಾರ ಮತ್ತು ಭ್ರಶ್ಟಾಚಾರ ಕಳಂಕದ ಕಾರ್ಮೋಡ ಇನ್ನೂ ಕರಗಿಲ್ಲ. ಅಲ್ಲಿ ಹಣದ ವಹಿವಾಟು ಮಾತ್ರವಲ್ಲದೆ ನಕಲಿ ಅಂಕಪಟ್ಟಿ ಮತ್ತು ನಕಲಿ ಎಂ.ಫಿಲ್. ಪ್ರಮಾಣಪತ್ರಗಳನ್ನು ನೀಡಿ ಆಯ್ಕೆಯಾದವರು ಹೆಚ್ಚಿದ್ದಾರೆ. ಇದರ ಮಾಹಿತಿ ಸಂಬAಧಪಟ್ಟ ಇಲಾಖೆಗೆ ತಿಳಿದಿದೆ. ಈ ‘ಹಗರಣ’ ಬೂದಿಮುಚ್ಚಿದ ಕೆಂಡAತಿದೆ. ಇದನ್ನು ಕೆದಕಿ ನಕಲಿ ಪದವಿ ಮತ್ತು ಅರ್ಹತಾ ಪತ್ರಗಳನ್ನು ನೀಡಿ ಆಯ್ಕೆಯಾಗಿರುವವರ ಬಗ್ಗೆ ತನಿಖೆ ನಡೆಸಿದರೆ ಅನೇಕರು ಕೆಲಸ ಕಳೆದುಕೊಂಡು ಮನೆಗೆ ಹೋಗುವ ಸಾಧ್ಯತೆಗಳಿವೆ. ಹೀಗೆಯೇ 1992, 1996, 2004 ಮತ್ತು 2007ರಲ್ಲಿ ನಡೆದ ಅಧ್ಯಾಪಕರ ನೇಮಕಾತಿಗಳಲ್ಲಿಯೂ ಲಂಚದ ವೈರಸ್ ಕಾಡಿದ್ದರ ಬಗೆಗೆ ಈಗಲೂ ಕತೆಗಳನ್ನು ಹೇಳುತ್ತಾರೆ.

ಇದು ಕೇವಲ ಕಾಲೇಜುಗಳ ಅಧ್ಯಾಪಕರ ಮತ್ತು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ನೇಮಕಾತಿ ಮಾತ್ರವಲ್ಲದೆ ವಿಶ್ವವಿದ್ಯಾಲಯಗಳಿಗೆ ನಡೆವ ಉಪಕುಲಪತಿಗಳ ನೇಮಕವೂ ಅಕ್ರಮ ವ್ಯವಹಾರಗಳಿಲ್ಲದೆ ನಡೆಯುವ ಸ್ಥಿತಿಯಿಲ್ಲ. ಇದರಲ್ಲಿ ಸರ್ಕಾರ ಮತ್ತು ರಾಜಭವನಗಳೇ ಸಕ್ರಿಯವಾಗಿ ಪಾಲ್ಗೊಂಡಿರುವದನ್ನು ಯಾರೂ ಊಹಿಸಬಹುದಾಗಿದೆ. ಹಾಗಾಗಿ ಎಲ್ಲ ಹಂತಗಳಲ್ಲಿ ಭ್ರಶ್ಟಾಚಾರವು ನೆಲೆಗೊಂಡಿರುವುದರಿAದ ಇಲ್ಲಿ ಒಬ್ಬರು ಇನ್ನೊಬ್ಬರಿಂದ ಹಣ ಕೀಳುವ ಕಸುಬನ್ನು ಚೆನ್ನಾಗಿಯೇ ರೂಢಿಸಿಕೊಂಡಿರುತ್ತಾರೆ. ಇದು ಒಟ್ಟು ಶಿಕ್ಷಣ ವ್ಯವಸ್ಥೆಯನ್ನು ಸುಲಭವಾಗಿ ಮತ್ತು ಅತ್ಯಂತ ಕಡಿಮೆ ಸಮಯದಲ್ಲಿ ದಾರಿ ತಪ್ಪಿಸುತ್ತದೆ.

ಭ್ರಶ್ಟಾಚಾರದ ಮೂಲ

ಹೀಗೆ ಎಲ್ಲ ಸರ್ಕಾರಿ ಇಲಾಖೆಗಳಂತೆ ಭ್ರಶ್ಟಾಚಾರದ ಆಗರಗಳಾಗಿ ಉನ್ನತ ಶಿಕ್ಶಣ ಸಂಸ್ಥೆಗಳು ಬದಲಾಗಿವೆ. ಇದಕ್ಕೆ ಕಾರಣಗಳೇನು? ಈ ಪ್ರಶ್ನೆಗೆ ಹಲವು ಆಯಾಮಗಳಿವೆ. ಮೊದಲಿಗೆ ಇಂದು ಪದವೀಧರರ ಸಂಖ್ಯೆ ಹೆಚ್ಚಿದೆ. ಎಲ್ಲರಿಗೂ ಉದ್ಯೋಗದ ಅವಶ್ಯಕತೆ ಇದೆ. ಆದರೆ ಇರುವ ಅವಕಾಶಗಳು ಕಡಿಮೆ. ಹಾಗಾಗಿ ಪದವೀಧರರ ನಡುವೆಯೇ ವಿಪರೀತ ಸ್ಪರ್ಧೆ ಏರ್ಪಟ್ಟಿದೆ. ಹೇಗಾದರೂ ಮಾಡಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂಬ ಜಿದ್ದು ಹುಟ್ಟಿಕೊಂಡಿದೆ. ಅಂತಹ ಜಿದ್ದಿನಿಂದ ಯಾವುದೇ ಅಡ್ಡದಾರಿಗಳಲ್ಲಿ ಬೇಕಾದರೂ ಸಾಗಿ ಉದ್ಯೋಗ ಗಿಟ್ಟಿಸಿಕೊಳ್ಳಲು ಹಾತೊರೆಯುತ್ತಾರೆ.

