ಬಟಾ ಬಯಲಾಯಿತು ‘ಉಕ್ಕಿನ ಮನುಷ್ಯ’ನ ನಿಜ ಬಣ್ಣ!

ಇತಿಹಾಸ ಕಂಡಿರುವ ಮಹಾನ್ ಆತ್ಮಪ್ರಶಂಸಕರ ಸಾಲಿಗೆ ಈಗಾಗಲೆ ಸೇರಿ ಹೋಗಿದ್ದಾರೆ ನಮ್ಮ ಪ್ರಚಂಡ ನಾಯಕಮಣಿ. ರೋಮ್ ನಗರ ಹೊತ್ತಿ ಉರಿಯುತ್ತಿದ್ದಾಗ ಪಿಟೀಲು ಬಾರಿಸುತ್ತಿದ್ದ ನೀರೋ ಕಾಲ ಕಾಲಕ್ಕೆ ಇತಿಹಾಸದ ಪುಟಗಳಿಂದ ಎದ್ದು ಬರುತ್ತಲೇ ಇರುತ್ತಾನೆ. ಇದೀಗ ಭಾರತವೇ ಅವನ ಕಾರ್ಯಕ್ಷೇತ್ರ.

-ಡಿ.ಉಮಾಪತಿ

ಕರೋನಾವನ್ನು ಮಣಿಸಲು ವೈಜ್ಞಾನಿಕ ಮನೋಭಾವ, ನಿರಂತರ ಎಚ್ಚರ, ಅಪಾರ ಪೂರ್ವಸಿದ್ಧತೆ ಅತ್ಯಗತ್ಯ. ಅಜ್ಞಾನ, ಅಂಧಶ್ರದ್ಧೆ, ಅಪ್ರಾಮಾಣಿಕತೆ, ನಿರ್ಲಕ್ಷ್ಯದ ಧೋರಣೆ ಅದರ ಮುಂದೆ ನಡೆಯುವುದಿಲ್ಲ. ಉಡಾಫೆಯ ಆಟ ನಡೆಯದು ಎಂಬುದು ರುಜುವಾತಾಗಿ ಹೋಗಿದೆ. 

ಬಂಗಾಳದ ಅಧಿಕಾರ ಹಿಡಿಯಲು ಸಿಡಿಲಾಗಿ ಘರ್ಜಿಸಿದ್ದ ಪ್ರಚಂಡ ನಾಯಕರು ಘೋರ ಸೋಲಿನ ನಂತರ ಗಾಢ ಮೌನಕ್ಕೆ ಶರಣು ಹೋಗಿದ್ದರು. ದೇಶವನ್ನು ಕವಿದ ಕೋವಿಡ್ ದುರಂತಕ್ಕೆ ಕಿವುಡರು, ಕುರುಡರು. ನಿರುಪಾಯರು, ನಿಷ್ಕ್ರಿಯರು, ನಿಶ್ಯಕ್ತರಾಗಿ ಹೋದರು. ಸರ್ವಶಕ್ತರೆಂಬಂತೆ ಗುಡುಗುತ್ತಿದ್ದ ‘ಉಕ್ಕಿನ ಮಾನವ’ನ ನಿಜಟೊಳ್ಳು, ಮಹಾಸಂಕಟದ ಅಗ್ನಿಪರೀಕ್ಷೆಯಲ್ಲಿ ಬೆತ್ತಲಾಗಿ ಹೋಯಿತು.

ಪ್ರಜೆಗಳ ಕಷ್ಟ ಸಂಕಟಗಳು ಕತ್ತಲೆ ಕಣ್ಣೀರು ಇವರನ್ನು ನಿಜಕ್ಕೂ ಬಾಧಿಸಿದ್ದೇ ಆಗಿದ್ದಲ್ಲಿ, ಅದರ ಸುಳಿವುಗಳು ಬಹುಕಾಲ ಕಾಣಿಸಿಕೊಳ್ಳಲಿಲ್ಲ. ಐವತ್ತಾರು ಅಂಗುಲ ಹರವಿನ ಎದೆಯಲ್ಲಿ ಅನುಕಂಪದ ಜಲವಿಲ್ಲ. ಅದರ ಪಸೆಯೂ ಕಾಣದಲ್ಲ ಎಂಬುದು ಕಠೋರ ಸತ್ಯ. ಕರೋನಾ ಕಾಲಭೈರವನ ಕುಣಿತ ತಣಿಯತೊಡಗಿದ ನಂತರ ಪ್ರಧಾನಿ ಭಾವುಕರಾಗಿ ಕಂಬನಿ ಜಿನುಗಿಸಿದರು. ಜನಾಕ್ರೋಶದ ಎದುರು ಭಾವುಕತೆಯ ಗುರಾಣಿಯನ್ನು ಅಡ್ಡ ಹಿಡಿದರು. ಕೋವಿಡ್ ಕೊಳ್ಳೆ ಹೊಡೆದ ಎಷ್ಟೋ ಕಾಲದ ನಂತರ ದೇಶದ ದಿಡ್ಡಿ ಬಾಗಿಲನ್ನು ಭಾವುಕತೆಯಿಂದ ಮುಚ್ಚುವ ಎದೆಗಾರಿಕೆ ತೋರಿದರು.

ಸಾಮಾನ್ಯ ಕಾಲದಲ್ಲಿ ಸರ್ವಾಂತರಿಯಾಗಿ ವಿಜೃಂಭಿಸುವ ಪ್ರಧಾನಿ ಮೋದಿಯವರು ಕೋವಿಡ್ ನರಮೇಧದ ನಟ್ಟ ನಡುವೆ ಹಠಾತ್ತನೆ ಅಂತರ್ಧಾನರಾಗಿಬಿಟ್ಟಿದ್ದರು.

