‘ಬಡವ’ರಿಗೆ ಮೀಸಲಾತಿ: ಮೋದಿಯವರ ‘ಗರೀಬಿ ಹಠಾವೋ’ ಕಾರ್ಯಕ್ರಮ!

ಕಳೆದ ಸಂಚಿಕೆಯಲ್ಲಿ ಆರ್ಥಿಕತೆ ಆಧಾರದ ಮೀಸಲಾತಿಯ ಸಾಂವಿಧಾನಿಕ ಮಾನ್ಯತೆ ಕುರಿತು ಕಾನೂನು ಕಾಲೇಜಿನ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಸತೀಶ್‍ಗೌಡ ಅವರು ವಿಶ್ಲೇಷಿಸಿದ್ದರು. ಚರ್ಚೆಯ ಮುಂದುವರಿದ ಭಾಗವಾಗಿ ಹೆಸರಾಂತ ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ ಅವರು ಇಲ್ಲಿ ತಮ್ಮ ವಿಚಾರ ಮಂಡಿಸಿದ್ದಾರೆ.

ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮೀಸಲಾತಿ ವ್ಯಾಪ್ತಿಗೆ ಸೇರದ (ಮೇಲ್ಜಾತಿಗಳ) ಬಡ ಎಂದು ಅದು ಹೇಳುವ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ಮೀಸಲಾತಿ ಕಲ್ಪಿಸುವ ಅವಸರದ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ಮುಂದಿನ ಲೋಕಸಭಾ ಚುನಾವಣೆಗಳ ಎರಡೂವರೆ ತಿಂಗಳ ಮುನ್ನವಷ್ಟೇ, ಸಂಸತ್ ಅಧಿವೇಶನದ ಕೊನೆಯ ದಿನ (ರಾಜ್ಯಸಭೆಯ ಅಧಿವೇಶನವನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಿ) ಸಂಬಂಧಿತ ಸಂವಿಧಾನ ತಿದ್ದುಪಡಿ ಮಸೂದೆಯನ್ನು ತರಾತುರಿಯಲ್ಲಿ ಮಂಡಿಸಿದ್ದಲ್ಲದೆ ಉಭಯ ಸದನಗಳ ಅಂಗೀಕಾರ ಪಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಈಗ ಈ ಹೊಸ ಮೀಸಲಾತಿ ಕೇಂದ್ರ ಸರ್ಕಾರದ ಮಟ್ಟಿಗಾದರೂ ಜಾರಿಗೆ ಬಂದಿದೆ ಎಂದು ಸರ್ಕಾರ ಹೇಳುತ್ತಿದೆ.

ಸಂವಿಧಾನದ ಮುಖ್ಯ ಆಶಯಗಳಲ್ಲೊಂದಾದ ಸಾಮಾಜಿಕ ನ್ಯಾಯದ ಅರ್ಥವನ್ನೇ ತಿದ್ದಬಯಸುವ ಇಂತಹ ಮಹತ್ವದ ಮಸೂದೆಯ ಬಗ್ಗೆ ವಿಸ್ತೃತ ಚರ್ಚೆಯೇ ನಡೆಯದೆ ಅದು ಅಂಗೀಕರವಾದ್ದದರ ಹಿಂದಿನ ರಾಷ್ಟ್ರೀಯ ತುರ್ತಾದರೂ ಏನು? ಎಂಬ ಪ್ರಶ್ನೆಗೆ ಸರ್ಕಾರದ ಕಡೆಯಿಂದ ಸಮರ್ಪಕ ಉತ್ತರವಿಲ್ಲ. ಇನ್ನುದೃಷ್ಟಿಯಿಂದ ಸರ್ಕಾರದ ಈ ಕ್ರಮದ ಬಗ್ಗೆ ವಿವಿಧ ವಿರೋಧ ಪಕ್ಷಗಳು ತಳೆದಿರುವ ನಿಲುವುಗಳು ನೀಡುತ್ತಿರುವ ಪ್ರತಿಕ್ರಿಯೆಗಳೂ ಕುತೂಹಕಾರಿಯಾಗಿದ್ದು ಈ ಮೀಸಲಾತಿ ರಾಜಕಾರಣವು ಯಾವ ವಿಕ್ಷಿಪ್ತ ಮಟ್ಟವನ್ನು ತಲುಪಿದೆ ಎಂಬುದನ್ನು ಸೂಚಿಸುವಂತಿವೆ. ಕೆಲವು ವಿರೋಧ ಪಕ್ಷಗಳು ಇದನ್ನು ಚುನಾವಣಾ ‘ಗಿಮಿಕ್’ ಎಂದೂ, ಇನ್ನು ಕೆಲವು ಸಂವಿಧಾನಬಾಹಿರವೆಂದೂ ಕರೆಯುತ್ತಲೇ ಈ ಸಂವಿಧಾನ ತಿದ್ದುಪಡಿ ಮಸೂದೆಗೆ ಬೆಂಬಲ ನೀಡಿವೆ! ಬಿಎಸ್‍ಪಿ ನಾಯಕಿ ಮಾಯಾವತಿಯವರಂತೂ ಇದೊಂದು ವಿವೇಚನಾಹೀನ ಕ್ರಮವೆಂದು ವರ್ಣಿಸುವ ಉಸಿರಿನಲ್ಲೇ ಅದನ್ನು ಬೆಂಬಲಿಸುವುದಾಗಿಯೂ ಹೇಳಿದ್ದಾರೆ!! ವಿರೋಧ ಪಕ್ಷಗಳ ಈ ಅಸಂಬದ್ಧ ಮತ್ತು ಹಾಸ್ಯಾಸ್ಪದ ವರ್ತನೆಗೆ ಕಾರಣ, ಬಿಜೆಪಿಯೂ ಸೇರಿದಂತೆ ರಾಷ್ಟ್ರದ ಎಲ್ಲ ರಾಜಕೀಯ ಪಕ್ಷಗಳೂ ಸಾಂವಿಧಾನಿಕ ಘನೋದ್ದೇಶದ ಮೀಸಲಾತಿಯನ್ನು ಮತದಾರ ವರ್ಗಗಳ ಓಲೈಕೆ ಕಾರ್ಯಕ್ರಮವನ್ನಾಗಿ ಪರಿವರ್ತಿಸಿ ವಿವಿಧ ಕಾಲಘಟ್ಟಗಳಲ್ಲಿ ಅದನ್ನು ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರಕ್ಕನುಸಾರವಾಗಿ ಹೊಸ ಹೊಸ ಸಮುದಾಯಗಳಿಗೆ ಅನ್ವಯವಾಗುವಂತೆ ಅನುಷ್ಠಾನ ಮಾಡುತ್ತಾ ಬಂದಿರುವುದು. ಇದರ ಒಟ್ಟು ಪರಿಣಾಮವೆಂದರೆ, ನಮ್ಮ ಸಂವಿಧಾನದಲ್ಲಿ ಮೀಸಲಾತಿ ಕಲ್ಪನೆಯನ್ನು ಅಳವಡಿಸಲಾಗಿರುವ ಸದುದ್ದೇಶವೇ ವಿಕಾರಗೊಂಡು, ಇಂದು ಅದನ್ನು-ಇತರೆ ಹಿಂದುಳಿದ ವರ್ಗಗಗಳಿಗೆ ಮೀಸಲಾತಿ ಕಲ್ಪಿಸಿದ ಮಂಡಲ್ ವರದಿ ಅನುಷ್ಠಾನದ ಸಂಸದರ್ಭದಲ್ಲಿ- ಬಲವಾಗಿ ವಿರೋಧಿಸುತ್ತಿದ್ದ ಪಕ್ಷವೇ ಅದರ ರಾಜಕೀಯ ಲಾಭ ಗಳಿಸಲು ಮುಂದಾಗಿರುವುದು.

ಆದರೆ ಈ ಎಲ್ಲ ಮೀಸಲಾತಿ ಯೋಜನೆ ಕಾರ್ಯಗತವಾಗಲಾರಂಭಿಸಿದ ಕಾಲಾನುಕಾಲದ ನಂತರ ಆಗಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಅವಕಾಶ ಲಭ್ಯತೆಗಳ ಪ್ರಮಾಣದಲ್ಲಿನ ಬದಲಾವಣೆಗಳ ಯಾವ ಸಮೀಕ್ಷೆಯನ್ನೂ ಯಾವ ಸರ್ಕಾರವೂ ನಡೆಸಿಲ್ಲ.

