‘ಬಗೆದಷ್ಟೂ ಜೀವಜಲ’ ಗದ್ಯಕಾವ್ಯದಲ್ಲಿ ಬದುಕಿನ ಚಿತ್ರಣ

-ಡಾ. ಬಸು ಬೇವಿನಗಿಡದ

ಈ ಸಂಕಲನದ ವೈಶಿಷ್ಟವೆಂದರೆ ಇದರೊಳಗೆ ಹುದುಗಿರುವ ಭಾವ ಸಾಂದ್ರತೆ, ಕುತೂಹಲಕಾರಿ ನಿರೂಪಣೆ ಹಾಗೂ ಜೀವಪರವಾಗಿರುವ ಹೆಣ್ಣಿನ ದೃಷ್ಟಿಕೋನವೊಂದು ಎಲ್ಲ ಪ್ರಬಂಧಗಳಲ್ಲಿ ಅಡಗಿ ಕುಳಿತಿರುವುದು.

ಬಗೆದಷ್ಟು ಜೀವಜಲ

ಪ್ರಬಂಧಗಳು

ಮಾಲತಿ ಪಟ್ಟಣಶೆಟ್ಟಿ

ಪುಟ: 156 ಬೆಲೆ: ರೂ. 120

ಪ್ರಥಮ ಮುದ್ರಣ: ನವೆಂಬರ್ 2020

ಪ್ರಕಾಶನ: ಸಪ್ನಾ ಬುಕ್ ಹೌಸ್

ಸಂಪರ್ಕ: 94801 99214

ಒಳ್ಳೆಯ ಗದ್ಯದಲ್ಲಿ ಹೇಳಿದ್ದನ್ನು ತೀರ ಸಾಮಾನ್ಯವೆನಿಸುವ ಪದ್ಯದಲ್ಲಿ ಹೇಳಬೇಡ ಎಂಬುದು ಪ್ರಸಿದ್ಧ ಇಂಗ್ಲಿಷ್ ಕವಿ ಎಜ್ರಾ ಪೌಂಡ್ ಅವರ ಮಾತು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರ ‘ಬಗೆದಷ್ಟು ಜೀವಜಲ’ ಪ್ರಬಂಧ ಸಂಕಲನ ಓದಿದಾಗ ಇಲ್ಲಿಯ ಚೇತೋಹಾರಿ ಗದ್ಯ ನಮ್ಮನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ. ಜೀವನದ ಹಲವು ಮುಖ, ಮಗ್ಗುಲುಗಳನ್ನು ವಿನೋದಮಯವಾಗಿ ಮತ್ತು ಚಿಕಿತ್ಸಕ ದೃಷ್ಟಿಕೋನದಿಂದ ತೆರೆದಿಡುವ ಪ್ರಯತ್ನವನ್ನು ಇದು ಮಾಡುತ್ತದೆ. ಈ ಸಂಕಲನದ ಒಂದು ಮುಖ್ಯ ಗುಣವೆಂದರೆ ಜೀವಪರವಾಗಿರುವ ಹೆಣ್ಣಿನ ದೃಷ್ಟಿಕೋನವೊಂದು ಎಲ್ಲ ಪ್ರಬಂಧಗಳಲ್ಲಿ ಅಡಗಿ ಕುಳಿತಿರುವುದು.

‘ನನ್ನ ಅಡಿಗಿ ಮನೀ ಪಟ್ಟದ ರಾಣಿ ಅಂದ್ರ ಇನ್ನ್ಯಾರೂ ಅಲ್ಲ, ಕಾಯಿಪಲ್ಲೆ!’ ಎಂದು ಸುರುವಾಗುವ “ಟೊಮೆಟೋ ರಾಮಾಯಣ” ಹೆಸರಿನ ಪ್ರಬಂಧವಂತೂ ಚೇತೋಹಾರಿ ಬರವಣಿಗೆಗೆ ಒಂದು ನಿದರ್ಶನದಂತಿದೆ. ನಮ್ಮ ಸುತ್ತಮುತ್ತಲಿನ ಅನೇಕ ಸಂಗತಿಗಳ ಬಗ್ಗೆ ನಾವು ಲಕ್ಷ್ಯ ವಹಿಸಿರುವುದಿಲ್ಲವೆನ್ನುವುದನ್ನು ಇದನ್ನು ಓದಿದಾಗ ತಿಳಿಯುತ್ತದೆ. ನಮ್ಮ ಕಣ್ಣೆದುರೆ ಇದ್ದರೂ ನಮ್ಮ ಕಣ್ಣುಗಳು ಮಾತ್ರ ಅದನ್ನು ನೋಡಿರುವುದಿಲ್ಲ. ದೊಡ್ಡ, ಆಕರ್ಷಕ ದನಿಯಲ್ಲಿ ಗ್ರಾಹಕರನ್ನು ಕೂಗುವ ಕಾಯಿಪಲ್ಲೆ ಮಾರುವವನಾಗಿರಬಹುದು, ಏನೂ ಮಾತೇ ಆಡದ ಆಟೋ ಓಡಿಸುವವನಾಗಿರಬಹುದು, ಪ್ರಶ್ನೆ ಕೇಳಲಿಕ್ಕೆ ಬಂದವರಿಗೆ ಮರುಪ್ರಶ್ನೆ ಮಾಡುವವರಾಗಿರಬಹುದು -ಹೀಗೆ ಎಲ್ಲವನ್ನೂ ಮಾಲತಿಯವರು ಸಹಜ ವಿನೋದ ಮತ್ತು ಲಾಲಿತ್ಯದಿಂದ ಬಣ್ಣಿಸುತ್ತಾರೆ.

ಬಜಾರದಲ್ಲಿ ರೈತನೊಬ್ಬ ತಾನು ಬೆಳೆದ ಟೊಮೆಟೊಗೆ ಸರಿಯಾದ ಬೆಲೆ ಸಿಗದೆ ಬುಟ್ಟಿಗಟ್ಟಲೆ ಹಣ್ಣುಗಳನ್ನು ಪುಕ್ಕಟೆಯಾಗಿ ಕೊಡುತ್ತಿರುತ್ತಾನೆ. ಪುಕ್ಕಟೆ ಎಂದಾಗ ಕಲಿತವರು, ಕಲಿಯಲಾರದವರು, ದೊಡ್ಡ ದೊಡ್ಡ ಉದ್ಯೋಗಸ್ಥರು, ಪ್ರಾಧ್ಯಾಪಕರು, ಗೃಹಿಣಿಯರು ನಾ ಮುಂದು ತಾ ಮುಂದು ಎಂದು ಮುಗಿಬೀಳುವುದರ ಚಿತ್ರಣ ಇದರಲ್ಲಿದೆ. ಈ ಪ್ರಬಂಧದಲ್ಲಿ ಹಾಸ್ಯವೂ ಇದೆ. ವಿಷಾದವೂ ಇದೆ. ಚೀಲ ತುಂಬ ಪುಕ್ಕಟೆ ಟೊಮೆಟೊ ತಂದ ಗೃಹಿಣಿಯೊಬ್ಬಳು ಅದನ್ನು ಹೇಗೆ ತಿಂದು ಖರ್ಚು ಮಾಡಬೇಕೆಂದು ತಿಳಿಯದೆ ವಿಲವಿಲ ಒದ್ದಾಡುವ ಪ್ರಸಂಗ ಸ್ವಾರಸ್ಯಕರವಾಗಿ ನಿರೂಪಿತವಾಗಿದೆ. ಪುಕ್ಕಟೆ ತಂದ ಟೊಮೆಟೊವನ್ನು ಹೊರ ಸಾಗಿಸಲು ಎರಡು ನೂರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. 

