ಬಂಗಾರದ ಹೊಳೆ ಹರಿದಾಡಿತ್ತು…

-ಸತ್ಯನಾರಾಯಣರಾವ್ ಅಣತಿ

ಪ್ರದರ್ಶನದಂತೆ ಗೋಚರಿಸುತ್ತಿದ್ದ ಯಾತ್ರಾರ್ಥಿಗಳ ಅಧ್ಯಾತ್ಮಕ್ಕೆ ಕನಿಕರಿಸುತ್ತಾ ಆ ರಾತ್ರಿಯೇ ಟ್ರೆನಿನಲ್ಲಿ ಗಡವಾಲ್ ಬೆಟ್ಟಸಾಲಿಗೆ ಗುಡ್‌ಬೈ ಹೇಳಿದೆ.

ಕೇದಾರ ಬದರಿ ಪರ್ವತ ಪ್ರದೇಶ ಸುತ್ತಿಬಂದು ಹಲವು ವರ್ಷಗಳು ಗತಿಸಿದರೂ ಚಿತ್ರವತ್ತಾಗಿರುವ ಬೆಟ್ಟಸಾಲಿನ ದೃಶ್ಯಗಳು ರೀಲುರೀಲಾಗಿ ತೆರೆದುಕೊಳ್ಳುತ್ತವೆ. ಕಣಿವೆಯಲ್ಲಿ ಜುಳುಜುಳು ನಿನಾದ ಕಿವಿಗಳಲ್ಲಿ ನಿನದಿಸುತ್ತಲೇ ಇದೆ. ಆಗ ಸ್ವಾಮಿರಾಮ್ ಅವರÀ ‘ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ’ ಕೃತಿಯಲ್ಲಿ ಕಾಣಿಸಿರುವ ಹಿಮಾಲಯ ಬೆಟ್ಟಸಾಲಿನಲ್ಲಿ ಮಹಾತ್ಮರು ತಪಸ್ವಿಗಳು ಸಾಧುಸಂತರು, ಅವರ ಅಧ್ಯಾತ್ಮ ಜೀವನ, ವಾಸಿಸುತ್ತಿದ್ದ ಗುಹೆಗಳು, ನಡೆದಾಡಿದ್ದ ತಾಣಗಳನ್ನು ಗಿಡ ಮರ ಬಳ್ಳಿ ಹೂವುಗಳನ್ನು ಬಿಸಿನೀರಿನ ಬುಗ್ಗೆಯನ್ನು ಹುಡುಕುತ್ತಲೇ ಹಿಂತಿರುಗಿದ್ದೆ.

ರೋರಿಚ್ ಅವರ ಹಿಮಾಲಯದ ಕಲಾಕೃತಿಗಳನ್ನು ನೋಡಿ ಆನಂದಿಸಿರುವ ನಮಗೆ ಅಂಥ ದೃಶ್ಯಗಳನ್ನು ನೋಡಲಾಗಲಿಲ್ಲ. ಯಾಕೆಂದರೆ ನಾವು ಹೋದದ್ದು ಹಿಮಪಾತದ ಕಾಲವಲ್ಲದ ಅಕ್ಟೋಬರ್‌ನಲ್ಲಿ.