ನಮ್ಮ ಸಂವಿಧಾನ ಸಮಾನ ಅವಕಾಶಗಳ ಮೂಲಕ ಸಮಾನತೆಯನ್ನು ಸಾಧಿಸುವ ಗಣರಾಜ್ಯದ ಆದರ್ಶವನ್ನು ಹೇಳುವುದಾದರೂ, ಈ ಪ್ರಕ್ರಿಯೆಗೆ ಅಡಚಣೆಯಾಗಿರುವ ಅಂಶಗಳನ್ನು ಗುರುತಿಸಿ ಅಂತಹ ಅಡಚಣೆಗಳಿಗೆ (ಅಥವಾ ತಾರತಮ್ಯಗಳಿಗೆ) ಒಳಗಾಗಿರುವ ಜನಸಮುದಾಯಗಳಿಗೆ ಒಟ್ಟು ಸಮಾಜದ ಹಿತಾಸಕ್ತಿಗಳಿಗೆ ಧಕ್ಕೆಯಾಗದಷ್ಟು ಪ್ರಮಾಣದ (ಸರ್ವೋಚ್ಚ ನ್ಯಾಯಾಲಯದ ಒಂದು ತೀರ್ಪಿನಂತೆ ಇದು ಒಟ್ಟು ಶೇ. 50ನ್ನು ಮೀರಬಾರದು.) ಮೀಸಲಾತಿಯನ್ನು ನಿಗದಿಪಡಿಸಿದೆ. ಇದಕ್ಕೆ ಬಳಸಲಾಗಿರುವ ಒರೆಗಲ್ಲೆಂದರೆ, ಈ ಸಮುದಾಯಗಳು ಪ್ರಭುತ್ವದ ಅಧಿಕಾರ ರಚನೆಯಲ್ಲಿ ಸಕ್ರಿಯ ಪಾತ್ರ ವಹಿಸುವಷ್ಟು ಪ್ರಮಾಣದಲ್ಲಿ ಪ್ರಾತಿನಿಧ್ಯ ಹೊಂದಿವೆಯೇ ಎಂಬ ಲೆಕ್ಕಾಚಾರ. ಸಾಮಾಜಿಕ ವಾಸ್ತವದ ಈ ಲೆಕ್ಕವಿಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಏನು ಅರ್ಥ? ಈ ಲೆಕ್ಕಾಚಾರದಲ್ಲಿ ಅಸ್ಪøಶ್ಯತೆ ಇತ್ಯಾದಿ ಚಾರಿತ್ರಿಕ ಕಾರಣಗಳಿಂದಾಗಿ ಅವಕಾಶ ವಂಚಿತವಾಗಿದ್ದ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಸಮುದಾಯಗಳು ಸಹಜವಾಗಿಯೇ ಮೀಸಲಾತಿ ವ್ಯಾಪ್ತಿಗೆ ಸೇರಿದವು. ಆದರೆ ಈ ಸಮುದಾಯಗಳ ಹೊರತಾಗಿಯೂ ಇತರ ಕೆಲ ಸಮುದಾಯಗಳು ಪ್ರಭುತ್ವದ ಅಧಿಕಾರ ರಚನೆಯಲ್ಲಿ ಉಚಿತ ಪ್ರಾತಿನಿಧ್ಯ ಹೊಂದಿಲ್ಲ ಎಂದು ಕಂಡುಬಂದಾಗ ಇದಕ್ಕೆ ಈ ಸಮುದಾಯಗಳು ಶಿಕ್ಷಣ ಮತ್ತು ಉದ್ಯೋಗಾವಕಾಶ ಸ್ಪರ್ಧೆಗಳಲ್ಲಿ ಇತರರೊಂದಿಗೆ ಸಮನಾಗಿ ಸ್ಪರ್ಧಿಸಲಾಗದಿರುವುದೇ ಕಾರಣವೆಂದೂ, ಮತ್ತೆ ಇದಕ್ಕೆ ಅವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವುದೇ ಕಾರಣ ಎಂದು ಅಧ್ಯಯನಗಳ ಮೂಲಕ (ಅಂದರೆ ಆಯೋಗಗಳ ವರದಿಗಳ) ಮೂಲಕ ಖಚಿತಪಡಿಸಿಕೊಂಡು ಅವುಗಳಿಗೆ ಸೂಕ್ತ ಪ್ರಮಾಣದ (ಶೇ. 