“ಹೌದು, ಕಾಲ ಬದಲಾಯ್ತು” ಶೀರ್ಷಿಕೆಯ ಪ್ರಬಂಧ ಅರವತ್ತರ ಇಳಿವಯಸ್ಸಿನಲ್ಲಿರುವ ಇಬ್ಬರು ಗೆಳತಿಯರ ಕಷ್ಟ-ಸುಖಗಳನ್ನು ನವಿರಾಗಿ ನಿರೂಪಿಸಿದೆ. ಇಬ್ಬರು ಗಂಡಸರು ಇಲ್ಲವೆ ಮೂರ್ನಾಲ್ಕು ಜನ ಗಂಡಸರು ಸೇರಿಕೊಂಡು ತಮ್ಮ ತಮ್ಮ ಜೀವನವನ್ನು ಮೆಲುಕಾಡಿಸುವುದು ಇಲ್ಲವೆ ತಮ್ಮ ಜೀವನದಲ್ಲಿಯ ಸಮಸ್ಯೆಗಳನ್ನು ಹೇಳಿಕೊಂಡು ಗೊಣಗುವುದನ್ನು ಅನೇಕ ಪುರುಷ ಲೇಖಕರು ಮಾಡಿದ್ದಾರೆ. ಆದರೆ ಮಾಲತಿ ಪಟ್ಟಣಶೆಟ್ಟಿಯವರು ಈ ಸೊಗಸಾದ ಪ್ರಬಂಧದಲ್ಲಿ ಆಪ್ತಗೆಳತಿಯರಿಬ್ಬರು ಯಾವ ಕಹಿ ಭಾವನೆಯನ್ನು ಇಟ್ಟುಕೊಳ್ಳದೆ ತಮ್ಮ ಜೀವನವನ್ನು ಮೆಲುಕು ಹಾಕುತ್ತಿದ್ದಾರೆ. ಈ ಮೆಲುಕಿನಲ್ಲಿ ಅವರ ಜೀವನದ ಪ್ರಮುಖ ಘಟನೆಗಳು ಬಂದುಹೋಗುತ್ತವೆ. ತಲೆಮಾರುಗಳ ಅಂತರ, ಅತ್ತೆ-ಸೊಸೆಯರ ಮನಸ್ತಾಪ, ಪಾಶ್ಚಾತ್ಯ ಜೀವನಶೈಲಿಯ ಅನುಕರಣೆ ಮುಂತಾದ ಸಂಗತಿಗಳು ಮನಸ್ಸಿಗೆ ಮುದ ನೀಡುವ ಹಾಸ್ಯದೊಡನೆ ಬಿಚ್ಚಿಕೊಳ್ಳುವುದು ಇಲ್ಲಿಯ ವಿಶಿಷ್ಟತೆಯಾಗಿದೆ.

ನಾಗವೇಣಿ ಎನ್ನುವ ಅರವತ್ತು ತುಂಬಿದ ಮಹಿಳೆ ಅವಳ ಸಮವಯಸ್ಕ ಗೆಳತಿ ಭಾಗೀರತಿಯ ಮನೆಗೆ ಬಂದು ತನ್ನ ಕಷ್ಟ-ಸುಖ ಹಂಚಿಕೊಳ್ಳುವುದರೊಂದಿಗೆ ಈ ಪ್ರಬಂಧ ಆರಂಭವಾಗುತ್ತದೆ. ನಾಗವೇಣಿ ಅರ್ಥಾತ್ ನಾಗಿಗೆ ಲಗೂನ ಮದುವೆಯಾಗಿ ಅವಳಿಗೆ ಮೊಮ್ಮಕ್ಕಳಿದ್ದಾರೆ. ಭಾಗೀರತಿಗೆ ಮದುವೆಯಲ್ಲಿ ಆಸಕ್ತಿ ಇಲ್ಲದ್ದಕ್ಕೆ ಅವಳು ಅವಿವಾಹಿತಳಾಗಿಯೇ ಉಳಿದಿದ್ದಾಳೆ. ಇವರಿಬ್ಬರ ಬಾಂಧವ್ಯ ಮೇಲಿನ ಮುಗಿಲಿನ ರೀತಿ ವಿಶಾಲವಾದದ್ದು ಎನ್ನುವುದು ಅವರ ಮಾತುಕತೆ-ಸಂಭಾಷಣೆಗಳಿಂದ ತಿಳಿದುಬರುತ್ತದೆ. ಮಾಲತಿ ಪಟ್ಟಣಶೆಟ್ಟಿ ಅವರು ಸ್ವಾರಸ್ಯಕರ ಸಂಭಾಷಣೆಗಳಿಂದ ಪ್ರಬಂಧಗಳನ್ನು ಕಟ್ಟುತ್ತಾರೆ. ಆ ಸಂಭಾಷಣೆಗಳೋ ತುಂಬ ವಿನೋದಮಯವಾಗಿ ಓದಿಸಿಕೊಳ್ಳುವ ಪ್ರಹಸನಗಳಾಗಿ ತೋರುತ್ತವೆ. ಆ ಮಾತುಕತೆಯಲ್ಲಿಯ ಮಾತು ಕೂಡ ಆಡುನುಡಿಯ ಲಾವಣ್ಯದಿಂದ ಹೊಳೆಯುವಂತಹವುಗಳು.

