ಪ್ರೇರಣೆಯಾದ ಚಿನ್ನಿ-ದಾಂಡು

– ಕೆ.ವಿ.ಪರಮೇಶ್

ಚಿನ್ನಿ-ದಾಂಡು ಆಟದಲ್ಲಿ ಆಟಗಾರರಿಗೆ ದೈಹಿಕ ಸಾಮಥ್ರ್ಯದೊಂದಿಗೆ ಅಳತೆ ಮೂಲಕ ಅಂಕಿಸಂಖ್ಯೆಯ ಕಲಿಕೆಯೂ ಸಾಧ್ಯ. ಜೊತೆಗೆ ಹೋರಾಟದ ಮನೋಭಾವವೂ ಲಭ್ಯ. ಹಾಗಾಗಿಯೇ ನಮ್ಮ ಪೂರ್ವಿಕರು ಗ್ರಾಮೀಣ ಭಾಗದಲ್ಲಿ ಇಂತಹ ಮಹತ್ವಪೂರ್ಣ ಆಟವನ್ನು ಯುವಕರಿಗೆ ಪರಿಚಯಿಸಿದ್ದಾರೆ.

ಪ್ರಸ್ತುತ ಜನಪ್ರಿಯ ಎನಿಸಿರುವ ಹಲವು ಕ್ರೀಡೆಗಳಿಗೆ ನಮ್ಮ ಜನಪದ ಕ್ರೀಡೆಗಳೇ ಪ್ರೇರಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ಕಾಲಕ್ರಮೇಣ ಜನಪದ ಕ್ರೀಡೆಗಳ ರೂಪಾಂತರವೇ ಆಧುನಿಕ ಕ್ರೀಡೆ ಎಂದರೂ ಅತಿಶಯೋಕ್ತಿಯಲ್ಲ. ಈ ನಿಟ್ಟಿನಲ್ಲಿ ಪ್ರಧಾನ ಸ್ಥಾನದಲ್ಲಿ ನಿಲ್ಲುವುದು ಚಿನ್ನಿ-ದಾಂಡು. ಯಾವುದೇ ದುಬಾರಿ ವೆಚ್ಚದ ಪರಿಕರಗಳಿಲ್ಲದೆ ಹಾಗೂ ಎಲ್ಲಂದರಲ್ಲಿ ಆಡಬಹುದಾದ ಈ ಚಿನ್ನಿ-ದಾಂಡು ಹಳ್ಳಿಗಾಡಿನ ವಿಶೇಷ ಆಟಗಳಲ್ಲಿ ಒಂದು. ಈ ಕ್ರೀಡೆ ಹುಟ್ಟಿಕೊಂಡ ಬಗ್ಗೆ ಹಲವು ವಿಶೇಷತೆಗಳಿವೆ. ಆದರೆ ಯಾವುದು ಮೂಲ ಎಂಬುದರ ಬಗ್ಗೆ ಇಂದಿಗೂ ಗೊಂದಲವಿದೆ.