27) ಮೀಸಲಾತಿ ಒದಗಿಸಲಾಯಿತು. ಆದರೆ ಈ ಸಮುದಾಯಗಳ ಎಲ್ಲರಿಗೂ ಸಾರಾಸಗಟಾಗಿ ಮೀಸಲಾತಿ ಒದಗಿಸದೆ, ಅವರಲ್ಲಿ ಆರ್ಥಿಕವಾಗಿ ಒಂದು ಮಟ್ಟ ಮೀರಿರುವವರನ್ನು ‘ಕೆನೆಪದರ’ ವರ್ಗವೆಂದು ಕರೆದು ಅವರನ್ನು ಮೀಸಲಾತಿ ವ್ಯಾಪ್ತಿಯಿಂದ ಹೊರಗಿಡಲಾಯಿತು. (ಅಂದರೆ ಸಂವಿಧಾನದ ಪ್ರಕಾರ ಆರ್ಥಿಕ ಹಿಂದುಳಿದಿರುವಿಕೆಯ ಆಧಾರದ ಮೀಸಲಾತಿಗೆ ಅವಕಾಶ ಇಲ್ಲವೆಂದಾಯಿತು.) ಹೀಗೆ ಈ ಮೀಸಲಾತಿಗಳ ಹಿಂದೆ ಇರುವ ಪ್ರಮುಖ ಕಾರಣ ನಮ್ಮ ಜಾತಿ ಪದ್ಧತಿ ಮತ್ತು ಅದರಲ್ಲಿ ಅಂತರ್ಗತವಾಗಿರುವ ಶ್ರೇಣೀಕರಣದಿಂದಾಗಿ ಆದ ಅವಕಾಶ ವಂಚನೆ.

ಆದರೆ ಈ ಎಲ್ಲ ಮೀಸಲಾತಿ ಯೋಜನೆ ಕಾರ್ಯಗತವಾಗಲಾರಂಭಿಸಿದ ಕಾಲಾನುಕಾಲದ ನಂತರ ಆಗಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಅವಕಾಶ ಲಭ್ಯತೆಗಳ ಪ್ರಮಾಣದಲ್ಲಿನ ಬದಲಾವಣೆಗಳ ಯಾವ ಸಮೀಕ್ಷೆಯನ್ನೂ ಯಾವ ಸರ್ಕಾರವೂ ನಡೆಸಿಲ್ಲ. ನಡೆಸಿದ್ದರೆ ಪ್ರತಿ ದಶಕದ ನಂತರವೂ ಈ ಮೀಸಲಾತಿ ಕಾರ್ಯಕ್ರಮದಲ್ಲಿ ಹಲವು ಬದಲಾವಣೆಗಳನ್ನು ತರಲು(ಉದಾ: ಕೆಲವು ಸಮುದಾಯಗಳನ್ನು ಮೀಸಲಾತಿಯಿಂದ ಹೊರಗಿಡುವುದು/ಹೊಸದಾಗಿ ಒಳಗೆ ತರುವುದು ಅಥವಾ ಕೆಲ ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಕಡಿಮೆ/ಹೆಚ್ಚು ಮಾಡುವುದು ಇತ್ಯಾದಿ) ಸಾಧ್ಯವಿತ್ತು. ಆ ಮೂಲಕ ಮೀಸಲಾತಿಯ ತಾತ್ವಿಕತೆಗೆ ಒಂದು ಜನ ವಿಶ್ವಾಸವೂ ದೊರಕುತ್ತಿತ್ತು. ಮೀಸಲಾತಿಯ ರೂವಾರಿ ಎನಿಸಿರುವ ಡಾ. ಅಂಬೇಡ್ಕರ್ ಅವರೇ ಮೀಸಲಾತಿಗೆ ಒಂದು ದಶಕದ ಮಿತಿ ಹಾಕಿದ್ದರು ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹದು. ಆದರೆ ನಮ್ಮ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ಮೀಸಲಾತಿಯನ್ನು