ಕಲಾತ್ಮಕವಾಗಿ ಹಾಗೂ ಕಾವ್ಯಾತ್ಮಕವಾಗಿ ಪ್ರಬಂಧಗಳನ್ನು ಹಿಗ್ಗಿಸುವ ರೀತಿ ಮಾಲತಿ ಪಟ್ಟಣಶೆಟ್ಟಿಯವರ ಮತ್ತೊಂದು ವಿಶೇಷತೆಯಾಗಿದೆ. ಕವಿಯಾಗಿರುವ ಅವರು ಲಾಲಿತ್ಯಮಯವಾಗಿ ವಾಕ್ಯಗಳನ್ನು ಜೋಡಿಸಿ ಇಡಬಲ್ಲರು. ಅಂದರೆ ತಾವು ನಿರ್ವಹಿಸುತ್ತಿರುವ ವಸ್ತುವನ್ನು ಸುಲಲಿತವಾಗಿ ಓದಿಸಿಕೊಂಡು ಹೋಗುವಂತೆ ಮಾಡಬಲ್ಲರು. ಅನುಭವಕ್ಕೆ ತಕ್ಕುದಾದ ಭಾಷೆಯನ್ನು ಬಳಸಬಲ್ಲರು. ಭಾವನಾತ್ಮಕ ವಸ್ತುವಿದ್ದರೆ ಅದಕ್ಕೆ ಬೇಕಾಗುವ ಭಾಷೆಯೇ ಬೇರೆ, ಹರಟೆ ಮತ್ತು ತಮಾಷೆಯ ಪ್ರಸಂಗಗಳಿದ್ದರೆ ಅದಕ್ಕೆ ಬೇಕಾಗುವ ಭಾಷೆಯೇ ಬೇರೆ. ಉದಾಹರಣೆಗಾಗಿ ‘ಈ ಧಗೆಯನ್ನು ಕಳೆವ ನನ್ನ ಬಗೆ ಬಗೆ’, ‘ಸಂದರ್ಶಕರ ಸಂದರ್ಶನ’, ‘ಟೊಮೆಟೊ ರಾಮಾಯಣ’ ಮುಂತಾದ ಅವರ ಪ್ರಬಂಧಗಳಲ್ಲಿಯ ಭಾಷೆ ಮತ್ತು ಅದರ ನಿರ್ವಹಣೆ ತಮಾಷೆಯಿಂದ ಪ್ರಸಂಗಗಳನ್ನು ಬಣ್ಣಿಸುವದ್ದಾಗಿದೆ.