ಮೊದಲ ಅಲೆ ಮತ್ತು ಎರಡನೆಯ ಅಲೆಯ ನಡುವಣ ಅಂತರದ ಬಿಡುವನ್ನು ಪೆÇೀಲು ಮಾಡಿದರು. ಆಸ್ಪತ್ರೆಗಳು- ಆಮ್ಲಜನಕ- ಔಷಧಿಗಳು- ಲಸಿಕೆಗಳ ಆಲೋಚನೆಯನ್ನೇ ಮಾಡಲಿಲ್ಲ. ನಿಜವಾದ ನಾಯಕನ ಶಕ್ತಿ ಸಾಮಥ್ರ್ಯ ಮುನ್ನೋಟ ಯೋಜನಾಶಕ್ತಿಯ ಸತ್ವ ಪರೀಕ್ಷೆ ನಡೆಯುವುದು ಸಮರಕಾಲದಲ್ಲೇ ವಿನಾ ಶಾಂತಿಯ ದಿನಗಳಲ್ಲಿ ಅಲ್ಲ. ಈ ಪರೀಕ್ಷೆಯ ಬೆಂಕಿಗೆ ಮುಖ್ಯಮಂತ್ರಿಗಳನ್ನು ಮುಂದೆ ತಳ್ಳಿ ತಾವು ತೆರೆಮರೆಗೆ ಸರಿದುಬಿಟ್ಟರು.

ಪವಿತ್ರನದಿಗಳಾದ ಗಂಗೆ ಯಮುನೆಯರು ಕೋವಿಡ್ ಶವವಾಹಕಗಳಾಗಿ ಹೋದರು. ಶವ ಸುಡುವ ಕಟ್ಟಿಗೆಯ ದರಗಳು ಮುಗಿಲಿಗೇರಿದವು. ವಾಹನಗಳ ಹಳೆಯ ಟೈರುಗಳ ತಂದು ಚಿತೆ ಹೊತ್ತಿಸಿ ಸುಟ್ಟ ದಾರುಣ ಉದಾಹರಣೆಗಳಿವೆ. ಸತ್ತವರ ಸಂಸ್ಕಾರಕ್ಕೆ ಹಣ ಹೊಂದಿಸಲಾಗದ ಬಂಧುಗಳು ನದೀ ನೀರಿಗೆ ಶವಗಳನ್ನು ತೇಲಿಬಿಟ್ಟರು. ಬಹುತೇಕರು ಗಂಗೆ ಮತ್ತು ಯಮುನೆಯ ನದೀ ದಂಡೆಯಲ್ಲಿ ಮರಳು ತೋಡಿ ಹೂತು ಹಾಕಿದರು. ಕಣ್ಣು ಹರಿದಷ್ಟು ದೂರ ಹರಡಿ ಹಬ್ಬಿದ ಈ ಮರಳ ಸಮಾಧಿಗಳನ್ನು ನಾಯಿಗಳು ತೋಡಿ ಶವಗಳನ್ನು ಕಿತ್ತು ತಿಂದವು. ಉತ್ತರ ಭಾರತದಲ್ಲಿ ಸುರಿದ ಅಕಾಲದ ಮಳೆಯು ಮರಳನ್ನು ಕೊಚ್ಚಿ ಹಾಕಿದ ನಂತರ ಗೋಚರವಾದ ಶವಗಳನ್ನೂ ನಾಯಿಗಳು ಕಿತ್ತು ಜಗಿಯತೊಡಗಿದಾಗ, ನಗರಸಭೆಗಳು ಪೌರಕಾರ್ಮಿಕರನ್ನು ಕರೆತಂದು ಪುನಃ ಮರಳನ್ನು ಎಳೆದು ಮುಚ್ಚಿಸಿದವು.

ದಿಕ್ಕಿಲ್ಲದ ಶವಗಳನ್ನು ಆಸ್ಪತ್ರೆಗಳು, ಆಂಬುಲೆನ್ಸ್ ನವರು ನೀರುಪಾಲು ಮಾಡಿದರು. ಹಿಂದೀ ಪತ್ರಿಕೆಯೊಂದು ತನ್ನ 26 ವರದಿಗಾರರನ್ನು ನಿಯುಕ್ತಿ ಮಾಡಿ ನಡೆಸಿದ ತನಿಖಾ ವರದಿಯಲ್ಲಿ ಗಂಗೆಯುದ್ದಕ್ಕೆ ಎರಡು ಸಾವಿರ ಶವಗಳು ಪತ್ತೆಯಾದವು. ಜೀವಿಸಿರುವವರಿಗೆ ಆಸ್ಪತ್ರೆಯಲ್ಲಿ ಜಾಗವಿಲ್ಲ, ಸತ್ತವರಿಗೆ ಸ್ಮಶಾನದಲ್ಲಿ ಸಂಸ್ಕಾರವಿಲ್ಲ ಎಂಬ ದುಸ್ಥಿತಿ. ಹಗಲಿರುಳು ಉರಿದ ಸಹಸ್ರಾರು ಚಿತೆಗಳಿಗೆ ಲೆಕ್ಕವಿಲ್ಲ. ತಬ್ಬಲಿಗಳಾದ ಮಕ್ಕಳ ನೆತ್ತಿಯ ಮೇಲಿನ ಹೆತ್ತವರ ನೆರಳು ಎಲ್ಲ ಕಾಲಕ್ಕೂ ಸರಿದು ಹೋಯಿತು.