ನಮ್ಮ ಪ್ರಧಾನಮಂತ್ರಿಗಳಿಗೆAದೇ ಸಿದ್ಧಪಡಿಸಿದ ಗುಹೆಯಲ್ಲಿ ಬೆಚ್ಚನೆ ಬಟ್ಟೆತೊಟ್ಟು, ಶಾಲುಹೊದ್ದು ತಪಸ್ಸುಮಾಡಿದ ದೃಶ್ಯವನ್ನು ಟಿ.ವಿಗಳಲ್ಲಿ ನೋಡಿದವರಿಗೆ ಗುಹೆ ಅಂದರೆ ಇದೇನಾ! ಎನ್ನಿಸಿರಬೇಕಲ್ಲವೆ. ಇಂತಹ ಆಧುನಿಕ ಗುಹೆಯಲ್ಲಿ ತಪಸ್ಸು ಮಾಡಲು ಬಯಸುವ ಯಾತ್ರಾರ್ಥಿಗಳಿಗೆ ಬಾಡಿಗೆಗೆ ಕೊಡುತ್ತಾರೆಂದು ಕೇಳಿದ್ದೇನೆ. ಆದರೆ ಬದರಿಯ ಹತ್ತಿರದ ಮಾನ ಎಂಬ ಹಳ್ಳಿಯಲ್ಲಿನ ವ್ಯಾಸಮಹರ್ಷಿಗಳು ಮಹಾಭಾರತ ರಚಿಸುತ್ತಿದ್ದಾಗ ಬರೆದುಕೊಳ್ಳುತ್ತಿದ್ದ ಗಣೇಶ ವಾಸಿಸುತ್ತಿದ್ದ ಗುಹೆಗಳನ್ನು ನೋಡಲು ಹೋಗಿದ್ದೆವು. ಮೂಲ ಶಿಲೆಯ ಗುಹೆಯ ಮುಂಭಾಗದಲ್ಲಿ ಸಿಮೆಂಟ್ ಮುಖಮಂಟಪ ಕಟ್ಟಿ ಪ್ರಾಕೃತಿಕ ಸ್ವರೂಪವನ್ನು ಅಂದಗೆಡಿಸಿದ್ದಾರೆ. ಪ್ರಕ್ರೃತಿಯನ್ನು ಅಂದಗೆಡಿಸುವುದೇ ಆಧುನಿಕತೆಯ ಸೌಂದರ್ಯಪ್ರಜ್ಞೆಯಲ್ಲವೇ?

ಕೇದಾರ-ಬದರಿಯ ಅನೇಕ ಕಡೆಗಳಲ್ಲಿ ಬಿಸಿನೀರಿನ ಬುಗ್ಗೆಗಳಿವೆ: ರಂಜಕದ ಮೇಲೆ ಹರಿದುಬರುವ ನೀರಿನ ಒರತೆಗಳು. ಹಿಮಾಲಯ ಪರ್ವತ ಪ್ರದೇಶದಲ್ಲಿ ಇಂಥ ಬಿಸಿನೀರಿನ ಕುಂಡಗಳಲ್ಲಿ ನಮ್ಮ ಪ್ರಾಚೀನರು ಬಿಸಿನೀರಿನ ಸ್ನಾನಮಾಡುತ್ತಿದ್ದರಂತೆ. ಬಟ್ಟೆಯ ಗಂಟಿನಲ್ಲಿ ಅದ್ದಿದ ಅಕ್ಕಿಯನ್ನು ಬೇಯಿಸಿದ ಅನ್ನವನ್ನು, ಆಲೂಗಡ್ಡೆಯನ್ನು ಬೇಯಿಸಿ ತಿನ್ನುತ್ತಿದ್ದರಂತೆ. ಇಂಥ ಕುತೂಹಲದ ಬುಗ್ಗೆಗಳನ್ನು ನೋಡಲು ಕೇದಾರದÀ ಗೌರಿಕುಂಡ, ಬದರಿಯ ತಪ್ತ ಕುಂಡಕ್ಕೆ ಹೋದವರು ಇಂದು ಕಾಣುವುದು: ಪ್ರಾಕೃತಿಕ ಬಿಸಿನೀರಿನ ಕುಂಡಗಳಿAದ ಕೊಳವೆಗಳ ಮೂಲಕ ನೀರುಹರಿಸಿ ನಲ್ಲಿಯ ಮೂಲಕ ಸ್ನಾನಕ್ಕೆ ವ್ಯವಸ್ಥೆಮಾಡಿರುವುದು. ನಲ್ಲಿಯಲ್ಲಿ ಬರುವ ಬಿಸಿನೀರಿನ ತೊಟ್ಟಿಯಲ್ಲಿ ಸ್ನಾನಮಾಡಿ ಪುನೀತರಾಗಬೇಕಿದೆ. ಪ್ರಾಕೃತಿಕ ಕುಂಡಗಳಲ್ಲಿ ಮೀಯುವ ಖುಷಿ ಎಲ್ಲಿ? ಇವತ್ತಿನ ನಲ್ಲಿಯ ಮೂಲಕ ಹರಿಸಿದ ನೀರಿನ ಸ್ನಾನದ ಖುಷಿಯಂಥದ್ದು!