ಈ ನಡುವೆ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳಲ್ಲಿ ಬೋಧನೆ ಮಾಡುವ ಪ್ರಾಧ್ಯಾಪಕರಿಗೆ ಆಕರ್ಶಕ ವೇತನವಿದೆ. ಹಾಗಾಗಿ ಉದ್ಯೋಗಾಕಾಂಕ್ಶಿಗಳು ಕೆಲವು ವಶÀð ‘ಉಚಿತ ಸೇವೆ’ ಮಾಡಿದೆವು ಎಂದು ಭಾವಿಸಿ ಇಪ್ಪತ್ತೆöÊದು ಮೂವತ್ತು ಲಕ್ಶ ಹಣವನ್ನು ಸಲೀಸಾಗಿ ಹೊಂದಿಸಿ ಲಂಚ ಕೊಡಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಲಂಚ ಪಡೆಯುವವರೂ ಕೂಡ ‘ಇಶ್ಟೊಂದು ಸಂಬಳವನ್ನು ತಿಂಗಳಿಗೆ ಪಡಯುವವರು ಅದರ ಪಾಲನ್ನು ನಮಗೂ ಕೊಡಲಿ ಬಿಡಿ’ ಎಂದು ಹಣ ಕಕ್ಕಿಸುತ್ತಾರೆ.

ಈ ನಡುವೆ ಲಂಚ ಪಡೆವ ಆಯಕಟ್ಟಿನ ಸ್ಥಾನದಲ್ಲಿರುವವರು ಆ ಸ್ಥಾನಕ್ಕೆ ಬರಲು ಸಾಕಶ್ಟು ಹಣ ಸಂದಾಯ ಮಾಡಿಯೇ ಬಂದಿರುತ್ತಾರೆ. ಉದಾಹರಣೆಗೆ ವಿಶ್ವವಿದ್ಯಾಲಯಗಳಿಗೆ ನೇಮಕವಾಗುವ ಉಪಕುಲಪತಿಗಳು ತಮ್ಮ ಮೇಲಿನವರಿಗೆ ಕೋಟ್ಯಂತರ ರೂಪಾಯಿಗಳನ್ನು ಸಂದಾಯ ಮಾಡಿಯೇ ಬಂದಿರುತ್ತಾರೆ. ಹಾಗಾಗಿ ತಮಗಿರುವ ಮರ‍್ನಾಲ್ಕು ವರುಶಗಳ ಅವಧಿಯಲ್ಲಿ ಪಾವತಿಸಿದ್ದ ಅಸಲು ಬಡ್ಡಿ ಲಾಭ ಸಹಿತ ಹಿಂಪಡೆದುಕೊಳ್ಳಲೇಬೇಕಾಗಿರುವುದರಿAದ ಸಾಧ್ಯವಿರುವ ಆದಾಯ ಮೂಲಗಳನ್ನೆಲ್ಲ ಕೆದಕುತ್ತಾರೆ. ಅಂತಹ ಸಂದರ್ಭಗಳಲ್ಲಿ ದೊರಕುವ ಒಂದು ಆದಾಯದ ಮೂಲವೇ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿ. ನಂತರ ಕಟ್ಟಡಗಳ ನಿರ್ಮಾಣ, ರಸ್ತೆ ಇತ್ಯಾದಿಗಳ ‘ಅಭಿವೃದ್ಧಿ’ ಕೆಲಸಗಳ ನೆಪದಲ್ಲಿ ದೊರೆಯುವ ಕೋಟ್ಯಾಂತರ ರೂಪಾಯಿಗಳ ಅನುದಾನಗಳಲ್ಲಿ ಸಾಧ್ಯವಿರುವಶ್ಟು ಕಿಕ್‌ಬ್ಯಾಕ್ ರೂಪದಲ್ಲಿ ಹಣ ಪಡೆದುಕೊಳ್ಳುವ ಅವಕಾಶ ಸೃಶ್ಟಿಸಿಕೊಳ್ಳಲಾಗುತ್ತದೆ.

ಇನ್ನು ಪರೀಕ್ಶೆಗಳು ಮತ್ತು ಮೌಲ್ಯಮಾಪನ, ಅಂಕಪಟ್ಟಿಗಳ ಅಕ್ರಮ; ಹೀಗೆ ಎಲ್ಲಾ ಮೂಲಗಳಿಂದ ಹಣ ಮಾಡುತ್ತಾರೆ. ಯಾರು ಹೀಗೆ ಹಣ ಮಾಡುವ ಧರ‍್ಯವನ್ನು ಹೊಂದಿರುತ್ತಾರೆಯೋ ಅಂತಹವರೇ ಹೆಚ್ಚೆಚ್ಚು ಆಯಕಟ್ಟಿನ ಜಾಗ ಹಿಡಿದಿರುತ್ತಾರೆ. ಕೆಪಿಎಸ್ಸಿಗೆ ಅಧ್ಯಕ್ಶರಾಗುವವರು ಮತ್ತು ಸದಸ್ಯರಾಗುವವರು ಇಂತಹವರೇ ಆಗಿರುತ್ತಾರೆ. ಅಂತಹವರನ್ನೇ ಆಯಕಟ್ಟಿನ ಜಾಗ ಸೇರಿಸುವ ಕೆಲಸವನ್ನು ಪ್ರಭುತ್ವ ಮಾಡುತ್ತದೆ. ಇದು ಎಗ್ಗಿಲ್ಲದೆ ಎಲ್ಲ ಸರ್ಕಾರಗಳ ಕಾಲದಲ್ಲಿ ನಡೆಯುವ ಒಂದು ‘ವ್ಯವಸ್ಥೆ’.