ಅಳುವ ದೃಶ್ಯ ಮನುಷ್ಯನನ್ನು ವಿನಮ್ರವಾಗಿಸುತ್ತದೆ, ಮಾನವೀಯಗೊಳಿಸುತ್ತದೆ. ಅನುಕಂಪ- ಸಹಾನುಭೂತಿಯನ್ನು ಹುಟ್ಟಿಸುತ್ತದೆ. ಕಣ್ಣೀರಿಡುವ ವ್ಯಕ್ತಿಯು ಸರ್ವಶಕ್ತನೇನೂ ಅಲ್ಲ, ಬದಲಾಗಿ ಮನುಷ್ಯ ಮಾತ್ರನೇ ಎಂಬ ಅನುಕಂಪ ಹುಟ್ಟಿಸುತ್ತದೆ. ಆತ ತಪ್ಪು ಮಾಡಿರಲಾರ, ಮಾಡಿದ್ದರೂ ಪರವಾಗಿಲ್ಲ, ಕಣ್ಣೀರು ಅವನ ಪಶ್ಚಾತ್ತಾಪವೇ ಇದ್ದೀತು ಎಂಬ ಭಾವನೆಯನ್ನು ಹುಟ್ಟಿಸಿಬಿಡುತ್ತದೆ.

ಆದರೆ ಹುಸಿ ಕಣ್ಣೀರು ಹಾಕಿ ಅದಕ್ಷ ಆಡಳಿತವನ್ನು ಅಸಾಮಥ್ರ್ಯವನ್ನು ಮುಚ್ಚಿಡುವುದು ಸಾಧ್ಯವಿಲ್ಲ. ವಚನಭಂಗ, ಮೋಹಭಂಗವನ್ನು, ಅದುಮಿಡುವುದು ಸುಲಭವಲ್ಲ. ಕುಸಿಯತೊಡಗಿರುವ ಜನತಂತ್ರ, ಜನಸಮುದಾಯಗಳ ವಿಶ್ವಾಸ, ಕವಿಯುತ್ತಿರುವ ನಿರುದ್ಯೋಗ, ಹದಗೆಟ್ಟಿರುವ ಅರ್ಥಸ್ಥಿತಿ, ಧೃವೀಕರಣ ರಾಜಕಾರಣದಿಂದಾಗಿ ತಲೆಯೆತ್ತುತ್ತಿರುವ ಆರ್ಥಿಕ- ಸಾಮಾಜಿಕ ಘರ್ಷಣೆಗಳ ಕುರೂಪವನ್ನು ಅಡಗಿಸುವುದು ದುಸ್ಸಾಧ್ಯವೇ ಸರಿ. ಸಾವು ನೋವುಗಳಿಗೆ ಹನಿಗೂಡದ ಕಣ್ಣುಗಳು ವರ್ಚಸ್ಸಿನ ಹಾನಿಗೆ, ಗತವೈಭವಕ್ಕೆ ಮರುಜೀವ ನೀಡಿಕೆಗೆ ರಾಜಕೀಯ ನಷ್ಟವನ್ನು ತುಂಬಿಕೊಳ್ಳುವುದಕ್ಕೆ ಕಂಬನಿ ತುಳುಕಿವೆಯೇ ವಿನಾ ಅವುಗಳಲ್ಲಿ ಪಶ್ಚಾತ್ತಾಪ ಅಥವಾ ನಿಜ ಶೋಕದ ಸುಳಿವಿಲ್ಲ.

ಕಣ್ಣೀರಿಡುವವರು ಕೋವಿಡ್ ಮಹಾಸಾಂಕ್ರಾಮಿಕವನ್ನು ಎದುರಿಸುವಲ್ಲಿ ತಮ್ಮ ಅದಕ್ಷತೆ, ಅಸಹಾಯಕತೆ ವೈಫಲ್ಯಗಳನ್ನು ಮನತೆರೆದು ಒಪ್ಪಿಕೊಳ್ಳಬೇಕಿತ್ತು. ಆಗ ಕಣ್ಣೀರಿಗೊಂದು ಅರ್ಥವಿರುತ್ತಿತ್ತು. ಆದರೆ ತಮ್ಮನ್ನು ಅತಿಮಾನವರೆಂದೇ ಭ್ರಮಿಸುವುದು ಎಲ್ಲ ಪ್ರಚಂಡ ನಾಯಕರ ಗುಣಸ್ವಭಾವ. ಎಡವಿದ್ದೇನೆ, ಕ್ಷಮಿಸಿ ಎಂದು ತಪ್ಪೋಪ್ಪಿದ ತಕ್ಷಣವೇ ತಮ್ಮ ಅತಿಮಾನವ ಪ್ರಭಾವಳಿ ಅಳಿಸಿ ಹೋದೀತು ಎಂಬ ಭಯ ಅವರನ್ನು ಕಾಡಿರುತ್ತದೆ.

ಕೋವಿಡ್ ಕುರಿತು ವಿಜ್ಞಾನ ಲೋಕವೇ ಇನ್ನೂ ಅರಿಯದಿರುವ ಅನೇಕಾನೇಕ ಸಂಗತಿಗಳಿವೆ. ಆದರೆ ಮೊದಲ ಅಲೆಯ ಇಳಿತದ ಹೊತ್ತಿಗೇ ಎಲ್ಲ ಬಲ್ಲವೆಂಬ ಅವಿವೇಕವನ್ನು ದೇಶವನ್ನು ಆಳುವವರು ತೋರಿದರು. ಕರೋನಾವನ್ನು ಯಶಸ್ವಿಯಾಗಿ ಸೋಲಿಸಿದರೆಂದು ಮೋದಿಯವರನ್ನು ಅಭಿನಂದಿಸುವ ಗೊತ್ತುವಳಿಯನ್ನು ಆಳುವ ಪಕ್ಷ ಕಳೆದ ಫೆಬ್ರವರಿಯಲ್ಲೇ ಪಾಸು ಮಾಡಿಕೊಂಡಿತ್ತು.