ಆದರೂ ಅನುಭವಿಸಿ ಖುಷಿಪಡುವ ದೃಶ್ಯಗಳೂ ಇಲ್ಲದಿಲ್ಲ: ಕೇದಾರನಾಥನ ದರ್ಶನಕ್ಕೆ ನಡೆದೋ, ಕುದುರೆಯ ಮೇಲೋ ಇಲ್ಲಾ ಡೋಲಿಯಲ್ಲಿ ಕುಳಿತು 14 ಕಿ.ಮಿ ಪಯಣಿಸುವಾಗ ಕಾಣುವ ಬೆಳ್ಳಿ ಬೆಟ್ಟ ದೃಶ್ಯ: ‘ಉದರ್ ದೇಖೋ ಸಾಬ್’ ಎಂದ ಡೋಲಿ ಹೊರುವವ ತೋರಿಸಿದ ದೂರದಲ್ಲಿ ಗೋಚರಿಸುತ್ತಿರುವ ಬೆಳ್ಳಿ ಬೆಟ್ಟ ಶಿಖರವನ್ನು ನೋಡಿ ವಿಸ್ಮಿತನಾದೆ. ಕಣ್ಣುಮುಚ್ಚಾಲೆಯಾಡುತ್ತಾ ಕಾಣಿಸುವ ಮುಂಜಾನೆ ಹೊಂಬಿಸಿಲಿಗೆ ಥಳಥಳಿಸುವ ದೂರದ ಬೆಟ್ಟ ನೋಡಿದಷ್ಟೂ ತಣಿಯದ ಕಣ್ಣುಗಳು.

ಅಂತೆಯೇ ಬದರಿ ಧಾಮ್‌ನಲ್ಲಿ ನಾವು ಉಳಿದುಕೊಂಡಿದ್ದ ರೂಮಿನಿಂದ ಮುಂಜಾನೆ ಹೊರಬಂದಾಕ್ಷಣ ಕಾಣಿಸಿದ ನೀಲಕಂಠೇಶ್ವರ ಶಿಖರ: ದೂರದಲ್ಲಿ ಉದಯ ಸೂರ್ಯನ ಹೊಂಗಿರಣ ನೀಲಕಂಠ ಶಿಖರಸಾಲಿನಲ್ಲಿ ಪಸರಿಸುತ್ತಾ ಬೆಳ್ಳಿಬೆಟ್ಟ ಹೊನ್ನಬೆಟ್ಟವಾಗಿ ಕಾಣಿಸುತ್ತಿತ್ತು. ನೋಡುತ್ತಾ ನೋಡುತ್ತಾ ಶಿವದರ್ಶನವಾದಂತಾಯ್ತು.

ಕೇದಾರನಾಥನೆAದರೆ ಗೂಳಿಯ ಹಿಳಿಲಿನ ಆಕಾರದ ಕಲ್ಲುಬಂಡೆಯಷ್ಟೆ: ಪಾಂಡವರು ಸ್ವರ್ಗಕ್ಕೆ ಹೋಗುತ್ತಾ ಶಿವನನ್ನು ಕಾಣಲು ಪ್ರಯತ್ನಿಸಿದಾಗ ದೊಡ್ಡ ಗೂಳಿಯ ರೂಪದಲ್ಲಿ ಶಿವ ಕಣ್ಣುಮುಚ್ಚಾಲೆ ಆಡಿಸುತ್ತಿದ್ದಾಗ, ಭೀಮ ಗೂಳಿಯನ್ನು ಹಿಡಿದು ನಿಲ್ಲಿಸಿ ಅದುಮಿದನಂತೆ. ಗೂಳಿ ಭೂಮಿಯೊಳಗೆ ಮಾಯವಾಗಿ ಹಿಳಿಲಿನಾಕಾರದ ಬಂಡೆಯ ರೂಪದಲ್ಲಿ ಕಾಣಿಸಿಕೊಂಡದ್ದೇ ಕೇದಾರೇಶ್ವರನಾಗಿ ಭಕ್ತರಿಗೆ ಯಾತ್ರಾಸ್ಥಳವಾಗಿರುವುದು. ನಂತರ ಬದರೀನಾಥನ ದರ್ಶನ. ಮೂಲ ವಿಗ್ರಹ ಕಾಣಲಾರದಷ್ಟು ಅಲಂಕಾರ.

