ಬಂಡೆದ್ದ ರೈತರು… ಮೊಂಡುಬಿದ್ದ ಸರ್ಕಾರ!

-ಡಾ.ಬಿ.ಆರ್.ಮಂಜುನಾಥ

ರೈತರು ತಾವು ಈ ಬಾರಿ ಸೋತರೆ ಅಥವಾ ಸಡಿಲಬಿಟ್ಟರೆ ಸತ್ತಂತೆಯೇ ಎಂದು ಭಾವಿಸಿದ್ದಾರೆ. ಇದು ಯಾವುದೋ ರಾಜಕೀಯ ಪಕ್ಷದ ಅಥವಾ ಶಕ್ತಿಗಳ ಕಾರ್ಯಾಚರಣೆ ಎಂಬುದು ಅಸಂಬದ್ಧ ಅಪ್ರಲಾಪ. ನಿಜವಾದ ಆತಂಕ, ಜನಬೆಂಬಲವಿಲ್ಲದೆ ಲಕ್ಷೋಪಲಕ್ಷ ಜನ ತಿಂಗಳುಗಟ್ಟಲೆ ‘ಸಾಯಲು ಸಿದ್ಧ’ ಎಂದು ರಸ್ತೆಗಿಳಿಯುವುದು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಈಗಾಗಲೇ ಕಾಪೋರೇಟ್‍ಗಳಿಗೆ ಮಾತುಕೊಟ್ಟು ಈಗ ಕಷ್ಟಕ್ಕೆ ಸಿಕ್ಕಿಹಾಕಿಕೊಂಡಂತಿದೆ.

ಎಲೈ ರಾಜತಂತ್ರಜ್ಞರಿರ, ನೀವು ಎಂದೂ

ಮರೆಯದಿರಿ ವೈಭವವೆ ಸುಖವಲ್ಲವೆಂದು

ಸಿರಿಸುತರು ಕಾನೂನುಗಳ ರಚಿಸುತಿಹರು

ಬಡವರದಕೊಳಗಾಗಿ ಗೋಳಾಡುತಿಹರು

ಹಣಗಾರರಾನಂದ ಬಡಜನರ ಗೋಳು

ಕೂಲಿಕಾರರ ರಕುತ ಧನಿಕರಿಗೆ ಕೂಳು

-ಕುವೆಂಪು (ಹಾಳೂರು)

ಹದಿನೆಂಟನೆಯ ಶತಮಾನದ ಇಂಗ್ಲಿಷ್ ಕವಿ ಆಲಿವರ್ ಗೋಲ್ಡ್‍ಸ್ಮಿತ್ ‘ಡೆಸರ್ಟಡ್ ವಿಲೇಜ್’ ಎಂಬ ಅಂದಿನ ವಾಸ್ತವಕ್ಕೆ ಕನ್ನಡಿ ಹಿಡಿಯುವ ಕವನ ಬರೆದಿದ್ದ. ಹಳ್ಳಿಯಲ್ಲಿ ಬದುಕು ಅಸಾಧ್ಯ ಎನಿಸಿದಾಗ ಅಲ್ಲಿನ ಜನ ನಗರಗಳಿಗೆ ಗುಳೆ ಹೋಗುವುದು, ಹಳ್ಳಿ ಹಾಳಾಗುವುದು ಅದರ ವಸ್ತು. ಅದನ್ನೇ ಆಧರಿಸಿ ಕುವೆಂಪು ಕನ್ನಡದಲ್ಲಿ ‘ಹಾಳೂರು’ ಎಂಬ ಕವನವನ್ನು ತಮ್ಮ ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಬರೆದಿದ್ದರು. ಮೇಲೆ ಉದ್ಧರಿಸಿರುವ ಚರಣ ಆ ಕವನದ ಭಾಗ.

ಗೋಲ್ಡ್‍ಸ್ಮಿತ್‍ನ ಮೂಲಕವನದಲ್ಲಿ ಇನ್ನೊಂದು ಕಡೆ ಬರುವ ಸಾಲುಗಳು ಹೀಗಿವೆ: ಬಟ್ ಎ ಬೋಲ್ಡ್ ಪೆಸಂಟ್ರಿ ದೇರ್ ಕಂಟ್ರೀಸ್ ಪ್ರೈಡ್, ಒನ್ಸ್ ಡಿಸ್ಟ್ರಾಯ್ಡ್ ಕ್ಯನ್ ನೆವರ್ ಬಿ ಸಪ್ಲೈಡ್ (ದೇಶದ ಹೆಮ್ಮೆಯಾದ ಧೀರ ರೈತರನ್ನು ಹೊಸಕಿ ಹಾಕಿದರೆ ಅವರು ಮತ್ತೆ ಸಿಗಲಾರರು). ಇವೆಲ್ಲಾ ಈ ಹೊತ್ತು ನೆನಪಾಗುವುದಕ್ಕೆ ಕಾರಣ ಇಷ್ಟೇ; ನಾವಿಲ್ಲಿ ಹಿತವಾದ ಚಳಿಯಲ್ಲಿ ಬೆಚ್ಚಗಿರುವಾಗ ದೆಹಲಿಯ ಬಳಿ ರೈತರು 4 ಡಿಗ್ರಿ ಹವಾಮಾನದ ಕ್ರೂರ ವಾತಾವರಣಯಲ್ಲಿ ಪ್ರತಿಭಟಿಸುತ್ತಿದ್ದಾರೆ. ಈ ಲೇಖನ ಬರೆಯುವ ಹೊತ್ತಿಗೆ 32 ಜನ ಸತ್ತಿದ್ದಾರೆ ಎಂಬ ವರದಿಗಳಿವೆ. ಆದರೆ ಸರ್ಕಾರ ತನ್ನ ನಿಲುವಿನಿಂದ ಕದಲುವ ಲಕ್ಷಣಗಳು ಕಾಣುತ್ತಿಲ್ಲ.