ಪೌರಾಣಿಕ ಹಿನ್ನೆಲೆ

ಮಹಾಭಾರತ ಹಾಗೂ ರಾಮಾಯಣ ಮಹಾಕಾವ್ಯಗಳಲ್ಲೂ ಈ ಚಿನ್ನಿ-ದಾಂಡು ಆಟ ಆಡಿರುವ ಬಗ್ಗೆ ಉಲ್ಲೇಖವಿದೆ. ಶ್ರೀರಾಮನ ಪುತ್ರರಾದ ಲವ-ಕುಶ ಸೋದರರು ತಮ್ಮ ಬಾಲ್ಯದಲ್ಲಿ ಹಾಗೂ ಗುರುಕುಲದಲ್ಲಿ ಕಲಿಕೆಯ ವೇಳೆ ಈ ಚಿನ್ನಿ-ದಾಂಡು ಆಟಕ್ಕೆ ಮನಸೋತಿದ್ದರು ಎನ್ನುತ್ತದೆ ಐತಿಹ್ಯ. ಮತ್ತೊಂದೆಡೆ ಈ ಚಿನ್ನಿ-ದಾಂಡು ಹುಟ್ಟಿಕೊಂಡಿದ್ದು ಬಯಲಿನಲ್ಲಿ ದನ ಅಥವಾ ಕುರಿ ಮೇಯಿಸುವ ಮಂದಿಯಿಂದ ಎನ್ನುವುದು ಆಧುಕಿನ ಪುರಾಣದ ಮಾತು. ಅಲ್ಲದೆ ಈ ಆಟವನ್ನು ಅರಸರ ಆಳ್ವಿಕೆಯ ವೇಳೆ ತಮ್ಮ ಮಕ್ಕಳಿಗೆ ಅಂಗಳದಲ್ಲಿಯೇ ಆಡಿಸುವ ಮೂಲಕ ಮನರಂಜಿಸುತ್ತಿದ್ದರು ಎನ್ನುವ ಪ್ರತೀತಿಯೂ ಇದೆ. ಅದೇನಿದ್ದರೂ ಈ ಚಿನ್ನಿ-ದಾಂಡು ನಮ್ಮ ಭಾರತೀಯ ಸನಾತನ ಕ್ರೀಡೆ ಎನ್ನುವ ಬಗ್ಗೆ ಯಾವುದೇ ತಕರಾರಿಲ್ಲ.

ಕ್ರಿಕೆಟ್ ಜನಕ

ಅಷ್ಟಕ್ಕೂ ಈ ಆಟದ ವೈಖರಿ, ರೀತಿ-ರಿವಾಜುಗಳು ಬಹುತೇಕ ಇಂದಿನ ಜನಪ್ರಿಯ ಕ್ರೀಡೆ ಕ್ರಿಕೆಟ್ ಅನ್ನು ಹೋಲುವಂತಾದ್ದು ಎನ್ನುವುದಕ್ಕೆ ಅನೇಕ ನಿದರ್ಶನಗಳಿವೆ. ಗ್ರಾಮ್ಯ ಭಾಗದ ಈ ಆಟದಲ್ಲಿರುವಂತೆ ದಾಂಡು ಹೊಡೆಯುವವ ದಾಂಡಿಗ. ಈವತ್ತಿನ ಕ್ರಿಕೆಟ್ ಬ್ಯಾಟ್ಸ್‍ಮನ್‍ನನ್ನೂ ದಾಂಡಿಗ ಎಂದೇ ಕರೆಯಲಾಗುತ್ತದೆ. ಜೊತೆಗೆ ಕ್ರಿಕೆಟ್‍ನಲ್ಲಿ ಚೆಂಡು ಬಳಸಿದರೆ ಇದರಲ್ಲಿ ಚಿನ್ನಿ (ಎರಡೂ ಬದಿಯಲ್ಲಿ ಚೂಪಾಗಿ ಕೆತ್ತಿದ ಮರದ ತುಂಡು) ಬಳಸಲಾಗುತ್ತದೆ. ಎರಡೂ ಆಟಗಳಲ್ಲಿ ಏಕರೀತಿಯ ಹೊಡೆತ ಮತ್ತು ರನ್ (ಗುಡುಗು) ಪದ್ಧತಿಯಿದೆ. ಜೊತೆಗೆ ಔಟ್ ಎನ್ನುವ ಪದದಲ್ಲಿಯೂ ಉಭಯ ಕ್ರೀಡೆಗಳಲ್ಲಿ ಸಾಮ್ಯ ಇರುವುದು ವಿಶೇಷ. ಆಟಗಾರರ ಸಂಖ್ಯೆಯೂ ಕನಿಷ್ಟ 7 ರಿಂದ ಗರಿಷ್ಟ 11 ಇರುವುದು ನಮ್ಮ ಚಿನ್ನಿ-ದಾಂಡು ಮತ್ತು ಜಂಟಲ್‍ಮನ್ ಗೇಮ್ ಎನ್ನುವ ಕ್ರಿಕೆಟ್ ನಡುವಿನ ಸಿಮಿಲಾರಿಟಿ.