ಹೀಗೆಲ್ಲಾ ವಿಜೃಂಭಿಸುತ್ತಿರುವ ಬದರೀನಾಥನಿಗೆ ಒಂದು ನಮಸ್ಕಾರ ಹಾಕಿ ಹೊರಬಂದೆವು. ಮೆಟ್ಟಲಿಳಿದು ಬಂದರೆ ಭಕ್ತರಿಗೆ ಬೇಕಾದ ಪ್ರಸಾದ ಇತರ ಪೂಜಾಸಾಮಗ್ರಿಗಳು, ಹೆಣ್ಣಮಕ್ಕಳ ಅಲಂಕರಣ ವಸ್ತುಗಳನ್ನು ಮಾರುವ ಅಂಗಡಿಗಳು. ಕೊಳ್ಳುವÀ ಭಕ್ತರಿಗೆಲ್ಲಾ ಚಿಲ್ಲರೆ ಇಲ್ಲವೆನ್ನುತ್ತಾ, ಎದುರಿಗೆ ಕುಳಿತ ಗೋಸಾಯಿ ಭಿಕ್ಷಕರಲ್ಲಿ ಚಿಲ್ಲರೆ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದರು. ಭಿಕ್ಷಕರನ್ನು ‘ಚಿಲ್ಲರ್ ದೇವೋ’ ಅಂತ ಕೇಳಿದರೆ ಸಾಕು, ಎರೆಡೆರಡು ಸಾವಿರ ನೋಟುಗಳಿಗೆ ತಮ್ಮ ಚೀಲದಿಂದ ಚಿಲ್ಲರೆ ನೋಟುಗಳನ್ನು ಎಣಿಸಿ ಎಣಿಸಿ ಕೊಡುತ್ತಿದ್ದರು. ನನಗೆ ಆಶ್ಚರ್ಯವಾಯಿತು. ಗಳಿಸಿದ ಭಿಕ್ಷೆ ಅಷ್ಟೊಂದು! ತಮ್ಮೆಲ್ಲಾ ಖರ್ಚು ಕಳೆದು ಉಳಿದದ್ದು. ನಾವು ಹತ್ತತ್ತು ರೂಪಾಯಿ ಭಿಕ್ಷೆ ಹಾಕಿ ಚಿಲ್ಲರೆ ಪಡೆದು ಪ್ರಸಾದ ಖರೀದಿಸಿ ಸುತ್ತಾಡಿಕೊಂಡು ಬಂದೆವು.

ಬಿಸಿನೀರಿನ ತೊಟ್ಟಿಗಳಲ್ಲಿ ಸ್ನಾನ, ಪೂಜೆ ನಮಸ್ಕಾರ ಭಕ್ತಿಯ ಜೈಕಾರ ಮುಗಿಲು ಮುಟ್ಟುತ್ತಿತ್ತು. ‘ದೇವನಿರವು ಸಟೆಯೋ ದಿಟವೋ/ ಭಕ್ತಿ ಸೋಜಿಗ’, ಪು.ತಿ.ನ. ಪದ್ಯದ ಸಾಲು ನೆನಪಾಯಿತು.

ಮಧ್ಯಾಹ್ನ ಇನ್ನೊಂದು ದಿಕ್ಕಿನ ಕಣಿವೆ ಪ್ರದೇಶದಲ್ಲಿರುವ ‘ಮಾನ’ ಎಂಬ ಹಳ್ಳಿ ನೋಡಲು ಹೋದೆವು: ಕಣಿವೆಯಲ್ಲಿ ಹರಿಯುತ್ತಿರುವ ನದಿ ಬಲಕ್ಕೆ ಎತ್ತರದ ಬೆಟ್ಟ. ನಡುವೆ ಇಕ್ಕಟ್ಟಾದ ಟಾರ್ ರಸ್ತೆಯಲ್ಲಿ 15 ಕಿ.ಮಿ ಪಯಣಿಸಿದೆವು. ಪದರ ಪದರವಾಗಿ ಎತ್ತರಕ್ಕಿರುವ ಬೆಟ್ಟ, ತುದಿಯನ್ನು ತಲುಪಿದರೆ ಇಂಡಿಯಾ ಚೈನಾ ಗಡಿಪ್ರದೇಶ. ರಿಲ್ಯಾಕ್ಸ್ ಆಗಿ ಓಡಾಡುತ್ತಿರುವ ಯೋಧರಿಗೆ ಗೌರವದ ಸೆಲ್ಯೂಟ್ ಮಾಡಿದೆವು. ವ್ಯಾಸಗುಹೆ, ಗಣೇಶನ ಗುಹೆಗಳನ್ನು ನೋಡಿಕೊಂಡು ಇಳಿದು ಬರುತ್ತಿರುವಾಗ ಕಾಣಿಸಿದ್ದು: ರಭಸದಿಂದ ಇಕ್ಕಟ್ಟಾದ ಬಂಡೆೆಗಳ ನಡುವಿನ ಕಿಬ್ಬಿಯಿಂದ ಚಿಮ್ಮುತ್ತಿರುವ ಸರಸ್ವತಿ ನದಿಯ ಉಗಮಸ್ಥಾನದಲ್ಲಿ ಗಡಚಿಕ್ಕುವ ಅಬ್ಬರ.

