ಪ್ಲವಂಗ ಸಂವತ್ಸರ… ನಿರೀಕ್ಷೆಯ ಸಾಗರ

-ಲಕ್ಷ್ಮೀಶ್ ಸೋಂದಾ

ಶಾರ್ವರಿ ಸಂವತ್ಸರ ಜಗತ್ತು ಹಿಂದೆಂದೂ ಕಂಡರಿಯದಂತಹ ತಲ್ಲಣ, ದುರಂತಗಳನ್ನ ತಂದು ಮನುಕುಲದ ಮಾರಣಹೋಮಕ್ಕೆ ಮಹಾಸಾಕ್ಷಿಯಾಗಿದ್ದು ಮರೆಯಲಾಗದ, ಆದರೂ ಮರೆಯಲೇಬೇಕಾದ ಮಹಾಸತ್ಯ! ಮನುಷ್ಯನ ಸ್ವಯಂಕೃತ ಅಪರಾಧಕ್ಕೆ ಬೆಲೆತೆತ್ತ ಮೂರ್ತ ಸಂಕಟ ಕೋವಿಡ್ ರೂಪದಲ್ಲಿ ಒಕ್ಕರಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಕಂಗೆಡಿಸಿ, ಜಗತ್ತಿನ ವ್ಯವಸ್ಥೆಯ ಸ್ವರೂಪಗಳನ್ನೆಲ್ಲಾ ಕುಲಗೆಡಿಸಿ, ಎಚ್ಚರಿಕೆಯ ಗಂಟೆಯೊಂದನ್ನು ಬಾರಿಸಿ ತನ್ನ ವಿಕ್ರಮವನ್ನೆಲ್ಲ ತೋರಿಸಿ ಸಂವತ್ಸರದ ಮುಕ್ತಾಯಕ್ಕೆ ಮಾಯವಾಗುತ್ತಿರುವುದು ಒಂದೆಡೆ ಸಂತಸದ ಸಂಗತಿ.

ಮುಂದಿನ ಸಂವತ್ಸರ ಪ್ಲವಂಗ ಸಂವತ್ಸರ. ಪ್ಲವಂಗ ಎಂದರೆ ಹಾರುವುದು ಎಂದರ್ಥ, ಅಂದರೆ ಉತ್ತುಂಗಕ್ಕೇರು ಎಂದೂ ಆಗುತ್ತದೆ. ಬರುವ ವರ್ಷದ ಸಕಲರ ಬದುಕು ಉತ್ತುಂಗಕ್ಕೇರಲೆಂಬ ಆಶಯ. ಇನ್ನು ವೈಯಕ್ತಿಕವಾಗಿ ಹೊಸ ವರ್ಷದ ನನ್ನ ನಿರೀಕ್ಷೆಗಳಲ್ಲಿ ಹೊಸತನ ಖಂಡಿತ ಇದೆ. ಹೊಸ ಆಸೆಗಳಿವೆ, ಹೊಸ ಆಶಯಗಳಿವೆ, ಇತಿಹಾಸ ನನ್ನ ನೆಚ್ಚಿನ ಕ್ಷೇತ್ರ. ಒಂದರ್ಥದಲ್ಲಿ ಈ ನಿರೀಕ್ಷೆ ಬಹಳ ಹಳೆಯದೂ ಹೌದು. ಅದು ಇನ್ನೂ ಈಡೇರದಿದ್ದುದರಿಂದ ಜೀವಂತವಾಗಿಯೇ ಇದೆ! ಹೀಗಾಗಿ ಹೊಸ ವರ್ಷದ ನನ್ನ ನಿರೀಕ್ಷೆಯ ಪಟ್ಟಿಯಲ್ಲಿ ಅದೇ ಅಗ್ರಸ್ಥಾನವನ್ನೂ ಪಡೆದಿದೆ.

ಇತಿಹಾಸ ವಿಷಯ ಈಗ ಕೇವಲ ಕಲಾವಿಭಾಗಕ್ಕೆ ಸೀಮಿತವಾಗಿದೆ, ವಾಣಿಜ್ಯಕ್ಕೆ ಆಯ್ಕೆಯ ವಿಷಯವಾಗಿ ಸ್ಥಾನಪಡೆದಿದೆ, ವಿಜ್ಞಾನದ ವಿಭಾಗದವರಿಗೆ ಅದರ ಅಧ್ಯಯನಕ್ಕೆ ಅವಕಾಶವಿಲ್ಲ. ನನ್ನ ಪ್ರಕಾರ ಇತಿಹಾಸದ ಓದು ಪ್ರತಿಯೊಬ್ಬರಿಗೂ ತುಂಬಾ ಅಗತ್ಯ. ಆದರೆ ಆ ಕುರಿತು ಅರಿವಿಲ್ಲದಿರುವುದು ವಿಷಾದನೀಯ. ಹೇಗೆ ವಾಹನವೊಂದಕ್ಕೆ ಹಿಂದಿನ ಚಟುವಟಿಕೆ ಗಮನಿಸಲು “ಮಿರರ್” ಅನಿವಾರ್ಯವೋ ನಮ್ಮ ಬದುಕೆಂಬ ವಾಹನಕ್ಕೆ ಇತಿಹಾಸವೇ ಮಿರರ್! ಹೀಗಾಗಿ ವಿಜ್ಞಾನ ವಿಭಾಗವನ್ನೊಳಗೊಂಡು ಶೈಕ್ಷಣಿಕ ವ್ಯವಸ್ಥೆಯ ಎಲ್ಲ ವಿಭಾಗಕ್ಕೂ ಇತಿಹಾಸ ವಿಷಯ ಕಡ್ಡಾಯವಾಗಬೇಕೆಂಬುದು ನನ್ನ ಬಹುದೊಡ್ಡ ನಿರೀಕ್ಷೆ. ಆ ಕುರಿತು ನಮ್ಮ ಹೋರಾಟ ಸದಾ ಇದ್ದೇ ಇದೆ.