ಬಿಸಿಲಿನ ತಾಪವನ್ನು ಬಣ್ಣಿಸುವ ‘ಧಗೆಯನ್ನು ಕಳೆವ ಬಗೆ’ ತುಂಬ ವಿನೋದಮಯವಾಗಿ ನಿರೂಪಿಸಲ್ಪಟ್ಟಿದೆ: “ಉಶ್..ಉಶ್..ಉಶ್..ಸಾಕ್ ಸಾಕಾತು. ಎಷ್ಟು ಬಿಸಲೋ ನನ್ನಪ್ಪಾ! ಕುಂತರ ಸಮಾಧಾನ ಇಲ್ಲಾ ನಿಂತರ ಇಲ್ಲಾ. ಉಂಡರ ಇಲ್ಲಾ. ಉಣದಿದ್ದರ ಇಲ್ಲಾ. ನಾಲ್ಕ ಕಾಳು ನೀರ್ ಕುಡದರೂ ಇಲ್ಲಾ! ಬಕೆಟ್‍ಗಟ್ಟಲೆ ತಣ್ಣೀರು ಸುರಕೊಂಡ ಜಳಕಾ ಮಾಡಿದರೂ ಇಲ್ಲಾ! ಸೂರ್ಯ ಆಕಾಶದಾಗಿನ ತನ್ನ ರಸ್ತೆ ಬಿಟ್ಟು ಕೆಳಗಿಳಿದು ನಮ್ಮ ರಸ್ತೆದಾಗ ಅಡ್ಡಾಡಕತ್ತಾನೋ ಏನೋ”ಎಂದೆಲ್ಲ ಸುರುವಾಗುವ ಈ ಪ್ರಬಂಧ ವಿನೋದದೊಂದಿಗೆ ಬೇಸಿಗೆಯ ತಾಪತ್ರಯಗಳನ್ನು ನಗುನಗುತ್ತಲೆ ಬಣ್ಣಿಸುತ್ತದೆ. ಬರೀ ತಾಪತ್ರಯ ಅಷ್ಟೇ ಅಲ್ಲ, ಬಿಸಿಲಿನಿಂದಾಗುವ ಪ್ರಯೋಜನಗಳನ್ನು ಇದು ಬಣ್ಣಿಸುವ ರೀತಿ ಆಪ್ಯಾಯಮಾನವಾದದ್ದು: ‘ಬಾಲ್ಕನ್ಯಾಗ ತುಂಬಿ ತುಳುಕೋ ಬಿಸಿಲು! ಬ್ಯಾಳಿ, ಕಾಳು, ಮೆಣಸಿನಕಾಯಿ, ಹುಣಸೆಹಣ್ಣು ಒಣಾ ಹಾಕತೇನಿ. ಇಡೀ ವರ್ಷಕ್ಕಂತ ಸಾಬೂದಾಣಿ ಸಂಡಗಿ, ಬಾಳಕದ ಮೆಣಸಿನಕಾಯಿ ಮಾಡಿ ಒಣಗಿಸತೇನಿ. ಟೆರೆಸ್ ಮ್ಯಾಲೆ ಮಲಗುವ ಗಾದಿ, ಹೊತ್ತುಕೊಳ್ಳುವ ಚಾದರ, ಕೌದಿ, ತಲೆದಿಂಬು ಇಟ್ಟುಬಾರಪ್ಪಾ ಅಂತ ಮಗಗ ಹೇಳತೇನಿ.’

