ಬಂಡವಾಳದ ಬೃಹತ್ ಹೆಚ್ಚಳ ಎಂಬ ಕಣ್ಕಟ್ಟು

ಮೂಲ: ದ ಎಕಾನಾಮಿಕ್ ಟೈಮ್ಸ್

ಅನು: ಟಿ.ಎಸ್.ವೇಣುಗೋಪಾಲ್

ವಿತ್ತ ಮಂತ್ರಿ ನಿರ್ಮಲಾ ಸೀತಾರಾಂ ಅವರು ಈ ವರ್ಷದ ತಮ್ಮ ಬಜೆಟ್ ಅಂದಾಜಿನಲ್ಲಿ ಬಂಡವಾಳ ವೆಚ್ಚವನ್ನು ಶೇಕಡ 34.5ರಷ್ಟು ಹೆಚ್ಚಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದು ಎಷ್ಟು ನಿಜ?

ಇತ್ತೀಚೆಗೆ ಮಂಡಿಸಿದ ಒಕ್ಕೂಟ ಸರ್ಕಾರದ ಬಜೆಟ್ಟಿನಲ್ಲಿ ಬಂಡವಾಳದ ವೆಚ್ಚವನ್ನು (ಕೇಪೆಕ್ಸ್) ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ ಎಂದು ವಿತ್ತ ಮಂತ್ರಿಗಳು ಪ್ರಕಟಿಸಿದ್ದಾರೆ. ಅದನ್ನು ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳಲಾಗಿದೆ. ಅದು ನಿಜವಾಗಿದ್ದರೆ ಹೆಮ್ಮೆ ಪಡಬೇಕಾದ ವಿಷಯವೇ. ಯಾಕೆಂದರೆ ಬಂಡವಾಳದ ವೆಚ್ಚ ನಿಜವಾಗಿ ಉತ್ತಮವಾದ ವಿತ್ತೀಯ ವೆಚ್ಚ ಎಂದು ಅರ್ಥಶಾಸ್ತ್ರ ಹೇಳುತ್ತದೆ. ಅದರಿಂದ ಆರ್ಥಿಕ ಬೆಳವಣಿಗೆÀ ನಿರೀಕ್ಷಿಸಬಹುದು ಎಂಬುದು ಸ್ವೀಕೃತ ಅಭಿಪ್ರಾಯ.  ಆದರೆ ನಿಜವಾಗಿ ಆಗಿದೆಯೇ ಅನ್ನುವುದು ಪ್ರಶ್ನೆ. ಸಂಬಂಧಪಟ್ಟ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿರುವ ಭಾರತ ಸರ್ಕಾರದ ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್‍ಚಂದ್ರ ಗಾರ್ಗ್ ಅವರು ಇಲ್ಲ ಅನ್ನುತ್ತಾರೆ. ಅದೊಂದು ಭ್ರಮೆ ಅನ್ನುತ್ತಾರೆ. ಈ ಬಗ್ಗೆ ತಮ್ಮ ಬ್ಲಾಗಿನಲ್ಲಿ ಇತ್ತೀಚೆಗೆ ಬರೆದಿರುವ ಲೇಖನದಲ್ಲಿ ಈ ಬಗ್ಗೆ ವಿವರವಾಗಿ ವಿಶ್ಲೇಷಿಸಿದ್ದಾರೆ. ಅದರ ಮುಖ್ಯಾಂಶವನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ.

ವಿತ್ತ ಮಂತ್ರಿ ನಿರ್ಮಲಾ ಸೀತಾರಾಂ ಅವರು ಈ ವರ್ಷದ ತಮ್ಮ ಬಜೆಟ್ ಅಂದಾಜಿನಲ್ಲಿ ಬಂಡವಾಳ ವೆಚ್ಚವನ್ನು ಶೇಕಡ 34.5ರಷ್ಟು ಹೆಚ್ಚಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. 2020-21ರಲ್ಲಿ 4.12 ಲಕ್ಷ ಕೋಟಿ ಇದ್ದದ್ದು 2021-22ರಲ್ಲಿ 5.54 ಲಕ್ಷ ಕೋಟಿಯಷ್ಟು ಆಗಿದೆ ಎಂದು ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲ ಸರ್ಕಾರದ 2020-21 ಬಜೆಟ್ಟಿನ ಪರಿಷ್ಕೃತ ಅಂದಾಜು ಕೂಡ 4.39 ಲಕ್ಷ ಕೋಟಿಯಷ್ಟು ಬಂಡವಾಳ ವೆಚ್ಚವಾಗಿದೆ ಎಂದು ಹೇಳುತ್ತದೆ. ಅಂದರೆ ಆ ಅಂದಾಜಿನ ಪ್ರಕಾರ ಬಂಡವಾಳ ವೆಚ್ಚದಲ್ಲಿ ಒಟ್ಟು 27,078 ಕೋಟಿ ರೂಪಾಯಿಯಷ್ಟು ಅಂದರೆ ಶೇಕಡ 6.55ರಷ್ಟು ಹೆಚ್ಚಾಗಿದೆ.

