ಪ್ರಿಯ ಓದುಗ ಬಂಧು,

ನಿಮ್ಮ ನೆಚ್ಚಿನ ‘ಸಮಾಜಮುಖಿ’ ಇನ್ನೆರಡು ತಿಂಗಳಲ್ಲಿ ನಿರಂತರ ಪ್ರಕಟಣೆಯ ಮೂರನೇ ವರುಷ ಪೂರೈಸಲಿದೆ. ಈ ಸಂದರ್ಭದಲ್ಲಿ ಪತ್ರಿಕೆ ಪ್ರಕಟಣೆಯ ಕಷ್ಟ-ಸುಖಕ್ಕೆ ಸಂಬಂಧಿಸಿದ ಒಂದೆರಡು ಅಂತರಂಗದ ಮಾತುಗಳು…

ಬೌದ್ಧಿಕ ನೆಲೆಯಲ್ಲಿ ಅದೆಷ್ಟೇ ಆದರ್ಶ, ಪಾವಿತ್ರ್ಯ, ಪಾತೀರ್ವತ್ಯದ ಅಡಿಪಾಯದಲ್ಲಿ ಪ್ರತಿಷ್ಠಾಪನೆಗೊಂಡಿದ್ದರೂ ಅಂತಿಮವಾಗಿ ಪತ್ರಿಕೆಯೊಂದು ಮಾರುಕಟ್ಟೆಯ ‘ಸರಕು’ ಎಂಬುದು ಕಹಿಸತ್ಯ. ಸರಕು ಎಂದಾಕ್ಷಣ ಲಾಭನಷ್ಟದ ಲೆಕ್ಕಾಚಾರ ರಂಗ ಪ್ರವೇಶಿಸುತ್ತದೆ. ನಿಮಗೆಲ್ಲಾ ಗೊತ್ತಿರುವಂತೆ ಭಾರತದಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುವ ಎರಡು ವಸ್ತುಗಳೆಂದರೆ, ರೈತರ ಉತ್ಪನ್ನ ಮತ್ತು ಪತ್ರಿಕೆ.

ಸಮಾಜಮುಖಿ ಮಾಸಿಕದ ಲೆಕ್ಕವನ್ನೇ ತೆಗೆದುಕೊಳ್ಳೋಣ. ತೊಂಬತ್ತಾರು ಪುಟಗಳಲ್ಲಿ ಸಮೃದ್ಧ ಹೂರಣ ಹೊತ್ತು ಸಂಗ್ರಾಹ್ಯ ಪುಸ್ತಕ ರೂಪದಲ್ಲಿ ನಿಮ್ಮ ಕೈಸೇರುವ ಪತ್ರಿಕೆಯ ಒಂದು ಪ್ರತಿಯ ಮುದ್ರಣ ವೆಚ್ಚವೇ ಮೂವತ್ತೊಂದು ರೂಪಾಯಿ. ಸಿಬ್ಬಂದಿಯ ಸಂಬಳ, ಲೇಖಕರ-ಕಲಾವಿದರ ಸಂಭಾವನೆ, ಕಚೇರಿ ಬಾಬತ್ತು, ಅಂಚೆ ಖರ್ಚು… ಎಲ್ಲಾ ಸೇರಿದರೆ ಒಂದು ಪ್ರತಿಯ ಉತ್ಪಾದನಾ ಖರ್ಚು ಬರೋಬ್ಬರಿ 80 ರೂಪಾಯಿ ದಾಟುತ್ತದೆ! ಆದಾಗ್ಯೂ ಸಮಾಜಮುಖಿಯ ಮುಖಬೆಲೆ 50 ರೂಪಾಯಿ ಮಾತ್ರ. ಇನ್ನು ರೂ.500 ನೀಡಿ ವಾರ್ಷಿಕ ಚಂದಾದಾರರಾದವರಿಗೆ ರೂ.41.66ಕ್ಕೆ, ಮೂರು ವರ್ಷದ ಚಂದಾದಾರರಿಗೆ ರೂ.38.88ಕ್ಕೆ, ಐದು ವರ್ಷದ ಚಂದಾದಾರರಿಗೆ ರೂ.33.33ಕ್ಕೆ ಸಮಾಜಮುಖಿ ದೊರೆಯುತ್ತಿದೆ. ಹಾಗಾದರೆ ಈ ನಷ್ಟ ಭರಿಸುವುದು ಹೇಗೆ?

ಪತ್ರಿಕೆಗಳ ನಷ್ಟವನ್ನು ಸಾಮಾನ್ಯವಾಗಿ ಜಾಹೀರಾತು ಆದಾಯದಿಂದ ತುಂಬಿಕೊಳ್ಳಲಾಗುತ್ತದೆ. ಆದರೆ ಜಾಹೀರಾತುಗಳು ಪತ್ರಿಕೆಯ ಪ್ರಸಾರವನ್ನು ಅವಲಂಬಿಸಿರುತ್ತವೆ. ಅಂದರೆ ಜಾಹೀರಾತುಗಳನ್ನು ಆಕರ್ಷಿಸಲು ಪ್ರಸಾರ ಹೆಚ್ಚಿಸಿಕೊಳ್ಳಬೇಕು, ಪ್ರಸಾರ ಹೆಚ್ಚಿಸಿಕೊಳ್ಳುವುದೆಂದರೆ ನಷ್ಟದ ಪ್ರಮಾಣ ಹಿಗ್ಗಿಸಿಕೊಳ್ಳುವುದು! ಇಂತಹ ಹಗ್ಗದ ಮೇಲಿನ ನಡಿಗೆಗೆ ಹೊರತಾದ ಅನೇಕ ಅನೈತಿಕ ಪತ್ರಿಕೋದ್ಯಮ ಮಾದರಿಗಳಿವೆ; ಅಧಿಕಾರಸ್ಥರ ಓಲೈಕೆ, ವೋಚರ್ ಪ್ರತಿಗಳ ಮುದ್ರಣ, ವಸೂಲಿ ದಂಧೆ… ಇತ್ಯಾದಿ.