ಹೋಗಲಿ ರೈತರಾದರೂ ಬಗ್ಗುವ ಸಾಧ್ಯತೆ ಇದೆಯೇ? ಅದೂ ಕಾಣುತ್ತಿಲ್ಲ. ಈ ಲೇಖನ ಅಚ್ಚಾಗುವ ವೇಳೆಗೆ ರೈತರು ದೆಹಲಿಯ ಬಳಿ ಬೀಡುಬಿಟ್ಟು ಒಂದು ತಿಂಗಳು ಕಳೆದಿರುತ್ತದೆ. ಅವರಂತೂ ನಾವು ಆರು ತಿಂಗಳ ಹೋರಾಟಕ್ಕೆ ಸಜ್ಜಾಗಿ ಬಂದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ದೇಶದ ರಾಜಧಾನಿ ದೆಹಲಿಯನ್ನು ತಲುಪುವ ಎಲ್ಲ ಹೆದ್ದಾರಿಗಳನ್ನು ಮುಚ್ಚಿದ್ದಾರೆ. ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶದ ರೈತರು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದಾರೆ ಎಂಬುದು ಸತ್ಯವಾದರೂ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಿಂದಲೂ ಗಣನೀಯ ಪ್ರಮಾಣದಲ್ಲಿ ಜನ ಬಂದಿರುವುದು ವಾಸ್ತವ. ದೇಶದ ವಿವಿಧ ಭಾಗಗಳಲ್ಲಿ ರೈತರು ಪ್ರತಿಭಟಿಸುತ್ತಿದ್ದಾರೆ. ದಿಕ್ಕು ಕಳೆದುಕೊಂಡಿದ್ದ ಕರ್ನಾಟಕದ ರೈತ ಚಳವಳಿಗೂ ಈಗ ಒಂದಿಷ್ಟು ಜೀವ ಬಂದಂತಿದೆ.

ಕೇಂದ್ರದ ಹೊಣೆಗೇಡಿತನ

ಸರ್ಕಾರ ತಂದಿರುವ ಮೂರು, ಮತ್ತೊಂದು ಕಾಯ್ದೆಗಳ ವಿರುದ್ಧ ರೈತರ ಆಕ್ರೋಶ ಸ್ಫೋಟಗೊಂಡಿದೆ. ಈ ಕಾಯ್ದೆಗಳು ರೈತನ ಬದುಕನ್ನು ಹಸನು ಮಾಡುತ್ತದೆ ಎಂದು ಹೇಳುವ ಸರ್ಕಾರವು, ಅವರನ್ನು ಕೇಳದೆ ಇದನ್ನು ತರಾತುರಿಯಲ್ಲಿ ಹೇರಲು ಹೊರಟಿರುವುದೇಕೆ? ಇಡೀ ದೇಶ ಕೋವಿಡ್ ಪರಿಸ್ಥಿತಿಯಲ್ಲಿ ತತ್ತರಿಸುತ್ತಿರುವಾಗ, ಜನತೆಯ ಪ್ರತಿಭಟನೆಗೆ ಅವಕಾಶವಿಲ್ಲದಿರುವಾಗ ಇದನ್ನು ತರುವ ಅಗತ್ಯ ಏನಿತ್ತು? ಜೂನ್ ತಿಂಗಳಲ್ಲಿ ಸುಗ್ರೀವಾಜ್ಞೆಯ ಮೂಲಕ ಇದನ್ನು ಏಕೆ ಹೇರಬೇಕಿತ್ತು. ಮತ್ತೆ ಸಂಸತ್‍ನಲ್ಲಿ ಕಾಯಿದೆಯಾಗುವಾಗ ರಾಜ್ಯಸಭೆಯಲ್ಲಿ ಯಾವ ಚರ್ಚೆಗೂ ಅವಕಾಶ ನೀಡದೆ ಧ್ವನಿಮತದ ಮೂಲಕ ಇದನ್ನು ಪಾಸು ಮಾಡಿದ ಕೃತ್ಯದ ಒಳ ಮರ್ಮವೇನು?

ಇದಲ್ಲದೆ ಚಳವಳಿ ಸ್ಫೋಟವಾದ ಮೇಲೆ ಸರ್ಕಾರದ ನಡವಳಿಕೆ ಹೇಗಿದೆ? ಒಂದು ಕಡೆ ಸರ್ಕಾರ ರೈತರು ದೆಹಲಿಯನ್ನೇ ಮುಟ್ಟಬಾರದು ಎಂದು ಹೆದ್ದಾರಿಯಲ್ಲಿ ಹತ್ತು ಅಡಿ ಆಳದ ಕಂದಕಗಳನ್ನು ತೋಡಿತು. ಕೊರೆಯುವ ಚಳಿಯಲ್ಲಿ ಅವರ ಮೇಲೆ ಜಲಫಿರಂಗಿಯ ಮೂಲಕ ತಣ್ಣೀರನ್ನು ಎರಚಿತು. ಚಳವಳಿಗೆ ಕಾರಣ ವಿರೋಧ ಪಕ್ಷಗಳು ಎಂದು ಅಪಪ್ರಚಾರಕ್ಕಿಳಿಯಿತು. ಅವರಲ್ಲಿ ಖಲಿಸ್ತಾನಿ ಉಗ್ರಗಾಮಿಗಳಿದ್ದಾರೆ, ನಕ್ಸಲೈಟರಿದ್ದಾರೆ, ಪ್ರತಿಭಟನೆಯಲ್ಲಿ ಬಂದವರು ರೈತರೇ ಅಲ್ಲ, ಅವರು ತಿಂದುಂಡು ಆರಾಮವಾಗಿರುವ ಜನ ಎಂದು ಮೂದಲಿಸಿತು. ಮಾತುಕತೆಗೆ ಕರೆದು ನಿಧಾನ ವಿಧಾನದ ಮೂಲಕ ಹೋರಾಟವನ್ನು ದುರ್ಬಲಗೊಳಿಸಲು ಯತ್ನಿಸಿತು. ಇಂಥ ಯಾವ ಪ್ರಯತ್ನವೂ ಸರ್ಕಾರಕ್ಕೆ ಶೋಭೆ ತಂದಿಲ್ಲ. ಬದಲಿಗೆ ಕೆನಡಾ, ಇಂಗ್ಲೆಂಡ್ ಮುಂತಾದ ದೇಶಗಳ ನಾಯಕರ ಟೀಕೆಗೆ ಸರ್ಕಾರ ಗುರಿಯಾಗಿದೆ. ವಿದೇಶಗಳಲ್ಲೂ ಪ್ರತಿಭಟನೆ ಆರಂಭವಾಗಿದೆ. ‘ಒಡೆದು ಆಳುವ’ ಸರ್ಕಾರದ ನೀತಿ ಇಲ್ಲಿಯವರೆಗೂ ಫಲನೀಡಿಲ್ಲ.

ಎಂದರೆ, ನಿಜಕ್ಕೂ ರೈತರಿಗೆ ಆತಂಕವಾಗಿದೆ, ಅವರಲ್ಲಿ ಭವಿಷ್ಯದ ಅಭದ್ರತೆ ಕಾಡುತ್ತಿದೆ. ಇದರ ಸಮಗ್ರ ವಿಶ್ಲೇಷಣೆ ಮತ್ತು ಪರಿಹಾರ ಅತ್ಯಗತ್ಯ. ಸರ್ಕಾರ ಬೇರೆಯವರ ಮೇಲೆ ಗೂಬೆ ಕೂಡಿಸಿ ಪ್ರಯೋಜನ ಇಲ್ಲ. ಇನ್ನೊಂದು ಕಡೆ ವಿರೋಧ ಪಕ್ಷಗಳು ಚಳವಳಿಯನ್ನು ಕೇವಲ ತಮ್ಮ ‘ರಾಜಕೀಯ’ ಕಾರಣಕ್ಕೆ ಶೋಷಿಸಲು ಪ್ರಯತ್ನಿಸಿದರೆ ದೇಶಕ್ಕೆ ಉಪಯೋಗವಿಲ್ಲ.