ಆಳುವವರ ಅವಿವೇಕ ಮತ್ತು ಅತಿಸೀಮಿತ ತಿಳಿವಳಿಕೆಗೆ ಬರೆದ ಮುನ್ನುಡಿ ಈ ಗೊತ್ತುವಳಿ. ಈ ಆತ್ಮಪ್ರಶಂಸೆಯು ಆಳುವವರ ಕಣ್ಣುಗಳಿಗೆ ಪೊರೆ ಕಟ್ಟಿಬಿಟ್ಟಿತು. ಈ ಗೊತ್ತುವಳಿಯ ಬೆನ್ನಿಗೇ ಅಪ್ಪಳಿಸಿತ್ತು ಎರಡನೆಯ ಅಲೆ. ಅಂಗಳಕ್ಕೆ ಕಾಲಿಟ್ಟಿದ್ದ ಅದರ ಕದ ಬಡಿತ ಅವರಿಗೆ ಕಾಣಿಸಲೂ ಇಲ್ಲ ಕೇಳಿಸಲೂ ಇಲ್ಲ. ಶುರುವಿನಲ್ಲಿ ನಿರಾಕರಣೆಯ ಧೋರಣೆ ತಳೆಯಲಾಯಿತು. ಸಕಾಲದಲ್ಲಿ ಲಸಿಕೆ ಖರೀದಿಸದೆ ಕಾಲಹರಣ ಮಾಡಿದ್ದು ಮೋದಿ ಸರ್ಕಾರದ ಬಲು ದುಬಾರಿ ಅಪರಾಧವಾಗಿ ಪರಿಣಮಿಸಿದೆ. ಈ ಕುರಿತು ದೇಶದ ಬಹುಮಾನ್ಯ ವೈರಾಣು ತಜ್ಞರು ಮತ್ತು ಜೀವವಿಜ್ಞಾನ ತಂತ್ರಜ್ಞರು ಸರ್ಕಾರವನ್ನು ಕಟಕಟೆಯಲ್ಲಿ ನಿಲ್ಲಿಸಿದ್ದಾರೆ.

ಕೋವಿಡ್ ಲಸಿಕೆಗೂ ರಾಷ್ಟ್ರೀಯತೆಯ ಭುಜಕೀರ್ತಿಗಳನ್ನು ತೊಡಿಸಲಾಯಿತು. ಭಾರತ ತಯಾರಿಸುವ ಎರಡು ಲಸಿಕೆಗಳು ಜಗತ್ತನ್ನೇ ಕಾಪಾಡಲಿವೆ ಎಂಬುದಾಗಿ ಎದೆಯುಬ್ಬಿಸಲಾಯಿತು. ತನ್ನ ಆಂತರಿಕ ಅಗತ್ಯವನ್ನು ನಿರ್ಲಕ್ಷಿಸಿ ರಫ್ತು ಮಾಡುವ ಬಡಾಯಿ ತೋರಲಾಯಿತು. ಭಾರತದಲ್ಲಿ ತಯಾರಾದ ಲಸಿಕೆಯನ್ನು ಮೂರನೆಯ ಹಂತದ ಪರೀಕ್ಷಾರ್ಥ ವಿಧಿಗಳು ಪೂರ್ಣಗೊಳ್ಳುವ ಮುನ್ನವೇ ಅದನ್ನು ಬಳಕೆಗೆ ಬಿಡುಗಡೆ ಮಾಡಲಾಯಿತು. ಅದಾಗಲೇ ಔಷಧ ನಿಯಂತ್ರಕರ ಅನುಮೋದನೆ ಪಡೆದಿದ್ದ ಫೈಜರ್ ಮತ್ತು ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗಳ ವಿಷಯದಲ್ಲಿ ವಿಳಂಬ ಧೋರಣೆ ತಳೆಯಲಾಯಿತು. ಭಾರತದಲ್ಲಿ ಅವುಗಳ ಪರೀಕ್ಷಾರ್ಥ ವಿಧಿಗಳು ಪೂರ್ಣಗೊಳ್ಳುವ ತನಕ ತಡೆದು ನಿಲ್ಲಿಸಲಾಯಿತು.

ವರ್ಷದ ಹಿಂದೆ ಕಳೆದ ಮಾರ್ಚ್ ನಲ್ಲಿಯೇ ಲಸಿಕೆ ಕಾರ್ಯಾಚರಣೆಯಲ್ಲಿ 10 ಶತಕೋಟಿ ಡಾಲರುಗಳನ್ನು ತೊಡಗಿಸಿತು ಅಮೆರಿಕೆ. ಆಗ ಲಸಿಕೆಗಳು ಇನ್ನೂ ಪ್ರಯೋಗ- ತಯಾರಿಕೆಯ ಹಂತದಲ್ಲಿದ್ದವು. ಭಾರತ ಇತ್ತ ತಯಾರಿಕೆಯಲ್ಲೂ ಹಣ ತೊಡಗಿಸಲಿಲ್ಲ, ಅತ್ತ ಸಗಟು ಮುಂಗಡ ಖರೀದಿಯ ಆಲೋಚನೆಯನ್ನೂ ಮಾಡಲಿಲ್ಲ.

2021ರ ಕೇಂದ್ರ ಬಜೆಟ್ ನಲ್ಲಿ ಕೋವಿಡ್ ಲಸಿಕೆಗೆಂದೇ 35 ಸಾವಿರ ಕೋಟಿ ರುಪಾಯಿಯನ್ನು ಮೀಸಲಿರಿಸಲಾಗಿತ್ತು. ಈ ಹಣವನ್ನು ಸಕಾಲದಲ್ಲಿ ಬಳಕೆ ಮಾಡಿ ಖರೀದಿಗೆ ಮುಂದಾಗಿದ್ದರೂ ದೇಶದ ನೂರು ಕೋಟಿ ಜನರಿಗೆ ಲಸಿಕೆ ನೀಡುವುದು ಸಾಧ್ಯವಿತ್ತು. ‘ಆತ್ಮನಿರ್ಭರ ಭಾರತ’ದ ಪೊಳ್ಳು ಪ್ರತಿಷ್ಠೆಯು ಇಷ್ಟು ದೊಡ್ಡ ಹೊಡೆತ ನೀಡುತ್ತಿರಲಿಲ್ಲ.