ಈ ಎಲ್ಲಾ ಸಿದ್ಧ ಮಾದರಿಗಳನ್ನು ಬದಿಗಿಟ್ಟು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸದೊಂದು ಮಾರ್ಗ ಹುಡುಕಲು ನಿಮ್ಮ ಸಮಾಜಮುಖಿ ಮುಂದಾಗಿದೆ. ಅದುವೇ ‘ಸ್ವತಂತ್ರ ಪತ್ರಿಕೋದ್ಯಮ’. ಇದು ಇವತ್ತಿನ ಅಗತ್ಯಕ್ಕೆ ತಕ್ಕ ನಿರ್ಭೀತ, ಉದಾರವಾದಿ ಹಾಗೂ ಅಭಿವೃದ್ಧಿಪರ ಮಾದರಿ. ಕನ್ನಡ ಭಾಷೆ ಹಾಗೂ ಸಂಸ್ಕೃತಿಗೆ ಮಿಡಿಯುವ ಮತ್ತು ಕನ್ನಡಿಗರು ಉದ್ಯೋಗ-ಜೀವನ ಕಟ್ಟಿಕೊಳ್ಳಲು ಬೇಕಿರುವ ಮಧ್ಯಮಮಾರ್ಗದ ದಿಕ್ಕುದೆಸೆಯನ್ನು ಸ್ಪಷ್ಟವಾಗಿ ತಿಳಿಹೇಳುವ ಜವಾಬ್ದಾರಿಯನ್ನೂ ಹೆಗಲ ಮೇಲೇರಿಸಿಕೊಂಡಿದೆ. ಇನ್ನೊಂದು ಅರ್ಥದಲ್ಲಿ ಇದು ಕನ್ನಡಿಗ ಓದುಗರ, ಓದುಗರಿಂದ, ಓದುಗರಿಗಾಗಿ ರೂಪುಗೊಂಡ ಪತ್ರಿಕೋದ್ಯಮವಾಗಿದೆ. ಇಲ್ಲಿ ಓದುಗರು ಕೇವಲ ಗ್ರಾಹಕರಲ್ಲ; ಹಣನೀಡುವÀ ಮಾಲೀಕರು, ತಿದ್ದುವ ಗುರುಗಳು, ಮಿಡಿಯುವ ಹಿತೈಷಿ, ಜೊತೆಗೆ ನಡೆಯುವ ಸಂಗಾತಿ.

 

ನೀವೇನು ಮಾಡಬಹುದು?

ನೀವು ಸಮಾಜಮುಖಿಯ ಒಂಚೂರು ಆರ್ಥಿಕ ಹೊರೆ ಹಂಚಿಕೊಂಡು ಸ್ವತಂತ್ರ ಪತ್ರಿಕೋದ್ಯಮ ಬೆಂಬಲಿಸಬೇಕು, ಸಹಭಾಗಿಗಳಾಗಬೇಕು. ನಿಮ್ಮ ಇತಿಮಿತಿ, ಶಕ್ತಿಸಾಮರ್ಥ್ಯಕ್ಕೆ ಅನುಗುಣವಾಗಿ ಪತ್ರಿಕೆಗೆ ಪುಟ್ಟ ಹಣಕಾಸಿನ ಸಹಾಯ ನೀಡಲು ನಮ್ಮ ಕೋರಿಕೆ. ಇದು ದೇಣಿಗೆಯ ಅರ್ಥವ್ಯಾಪ್ತಿ ಮೀರಿದ ವಿಶಾಲ ಕೊಡುಗೆ. ನೀವು ನೀಡುವ ನೆರವಿನ ‘ಹನಿ’ಗಳು ಒಟ್ಟುಗೂಡಿ ‘ಹಳ್ಳ’ವಾಗುವುದು ಅಸಾಧ್ಯವಲ್ಲ. ಕನಿಷ್ಠ ರೂ.100 ರಿಂದ ಗರಿಷ್ಠ ರೂ.20,000 ರವರೆಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಒಮ್ಮೆ ಅಥವಾ ಪ್ರತಿತಿಂಗಳು/ಪ್ರತಿವರ್ಷ ನೀಡುವ ಮೂಲಕ ಸ್ವತಂತ್ರ ಪತ್ರಿಕೋದ್ಯಮಕ್ಕೆ ಕೈಜೋಡಿಸಬಹುದು: ಸಮಾಜಮುಖಿ ಪ್ರಕಾಶನ ಪ್ರೈ. ಲಿ., ಬ್ಯಾಂಕ್: SBI, ಸುಧಾಮನಗರ ಶಾಖೆ, ಬೆಂಗಳೂರು. ಖಾತೆ ಸಂಖ್ಯೆ: 37262378162

Leave a Reply

Your email address will not be published.