ಕಾಯಿದೆಗಳ ಸ್ಥೂಲ ಚಿತ್ರಣ

ಇಂಗ್ಲಿಷಿನಲ್ಲಿ ಬಹಳ ಉದ್ದುದ್ದ ನಾಮಕರಣವಿರುವ ಈ ಕಾಯಿದೆಗಳನ್ನು ಚಿಕ್ಕದಾಗಿ ಹೆಸರಿಸಬೇಕೆಂದರೆ ಎಪಿಎಂಸಿ ಕುರಿತಾದ ಕಾಯಿದೆ, ಕಾಂಟ್ರಾಕ್ಟ್ ¥sóÁರ್ಮ್‍ನ ಕುರಿತಾದ ಕಾಯಿದೆ ಮತ್ತು ಅಗತ್ಯ ವಸ್ತುಗಳ ಸಂಗ್ರಹ, ವ್ಯಾಪಾರಕ್ಕೆ ಕುರಿತಾದ ಕಾಯಿದೆ ಎನ್ನಬಹುದು.

ಕಾಯಿದೆಗಳನ್ನು ಚರ್ಚಿಸುವ ಮೊದಲು ಎಪಿಎಂಸಿ ಎಂದರೇನು ನೋಡೋಣ. ಅಗ್ರಿಕಲ್ಚರಲ್ ಪ್ರಡ್ಯೂಸ್ ಮಾರ್ಕೆಟಿಂಗ್ ಕಮಿಟಿ ಅಥವಾ ಕೃಷಿ ಉತ್ಪನ್ನ ಮಾರಾಟ ಸಮಿತಿ ಎಂಬ ಈ ಸಂಸ್ಥೆ ಭಾರತದಲ್ಲಿ ಅಸ್ತಿತ್ವಕ್ಕೆ ಬಂದದ್ದು ಸ್ವಾತಂತ್ರ್ಯಾನಂತರ. 1960 ಮತ್ತು 70ರ ದಶಕದಲ್ಲಿ ವಿವಿಧ ರಾಜ್ಯಗಳು ಇವುಗಳನ್ನು ಸ್ಥಾಪಿಸಲು ಕಾನೂನುಗಳನ್ನು ರಚಿಸಿಕೊಂಡವು. ಬ್ರಿಟಿಷರ ಕಾಲದಲ್ಲಿ ಅಗತ್ಯವಸ್ತುಗಳ ಬೆಲೆ ಏರಬಾರದು ಎಂಬ ಕಾಳಜಿ ಮಾತ್ರ ಇತ್ತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ರೈತರನ್ನು ಸ್ಥಳೀಯ ಬಡ್ಡಿ ವ್ಯಾಪಾರಿಗಳಿಂದ, ಮಧ್ಯವರ್ತಿಗಳ ಶೋಷಣೆಯಿಂದ ರಕ್ಷಿಸಬೇಕೆಂಬ ಬೇಡಿಕೆ, ಆಶಯ ಹುಟ್ಟಿಕೊಂಡಿದ್ದರಿಂದ ಈ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು.

ಇದಕ್ಕನುಗುಣವಾಗಿ ಸರ್ಕಾರ ರಚಿಸುವ ಮಾರುಕಟ್ಟೆಗಳಲ್ಲಿ ಅಂಗಡಿಗಳು ಇದ್ದು ಅಲ್ಲಿ ವ್ಯಾಪಾರಿಗಳು, ಏಜೆಂಟರು ಕುಳಿತು ರೈತನಿಂದ ಬೆಳೆಯನ್ನು ಖರೀದಿ ಮಾಡುತ್ತಾರೆ. ಇದಕ್ಕೆ ಅವರು ನೋಂದಾಯಿಸಿಕೊಂಡಿರಬೇಕು. ಇಡೀ ವಹಿವಾಟು ಕಾಯಿದೆಯ ನಿಗಾದಡಿ ನಡೆಯುತ್ತದೆ. ಭತ್ತ ಮತ್ತು ಗೋಧಿ ಸೇರಿದಂತೆ 23 ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ನಿಗದಿ ಪಡಿಸಿರುವುದು ನಂತರದ ಬೆಳವಣಿಗೆ. ಇದರಿಂದಾಗಿ ತೀವ್ರ ಬೆಲೆ ಕುಸಿತದ ಸಂದರ್ಭದಲ್ಲಿ ಸರ್ಕಾರ ಮುಂದೆ ಬಂದು ಬೆಂಬಲ ಬೆಲೆ ಕೊಟ್ಟು ಬೆಳೆ ಖರೀದಿ ಮಾಡುತ್ತದೆ. ಇದಕ್ಕಿಂತ ಕಡಿಮೆ ಬೆಲೆಗೆ ಯಾರೂ ಕೊಳ್ಳುವಂತಿಲ್ಲ. ಇದು ಒಂದು ಕಾಲದಲ್ಲಿ ರೈತರಿಗೆ ಒಂದಿಷ್ಟು ಪರಿಹಾರ ಒದಗಿಸಿತ್ತು, ಒದಗಿಸಿದೆ ಸಹ. ಆದರೆ ಎಪಿಎಂಸಿಗಳ ಕಾರ್ಯವೃಖರಿ ಪ್ರಶ್ನಾತೀತವಲ್ಲ. ಅದರಲ್ಲಿ ಗಂಭೀರ ದೋಷಗಳಿವೆ.