ಈಗಲೂ ಕೋವಿಡ್ ಲಸಿಕೆ (ಮೊದಲ ಡೋಸ್) ದಕ್ಕಿರುವ ಭಾರತೀಯರ ಪ್ರಮಾಣ ಕೇವಲ ಶೇ.17. ಇನ್ನು ಎರಡೂ ಡೋಸ್ ಹಾಕಿಸಿಕೊಂಡಿರುವ ಅದೃಷ್ಟವಂತರು ನೂರಕ್ಕೆ ನಾಲ್ಕೇ ನಾಲ್ಕು ಮಂದಿ ಮಾತ್ರ. ಮೂರನೆಯ ಅಲೆ ಮತ್ತು ವೇಷ ಬದಲಿಸಿದ ಹೆಚ್ಚು ಘಾತಕ ವೈರಾಣುಗಳ ದಾಳಿಯ ಅಪಾಯವನ್ನು ಎದುರಿಸಬೇಕಿದ್ದರೆ ಸದ್ಯಕ್ಕೆ ಲಸಿಕೆ ನೀಡಿಕೆಯೊಂದೇ ಪರಿಹಾರ. ಆದರೆ ಈ ಬಾಬತ್ತಿನಲ್ಲಿ ಆಮೆಯ ನಡಿಗೆ ಅಕ್ಷಮ್ಯ.

ಕೋವಿಡ್ ಗಿಂತ ಮಿಗಿಲಾಗಿ ಜನರ ಪ್ರಾಣಗಳ ಬಲಿ ಪಡೆದದ್ದು ಆಮ್ಲಜನಕದ ತೀವ್ರ ಅಭಾವ. ವರ್ಷದ ಹಿಂದೆ ಕರೋನಾದ ಮೊದಲ ಅಲೆ ಆರಂಭ ಆಗಿದ್ದ 2020ರ ಮಾರ್ಚ್ ತಿಂಗಳಲ್ಲೂ ದೇಶದಲ್ಲಿ ಆಮ್ಲಜನಕಕ್ಕಾಗಿ ಹಾಹಾಕಾರ ಎದ್ದಿತ್ತು. ಆಮ್ಲಜನಕ ಘಟಕಗಳ ಸ್ಥಾಪನೆಯ ಆಲೋಚನೆ ಸರ್ಕಾರಕ್ಕೆ ಆಗಲೇ ಬಂದಿದ್ದು ಹೌದು. ನಾಲ್ಕೇ ದಿನಗಳಲ್ಲಿ ಮೂರುಸಾವಿರ ಕೋಟಿ ರುಪಾಯಿಗಳ ದೇಣಿಗೆ PM CARES ನಿಧಿಗೆ ಹರಿದು ಬಂದಿತ್ತು. 162 ಆಮ್ಲಜನಕ ಘಟಕಗಳ ಸ್ಥಾಪನೆಗೆ ಮಂಜೂರಾತಿ ದೊರೆತಿತ್ತು. ಈ ಘಟಕಗಳ ಅಂದಾಜು ವೆಚ್ಚ 201 ಕೋಟಿ ರುಪಾಯಿ ಮಾತ್ರ. ಆದರೂ 2020ರ ಮಾರ್ಚ್ ನಿಂದ 2020ರ ಅಕ್ಟೋಬರ್ ವರೆಗೆ ಈ ಘಟಕಗಳು ಮೇಲೇಳಲೇ ಇಲ್ಲ.

ಕೋವಿಡ್ ನರಮೇಧದ ನಡುವೆ ಹೊಸ ಸಂಸತ್ ಭವನ ಮತ್ತು ಪ್ರಧಾನಿ ನಿವಾಸ ಸೇರಿರುವ ಸೆಂಟ್ರಲ್ ವಿಸ್ತಾ ನಿರ್ಮಾಣ ಅಬಾಧಿತವಾಗಿ ನಡೆದಿದೆ. ಇದರ ಅಂದಾಜು ವೆಚ್ಚ 20 ಸಾವಿರ ಕೋಟಿ ರುಪಾಯಿಗಳು. ಮಾರಣಹೋಮದ ನಡುವೆ ನಡೆಯುವ ಮೋಜಿನ ಮೇಜವಾನಿಯಷ್ಟೇ ವಿಕೃತ ಕೃತ್ಯವಿದು. ಯಾತನೆಯಲ್ಲಿ ಸತ್ತು ಸಂಸ್ಕಾರವನ್ನೂ ಕಾಣದೆ ನೀರುಪಾಲು ನಾಯಿ ನರಿ ಪಾಲಾದ ಕಳೇಬರಗಳ ಅಡಿಪಾಯದ ಮೇಲೆ ಮೈ ತಳೆಯುವ ಈ ಸೌಧಗಳ ಗೋಡೆ ಮಾಡುಗಳು ನೋವು ನರಳಾಟವನ್ನು ಪಿಸುಗುಡುವುದಿಲ್ಲವೇ?