ಜಾತಿ ಆಧಾರಿತ ರಾಜಕೀಯ ಕೊಡುಗೆ ಮತ್ತು ಆಮಿಷಗಳಂತೆ ಜನರ ಮುಂದಿಟ್ಟು ಅದರ ಸಾಂವಿಧಾನಿಕ ಪಾವಿತ್ರ್ಯವನ್ನೇ ಹಾಳು ಮಾಡಿವೆ. ಜನ ಕೂಡ ಇದನ್ನು ಜಾತಿ ಮೇಲಾಟದ ಸಾಧನದಂತೆ ಕಂಡು ಅದಕ್ಕಾಗಿ ಜಾತಿ ಹೋರಾಟಗಳನ್ನು ರೂಪಿಸತೊಡಗಿವೆ. ಉದಾಹರಣೆಗೆ [ರಿಶಿಷ್ಟ ಜಾತಿ-ವರ್ಗಗಗಳಳ್ಲಿನ ಮೀಸಲಾತಿಯಲ್ಲಿ ಅಸಮತೋಲನವಿದೆ ಎಂಬ ದೂರನ್ನು ಅಧ್ಯಯನ ಮಾಡಲು ನಮ್ಮ ಕರ್ನಾಟಕ ಸರ್ಕಾರ ನೇಮಿಸಿದ್ದ ನ್ಯಾ. ಎ.ಜೆ. ಸದಾಶಿವ ಆಯೋಗ ವರದಿ ನೀಡಿ ವರ್ಷಗಳೇ ಕಳೆದರೂ, ಕೆಲ ಜಾತಿ ಹಿತಾಸಕ್ತಿಗಳ ಒತ್ತಡದ ರಾಜಕಾರಣದಿಂದಾಗಿ ಗಂಭೀರ ಪರಿಶೀಲೆನೆಗೂ ಒಳಗಾಗಿಲ್ಲ! ಇದರಿಂದಾಗಿ ನಮ್ಮ ಸಮಾಜದಲ್ಲಿನ ಮೂಲ ಅಸಮಾನತೆಗೆ ಮತ್ತು ಆ ಮೂಲಕ ಮೀಸಲಾತಿಗೆ ಏನು ಕಾರಣವಾಗಿತ್ತೋ ಆ ಜಾತಿ ವಿಂಗಡಣೆ ಮತ್ತು ಪ್ರತ್ಯೇಕತೆಯ ಪ್ರಜ್ಞೆ ಹೆಚ್ಚಾಗುತ್ತಾ ಸಾಮಾಜಿಕ ಐಕ್ಯತೆ ಮತ್ತು ಸೌಹಾರ್ದ ಕಡಿಮೆಯಾಗುತ್ತಾ ಅಶಾಂತಿ ಹರಡುತ್ತಿದೆ.

ಯುವಜನರಲ್ಲಿ ನವಭಾರತದ ನಿರ್ಮಾಣದ ಹೊಸ ಕನಸು ಬಿತ್ತಿ ಅಧಿಕಾರಕ್ಕೆ ಬಂದಿದ್ದ ನರೇಂದ್ರ ಮೋದಿಯವರು ತಮ್ಮ ಈ ಅಧಿಕಾರಾವಧಿಯಲ್ಲಿ ಅದನ್ನು ಸಾಕಾರಗೊಳಿಸಲು ವಿಫಲರಾಗಿ ಈಗ ಅಧಿಕಾರ ಉಳಿಸಿಕೊಳ್ಳಲು ದೇಶ ಕಟ್ಟುವ ಹಳಸಲು ಮಾದರಿಗೇ ಮೊರೆಹೋಗುತ್ತಿರುವುದು ನಿಜವಾಗಿಯೂ ಒಂದು ದುರಂತಮಯ ದೃಶ್ಯವಾಗಿದೆ.

ಮೀಸಲಾತಿ ಕುರಿತ ಜನರ ಈ ಅ-ರಾಜಕ ಕಲ್ಪನೆಯನ್ನು ಬಳಸಿಕೊಂಡು ಇಂದು ಕೇಂದ್ರ ಸರ್ಕಾರ ಮೇಲ್ಜಾತಿ ಬಡವರಿಗೆ ಮೀಸಲಾತಿ ಕಲ್ಪಿಸಲು ಮತ್ತು ಅದರ ಬಗ್ಗೆ ಪರ-ವಿರೋಧಧ ಚರ್ಚೆಗಳಿಗೆ ಕಾರಣವಾಗಿ ನಮ್ಮ ಸಮಾಜವನ್ನು ಮತ್ತಷ್ಟು ಜಾತೀಯಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಏಕೆಂದರೆ, ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಆಧಾರಗಳ ಹೊರತಾಗಿ ಆರ್ಥಿಕ ಕಾರಣವೂ ಸೇರಿದಂತೆ ಮತ್ತಾವ ಕಾರಣದಿಂದಲೂ ಯಾವುದೇ ಸಾಮಾಜಿಕ ವರ್ಗಕ್ಕೆ ಮೀಸಲಾತಿ ಒದಗಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ. ಏಕೆಂದರೆ ಬಡತನದ ಪರಿಣಾಮಗಳ ಪರಿಹಾರಕ್ಕೆಂದೇ ಬೇರೆ ಕಾನೂನುಗಳಿದ್ದು, ಮೀಸಲಾತಿ ಎಂಬುದು ಬಡತನ ಪರಿಹಾರ ಕಾರ್ಯಕ್ರಮವಾಗಿಲ್ಲ. ಹಾಗೆ ಸಂವಿಧಾನ ತಿದ್ದುಪಡಿಯ ಮೂಲಕ ಬೇಕಾಬಿಟ್ಟಿ ಅವಕಾಶ ಕಲ್ಪಿಸಹೊರಟರೆ ಅದು ಸಂವಿಧಾನದ ಮೂಲ ಸ್ವರೂಪಕ್ಕೇ ಧಕ್ಕೆ ತರುವ ಸಂಗತಿಯಾಗಿ ಅಂತಹ ತಿದ್ದುಪಡಿ ಕಾನೂನು ಪ್ರಕಾರ ಅಸಿಂಧುವಾಗುತ್ತದೆ. ಜೊತೆಗೆ ಈ ಮೇಲ್ಜಾತಿ ಬಡವರು ಎಂದು ಹೇಳಲಾಗುವ ವರ್ಗಗಳಿಗೆ ನಮ್ಮ ಪ್ರಭುತ್ವದ ಅಧಿಕಾರ ರಚನೆಯಲ್ಲಿ ಸೂಕ್ತ ಪ್ರಾತಿನಿಧ್ಯವಿಲ್ಲ ಎಂದು ಸೂಚಿಸುವ ಯಾವ ನಿರ್ದಿಷ್ಟ ಅಧ್ಯಯನವನ್ನೂ ಸರ್ಕಾರ ಇದಕ್ಕೆ ಬೆಂಬಲವಾಗಿ ಈವರೆಗೆ ಮುಂದಿಟ್ಟಿಲ್ಲ. ಈ ದೃಷ್ಟಿಯಿಂದಲೂ ಈ ಹೊಸ ಮೀಸಲಾತಿ ಪ್ರಯತ್ನ ನ್ಯಾಯಾಲಯದ ವಿಚಾರಣೆಯ ಪ್ರಾಥಮಿಕ ಹಂತದಲ್ಲೇ ತಿರಸ್ಕೃತವಾಗುವ ಸಂಭವವಿದೆ. ಅಲ್ಲದೆ, ಮೀಸಲಾತಿ ಪ್ರಮಾಣ ಹೆಚ್ಚಿದಷ್ಟೂ ಆಡಳಿತದಲ್ಲಿ ದಕ್ಷತೆಯ ವಿಷಯದಲ್ಲೆ ಹೆಚ್ಚೆಚ್ಚು ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೂ ಈ ತಿದ್ದುಪಡಿ ಅಸಾಧುವಾಗುವ ಸಂಭವವಿದೆ. ಏಕೆಂದರೆ, ಮೀಸಲಾತಿಯು ಒಟ್ಟಾರೆ ಆಡಳಿತ ದಕ್ಷತೆಗೆ ಕುಂದುಂಟು ಮಾಡದ ಪ್ರಮಾಣ ಮತ್ತು ರೀತಿಯಲ್ಲಿ ಮಾತ್ರ ಜಾರಿಗೆ ತರಬೇಕೆಂಬ ಎಚ್ಚರವೂ ಮೀಸಲಾತಿ ಅಳವಡಕೆಯ ಕಾನೂನು ಪ್ರಕ್ರಿಯೆಯಲ್ಲಿ ಸೇರಿದೆ. ಜೊತೆಗೇ ಮೇಲ್ಜಾತಿ ಬಡವರು ಎಂದು ಗುರುತಿಸಲು ಸರ್ಕಾರ ನಿಗದಿ ಮಾಡಿರುವ 8 ಲಕ್ಷ ರೂ.