ವ್ಯಾಸಮಹರ್ಷಿಗಳು ಮಹಾಭಾರತ ರಚಿಸುತ್ತಿದ್ದಾಗ ತಮ್ಮ ಏಕಾಗ್ರತೆಗೆ ಭಂಗವಾಗುತ್ತಿದೆ ಎಂಬ ಕಾರಣಕ್ಕೆ ‘ಗುಪ್ಪಗಾಮಿನಿಯಾಗು’ ಎಂದು ಶಪಿಸಿದರಂತೆ. ಆದ್ದರಿಂದ ಗುಪ್ತಗಾಮಿನಿಯಾದಳೆಂಬ ಪ್ರತೀತಿ. ಸರಸ್ವತಿ ನದಿ ಕಣಿವೆಯ ಇಕ್ಕಟ್ಟಿನ ಕಿಬ್ಬಿಯಲ್ಲಿ ಧುಮಿಕಿ ಹರಿದು ಹೋಗಿ ಮಂದಾಕಿನಿಯನ್ನು ಕೂಡಿಕೊಳ್ಳುವ ‘ದೇವಪ್ರಯಾಗ’. ಮುಂದೆ ಹೋದಂತೆ ಬೇರೆಬೇರೆ ದಿಕ್ಕಿನಿಂದ ಹರಿದುಬರುವ ಅಲಕಾನಂದ ಭಾಗೀರಥಿ ನದಿಗಳು ಕೂಡಿಕೊಳ್ಳುವ ಕರ್ಣಪ್ರಯಾಗ ರುದ್ರಪ್ರಯಾಗಗಳಲ್ಲಿ ಸಂಗಮವಾಗಿ ಹರಿದು ಹೃಶಿಕೇಶ-ಹರಿದ್ವಾರಕ್ಕೆ ಬರುವ ಹೊತ್ತಿಗೆ ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ‘ಗಂಗಾನದಿ’ಯಾಗಿ ಮುಂದೆ ಸಾಗುವುದು.

ಹೀಗೆ ಬೆಟ್ಟ ಗುಡ್ಡ ಕಣಿವೆಗೆ ಹತ್ತಿಕೊಂಡೆ ಸಾಗುವ ಇಕ್ಕಟ್ಟಾದ ರಸ್ತೆಯ ಪ್ರಯಾಣದ ಉದ್ದಕ್ಕು ಗಿರಿಶಿಖರಗಳ ವಿವಿಧ ಆಕೃತಿಗಳನ್ನೂ ನೋಡಿ ಬರಿ ಶಿಲೆಯಲ್ಲ ಈ ಪರ್ವತ ಪ್ರದೇಶ ಕಲಾತ್ಮಕ ಮಂದಿರದAತೆ ಭಾಸವಾಗುತ್ತದೆ. ಇಂಥದ್ದನ್ನೆಲ್ಲಾ ತೋರಿಸುತ್ತಾ ಪರ್ವತ ಪ್ರದೇಶವನ್ನು ಇಳಿದು ನಮ್ಮನ್ನು ತಂದು ಬಿಟ್ಟರು. ಮತ್ತೊಂದು ತಂಗುದಾಣ ‘ಶ್ರೀನಗರ’. (ಕಾಶ್ಮೀರ ಕಣಿವೆಯ ಶ್ರೀನಗರವಲ್ಲ). ಸೂರ್ಯಾಸ್ತದ ವರ್ಣಮಯ ಆಕಾಶ. ಗುಡ್ಡಗಾಡಿನಲ್ಲಿ ಹಕ್ಕಿಗಳ ಇಂಚರವೂ ಸ್ತಬ್ಧವಾಗಿ ಪಸರಿಸುತ್ತಿರುವ ರಾತ್ರಿಯ ಮೌನ. ಕರಿಕಲ್ ಕಣಿವೆಯ ಗಿಡ ಮರ ಸಂದಿಯಲ್ಲಿ ಮಿನುಗುವ ನಕ್ಷತ್ರಗಳು. ಗಾಳಿಯ ಸುಯ್ ನಾದ. ತೇನೆಹಕ್ಕಿಯ ಇಂಚರ. ಮಹಾ ಮೌನವನ್ನು ಹೊದ್ದು ‘ಪಡುವಣ ಕಣಿವೆಯ ನೀರವ ಭಾವ-ಕಣಿವೆಯನಾಳುವ ಕರಿಕಲ್ ಗುಡ್ಡದ -ನಿರ್ಭರ ಮೌನ’-ಭಾವವು ಕಾಯವನಾಂತಿಹ ಮೌನ! / ಮೋಕ್ಷಾನಂದದಿ ಜೀವನ್ಮೌನ! / ಓ- ಕಡುಸೋಜಿಗವೀ ಮೌನ!/ ಚಿನ್ಮೌನ! (ಪು.ತಿ.ನ)