ಕೇಂದ್ರ ಸ್ವಾಸ್ಥ್ಯ ಮಂತ್ರಾಲಯದ ಭಾಗವೇ ಆಗಿರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ನ್ಯಾಷನಲ್ ಕೋವಿಡ್ ಟಾಸ್ಕ್ ಫೋರ್ಸ್ ಕೂಡಿ ರೂಪಿಸಿರುವ `ಕೋವಿಡ್ ಪ್ರೋಟೋಕಾಲ್ ಗೆ ಅನುಗುಣವಾಗಿ ಅಲೋಪತಿ ಚಿಕಿತ್ಸೆ ಶುಶ್ರೂಷೆ ಜರುಗಿದೆ. ಆದರೆ ಈ ಚಿಕಿತ್ಸೆಯಿಂದ ಲಕ್ಷಾಂತರ ಮಂದಿ ಈ ಸತ್ತಿದ್ದಾರೆ ಎಂಬ ಅತ್ಯಂತ ಹೊಣೆಗೇಡಿ ಹೇಳಿಕೆ ನೀಡಿದ ಬಾಬಾ ರಾಮದೇವ್ ಅವರ ಕೂದಲೂ ಕೊಂಕಲಿಲ್ಲ. ಆದರೆ ಸೆಗಣಿ ಗೋಮೂತ್ರ ಚಿಕಿತ್ಸೆಯ ದಾವೆಯನ್ನು ಪ್ರಶ್ನಿಸಿದ ಒಬ್ಬ ಪತ್ರಕರ್ತ ಮತ್ತು ಮತ್ತೊಬ್ಬ ಸಾಮಾಜಿಕ ಕಾರ್ಯಕರ್ತನನ್ನು ಮಣಿಪುರದಲ್ಲಿ ರಾಷ್ಟ್ರೀಯ ಸುರಕ್ಷತಾ ಕಾಯಿದೆಯಡಿ ಬಂಧಿಸಲಾಯಿತು.

ಗೋಮೂತ್ರ ಸೇವನೆಯಿಂದ, ಗೋವಿನ ಸೆಗಣಿಯ ಲೇಪನದಿಂದ ಕೋವಿಡ್ ವೈರಾಣು ನಾಶವಾಗುತ್ತದೆಂಬ ಪ್ರಚಾರದ ಆರ್ಭಟ ನಡೆಯಿತು. ಬೀದಿ ಬೀದಿಗಳಲ್ಲಿ ಬೇವಿನ ಸೊಪ್ಪಿನ ಹೊಗೆ ಹಾಕಿ, ಶಂಖಘೋಷ ಮಾಡಿ ಕರೋನಾ ಓಡಿಸುವ ಅವಿವೇಕವೂ ಜರುಗಿತು. ಕೇಂದ್ರ ಸರ್ಕಾರದ ಆರೋಗ್ಯ ಶಾಖೆಗಳು ಅಂಧಶ್ರದ್ಧೆಗೆ ಕುಮ್ಮಕ್ಕು ನೀಡಿದವು. ನಿತ್ಯ ಗೋಮೂತ್ರ ಸೇವನೆಯಿಂದಾಗಿ ತಮ್ಮನ್ನು ಕರೋನಾ ಬಾಧಿಸಿಲ್ಲ ಎಂಬ ಸಾಧ್ವಿ ಪ್ರಜ್ಞಾ ಅವರು ನೆನ್ನೆ ಹಠಾತ್ತನೆ ಉಸಿರಾಟದ ತೊಂದರೆಯನ್ನು ಎದುರಿಸಿದರು. ಅವರನ್ನು ವಿಮಾನ ಆಂಬುಲೆನ್ಸ್ ನಿಂದ ಸುರಕ್ಷಿತ ಆಸ್ಪತ್ರೆಗೆ ತಲುಪಿಸಲಾಯಿತು. ಅಂಧಶ್ರದ್ಧೆಗಳ ಕುರಿತು ಪ್ರಧಾನಿ ಚಕಾರ ಎತ್ತಲಿಲ್ಲ. ಈ ಎಲ್ಲ ಎಣೆಯಿಲ್ಲದ ದುಃಖ ದುರಂತದಲ್ಲಿ ಪ್ರಧಾನಿಯವರ ಕಂಚಿನ ಕಂಠ ಬಹುತೇಕ ಅಡಗಿ ಹೋಗಿತ್ತು.

ಜಾಗಟೆ, ತಟ್ಟೆ ಬಾರಿಸಿ ಮೇಣದ ಬತ್ತಿಗಳನ್ನು ಹೊತ್ತಿಸುವ, ಶಂಖ ಊದಿಸುವ ನಾಟಕಗಳನ್ನು ಮಾಡಿಸದೆ ದೇಶದ ಸಾಂಕ್ರಾಮಿಕ ತಜ್ಞರೊಂದಿಗೆ, ಆಡಳಿತದಲ್ಲಿ ನುರಿತ ವ್ಯಕ್ತಿಗಳೊಂದಿಗೆ ಸಮಾಲೋಚನೆ ನಡೆಸಿ ಅವರ ಸಲಹೆಗಳ ಪ್ರಕಾರ ನಡೆದುಕೊಂಡಿದ್ದರೆ ಇಂದಿನ ವಿಪತ್ತನ್ನು ಸಮರ್ಥವಾಗಿ ಎದುರಿಸಬಹುದಿತ್ತು ರಾಜಕೀಯವನ್ನು ಬದಿಗಿರಿಸಿ ಸಲಹೆಗಳನ್ನು ನೀಡಿದ ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರನ್ನು ತೀವ್ರ ಅಪಮಾನಕ್ಕೆ ಗುರಿಪಡಿಸಲಾಯಿತು.

ಮೂಢನಂಬಿಕೆ ಬಿತ್ತುವವರನ್ನು ಬೀಡುಬೀಸು ಛೂ ಬಿಟ್ಟು, ವೈಜ್ಞಾನಿಕವಾಗಿ ಆಲೋಚಿಸುವವರನ್ನು ಜೈಲುಗಳಿಗೆ ತಳ್ಳಲಾಯಿತು. ಎತ್ತುಗಳನ್ನು ಚಕ್ಕಡಿಯ ಹಿಂದೆ ಕಟ್ಟಿದರೆ ಅದು ಮುಂದೆ ಚಲಿಸುವುದಾದರೂ ಎಂತು? ಕೋವಿಡ್ ಮಹಾಮಾರಿಯ ದಿನಗಳಲ್ಲಿ ಪಾಲಿಸಬೇಕಾದ ನಿಯಮಗಳನ್ನು ಆಳುವವರೇ ಗಾಳಿಗೆ ತೂರಿದರು. ಚುನಾವಣೆಗಳು ಮತ್ತು ಹಿಂದೂ ಉತ್ಸವಾಚರಣೆಗಳಿಗೆ ಕೋವಿಡ್ ಒಂದು ಲೆಕ್ಕವೇ ಅಲ್ಲ ಎಂಬುದು ಅವರ ಧೋರಣೆಯಾಗಿತ್ತು.