ಎಪಿಎಂಸಿಯಲ್ಲಿ ಸಹ ವರ್ತಕರೆಲ್ಲಾ ಒಂದಾಗಿ ಕೂಟವನ್ನು (ಕಾರ್ಟೆಲ್) ರಚಿಸಿಕೊಂಡು ರೈತರ ಬೆಳೆಗೆ ಕಡಿಮೆ ದರವನ್ನು ಕೂಗುವುದು ಸಾಮಾನ್ಯ. ಅಳತೆ ಮತ್ತು ತೂಕದಲ್ಲಿ ಮೋಸ ಮಾಡುವ ಪ್ರವೃತ್ತಿಯೂ ಹೇರಳವಾಗಿದೆ. ಸಾಲದ ಶೂಲ ರೈತನನ್ನು ಕಾಡುತ್ತಲೇ ಇದೆ. ಎಪಿಎಂಸಿ ಮಂಡಿಗಳು ರೈತರಿಂದ ಬಹಳ ದೂರವಿದ್ದು ಸರಕು ಸಾಗಣೆ ಅಸಾಧ್ಯವಾಗಿದೆ. ಹತ್ತಿ, ಎಣ್ಣೆಬೀಜ ಹಲವು ರೀತಿಯ ಕಾಳುಗಳು ಬೆಂಬಲ ಬೆಲೆಯ ಪಟ್ಟಿಯಲ್ಲಿ ಇಲ್ಲ ಇತ್ಯಾದಿ. ಆದ್ದರಿಂದ ಎಪಿಎಂಸಿಯಲ್ಲಿ ಸುಧಾರಣೆ ತರಲು ಸರ್ಕಾರ ಪ್ರಯತ್ನಿಸಿದರೆ ಅದನ್ನು ಏಕೆ ವಿರೋಧಿಸಬೇಕು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಅಲ್ಲದೆ ಬೆಂಬಲ ಬೆಲೆ (ಎಂಎಸ್‍ಪಿ) ಕೇವಲ ಶೇಕಡಾ 6ರಷ್ಟು ಜನ ರೈತರಿಗೆ ಸಂಬಂಧಿಸಿದ ವಿಷಯ, ಅದರಲ್ಲೂ ಅದರ ಲಾಭ ಪಡೆಯುವವರು ಬಹುತೇಕ ಪಂಜಾಬ್ ಮತ್ತು ಹರಿಯಾಣದ ರೈತರು, ಅವರೂ ಸಹ ಶ್ರೀಮಂತ ರೈತರು ಎಂಬ ಪ್ರಚಾರ ಜೋರಾಗಿದೆ. ಇದು ಸತ್ಯವೇ?

ರೈತರ ಆತಂಕಗಳು

ಎಪಿಎಂಸಿಗಳಲ್ಲಿ ಬೇಕಾದಷ್ಟು ದೋಷಗಳಿವೆ ಎಂಬುದು ರೈತರಿಗೆ ಗೊತ್ತಿದೆ. ಚಪ್ಪಲಿ ಹಾಕಿಕೊಳ್ಳುವವನಿಗೆ ಚಪ್ಪಲಿ ಎಲ್ಲಿ ಕಚ್ಚುತ್ತಿದೆ ಎಂದು ಅರಿವಾಗುತ್ತದೆ. ಅದಕ್ಕೆ ಚರ್ಮರೋಗತಜ್ಞರ ವ್ಯಾಖ್ಯಾನ ಬೇಕೆ! ಆದರೆ ರೈತರು ಹೇಳುವುದು, ‘ಸರ್ಕಾರ ನೀಡಲು ಹೊರಟಿರುವ ಚಿಕಿತ್ಸೆಯು ನಾವು ಅನುಭವಿಸುತ್ತಿರುವ ರೋಗಕ್ಕಿಂತ ಘೋರವಾಗಿದೆ!’

ಶೇಕಡಾ 6ರಷ್ಟು ರೈತರು ಮಾತ್ರ ಬೆಂಬಲ ಬೆಲೆಯ ನೆರವು ಪಡೆದಿದ್ದಾರೆ ಎಂಬುದು ಕೇವಲ ಭತ್ತ-ಗೋಧಿಗೆ ಸಂಬಂಧಿಸಿದ ಅಂಕಿ-ಅಂಶ. ಅದೂ ತಪ್ಪು. ವಾಸ್ತವದಲ್ಲಿ ಅದು ಶೇಕಡಾ 14-16. ಪಂಜಾಬ್ ಮತ್ತು ಹರಿಯಾಣ ಮಾತ್ರ ಬೆಂಬಲ ಬೆಲೆಯ ಉಪಯೋಗ ಪಡೆಯುತ್ತಿದೆ ಎಂಬುದು ಸಹ ಹಳೆಯ ಮಾಹಿತಿ, ಇಂದಿನ ಮಟ್ಟಿಗೆ ಅದು ಸುಳ್ಳು. ಇಂದು ಭತ್ತದಲ್ಲಿ ಒರಿಸ್ಸಾ ಮತ್ತು ಛತ್ತೀಸ್‍ಗಡ್‍ಗಳು ಎಲ್ಲರಿಗಿಂತ ಮುಂದಿವೆ. ಮಧ್ಯಪ್ರದೇಶವು ಪಂಜಾಬ್, ಹರಿಯಾಣಗಳನ್ನು ಗೋಧಿಯಲ್ಲಿ ಹಿಂದಿಕ್ಕಿ ಯಾವುದೋ ಕಾಲವಾಯಿತು! ಮತ್ತು ಬೆಂಬಲ ಬೆಲೆಯ ಮೇಲೆ ಅವಲಂಬಿತವಾದ ಕುಟುಂಬಗಳು ಸಹ ಈ ಹಿಂದುಳಿದ ರಾಜ್ಯಗಳಲ್ಲೇ ಹೆಚ್ಚು. ಹಾಗೆಯೇ ಬೆಂಬಲ ಬೆಲೆಯ ಪ್ರಯೋಜನ ಪಡೆದ ಶ್ರೀಮಂತ ರೈತರು ಶೇಕಡಾ 1 ಮಾತ್ರ. ಸಣ್ಣ ಮತ್ತು ಅಂಚಿನಲ್ಲಿರುವ ರೈತರು ಶೇಕಡಾ 70 ಮತ್ತು ಮಧ್ಯಮ ರೈತರು ಶೇಕಡಾ 29.

ಬೆಂಬಲ ಬೆಲೆಯ ಪ್ರಶ್ನೆ ಇಷ್ಟೊಂದು ಜನರನ್ನು ಬಾಧಿಸುವುದರಿಂದಲೇ ಎಲ್ಲಾ ರಾಜಕೀಯ ಪಕ್ಷಗಳೂ ಬೆಂಬಲ ಬೆಲೆಯ ಬೇಡಿಕೆಯ ಪರವಾಗೇ ಮಾತನಾಡುತ್ತವೆ. ಬಿಜೆಪಿ ಸಹ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಾವು ಅಧಿಕಾರಕ್ಕೆ ಬಂದರೆ ಬೆಂಬಲ ಬೆಲೆಯ ವ್ಯಾಪ್ತಿಯನ್ನೂ, ಪ್ರಮಾಣವನ್ನೂ ಹೆಚ್ಚಿಸುತ್ತೇವೆ ಎಂದೇ ಹೇಳಿಕೊಂಡಿತ್ತು.