ಗಂಡಸರು ಇಂತಹ ಪ್ರಬಂಧಗಳನ್ನು ಬರೆದರೆ ಅವುಗಳನ್ನು ತಿನ್ನುವ ರುಚಿಯ ಬಗ್ಗೆ ಬರೆದಾರು! ಆದರೆ ಇದು ಮಹಿಳೆಯೊಬ್ಬಳ ಅನುಭವ ಕಥನವಾಗಿರುವುದರಿಂದ ಬೇಳೆ-ಕಾಳುಗಳನ್ನು ಒಣಗಿಸುವುದು, ಜಮಖಾನೆ-ಚಾದರಗಳನ್ನು ಹರವಿಹಾಕುವುದರಲ್ಲಿಯ ಸುಖಗಳನ್ನು ತುಂಬ ಆದ್ರ್ರವಾಗಿ ಬಣ್ಣಿಸುತ್ತದೆ. ಬೇವು, ಮಾವು, ಹುಣಸೆ ಮತ್ತಿತರ ಮರಗಳು ಮನುಷ್ಯರಿಗೆ ಎಷ್ಟು ಅವಶ್ಯಕ ಎಂಬುದನ್ನು ಬೇಸಿಗೆ ಹೇಳಿಕೊಡುತ್ತದೆ. ಅದನ್ನೆ ಲೇಖಕಿ ‘ಬ್ಯಾಸಗಿ ದಿವಸಕ್ಕ ಬೇವಿನಮರ ತಂಪ. ಭೀಮಾರತಿಯೆಂಬ ಹೊಳಿ ತಂಪ’ ಎಂಬ ಜನಪದ ಹಾಡನ್ನು ನೆನಪಿಸಿಕೊಂಡು ರೋಗನಿರೋಧಕ ಬೇವಿನ ವಿವಿಧ ಉಪಯೋಗಗಳನ್ನು ಉಲ್ಲೇಖಿಸುತ್ತಾರೆ. ‘ಸಂದರ್ಶಕರ ಸಂದರ್ಶನ’ ಪ್ರಬಂಧದಲ್ಲಿ ಲೇಖಕಿಯೊಬ್ಬಳನ್ನು ಸಂದರ್ಶಿಸಲಿಕ್ಕೆ ಬಂದಿರುವ ನಾಲ್ಕು ಜನ ಯುವತಿಯರನ್ನೆ ಸಂದರ್ಶನ ಮಾಡಿ ಅವರ ಗುರಿ, ಕನಸು, ಇಚ್ಛೆಗಳನ್ನು ತಿಳಿಯುವ ಪರಿ ಸೊಗಸಾಗಿ ನಿರೂಪಿತವಾಗಿದೆ.

ನೆನಪುಗಳನ್ನು ಕುರಿತ ‘ನೆನಪುಗಳೇ ನೀವೆಂದೂ ಕರಗದಿರಿ…’ ಎನ್ನುವ ಪ್ರಬಂಧವಂತೂ ತುಂಬ ಆದ್ರ್ರವಾಗಿ ನಿರೂಪಿಸಲ್ಪಟ್ಟಿದ್ದು ಮನಸ್ಸಿನ ಭಾವನೆಗಳನ್ನು ಉಕ್ಕೇರಿಸುತ್ತದೆ. ಯುವ ಪ್ರಾಧ್ಯಾಪಕಿಯೊಬ್ಬಳು ತನ್ನ ಮೇಲೆ ತುಂಬ ಪ್ರಭಾವ ಬೀರಿರುವ ಶಿಕ್ಷಕರೊಬ್ಬರನ್ನು ನೆನೆಸಿಕೊಳ್ಳುವ ಮತ್ತು ಎಷ್ಟೋ ವರ್ಷಗಳಾದ ಮೇಲೆ ಅವರು ಅಚಾನಕ್ ಆಗಿ ಇವಳನ್ನು ಭೆಟ್ಟಿಯಾಗುವ ಹೃದಯಂಗಮ ಸನ್ನಿವೇಶವನ್ನು ಲೇಖಕಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ.  ತನಗೆ ಬೋಧಿಸಿದ ಶಿಕ್ಷಕನೊಬ್ಬನನ್ನು ತಾನು ಮನಸಾರೆ ಪ್ರೀತಿಸುತ್ತೇನೆ ಎಂದು ಆಕೆ ಹೇಳಬೇಕೆಂದುಕೊಂಡ ಮಾತು ಅವಳಲ್ಲಿಯೇ ಉಳಿಯುವುದು. ಆದರೆ ಆತ ತೋರಿಸಿದ ಪ್ರೀತಿ, ಅವಳಲ್ಲಿ ತುಂಬಿದ ಸ್ಥೈರ್ಯ ಎಂದೂ ಮರೆಯಾಗಲಾರವು. ಒಂದು ಸುಗಂಧಿತ ನೆನಪಾಗಿ, ಬೆಳದಿಂಗಳಿನ ತುಣುಕಾಗಿ ಅವರ ನೆನಪು ಇದ್ದೇ ಇರುತ್ತದೆ ಎಂದು ಆಕೆ ಯೋಚಿಸುವುದರೊಂದಿಗೆ ಪ್ರಬಂಧ ಮುಕ್ತಾಯವಾಗುತ್ತದೆ. ಈ ಪ್ರಬಂಧ ಕಾಣಿಸುವ ಧನಾತ್ಮಕ ಸಂಗತಿಗಳು ಹೆಚ್ಚು ಇಷ್ಟವಾಗುತ್ತವೆ. ‘ಬದುಕಿನಲ್ಲಿ ಯಾರು ಯಾರ ಜೊತೆ ಕೊನೆತನಕ ಇರಲು ಸಾಧ್ಯ?’ ಎಂದು ನಂಬಿಕೊಂಡಿದ್ದವಳು ‘ಯಾರೋ ನಮ್ಮನ್ನು ಪ್ರೀತಿಸುತ್ತಾರೆ ಎಂಬ ನಂಬುಗೆಯೇ ಎಷ್ಟು ಚೆಂದ!’ ಎಂದು ನೆನಪುಗಳಿಂದ ಬದುಕನ್ನು ಸುಂದರವಾಗಿಸುತ್ತಾಳೆ. ಮನಸ್ಸಿನಲ್ಲಿ ಹುದುಗಿರುವ ಸುಮಕೋಮಲ ಭಾವನೆಗಳನ್ನು ಅಭಿವ್ಯಕ್ತಗೊಳಿಸುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ. ಹದಿಹರೆಯದ ಮನಸ್ಸು ಮತ್ತು ಪ್ರೌಢ ಮನಸ್ಸೊಂದರ ತಾಕಲಾಟಗಳನ್ನು ಇದು ನಿರೂಪಿಸುವಂತಿದೆ.            