ಇನ್ನು ಎರಡನೇ ನಿರೀಕ್ಷೆ: ಸರ್ಕಾರದ ವತಿಯಿಂದಲೇ ಇತಿಹಾಸ ಕ್ಕೊಂದು ಅಕಾಡೆಮಿಯ ಅಗತ್ಯ ತುಂಬಾ ಇದೆ. ಅಂತಹದ್ದೊಂದು ಅಕಾಡೆಮಿ ಸ್ಥಾಪನೆ ಯಾಗಬೇಕೆಂ ಬುದು ಎರಡನೇ ನಿರೀಕ್ಷೆ. ಹಾಗಾದರೆ ನಿರ್ಲಕ್ಷಿಸಲ್ಪಟ್ಟ ಸ್ಥಳೀಯ ಇತಿಹಾಸಕ್ಕೊಂದು ಚೈತನ್ಯ ನೀಡಿ ಅನೇಕ ಸೃಜನಶೀಲ ಚಟುವಟಿಕೆ ಗಳನ್ನು ಪರಿಣಾಮಕಾರಿಯಾಗಿ ಮಾಡಬಹುದು.

ಮೂರನೇಯದಾಗಿ ನನ್ನ ಬಹುದಿನಗಳ ಕನಸು ನನ್ನ ಊರಿನಲ್ಲಿ ನನ್ನದೇ ಸ್ಥಳದಲ್ಲಿ ಒಂದು ಸ್ಥಳೀಯ ಇತಿಹಾಸಕ್ಕೆ ಸಂಬಂಧಿಸಿ ಕೇಂದ್ರವೊಂದನ್ನು ಸ್ಥಾಪಿಸುವುದು. 2009ರಲ್ಲಿ ಇದೇ ಉದ್ದೇಶದ ಅಡಿಯಲ್ಲಿ “ರಂಗ ಚರಿತ” ಎಂಬ ಚಟುವಟಿಕಾ ಕೂಟವನ್ನು ಸ್ಥಾಪಿಸಿದ್ದೆ. ಆದರೆ ಅದಕ್ಕಿನ್ನೂ ಕೇಂದ್ರವಾಗಿ ಪರಿವರ್ತಿತವಾಗುವ ಸಮಯ ಬರದೇ ಹಾಗೇ ಕೂತಿದೆ. ಅದೊಂದು ನಿರೀಕ್ಷೆ ಹೊಸವರ್ಷದಲ್ಲಿ ಪೂರ್ಣಗೊಳ್ಳುವುದೇ ಎಂದು ನೋಡಬೇಕು.

ನಾಲ್ಕನೇಯದಾಗಿ ಬಹುವರ್ಷಗಳ ನನ್ನ ಆಲೋಚನೆಯಾದ ಐತಿಹಾಸಿಕ ಕಾದಂಬರಿಯೊಂದನ್ನು ಹೊರತರಬೇಕೆನ್ನುವ ಉದ್ದೇಶವನ್ನು ಈಡೇರಿಸಬೇಕಿದೆ. ಸೋದೆಯ ವಿದ್ವಾಂಸ ದೊರೆಯಾದ ಸದಾಶಿವರಾಯನ ಕುರಿತಾದ ಕಾದಂಬರಿ ಈಗಾಗಲೇ ಅರ್ಧಬರೆದಾಗಿದೆ. ಅದನ್ನು ಪೂರ್ಣಗೊಳಿಸಬೇಕಿದೆ. ನಾವು ನಿರೀಕ್ಷೆ ಮಾಡಿದ್ದು ನಡೆಯದಿದ್ದಾಗ ನೋವಾಗುವುದು ಸಹಜ. ಆದರೆ ಪ್ಲವಂಗದ ಕುರಿತಾದ ನಮ್ಮ ನಿರೀಕ್ಷೆ ಹಾಗಾಗದೆ ಈಡೇರಲಿ ಎಂಬ ಆಸೆಯೊಂದಿಗೆ…

Leave a Reply

Your email address will not be published.