ಹರಿದ್ವಾರದ ಕುಂಭಮೇಳದಲ್ಲಿ ಜನವರಿ 14ರಿಂದ ಏಪ್ರಿಲ್ 27ರ ತನಕ ಗಂಗಾ ಸ್ನಾನ ಮಾಡಿದ ಒಟ್ಟು ಭಕ್ತಾದಿಗಳು 91 ಲಕ್ಷ ಮಂದಿ. ಕೋವಿಡ್ ಮುನ್ನೆಚ್ಚರಿಕೆಯ ಯಾವ ಕ್ರಮಗಳೂ ಜಾರಿಯಲ್ಲಿ ಇರಲಿಲ್ಲ. ಸೋಂಕಿತರ ಸಂಖ್ಯೆ ಒಮ್ಮಿಂದೊಮ್ಮಿಗೆ ಗಗನಕ್ಕೆ ಜಿಗಿಯಿತು. ಮುಖ್ಯ ಧಾರ್ಮಿಕ ಅಖಾಡಾವೊಂದರ ಪ್ರಧಾನ ಗುರುಗಳು ಸೋಂಕಿಗೆ ಬಲಿಯಾದರು. ಈ ಘಟನೆಯ ನಂತರ ಹಠಾತ್ತನೆ ಎಚ್ಚೆತ್ತುಕೊಂಡ ಪ್ರಧಾನಿಯವರು ಬಾಕಿ ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸುವಂತೆ ಕರೆ ನೀಡಿದರು. ಆದರೆ ತಡವಾಗಿ ಹೋಗಿತ್ತು. ವಾರದೊಪ್ಪತ್ತಿನ ಹಿಂದೆ ಅವರು ಕುಂಭಮೇಳವನ್ನು ಸಾರ್ವಜನಿಕವಾಗಿ ಅನುಮೋದಿಸಿದ್ದರು. ಉತ್ತರಭಾರತದ ದಿನಪತ್ರಿಕೆಗಳ ಮುಖಪುಟಗಳಲ್ಲಿ ಅನುಮೋದನೆಯ ಜಾಹೀರಾತುಗಳು ಅವರ ಭಾವಚಿತ್ರ ಸಹಿತ ಅಚ್ಚಾಗಿದ್ದವು.

ಕಳೆದ ವರ್ಷ ಹಠಾತ್ತನೆ ಹೇರಿದ ಅಮಾನುಷ ಲಾಕ್ ಡೌನ್ ಮಾನವ ಇತಿಹಾಸದ ಮಹಾವಲಸೆಯ ದುರಂತವನ್ನು ಸೃಷ್ಟಿಸಿತ್ತು. ಲಕ್ಷಾಂತರ ಶ್ರಮಜೀವಿಗಳು ನೂರಾರು ಕಿ.ಮೀ. ದೂರವನ್ನು ಬಿರುಬಿಸಿಲಿನ ದಳ್ಳುರಿಯಲ್ಲಿ ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾಯಿತು. ಎಷ್ಟೋ ಮಂದಿ ರಸ್ತೆಯಲ್ಲೇ ಪ್ರಾಣ ಬಿಟ್ಟ ದುರಂತಗಳು ಜರುಗಿದವು. ಅಂತಹ ಜನರ ಮೇಲೆ ಸರ್ಕಾರಗಳು- ಪೋಲೀಸರು ಅಮಾನುಷವಾಗಿ ನಡೆದುಕೊಂಡರು. ಲವಲೇಶ ಕರುಣೆಯೂ ಅಲ್ಲಿ ಕಾಣದೆ ಹೋಯಿತು. ಕಾರ್ಮಿಕ ವಲಸೆಗಾರರು ತಮ್ಮ ಗೂಡು ಸೇರಿಕೊಳ್ಳಲು ರೈಲುಗಾಡಿಗಳನ್ನು ಓಡಿಸದ ಕೇಂದ್ರ ಸರ್ಕಾರ, ಮೊನ್ನೆ ಸಾಂಕ್ರಾಮಿಕದ ನಟ್ಟನಡುವೆಯೂ ಕುಂಭಮೇಳಕ್ಕೆ ವಿಶೇಷ ರೈಲುಗಾಡಿಗಳನ್ನು ಏರ್ಪಾಡು ಮಾಡಿ ಧನ್ಯವಾಯಿತು.

ಮಹಾಸಾಂಕ್ರಾಮಿಕದ ನಟ್ಟನಡುವೆಯೂ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಕಾರ್ಯ ಬಿಡುವಿಲ್ಲದೆ ನಡೆಯಿತು. ಈ ಘನಕಾರ್ಯದ ಸಲುವಾಗಿ ಲಾಕ್ ಡೌನ್ ಘೋಷಣೆಯನ್ನೇ ಮುಂದಕ್ಕೆ ಹಾಕಿದ್ದು ಹೌದು. ರಾಜಸ್ತಾನ, ಮಹಾರಾಷ್ಟ್ರವೂ ಇಂತಹ ಪ್ರಯತ್ನಕ್ಕೆ ಹೊರತಾಗಲಿಲ್ಲ. ಪಶ್ಚಿಮ ಬಂಗಾಳ ಮತ್ತು ಅಸ್ಸಾಮಿನಲ್ಲಿ ಅಧಿಕಾರ ಹಿಡಿಯುವುದೇ ಪರಮಗುರಿಯಾಯಿತು. 