ಇದು ನಿಜಕ್ಕೂ ಶ್ಲಾಘನೀಯವಾದ ವಿಷಯವೆ. ಯಾಕೆಂದರೆ ಕೋವಿಡ್ ಪಿಡುಗಿನಿಂದಾಗಿ ಜಗತ್ತಿನ ಆರ್ಥಿಕತೆಯೇ ತತ್ತರಿಸಿಹೋಗಿತ್ತು. ಜಿಡಿಪಿ ಶೇಕಡ 7.5-9ರವರೆಗೆ ಕಡಿಮೆಯಾಗುತ್ತದೆ ಎಂದು ಎಲ್ಲರೂ ಕಳವಳಗೊಂಡಿದ್ದ ಕಾಲ ಇದು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಇದು ಶುಭ ಸಮಾಚಾರ. ಒಳ್ಳೆಯ ವಿತ್ತೀಯ ನಿರ್ವಹಣೆ ಎಂದು ಹೆಮ್ಮೆ ಪಡಬಹುದಾದ ವಿಷಯ. ಆದರೆ ದುರಾದೃಷ್ಟದ ವಿಷಯವೆಂದರೆ ವಾಸ್ತವದಲ್ಲಿ 4.39 ಲಕ್ಷಕೋಟಿ ರೂಪಾಯಿ ಬಂಡವಾಳ ಸೃಷ್ಟಿಗಾಗಿ ವೆಚ್ಚ ಮಾಡಲಾಗಿಲ್ಲ. ಅದೊಂದು ದೃಷ್ಟಿ ಭ್ರಮೆ.

2020-21ರ ರೈಲ್ವೆಗೆ ಸಂಬಂಧಿಸಿದ ಬಂಡವಾಳ ವೆಚ್ಚವನ್ನು ಗಮನಿಸೋಣ. ರೈಲ್ವೆಗೆ ಸಂಬಂಧಿಸಿದಂತೆ 20-21ರ ಬಜೆಟ್ಟಿನ ಅಂದಾಜಿನ ಪ್ರಕಾರ 70,000 ಕೋಟಿ ರೂಪಾಯಿಗಳಷ್ಟು ಬಂಡವಾಳ ವೆಚ್ಚವನ್ನು ನಿಗದಿಪಡಿಸಲಾಗಿತ್ತು. ಪರಿಷ್ಕೃತ ಅಂದಾಜಿನ ಪ್ರಕಾರ ಅದು 108,398 ಕೋಟಿ ರೂಪಾಯಿಗಳಷ್ಟಾಗಿದೆ. ಅಂದರೆ 38,398 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ. ಆದರೆ ಒಟ್ಟಾರೆ ಬಜೆಟ್ಟಿನಲ್ಲೇ ಬಂಡವಾಳ ವೆಚ್ಚಕ್ಕೆ ಸಂಬಂಧಿಸಿದಂತೆ ಆಗಿರುವ ಹೆಚ್ಚಳ 27,078 ಕೋಟಿ ರೂಪಾಯಿಗಳು. ಅಂದರೆ ಒಟ್ಟಾರೆ ಬಂಡವಾಳ ವೆಚ್ಚ ಕಡಿಮೆಯಾಗಿದೆ. ರೈಲ್ವೆ ಖಾತೆಯಲ್ಲಿ ಅದು ಹೆಚ್ಚಾಗಿದೆ!

ರೈಲ್ವೆಗೆ ಸಂಬಂಧಿಸಿದಂತೆ ಯಾವುದೇ ಬಾಬ್ತಿನಲ್ಲೂ ಅಂದಾಜಿಗಿಂತ ಹೆಚ್ಚು ಖರ್ಚು ಮಾಡಿಲ್ಲ. ಬದಲಾಗಿ ಪ್ರತಿ ಬಾಬ್ತಿನಲ್ಲೂ ಅಂದಾಜಿಗಿಂತ ವೆಚ್ಚ ಕಡಿಮೆಯಾಗಿದೆ. ಹೊಸಮಾರ್ಗ ನಿರ್ಮಾಣಕ್ಕೆ 12,000 ಕೋಟಿ ರೂಪಾಯಿಗಳು ನಿಗದಿಯಾಗಿತ್ತು. ಆದರೆ ನಿಜವಾಗಿ ಖರ್ಚು ಮಾಡಿರುವುದು ಕೇವಲ 929 ಕೋಟಿ ರೂಪಾಯಿಗಳು. ಮಾರ್ಗ ಪರಿವರ್ತನೆಗೆ ನಿಗದಿಯಾಗಿದ್ದು 2250 ಕೋಟಿ. ಆದರೆ ಖರ್ಚಾಗಿದ್ದು ಕೇವಲ 26 ಕೋಟಿ. ಹಳಿಯನ್ನು ನವೀಕರಿಸುವುದಕ್ಕೆ ಮುಡುಪಾಗಿಟ್ಟಿದ್ದ 10599 ಕೋಟಿ ರೂಪಾಯಿಗಳಲ್ಲಿ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ. ಹೀಗೆ ಯಾವ ಬಾಬ್ತನ್ನು ನೋಡಿದರೂ ವೆಚ್ಚಳದಲ್ಲಿ ಹೆಚ್ಚಳವಾಗಿರುವುದು ಕಾಣುವುದಿಲ್ಲ. ಹಾಗಾದರೆ ಈ ವೆಚ್ಚಳದಲ್ಲಿ ಹೆಚ್ಚಳ ಅನ್ನುವುದು ಎಲ್ಲಿಂದ ಬಂತು.