ಹೊಸ ಕಾಯಿದೆಗಳಿಂದಾಗಿ ಎಪಿಎಂಸಿ ನಿಜಕ್ಕೂ ಇಲ್ಲದಂತಾಗುತ್ತದೆ, ಸಣ್ಣ ಏಜೆಂಟ್ ಬದಲು ದೊಡ್ಡ ಕಾರ್ಪೊರೇಟ್ ಕುಳಗಳು ಬರುತ್ತಾರೆ. ಅವರೊಂದಿಗೆ ನಾವು ಸೆಣಸಾಡಲು ಸಾಧ್ಯವೇ ಇಲ್ಲ ಎಂಬುದು ರೈತರ ಅಳಲು. ಹಾಗೆಯೇ ಕಾಂಟ್ರಾಕ್ಟ್ ¥sóÁರಂಗಳ ತೆಕ್ಕೆಗೆ ಬೀಳುವ ರೈತನ ಬೆಳೆಯ ಗುಣಮಟ್ಟ ಸರಿ ಇಲ್ಲ ಎಂಬ ನೆಪದಲ್ಲಿ ಕಾರ್ಪೋರೇಟ್ ಗುತ್ತಿಗೆದಾರರು ಬೆಲೆ ಇಳಿಸುತ್ತಾರೆ ಎಂಬುದು ಅವರ ಭಯ. ಕಾಯಿದೆಯ ಪ್ರಕಾರ ಇದರ ಬಗ್ಗೆ ರೈತರು ಯಾವುದೇ ನ್ಯಾಯಾಲಯಕ್ಕೆ ಹೋಗುವಂತಿಲ್ಲ. ಅಧಿಕಾರಿಯ ತೀರ್ಪೇ ಅಂತಿಮ. ಕಾರ್ಪೊರೇಟ್‍ಗಳ ಮೇಲೆ ಸಹ ದಾವೆ ಹೂಡುವಂತಿಲ್ಲ ಮತ್ತು ಮೂರನೇ ಕಾಯಿದೆಯ ಪ್ರಕಾರ ಖಾಸಗಿಯವರಿಗೆ ಎಷ್ಟು ಬೇಕಾದರೂ ಕೃಷಿ ಉತ್ಪನ್ನಗಳನ್ನು ಸಂಗ್ರಹ ಮಾಡಿಕೊಳ್ಳಲು, ವ್ಯಾಪಾರ ಮಾಡಲು (ರಫ್ತು) ಅವಕಾಶ ಸಿಗುವುದರಿಂದ ಅವರ ವಹಿವಾಟಿಗೆ ಲಂಗುಲಗಾಮಿಲ್ಲದಂತಾಗುತ್ತದೆ. ಇದು ರೈತರಿಗೂ ಒಳ್ಳೆಯದಲ್ಲ, ಗ್ರಾಹಕರಿಗೂ ಒಳ್ಳೆಯದಲ್ಲ.

ಒಟ್ಟಿನಲ್ಲಿ ಈ ಮೂರೂ ಕಾಯಿದೆಗಳೂ ಜಾರಿಯಾದರೆ ಭಾರತದ ವ್ಯವಸಾಯ ಮುಂಚಿನಂತಿರುವುದಿಲ್ಲ. ಹಳ್ಳಿಗಳು ಇಂದಿನ ಹಳ್ಳಿಗಳಾಗಿ ಉಳಿಯುವುದಿಲ್ಲ. ಕಾರ್ಪೊರೇಟ್ ಕೃಷಿಯ ಲಾಭವು ಯಂತ್ರಗಳನ್ನೇ ಆಧರಿಸುವುದರಿಂದ ಹಳ್ಳಿಯ ಜನಸಂಖ್ಯೆ ಕುಗ್ಗುತ್ತದೆ. ಮುಂದುವರೆದ ರಾಷ್ಟ್ರಗಳಲ್ಲಿ ಹಳ್ಳಿಗಳಲ್ಲಿನ ಜನಸಂಖ್ಯೆಯು, ದೇಶದ ಶೇಕಡಾ 10-15 ರಷ್ಟಿದೆ. ಟರ್ಕಿಯಂಥ ಸುಮಾರಾಗಿ ಮುಂದುವರೆದ ದೇಶಗಳಲ್ಲಿ ಅದು ಶೇ.30ರಷ್ಟಿದೆ. ನಿಜ, ಭಾರತ ಒಂದೇ ದಿನದಲ್ಲಿ ಬದಲಾಗುವುದಿಲ್ಲ. ಮಹತ್ತರ ಬದಲಾವಣೆ ಬರಲು ದಶಕಗಳೇ ಬೇಕು. ಆದರೆ ಇದು ಆ ದಿಕ್ಕಿನಲ್ಲಿ ನಿಶ್ಚಿತ ಹೆಜ್ಜೆ.

ಒಂದು ರೀತಿಯಲ್ಲಿ ನೋಡಿದರೆ ಇದು ಚಾರಿತ್ರಿಕ ನಿಯಮ. ಹಳ್ಳಿಯ ಜನ ಏಕೆ ಹಿಂದುಳಿದ, ಸೌಲಭ್ಯಗಳಿಲ್ಲದ ಸ್ಥಿತಿಯಲ್ಲೇ ಬದುಕಬೇಕು? ವಲಸೆ ಇತಿಹಾಸದಲ್ಲಿ ಸಹಜ ಪ್ರಕ್ರಿಯೆಯಲ್ಲವೇ? ಈ ವಾದಗಳನ್ನು ಅಲ್ಲಗಳೆಯಲಾಗದು. ಆದರೆ ಹಳ್ಳಿಯಿಂದ ಸ್ಥಳಾಂತರಗೊಂಡ ಜನರಿಗೆ ನಗರದಲ್ಲಿ ಕೆಲಸಗಳಿವೆಯೇ? ಖಂಡಿತಾ ಇಲ್ಲ. ಖ್ಯಾತ ಕೃಷಿ ಅಂಕಣಕಾರ ಪಿ.ಸಾಯಿನಾಥ್ ಹೇಳುವಂತೆ ನಗರದಲ್ಲಿನ ಸೇವಾವಲಯದಲ್ಲಿನ ಮಧ್ಯಮದರ್ಜೆಯ ಉದ್ಯೋಗಗಳು ಈಗ ಪೂರ್ತಿಯಾಗಿ ಕಾಣೆಯಾಗಿವೆ. ಕಟ್ಟಡ ಕಾರ್ಮಿಕರು, ಸೆಕ್ಯುರಿಟಿ ಮತ್ತು ಕ್ಯಾಂಟೀನ್ ಕೆಲಸಗಳು ಮುಗಿದುಹೋಗಿವೆ. ಕೋವಿಡ್ ಪರಿಸ್ಥಿತಿಯ ಸಂದರ್ಭದಲ್ಲಿ ಬೆಳಕಿಗೆ ಬಂದಂತೆ ಈ ವಲಸೆ ಕಾರ್ಮಿಕರ ಬದುಕು ದುರ್ಭರವಾಗಿದೆ. ಹಳ್ಳಿಯಲ್ಲಿ ಒಂದಿಷ್ಟು ಭದ್ರತೆಯನ್ನೂ, ಭಾವನಾತ್ಮಕ ನಂಟನ್ನು, ಸಾಮುದಾಯಿಕ ಬದುಕಿನ ನೆಮ್ಮದಿಯನ್ನೂ ಹೊಂದಿರುವ ಸಣ್ಣ ರೈತರನ್ನು ಅವರ ಭವಿಷ್ಯದ ಬಗ್ಗೆ ಗಮನವಿಲ್ಲದೆ ಗುಳೆ ಎಬ್ಬಿಸಿದರೆ ಗತಿಯೇನು? ನಗರಗಳಾದರೂ ಈ ಬೃಹತ್ ವಲಸೆಯನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿವೆಯೇ?