ಇಲ್ಲಿನ ಮುಖ್ಯ ಪ್ರಶ್ನೆಯೆಂದರೆ, ಈ ಪರಿಯಲ್ಲಿ ನೇಮಕಾತಿಯ ಭ್ರಶ್ಟಾಚಾರದಲ್ಲಿ ಮುಳುಗಿರುವ ವಿಶ್ವವಿದ್ಯಾಲಯಗಳು ಮತ್ತು ಪದವಿ ಕಾಲೇಜುಗಳು ಹೇಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡಲು ಸಾಧ್ಯ? ಭ್ರಶ್ಟಾಚಾರದ ಕೂಪದಲ್ಲಿ ಬಿದ್ದಿರುವ ವಿಶ್ವವಿದ್ಯಾಲಯಗಳು ಮತ್ತು ‘ಭ್ರಶ್ಟ ಅಧ್ಯಾಪಕರು’ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಏನನ್ನು ಮತ್ತು ಹೇಗೆ ಕಲಿಸಬಹುದು? ಶಿಕ್ಶಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಬೋಧಕರಿಗೆ ನೈತಿಕೆಯ ಆತ್ಮಬಲ ಮತ್ತು ಸಾಮಾಜಿಕ ಹೊಣೆಗಾರಿಕೆ ಇಲ್ಲದಿದ್ದರೆ ಹೇಗೆ ಬೋಧಿಸಬಹುದು? ಹಾಗಾಗಿ ಕನಿಶ್ಟ ನೈತಿಕತೆ ಇಲ್ಲದಿರುವಾಗ ಸಹಜವಾಗಿಯೇ ಇಡೀ ಶಿಕ್ಷಣ ವ್ಯವಸ್ಥೆ ನಾಶವಾಗುತ್ತದೆ. ಇದರ ಪರಿಣಾಮವಾಗಿ ಇಡೀ ಸಮಾಜವೇ ನೈತಿಕತೆಯ ಅವಸಾನದಿಂದಲೂ ಕೊಳೆಯುತ್ತದೆ. ಇಂತಹ ಸಮಾಜದಲ್ಲಿ ನೈತಿಕ ಶಿಕ್ಶಣದ ಅಗತ್ಯವನ್ನು ಬೋಧಿಸಿದ ಗಾಂಧೀಜಿ ಒಂದು ಫೋಟೋ ಫ್ರೇಮ್ ಮಾತ್ರ. ಅಂತಹ ಫ್ರೇಮಿನ ಕೆಳಗೆ ಇಲ್ಲವೇ ಎದುರಿನಲ್ಲಿಯೇ ಎಲ್ಲ ಅವ್ಯವಹಾರಗಳು ನಡೆಯುತ್ತವೆ.

ಈ ನಡುವೆ ಬೋಧನಾ ವೃತ್ತಿ ಮೇಲಿನ ಪ್ರೀತಿ ಮತ್ತು ಆಸಕ್ತಿಗಳಿಂದ ಬರುವವರ ಸಂಖ್ಯೆ ಬಹುತೇಕ ಕಡಿಮೆ. ಈಗ ಅದೊಂದು ವೃತ್ತಿಯಶ್ಟೇ. ವಿವಿಧ ಹಂತದ ಅಧ್ಯಾಪನ ವೃತ್ತಿಯಲ್ಲಿ ತೊಡಗುವವರಿಗೆ ಮೂಲಭೂತವಾಗಿ ಇರಬೇಕಾದ ಅರ್ಹತೆ ಅಧ್ಯಾಪನದ ಬಗೆಗೆ ಪ್ರೀತಿ, ಕಾಳಜಿ ಮತ್ತು ಸಾಮಾಜಿಕ ಹೊಣೆಗಾರಿಕೆ. ನಂತರದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕಾದವರಿಗೆ ಹೊಸ ಜ್ಞಾನದ ಶೋಧನೆಯ ಹಂಬಲ, ವಿದ್ವತ್ತು, ಬೋಧನೆಯ ಕೌಶಲಗಳು ಮತ್ತು ನೈತಿಕತೆಗಳು ಅಗತ್ಯ. ಇದರ ನಂತರ ನಿರಂತರವಾಗಿ ಕಲಿಯುವ ಆಸಕ್ತಿಯನ್ನು ಇಟ್ಟುಕೊಂಡು ತಾವು ಕಲಿಯುತ್ತ ವಿದ್ಯಾರ್ಥಿಗಳಿಗೆ ಕಲಿಸಬೇಕಾಗುತ್ತದೆ. ಈಗ ಇದಾವುದರ ಎಚ್ಚರ ಮತ್ತು ಅರಿವಿಲ್ಲದವರೂ ಉನ್ನತ ಶಿಕ್ಶಣ ಸಂಸ್ಥೆಗಳಲ್ಲಿ ಬಂದು ಸೇರಿಹರು. ವಿದ್ಯೆ, ಜ್ಞಾನ ಮತ್ತು ನೈತಿಕತೆಗಳ ಬಗೆಗೆ ಕಾಳಜಿಯೇ ಇಲ್ಲದವರು ಸಹಜವಾಗಿ ಭ್ರಶ್ಟಾಚಾರದ ಕೂಪದಲ್ಲಿ ಬಹುಬೇಗ ಬೀಳುತ್ತಾರೆ. ಇದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚೆಚ್ಚು ನಡೆಯುತ್ತಿದೆ.