ಗಳ ವಾರ್ಷಿಕ ವರಮಾನ (ಅಂದರೆ ತಿಂಗಳಿಗೆ ಸುಮಾರು 66 ಸಾವಿರ ರೂಪಾಯಿಗಳು!) ಅಥವಾ ತತ್ಸಮವಾದ ಸ್ಥಿರಾಸ್ತಿ ಮೌಲ್ಯವು ಹಿಂದುಳಿದ ಜಾತಿಗಳ ‘ಕೆನೆಪದರ’ವನ್ನು ಸರ್ಕಾರ ನಿರ್ಧರಿಸುವ ಮಿತಿಯಂತೆಯೇ ಹಾಸ್ಯಾಸ್ಪದವಾಗಿದ್ದು ನಿಜವಾದ ಬಡಜನರ ಮೇಲೆ ಪ್ರಯೋಗ ಮಾಡಿರುವ ಕ್ರೂರ ವ್ಯಂಗ್ಯವೇ ಆಗಿದೆ. ಈ ಮಿತಿಯನ್ನು ನಿರ್ಧರಿಸುವ ಮೂಲಕ ಸರ್ಕಾರ ದೇಶದ ಶೇ. 90ರಷ್ಟು ಜನರನ್ನು ಬಡವರೆಂದು ಘೋಷಿಸಿ ತನ್ನ ಬಡತನ ನಿವಾರಣೆಯ ಈವರೆಗಿನ ಸಾಧನೆಗಳನ್ನು-‘ಅಭಿವೃದ್ಧಿ’ ಸಂಕಥನವನ್ನು-ತಾನೇ ನಿರಾಕರಿಸಿಕೊಂಡಿರುವ ಪೆದ್ದುತನ ತೋರಿದೆ! ಮೀಸಲಾತಿಯಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ ಮತ್ತು ಇದು ಪ್ರತಿಭಾ ಪಲಾಯನಕ್ಕೆ ಕಾರಣವಾಗುತ್ತಿದೆ ಎಂದು ವಾದಸುತ್ತಿದ್ದವರು ಕೂಡ ಈಗ ಈ ಹೊಸ ಮೀಸಲಾತಿ ಪ್ರಸ್ತಾವವನ್ನು ಬೆಂಬಲಿಸುತ್ತಿರುವುದು ವಿಪರ್ಯಾಸಕರ. ಏಕೆಂದರೆ, ಶೇ. 50ರ ಗರಿಷ್ಠ ಮೀಸಲಾತಿಯ ಹೊರತಾಗಿ ಈವರೆಗೆ ‘ಪ್ರತಿಭಾವಂತ’ರ ಸ್ಪರ್ಧೆಗೆಂದೇ ಮುಕ್ತವಾಗಿದ್ದ ಶೇ. 50ರಷ್ಟು ಅವಕಾಶಗಳಲ್ಲಿ ಈಗ ಶೇ. 10ರಷ್ಟು ಖೋತಾ ಆಗಿದೆ! ಹಾಗೆ ನೋಡಿದರೆ, ಈ ಹೊಸ ಮೀಸಲಾತಿಗಾಗಿ ಬಡವರ್ಗಗಳೆಂದು ಮಾನ್ಯ ಮಾಡಲು ಈಗ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಆದಾಯ/ಆಸ್ತಿ ಮಿತಿ ಮೇಲೆ ತಿಳಿಸಿದಂತೆ ಹೆಚ್ಚೂ ಕಡಿಮೆ ಸಮಾಜದ ಬಹುಪಾಲನ್ನು ಒಳಗೊಳ್ಳುವಂತಿರುವುದರಿಂದ ಈ ಹೊಸ ಮೀಸಲಾತಿ ನಿಜವಾಗಿ ಮೀಸಲಾತಿಯೇ ಆಗಿರದೆ, ಮುಕ್ತ ಸ್ಪರ್ಧೆಗಿದ್ದ ಅವಕಾಶಗಳಲ್ಲೇ ಒಂದು ಭಾಗವನ್ನು ತೆಗೆದು ‘ಮೀಸಲು’ ಎಂಬ ಹೆಸರನಡಿ ಮತ್ತೆ ಅವರಿಗೇ ವಾಪಸ್ ಕೊಟ್ಟಂತಾಗಿದೆ ಅಷ್ಟೆ!