ಗುಡು ಗುಡು ಗುಡುಗು

ಈ ಆಟದಲ್ಲಿ ಮೂರು ಬಗೆಗಳಿವೆ. ಅದರಲ್ಲಿ ಗುಡುಗು ಎನ್ನುವುದು ಸಾಮಾನ್ಯ. ಇದರಲ್ಲಿ ಗುರುತು ಮಾಡಿದ ನಿರ್ದಿಷ್ಟ ಸ್ಥಳದಿಂದ ಪ್ರತ್ಯೇಕ ತಂಡಗಳ ಆಟಗಾರರು ತಮ್ಮ ದಾಂಡುಗಳಿಂದ ಚಿನ್ನಿಯನ್ನು ಹೊಡೆಯುತ್ತಾರೆ. ಹೆಚ್ಚು ದೂರ ಹೊಡೆಯುವ ಆಟಗಾರ ಹೇಳಿದಂತೆ ಚಿನ್ನಿಯನ್ನು ನಿಗಧಿತ ಪಟ್ಟೆ (ಗುರುತು ಮಾಡಿದ ಸ್ಥಳ) ಯತ್ತ ಎಸೆಯಬೇಕು. ಅದು ಎಷ್ಟು ಅಂತರದಲ್ಲಿ ಬೀಳುತ್ತದೆ ಎನ್ನುವುದರ ಮೇಲೆ ಎದುರಾಳಿ ಆಟಗಾರ ಗುಡುಗಬೇಕಾಗುತ್ತದೆ (ಗುಡು ಗುಡು ಎಂದು ಧ್ವನಿ ಮಾಡುತ್ತ ಚಿನ್ನಿಯನ್ನು ಪಟ್ಟೆಯತ್ತ ಕೊಂಡೊಯ್ಯಬೇಕು). ಆತ ಉಸಿರುಬಿಟ್ಟರೆ ಮರು ಪ್ರಯತ್ನ ನಡೆಸಬೇಕು. ಈ ಆಟದಲ್ಲಿ ಇಂತಿಷ್ಟೇ ಆಟಗಾರರು ಒಂದು ತಂಡದಲ್ಲಿರಬೇಕೆಂಬ ನಿಯಮ ಇಲ್ಲ.

ಅಪರೂಪದ ಅಳಗುಣಿ ಆಟ

ಪುರಾತನ ಗ್ರಂಥ ಹಾಗೂ ಮಹಾಕಾವ್ಯಗಳಲ್ಲೂ ಜನಪದ ಕ್ರೀಡೆಗಳ ಬಗ್ಗೆ ಸಾಕಷ್ಟು ಉಲ್ಲೇಖವಿದೆ. ಬಹುತೇಕ ಕ್ರೀಡೆಗಳು ರಾಜಾಶ್ರಯದಲ್ಲಿ ಜನ್ಮ ತಳೆದು ಸಲಹಲ್ಪಟ್ಟರೆ ಕೆಲವು ಆಟಗಳು ಅನಾದಾರಕ್ಕೆ ಸಿಲುಕಿ ನಲುಗಿದ್ದಕ್ಕೂ ನಿದರ್ಶನವಿದೆ. ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಹಲವು ಗ್ರಾಮೀಣ ಕ್ರೀಡೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಇನ್ನೂ ಕೆಲವು ಆಟಕ್ಕೆ ಇತಿಹಾಸ ಎಂಬುದೇ ಇಲ್ಲ ಬದಲಾಗಿ ನಮ್ಮ ಗ್ರಾಮ್ಯ ಪರಂಪರೆಯೋ ಅಥವಾ ಪೂರ್ವಿಕರೇ ಸೃಷ್ಟಿಸಿದ್ದೂ ಇದೆ. ಇಂತಹ ಕ್ರೀಡೆಗಳು ಈವತ್ತಿಗೂ ನಮ್ಮ ನಡುವೆ ಅಜರಾಮರ ಎನ್ನಬಹುದು. ಹಾಗಿದ್ದೂ ಆಧುನಿಕತೆಯ ಭರಾಟೆಗೆ ಸಿಲುಕಿ ಬಹುತೇಕ ಜನಪದ ಸೊಗಡಿನ ಕ್ರೀಡೆಗಳು ನಿರ್ಲಕ್ಷಿಸಲ್ಪಡುತ್ತಿವೆ. ಈ ಸಾಲಿನಲ್ಲಿರುವ ಇನ್ನೊಂದು ಗ್ರಾಮೀಣ ಆಟ ಅಳಗುಣಿ.