ಇದನ್ನು ಸರಿಮಾಡಬೇಕಾದ ಹೊಣೆಗಾರಿಕೆ ಸರ್ಕಾರಗಳದು. ಆದರೆ ಸರ್ಕಾರಗಳಿಗೆ ಇದನ್ನು ಸರಿಮಾಡಬೇಕಾದ ಯಾವ ಕಾಳಜಿ ಮತ್ತು ಬದ್ಧತೆಯೂ ಇಲ್ಲ. ಮತ್ತು ಇದು ಸರಿಯಾಗಬಾರದೆಂಬುದೇ ಸರ್ಕಾರಗಳ ಇಚ್ಚೆ ಹಾಗೂ ಸರ್ಕಾರಗಳಿಗೆ ಶಿಕ್ಶಣದ ರೂಪುರೇಶೆಗಳನ್ನು ಬೋಧಿಸುವ ದೇಶದ ಉದ್ಯಮಪತಿಗಳ ಮತ್ತು ಬಂಡವಾಳಿಗರ ಅಘೋಶಿತ ಆದೇಶವಿದೆ. ಸರ್ಕಾರ ಮತ್ತು ಬಂಡವಾಳಶಾಹಿಗಳ ಅಪವಿತ್ರ ಮೈತ್ರಿಯಿಂದಲೇ ಇಂದು ಶಿಕ್ಶಣವನ್ನು ಜ್ಞಾನ ಕೇಂದ್ರಿತ ನೆಲೆಯಿಂದ ಪಲ್ಲಟಿಸಿ ಮಾಹಿತಿ ಕೇಂದ್ರಕ್ಕೆ ತಂದು ನಿಲ್ಲಿಸಲಾಗಿದೆ. ಅದಕ್ಕೆ ತಕ್ಕಂತೆ ಪಠ್ಯಕ್ರಮವನ್ನು ಮತ್ತು ಪರೀಕ್ಶಾ ಪದ್ದತಿಗಳನ್ನು ರೂಪಿಸಲಾಗಿದೆ.

ಪ್ರಾಥಮಿಕ ಹಂತದಿAದ ಪಿಎಚ್.ಡಿ. ಪದವಿ ಹಂತದವರೆಗೂ ಬಹುಆಯ್ಕೆ ಮಾದರಿಯ(ಎಂಸಿಕ್ಯು) ಪರೀಕ್ಶೆಯ ಪದ್ದತಿಗಳನ್ನು ಜಾರಿಗೆ ತರಲಾಗಿದೆ. ಇದು ವಿದ್ಯಾರ್ಥಿಗಳಲ್ಲಿನ ತರ್ಕಬದ್ದ ಕಲಿಕೆ, ವಿಶ್ಲೇಶಣೆ ಮತ್ತು ವಿಮರ್ಶಾತ್ಮಕ ವಿಧಾನಗಳಿಂದ ತಪ್ಪಿಸಿ ಮಾಹಿತಿ ನೆಲೆಗೆ ತಂದು ಕೇವಲ ನೆನಪಿನ ಪರೀಕ್ಶೆ ನಡೆಸಲಾಗುತ್ತಿದೆ. ಅಧ್ಯಾಪಕರಿಗೆ ಒಂದು ಮಟ್ಟದ ಮಾಹಿತಿಯ ಬಲ ಅಗತ್ಯ. ಆದರೆ ಯಶಸ್ವಿ ಅಧ್ಯಾಪಕರಿಗೆ ಅದು ಮಾತ್ರ ಪ್ರಯೋಜನಕ್ಕೆ ಬರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಶೆಗಳಲ್ಲಿ ಅತ್ಯಂತ ಹೆಚ್ಚು ಅಂಕಗಳನ್ನು ಪಡೆದು ಆಯ್ಕೆಯಾದ ಅನೇಕರು ‘ಮಾಹಿತಿ ಪ್ರವೀಣ’ರಾಗಿ ಬೋಧನೆಯಲ್ಲಿ ನಿತ್ಯವೂ ಸೋಲುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ನಶ್ಟವಾಗುತ್ತಿದೆ. ದುರಂತವೆAದರೆ, ಇರುವುದರಲ್ಲಿ ಪಾರದರ್ಶಕವಾದ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಶೆಗಳ ಮೂಲಕ ನಡೆಯುತ್ತಿದೆ. ಆದರೆ ಈ ವಿಧಾನವೂ ಕೂಡ ಉತ್ತಮ ಅಧ್ಯಾಪಕರನ್ನು ಆಯ್ಕೆ ಮಾಡುವುದರಲ್ಲಿ ವಿಫಲವಾಗುತ್ತಿದೆ. ಆದರೆ ಈ ಬಗೆಯ ಆಯ್ಕೆಗಳಲ್ಲಿ ಭ್ರಶ್ಟಾಚಾರದ ಹಾವಳಿ ಕಡಿಮೆಯಿರುವುದು ಮಾತ್ರ ನಿಜ.

ಜ್ಞಾನ ವಿರೋಧಿ ಯುಗ

ಭ್ರಶ್ಟಾಚಾರದ ಮತ್ತೊಂದು ಮೂಲವೆಂದರೆ ಜ್ಞಾನ ವಿರೋಧ. ಅಂದರೆ ಇದು ಹೇಳಿ ಕೇಳಿ ಜ್ಞಾನವಿರೋಧಿಯಾದ ಕಾಲ. ನಮ್ಮ ಕಾಲವು ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿಯಾಗಿ ಜಗತ್ತಿನ ಯಾವುದೇ ಮೂಲೆಯ ಜ್ಞಾನವನ್ನು ಕ್ಶಣಾರ್ಧದಲ್ಲಿ ಪಡೆದುಕೊಳ್ಳಲು ಸಾಧ್ಯವಿದೆ ಎಂಬ ಭ್ರಮೆ ಹುಟ್ಟಿಸಿರುವ ಕಾಲ. ಆದರೆ ಆಸಕ್ತ ಕೆಲವರು ತಂತ್ರಜ್ಞಾನದ ನೆರವಿನಿಂದ ಮಾಹಿತಿಯನ್ನು ಪಡೆಯಬಹುದೇ ಹೊರತು ಜ್ಞಾನವನ್ನಲ್ಲ. ಜ್ಞಾನವು ಗ್ರಂಥಾಲಯದಲ್ಲಿ ಪುಸ್ತಕಗಳು ಇದ್ದ ಮಾತ್ರಕ್ಕೆ ಬರುವುದಿಲ್ಲ. ಹಾಗೆಯೇ ಅಂತರ್‌ಜಾಲದ ‘ಕಣಜ’ಗಳಲ್ಲಿ ಎಲ್ಲ ಗ್ರಂಥಗಳನ್ನು ತುಂಬಿಟ್ಟ ಮಾತ್ರಕ್ಕೆ ಜ್ಞಾನವು ಎಲ್ಲರಿಗೂ ಹರಿದುಬಿಡುವುದಿಲ್ಲ.