ಜನರ ಸಾವು-ನೋವುಗಳಿಗಿಂತ ಮತಗಳೇ ಮುಖ್ಯವೆನಿಸಿದವು. ಚುನಾವಣಾ ಪ್ರಚಾರದ ಬೃಹತ್ ಸಭೆಗಳಲ್ಲಿ ಸಹಸ್ರಾರು ಜನ ಸೇರಿದರು. ಶಾರೀರಿಕ ಅಂತರ, ಮಾಸ್ಕ್ ಧರಿಸುವ ಕುರಿತು ಮಹಾರಥಿಗಳದು ಜಾಣ ಮೌನ. ಸಭಿಕರು ಅವರ ಪಾಲಿಗೆ ನಡೆದಾಡುವ ಮತಗಳೇ ವಿನಾ ಉಸಿರಾಡುವ ಮನುಷ್ಯರು ಎನಿಸಲಿಲ್ಲ.

34 ದಿನಗಳಷ್ಟು ದಾಖಲೆಯ ದೀರ್ಘಾವಧಿ ವಿಧಾನಸಭಾ ಚುನಾವಣೆಗಳನ್ನು ಪಶ್ಚಿಮ ಬಂಗಾಳದಲ್ಲಿ ನಡೆಸಲಾಯಿತು. ಎಂಟು ಹಂತಗಳ ಮತದಾನ. ಮೊದಲ ಹಂತದ ಮತದಾನಕ್ಕೆ ವಾರದಷ್ಟು ಮುನ್ನ ಅಲ್ಲಿದ್ದ ಸಕ್ರಿಯ ಕೋವಿಡ್ ಸೋಂಕಿತರ ಸಂಖ್ಯೆ 3,380. ಏಪ್ರಿಲ್ 26ರಂದು ಏಳನೆಯ ಹಂತದ ಮತದಾನ ಜರುಗುವ ಹೊತ್ತಿಗೆ ಈ ಸಂಖ್ಯೆ 95 ಸಾವಿರಕ್ಕೆ ಏರಿತ್ತು.  ಈಗಲೂ ಬಂಗಾಳದ ಹಲವಾರು ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಏರುಮುಖವಾಗಿ ಸಾಗಿದೆ.

ಏಪ್ರಿಲ್ 17ರ ಬಹಿರಂಗ ಸಭೆಯಲ್ಲಿ ನೆರೆದಿದ್ದ ಭಾರೀ ಜನಸ್ತೋಮವನ್ನು ಕಂಡು ಪ್ರಧಾನಿಯವರು ಆನಂದಾತಿರೇಕಗೊಂಡರು. `ನನ್ನ ಬದುಕಿನಲ್ಲಿ ಮೊದಲ ಸಲ ಇಂತಹ ರ್ಯಾಲಿಯನ್ನು ಕಾಣುತ್ತಿರುವೆ. ಕಣ್ಣು ಹಾಯಿಸಿದ ದಿಕ್ಕಿನಲ್ಲೆಲ್ಲ ಜನವೋ ಜನ. ಇದು ಚಮತ್ಕಾರವೇ ಸರಿ’ ಎಂದಿದ್ದರು. ಅವು ಕೋವಿಡ್ ಸೋಂಕಿಗೆ ಬಲಿಯಾದವರ ಚಿತೆಗಳು ಹಗಲಿರುಳು ಉರಿಯುತ್ತಿದ್ದ ದಿನಗಳು. ಗಂಗೆ ಯಮುನೆಯಲ್ಲಿ ಕೋವಿಡ್ ಸೋಂಕಿತರ ಕಳೇಬರಗಳು ಕೊಳೆತು ತೇಲಿದ್ದ ದಿನಗಳು. ಗಂಗೆಯ ದಡದ ಕಿಲೋಮಿಟರು ವಿಸ್ತಾರದ ಮರಳ ರಾಶಿಯಲ್ಲಿ ಸಾವಿರಾರು ಕಳೇಬರಗಳನ್ನು ಹುಗಿದು ರಾಮನಾಮದ ವಸ್ತ್ರಗಳನ್ನು ಹೊದಿಸಿ ಮಲಗಿಸಿದ್ದ ದಿನಗಳು.

ಕೋವಿಡ್ ದಾಳಿ ಪರಾಕಾಷ್ಠೆ ತಲುಪಿದ್ದ ದಿನಗಳಲ್ಲಿ ಉತ್ತರಪ್ರದೇಶ ಸರ್ಕಾರ ಪಂಚಾಯತಿ ಚುನಾವಣೆಗಳನ್ನು ನಡೆಸಿತು. ಒಂಬತ್ತು ಕೋಟಿ ಮತದಾರರು ಸಾಲುಗಟ್ಟಿ ಮತ ಚಲಾಯಿಸಿದರು. ಫಲಿತಾಂಶಗಳ ದಿನವೂ ಕೋವಿಡ್ ಶಿಷ್ಟಾಚಾರಗಳ ಪಾಲನೆ ಅಗಲಿಲ್ಲ. ಮತಗಟ್ಟೆ ಕೆಲಸದಲ್ಲಿ ತೊಡಗಿದ್ದ 1600ಕ್ಕೂ ಹೆಚ್ಚು ಶಿಕ್ಷಕರು ಕೋವಿಡ್ ಸೋಂಕಿನಿಂದ ಮಡಿದರು. ಸರ್ಕಾರಿ ಅಂಕಿ ಅಂಶಗಳ ಪ್ರಕಾರವೇ ರಾಜ್ಯದ ಮೂರನೆಯ ಒಂದರಷ್ಟು ಗ್ರಾಮಗಳು ಕೋವಿಡ್ ಸೋಂಕಿಗೆ ಸಿಲುಕಿವೆ. ಸಾವುಗಳಿಗಂತೂ ಲೆಕ್ಕವಿಲ್ಲವಾಯಿತು.

ಒಟ್ಟಾರೆ ಬಟಾಬಯಲಾಯಿತು ಉಕ್ಕಿನ ಮನುಷ್ಯನ ನಿಜ ಬಣ್ಣ.

Leave a Reply

Your email address will not be published.