ಮಹಿಳಾ ಸಂವೇದನೆಗಳಿಂದ ಈ ಪ್ರಬಂಧ ಪ್ರೋಕ್ಷಿತವಾಗಿದೆ. ಅವಳಿಗೆ ಕಾಣುವ ಚಂದ್ರ ಹೆಣ್ಣಿನ ಹಣೆಯ ಮೇಲೆ ಬೊಟ್ಟಿನಂತೆ ಕಾಣುವ ಚಂದ್ರನಾಗಿದ್ದಾನೆ. ಗಿಡಗಳಲ್ಲಿ ಅರಳಿರುವ ಹೂಗಳ ಬಣ್ಣ ಅದೆಷ್ಟು ಆಕರ್ಷಕ ಎಂದು ಆಕೆ ಮನಸೋಲುತ್ತಾಳೆ. ಧಾರವಾಡದ ಬಗೆಗಿನ ಒಂದು ಪ್ರಬಂಧದಲ್ಲಿ ಧಾರವಾಡವನ್ನು ಇವರು ವರ್ಣಿಸಿರುವ ಪರಿ ತುಂಬ ಸೊಗಸಾಗಿದೆ. ಇಲ್ಲಿಯ ಸುಭಾಸ ರಸ್ತೆ ಹೆಣ್ಣಿನ ಬೈತಲೆಗೆ ಕಟ್ಟಿದ ಮಣಿಸರದಂತಿದೆ ಎಂದು ಹೇಳುತ್ತಾರೆ. ಜ್ಯುಬಿಲಿ ಸರ್ಕಲ್‍ನಿಂದ ಗಾಂಧಿ ಚೌಕದವರೆಗೆ ಅವರು ಕೊಡುವ ಚಿತ್ರಗಳು ತುಂಬ ಸ್ವಾರಸ್ಯಕರವಾಗಿವೆ. ಲೈನ ಬಜಾರ್‍ದಲ್ಲಿಯ ತರುಣ ತರುಣಿಯರ ನಗೆಯಬ್ಬರ, ಮಕ್ಕಳ ಚಿಲಿಪಿಲಿ ಮುಂತಾದ ಸಂಗತಿಗಳು ಕತೆಗಾರ್ತಿಯ ಸೂಕ್ಷ್ಮ ಒಳನೋಟಗಳನ್ನು ಹೇಳುವಂತಿವೆ.