ಜ್ಞಾನವು ಗುರುಪಂಪರೆಯಿAದ ಬರುವಂತಹದ್ದು. ಈಗಾಗಲೇ ಕಲಿತವರು ಹೊಸಬರಿಗೆ ಅದನ್ನು ಸರಿಯಾದ ರೀತಿಯಲ್ಲಿ ಕಲಿಸಿಕೊಡಬೇಕು. ಆದರೆ ಇಂದು ಗುರುವಿನ ಜಾಗದಲ್ಲಿ ಯಂತ್ರವಿದೆ. ಯಂತ್ರವು ಯಾವುದೇ ಜ್ಞಾನವನ್ನು ಕೊಡಲಾರದು. ಆದರೆ ಇಂದು ಜ್ಞಾನವನ್ನೇ ಮರೆಮಾಚಿ ಮಾಹಿತಿಯನ್ನೇ ಜ್ಞಾನವೆಂದು ಬಿಂಬಿಸಲಾಗುತ್ತಿದೆ. ಹಾಗೆಯೇ ಕಲಿಸಬೇಕಾದವರ ಜಾಗದಲ್ಲಿ ಕಲಿಸಲು ಸಾಮರ್ಥ್ಯವಿಲ್ಲದವರನ್ನು ತಂದು ಕೂರಿಸಲಾಗುತ್ತಿದೆ. ಕ್ರಿಯಾಶೀಲ ಅಧ್ಯಾಪಕರು ಇದ್ದು ಸಮರ್ಥವಾಗಿ ಕರ‍್ಯ ನಿರ್ವಹಿಸಿದರೆ ಉತ್ತಮ ಸಮಾಜವನ್ನು ರೂಪಿಸಬಹುದು.

‘ಜ್ಞಾನ’ ಎನ್ನುವುದು ತರ್ಕಬದ್ಧ, ವಿಶ್ಲೇಶಣಾ ಪ್ರಧಾನ ಹಾಗೂ ವಿಮರ್ಶಾತ್ಮಕವಾದ ಕಲಿಕೆಯ ಪ್ರಕ್ರಿಯೆ. ಈ ಕಲಿಕೆಯ ವಿಧಾನ ಯಾವುದೇ ಆಳುವ ವರ್ಗವನ್ನು ಕಟಕಟೆಗೆ ತಂದು ನಿಲ್ಲಿಸುತ್ತದೆ. ಹೀಗೆ ಕಟಕಟೆಗೆ ತಂದು ನಿಲ್ಲಿಸುವ ಜ್ಞಾನದ ಅಗತ್ಯ ಈಗಿನ ಆಳುವ ವರ್ಗಕ್ಕೆ ಬೇಕಾಗಿಲ್ಲ. ಹಾಗಾಗಿಯೇ ‘ಕ್ರಿಟಿಕಲ್ ಥಿಂಕಿಂಗ್’ ಇರುವ ಉತ್ತಮ ಅಧ್ಯಾಪಕರನ್ನು ವ್ಯವಸ್ಥೆ ಬಯಸುವುದಿಲ್ಲ. ಆದ್ದರಿಂದಲೇ ಕ್ರಿಟಿಕಲ್ ಥಿಂಕಿಂಗ್ ಬೆಳೆಸುವ ಸಮಾಜ ವಿಜ್ಞಾನಗಳು ಮತ್ತು ಮಾನವಿಕಗಳನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗಿದೆ. ಶಿಕ್ಷಣ ಎಂದರೆ ವಿಜ್ಞಾನ ಮತ್ತು ವೃತ್ತಿಪರ ಕೋರ್ಸುಗಳು ಎಂಬಂತೆ ಬಿಂಬಿಸಲಾಗಿದೆ. ವೈಚಾರಿಕ ಮತ್ತು ಜ್ಞಾನಮಾರ್ಗಿ ಉತ್ತಮ ಅಧ್ಯಾಪಕರನ್ನು ವಿದ್ಯಾರ್ಥಿಗಳನ್ನು ತಯಾರು ಮಾಡದಂತಹ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಇಂತಹ ಧೋರಣೆ ವ್ಯವಸ್ಥೆಯ ಒಳಗೇ ಇರುವುದರಿಂದ ಉತ್ತಮ ಆಯ್ಕೆಯ ಆದ್ಯತೆಯೇ ನಮ್ಮ ಸರ್ಕಾರಗಳಿಗಿಲ್ಲ.

ಹಾಗಾಗಿಯೇ ಉತ್ತಮ ಅಧ್ಯಾಪಕರನ್ನು ಹೊರಗಿಟ್ಟು ನೇಮಕಾತಿ ಮಾಡುವ ಪದ್ದತಿ ನಮ್ಮ ವಿಶ್ವವಿದ್ಯಾಲಯಗಳಲ್ಲಿದೆ. ಉತ್ತಮ ಅಧ್ಯಾಪಕರು ಮತ್ತು ಕಲಿಕೆಯ ವ್ಯವಸ್ಥೆ ಇರುವ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ದೇಶದ ಪ್ರತಿಶ್ಟಿತ ಶಿಕ್ಶಣ ಸಂಸ್ಥೆಯಾಗಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ. ಇಲ್ಲಿ ಕಲಿತವರು ಪ್ರಭುತ್ವಕ್ಕೆ ಮಗ್ಗುಲ ಮುಳ್ಳುಗಳಾಗಿ ಕೆಲಸ ಮಾಡುತ್ತಾರೆ. ಹಾಗಾಗಿ ಜೆಎನ್‌ಯು ಮೇಲೆ ಅಪಪ್ರಚಾರ ಮಾಡುವುದು; ಸುಳ್ಳು ಆರೋಪಗಳನ್ನು ಹೊರಿಸುವುದು; ಅದರ ಮೂಲಕ ಮಣಿಸಲು ಸಾಧ್ಯವಾಗದೇ ಇದ್ದಾಗ ನೇರವಾಗಿ ದೈಹಿಕ ದಾಳಿಗಳನ್ನು ನಡೆಸಿ ಮಟ್ಟಹಾಕುವ ಕೆಲಸವನ್ನು ಮಾಡಲಾಗುತ್ತಿದೆ.