ಅಳಗುಣಿ ಅಥವಾ ಅಳಗುಳಿ ಅಥವಾ ಪತ್ತಾಮಣಿ ಹೀಗೆ ಭಿನ್ನ ಹೆಸರುಗಳಲ್ಲಿ ಈ ಆಟ ಗುರುತಿಸಲ್ಪಟ್ಟಿದೆ. ವಿಶೇಷವೆಂದರೆ ಕಾಂಬೋಡಿಯಾ ದೇಶದ ಬುಡಕಟ್ಟು ಜನಾಂಗ ರಿಜ್ಜು ಸಮುದಾಯ ಅಳಗುಣಿ ಆಟ ಆಡುತ್ತಿತ್ತಂತೆ. ಬಯಲು ಪ್ರದೇಶದ ನಿರ್ದಿಷ್ಟ ಜಾಗದಲ್ಲಿ ಒಂದಡಿಗೆ ಒಂದರಂತೆ ಗುಂಡಿಗಳನ್ನು ಎರಡು ಸಾಲಿನಲ್ಲಿ 16 ಗುಂಡಿಗಳನ್ನು ನಿರ್ರ್ಮಿಸಲಾಗುತ್ತಿತ್ತು. ಬಳಿಕ ದೊಡ್ಡ ಗಾತ್ರದ ಕಲ್ಲುಗಳನ್ನು ಪತ್ತಾಗಳೆಂದು ಬಳಸಲಾಗುತ್ತಿತ್ತು ಎನ್ನುವುದಕ್ಕೆ ಐತಿಹ್ಯವಿದೆ. ಒಂದು ಬದಿಯಲ್ಲಿ ಒಬ್ಬೊಬ್ಬರು ನಿಂತು ಈ ಗುಂಡಿಗಳಿಗೆ ಪತ್ತಾ (ಕಲ್ಲು) ಗಳನ್ನು ಹಾಕಿಕೊಂಡು ಹೋಗಬೇಕಿತ್ತು. ಅದು ಮುಗಿದ ಬಳಿಕ ಆ ಗುಂಡಿಯಲ್ಲಿದ್ದ ಕಲ್ಲುಗಳನ್ನು ಮುಂದುವರೆಸಿಕೊಂಡು ಹೋಗುವುದು ವಾಡಿಕೆ. ಅದರಲ್ಲೂ ಅಲ್ಲಿನ ಬುಡಕಟ್ಟು ಜನರ ಹಬ್ಬಹರಿದಿನಗಳಲ್ಲಿ ಆಟದ್ದೇ ವಿಶೇಷ.