ಕೇಂದ್ರ ಸರ್ಕಾರವು ರೈಲ್ವೆಗೆ ಕೋವಿಡ್ ಸಂಬಂಧಿಸಿದಂತೆ ಆದ ಸಂಪನ್ಮೂಲದಲ್ಲಿ ಆದ ನಷ್ಟವನ್ನು ತುಂಬಿಕೊಳ್ಳಲು 79,398 ಕೋಟಿ ರೂಪಾಯಿಗಳಷ್ಟು ವಿಶೇಷ ಸಾಲವನ್ನು ನೀಡಿತು. ಇದನ್ನು ಬಂಡವಾಳ ವೆಚ್ಚ ಅಂತ ಕರೆಯುವುದಕ್ಕೆ ಸಾಧ್ಯವಿಲ್ಲ. ಇದನ್ನು ರೈಲ್ವೆಯ ಒಟ್ಟು ಬಂಡವಾಳ ವೆಚ್ಚದ ಬಾಬ್ತು 109,398 ಕೋಟಿ ರೂಪಾಯಿಗಳಿಂದ ಕಳೆದು ಹಾಕಿದರೆ ನಿಜವಾಗಿ ಬಂಡವಾಳ ಸೃಷ್ಟಿಗಾಗಿ ಆಗಿರುವ ವೆಚ್ಚ ಕೇವಲ 29,000 ಕೋಟಿ ರೂಪಾಯಿಗಳಷ್ಟೇ.

ಬಜೆಟ್ ದಾಖಲೆಯಲ್ಲಿ 12,000 ಕೋಟಿಯ ಮತ್ತೊಂದು ಸಾಲದ ಬಾಬ್ತನ್ನು ಬಂಡವಾಳ ವೆಚ್ಚದಲ್ಲಿ ಸೇರಿಸಲಾಗಿದೆ. ಅವು ರಾಜ್ಯಗಳಿಗೆ ಬಜೆಟ್ ಬಾಬ್ತಿನಲ್ಲಿ ವರ್ಗಾಯಿಸಿದ ಮೊತ್ತ. ಇವೆರಡು ಖರ್ಚುಗಳನ್ನು ಒಟ್ಟಾರೆ ಬಂಡವಾಳ ವೆಚ್ಚದಲ್ಲಿ ಕಳೆದು ಹಾಕಿದರೆ ಪರಿಷ್ಕೃತ ಅಂದಾಜಿನಲ್ಲಿ ನಿಜವಾಗಿ ಆಗಿರುವ ಬಂಡವಾಳ ವೆಚ್ಚ 64,320 ಕೋಟಿಯಷ್ಟು. ಅಂದರೆ ಶೇಕಡ 15.6ರಷ್ಟು ಕಡಿಮೆಯಾಗುತ್ತದೆ.

ಬಂಡವಾಳ ವೆಚ್ಚದಲ್ಲಿ ಆಗಿರುವ ಕಡಿತವನ್ನು ಎಲ್ಲಾ ಮಂತ್ರಾಲಯ ಹಾಗೂ ವಿಭಾಗಗಳಲ್ಲೂ ಗಮನಿಸಬಹುದು. ಅಣುಶಕ್ತಿಯ ವಿಭಾಗದಲ್ಲಿ ಅದು 9,345 ಕೋಟಿಯಷ್ಟಿತ್ತು. ಈಗ ಅದು 5,962 ಕೋಟಿಗೆ ಇಳಿದಿದೆ. ಉನ್ನತ ಶಿಕ್ಷಣದಲ್ಲಿ ಅದು 2,227 ಕೋಟಿಯಿಂದ ಅದನ್ನು 229 ಕೋಟಿ ರೂಪಾಯಿಗಳಿಗೆ ಇಳಿಸಲಾಗಿದೆ.

ಒಟ್ಟಾರೆಯಾಗಿ ನೋಡುವುದಾದರೆ 2020-21 ಹಣಕಾಸು ವರ್ಷದಲ್ಲಿ ಬಂಡವಾಳ ವೆಚ್ಚದಲ್ಲಿ ಆಗಿರುವ ಹೆಚ್ಚಳ ಕೇವಲ ದೃಷ್ಟಿ ಭ್ರಮೆ ಅಥವಾ ಕಣ್ಕಟ್ಟು. ಹಾಗೆಯೇ 2021-22ನೇ ಸಾಲಿನಲ್ಲಿ ಸೂಚಿಸಲಾಗಿರುವ ಬಂಡವಾಳ ವೆಚ್ಚ ಅತಿಯಾದ ಆಶಾವಾದಕ್ಕಿಂತ ಬೇರೇನೂ ಆಗಿರುವುದಕ್ಕೆ ಸಾಧ್ಯವಿಲ್ಲ.

Leave a Reply

Your email address will not be published.