ಯಾಕೆಂದರೆ ಇಲ್ಲಿಯವರೆಗೂ ಜೆಎನ್‌ಯು ಬೆಳೆಸಿಕೊಂಡು ಬಂದಿದ್ದ ಕಲಿಕಾ ಪರಂಪರೆಯಲ್ಲಿ ಅಲ್ಲಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಆಳುವ ವರ್ಗವನ್ನು ಸದಾ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಪ್ರಶ್ನಿಸುತ್ತಿದ್ದರು. ಅದರ ತಪ್ಪು ನಡೆಗಳನ್ನು ಜಗತ್ತಿಗೆ ಎತ್ತಿ ತೋರಿಸುತ್ತಿದ್ದರು. ಆ ಮೂಲಕ ಸಮಾಜ ಮತ್ತು ಜ್ಞಾನಪರ ನಿಲ್ಲುತ್ತಲೇ ಬರುತ್ತಿದ್ದಾರೆ. ವಿಶೇಶವಾಗಿ ಅಲ್ಲಿನ ಭಾಶೆ, ಸಾಹಿತ್ಯ, ಸಮಾಜ ವಿಜ್ಞಾನ ವಿಭಾಗಗಳು ಅತ್ಯಂತ ಪರಿಣಾಮಕಾರಿಯಾಗಿ ಇದನ್ನು ಮಾಡಿಕೊಂಡು ಬರುತ್ತಿವೆ. ಇದು ಈಗಿನ ಪ್ರಭುತ್ವಕ್ಕೆ ಸಹಿಸಲಾಗುತ್ತಿಲ್ಲ. ಅಲ್ಲದೆ ಈಗಿನ ಸರ್ಕಾರಕ್ಕೆ ತನ್ನ ಸೈದ್ಧಾಂತಿಕ ನಿಲುವುಗಳಿಗಿಂತ ಭಿನ್ನವಾದ ವಿಚಾರವನ್ನು ಹೊಂದಿರುವವರನ್ನು ಮಟ್ಟಹಾಕುವುದೇ ಉದ್ದೇಶ. ಇದ್ದ ಒಂದು ಪ್ರತಿಶ್ಟಿತ ಸಂಸ್ಥೆಯನ್ನು ಆಳುವ ವ್ಯವಸ್ಥೆಯೇ ನಾಶಮಾಡಲು ನಿಂತಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲಿರಬೇಕು.

ಹೀಗಿರುವಾಗ ಆಳುವ ವರ್ಗ ಹೇಗೆ ಉತ್ತಮ ಅಧ್ಯಾಪಕರನ್ನು ಆಯ್ಕೆ ಮಾಡೀತು? ಉತ್ತಮ ಶಿಕ್ಶಣ ಸಂಸ್ಥೆಗಳನ್ನು ರೂಪಿಸೀತು? ಅದರಲ್ಲಿಯೂ ಬಲಪಂಥೀಯ ನಿಲುವುಗಳುಳ್ಳ ಪ್ರಭುತ್ವ ಯಾವುದೇ ಬಗೆಯ ವೈಚಾರಿಕತೆಯನ್ನು ಸಹಿಸುವುದಿಲ್ಲ. ಬದಲಿಗೆ ಅದು ಯಥಾಸ್ಥಿತಿವಾದವನ್ನು ಮತ್ತು ಸನಾತನವಾದವನ್ನು ಮಾತ್ರ ಪ್ರತಿಪಾದಿಸುತ್ತದೆ. ಇಲ್ಲಿ ಜಾತಿವಾದಿ ಪುರೋಹಿತಶಾಹಿ ಯಜಮಾನಿಕೆಯನ್ನು ಹೇರುವುದೇ ಅದರ ಉದ್ದೇಶವಾಗಿರುತ್ತದೆ. ಹಾಗಾಗಿ ಇಂತಹ ಉದ್ದೇಶಗಳನ್ನು ವಿರೋಧಿಸುವ ಬೌದ್ಧಿಕ ವರ್ಗವನ್ನು ಅದು ಸಹಿಸುವುದಿಲ್ಲ; ತನ್ನ ವಿಚಾರಗಳನ್ನು ಸಮರ್ಥಿಸುವ ಮತ್ತು ಜಾರಿಗೊಳಿಸುವ ಅವೈಚಾರಿಕರನ್ನು ಶಿಕ್ಶಣ ಸಂಸ್ಥೆಗಳಿಗೆ ತಂದು ಪ್ರತಿಶ್ಟಾಪಿಸುತ್ತಿದೆ. ಸಹಜವಾಗಿಯೇ ಇದು ಶಿಕ್ಶಣ ಸಂಸ್ಥೆಗಳನ್ನು ಜ್ಞಾನವಿಮುಖಿಗಳನ್ನಾಗಿಸುತ್ತದೆ.