ಆದರೆ ಭಾರತಕ್ಕೆ ಈ ಆಟ ಹೇಗೆ ಬಂತು ಎನ್ನುವುದಕ್ಕಿಂತ ನಮ್ಮ ಜೈಮಿನಿ ಭಾರತದಲ್ಲಿ ಉಲೇಖಿಸಿರುವಂತೆ ಬಹುತೇಕ ಜನಪದ ಕ್ರೀಡೆಗಳಿಗೆ ದಕ್ಷಿಣ ಭಾರತವೇ ಮಾತೃಭೂಮಿ ಎನ್ನುವುದು ವಿಶೇಷ. ಅದರಲ್ಲೂ ಮೈಸೂರು ಮತ್ತು ಮದ್ರಾಸ್ ಪ್ರಾಂತ್ಯದ ಆಳ್ವಿಕೆಯಲ್ಲಿ ಕ್ರೀಡೆಗಳನ್ನು ಹೆಚ್ಚಿನ ರೀತಿಯಲ್ಲಿ ಉತ್ತೇಜಿಸುತ್ತಿದ್ದರು ಎನ್ನುವುದರಲ್ಲಿ ಅನುಮಾನ ಇಲ್ಲ. ಹಾಗಾಗಿಯೇ ಕೆಲವು ಆಟಗಳು ರಾಜಾಶ್ರಯದಿಂದಲೇ ಪ್ರವರ್ಧಮಾನಕ್ಕೆ ಬಂದಿವೆ. ಇದರಲ್ಲಿ ಅಳಗುಣಿಯೂ ಇದ್ದಿರಬಹುದು ಎನ್ನಬಹುದು. ಒಂದೊಂದು ಆಟಕ್ಕೂ ಒಂದೊಂದು ಹಿನ್ನೆಲೆಯಿದೆ. ಈ ಅಳಗುಣಿಯ ವಿಶೇಷ ಎಂದರೆ ಗ್ರಾಮೀಣ ಪ್ರದೇಶದ ಲೆಕ್ಕಾಚಾರ ಎನ್ನುವುದು. ಚಿಕ್ಕಮಕ್ಕಳಿಗೆ ಲೆಕ್ಕದಲ್ಲಿ (ಕೂಡುವುದು-ಕಳೆಯುವುದು) ಚತುರತೆ ಮೂಡಲಿ. ಮನೆಯಲ್ಲೇ ಪಾಠಶಾಲೆ ಆಗಲಿ ಎನ್ನುವ ಉದ್ದೇಶದಿಂದಲೇ ಇಂತಹ ಆಟಗಳು ಹುಟ್ಟಿಕೊಂಡಿವೆ ಎನ್ನಲು ಅಡ್ಡಿಯಿಲ್ಲ. ನಮ್ಮಲ್ಲಿ ಈವತ್ತಿಗೂ ಹಳೇ ಕಾಲದ ಮನೆಗಳಲ್ಲಿ ಈ ಆಟಕ್ಕೆಂದೇ ಪ್ರತ್ಯೇಕ ಸಾಂಪ್ರದಾಯಿಕ ಮಣೆ (ಮರದಲ್ಲಿ ಗುಣಿಗಳನ್ನು ಕೊರೆದು ಮಾಡಲಾಗುತ್ತದೆ) ಕಾಣಸಿಗುತ್ತದೆ.

ಲೆಕ್ಕ ಕಲಿಕೆಗೂ ಗುರು

ಮತ್ತೊಂದು ಬಗೆ ಸಂಪೂರ್ಣ ಕ್ರಿಕೆಟ್‍ಗೆ ಹೋಲುವಂತಾದ್ದು. ಇಲ್ಲಿ ಗುಂಡಿಯಲ್ಲಿ ಇಟ್ಟು ಚಿನ್ನಿಯನ್ನು ದಾಂಡಿನಿಂದ ಹೊಡೆಯಲಾಗುತ್ತದೆ. ಎದುರಾಳಿ ತಂಡದವರು ಅದನ್ನು ಕ್ಯಾಚ್ ಹಿಡಿದರೆ ಹೊಡೆದವ ಔಟ್. ಜೊತೆಗೆ ಬೇರೊಬ್ಬ ದಾಂಡಿಗನಿಗೆ ಅವಕಾಶ. ಹೀಗೆ ಎಂಟರಿಂದ ಹತ್ತು ಮಂದಿ ಒಂದು ತಂಡದಲ್ಲಿ ಆಡುತ್ತಾರೆ. ಒಂದು ವೇಳೆ ಚಿನ್ನಿಯನ್ನು ರಭಸವಾಗಿ ಎಷ್ಟು ದೂರಕ್ಕೆ ಹೊಡೆಯುತ್ತಾರೆಯೋ ಅಲ್ಲಿಂದ ಎದುರಾಳಿ ತಂಡದ ಆಟಗಾರ ಗುಂಡಿಯತ್ತ ಚಿನ್ನಿಯನ್ನು ಎಸೆಯುತ್ತಾನೆ. ಅದು ಗುಂಡಿಯಿಂದ ಎಷ್ಟು ದೂರಕ್ಕೆ ಬೀಳುತ್ತದೆ ಎನ್ನುವುದರ ಮೇಲೇ ಅಲ್ಲಿಂದ ಅಳತೆ (ದಾಂಡಿನಿಂದ ಗಜದ ಲೆಕ್ಕ) ಮಾಡಲಾಗುತ್ತದೆ. ಹೆಚ್ಚು ಸಂಖ್ಯೆ ಯಾವ ತಂಡಕ್ಕೆ ಬರುತ್ತದೆಯೋ ಆವರು ಗೆದ್ದಂತೆ. ಇದರಲ್ಲಿ ತಪಾಕಿ ಎನ್ನುವ ಇನ್ನೊಂದು ರೀತಿಯಿದೆ. ಇದರಲ್ಲಿ ದಾಂಡಿನ ಬದಲಾಗಿ ಚಿನ್ನಿಯಿಂದ ದೂರವನ್ನು ಅಳೆಯಲಾಗುತ್ತದೆ.