ಮುರುಘಾಮಠದ ಜಾತ್ರೆಯ ವಿಶಿಷ್ಟತೆಯನ್ನು ಅವರು ಹೇಳುತ್ತಾರೆ. ಶ್ರಾವಣದಲ್ಲಿ ಬರುವ ಸೋಮೇಶ್ವರ ದೇವಸ್ಥಾನ, ಗುಪ್ತಗಾಮಿನಿಯಾಗಿರುವ ಶಾಲ್ಮಲಾ ನದಿಯನ್ನು ಕುರಿತ ಮಾಲತಿ ಪಟ್ಟಣಶೆಟ್ಟಿಯವರ ಲಹರಿ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಬೇಂದ್ರೆಯವರ ‘ಸಣ್ಣ ಸೋಮವಾರ’ ಪದ್ಯವನ್ನು ಅವರು ಉದಾಹರಿಸಿ ಸೋಮೇಶ್ವರನ ಪ್ರಶಾಂತ ವಾತಾವರಣ ಇಂದಿನ ದಿನಗಳಲ್ಲಿ ಬಹುತೇಕ ಮಾಯವಾಗಿದೆ ಎಂದು ಹೇಳಿರುವುದು ವಾಸ್ತವವಾಗಿದೆ. ನಗರಸಭೆ ಮತ್ತು ನಾಗರಿಕರು ಇಂತಹ ಸ್ಥಳಗಳನ್ನು ಕಾಪಾಡಿಕೊಳ್ಳಬೇಕಾದ ಹೊಣೆಗಾರಿಕೆಯನ್ನು ವಿವರಿಸುತ್ತಾರೆ. ಹೆಣ್ಣಿನ ಕಣ್ಣೋಟ ಎಷ್ಟೊಂದು ಸುಂದರವೂ ಎಷ್ಟೊಂದು ಸೂಕ್ಷ್ಮವೂ ಆಗಿರುತ್ತದೆಯೆಂದು ನಾವು ಈ ಪ್ರಬಂಧಗಳನ್ನು ಓದಿದಾಗ ತಿಳಿಯಬಹುದಾಗಿದೆ. ಅಮೆರಿಕೆಯಲ್ಲಿನ ಒಂದು ಉದ್ಯಾನವನವನ್ನು ಲೇಖಕಿ ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಾರೆ. ಆ ಕಾಡುಗಳನ್ನು ಎಷ್ಟು ನೋಡಿದರೂ ಸಾಲದೆಂಬಂತೆ ಪ್ರತಿಸಲವೂ ಆ ದೃಶ್ಯದಿಂದ ತಮ್ಮ ಕಣ್ಣುಗಳನ್ನು ಕಿತ್ತುಕೊಂಡು ನಡೆಯಬೇಕಾದ ಪ್ರಸಂಗ ಬರುತ್ತಿತ್ತೆಂದು ಬರೆಯುತ್ತಾರೆ.

ಈ ಪ್ರಬಂಧ ಸಂಕಲನದ ವೈಶಿಷ್ಟವೆಂದರೆ ಇದರೊಳಗೆ ಹುದುಗಿರುವ ಭಾವ ಸಾಂದ್ರತೆ, ಕುತೂಹಲಕಾರಿ ನಿರೂಪಣೆ ಹಾಗೂ ಹೆಣ್ಣಿನ ದೃಷ್ಟಿಕೋನದಿಂದ ಬಣ್ಣಿಸಲಾಗಿರುವ ಬದುಕಿನ ಹಲವು ಮುಖಗಳ ಅನಾವರಣ. ಜೀವನದ ಹಲವು ದುರ್ಭರ ಪ್ರಸಂಗಗಳನ್ನು ತುಂಬ ಆತ್ಮವಿಶ್ವಾಸ ಮತ್ತು ವಿನೋದದಿಂದ ಎದುರಿಸಿದ ಪ್ರಸಂಗಗಳ ಸ್ವಾರಸ್ಯಕರ ನಿರೂಪಣೆಯಾಗಿಯೂ ಇಲ್ಲಿಯ ಬರಹಗಳನ್ನು ಓದಬಹುದು.

 

 

Leave a Reply

Your email address will not be published.