ಹಾಗೆಯೇ ಜಾಗತೀಕರಣ ಕಾಲದ ನವವಸಾಹತುಶಾಹಿ ಮತ್ತು ಬಂಡವಾಳಶಾಹಿ ವ್ಯವಸ್ಥೆ ಕೂಡ ಜ್ಞಾನವನ್ನು ಸಹಿಸುವುದಿಲ್ಲ. ಬಂಡವಾಳಶಾಹಿ ವ್ಯವಸ್ಥೆಯನ್ನು ಪ್ರಶ್ನಿಸುವ ಜ್ಞಾನ ಮತ್ತು ಅದರ ವಿವಿಧ ಶಾಖೆಗಳನ್ನು, ಚಿಂತಕರನ್ನು ಸಹಿಸುವುದಿಲ್ಲ. ಅದು ಸಾಧ್ಯವಾದಶ್ಟು ತನ್ನ ವಿರುದ್ಧದ ನಿಲುವುಗಳುಳ್ಳ ಚಿಂತನೆಗಳನ್ನೇ ಹುಟ್ಟದಂತಹ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರುವ ಕೆಲಸವನ್ನು ಮಾಡುತ್ತಿದೆ ಮತ್ತು ತನಗೆ ಪ್ರಯೋಜನವಾಗುವ ಹೊಸ ಗುಲಾಮಗಿರಿಯನ್ನು ಒಪ್ಪಿಕೊಳ್ಳುವಂತಹ ಒಂದು ಅಕ್ಶರಸ್ಥ ಪಡೆಯನ್ನು ತಯಾರಿಸಿಕೊಳ್ಳುತ್ತದೆ. ವಿಶೇಶವೆಂದರೆ ಭಾರತದ ಸಂದರ್ಭದಲ್ಲಿ ಬಲಪಂಥೀಯ ಆಳುವ ವರ್ಗ ಮತ್ತು ದೇಶೀಯ ಹಾಗೂ ಜಾಗತೀಕ ಬಂಡವಾಳಶಾಹಿ ವ್ಯವಸ್ಥೆಗಳು ಒಂದರೊಳಗೊಂದು ಕೂಡಿಕೆ ಮಾಡಿಕೊಂಡಿವೆ. ದೇಶೀಯ ಮತ್ತು ವಿದೇಶಿಯ ಬಂಡವಾಳಿಗರು ಇಂದಿನ ಭಾರತದ ಪ್ರಭುತ್ವಕ್ಕೆ ಬೆಂಗಾವಲಾಗಿ ನಿಂತಿದ್ದಾರೆ. ಆದ್ದರಿಂದಲೇ ಈ ಎರಡೂ ಶಕ್ತಿಗಳಿಗೆ ತಮ್ಮನ್ನು ಪ್ರಶ್ನಿಸುವ ಮತ್ತು ಜನಪರ ಸಮಾಜಪರವಾದ ನಿಲುವು ಹೊಂದಿರುವ ಜ್ಞಾನವನ್ನೇ ನಾಶ ಮಾಡುವ ಉದ್ದೇಶವಿದೆÀ. ಇಂತಹ ಹೊತ್ತಿನಲ್ಲಿ ನಡೆವ ಎಲ್ಲ ನೇಮಕಾತಿಗಳು ಅಕ್ರಮವಾಗಿ ನಡೆದು ಅನರ್ಹರು ಜ್ಞಾನ ಕೇಂದ್ರಗಳಲ್ಲಿ ಆವರಿಸಿಕೊಳ್ಳುವುದು ಸಹಜವಾಗಿ ಮತ್ತು ಪ್ರಭುತ್ವದ ಹಿತಕ್ಕೆ ತಕ್ಕಂತೆಯೇ ಇರುತ್ತದೆ.

ಅಂದರೆ ಆಳುವ ವರ್ಗವೇ ವ್ಯವಸ್ಥಿತವಾಗಿ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ನಾಶ ಮಾಡುತ್ತಿರುತ್ತದೆ. ಹೀಗೆ ನಾಶ ಮಾಡುತ್ತಲೇ ಸರ್ಕಾರಿ ಸಂಸ್ಥೆಗಳ ಮೇಲೆ ಅಪಪ್ರಚಾರ ನಡೆಸಿ ಖಾಸಗಿ ವಿಶ್ವವಿದ್ಯಾಲಯಗಳು ಕಾಲೇಜುಗಳ ಸ್ಥಾಪನೆಗೆ ಮುಂದಾಗುತ್ತವೆ. ಅಲ್ಲಿ ಶಿಕ್ಶಣವು ಖರೀದಿಸಬೇಕಾದ ಸರಕಾಗಿರುವುದರಿಂದ ಸಾಮಾನ್ಯ ಜನರು ಅಲ್ಲಿಗೆ ತೆರಳಲು ಸಾಧ್ಯವೇ ಇಲ್ಲ. ಉಳ್ಳವರು ಸಮಾಜದ ಮೇಲುವರ್ಗದ ಮತ್ತು ಮೇಲ್ಜಾತಿಯ ಜನರೇ ಸೇರಿಕೊಳ್ಳುವ ತಾಣಗಳಾಗಿ ಖಾಸಗಿ ಸಂಸ್ಥೆಗಳು ಇರುತ್ತವೆ. ಇಂತಹ ಜಾತಿ ಕೇಂದ್ರಿತ ಸಂಸ್ಥೆಗಳು ಎಂತಹ ಜ್ಞಾನವನ್ನು ಉತ್ಪಾದಿಸಬಹುದು?

ಹೀಗೆ ಶಿಕ್ಶಣ ಸಂಸ್ಥೆಗಳು ನಾಶವಾಗುತ್ತಿರುವುದು ನಮ್ಮ ದೇಶದಲ್ಲಿ ಮಾತ್ರವಲ್ಲ. ಬದಲಿಗೆ ಬಂಡವಾಳಶಾಹಿ ಪ್ರಬಲವಾಗಿ ಬೆಳೆದಿರುವ ಅಮೆರಿಕದ ಬಹುತೇಕ ವಿಶ್ವವಿದ್ಯಾಲಯಗಳೂ ಅವಸಾನವಾಗಿವೆ. ಈ ಬಗೆಗೆ ಬಹಳ ಹಿಂದೆಯೇ ವಿಶ್ವಪ್ರಸಿದ್ಧ ಭಾಶಾವಿಜ್ಞಾನಿ ಮತ್ತು ಚಿಂತಕರಾದ ನೋಮ್ ಚಾಮ್ಸ್ಕಿ ಅವರು ‘ಅಮೆರಿಕದ ವಿಶ್ವವಿದ್ಯಾಲಯಗಳ ಸಾವು’ ಎಂಬ ಲೇಖನವನ್ನು ಬರೆದಿದ್ದಾರೆ. ಅದರಲ್ಲಿ ಅವರು ಬಂಡವಾಳಶಾಹಿ ಶಕ್ತಿಗಳು ಹೇಗೆ ಅಲ್ಲಿನ ವಿಶ್ವವಿದ್ಯಾಲಯಗಳನ್ನು ನಾಶಮಾಡಿವೆ ಎಂಬುದನ್ನು ವಿವರಿಸಿದ್ದಾರೆ. ಹಾಗಾಗಿ ಜಾಗತಿಕವಾಗಿಯೂ ಶಿಕ್ಶಣ ವಲಯ ಜ್ಞಾನ ವಿರೋಧಿಯಾಗಿ ಬೆಳೆಯುತ್ತಿದೆ.