ನಿದ್ದೆಗೆ ಹೋದೆ: ಒಂದುವಾರ ಪರ್ವತಪ್ರದೇಶದ ಬೆಟ್ಟ ಕಣಿವೆಯಲ್ಲಿ ಕಂಡುAಡ ದೃಶ್ಯಗಳÀ ರೀಲು ಬಿಚ್ಚಿಕೊಂಡಿತು. ಕೇದಾರದಲ್ಲಿ ಡೋಲಿಯನ್ನು ಹೊತ್ತ ಶ್ರಮಜೀವಿಗಳ ಬದುಕು, ಪಂಡರ ಪುಂಡಾಟ, ಮಾರುಕಟ್ಟೆಯ ವರ್ಣವೈಭವ, ಬಿಸಿನೀರ ಕುಂಡಗಳೆAಬ ತೊಟ್ಟಿಗಳಲ್ಲಿನ ಸ್ನಾನದೃಶ್ಯ, ತಿಂಡಿತಿನಿಸಿನ ಚಾ ಅಂಗಡಿ… ಬದರಿಯಲ್ಲಿ ಸಾಮಾನು ಸರಂಜಾಮನ್ನು ಹೆಗಲಲಿ ಹೊತ್ತ ಬುಟ್ಟಿಯಲ್ಲಿ ತುಂಬಿಕೊAಡು ನಡುಬಗ್ಗಿ ನಡೆದಾಡುತ್ತಿದ್ದ ಮಹಿಳೆಯರು ಫೋಟೋಗೆ ಫೋಸ್ ಕೊಡಲು ನಾಚುತ್ತಿದ್ದರು. ಒಂದು ಬಂಡೆಯ ಮೇಲೆ ತ್ರಿಶೂಲ ಹಿಡಿದು ತಪಸ್ಸಿನ ಭಂಗಿಯಲ್ಲಿ ಕುಳಿತಿದ್ದ ಬೂದಿಬಡಕ ನಾಗಸಾಧು ಕ್ಲಿಕ್ಕಿಗೆ ಪೋಸ್ ಕೊಟ್ಟು ಕಾಣಿಕೆ ವಸೂಲಿ ಮಾಡಿದ.