ಹೀಗಾಗಿ ಇದೊಂದು ಚುನಾವಣಾ ರಾಜಕೀಯ ಆಮಿಷದ ಪ್ರಯತ್ನವಾಗಿದ್ದು ಸರ್ಕಾರಕ್ಕೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಇದು ಸಮಾಜವನ್ನು ಮತ್ತಷ್ಟು ಒಡೆದು ಸಾಮಾಜಿಕ ಅಶಾಂತಿಯನ್ನು ಹೆಚ್ಚಿಸುವ ಪ್ರಯತ್ನವೇ ಆಗಿ ಪರಿಣಮಿಸಿದೆ. ಯುವಜನರಲ್ಲಿ ನವಭಾರತದ ನಿರ್ಮಾಣದ ಹೊಸ ಕನಸು ಬಿತ್ತಿ ಅಧಿಕಾರಕ್ಕೆ ಬಂದಿದ್ದ ನರೇಂದ್ರ ಮೋದಿಯವರು ತಮ್ಮ ಈ ಅಧಿಕಾರಾವಧಿಯಲ್ಲಿ ಅದನ್ನು ಸಾಕಾರಗೊಳಿಸಲು ವಿಫಲರಾಗಿ ಈಗ ಅಧಿಕಾರ ಉಳಿಸಿಕೊಳ್ಳಲು ದೇಶ ಕಟ್ಟುವ ಹಳಸಲು ಮಾದರಿಗೇ ಮೊರೆಹೋಗುತ್ತಿರುವುದು ನಿಜವಾಗಿಯೂ ಒಂದು ದುರಂತಮಯ ದೃಶ್ಯವಾಗಿದೆ.

ಒಟ್ಟಿನಲ್ಲಿ ಸಾಮಾಜಿಕ ನ್ಯಾಯದ ಒಂದು ಭಾಗವಾಗಿದ್ದ ಜಾತಿ ಮೀಸಲಾತಿಯ ಹಿಂದಿದ್ದ ಗಂಭೀರ ಜಿಜ್ಞಾಸೆಯನ್ನೇ, ಅದರ ತಾತ್ವಿಕ ಅಡಿಗಲ್ಲುಗಳನ್ನೇ ತಮ್ಮ ರಾಜಕೀಯ ಅನುಕೂಲಗಳಿಗೆ ತಕ್ಕಂತೆ ಸಡಿಲಿಸಿ ಅದನ್ನೇ ಇಡಿಯಾಗಿ ಸಾಮಾಜಿಕ ನ್ಯಾಯ ಕಾರ್ಯಕ್ರಮವೆಂಬಂತೆ ಪ್ರತಿಬಿಂಬಿಸುವ ನಮ್ಮ ರಾಜಕೀಯ ಪಕ್ಷಗಳ ವರ್ತನೆ-ರಾಜ ಪರಿವಾರಗಳ ಊರ ಬೇಡರಿಗೆ ಕರ್ನಾಟಕದಲ್ಲಿ, ಮುಸ್ಲಿಮರಿಗೆ ತೆಲೆಂಗಾಣದಲ್ಲಿ, ಜಾಟರಿಗೆ ಹರ್ಯಾಣದಲ್ಲಿ, ಮರಾಠರಿಗೆ ಮಹಾರಾಷ್ಟ್ರದಲ್ಲಿ, ಗುಜ್ಜರರಿಗೆ ರಾಜಸ್ಥಾನದಲ್ಲಿ ಮೀಸಲಾತಿ ನೀಡುವ ವಿವಿಧ ರಾಜಕೀಯ ಪಕ್ಷಗಳ ಸರ್ಕಾರಗಳ ಸಫಲ/ವಿಫಲ ಪ್ರಯತ್ನಗಳು-ಮೀಸಲಾತಿ ಎಂಬ ಪರಿಕಲ್ಪನೆಯನ್ನೇ ಹಾಸ್ಯಾಸ್ಪದಗೊಳಿಸಿ ಕ್ರಮೇಣ ಅಪ್ರಸ್ತುತ ಮತ್ತು ಅವಾಸ್ತಕವೆನ್ನುವಂತೆ ಮಾಡುವ ದಿಕ್ಕಿನ ಅಪಾಯಕಾರಿ ಹೆಜ್ಜೆಯೇ ಆಗಿದೆ. ಇದು ಸಾಮಾಜಿಕ ಮೀಸಲಾತಿ ಕಾರ್ಯಕ್ರಮದಲ್ಲಿ ಮಾಡಬೇಕಾದ ಬದಲಾವಣೆ ಮತ್ತು ಮರುಹೊಂದಾಣಿಕೆಗಳ ಗಂಭೀರ ಪ್ರಸ್ತಾವನೆ ಮತ್ತು ಅಧ್ಯಯನಗಳ ಅವಕಾಶಗಳನ್ನೂ ಸದ್ಯಕ್ಕೆ ಮೊಟಕುಗೊಳಿಸಿದೆ ಎಂದೂ ಹೇಳಬೇಕು.

Leave a Reply

Your email address will not be published.