ಕಾರ್ಪೊರೇಟ್ ಅವಶ್ಯಕತೆ

ನಿಜಕ್ಕೂ ಹೇಳಬೇಕೆಂದರೆ ಜಾಗತಿಕ ಮಟ್ಟದಲ್ಲಿ ಉದ್ಯಮಪತಿಗಳ ಬಳಿ, ಬ್ಯಾಂಕುಗಳಲ್ಲಿ ಬಂಡವಾಳ ಕೊಳೆಯುತ್ತಿದೆ. ಆರ್ಥಿಕ ಬಿಕ್ಕಟ್ಟು ತೀವ್ರವಾದಂತೆ ಜನರ ಕೊಳ್ಳುವಿಕೆ ಇನ್ನಷ್ಟು ಕ್ಷೀಣಿಸುತ್ತಿದೆ. ಆದ್ದರಿಂದ ಗ್ರಾಹಕ ವಸ್ತುಗಳ ಮಾರುಕಟ್ಟೆ ಕುಗ್ಗುತ್ತಿದೆ. ಹೀಗಾಗಿ ಬಂಡವಾಳವನ್ನು ಹೂಡಲು ಹೊಸಹೊಸ ಕ್ಷೇತ್ರಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಯಾವುದಕ್ಕಾದರು ಮಾರುಕಟ್ಟೆ ಕುಗ್ಗೀತು, ಆದರೆ ಮನುಷ್ಯನು ತಿನ್ನುವ ಅನ್ನದ ಮಾರುಕಟ್ಟೆ ಒಂದು ಮಟ್ಟಿಗೆ ಕುಗ್ಗುವುದಿಲ್ಲ. ಆದ್ದರಿಂದಲೇ ವಲ್ರ್ಡ್ ಟ್ರೇಡ್ ಆರ್ಗನೈಸೇಷನ್ ಸಹ ಕೃಷಿಯಲ್ಲಿ ಕಾರ್ಪೊರೇಟ್ ಪ್ರವೇಶಕ್ಕೆ ಅನುಕೂಲಕರವಾದ ಕಾಯಿದೆಗಳನ್ನು ರೂಪಿಸಿ ಎಂದು ಬಹಳ ಕಾಲದಿಂದ ದುಂಬಾಲು ಬಿದ್ದಿದೆ.

ಇದು ಒಂದು ಪಕ್ಷದ ನೀತಿಯಲ್ಲ. ಕಾಂಗ್ರೆಸ್ ಈಗ ಏನೇ ಹೇಳಲಿ, ಅದೂ ಅಧಿಕಾರದಲ್ಲಿದ್ದಾಗ ಇದೇ ನೀತಿಗಳ ಜಾರಿಗೆ ಯತ್ನಿಸಿದೆ. ಆದರೆ ಇದನ್ನು ಜಾರಿಗೆ ತರುವಲ್ಲಿ ಅದು ದುರ್ಬಲವಾಗಿತ್ತು. ಬಹುಮತವಿರುವ ಮತ್ತು ಸಾಮಾನ್ಯವಾಗಿ ಜನಾಭಿಪ್ರಾಯಕ್ಕೆ ‘ಕ್ಯಾರೇ’ ಎನ್ನದೆ ನುಗ್ಗುವ ಛಾತಿ ಇರುವ ಬಿಜೆಪಿಯಿಂದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಪೋರೇಟ್‍ಗಳಿಗೆ ಕೆಲವೊಂದು ನಿರೀಕ್ಷೆಗಳಿವೆ. ಅದರಲ್ಲಿ ಈ ಮೋದಿ ಸರ್ಕಾರ ಕೃಷಿ ಸಂಬಂಧಿತ ಹೊಸ ಕಾಯಿದೆಗಳನ್ನು ಜಾರಿಗೆ ತಂದೇ ತರುತ್ತದೆ ಎಂಬುದೂ ಒಂದು.

ವಿವಿಧ ಸರ್ಕಾರಗಳ ನಿಲುವುಗಳು ಏನೇ ಇರಲಿ ರೈತರು ಮತ್ತು ಜನಸಾಮಾನ್ಯರು ಇದನ್ನು ವಿರೋಧಿಸಿಕೊಂಡು ಬಂದಿದ್ದಾರೆ. ಮತ್ತೆ ಪ್ರಸಕ್ತ ವ್ಯವಸ್ಥೆಯ ಹಿತಾಸಕ್ತಿಯ ದೃಷ್ಟಿಯಿಂದಲೂ ಸಹ ಇಂಥ ನೀತಿಗಳನ್ನು ಹೇರುವುದು ವಿವೇಕಯುತ ಕ್ರಮವಲ್ಲ. ಅನೇಕ ವ್ಯವಸ್ಥೆಯ ಪರವಾದ ಅರ್ಥಶಾಸ್ತ್ರಜ್ಞರೇ ಹೇಳುವಂತೆ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಬೇಕೆಂದರೆ ಹಳ್ಳಿಯ ಬಡವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಬಲ್ಲ ಸಬಲೀಕರಣದ ಕ್ರಮಗಳು ಅಗತ್ಯ. ಬೇಸಾಯಗಾರರ ಬದುಕಿನ ಸುಧಾರಣೆಯ ಬಗ್ಗೆ ಬಂದಿರುವ ಡಾ.ಸ್ವಾಮಿನಾಥನ್ ವರದಿ ಈ ದೃಷ್ಟಿಯಿಂದ ಮಹತ್ವಪೂರ್ಣ. ಅದು ಯಾವುದೇ ಬೆಳೆಗೆ ಒಟ್ಟಾರೆ ರೈತ ಮಾಡುವ ಖರ್ಚಿನ ಮೇಲೆ ಶೇಕಡಾ 50 ರಷ್ಟು ಆದಾಯವನ್ನು ನಿಗದಿ ಮಾಡಿ ಬೆಂಬಲ ಬೆಲೆಯನ್ನು ನಿಷ್ಕರ್ಷೆ ಮಾಡಿ ಎಂದಿತ್ತು.