ಪದರು ಪದರು ವಿವಿಧಾಕಾರದ ಬಂಡೆ. ಪ್ರಕೃತಿಯ ‘ಮಾನ’ವೇ ಸೌಂದರ್ಯ. ಗುಡಿ ಗೋಪುರಗಳಿಗೆ ಕೈಮುಗಿದು ಪುನೀತರಾಗುತ್ತಿರುವ ಯಾತ್ರಾರ್ಥಿಗಳು. ಗೋಸಾಯಿ ವೇಷದ ಭಿಕ್ಷಕರ ಸಾಲು. ಯಾತ್ರಾಸ್ಥಳದ ಭಕ್ತಿಭಾವ ಪ್ರದರ್ಶನ ದೃಶ್ಯಗಳು. ಸಹ ಪ್ರವಾಸಿಗಳು: ಆರು ವರ್ಷಗಳಿಂದ ಇದೇ ಸಮಯಕ್ಕೆ ಬರುತ್ತಿರುವ ಮೈಸೂರಿನ ಜೋಡಿ. ಚಿಂತಾಮಣಿಯ ರ‍್ಯ ವೈಶ್ಯ ಕುಟುಂಬದ ವ್ಯಾಪಾರಿ ವೃತ್ತಿಯ ಆರೆಂಟು ಮಂದಿ. ದಾರಿಯುದ್ದಕ್ಕೂ ಹಂಚುತ್ತಿದ್ದ ಮುರುಕುಲು, ಖಾರ ಹಚ್ಚಿದ ಅವಲಕ್ಕಿ, ನಿಪ್ಪಟ್ಟು. ಆ ದಂಪತಿಗಳು ಅಲಹಾಬಾದ್ ಸಂಗಮದಲ್ಲಿ ವೇಣಿ ದಾನ ಮಾಡಲೆಂದೇ ಪ್ರವಾಸ ಬಂದವರು. ಇನ್ನಷ್ಟು ದಂಪತಿಗಳು ಕಂಡಕOಡಲ್ಲಿ ಸಿಕ್ಕಸಿಕ್ಕ ವಸ್ತುಗಳನ್ನು ಕೊಂಡು ಮೂಟೆ ಕಟ್ಟಿಕೊಳ್ಳುತ್ತಿದ್ದವರು. ಇಂಥದ್ದೆಲ್ಲಾ ದೃಶ್ಯಗಳು ಮಾಯವಾದವು.

ಮತ್ತೆ ಹಕ್ಕಿ ಇಂಚರ ಕೇಳುತ್ತಾ ಮೈಮುರಿದೆದ್ದು ಬೆಟ್ಟಸಾಲಿನ ‘ಶರತ್ಕಾಲದ ಸೂರ್ಯೋದಯದಲಿ/ ಸವರ್ಗವು ಹೊಮ್ಮಿರೆ ಮರ್ತ್ಯ ಹೃದಯದಲಿ -ಹೊಂಗದರ‍್ಗಳ ಮಳೆ ಸುರಿಸುರಿದಿತ್ತು; ಬಂಗಾರದ ಹೊಳೆ ಹರಿದಾಡಿತ್ತು/ ತಿರೆ ಸ್ವರ್ಗವದಾಯಿತೋ ಎನಿಸೆ! (ಕುವೆಂಪು), ಬೆರಗಲ್ಲಿ ನಮ್ಮ ಪಯಣ ಹೃಶೀಕೇಶ ಕಡೆಗೆ.

ಹೃಶಿಕೇಶದಲ್ಲಿ ಸಾಧುಸಂತರು, ಮಕ್ತಿಗಾಗಿ ಮನೆಬಿಟ್ಟು ಅಲೆಯುತ್ತಿದ್ದ ಹಿರಿಯ ನಾಗರಿಕರು, ಶಾಂತಿ ಅರಸಿ ಮುಕ್ತಿಗಾಗಿ ಬಂದ ಮುಮುಕ್ಷಗಳು, ಪ್ರವಾಸಿಗಳ ದಂಡು ದಂಡು. ರಾಮಜೂಲ ಲಕ್ಷö್ಮಣಜೂಲಾಗಳ ಮೇಲೆ ಗಿಜುಗುಡವ ಯಾತ್ರಾರ್ಥಿಗಳು. ದ್ವಿಚಕ್ರ ವಾಹನ ಸವಾರರು. ಭಕ್ತರ ಭಜನೆ ಮಂತ್ರ ಘೋಷ ಹವನ ಹೋಮ ಇತ್ಯಾದಿಗಳಿಂದ ಗಿಜುಗುಡುತ್ತಿತ್ತು. ಆಧುನಿಕ ಅಧ್ಯಾತ್ಮದ ಭಕ್ತಿ ಶ್ರದ್ಧೆಯ ಸಂತೆಯOತೆ ಗೋಚರಿಸಿತು. ಒಂದೆಡೆ ಸಾಲಾಗಿದ್ದ ಮೂರು ಅರಳಿಮರಗಳು: ತ್ರಿಮೂರ್ತಿUಳೆಂದೇ ಭಕ್ತರು ಭಾವಿಸಿ ಕೈಮುಗಿದು ಅಡ್ಡಬೀಳುತ್ತಿದ್ದರು. ಮರದ ಕೊಂಬೆಗಳಿಗೆ ಕಟ್ಟಿರುವ ಅರಿಶಿಣದ ನೂಲು. ಚಿಕ್ಕಚಿಕ್ಕ ತೊಟ್ಟಿಲು ಇನ್ನು ಎಂತೆOತದೋ. ಮರಗಳ ಸೌಂದರ್ಯ ಹಾರಿಹೋಗಿ ಹರಕೆಯ ಸರಕುಗಳ ಗೋದಾಮಿನಂತೆ ಕಾಣಿಸಿತು.