ಆಟ ಸಂಸ್ಕೃತಿಯ ಅಂಗ

ಚಿನ್ನಿ-ದಾಂಡು ಆಟದಲ್ಲಿ ಆಟಗಾರರಿಗೆ ದೈಹಿಕ ಸಾಮಥ್ರ್ಯ ದೊಂದಿಗೆ ಅಳತೆ ಮೂಲಕ ಅಂಕಿಸಂಖ್ಯೆಯ ಕಲಿಕೆಯೂ ಸಾಧ್ಯ. ಜೊತೆಗೆ ಹೋರಾಟದ ಮನೋಭಾವವೂ ಲಭ್ಯ. ಹಾಗಾಗಿಯೇ ನಮ್ಮ ಪೂರ್ವಿಕರು ಗ್ರಾಮೀಣ ಭಾಗದಲ್ಲಿ ಇಂತಹ ಮಹತ್ವಪೂರ್ಣ ಆಟವನ್ನು ಯುವಕರಿಗೆ ಪರಿಚಯಿಸಿದ್ದಾರೆ. ದುರದೃಷ್ಟವೆಂದರೆ ವಿಶ್ವವಿಖ್ಯಾತ ಕ್ರಿಕೆಟ್‍ಗೆ ಈ ಆಟವೇ ಒಂದು ರೀತಿಯಲ್ಲಿ ಪ್ರೇರಣೆ ಎನಿಸಿದರೂ ಆದಕ್ಕೆ ಸಿಕ್ಕ ಮಹತ್ವ ಅಥವಾ ಉತ್ತೇಜನ ಅಪ್ಪಟ ಹಳ್ಳಿಗಾಡಿನ ಈ ಆಟಕ್ಕೆ ಸಿಕ್ಕಿಲ್ಲ. ಹಾಗೆಂದು ಈ ಆಟ ಪೂರ್ಣ ಪ್ರಮಾಣದಲ್ಲಿ ಅವಸಾನವನ್ನೂ ಕಂಡಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸಂಜೆ ವೇಳೆ ಅಲ್ಲಲ್ಲಿ ಚಿನ್ನಿ-ದಾಂಡು ಆಟ ಕಾಣಸಿಗುತ್ತದೆ.

ಇತ್ತೀಚೆಗೆ ಕೆಲವು ಸಂಘಟನೆಗಳು ಇಂತಹ ಜನಪದ ಕ್ರೀಡೆಗಳನ್ನು ಉತ್ತೇಜಿಸಲೆಂದೇ ಅಂತರ್‍ಗ್ರಾಮ ಮಟ್ಟದಲ್ಲಿ ಟೂರ್ನಿ ಆಯೋಜಿಸುತ್ತಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಜನಪದ ಕ್ರೀಡೆಗಳು ನಮ್ಮ ಸಂಸ್ಕøತಿಯ ಅಂಗವೂ ಹೌದು. ಹಾಗಾಗಿಯೇ ನಮ್ಮ ಬದುಕಿನೊಂದಿಗೆ ಅವುಗಳನ್ನು ಮಿಳಿತ ಮಾಡಿಕೊಂಡಲ್ಲಿ ಭವಿಷ್ಯದಲ್ಲಿ ಈ ಆಟಗಳು ಗೋಡೆ ಮೇಲಿನ ಪುಸ್ತಕಪಟ ಆಗುವುದನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಜನಪದ ಇಲ್ಲವೇ ಗ್ರಾಮೀಣ ಕ್ರೀಡೆಗಳನ್ನು ಸಂರಕ್ಷಿಸುವ ಪ್ರಯತ್ನ ಆಡುವ ಮಂದಿಯ ಜತೆ ಆಳುವವರಿಂದಲೂ ಆಗಬೇಕಿದೆ.

Leave a Reply

Your email address will not be published.