ಇದರೊಂದಿಗೆ ಸಾಯಿನಾಥ್ ಹೇಳುವಂತೆ ಹೆಚ್ಚು ಬೆಳೆಗಳನ್ನು ಬೆಂಬಲ ಬೆಲೆಯ ಪರಿಧಿಯೊಳಗೆ ತರಬೇಕು ಮತ್ತು ರೈತರ ಸಾಲವನ್ನು ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ಎಲ್ಲ ರೈತರಿಗೂ ಎಪಿಎಂಸಿ ಮಂಡಿಗಳು ಹತ್ತಿರದಲ್ಲೇ ಎಟಕುವಂತಿರಲು ಅವುಗಳ ಸಂಖ್ಯೆಯನ್ನೂ ನಾಲ್ಕು ಸಾವಿರದಿಂದ (ಇದೀಗ ಅದು 6700 ಅಂತೆ) ನಲವತ್ತು ಸಾವಿರಕ್ಕೆ ಏರಿಸಬೇಕು. ಕಾಂಗ್ರೆಸ್ ಸರ್ಕಾರವೇ ವರ್ಷಗಟ್ಟಲೆ ಸ್ವಾಮಿನಾಥನ್ ವರದಿಯನ್ನೂ ದೂಳುಹಿಡಿಯಲು ಬಿಟ್ಟು ದ್ರೋಹ ಮಾಡಿದೆ ಎಂಬುದನ್ನು ಮರೆಯಲಾಗದು.

ಈ ಕಾಯಿದೆಗಳು ನಿಜಕ್ಕೂ ಸಂವಿಧಾನಾತ್ಮಕವಲ್ಲ ಎಂದೂ ಕಾನೂನು ತಜ್ಞರು ಹೇಳುತ್ತಾರೆ. ವಾಸ್ತವದಲ್ಲಿ ಕೃಷಿಯು ರಾಜ್ಯಗಳ ವ್ಯಾಪ್ತಿಗೆ ಸೇರಿದ್ದು. ಆದರೆ ತಮ್ಮ ಹಳೆಯ ಕಾನೂನುಗಳನ್ನು ಬದಲಾಯಿಸಲು ಕೇಂದ್ರವು ರಾಜ್ಯಗಳ ಮೇಲೆ ಒತ್ತಡ ಹೇರುತ್ತಾ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದೆ. ಅಲ್ಲದೆ ಕೃಷಿಗೆ ಸಂಬಂಧಿಸಿದ ವಿಷಯಗಳು ಕೋರ್ಟಿನ ಮೆಟ್ಟಿಲು ಹತ್ತುವಂತಿಲ್ಲ ಎನ್ನುವುದು, ಸರ್ಕಾರಿ ಅಧಿಕಾರಿಗಳು ಹಾಗೂ ಕಾಪೋರೇಟ್‍ಗಳು ನ್ಯಾಯಾಲಯದಲ್ಲಿ ಪ್ರಶ್ನೆಗೊಳಗಾಗುವಂತಿಲ್ಲ ಎನ್ನುವುದು ಯಾವುದೇ ಜನತಂತ್ರದಲ್ಲಿ ಕಂಡು ಕೇಳದ ವಿಚಾರ ಎಂದು ದೆಹಲಿಯ ವಕೀಲರ ಕೌನ್ಸಿಲ್ ಗಂಭೀರವಾಗಿ ಆರೋಪಿಸಿದೆ. ಅದೇ ರೀತಿಯಲ್ಲಿ ವಿದ್ಯುಚ್ಛಕ್ತಿಗೆ ಸಂಬಂಧಿಸಿದಂತೆ ರಾಜ್ಯಗಳು ಕೃಷಿ ಕ್ಷೇತ್ರಕ್ಕೆ ಸಬ್ಸಿಡಿ ನೀಡಬಾರದು ಎಂಬ ಕೇಂದ್ರದ ಆದೇಶವೂ ಪ್ರತಿರೋಧಕ್ಕೆ ಕಾರಣವಾಗಿದೆ.

ಮುನ್ನೋಟ

ಒಟ್ಟಿನಲ್ಲಿ ಇಡಿಯ ಪರಿಸ್ಥಿತಿ ಬಗೆಹರಿಸಲಾಗದ ಕಗ್ಗಂಟಾಗಿದೆ. ಸರ್ಕಾರ ಈಗಾಗಲೇ ಕಾರ್ಪೋರೇಟ್‍ಗಳಿಗೆ ಮಾತುಕೊಟ್ಟು ಈಗ ಕಷ್ಟಕ್ಕೆ ಸಿಕ್ಕಿಹಾಕಿಕೊಂಡಂತಿದೆ. ಹೊಸ ಕಾಯಿದೆಯಿಂದಾಗಿ ಸರ್ಕಾರದ ‘ಆಪ್ತಮಿತ್ರ’ರಾದ ಆದಾನಿ-ಅಂಬಾನಿಗಳು ಹೇರಳವಾಗಿ ಪ್ರಯೋಜನ ಪಡೆಯಲಿದ್ದಾರೆ. ಈಗಾಗಲೇ ಅವರು 53 ಕೃಷಿ ಆಧಾರಿತ ಕಂಪನಿಗಳನ್ನು ನೋಂದಾಯಿಸಿದ್ದಾರೆ ಎಂಬ ಆಪಾದನೆಗಳು ಜನಜನಿತವಾಗಿವೆ.

ಸರ್ಕಾರ ಬೆಂಬಲ ಬೆಲೆಯನ್ನು ನಿಷೇಧಿಸುವುದಿಲ್ಲ ಎನ್ನುತ್ತಿದೆ ಯಾದರೂ, ಅದನ್ನು ಖಚಿತಪಡಿಸಲು ಕಾಯಿದೆ ರೂಪಿಸಲಿಕ್ಕೆ ತಯಾರಿಲ್ಲ. ಎಪಿಎಂಸಿಗಳನ್ನು ನಿಷೇಧಿಸುವುದಿಲ್ಲ ಎಂದು ಸರ್ಕಾರ ಈಗ ಹೇಳುತ್ತಿದೆ. ಆದರೆ ನವೆಂಬರ್‍ನಲ್ಲಿ ವಿತ್ತಮಂತ್ರಿಗಳಾದ ನಿರ್ಮಲಾ ಸೀತಾರಾಮನ್, ಎಪಿಎಂಸಿಗಳ ಕಾಲ ಮುಗಿಯಿತು, ಅವನ್ನು ಇಲ್ಲದಂತಾಗಿಸುವುದು ನಮ್ಮ ಗುರಿ ಎಂದು ಕೊಚ್ಚಿಕೊಂಡಿದ್ದರಲ್ಲವೇ! ಸಾಯಿನಾಥ್ ಹೇಳುವಂತೆ ಇದಕ್ಕೆ ಸಂಬಂಧಿಸಿದ ಸರ್ಕಾರದ ನಿಲುವು, ಸರ್ಕಾರಿ ಶಾಲೆಗಳ ಕುರಿತಾದ ನಿಲುವಿನಂತೆಯೇ.