ಸಂಜೆಯ ಹೊತ್ತಿಗೆ ಹರಿದ್ವಾರ ತಲುಪಿದೆವು. ರಿಲ್ಯಾಕ್ಸ್ ಆಗಿ ಕಾಫಿ ಕುಡಿದು ಧಾವಿಸಿದ್ದು ಗಂಗಾನದಿ ದಡಕ್ಕೆ, ದೀಪಾರತಿಯನ್ನು ನೋಡಲು. ಆಗಲೇ ನೆರೆದಿದ್ದ ಯಾತ್ರಾರ್ಥಿಗಳು ದೀಪಾರತಿ ಬೆಳಗುವ ಕಡೆಗೆ ದೃಷ್ಟಿನೆಟ್ಟು ಸುತ್ತಾಡುತ್ತಿದ್ದರು. ಅಲ್ಲಲ್ಲೇ ತಿಂದೆಸದ ಕವರ್‌ಗಳ ತಿಪ್ಪೆ, ಕೆದಕುತ್ತಿರುವ ನಾಯಿ ಕಾಗೆ, ಪವಿತ್ರÀ ಕ್ಷೇತ್ರದಲ್ಲಿ. ಶುರುವಾಯಿತು ಕಿವಿಗಡಚಿಕ್ಕುವ ಗಂಟೆ ಜಾಗಟೆ ಶಂಖ ಧ್ವನಿ ಭಕ್ತಿಯ ಅಬ್ಬರ (ದೇವರೇನು ಕಿವುಡನೇ?). ಆರತಿಯನ್ನು ಬೆಳಗುತ್ತಿರುವ ಅರೆಬೆತ್ತಲೆ ಪುರೋಹಿತರು. ಒಂದರ್ಧ ಘಂಟೆ ದೀಪಾರತಿಯ ಜೋತಿರ್ಲೋಕ. ಕಿನ್ನರ ಲೋಕವನ್ನೇ ಕಂಡAತೆ ಪರವಶರಾಗಿ ಅರಚುವ ಜನಸಾಗರ. ಶೀಘ್ರ ಮುಕ್ತಿ ಕರುಣಿಸಲು ಯಾತ್ರಾರ್ಥಿಗಳು ಖರೀದಿಸುತ್ತಿದ್ದ ಎಂದೋ ತುಂಬಿಟ್ಟ ಕಿಲುಬಿಡಿದ ತಾಲಿಯ ಗಂಗಾಜಲ. ಗಂಗೆಯ ಶುದ್ಧೀಕರಣ ಪ್ರಾಧಿಕಾರದವರೆಂದು ದೇಣಿಗೆಗೆ ರಶೀದಿ ಬುಕ್ ಹಿಡಿದು ಅಂಗಲಾಚುತ್ತಿದ್ದ ವಾಲಂಟಿಯರುಗಳು.

ಪ್ರದರ್ಶನದಂತೆ ಗೋಚರಿಸುತ್ತಿದ್ದ ಯಾತ್ರಾರ್ಥಿಗಳ ಅಧ್ಯಾತ್ಮಕ್ಕೆ ಕನಿಕರಿಸುತ್ತಾ ಆ ರಾತ್ರಿಯೇ ಟ್ರೆöÊನಿನಲ್ಲಿ ಗಡವಾಲ್ ಬೆಟ್ಟಸಾಲಿಗೆ ಗುಡ್‌ಬೈ ಹೇಳಿದೆ.

 

Leave a Reply

Your email address will not be published.