ಈ ಹಿನ್ನೆಲೆಯಲ್ಲಿ ನೋಡಿದರೆ ನಮ್ಮ ಶಿಕ್ಶಣ ಸಂಸ್ಥೆಗಳಲ್ಲಿನ ಭ್ರಶ್ಟಾಚಾರ ಸಂಕೀರ್ಣವಾದುದು. ಹಾಗಾಗಿ ಇದನ್ನು ಸರಿಮಾಡುವ ಕೆಲಸವನ್ನು ಯಾರು ಮಾಡಬೇಕು? ಸದ್ಯದಲ್ಲಿ ಇಂತಹ ಭ್ರಶ್ಟ ಶೈಕ್ಶಣಿಕ ವ್ಯವಸ್ಥೆಯನ್ನು ಸುಧಾರಿಸುವ ಯಾವ ಯೋಜನೆಗಳೂ ಸರ್ಕಾರದ ಮುಂದಿಲ್ಲ. ಸಮಾಜಕ್ಕೂ ಇದು ಸರಿಹೋಗಬೇಕೆಂಬ ಬಯಕೆ ಇಲ್ಲ. ನಮ್ಮ ಜನರು ಹೇಗೋ ಇರುವುದರಲ್ಲಿ ಹೊಂದಿಕೊಂಡು ಹೋಗುವ ಗುಣವನ್ನು ರೂಢಿಸಿಕೊಂಡಿರುವುದರಿಂದ ಸದ್ಯಕ್ಕೆ ಈ ಸಮಸ್ಯೆಗೆ ಸಮಾಜದಿಂದಲೂ ಪರಿಹಾರ ಕಾಣುತ್ತಿಲ್ಲ. ಇಂತಹ ಹೊತ್ತಿನಲ್ಲಿ ಉತ್ತಮ ಶಿಕ್ಶಣದ ಕನಸು ಕಾಣುವ ವಿದ್ಯಾರ್ಥಿಗಳು ಮತ್ತು ಅವರಿಗೆ ಶಿಕ್ಶಣ ಕೊಡಿಸುವ ಪೋಶಕರ ಕನಸು ಕೇವಲ ವೈಯಕ್ತಿಕ ಅಪೇಕ್ಶೆ ಮಾತ್ರ.

ಅಲ್ಲದೆ ಇಂದಿನ ಶಿಕ್ಶಣವು ವೃತ್ತಿಕೇಂದ್ರಿತ ಶಿಕ್ಶಣವೇ ಹೊರತು ಮೌಲ್ಯಾಧಾರಿತ, ಜ್ಞಾನಾಧಾರಿತ ಹಾಗೂ ನೈತಿಕ ಶಿಕ್ಶಣವಲ್ಲ. ನಮ್ಮ ದೇಶದ ಅಕ್ಶರಸ್ಥ ನಾಗರಿಕ ಸಮಾಜವು ಜ್ಞಾನಕೇಂದ್ರಿತ ಉತ್ತಮ ಶಿಕ್ಶಣದ ಬಗೆಗೆ ತಲೆಕೆಡಿಸಿಕೊಳ್ಳುವುದು ದೂರದ ಮಾತೇ ಸರಿ. ಹಾಗಾಗಿ ಭ್ರಶ್ಟಾಚಾರವೆಂಬ ರಕ್ಕಸ ವೈರಸ್ ನಮ್ಮ ಶಿಕ್ಶಣವನ್ನು ನುಂಗಿನೊಣೆಯುತ್ತಿದೆ. ಇದರಿಂದ ಪಾರಾಗುವ ದಾರಿಗಳನ್ನು ಸಮಾಜ ಇನ್ನಶ್ಟೇ ಕಂಡುಕೊಳ್ಳಬೇಕಿದೆ. ಸಮಾಜವು ವೈಚಾರಿಕತೆಯ ಜ್ಞಾನದ ಮತ್ತು ನೈತಿಕತೆಯ ಪಕ್ಶಪಾತಿಯಾದರೆ ಮಾತ್ರ ಹೊಸ ದಾರಿಗಳು ಮೂಡಬಹುದು.

(ಗಮನಿಸಿ: ಈ ಲೇಖನದಲ್ಲಿ ಶ ಮತ್ತು ಷ ಗಳನ್ನು ಪೂರಕವಾಗಿ ಒಂದಕ್ಕೆ ಮತ್ತೊಂದು ಬದಲಿಯಾಗಿ ಬಳಸಲಾಗಿದೆ; ಇವು ಮುದ್ರಣ ದೋಷಗಳಲ್ಲ. ಲಿಪಿಗೆ ಸಂಬಂಧಿಸಿದಂತೆ ಲೇಖಕರಿಗೆ ಬೇರೆಯದೇ ಅಭಿಪ್ರಾಯವಿರುವುದು ಇದಕ್ಕೆ ಕಾರಣ)

*ಲೇಖಕರು ಮೂಲತಃ ದೊಡ್ಡಬಳ್ಳಾಪುರ ತಾಲ್ಲೂಕು ಕಂಟನಕುಂಟೆಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ., ಹಂಪಿ ಕನ್ನಡ ವಿಶ್ವವಿದ್ಯಾಲಯಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಪ್ರಸ್ತುತ ಮೈಸೂರಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರು.

Leave a Reply

Your email address will not be published.