ಎಂದರೆ ಸರ್ಕಾರಿ ಶಾಲೆಗಳನ್ನು ಹಾಳು ಮಾಡುವುದು ಮತ್ತು ಖಾಸಗಿ ಶಾಲೆಗಳಿಗೆ ಉತ್ತೇಜನ ನೀಡುವುದು. ಎಪಿಎಂಸಿಗಳನ್ನು ನಿಷೇಧಿಸುವುದಿಲ್ಲ. ಆದರೆ ಅವು ನಶಿಸಿಹೋಗುವಂತೆ ಮಾಡಲಾಗುತ್ತದೆ. ಇದು ರೈತರಲ್ಲಿ ವ್ಯಾಪಕವಾಗಿ ನೆಲೆಯೂರಿರುವ ನಂಬಿಕೆ. ಆದ್ದರಿಂದಲೇ ಸರ್ಕಾರಕ್ಕೆ ಹತ್ತಿರವಾದ ಪರಿವಾರಕ್ಕೆ ಸೇರಿದ ರೈತ ಸಂಘಟನೆಯಾಗಲೀ, ಸ್ವದೇಶಿ ಜಾಗರಣ ಮಂಚ್ ಆಗಲೀ ಈ ವಿಷಯದಲ್ಲಿ ಸರ್ಕಾರವನ್ನು ವಿರೋಧಿಸಲೆಬೇಕಾಗಿ ಬಂದಿದೆ! ಸರ್ಕಾರದ ಸ್ಥಿತಿ ‘ಇತ್ತ ದರಿ, ಅತ್ತ ಪುಲಿ’.

ಇನ್ನು ರೈತರು ತಾವು ಈ ಬಾರಿ ಸೋತರೆ ಅಥವಾ ಸಡಿಲಬಿಟ್ಟರೆ ಸತ್ತಂತೆಯೇ ಎಂದು ಭಾವಿಸಿದ್ದಾರೆ. ಇದು ಯಾವುದೇ ರಾಜಕೀಯ ಪಕ್ಷದ ಪ್ರಚಾರ ಅಥವಾ ಯಾವುದೋ ಶಕ್ತಿಗಳ ಕಾರ್ಯಾಚರಣೆ ಎಂಬುದು ಅಸಂಬದ್ಧ ಅಪ್ರಲಾಪ. ನಿಜ ವಿರೋಧಪಕ್ಷಗಳು ಪರಿಸ್ಥಿತಿಯ ಲಾಭ ತೆಗೆದುಕೊಳ್ಳಲು ಯತ್ನಿಸುತ್ತಿವೆ. ಅದನ್ನು ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿಯೂ ಮಾಡುತ್ತದೆ. ಆದರೆ ನಿಜವಾದ ಆತಂಕ, ಜನಬೆಂಬಲವಿಲ್ಲದೆ ಲಕ್ಷೋಪಲಕ್ಷ ಜನ ತಿಂಗಳುಗಟ್ಟಲೆ ‘ಸಾಯಲು ಸಿದ್ಧ’ ಎಂದು ರಸ್ತೆಗಿಳಿಯುವುದು ಸಾಧ್ಯವಿಲ್ಲ.

ಈ ಚಳವಳಿಯಲ್ಲಿ ಬಂದಿರುವ ಸಂಘಟನಾ ಕೌಶಲ್ಯ, ಸೃಜನಶೀಲತೆಗಳನ್ನು ಸಂಘಟನಾ ಚತುರರಾದ ಎಡಪಕ್ಷಗಳೂ ಸೇರಿದಂತೆ ಯಾರೂ ಇದುವರೆಗೂ ಸ್ವತಂತ್ರ ಭಾರತದಲ್ಲಿ ರೂಪಿಸಿಲ್ಲ ಎಂಬುದನ್ನು ನಾವು ಗುರುತಿಸಲೇಬೇಕು. ತನ್ನದೇ ಆದ ಸೋಶಿಯಲ್ ಮೀಡಿಯಾ ಜಾಲ, ದಿನಪತ್ರಿಕೆ, ಟಿವಿಗಳನ್ನು ನಡೆಸುವಷ್ಟು ಚಳವಳಿ ಮುಂದುವರೆದಿದೆ. ಲಕ್ಷಾಂತರ ಜನರಿಗೆ ಊಟ, ವಸತಿ, ಶೌಚ, ನೀರನ್ನು ಒದಗಿಸುತ್ತಿರುವ ಅವರ ಸಂಘಟನಾ ಶಕ್ತಿಗೆ ಇಡಿಯ ಜಗತ್ತಿನಲ್ಲೇ ಎಷ್ಟು ಸಮಾನಂತರ ಉದಾಹರಣೆಗಳಿವೆಯೋ ನಾವು ಕಾಣೆವು. ಅಂತೆಯೇ ಈ ಚಳವಳಿ ವಿಫಲವಾದರೆ ಭಾರತದಲ್ಲಿ ನೆಲೆಯೂರುವ ಹತಾಶೆ, ಕ್ಷೋಭೆಗಳನ್ನು ಊಹಿಸಲೂ ಸಾಧ್ಯವಿಲ್ಲ. ಆದ್ದರಿಂದ ಆಳುವವರಿಗೆ ವಿವೇಕ ಮೂಡಲಿ, ಅವರು ಹಠ, ಮೊಂಡಾಟಗಳನ್ನು ಬಿಟ್ಟು ಜನತೆಯನ್ನು ಸಮಾಧಾನಪಡಿಸುವ ಕ್ರಮ ಕೈಗೊಳ್ಳಲಿ ಎಂದು ಆಶಿಸೋಣ.

*ಲೇಖಕರು ವೈದ್ಯಕೀಯ ಪದವಿ ನಂತರ ಓದು, ಬರವಣಿಗೆ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂಕಣ ಬರಹ, ರಂಗಭೂಮಿ, ಅನುವಾದ ಇವು ಆಸಕ್ತಿಯ ಕ್ಷೇತ್ರಗಳು.

Leave a Reply

Your email address will not be published.